ಸ್ತನಿ - ಶೈಶವಾವಸ್ಥೆಯಲ್ಲಿರುವ ತನ್ನ ಮರಿಗಳಿಗೆ ಹಾಲುಣಿಸುವ ಸಲುವಾಗಿ ಸ್ತನಗ್ರಂಥಿಗಳಿರುವ ಕಶೇರುಕಗಳ ಯಾವುದೇ ಗುಂಪು (ಮ್ಯಾಮ್ಮಲ್). ಸ್ತನ ಗ್ರಂಥಿಗಳು ಹೆಣ್ಣಿನಲ್ಲಿ ಮಾತ್ರ ಕ್ರಿಯಾಶೀಲ. ಬೆಳೆವಣಿಗೆಯ ಒಂದಲ್ಲ ಒಂದು ಹಂತದಲ್ಲಿ ಸ್ತನಿಗಳ ದೇಹ ಕೇಶಯುಕ್ತ ವಾಗಿರುವುದು ಇನ್ನೊಂದು ಲಕ್ಷಣ. ಸ್ತನಿ ವರ್ಗಕ್ಕೆ ಸೇರಿದ ತಿಮಿಂಗಿಲಗಳ ಪ್ರೌಢಾವಸ್ಥೆಯಲ್ಲಿ ಕೂದಲು ಇರದಿದ್ದರೂ ಭ್ರೂಣಹಂತದಲ್ಲಿ ಅದು ಇದ್ದೇ ಇರುತ್ತದೆ. ಮಾನವನೂ ಸೇರಿದಂತೆ ಹಲವಾರು ಸಾಕುಪ್ರಾಣಿಗಳು ಸ್ತನಿವರ್ಗಕ್ಕೆ ಸೇರಿವೆ. ಕೆಲವು ಜಲಚರ ಪ್ರಭೇದಗಳನ್ನು ಹೊರತುಪಡಿಸಿದರೆ ಸ್ತನಿಗಳೆಲ್ಲವೂ ನಿಯತತಾಪಿ (ವಾರ್ಮ್‍ಬ್ಲಡೆಡ್) ಚತುಷ್ಪಾದಿಗಳು.

ಸ್ತನಿಗಳಲ್ಲಿ ಸು. 4000 ಪ್ರಭೇದಗಳಿವೆ. ಆ ಪೈಕಿ ಸು. 3,000 ಧ್ವಂಸಕ ಪ್ರಾಣಿಗಳು. ಭೂಮಿಯಲ್ಲಿರುವ ಪ್ರಾಣಿ ಪ್ರಭೇದಗಳ ಸಂಖ್ಯೆ ಸು. 7,50,000. ಇಲ್ಲಿಯೂ ಸಂಧಿಪದಿ, ಕೀಟ, ಮೃದ್ವಂಗಿ ಮುಂತಾದವುಗಳ ಜೊತೆ ಹೋಲಿಸಿದರೆ ಸ್ತನಿಗಳ ಸಂಖ್ಯೆ ತೀರ ಕಡಿಮೆ. ಇನ್ನು ಇತರ ಅಕಶೇರುಕಗಳು ಸ್ತನಿಗಳಿಗಿಂತ 10-15 ಮಡಿ ಅಧಿಕವಾಗಿವೆ.

