ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೋನ್ ರಿಚರ್ಡ್

ಸ್ಟೋನ್ ರಿಚರ್ಡ್ 1913-. ಬ್ರಿಟಿಷ್ ಅರ್ಥಶಾಸ್ತ್ರಜ್ಞ. ನೊಬೆಲ್ ಪ್ರಶಸ್ತಿ ಪುರಸ್ಕøತ (1984). ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದ ಬ್ರಿಟಿಷರ ಪೈಕಿ ನಾಲ್ಕನೆಯವ. ರಾಷ್ಟ್ರೀಯ ವರಮಾನ ಲೆಕ್ಕಾಚಾರದ ವಿಧಾನಗಳ ವಿಶ್ಲೇಷಣೆ-ಇವರ ಪ್ರಮುಖ ಸಂಶೋಧನೆ. ಇದಕ್ಕಾಗಿ ತನ್ನ ಇಡೀ ಜೀವನವನ್ನು ವಿನಿಯೋಗಿಸಿದಾತ. ಕೇಂಬ್ರಿಜ್ ವಿಶ್ವವಿದ್ಯಾಲ ಯದಲ್ಲಿ ನಿವೃತ್ತ ಪ್ರಾಧ್ಯಾಪಕನಾಗಿದ್ದ.

ಈತ ತನ್ನ ಸಂಶೋಧನೆಯನ್ನು 1950ರ ಅವಧಿಯಲ್ಲಿ ಪರಿಪಕ್ವ ಗೊಳಿಸಿ ಪ್ರಕಾಶಕ್ಕೆ ತಂದ. ರಾಷ್ಟ್ರೀಯ ವರಮಾನವನ್ನು ಹೇಗೆ ಲೆಕ್ಕಾಚಾರ ಮಾಡಬೇಕು, ಈ ಲೆಕ್ಕಕ್ಕೆ ಯಾವ ಯಾವ ಬಾಬ್ತುಗಳನ್ನು ಸೇರಿಸಿಕೊಳ್ಳ ಬೇಕು ಎನ್ನುವುದನ್ನು ವ್ಯಾಪಕವಾಗಿ ವಿಶ್ಲೇಷಿಸಿದ್ದಾನೆ. ಜೆ.ಎಮ್.ಕೇನ್ಸ್‍ನ ಸಹಾಯಕನಾಗಿ, ಸ್ಟೋನ್ ಮತ್ತು ಮೀಡ್, ಬ್ರಿಟನ್ನಿನ ರಾಷ್ಟ್ರೀಯ ಅರ್ಥವ್ಯವಸ್ಥೆಗೆ ಸಂಬಂಧಿಸಿದ, ಬೃಹದಾಕಾರದ ಅಂಕಿ-ಅಂಶಗಳನ್ನು ವ್ಯವಸ್ಥಿತವಾಗಿ ನಿರೂಪಿಸಿದ. ಈ ಕಾರಣದಿಂದಾಗಿ ಬ್ರಿಟನ್ನಿನ ಆಡಳಿತಗಾರರು, ರಾಷ್ಟ್ರೀಯ ಸಂಪತ್ತನ್ನು ಲೆಕ್ಕಾಚಾರ ಮಾಡುವುದು ಬಹಳ ಸುಲಭವಾಯಿತು.

ಎರಡನೆಯ ಮಹಾಯುದ್ಧಾನಂತರ ಈತ ಬ್ರಿಟನ್ನಿಗಲ್ಲದೆ ಇತರ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವರಮಾನ ಲೆಕ್ಕಾಚಾರದ ವಿಧಾನವನ್ನು ರೂಪಿಸಿದ. ವಿಶ್ವಸಂಸ್ಥೆಯ ಯೋಜನೆಯೊಂದಕ್ಕೆ ಅಧ್ಯಕ್ಷನಾಗಿ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಸಂಬಂಧಿಸಿದಂತೆ, ರಾಷ್ಟ್ರೀಯ ವರಮಾನ ಲೆಕ್ಕಾಚಾರದಲ್ಲಿ ಏಕರೂಪತೆಯನ್ನು ಸಾಧಿಸುವ ವಿಧಾನವನ್ನು ರೂಪಸಿದ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರಗಳನ್ನು ಪರಸ್ಪರ ತೂಗುವುದಕ್ಕೆ ಈತನ ವಿಶ್ಲೇಷಣೆ ಬಹುಮಟ್ಟಿಗೆ ಸಹಾಯಕವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ವ್ಯವಸ್ಥಿತವಾಗಿ ಹೊರತರುತ್ತಿರುವ ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ ಪ್ರಕಟಣೆಯಲ್ಲಿ ಅನುಸರಿಸುತ್ತಿರುವ ವಿಶ್ಲೇಷಣ ವಿಧಾನಕ್ಕೆ ಇವನ ವಿಶ್ಲೇಷಣ ವಿಧಾನವೇ ಮಾದರಿ.

