ಮುಂದೆ ಆಳಿದ ಸ್ಟೂವರ್ಟ್ ರಾಜರ ಕಾಲದಲ್ಲಿ ಇಂಗ್ಲೆಂಡ್ ಸ್ವತಂತ್ರವಾಗಿ ಬೆಳೆಯಿತು. ಪಾರ್ಲಿಮೆಂಟಿನ ಅಧಿಕಾರ ಹೆಚ್ಚುತ್ತ ಬಂತು. ಇವರ ಕಾಲದಲ್ಲಿ ಸ್ಕಾಟ್ಲ್ಲೆಂಡ್ ಮತ್ತು ಇಂಗ್ಲೆಂಡ್ ಒಂದಾದವು.
ಸ್ಕಾಟ್ಲೆಂಡಿನ ಮೇರಿಯ ಮಗನಾದ ಆರನೆಯ ಜೇಮ್ಸ್ ಎಲಿಜಬೆತ್ ಸತ್ತ ಅನಂತರ ಒಂದನೆಯ ಜೇಮ್ಸ್ ಆಗಿ ಆಳಿದ. ಇವನು ಅವಿವೇಕಿ, ಹಠವಾದಿ. ಇವನ ಕಾಲದಲ್ಲಿ ಪಾರ್ಲಿಮೆಂಟಿನೊಡನೆ ತಿಕ್ಕಾಟ ಹೆಚ್ಚಿತು. ತಾನು ದೇವಾಂಶಸಂಭೂತನೆಂದು ಜೇಮ್ಸ್ ತಿಳಿದಿದ್ದ. ಪಾರ್ಲಿಮೆಂಟ್ ಹೆಚ್ಚು ಹೆಚ್ಚಾಗಿ ಈತನ ಆಡಳಿತವನ್ನು ವಿಮರ್ಶೆ ಮಾಡತೊಡಗಿತು. ಮಧ್ಯಮವರ್ಗದ ಜನ ಪಾರ್ಲಿಮೆಂಟಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. ತನ್ನನ್ನು ಪ್ರಶ್ನಿಸುವ ಹಕ್ಕು ಪಾರ್ಲಿಮೆಂಟಿಗೆ ಇಲ್ಲವೆಂದು ಈತನ ವಾದ. ಈತ 1610ರಲ್ಲಿ ಪಾರ್ಲಿಮೆಂಟನ್ನು ರದ್ದು ಮಾಡಿದ. ಹನ್ನೊಂದು ವರ್ಷಕಾಲ ತಾನೇ ತಾನಾಗಿ ಆಳಿದ. 1614ರಲ್ಲಿ ಸೇರಿದ್ದ ಪಾರ್ಲಿಮೆಂಟ್ ಏನನ್ನೂ ಸಾಧಿಸಲಿಲ್ಲ. 1621ರಲ್ಲಿ ಜೇಮ್ಸ್ ಪಾರ್ಲಿಮೆಂಟನ್ನು ಸೇರಿಸಿದಾಗ ಅದು ಈತನನ್ನು ಬಹುವಾಗಿ ಟೀಕಿಸಿತು. ಒಂದನೆಯ ಚಾಲರ್ಸ್ನ ವಿವಾಹದ ಪ್ರಶ್ನೆ ಬಂದಾಗ ಪಾರ್ಲಿಮೆಂಟ್ ತನ್ನ ವಾಕ್ಸ್ವಾತಂತ್ರ್ಯವನ್ನು ಬಿಟ್ಟುಕೊಡದೆ ಪ್ರತಿಭಟನೆಯನ್ನು ಸೂಚಿಸಿ ಅದನ್ನು ಪಾರ್ಲಿಮೆಂಟಿನ ಪುಸ್ತಕದಲ್ಲಿ ದಾಖಲೆ ಮಾಡಿಸಿತು. ಕೆರಳಿದ ರಾಜ ಆ ಹಾಳೆಯನ್ನೇ ಹರಿದ.