ಗಾತ್ರತಃ ಸ್ತನಿಗಳಲ್ಲಿ ಬಹಳ ವ್ಯತ್ಯಾಸಗಳಿವೆ. ಕೇವಲ ಕೆಲವು ಗ್ರಾಮ್ ತೂಕದ ಇಲಿಯಂಥ ಪ್ರಾಣಿಯಿಂದ ಹಿಡಿದು ಸು. 150 ಟನ್ ಭಾರದ ನೀಲಿ ತಿಮಿಂಗಿಲಗಳೂ ಈ ವರ್ಗದಲ್ಲಿ ಸೇರಿವೆ. ಜೊತೆಗೆ ಸ್ತನಿಗಳ ವಿಶಿಷ್ಟ ದೇಹಪ್ರಕೃತಿ, ಚಲನವಲನ, ಜೀವನಶೈಲಿಗಳಿಂದಾಗಿ ಅವು ಇಂದು ಜಗತ್ತಿನ ಎಲ್ಲಡೆಯೂ ಪಸರಿಸಿವೆ. ಅವುಗಳ ಗಣನೀಯ ಸಂಖ್ಯೆ ಹಾಗೂ ಮಾನವ ಇದೇ ವರ್ಗಕ್ಕೆ ಸೇರಿದವನಾದ್ದರಿಂದ ಇಡೀ ಪ್ರಾಣಿಪ್ರಪಂಚದಲ್ಲಿ ಸ್ತನಿಗಳಿಗೆ ವಿಶಿಷ್ಟ ಸ್ಥಾನಮಾನವಿದೆ. ಮರಿಗಳು ಜನಿಸಿ ಸಾಕಷ್ಟು ಕಾಲ ಸ್ತನ್ಯಪಾನ ಮಾಡುವುದರಿಂದ, ಆ ಅವಕಾಶ ತಾಯಿ ಅವುಗಳಿಗೆ ಜೀವನಶೈಲಿ ಕಲಿಸಲು ಉಪಯುಕ್ತವಾಗುತ್ತದೆ. ಹೀಗಾಗಿ ಸ್ತನಿಗಳಲ್ಲಿ ಎದ್ದುಕಾಣುವ ಹಲಬಗೆಯ ವರ್ತನೆಗಳು ಅಸ್ತನಿಗಳಲ್ಲಿ ಕಂಡುಬರುವುದಿಲ್ಲ.

ಸ್ತನಿಗಳ ಉಗಮ ಸು.180-220 ದಶಲಕ್ಷ ವರ್ಷಗಳ ಹಿಂದೆ ಆಗಿರಬಹುದೆಂದು ಅಂದಾಜು. ಸಣ್ಣದೇಹ, ಚುರುಕು ನಡೆ, ವಿಶಿಷ್ಟ ಹಲ್ಲು ಹಾಗೂ ಕಾಲುಗಳಿದ್ದ ಥಿರಾಪ್ಸಿಡ್ ಎಂಬ ಸರೀಸೃಪ ಸ್ತನಿಗಳ ಪೂರ್ವಜ ಆಗಿರಬೇಕು. ದೈತ್ಯೋರಗಗಳಾದ ಡೈನೊಸಾರಸ್‍ಗಳಿದ್ದ ಜುರಾಸಿಕ್ ಕಾಲದಲ್ಲಿಯೇ (ಸು. 250 ದಶಲಕ್ಷ ವರ್ಷಗಳ ಹಿಂದೆ) ಸ್ತನಿಗಳಿದ್ದರೂ ದೈತ್ಯೋರಗಗಳು ನಿರ್ನಾಮವಾದ ಬಳಿಕವಷ್ಟೆ, ಅಂದರೆ ಸು. 70 ದಶಲಕ್ಷ ವರ್ಷಗಳ ಹಿಂದಿನಿಂದ ಇಂದಿನತನಕ ಭೂಮಿಯ ಮೇಲೆ ಸ್ತನಿಗಳೇ ಆಧಿಪತ್ಯ ನಡೆಸುತ್ತಿವೆ.

ಸ್ತನಿಗಳ ಮುಖ್ಯ ಲಕ್ಷಣಳು :

