ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೈನ್ಬೆಕ್, ಜಾನ್

ಸ್ಟೈನ್‍ಬೆಕ್, ಜಾನ್ 1902-68. ನೊಬೆಲ್ ಪ್ರಶಸ್ತಿ ಪಡೆದ ಅಮೆರಿಕದ ಕಾದಂಬರಿಕಾರ. ದಲಿತರ, ಬಡವರ ಜೀವನವನ್ನು ಕುರಿತು ಬರೆದ ಕಾದಂಬರಿಗಳಿಂದಾಗಿ ಪ್ರಸಿದ್ಧನಾಗಿದ್ದಾನೆ. ಈತ ಕ್ಯಾಲಿಫೋರ್ನಿ ಯದ ಸಲಿನಾಸ್ ಎಂಬಲ್ಲಿ ಜನಿಸಿದ. ಭೂಮಿ-ರೈತರ ಪರಸ್ಪರ ಬಾಂಧವ್ಯ ಅದರ ಏಳು ಬೀಳು ಇದೇ ಬಲುಮಟ್ಟಿಗೆ ಇವನ ಎಲ್ಲ ಕೃತಿಗಳ ವಸ್ತು. ಇವನ ಮೊದಲ ಕಾದಂಬರಿ ಕಪ್ ಆಫ್ ಗೋಲ್ಡ್ 1929ರಲ್ಲಿ ಪ್ರಕಟವಾಯಿತು. ಪಾಶ್ಚರ್ಸ್ ಆಫ್ ಹೆವನ್ ಎಂಬ ಕಥಾಸಂಕಲನ 1932ರಲ್ಲಿ ಪ್ರಕಟವಾಯಿತು. ಸಲಿನಾಸ್ ಪ್ರದೇಶದ ರೈತರ ಬದುಕು, ಅವರ ಮಣ್ಣಿನ ಪ್ರೀತಿ, ನೋವು, ನಿರಾಸೆ ಈ ಕಥೆಗಳಲ್ಲಿ ಪಡಿಮೂಡಿದೆ. ಟಾರ್‍ಟಿಲ್ಲ ಪ್ಲಾಟ್(1935) ಎಂಬ ಕಾದಂಬರಿ ಸಾಹಿತ್ಯವಲಯದಲ್ಲಿ ಸ್ಟೈನ್‍ಬೆಕ್‍ನ ಬಗ್ಗೆ ಕುತೂಹಲ ಹಾಗೂ ಆಸಕ್ತಿ ಮೂಡಿಸಿತು. ಈ ಕಾದಂಬರಿಯಲ್ಲಿ ಬಡರೈತರ ಮತ್ತು ಬಡವಲಸೆಗಾರರ ಹೋರಾಟದ ಬದುಕು ಚಿತ್ರಣಗೊಂಡಿದೆ. ಇನ್ ಡೂಬಿಯಸ್ ಬ್ಯಾಟಲ್(1936) ಎಂಬ ಕಾದಂಬರಿಯಲ್ಲಿ ಕ್ಯಾಲಿಫೋರ್ನಿಯದಲ್ಲಿ 30ರ ದಶಕದಲ್ಲಿ ನಡೆದ ಭೀಕರ ಕಾರ್ಮಿಕ ಮುಷ್ಕರದ ಚಿತ್ರಣವಿದೆ.

ಇವನನ್ನು ಪ್ರಪಂಚಖ್ಯಾತಗೊಳಿಸಿದ ಕಾದಂಬರಿ ದಿ ಗ್ರೇಪ್ಸ್ ಆಫ್ ರಾತ್ (1939). ಈ ಕಾದಂಬರಿ ಕ್ಯಾಲಿಫೋರ್ನಿಯಕ್ಕೆ ವಲಸೆ ಬಂದ ನಿರಾಶ್ರಿತ ಸಂಸಾರವೊಂದು ಬದುಕಿಗಾಗಿ ನಡೆಸುವ ಹೋರಾಟವನ್ನು ವಿವರವಾಗಿ ಚಿತ್ರಿಸುತ್ತದೆ. 1940ರಲ್ಲಿ ಈ ಕಾದಂಬರಿಗೆ ಪುಲಿಟ್ಜರ್ ಬಹುಮಾನ ಲಭಿಸಿತು. ಆಫ್ ಮೈಸ್ ಅಂಡ್ ಮೆನ್ (1937), ಈಸ್ಟ್ ಆಫ್ ಈಡನ್ (1952), ಸ್ವೀಟ್ ಥರ್ಸ್‍ಡೇ (1954), ದಿ ವಿಂಟರ್ ಆಫ್ ಅವರ್ ಡಿಸ್‍ಕಂಟೆಂಟ್ (1961)-ಇವು ಇವನ ಇತರ ಕೆಲವು ಕಾದಂಬರಿಗಳು. ಟ್ರಾವಲ್ಸ್ ವಿತ್ ಚಾರ್ಲಿ (1962) ಎಂಬುದು ಪ್ರವಾಸಕಥನ. 1962ರಲ್ಲಿ ಇವನಿಗೆ ನೊಬೆಲ್ ಪ್ರಶಸ್ತಿ ಲಭಿಸಿತು. (ಎನ್.ಎಸ್.ಎಲ್.)