ಒಂದನೆಯ ಜೇಮ್ಸನ ಮಗನಾದ ಮೊದಲನೆಯ ಚಾಲ್ರ್ಸ್ ದೈವದತ್ತ ರಾಜತ್ವದಲ್ಲಿ ನಂಬಿಕೆ ಇಟ್ಟಿದ್ದ. ಈತ ಎಂದೂ ಸ್ವತಂತ್ರ ನಿರ್ಧಾರ ಕ್ಯೆಗೂಳ್ಳಲಿಲ್ಲ. ಈತ 1625ರಲ್ಲಿ ಪಾರ್ಲಿಮೆಂಟನ್ನು ಕರೆದು ಸ್ಪೇನಿನೊಂದಿಗೆ ಯುದ್ಧಕ್ಕಾಗಿ ಹಣ ಬೇಡಿದ. ಪಾರ್ಲಿಮೆಂಟ್ ಇದನ್ನು ತಿರಸ್ಕರಿಸಿತು. ಹಣದ ಕೊರತೆ ವಿಪರೀತವಾಯಿತು. ಹಣಕಾಸಿನ ಹತೋಟಿ ಪಾರ್ಲಿಮೆಂಟಿನ ಹಿಡಿತದಲ್ಲಿದ್ದರೆ ರಾಜ ಸರಿಹೋಗುತ್ತಾನೆಂದು ನಂಬಲಾಗಿತ್ತು. ಸ್ಪೇನಿನ ಜೊತೆ ಕಾದಾಟದಲ್ಲಿ ಇಂಗ್ಲೆಂಡ್ ಸೋತಿತು. ಸೋಲಿಗೆ ಕಾರಣನಾದವ ದೊರೆಯ ಗೆಳೆಯನಾದ ಬಕಿಂಗ್ಹ್ಯಾಮ್ ಎಂದು ಪಾರ್ಲಿಮೆಂಟ್ ಕೆರಳಿತು. ರಾಜ ತನ್ನ ಗೆಳೆಯನಿಗಾಗಿ ಪಾರ್ಲಿಮೆಂಟನ್ನೇ ರದ್ದುಪಡಿಸಿದ. ಮೂರನೆಯ ಬಾರಿ ಪಾರ್ಲಿಮೆಂಟ್ ಸೇರಿತು. ಪಾರ್ಲಿಮೆಂಟ್ ಪೆಟಿಷನ್ ಆಫ್ ರೈಟ್ಸ್ ಎಂಬ ಪತ್ರವೊಂದನ್ನು ತಯಾರಿಸಿ ಬಲತ್ಕಾರದ ತೆರಿಗೆ, ಸಾಲ, ಬಲತ್ಕಾರದ ಸೆರೆ ಇವನ್ನು ಮಾಡಬಾರದೆಂದು ವಿಧಿಸಿತು. ರಾಜ ಇದಕ್ಕೆ ಒಪ್ಪಿಗೆ ಕೊಟ್ಟರೂ ಇದನ್ನು ಪಾಲಿಸಲಿಲ್ಲ. ವಿರೋಧ ಮಾಡಿದ ವ್ಯಕ್ತಿಗಳನ್ನು ಸೆರೆಯಲ್ಲಿಟ್ಟ. ಹಣದ ಪರಿಸ್ಥಿತಿ ಬಿಕ್ಕಟ್ಟಿಗೆ ಬಂದಾಗ 1640ರಲ್ಲಿ ಮತ್ತೆ ಪಾರ್ಲಿಮೆಂಟ್ ಕರೆದ. ಇದನ್ನು ಲಾಂಗ್ ಪಾರ್ಲಿಮೆಂಟ್ ಎಂದು ಕರೆಯುತ್ತಾರೆ. ಈ ಅಧಿವೇಶನದಲ್ಲಿ ಕೆವಿಲಿಯರ್ಸ್ ಮತ್ತು ರೌಂಡ್ ಹೆಡ್ಸ್ ಎಂಬ ಬಣಗಳು ಪಾರ್ಲಿಮೆಂಟಿನಲ್ಲಿ ತಲೆಯೆತ್ತಿದವು. ಪಾರ್ಲಿಮೆಂಟ್ ಒಂಬತ್ತು ತಿಂಗಳ ಕಾಲವಿತ್ತು. ಸದಸ್ಯರು ಇವನನ್ನು ಟೀಕಿಸಿದರು. ಚಾಲರ್ಸ್ನ ಗೆಳೆಯರಿಗೆ ಗಲ್ಲು ಶಿಕ್ಷೆಯಾಯಿತು. ಚರ್ಚಿನ ಆಡಳಿತವನ್ನು ಮಠಾಧಿಪತಿಗಳ ಹಿಡಿತದಿಂದ ತಪ್ಪಿಸುವ ರೂಟ್ ಅಂಡ್ ಬ್ರಾಂಚ್ ಬಿಲ್ ಎಂಬುದನ್ನು ಜಾರಿಗೆ ತಂದರು. ಈ ಸಂದರ್ಭದಲ್ಲಿ ಪಾರ್ಲಿಮೆಂಟಿನ ಒಡಕು ಧ್ವನಿ ಆರಂಭವಾಯಿತು. ಪಾರ್ಲಿಮೆಂಟಿನ ಏಕತೆ ಒಡೆಯಿತು. 1641ರಲ್ಲಿ ಪಾರ್ಲಿಮೆಂಟ್ ಮತ್ತೆ ಸೇರಿದಾಗ ಸ್ಯೆನಿಕ ಮಸೂದೆಯನ್ನು ಜಾರಿಗೆ ತಂದು ಸ್ಯೆನ್ಯವನ್ನು ಪಾರ್ಲಿಮೆಂಟಿನ ಹತೋಟಿಗೆ ಒಳಪಡಿಸಲಾಯಿತು. ರಾಜನ ಹಕ್ಕನ್ನೆಲ್ಲ ಕಿತ್ತುಕೊಳ್ಳುವ ಗ್ರ್ಯಾಂಡ್ ರೆಮಾನ್ಸ್ಟ್ರೆನ್ಸ್ ಕಾಯಿದೆಯಾಯಿತು. ಕೋಪಗೊಂಡ ಚಾಲ್ರ್ಸ್ ಸಿಕ್ಕಿದವರನ್ನೆಲ್ಲ ಸೆರೆಯಲ್ಲಿಟ್ಟ.
ರಾಜನ ವಿರುದ್ಧ ಪಿತೂರಿಗಳು ನಡೆದವು. ಆಲಿವರ್ ಕ್ರಾಮ್ವೆಲ್ ಸ್ಯೆನ್ಯದಲ್ಲಿ ಸುಧಾರಣೆ ಮಾಡಿದ. ಚಾಲ್ರ್ಸ್ ದೊರೆ ಸ್ಕಾಟ್ಲೆಂಡಿನ ಯುದ್ಧದಲ್ಲಿ ಸೋತು ಕೊನೆಗೆ ಶರಣಾಗತನಾದ. ಪಾರ್ಲಿಮೆಂಟ್ ಮತ್ತು ಸ್ಯೆನ್ಯದ ನಡುವೆ ಮತೀಯ ಸಂಘರ್ಷ ಏರ್ಪಟ್ಟಿತು. ಪಾರ್ಲಿಮೆಂಟಿನ ಅಧೀನದಲ್ಲಿ ಚಾಲ್ರ್ಸ್ ಆಳ್ವಿಕೆ ನಡೆಸುವ ಹಾಗೆ ಮಾತುಕತೆಯಾಡಿ ಅವನನ್ನು ಬಿಡಿಸಲಾಯಿತು. ಚಾಲ್ರ್ಸ್ ಓಡಿಹೋದ. ಸ್ಕಾಟರ ಜೊತೆ ಸೇರಿ ಪಿತೂರಿ ಹೂಡಿದ. ಪಾರ್ಲಿಮೆಂಟ್ ಆತನನ್ನು ಹಿಡಿದು ವಿಚಾರಣೆ ನಡೆಸಿ 1649ರಲ್ಲಿ ಶಿರಚ್ಛೇದ ಮಾಡಿತು. ಗಣರಾಜ್ಯ ಸ್ಥಾಪಿತವಾದರೂ ಸ್ಯೆನ್ಯಕ್ಕೆ ಹೆಚ್ಚು ಆಧಿಕಾರವಿತ್ತು. ಆ ಪಾರ್ಲಿಮೆಂಟಿಗೆ ರಂಪ್ ಪಾರ್ಲಿಮೆಂಟ್ ಎಂದು ಕರೆಯುತ್ತಾರೆ. ಕ್ರಾಮ್ವೆಲ್ಲನ ನೇತೃತ್ವದಲ್ಲಿ ಸೈನಿಕ ಸರ್ಕಾರದ ಸ್ಥಾಪನೆಯಾಯಿತು.
ಆಲಿವರ್ ಕ್ರಾಮ್ವೆಲ್ ಮೇಧಾವಿ ಆದರ್ಶವಾದಿ. ದಕ್ಷ ಆಡಳಿತಗಾರ. ವ್ಯವಹಾರಜ್ಞಾನ ಹೊಂದಿದ್ದವ. ಸಮಯಕ್ಕೆ ಸರಿಯಾಗಿ ನಿರ್ಧಾರ ಕೈಗೊಳ್ಳುತ್ತಿದ್ದ. ಜವಾಬ್ದಾರಿಯನ್ನು ಹೊರುವ ಎದೆಗಾರಿಕೆ ಈತನಿಗಿತ್ತು. 1653-58ರವರೆಗೆ ಈತ ರಾಜ್ಯವಾಳಿದ. ರಾಜನೆಂದು ಕರೆದುಕೊಳ್ಳದೆ ಪಾರ್ಲಿಮೆಂಟನ್ನು ಅನುಸರಿಸಿ ನಡೆದ. ಕೊನೆಗೆ ಪಾರ್ಲಿಮೆಂಟಿಗೂ ಈತನಿಗೂ ಜಗಳ ಪ್ರಾರಂಭವಾಯಿತು. ವಿಗ್ ಪಾರ್ಟಿಯವರು ಈತನನ್ನು ವಿರೋಧಿಸಿದರು. ಪಾರ್ಲಿಮೆಂಟಿನ ಸಹಕಾರ ದೊರೆಯದಿದ್ದಾಗ ಈತ ಸೈನ್ಯದ ಸಹಾಯದಿಂದ ಆಳಿದ. ಇಂಗ್ಲೆಂಡಿನ ಕೀರ್ತಿಯನ್ನು ಯುರೋಪಿನ ರಾಜ್ಯಗಳಲ್ಲಿ ಹರಡಿದ. ವಿದೇಶಾಂಗ ನೀತಿಯಲ್ಲಿ ಈತನಿಗೆ ಎಲಿಜಬೆತ್ ಆದರ್ಶಪ್ರಾಯಳಾಗಿದ್ದಳು. 1638ರಲ್ಲಿ ಕ್ರಾಮ್ವೆಲ್ ಕಾಲವಾದ.