1. ಸ್ತನಗ್ರಂಥಿಗಳು : ಇವು ಗಂಡು ಹಾಗೂ ಹೆಣ್ಣು ಸ್ತನಿಗಳ ಉದರ ಭಾಗದಲ್ಲಿ (ಎದೆ, ಹೊಟ್ಟೆ ಅಥವಾ ಕಿಬ್ಬೊಟ್ಟೆ) ಕಂಡುಬಂದರೂ ಕೇವಲ ಹೆಣ್ಣಿನಲ್ಲಷ್ಟೆ ಕಾರ್ಯನಿರತ. ಮರಿ ಹುಟ್ಟಿದ ಬಳಿಕವಷ್ಟೆ ಇವುಗಳಲ್ಲಿ ಹಾಲಿನ ಉತ್ಪಾದನೆ ಆರಂಭವಾಗುತ್ತದೆ. ಇದನ್ನು ಸೇವಿಸಿ ಮರಿಗಳು ಬೆಳೆಯುತ್ತವೆ. ಸ್ತನ ಗ್ರಂಥಿಗಳು ಮೂಲತಃ ಸ್ವೇದ ಗ್ರಂಥಿಗಳಾಗಿದ್ದು, ಕೆಲವೊಂದು ದೈಹಿಕ ಬದಲಾವಣೆಗಳಿಂದಾಗಿ ಹಾಲನ್ನು ಉತ್ಪಾದಿಸುತ್ತವೆ.

ಹೊಟ್ಟೆ ಚೀಲವುಳ್ಳ ಸ್ತನಿಗಳ (ಉದಾ: ಕಾಂಗರೂ) ಹಾಗೂ ಗರ್ಭವೇಷ್ಟನ ಸ್ತನಿಗಳ ಸ್ತನಗಳಿಗೆ ತೊಟ್ಟು ಇದೆ. ಮರಿ ಈ ತೊಟ್ಟನ್ನು ತನ್ನ ಬಾಯಿಯಲ್ಲಿರಿಸಿ, ಚೀಪಿ ತಾಯಿಯ ಹಾಲು ಹೀರುತ್ತದೆ. ಮೊಟ್ಟೆಯಿಡುವ ಸ್ತನಿಗಳಲ್ಲಿ ತೊಟ್ಟು ಇರುವುದಿಲ್ಲ. ಹಾಗಾಗಿ, ಸ್ರವಿಸಿದ ಹಾಲು ನೇರವಾಗಿ ತಾಯಿಯ ಹೊಟ್ಟೆ ಕೆಳಗೆ ಹರಿದು, ಅಲ್ಲಿಯ ತಗ್ಗಿನಲ್ಲಿ ಶೇಖರಗೊಳ್ಳುತ್ತದೆ. ಶಿಶುಜನನದ ವೇಳೆ ಹೆಣ್ಣಿನ ಸ್ತನಗ್ರಂಥಿಗಳಲ್ಲಿ ಹಾಲಿನ ಉತ್ಪಾದನೆ ಮುಂತಾದವನ್ನು ಹಾರ್ಮೋನುಗಳು ನಿಯಂತ್ರಿಸುತ್ತವೆ. ಗಂಡು ಸ್ತನಿಗಳ ಗ್ರಂಥಿಗಳು ನಿಷ್ಕ್ರಿಯವಾಗಿರುತ್ತವೆ.

