ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೋಮೇಶ್ವರ, ನಾ

ಸೋಮೇಶ್ವರ, ನಾ

ಕನ್ನಡ ವೈದ್ಯಸಾಹಿತ್ಯದ ಅಗ್ರಮಾನ್ಯ ಲೇಖಕರಲ್ಲಿ ಡಾ|| ನಾ. ಸೋಮೇಶ್ವರರವರೂ ಒಬ್ಬರು. ಡಾ|| ನಾ. ಸೋಮೇಶ್ವರರವರು ವೈದ್ಯರಾಗಿ, ಲೇಖಕರಾಗಿ ಉಪನ್ಯಾಸಕರಾಗಿ ಜನಮನ ಸೂರೆಗೊಂಡವರು. ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮದ ಮೂಲಕ ಜನರ ಹೃದಯ ತಟ್ಟಿದವರು. ಜೀವನಾಡಿ ಆರೋಗ್ಯ ಮಾಸಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಬರವಣಿಗೆಗೆ ಮತ್ತು ಉಪನ್ಯಾಸಗಳೆರಡರಲ್ಲಿಯೂ ತಮ್ಮದೇ ಆದ ಶೈಲಿ ರೂಢಿಸಿಕೊಂಡವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ವೈದ್ಯವಿಶ್ವಕೋಶದಲ್ಲಿ ಇವರು ಬರೆದ ಅನುವಂಶಿಕ ರೋಗಗಳನ್ನು ಕುರಿತು ಲೇಖನಗಳು ಪ್ರಕಟಗೊಂಡಿವೆ. ಬೆಂಗಳೂರು ದೂರದರ್ಶನದಲ್ಲಿ ವಿಜ್ಞಾನ ಹಾಗೂ ಆರೋಗ್ಯದ ಕುರಿತು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅಲ್ಲದೇ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ "ಥಟ್ ಅಂತ ಹೇಳಿ" ಎಂಬು ಕ್ವಿಜ್ó ಕಾರ್ಯಕ್ರಮ ಬಹುಜನಪ್ರಿಯ. ಇದಲ್ಲದೇ ಆಕಾಶವಾಣಿಯಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ಒಟ್ಟು ಹತ್ತು ಪುಸ್ತಕಗಳು ಪ್ರಕಟಗೊಂಡಿದ್ದು ಅವುಗಳಲ್ಲಿ "ಬಹಿರಂಗ ಶುದ್ಧ": "ಏಳುಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು", "ಬದುಕು ನೀಡುವ ಬದಲೀ ಜೋಡಣೆ", “ಪ್ರಕೃತಿಯ ಸೂಪರ್ ಕಂಪ್ಯೂಟರ್-ಮಿದುಳು", ಪ್ರಮುಖವಾದವುಗಳು. ಇವರಿಗೆ ಲಭಿಸಿದ ಪ್ರಶಸ್ತಿಗಳು "ವಿದ್ಯಾರತ್ನ-ರಾಷ್ಟ್ರೀಯ ಪ್ರಶಸ್ತಿ", "ಡಾ|| ಬಿ.ಸಿ. ರಾಯ್, ವೈದ್ಯ ದಿನಾಚರಣೆ ಪ್ರಶಸ್ತಿ", "ರನ್ನ ಸಾಹಿತ್ಯ ಪ್ರಶಸ್ತಿ", "ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ", "ಎಂ. ಜಿ. ರಂಗನಾಥನ್ ಸ್ಮಾರಕ ಪುಸ್ತಕ ಬಹುಮಾನ" ಮತ್ತು "ಸ್ನೇಹ-ಸೇತು ಪ್ರಶಸ್ತಿ" ಮುಂತಾದವುಗಳು.

ಡಾ|| ನಾ. ಸೋಮೇಶ್ವರರವರು ಮೂಢನಂಬಿಕೆಗಳ ನಿವಾರಣೆ, ಆರೋಗ್ಯ ಜಾಗೃತಿ, ಏಡ್ಸ್ ಕುರಿತು ಅನೇಕ ಸಂಘ-ಸಂಸ್ಥೆ, ಕಾಲೇಜುಗಳಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಅಸ್ಟ್ರಾಜೆನಿಕ್ ಫಾರ್ಮ್ ಇಂಡಿಯಾ ಲಿಮಿಟೆಡ್ ಸಂಸ್ಥೆಯುಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. (ಡಾ. ವಸುಂಧರಾ ಭೂಪತಿ)