ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ತನಗ್ರಂಥಿ

ಸ್ತನಗ್ರಂಥಿ - ಸ್ತನಿಗಳ ದೇಹದಲ್ಲಿ ಹಾಲನ್ನು (ಸ್ತನ್ಯ) ಉತ್ಪಾದಿಸುವ ಅಥವಾ ಸ್ರವಿಸುವ ವಿಶೇಷ ಅಂಗ (ಮ್ಯಾಮ್ಮರಿ ಗ್ಲ್ಯಾಂಡ್). ಇದರಿಂದ ಹಾಲು ಹೊರಬರುವ ದೇಹಭಾಗಕ್ಕೆ ಮೊಲೆ (ಮನುಷ್ಯರಲ್ಲಿ) ಅಥವಾ ಕೆಚ್ಚಲು (ಪ್ರಾಣಿಗಳಲ್ಲಿ) ಎಂದು ಹೆಸರು. ಸ್ತನಗಳು ಪುರುಷರಿಗೂ ಸ್ತ್ರೀಯರಿಗೂ ಇರುವುವು. ಆದರೆ ಸ್ತನಗ್ರಂಥಿಗಳಿರುವುದು ಸ್ತ್ರೀಯರಲ್ಲಿ ಮಾತ್ರ. ಅವರು ಪ್ರಾಯಕ್ಕೆ ಬಂದಾಗ ಪೂರ್ಣಪ್ರಮಾಣದ ಬೆಳೆವಣಿಗೆ ಕಾಣುತ್ತದೆ. ಮುಂದೆ ಋತುಬಂಧವಾದಾಗ (ಮೆನೊಪಾಸ್) ಅವು ಕುಗ್ಗುತ್ತವೆ. ಮಗುವಿನ ಅಥವಾ ಶಿಶುಪ್ರಾಣಿಯ ಮೊದಲ ಆಹಾರವೇ ತಾಯಿಯ ಮೊಲೆಹಾಲು — ಇದು ನಿಸರ್ಗವಿತ್ತಿರುವ ಒಂದು ವರ.

ಮುಖ್ಯವಾಗಿ ಹಸು ಮತ್ತು ಎಮ್ಮೆಗಳಲ್ಲಿ ಅಧಿಕ ಪ್ರಮಾಣದ ಮೊಲೆಹಾಲು ಉತ್ಪನ್ನವಾಗುವುದು. ಆದಿಕಾಲದಿಂದಲೂ ಮಾನವ ಈ ಹಾಲನ್ನು ಕರೆದು (ಹಿಂಡಿ) ತನ್ನ ಆಹಾರವಾಗಿ ಬಳಸುತ್ತಿದ್ದಾನೆ. ಹೈನುಗಾರಿಕೆ ಒಂದು ಉದ್ಯಮವೇ ಆಗಿದೆ. ದೇಹದ ಇತರ ಭಾಗಗಳಂತೆ ಸ್ತನಗ್ರಂಥಿಯೂ ಬಳಲುವುದುಂಟು. ಅದನ್ನು ಕೀವು, ಉರಿಯೂತ, ಕುರು, ಕ್ಷಯ, ಕ್ಯಾನ್ಸರ್ ಮುಂತಾದವು ಬಾಧಿಸುವುದು ವಿರಳವಲ್ಲ. (ಎಸ್.ಕೆ.ಎಚ್.)