2. ಕೂದಲು : ಎಲ್ಲ ಸ್ತನಿಗಳಲ್ಲೂ ಬೆಳೆವಣಿಗೆಯ ಒಂದಲ್ಲ ಒಂದು ಹಂತದಲ್ಲಿ ಕೂದಲಿರುವುದು. ತಿಮಿಂಗಿಲಗಳಲ್ಲಾದರೋ ಬಾಲ್ಯಾವಸ್ಥೆಯಲ್ಲಿ ಮಾತ್ರ ಗಂಟಲು ಭಾಗದಲ್ಲಿ ಕೂದಲಿದ್ದು, ಪ್ರೌಢಾವಸ್ಥೆಯಲ್ಲಿ ಅದು ಮರೆಯಾಗುತ್ತದೆ. ಪ್ರತಿಯೊಂದು ಕೂದಲೂ ಜೀವಕೋಶದ ದೀರ್ಘೀಕೃತ ನಾಳ. ಇದು ವಾಯುಪೂರಿತವಾಗಿದ್ದು ಚರ್ಮದ ರೋಮಕೂಪದಿಂದ ಬೆಳೆಯುತ್ತದೆ. ಈ ಕೂಪ ನಿರ್ದಿಷ್ಟ ಕೋನದಲ್ಲಿರುವುದರಿಂದ ಕೂದಲಿನ ಬೆಳೆವಣಿಗೆಯೂ ಅದೇ ದಿಶೆಯಲ್ಲಿ ಆಗುತ್ತದೆ. ವಾಸ್ತವವಾಗಿ ಕೂಪಗಳಲ್ಲಿ ಸ್ವೇದ ಗ್ರಂಥಿಗಳಿದ್ದು ಇವು ಕೆಲವೊಂದು ಸ್ತನಿಗಳಲ್ಲಿ ಎಣ್ಣೆಯಂಥ ಪದಾರ್ಥವನ್ನು ಸ್ರವಿಸುತ್ತವೆ. ಇದು ಕೂದಲನ್ನು ನವುರಾಗಿಸುತ್ತದೆ. ಜೊತೆಗೆ ಸ್ತನಿಗಳಿಗೆ ಚಳಿ ತಡೆಯಲು ಮತ್ತು ದೇಹೋಷ್ಣತೆ ಕಾಪಾಡಲು ನೆರವಾಗುತ್ತದೆ ಕೂಡ.

3. ನಿಯತತಾಪಿತ್ವ (ವಾರ್ಮ್‍ಬ್ಲಡೆಡ್‍ನೆಸ್) : ಹಲವಾರು ಅಕಶೇರುಕಗಳಲ್ಲಿಯ ರಕ್ತದ ಉಷ್ಣತೆ, ಹೊರಗಿನ ವಾತಾವರಣದ ಉಷ್ಣತೆಗೆ ಅನುಗುಣವಾಗಿ ಬದಲಾಗುತ್ತದೆ. ಆದರೆ ಸ್ತನಿಗಳದು ಬದಲಾಗದು - ಈ ಗುಣವೇ ನಿಯತತಾಪಿತ್ವ. ಎಂಥ ಚಳಿಗಾಲದಲ್ಲೂ ಸ್ತನಿಗಳ ದೇಹೋಷ್ಣತೆ ನಿಯತವಾಗಿರುತ್ತದೆ. ಇದು ಅವುಗಳ ರಕ್ತ ಪರಿಚಲನೆಗೂ ದೈಹಿಕ ಚಟುವಟಿಕೆಗಳಿಗೂ ಬಹಳಷ್ಟು ಪ್ರಯೋಜನಕಾರಿ, ನಿಜ. ಆದರೆ ಪರಿಸರದ ತಾಪ ವೈಪರೀತ್ಯಗಳ ಜೊತೆ ಸ್ತನಿಗಳು ದೇಹೋಷ್ಣತೆಯನ್ನು ನಿಭಾಯಿಸಲು ಅಸಫಲವಾದಾಗ ಶಿಶಿರಸುಪ್ತಿಗೆ (ಹೈಬರ್ನೇಶನ್) ಶರಣಾಗುತ್ತವೆ. ಈ ಅವಧಿಯಲ್ಲಿ ಇವುಗಳ ಎಲ್ಲ ಚಟುವಟಿಕೆಗಳೂ ಮೊಟಕಾಗುತ್ತವೆ, ಕೇವಲ ಜೀವಿಸಿರಲು ಬೇಕಾದ ದೈಹಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಅದೇ ರೀತಿ ಬೇಸಗೆಯಲ್ಲಿ, ವಾತಾವರಣದ ತಾಪಮಾನ ಅಧಿಕವಾಗಿದ್ದಲ್ಲಿ, ತಮ್ಮ ದೇಹವನ್ನು ತಂಪಾಗಿರಿಸಲು ಈ ಪ್ರಾಣಿಗಳು ಬೆವರುತ್ತವೆ ಮತ್ತು ಇವುಗಳ ಬಾಯಿಯಿಂದ ಜೊಲ್ಲು ಸುರಿಯುತ್ತದೆ.