ಇವನ ಪ್ರಮುಖ ಕೃತಿಗಳಿವು : ಮ್ಯಾಥಮ್ಯಾಟಿಕ್ಸ್ ಇನ್ ದಿ ಸೋಷಿಯಲ್ ಸೈನ್ಸಸ್ ಅಂಡ್ ಅದರ್ ಎಸ್ಸೇಸ್, ರೋಲ್ ಆಫ್ ಮೆಷರ್‍ಮೆಂಟ್ ಇನ್ ಎಕನಾಮಿಕ್ಸ್. ಇವಲ್ಲದೆ ಇತರರೊಡನೆ ಇನ್‍ಕಮ್ ಅಂಡ್ ವೆಲ್ತ್, ನ್ಯಾಷನಲ್ ಇನ್‍ಕಮ್ ಅಂಡ್ ಎಕ್ಸ್‍ಪೆಂಡಿಚರ್, ಮೆಷರ್‍ಮೆಂಟ್ ಆಫ್ ಕನ್ಸ್ಯೂಮರ್ ಎಕ್ಸ್‍ಪೆಂಡಿಚರ್ ಅಂಡ್ ಬಿಹೆವಿಯರ್ ಇನ್ ಯು.ಕೆ., ಇಂಟರ್ ನ್ಯಾಷನಲ್ ಅಸೊಸಿಯೇಷನ್ ಫಾರ್ ರಿಸರ್ಚ್ ಇನ್ ಇನ್‍ಕಮ್ ಅಂಡ್ ವೆಲ್ತ್ ಎಂಬ ಕೃತಿಗಳನ್ನು ರಚಿಸಿದ್ದಾನೆ. ಅನೇಕ ಸಂಶೋಧನ ಲೇಖನಗಳನ್ನೂ ಪ್ರಕಟಿಸಿದ್ದಾನೆ.

ಇಂದು ಅರ್ಥವಿe್ಞÁನಿಗಳು ಸಣ್ಣಸಣ್ಣ ವಿಷಯಗಳಲ್ಲೇ ಹೆಚ್ಚಿನ ಪರಿಣತಿ ಪಡೆದುಕೊಳ್ಳಲು ಉದ್ಯುಕ್ತರಾಗಿದ್ದಾರೆ. ಹೀಗಾಗಿ ಅವರಿಗೆ ಚರಿತ್ರೆ ಮತ್ತು ಮನೋವಿe್ಞÁನಗಳ ಬಗ್ಗೆ ಸಾಕಷ್ಟು ತಿಳಿವಳಿಕೆಯಿಲ್ಲ. ಇದು ಸರಿಯಾದುದಲ್ಲ. ಅರ್ಥವಿe್ಞÁನಿಗಳು, ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಅನೇಕ ಆರ್ಥಿಕ ಸೂಚನೆಗಳನ್ನು ನೀಡುತ್ತಾರೆ. ಆದರೆ ಈ ವಿದ್ವಾಂಸರು, ರಾಷ್ಟ್ರದ ಜನರಿಗೆ ಬದಲಾವಣೆಯನ್ನು ಹೊಂದುವ ಮನಸ್ಸಿದೆಯೇ ಅಥವಾ ಶಕ್ತಿ ಇದೆಯೇ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಈತ ಹೇಳಿದ್ದಾನೆ. (ಸಿ.ಕೆ.ಆರ್.)