ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ತರ ಸಂಚಯನ

ಸ್ತರ ಸಂಚಯನ

	ಮೆಕ್ಕಲು ಮಣ್ಣು ಪದರವಾಗಿ ಶೇಖರಗೊಳ್ಳುವ ಪ್ರಕ್ರಿಯೆ (ಸೆಡಿಮೆಂಟೇಶನ್). ನಿಸರ್ಗದಲ್ಲಿ ಇದು ನಾಲ್ಕು ಉತ್ತರೋತ್ತರ ಹಂತಗಳಲ್ಲಿ ಸಂಭವಿಸುತ್ತದೆ. ಹಾಲಿ ಇರುವ ಶಿಲೆಗಳು ಭೌತಿಕವಾಗಿ ಮತ್ತು ಅಥವಾ ರಾಸಾಯನಿಕವಾಗಿ ವಿಭಜಿತವಾಗುವುದು, ವಿಭಜಿತ ಸಾಮಗ್ರಿ ಬೇರೆಡೆಗೆ ನೈಸರ್ಗಿಕ ಬಲಗಳ ಕಾರಣವಾಗಿ ಸ್ಥಳಾಂತರಣಗೊಳ್ಳು ವುದು, ಜಲಪ್ರದೇಶಗಳಲ್ಲಿ ನಿಕ್ಷೇಪಿಸುವುದು, ನಿಕ್ಷೇಪಣಾನಂತರ ಪುನಸ್ಸಂಘಟನೆಗೊಂಡು ಗಟ್ಟಿಯಾಗುವುದು.

ಅಗ್ನಿಶಿಲೆಗಳು, ರೂಪಾಂತರ ಶಿಲೆಗಳು ಮತ್ತು ಜಲಜಶಿಲೆಗಳ ಶಿಥಿಲೀಕರಣದ ಉತ್ಪನ್ನಗಳೇ ಸ್ತರ ಸಂಚಯನದ ಕಚ್ಚಾ ಸಾಮಗ್ರಿಗಳು. ಶಿಥಿಲೀಕರಣ ರಾಸಾಯನಿಕವಾಗಿರಬಹುದು, ಭೌತಿಕವಾಗಿರಬಹುದು ಅಥವಾ ಎರಡರಿಂದಲೂ ಆಗಬಹುದು. ರಾಸಾಯನಿಕ ಶಿಥಿಲೀಕರಣದಲ್ಲಿ ಖನಿಜಗಳು ದ್ರಾವಣಗಳಲ್ಲಿ ವಿಲೀನಿಸುತ್ತವೆ. ಸುಲಭವಾಗಿ ವಿಲೀನಿಸದ ಶೇಷಭಾಗ ಅಲ್ಲಿಯೇ ಉಳಿಯುತ್ತದೆ. ಭೌತಿಕ ಶಿಥಿಲೀಕರಣದಲ್ಲಿ ಶಿಲೆಗಳು ನೀರು, ಗಾಳಿ ಮತ್ತು ಉಷ್ಣತೆಗಳಿಂದ ಭೌತಿಕವಾಗಿ ಶಿಥಿಲವಾಗುತ್ತವೆ.

ಶಿಥಿಲೀಕರಣದಿಂದ ಲಭ್ಯವಾಗುವ ಸಾಮಗ್ರಿಗಳು ನಿಕ್ಷೇಪದ ನಿವೇಶನಕ್ಕೆ ನೀರು, ಗಾಳಿ ಮತ್ತು ಭೂಸರಿತದಂಥ ಘನರಾಶಿ ಸರಿತದಿಂದ ಸಾಗಣೆಯಾಗುತ್ತವೆ. ನಿಶ್ಚಿತ ಘಟ್ಟದವರೆಗೆ ಅಂದರೆ ಸ್ತರಸಂಚಯನ ಕೊನೆ ಮುಟ್ಟುವವರೆಗೆ ಸಾಗಾಣಿಕೆ ಮತ್ತು ಸಂಚಯನ ಪರ್ಯಾಯವಾಗಿ ಮುಂದುವರಿಯುತ್ತಿರುತ್ತದೆ.

ನಿಕ್ಷೇಪಗಳಲ್ಲಿ ಭೌತ, ಭೌತರಾಸಾಯನಿಕ ಮತ್ತು ರಾಸಾಯನಿಕ ಎಂಬ ಮೂರು ಬಗೆಗಳಿವೆ. ಪರಿಸರ ಮತ್ತು ವಿಸ್ತಾರಗಳನ್ನು ಅವಲಂಭಿಸಿ ಅವನ್ನು ಈ ಮುಂದಿನಂತೆ ವರ್ಗೀಕರಿಸಲಾಗಿದೆ.

ಖಂಡೀಯ ಪರಿಸರಗಳು - ನದೀಕೃತ (ಫ್ಲೂವಿಯಲ್), ಸರೋವರೀಯ (ಲಾಕುಸ್ಟ್ರೈನ್), ಮಹಾಪಂಕಭೂಮಿ (ಸ್ವಾಂಪ್), ಗುಹೆ (ಕೇವ್).

ಸಂಕ್ರಾಮಿ ಪರಿಸರಗಳು - ನದೀಮುಖಜ (ಡೆಲ್ಟಾಯಿಕ್), ಅನೂಸೀಯ (ಲಗೂನಲ್), ತೀರ ಪ್ರದೇಶೀಯ (ಲಿಟ್ಟೊರಲ್).

ಸಾಗರೀಯ ಪರಿಸರಗಳು - ನೆರಿಟಿಕ್, ಟೆತಿಲ್, ಅಬಿಸ್ಸಲ್.

ಖಂಡೀಯ ಪರಿಸರ ನಿಕ್ಷೇಪಣೆಯಲ್ಲಿ ಭೌತಕ್ರಿಯೆಗಳು, ಸಂಕ್ರಾಮೀಪರಿಸರ ನಿಕ್ಷೇಪಣೆಯಲ್ಲಿ ಭೌತರಾಸಾಯನಿಕ ಕ್ರಿಯೆಗಳು ಮತ್ತು ಸಾಗರೀಯ ಪರಿಸರ ನಿಕ್ಷೇಪಣೆಗಳಲ್ಲಿ ರಾಸಾಯನಿಕ ಕ್ರಿಯೆಗಳು ಪ್ರಮುಖ ಪಾತ್ರವಹಿಸುತ್ತವೆ. ಹೀಗೆ ಸಂಚಿತಗೊಂಡ ಚೂರು ಮತ್ತು ಕಣಗಳು ಪುನಸ್ಸಂಘಟನೆಯಾಗಿ ಕ್ರಮೇಣ ಶಿಲೆಯಾಗಿ ಮಾರ್ಪಡುತ್ತದೆ.

(ಸಿ.ಜಿ.ಆರ್.)