4. ನಾಲ್ಕು ಕವಾಟಗಳ ಹೃದಯ : ಸ್ತನಿಗಳ ಹೃದಯದಲ್ಲಿ ಎರಡು ಹೃತ್ಕರ್ಣ ಹಾಗೂ ಎರಡು ಹೃತ್ಕುಕ್ಷಿಗಳಿವೆ. ಹೀಗಾಗಿ ಫುಪ್ಫುಸಗಳಿಗೆ ಹಾಗೂ ದೇಹದ ಇತರ ಭಾಗಗಳಿಗೆ ಶುದ್ಧ ಹಾಗೂ ಅಶುದ್ಧರಕ್ತ ಬೇರೆ ಬೇರೆಯಾಗಿ ಹರಿಯುತ್ತವೆ.

5. ದೊಡ್ಡ ಮಿದುಳು : ಎಲ್ಲ ಸ್ತನಿಗಳ ಮಿದುಳೂ ಬೇರೆ ಪ್ರಾಣಿಗಳವುಗಳದ್ದಕ್ಕಿಂತ ದೊಡ್ಡದಾಗಿರುತ್ತದೆ. ಅಲ್ಲಿಯೂ ಮುಖ್ಯವಾಗಿ ಕೋತಿ ಜಾತಿಯ ಸ್ತನಿಗಳ ಮಿದುಳು ಚೆನ್ನಾಗಿ ಬೆಳೆದಿರುತ್ತದೆ. ಇದು ಪ್ರಾಣಿಗೆ ಹೆಚ್ಚಿನ ಬುದ್ಧಿಮತ್ತೆಯನ್ನು ಒದಗಿಸುವುದಲ್ಲದೇ ಬದಲಾಗುತ್ತಿರುವ ಪರಿಸರಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಲು ಸಹಕಾರಿಯಾಗುತ್ತದೆ ಕೂಡ ಮಿದುಳಿನಲ್ಲಿ ಅನೇಕ ಕಂದಕಗಳೂ ದಿಬ್ಬಗಳೂ ಇರುವುವು. ಆದ್ದರಿಂದ ಮಿದುಳಿನ ಪಾತಳಿಯ ವಿಸ್ತಾರ ಉಳಿದೆಲ್ಲ ಪ್ರಾಣಿಗಳದ್ದಕ್ಕಿಂತ ಹೆಚ್ಚಾಗಿರುತ್ತದೆ.

6. ಕುತ್ತಿಗೆಯ ಕಶೇರು ಮಣಿಗಳು : ಒಂದೆರಡು ಪ್ರಭೇದಗಳನ್ನು ಹೊರತುಪಡಿಸಿ ಉಳಿದೆಲ್ಲ ಸ್ತನಿಗಳ ಕುತ್ತಿಗೆಯಲ್ಲಿ ಸರ್ವೇಸಾಮಾನ್ಯವಾಗಿ 7 ಕಶೇರುಮಣಿಗಳಿರುವುವು. ಉದ್ದ ಕುತ್ತಿಗೆಯ ಜಿರಾಫೆಯಾಗಲೀ ಕುತ್ತಿಗೆಯೇ ಇಲ್ಲದ ಇಲಿಯಾಗಲೀ ಎರಡರಲ್ಲೂ 7 ಕುತ್ತಿಗೆ ಕಶೇರುಮಣಿಗಳಿರುವುವು.

7. ಎದೆಗಾಪು : ಸ್ತನಿಗಳ ಎದೆಗಾಪು ವಿಶೇಷವಾಗಿ ನಿರ್ಮಿತವಾಗಿದೆ. ಎದೆಗೂಡಿನ ಎಲುಬುಗಳು ಬೆನ್ನುಹುರಿಗೆ ಜೋಡಿಗೊಂಡಿವೆ. ಈ ಎದೆಗಾಪು ಸ್ತನಿಗಳ ಪ್ರಮುಖ ಭಾಗಗಳಾದ ಹೃದಯ, ಫುಪ್ಫುಸ ಇತ್ಯಾದಿಗಳ ಸುರಕ್ಷತೆಯ ಕವಚ ಕೂಡ. ಇದಕ್ಕೆ ಹೊಂದಿಕೊಂಡಂತೆ ಸ್ನಾಯುಗಳಿಂದಾದ ವಪೆ ಇದೆ. ಉಸಿರಾಟದಲ್ಲಿ ಇದು ಬಹಳಷ್ಟು ಸಹಕಾರಿ.