ಕ್ರಾಮ್ವೆಲ್ಲನ ಅನಂತರ ಅವನ ಮಗ ರಿಚರ್ಡ್ ಪಟ್ಟಕ್ಕೆ ಬಂದ. ಸೈನ್ಯಾಧಿಕಾರಿಗಳೊಂದಿಗೆ ಜಗಳವಾಡಿ ಅಧಿಕಾರ ಕಳೆದುಕೊಂಡ. ಪಾರ್ಲಿಮೆಂಟ್ ಒಂದನೆಯ ಚಾಲ್ರ್ಸ್ನ ಮಗನಾದ ಎರಡನೆಯ ಚಾಲ್ರ್ಸ್ನನ್ನು ದೊರೆಯಾಗಿ ಮಾಡಿತು. ಆತ ಒಳ್ಳೆಯ ಆಡಳಿತ ನಡೆಸುವುದಾಗಿ ಘೋಷಣೆ ಮಾಡಿದ. ಕ್ಲಾರೆನ್ಡನ್ ಈತನ ಮಂತ್ರಿಯಾಗಿದ್ದ. ಕ್ಲಾರೆನ್ಡನ್ ಕೋಡ್ ಎಂಬ ನ್ಯಾಯಸಂಹಿತೆ ಆತನ ಕೊಡುಗೆ. ಇಂಗ್ಲೆಂಡಿನ ಚರ್ಚುಗಳು ಒಂದೇ ಪ್ರಾರ್ಥನಾ ಪುಸ್ತಕವನ್ನು ಬಳಸುವಂತೆ ಈತ ನಿಯಮ ಮಾಡಿದ. ಆಗ ನಡೆದ ಡಚ್ಚರ ಜೊತೆಯ ಯುದ್ಧದಲ್ಲಿ ಇಂಗ್ಲೆಂಡಿಗೆ ಪರಾಭವವಾಯಿತು. ಪರಿಣಾಮವಾಗಿ ಕ್ಲಾರೆನ್ಡನ್ ಕೆಲಸ ಕಳೆದುಕೊಂಡ. ಆಕ್ಸ್ಫರ್ಡ್ ವಿಶ್ವವಿದ್ವಾನಿಲಯಕ್ಕೆ ಆತ ಮಾಡಿದ ಉಪಕಾರ ಸ್ಮರಣೀಯವಾದದ್ದು. ವಿಶ್ವವಿದ್ಯಾನಿಲಯದ ಮುದ್ರಣಶಾಲೆಗೆ ಇಂದಿಗೂ ಅವನ ಹೆಸರು ಇದೆ.
ಎರಡನೆಯ ಚಾಲ್ರ್ಸ್ ಕಾಲದಲ್ಲಿ ಕೆಬಾಲ್ ಪ್ರಸಿದ್ಧವಾಯಿತು. ಇದು ಐದು ಜನರ ಸಮಿತಿ. ಮಂತ್ರಿತ್ವ ಇದರ ಕೆಲಸ ದೇಶದ ಆಡಳಿತದ ನಿರ್ವಹಣೆ ಇದರ ಹೊಣೆ. ಆಧುನಿಕ ಕ್ಯಾಬಿನೆಟ್ ಇದರ ಮೇಲೆ ರೂಪಿತವಾಗಿದೆ. ಈ ಕಾಲದಲ್ಲಿ ಷ್ಯಾಫ್ಟ್ಬರಿ ಎಂಬುವನು ವಿಗ್ ಪಾರ್ಟಿಯನ್ನೂ ಡಾನ್ಬೀ ಎಂಬುವನು ಟೋರಿ ಪಕ್ಷವನ್ನೂ ಕಟ್ಟಿದರು.
