ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೈನ್, ಸರ್ ಆರೆಲ್

ಸ್ಟೈನ್, ಸರ್ ಆರೆಲ್ 1862-1943. ಭಾರತದ ಪ್ರಸಿದ್ಧ ಬ್ರಿಟಿಷ್ ಪುರಾತತ್ತ್ವಶಾಸ್ತ್ರಜ್ಞ. ಇವನು ಭಾರತ ಹಾಗೂ ಏಷ್ಯ ಖಂಡದ ಅನೇಕ ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆ ಅದ್ವಿತೀಯವಾದುದು. ಚೀನ, ತುರ್ಕಿಸ್ತಾನ, ಮಧ್ಯಏಷ್ಯ, ಪರ್ಷಿಯ, ಬಲೂಚಿಸ್ತಾನ, ಮಕ್ರಾನ್, ಇರಾನ್, ಇರಾಕ್, ಜೋರ್ಡನ್ ಮುಂತಾದ ಪ್ರದೇಶಗಳಲ್ಲಿಯೂ ಪುರಾತತ್ತ್ವ ಸಂಬಂಧಿ ಸಂಶೋಧನೆ ನಡೆಸಿ ಅನೇಕ ಮಹತ್ವದ ವಿಚಾರಗಳನ್ನು ಪ್ರಕಟಿಸಿದ್ದಾನೆ. ಐತಿಹಾಸಿಕ ವಸ್ತು ವಿಚಾರಗಳ ಬಗ್ಗೆ ಅಪಾರ ಕಾಳಜಿಹೊಂದಿದ ಇವನು ತಾನು ಪತ್ತೆಹಚ್ಚಿದ ಅನೇಕ ಅವಶೇಷಗಳನ್ನೂ ವಸ್ತುಗಳನ್ನೂ ಜೋಪಾನವಾಗಿ ಸಂರಕ್ಷಿಸಿದ (ಈಗ ಇವು ನವದೆಹಲಿಯ ಪುರಾತತ್ತ್ವ ವಸ್ತುಸಂಗ್ರಹಾಲಯದಲ್ಲಿವೆ). ಈತ ರಜಪುಟಾಣ್ ಹಾಗೂ ಹಕ್ರನದಿ (ಇಂಗಿ ಹೋಯಿತೆನ್ನಲಾದ ಪ್ರಾಚೀನ ಸರಸ್ವತಿನದಿ) ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆಗಳಿಂದ ಈ ನೆಲೆಗಳು ಇತಿಹಾಸ ಪೂರ್ವಕಾಲದಲ್ಲಿ ಮಾನವನ ವಾಸದ ನೆಲೆಗಳಾಗಿದ್ದವೆಂದು ತಿಳಿದುಬಂತು. ಜಯಪುರದಲ್ಲಿ (ರಾಜಸ್ತಾನ) ನಡೆಸಿದ ಉತ್ಖನನದಲ್ಲಿ ನಾಣ್ಯಗಳು, ಚಿತ್ರಗಳು ಮುಂತಾದ ಪುರಾತನ ವಸ್ತುಗಳು ದೊರೆತಿರುವುದ ರಿಂದ ಇವು ಆ ಪ್ರದೇಶದ ಇತಿಹಾಸದ ಅಧ್ಯಯನಕ್ಕೆ ಸಹಕಾರಿಯಾದವು. ಇಲ್ಲಿನ ಸಂಶೋಧನೆಯಿಂದ ಕಾರ್ಕೋಟನಗರ ಎಂಬ ವಿಶಾಲ ನಿವೇಶನವನ್ನು ಕಂಡು ಹಿಡಿಯಲಾಯಿತು ಇದು ಮಾಳವ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಬೈರಾತ್ ಎಂಬಲ್ಲಿ ಮಯೂರವಂಶದ ಆಳಿಕೆಗೆ ಸಂಬಂಧಿಸಿದ ವೃತ್ತಾಕಾರದ ದೇವಾಲಯವನ್ನು ಸಂಶೋಧಿಸ ಲಾಯಿತು. ರೈತ್ ಎಂಬಲ್ಲಿ ನಡೆಸಿದ ಉತ್ಖನನದಿಂದ ಇದು ಪ್ರಸಿದ್ಧ ಗಣಿಪ್ರದೇಶವೂ ವ್ಯಾಪಾರಸ್ಥಳವೂ ಆಗಿತ್ತೆಂದು ತಿಳಿದುಬರುತ್ತದೆ.

ಇವನು ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಕ್ರಾನಿಕಲ್ ಆಫ್ ಕಿಂಗ್ಸ್ ಆಫ್ ಕಾಶ್ಮೀರ್ (1900), ಏನ್ಸಿಯಂಟ್ ಖೋಟಾನ್ (1907), ರೂಯಿನ್ಸ್ ಆಫ್ ಡೆಸರ್ಟ್ ಕ್ಯಾಥರಿ (1912), ದ ಥೌಸಂಡ್ ಬುದ್ಧಾಸ್ (1921), ಆನ್ ಅಲೆಗ್ಸಾಂಡರ್ ಟ್ರ್ಯಾಕ್ ಟು ದ ಇಂಡಸ್ (1929), ಆರ್ಕಿಯಾಲಜಿಕಲ್ ರಿಕಾನಿಸನ್ಸ್‍ಸ್ ಇನ್ ಸೌತ್ ಈಸ್ಟ್ ಇರಾನ್ (1937), ಆನ್ ಓಲ್ಡ್ ರೂಟ್ಸ್ ಆಫ್ ವೆಸ್ಟರ್ನ್ ಇರಾನ್ (1940)-ಇವು ಇವನ ಕೆಲವು ಮುಖ್ಯ ಕೃತಿಗಳು. ಈತನಿಗೆ ಸಂಸ್ಕøತ ಭಾಷೆಯ ಬಗ್ಗೆಯೂ ಪರಿಶ್ರಮವಿದ್ದು ಅನೇಕ ಗ್ರಂಥಗಳನ್ನು ರಚಿಸಿದ. ಇವನು 1940ರಲ್ಲಿ ನಿಧನಹೊಂದಿದ. (ಜಿ.)