8. ಹಲ್ಲು : ಸ್ತನಿಗಳಲ್ಲಿ ಬಾಚಿಹಲ್ಲು, ಕೋರೆಹಲ್ಲು, ದವಡೆಹಲ್ಲು ಇತ್ಯಾದಿ ವಿವಿಧ ರೀತಿಯ ಹಲ್ಲುಗಳಿರುವುದರಿಂದ, ಅವು ವಿವಿಧ ರೀತಿಯ ಆಹಾರ ಸೇವಿಸಬಹುದಾಗಿದೆ. ಕೆಲವೊಂದು ಪ್ರಾಣಿಗಳಲ್ಲಿ ಹಲ್ಲುಗಳು ಹುಟ್ಟಿದಾಗಿನಿಂದ ಸಾಯುವತನಕ ನಿರಂತರ ಬೆಳೆಯುತ್ತಲೇ ಇದ್ದರೆ, ಇನ್ನಿತರ ಪ್ರಾಣಿಗಳಲ್ಲಿ ಅವು ಹಲವು ಬಾರಿ ಬಿದ್ದು ಹೊಸಹಲ್ಲುಗಳು ಮೊಳಯುತ್ತವೆ. ಇನ್ನೂ ಹಲವು ಪ್ರಾಣಿಗಳಲ್ಲಿ ಹಲ್ಲಿನ ಸಂಖ್ಯೆ ಇಂತಿಷ್ಟೇ ಎಂಬುದಿಲ್ಲ. ಪ್ರಾಣಿ ಬೆಳೆದ ಹಾಗೆ ಹಲ್ಲಿನ ಸಂಖ್ಯೆಯೂ ಬೆಳೆಯುತ್ತಲೇ ಇರುವುದು. ಆದರೆ ಸ್ತನಿಗಳಲ್ಲಿ ಸಾಮಾನ್ಯವಾಗಿ ತಮ್ಮ ಅಗತ್ಯಗಳಿಗನುಗುಣವಾಗಿ ಕೇವಲ ಎರಡು ಬಾರಿ ಹಲ್ಲುಗಳು ಬರುತ್ತವೆ : ಬಾಲ್ಯಾವಸ್ಥೆಯಲ್ಲಿ ಅಸ್ಥಾಯೀ ಹಾಲುಹಲ್ಲುಗಳು, ಪ್ರೌಢಾವಸ್ಥೆಯಲ್ಲಿ ಅವು ಉದುರಿ ಹೋಗಿ ಶಾಶ್ವತ ಹಲ್ಲುಗಳು.

