ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟ್ರೋಂಗಿಲೊಯಿಡ್ ಹುಳು ರೋಗ (ಸ್ಟ್ರೋಂಗಿಲೊಯಿಡೋಸಿಸ್)

ಸ್ಟ್ರೋಂಗಿಲೊಯಿಡ್ ಹುಳು ರೋಗ (ಸ್ಟ್ರೋಂಗಿಲೊಯಿಡೋಸಿಸ್) (Strongyloid Stercoralis). ಇದೊಂದು ಪರಾನ್ನಜೀವಿ ರೋಗ. ಇದನ್ನು ಜಗತ್ತಿನಾದ್ಯಂತ ಗುರುತಿಸಲಾಗುತ್ತಿತ್ತು. ಜನರಲ್ಲಿ ಆರೋಗ್ಯ ಪ್ರಜ್ಞೆ - ಸ್ವಚ್ಛತೆ ಹೆಚ್ಚಿದಂತೆ ಈ ರೋಗ ಕಡಿಮೆಯಾಗತೊಡಗಿದೆ. ಇದು ಕೇರಳದ ಸಮುದ್ರ ದಡ ಹಾಗೂ ಚೀನಾದ ಸಮುದ್ರ ದಡಗಳಲ್ಲಿ ವಾಸಿಸುವ ಜನರನ್ನು ಪೀಡಿಸುತ್ತಿತ್ತು. ಕಾರಣ ಈ ರೋಗವನ್ನು "ಕೋಚಿನ - ಚೈನಾ ಬೇಧಿ" ಎಂದೇ ಕರೆಯಲಾಗುತಿತ್ತು. ರೋಗಿಯ ಪ್ರಮುಖ ತೊಂದರೆಯೆಂದರೆ ವಿಪರೀತ ಬೇಧಿ. ದಿನಕ್ಕೆ 8 - 10 ಸಲ ಬೇಧಿಯಾಗುತ್ತದೆ. ಮಲದಲ್ಲಿ ಕೀವು ರಕ್ತ ಕಾಣುತ್ತದೆ. ಹೊಟ್ಟೆ ಸದಾಕಾಲ ಮುರಿಯುತ್ತದೆ. ಸ್ಪರ್ಷ ವೇದನೆ ಮಹತ್ವದ ರೋಗ ಲಕ್ಷಣ.

ಮಲ ಪರೀಕ್ಷೆ ಮಾಡಿದರೆ ಮಲದಲ್ಲಿ ಸಾವಿರಾರು ಈ ಹುಳುವಿನ ಮರಿಗಳು ಕಾಣುತ್ತವೆ. ಹಾವಿನ ಮರಿಗಳಂತೆ ಈಡಾಡುತ್ತಿರುತ್ವೆ. ಹಮರಿಗಳನ್ನು ನಾವು ಕೇವಲ ಸೂಕ್ಷ್ಮದರ್ಶಕದಲ್ಲಿ ನೋಡಬಹುದು. ಬರಿಗಣ್ಣಿಗೆ ಇವುಗಳನ್ನು ನೋಡಲು ಸಾಧ್ಯವಿಲ್ಲ.

ಸಾಮಾನ್ಯವಾಗಿ ಈ ಹುಳುಗಳುಕರುಳಿನ ಭಿತ್ತಿಯಲ್ಲಿ ವಾಸಿಸುತ್ತವೆ. ಅಲ್ಲಿಯೇ ಇದ್ದು ಕರುಳಿನ ಭಿತ್ತಿಯಲ್ಲಿ ಉರಿಯೂತ ಹುಟ್ಟುಸುತ್ತದೆ. ಮರಿಗಳನ್ನು ಹಾಕುತ್ತವೆ. ಈ ಹುಳು ಹಾಗೂ ಮರಿಗಳು ಕರುಳಿನ ಭಿತ್ತಿಯಲ್ಲಿ ಸುರಂಗ ಕೊರೆದು ಅಡ್ಡಾಡುತ್ತವೆ. ಕೀವು ರಕ್ತ ಸೋರುತ್ತದೆ.

ಒಂದು ವೇಳೆ ರೋಗಿಯ ರೋಗ ನಿರೋಧಕ ಶಕ್ತಿ ಕಳೆಗುಂದಿದರೆ ಕರುಳಿನಲ್ಲಿ ವಾಸಿಸುತಿದ್ದ ಹುಳುಗಳಿಗೆ ಹುಚ್ಚು ಹಿಡಿದಂತಾಗಿ ಅವು ಸುರಂಗಗಳನ್ನು ಕೊರೆಯುತ್ತಾ ದೇಹದಲ್ಲೆಲ್ಲ ಪಸರಿಸುತ್ತವೆ. ಅಂದರೆ, ಕರುಳಿನಿಂದ ಅವು ಮೂತ್ರಪಿಂಡ ಜಠರ, ಯಕೃತ್, ಪುಪ್ಪುಸ ಹಾಗೂ ಮಿದುಳು ಇತ್ಯಾದಿ ಅಂಗಾಂಶದಲ್ಲಿಸೇರಿ ವ್ಯಕ್ತಿಯನ್ನು ಸಾಯಿಸಿ ಬಿಡುತ್ತವೆ.

ರೋಗ ನಿರೋಧಕ ಶಕ್ತಿ ಹಲವಾರು ಕಾರಣಗಳಿಂದ ಕುಗ್ಗಬಹುದು. ನಾವು ಬಳಸುವ ಕಾರ್ಟಿಕೋಸ್ಟಿರೋಯಿಡ್ ಮದ್ದು ನಿರೋಧಕ ಶಕ್ತಿಯನ್ನು ತಕ್ಷಣ ಮುರಿದು ಹಾಕುವುದು. ಕಾರಣ ಈ ರೋಗಿಗಳಿಗೆ ಸ್ಟಿರೋಯಿಡ್ ಉಪಚಾರ ಕೊಟ್ಟರೆ ಫಾಶಿ ಅಥವಾ ಗಲ್ಲು ಶಿಕ್ಷೆ ಕೊಟ್ಟಂತೆಯೇ. ಈ ಹುಳುವು ಕೊಕ್ಕೆ ಹುಳದ ಸಮೀಪ ಸಂಬಂಧಿ. ಇಂದು ಇದಕ್ಕೆ ಒಳ್ಳೆಯ ಮದ್ದು ಇದೆ. ರೋಗದ ಪ್ರಮಾಣವೂ ಕಡಿಮೆಯಾಗಿದೆ. ಬರಿಗಾಲಿನಿಂದ ಮಲವಿಸರ್ಜಿಸುವಲ್ಲಿ ಅಡ್ಡಾಡಿದರೆ, ಕೈಗಳಿಂದ ಆ ಮಣ್ಣಿನಲ್ಲಿ ಕೆಲಸಮಾಡಿದರೆ, ನೆಲದಲ್ಲಿ ಕಾಯುತ್ತಿರುವ ಮರಿಗಳು ಧರ್ಮ ಛೇದಿಸಿಕೊಂಡು ದೇಹ ಸೇರುತ್ತವೆ. ಅಲ್ಲಿಂದ ಅವು ರಕ್ತದಲ್ಲಿ ಈಜಾಡುತ್ತಾ ಪುಪ್ಪುಸ ತಲುಪುವುವು. ಪುಪ್ಪುಸದಲ್ಲಿ ವಸತಿ ಹಾಕಿ ಬೆಳೆದು ದೊಡ್ಡವಾಗುತ್ತವೆ. ಆನಂತರ ಪುಪ್ಪುಸದಲ್ಲಿ ರಂದ್ರ ಕೊರೆದು ಶ್ವಾಸನಾಳ ಸೇರುತ್ತವೆ. ಶ್ವಾಸನಾಳದಲ್ಲಿ ಹೊಟ್ಟೆಹೊಸೆಯುತ್ತಾ ಗಂಟಲು ತಲುಪುವವು. ಗಂಟಲದಲ್ಲಿ ಕುಳಿತು ಕೆರೆತ ಉಂಟು ಮಾಡುವುವು. ಆಗ ವ್ಯಕ್ತಿ ಕೆರೆತ ಕಡಿವೆ ಮಾಡಲು ಉಗುಳು ನುಂಗುವನು. ಉಗುಳಿನೊಂದಿಗೆ ಹುಳುಗಳು ಕರುಳು ಸೇರುವುವು. ತಮ್ಮ ಹಾಳುಗೆಡುವ ಕಾರ್ಯವನ್ನು ಪ್ರಾರಂಭಿಸುವುವು. (ಡಾ. ಎಸ್.ಜೆ. ನಾಗಲೋಟಿಮಠ)