ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೋ, ಹ್ಯಾರಿಯೆಟ್ ಬೀಚರ್

ಸ್ಟೋ, ಹ್ಯಾರಿಯೆಟ್ ಬೀಚರ್ 1811-96. ಅಮೆರಿಕದ ಕಾದಂಬರಿಗಾರ್ತಿ. 1811 ಜೂನ್ 14ರಂದು ಕನೆಕ್ಟಿಕಟ್ ಎಂಬಲ್ಲಿ ಜನಿಸಿದಳು. ಲಿಮನ್ ಬೀಚರ್ ಇವಳ ತಂದೆ. ಆತ ಧಾರ್ಮಿಕ ಶಿಕ್ಷಣಶಾಲೆ ನಡೆಸುತ್ತಿದ್ದ. ತಂದೆಯ ಶಾಲೆಯಲ್ಲಿ ಪ್ರಾಧ್ಯಾಪಕನಾಗಿದ್ದ ಸಿ.ಇ.ಸ್ಟವ್‍ನನ್ನು 1836ರಲ್ಲಿ ವಿವಾಹವಾದಳು. ಈಕೆಗೆ ಮೊದಲಿನಿಂದಲೂ ಗುಲಾಮರ ಬಗ್ಗೆ ಅಪಾರವಾದ ಅನುಕಂಪೆಯಿತ್ತು; ಗುಲಾಮಗಿರಿಯನ್ನು ಕಟುವಾಗಿ ವಿರೋಧಿಸುತ್ತಿದ್ದಳು. ನೀಗ್ರೋ ಗುಲಾಮರ ದುಸ್ಥಿತಿಯನ್ನು ಚಿತ್ರಿಸುವ ಅಂಕಲ್ ಟಾಮ್ಸ್ ಕ್ಯಾಬಿನ್(1852) ಎಂಬ ಕಾದಂಬರಿ ಬರೆದು ಪ್ರಸಿದ್ಧಿಯ ಶಿಖರಕ್ಕೇರಿದಳು. ಈ ಕಾದಂಬರಿ 19ನೆಯ ಶತಮಾನದ ಅತ್ಯಂತ ಜನಪ್ರಿಯ ಕೃತಿ(ಬೆಸ್ಟ್‍ಸೆಲ್ಲರ್) ಎಂಬ ಖ್ಯಾತಿಗಳಿಸಿತ್ತು. ಗುಲಾಮಗಿರಿಯನ್ನು ಖಂಡಿಸುವ ಡ್ರೆಡ್, ಎ ಟೇಲ್ ಆಫ್ ದಿ ಗ್ರೇಟ್ ಡಿಸ್ಮಲ್ ಸ್ವಾಂಪ್(1856), ಕ್ಯಾಲ್‍ವಿನ್‍ಜಮ್ ಪಂಥದ ಅನ್ಯಾಯಗಳನ್ನು ಖಂಡಿಸುವ ದಿ ಮಿನಿಸ್ಟರ್ಸ್ ವೂಯಿಂಗ್(1859), ಮತ್ತು ನ್ಯೂ ಇಂಗ್ಲೆಂಡ್ ಜೀವನ ಚಿತ್ರಿಸುವ ದಿ ಪರ್ಲ್ ಆಫ್ ಆರ್ಸ್ ಐಲಂಡ್(1862), ಓಲ್ಡ್ ಟೌನ್ ಫೋಕ್ಸ್(1869) - ಇವು ಈಕೆಯ ಇತರ ಕೆಲವು ಕಾದಂಬರಿಗಳು. ಸ್ಯಾಮ್ ಲಾಸನ್ಸ್ ಓಲ್ಡ್‍ಟೌನ್ ಫೈರ್‍ಸೈಡ್ ಸ್ಟೋರೀಸ್(1872) ಎಂಬುದು ಸಣ್ಣ ಕಥೆಗಳ ಸಂಗ್ರಹ. ಇಲ್ಲಿರುವ ಕಥೆಗಳು ನ್ಯೂ ಇಂಗ್ಲೆಂಡಿನ ಸಂಪ್ರದಾಯಬದ್ಧ ಬದುಕಿನ ಒಳಹೊರಗನ್ನು ಚಿತ್ರಿಸುತ್ತವೆ. ಲೇಡಿ ಬೈರನ್ ವಿನ್‍ಡಿಕೇಟೆಡ್(1870) ಎಂಬ ಕೃತಿ ಪ್ರಸಿದ್ಧ ಕವಿ ಲಾರ್ಡ್ ಬೈರನ್‍ನ ವಿವಾಹ ವಿಚ್ಛೇದನದ ಪ್ರಸಂಗವನ್ನು ಚಿತ್ರಿಸುತ್ತದೆ. (ಎನ್.ಎಸ್.ಎಲ್.)