ಸ್ತನಿಗಳ ಅಂಗೋಪಾಂಗಗಳು ತೀವ್ರ ಹಾಗೂ ನಿರಂತರ ಚಲನೆಯಲ್ಲಿರಲು ಸಹಕಾರಿ. ಇವುಗಳ ದೈಹಿಕ ಚಲನೆಗೆ ಅನುಗುಣವಾಗಿ ಅತ್ಯಂತ ಸುಧಾರಿತ ಮಾದರಿ ಕಾಲುಗಳು, ಸುವ್ಯವಸ್ಥಿತ ರೀತಿಯಲ್ಲಿ ಜೀವದ್ರವ್ಯದ ವಿಭಜನೆ, ದೇಹಕ್ಕೆ ಹೊದಿಸಿದಂತಿರುವ ಕೂದಲುಗಳು, ಆಹಾರ ಹಾಗೂ ವಾಯುನಾಳದ ವಿಂಗಡಣೆ, ಮರಿಗಳ ಲಾಲನೆ ಪಾಲನೆ, ವಿವಿಧ ರೀತಿಯ ಕ್ಲಿಷ್ಟಕರ ನಡವಳಿಕೆ, ಮನಃಪರಿಸ್ಥಿತಿ, ಹೆಚ್ಚಿನ ಆಯುಷ್ಯ, ಕುಂಠಿತಗೊಂಡ ಭ್ರೂಣಗಳ ಸಂಖ್ಯೆ ಇತ್ಯಾದಿ ಇವೆ. ಹೀಗಾಗಿ ಸ್ತನಿಗಳು ಎಲ್ಲ ವಿಧದ ಪರಿಸರಗಳಲ್ಲಿ ವಾಸಿಸಬಲ್ಲವು. ಅಲ್ಲದೆ ಯಾವುದೇ ತೊಂದರೆಯಿಲ್ಲದೆ ತಮ್ಮ ಸಂತಾನಾಭಿವೃದ್ಧಿಯನ್ನು ಕೂಡ ನಿರಂತರವಾಗಿ ಸಾಧಿಸಿಕೊಳ್ಳಬಲ್ಲವು. ಇಂದು ಜೀವಂತವಿರುವ ಸ್ತನಿಗಳ ವರ್ಗೀಕರಣ ಸುಲಭಸಾಧ್ಯವಾದರೂ ವಿಲುಪ್ತವಾದವನ್ನು (ಎಕ್ಸ್‍ಟಿಂಕ್ಟ್) ಕೂಡ ಗಮನಿಸಿದರೆ ಹಲವಾರು ವಿಚಾರಗಳಿಗೆ ಸರಿಯಾದ ಉತ್ತರ ದೊರೆಯುವುದಿಲ್ಲ ಎಂದೇ ಇವುಗಳ ಸಮಗ್ರ ವರ್ಗೀಕರಣ ಕಷ್ಟಸಾಧ್ಯ.

ಮಾನವ ತನ್ನ ಅಶನ, ವಸನ, ವಸತಿ ಹಾಗೂ ಇತರ ವಸ್ತುಗಳಿಗಾಗಿ ಸ್ತನಿಗಳನ್ನು ಬಹಷ್ಟು ಅವಲಂಬಿಸಿದ್ದಾನೆ. ಪಳಗಿಸಿದ ಸ್ತನಿಗಳು ಮಾನವನ ಸರಕು ಹೊರುವುವೇ ಅಲ್ಲದೆ, ಅವನ ಸಂಚಾರ ಸಾಧನವಾಗಿಯೂ ಉಪಯೋಗವಾಗುತ್ತವೆ. ಇವು ಅವನ ಸಂಗಾತಿಯಾಗಿಯೂ ಇರಬಲ್ಲವು. ಹಲವಾರು ದೊಡ್ಡಗಾತ್ರದ ಸ್ತನಿಗಳು ತಮ್ಮ ಆಹಾರ, ವಿಹಾರ ಹಾಗೂ ಅಸ್ತಿತ್ವಕ್ಕೆ ಮಾನವನೊಂದಿಗೆ ಸ್ಪರ್ಧಿಸಿ, ಸೋತು ವಿಲುಪ್ತವಾಗಿ ಹೋಗಿವೆ. ಇಂದು ಸಹ ಹಲವಾರು ಬಲಿಷ್ಠ ದೊಡ್ಡಗಾತ್ರದ ಸ್ತನಿಗಳು ಪ್ರಾಣಿ ಸಂಗ್ರಹಾಲಯದಂಥ ತೆರೆಮರೆಯಲ್ಲಿವೆ. ಇನ್ನು ಹಲವು ಸ್ತನಿಗಳು ಮಾನವನ ಬೇಟೆ ಹಾಗೂ ಪರಿಸರನಾಶದಿಂದ ವಿಲುಪ್ತವಾಗುವ ಅಂಚು ತಲಪಿವೆ. (ಐ.ಕೆ.ಪಿ.)