ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟ್ರೇಚಿ, ಗೈಲ್ಸ್‌ ಲಿಟ್ಟನ್

ಸ್ಟ್ರೇಚಿ, ಗೈಲ್ಸ್ ಲಿಟ್ಟನ್ 1880-1932. ಇಂಗ್ಲೆಂಡಿನ, ಜೀವನ ಚರಿತ್ರೆಗಳ ಬರೆಹಗಾರ ಹಾಗೂ ವಿಮರ್ಶಕ. ಲಂಡನ್‍ನಲ್ಲಿ 1880ರಲ್ಲಿ ಜನಿಸಿದ. ತಂದೆ ಶ್ರೇಷ್ಠ ಯೋಧ ಹಾಗೂ ಸಾರ್ವಜನಿಕ ಆಡಳಿತಗಾರ ನಾಗಿದ್ದ. ಆತ ಭಾರತದಲ್ಲಿ 30 ವರ್ಷಗಳಿಗೂ ಹೆಚ್ಚುಕಾಲ ಸೇವೆಸಲ್ಲಿಸಿದ. ಭಾರತದ ವೈಸರಾಯ್ ಆಗಿದ್ದ ಅರ್ಲ್ ಆಫ್ ಲಿಟ್ಟನ್‍ನ ಹೆಸರನ್ನೆ ಈತ ತನ್ನ ಮಗನಿಗೆ ಇಟ್ಟ. ಸ್ಟ್ರೇಚಿ ಲಿವರ್‍ಪೂಲ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿ ಸ್ಪೆಕ್ಟೇಟರ್, ಎಡಿನ್ ಬರೋರಿವ್ಯೂ, ನೇಷನ್ ಅಥೇನುಯೆಮ್ ಮೊದಲಾದ ನಿಯತಕಾಲಿಕೆ ಗಳಿಗೆ ಬರೆವಣಿಗೆ ಮಾಡಲು ಆರಂಭಿಸಿದ. ಬ್ಲೂಮ್ಸ್ ಬರಿ ಗುಂಪಿನ ಪ್ರಮುಖ ಸದಸ್ಯನಾಗಿದ್ದ.

ಬರೆಹಗಾರ ತನ್ನ ಸ್ವಾತಂತ್ರ್ಯವನ್ನುಳಿಸಿಕೊಂಡು ತಾನು ಕಂಡಂತೆ ವಾಸ್ತವ ಅಂಶಗಳನ್ನು ನಿರೂಪಿಸಬೇಕೆಂದು ಇವನ ಪ್ರಮುಖ ಆಶಯವಾಗಿತ್ತು. ಜೀವನ ಚರಿತ್ರೆಗಳ ರಚನೆಯಲ್ಲಿ ನಾಯಕನ ಉದಾತ್ತಗುಣಗಳನ್ನು ಹಾಡಿಹೊಗಳುವ, ನಿಧನರಾದವರ ಸ್ಮರಣಾರ್ಥ ಎರಡು ದೊಡ್ಡ ಸಂಪುಟಗಳನ್ನು ಪ್ರಕಟಮಾಡುವ ಸಂಪ್ರದಾಯಗಳನ್ನು ತಳ್ಳಿಹಾಕಿದ. ಕಟಕಿ, ವ್ಯಂಗ್ಯ, ಹರಿತವಾದ ಶೈಲಿ-ಇವು ಇವನ ಬರೆಹಗಳ ವೈಶಿಷ್ಟ್ಯ. ಮನುಷ್ಯ ಸ್ವಭಾವದ ಜಟಿಲತೆ, ವೈಚಿತ್ರ್ಯಗಳಲ್ಲಿ ಇವನಿಗೆ ಆಸಕ್ತಿ. ಇವನ ಜೀವನ ಚರಿತ್ರೆಗಳು ಕಾದಂಬರಿಗಳಂತೆ ಓದುಗರನ್ನು ಆಕರ್ಷಿಸುತ್ತವೆ. ನಿರ್ಲಿಪ್ತತೆ, ವಿವೇಚನೆ, ಕೃತ್ರಿಮವಿಲ್ಲದ ಮಾನವ ಬಾಂಧವ್ಯ-ಇವುಗಳನ್ನು ಇವನು ಅಧಿಕವಾಗಿ ಮೆಚ್ಚುತ್ತಾನೆ. ಕೆಲವರು ಇವನನ್ನು ಜೀವನ ಚರಿತ್ರೆಗಳ ಕಾದಂಬರಿಕಾರ ಎಂದೇ ಗುರುತಿಸುವು ದುಂಟು.

ಎಮಿನೆಂಟ್ ವಿಕ್ಟೋರಿಯನ್ಸ್ (1918), ಕ್ವೀನ್ ವಿಕ್ಟೋರಿಯ (1921) ಎಂಬ ಕೃತಿಗಳು ಇವನಿಗೆ ಅಪಾರ ಯಶಸ್ಸನ್ನು ತಂದುಕೊಟ್ಟವು. ಜೀವನ ಚರಿತ್ರೆಯ ವಿಧಾನದಲ್ಲಿಯೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ ಬರೆಹಗಳೆಂದು ಇವು ಪ್ರಸಿದ್ಧವಾಗಿವೆ. ಬುಕ್ಸ್ ಅಂಡ್ ಕ್ಯಾರೆಕ್ಟರ್ಸ್ (1922), ಪೋಪ್ (1925), ಎಲಿಜಬೆತ್ ಅಂಡ್ ಎಸೆಕ್ಸ್ (1928), ಲೈಫ್ ಅಂಡ್ ಲೆಟರ್ಸ್, ಲ್ಯಾಂಡ್ ಮಾರ್ಕ್ ಇನ್ ಫ್ರೆಂಚ್ ಲಿಟರೇಚರ್ (1912), ಕ್ಯಾರೆಕ್ಟರ್ಸ್ ಅಂಡ್ ಕಾಮೆಂಟರೀಸ್ (1933)-ಇವು ಈತನ ಕೆಲವು ಮುಖ್ಯ ಕೃತಿಗಳು. ಕ್ಯಾರೆಕ್ಟರ್ ಅಂಡ್ ಕಾಮೆಂಟರೀಸ್ ಕೃತಿ ಇವನ ನಿಧನಾನಂತರ ಪ್ರಕಟವಾಯಿತು. ಈತ ಬರೆದ ಹಾಲ್‍ರಾಮ್ಡ್‍ರ ಜೀವನ ಚರಿತ್ರೆ 1967-68ರಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿದೆ. (ಎಲ್.ಎಸ್.ಎಸ್.)