1679-81ರ ವರೆಗೆ ವಿಗ್ಗರು ಬಲಶಾಲಿಗಳಾಗಿದ್ದರು. ಹ್ಯಾಬ್ಸ್ಬರ್ಗ್ ವಂಶದ ಎರಡನೆಯ ಚಾಲಿರ್ಸ್ಗೆ ಮಕ್ಕಳಿರಲಿಲ್ಲ. ಯುರೋಪಿನಲ್ಲಿ ರಾಜಕೀಯ ಕಳವಳ ಉಂಟಾಯಿತು. ಆಗ ಸ್ಪೇನಿನ ಸಿಂಹಾಸನಕ್ಕೆ ಹಲವು ಮಂದಿ ಉಮೇದುವಾರರಿದ್ದರು. ಇವರಲ್ಲಿ ಹದಿನಾಲ್ಕನೆಯ ಲೂಯಿಯ ಮೊಮ್ಮಗ ಐದನೆಯ ಫಿಲಿಪ್ ಮತ್ತು ಆಸ್ಟ್ರಿಯದ ಆರ್ಚ್ ಡ್ಯೂಕ್ ಚಾಲ್ರ್ಸ್ ಮುಖ್ಯರಾಗಿದ್ದರು. ಹ್ಯಾಬ್ಸಬರ್ಗ್ ದೊರೆ ತನ್ನ ಮರಣಶಾಸನದಲ್ಲಿ ಐದನೆಯ ಫಿಲಿಪ್ಗೆ ಸ್ಪೇನಿನ ಸಿಂಹಾಸನ ನೀಡಬೇಕೆಂದು ಬರೆದಿಟ್ಟಿದ್ದ. ಇದು ಯುದ್ಧಕ್ಕೆ ಕಾರಣವಾಯಿತು. ಇಂಗ್ಲೆಂಡೂ ಈ ಯುದ್ಧದಲ್ಲಿ ಸೇರಿತು. ಸ್ಪೇನ್, ನೆದರ್ಲೆಂಡ್ಸ್, ಡ್ಯಾನೂಬ್ ನದಿಯ ಮೇಲ್ದಂಡೆ ಇವುಗಳ ಯುದ್ಧ ಕ್ಷೇತ್ರಗಳು. 1704ರಲ್ಲಿ ಇಂಗ್ಲೆಂಡ್ ಮ್ಯೆನಾರ್ಕ್ ಮತ್ತು ಜಿಬ್ರಾಲ್ಟರುಗಳನ್ನು ವಶಮಾಡಿಕೊಂಡಿತು. ಫ್ರೆಂಚರಿಗೆ ಸೋಲಾಯಿತು. ಇಂಗ್ಲೆಂಡಿನಲ್ಲಿ ಟೋರಿಗಳು ಯುದ್ಧಕ್ಕೆ ವಿರುದ್ಧವಾಗಿದ್ದರು. 1713ರಲ್ಲಿ ಯುಟ್ರೆಕ್ಟ್ ಒಪ್ಪಂದದಿಂದ ಶಾಂತಿಸ್ಥಾಪನೆಯಾಯಿತು. ಐದನೆಯ ಫಿಲಿಪ್ ಸ್ಪೇನಿನ ರಾಜನಾದ. ಸ್ಪೇನಿನ ವಸಾಹತುಗಳಿಗೆ ವರ್ಷಕ್ಕೊಂದು ಹಡಗನ್ನೂ ನೀಗ್ರೊ ಗುಲಾಮರುಗಳನ್ನೂ ಮಾರುವ ಹಕ್ಕು ಇಂಗ್ಲೆಂಡಿಗೆ ದೊರಕಿತು.
ಆ್ಯನ್ ರಾಣಿಯ ಕಾಲದಲ್ಲಿ ಇಂಗ್ಲೆಂಡಿನೊಂದಿಗೆ ಸ್ಕಾಟ್ಲೆಂಡಿನ ಐಕ್ಯವಾಗಿತ್ತು. ಆಗಿನ ಒಂದು ಒಪ್ಪಂದದ ಪ್ರಕಾರ ಹ್ಯಾನೋವರ್ ರಾಜರು ಸ್ಕಾಟ್ಲೆಂಡಿಗೆ ರಾಜರಾದರು. ಒಂದನೆಯ ಜಾರ್ಜ್ ಇಂಗ್ಲೆಂಡಿನ ರಾಜನಾದ.