ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಥಳನಾಮಗಳು

ಸ್ಥಳನಾಮಗಳು - ಸ್ಥಳಗಳಿಗೆ ಇರುವ ಹೆಸರುಗಳು (ಪ್ಲೇಸ್‍ನೇಮ್ಸ್). ವ್ಯಕ್ತಿನಾಮಗಳು ವೈಯಕ್ತಿಕವಾಗಿದ್ದರೆ ಸ್ಥಳನಾಮಗಳು ಸಮೂಹಕ್ಕೆ ಅನ್ವಯಿಸುತ್ತವೆ. ಪ್ರಾಣಿಗಳು ಕೂಡ ಭಿನ್ನ ಪ್ರದೇಶಗಳ ನಡುವಿನ ಭೇದವನ್ನು ಗಮನಿಸಿ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಅಂದ ಮೇಲೆ ಮಾನವ ಆದಿಕಾಲದಿಂದಲೂ ಸ್ಥಳಗಳ ಮಹತ್ತ್ವವನ್ನು ಗುರುತಿಸಿದ್ದ ಮತ್ತು ಅವಕ್ಕೆ ನಿರ್ದೇಶಕ ಹೆಸರುಗಳನ್ನು ಕಲ್ಪಿಸಿಕೊಂಡಿದ್ದ ಎಂಬುದರಲ್ಲಿ ಆಶ್ಚರ್ಯವಿಲ್ಲ. ಒಂದು ಸ್ಥಳ ವಿಶಿಷ್ಟವಾದುದು ಮತ್ತು ಪ್ರಯೋಜಕವಾದುದು ಎನಿಸಿದಾಗ, ಅದಕ್ಕೊಂದು ಹೆಸರು ಹುಟ್ಟಿಕೊಳ್ಳುತ್ತದೆ. ಮೊದಮೊದಲು ರೂಢನಾಮಗಳೇ ಬಳಕೆಯಲ್ಲಿದ್ದು, ಅದರ ತದ್ರೂಪಗಳ ಸಂಪರ್ಕಕ್ಕೆ ಬಂದಾಗ ಅವುಗಳ ನಡುವೆ ಭೇದವನ್ನು ಕಲ್ಪಿಸುವುದಕ್ಕಾಗಿ ಅಂಕಿತನಾಮಗಳು ಬರುತ್ತವೆ. ಉದಾ: ಒಂದು ನದಿಯ ಹತ್ತಿರ ವಾಸಿಸುತ್ತಿರುವವರು ಅದನ್ನು ಹೊಳೆ ಎಂದೇ ಪರಿಗಣಿಸುತ್ತಿರುತ್ತಾರೆ. ಮತ್ತೆ ಯಾವಾಗಲೋ ಅಂಥ ಇನ್ನೊಂದು ಹೊಳೆಯ ಸಂಪರ್ಕಕ್ಕೆ ಬಂದಾಗ ಅವನ್ನು ಹೆಸರುಗಳಿಂದ ಗುರುತಿಸುತ್ತಾರೆ. ಹಿಂದೆ ಸ್ಥಳಗಳ ಹೆಸರುಗಳು ಸಹಜವಾಗಿ ಬರುತ್ತಿದ್ದುವು. ಎಡಕ್ಕಿರುವ ತಿಟ್ಟು, ಬಲಕ್ಕಿರುವ ಹಳ್ಳ, ನದಿಯದಡದ ಲ್ಲಿರುವ ಹಳ್ಳಿ-ಹೀಗೆ ವಿವರಣಾತ್ಮಕವಾಗಿಯೂ ಇರುತ್ತಿದ್ದವು. ಮೊರಡಿಯ ಹತ್ತಿರ ಇದ್ದದ್ದರಿಂದ ಆದ ಮೊರಡಿಹಳ್ಳಿ ಮುಂದೊಂದು ದಿನ ಆ ಮೊರಡಿಯೇ ಇಲ್ಲದಾಗಲೂ ಅದೇ ಹೆಸರನ್ನು ಉಳಿಸಿಕೊಂಡಿತು. ಏಕೆಂದರೆ ಬಳಕೆಯಿಂದಾಗಿ ಅದು ಕೇವಲ ಒಂದು ಹೆಸರು ಆಗಿತ್ತು. ಈ ಸಿದ್ಧ ಹೆಸರನ್ನು ಮುಂದೆ, ಮೊರಡಿಯ ಪರಿವೆ ಇಲ್ಲದೆ ಇತರ ಸ್ಥಳಗಳಿಗೂ ಬಳಸಿದರು. ಎಲ್ಲ ಹೆಸರುಗಳ ಹಿಂದೆಯೂ ಅರ್ಥಪೂರ್ಣ ಸಹಜತೆಯನ್ನೇ ಹುಡುಕುವುದಕ್ಕಾಗುವುದಿಲ್ಲ. ಕೇರಿ ಕೇರಿಯೇ ಏಕಾಯಿ ತೆಂದರೆ ಹಾಗೆ ಕರೆದದ್ದರಿಂದ ಎಂದಷ್ಟೆ ಹೇಳಬಹುದು. ಪ್ರಪಂಚಾದ್ಯಂತ ಸ್ಥಳನಾಮಗಳಲ್ಲಿ ನಿರ್ದಿಷ್ಟ ಮತ್ತು ವಾರ್ಗಿಕ ಬಳಕೆಯಲ್ಲಿದ್ದರೂ ಸ್ಥಳನಾಮಗಳನ್ನು ರೂಪಿಸುವ ಕ್ರಮ ಭಾಷೆಯಿಂದ ಭಾಷೆಗೆ ವ್ಯತ್ಯಾಸ ಹೊಂದುತ್ತದೆ. ಫ್ರೆಂಚ್ ಮತ್ತು ಗ್ರೀಕ್ ಹೆಸರುಗಳ ಹಿಂದೆ ನಿರ್ದೇಶಕ ಗುಣವಾಚಿ ಹೆಚ್ಚು ಧಾರಾಳವಾಗಿ ಬಳಕೆಯಾಗುತ್ತದೆ. ಇಂಗ್ಲಿಷ್‍ನಲ್ಲಿ ಬಹುವಚನದಲ್ಲಿ ಮಾತ್ರ ಅದನ್ನೂ ಕಾಣಬಹುದು (ದಿ ಬ್ರಿಟಷ್ ಐಸಲ್ಸ್). ಹೀಗೆ ಹುಟ್ಟಿಕೊಂಡ ಸ್ಥಳನಾಮಗಳು ವಿವರಣಾತ್ಮಕವಾಗಿರ ಬಹುದು, ಯಾವುದೊ ಘಟನೆಯಿಂದಲೋ ಒಡೆತನದಿಂದಲೋ ಸಂಸ್ಮರಣೆಯಿಂದಲೋ ಇಲ್ಲವೇ ಸದ್ಭಾವನೆಯಿಂದಲೋ ಪ್ರೇರಿತವಾಗಿರ ಬಹುದು, ಕೃತಕವಾಗಿ ಸಂಯೋಜಿಸಿದ್ದೂ ಆಗಿರಬಹುದು. ನಾನಾ ರೀತಿಯಿಂದ ಹುಟ್ಟಿ ಒಂದು ಸಮಾಜದಲ್ಲಿ ಬಳಕೆಯಲ್ಲಿರುವ ಹೆಸರುಗಳು ಜನತೆಯ ಅನುಭವ, ಸಂಸ್ಕøತಿಯ ಮಟ್ಟ ಮತ್ತು ಮನೋದೃಷ್ಟಿಯ ಪ್ರತೀಕವಾಗಿರುತ್ತವೆ.

ಮನುಷ್ಯ ತನ್ನ ವಾಸಸ್ಥಳದ ಬಗೆಗೆ ಅಭಿಮಾನವನ್ನೂ ಕುತೂಹಲವನ್ನೂ ಬೆಳೆಸಿಕೊಂಡಿರುವುದಕ್ಕೆ ಸ್ಥಳನಾಮಗಳ ಹಿಂದಿರುವ ದಂತ ಕಥೆಗಳೂ ಸೇರಿದಂತೆ ವಿಪುಲ ಸಾಕ್ಷ್ಯವಿದೆ. ಆದರೆ ಅವನ್ನು ಮೊದಲು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ್ದು 1768ರಷ್ಟು ಹಿಂದೆ. ಅದನ್ನು ಮಾಡಿದವನು ಯುರೋಪಿನ ಗಾತ್‍ಫ್ರೀಡ್ ವಿಲ್ಹೆಲ್ಮ್ ಲೀಬ್ನಿಜ್ ಎಂಬವನು. ಈ ಕ್ಷೇತ್ರದಲ್ಲಿ ವಿಶೇಷ ಅಧ್ಯಯನ ನಡೆದಿರುವುದೂ ಯುರೋಪಿನಲ್ಲಿಯೇ. ಇಂಗ್ಲಿಷ್ ಸ್ಥಳನಾಮ ಸಂಸ್ಥೆ (1921) ಇಂಗ್ಲೆಂಡಿನ ಸ್ಥಳನಾಮಗಳ ಬಗ್ಗೆ 44 ಸಂಪುಟಗಳನ್ನು ಪ್ರಕಟಿಸಿದೆ. ಬೆಲ್ಜಿಯಮ್, ಅಮೆರಿಕಗಳಲ್ಲಿರುವ ನಾಮಸಂಸ್ಥೆಗಳು ಈ ಕ್ಷೇತ್ರಕ್ಕೆ ಮೀಸಲಾದ ಪತ್ರಿಕೆಗಳನ್ನು ಪ್ರಕಟಿಸುತ್ತಿವೆ. ಈ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನಗಳೂ ನಡೆದಿವೆ. ಇಂಡಿಯನ್ ಪ್ಲೇಸ್‍ನೇಮ್ಸ್ ಸೊಸೈಟಿ ಮೈಸೂರಿನಲ್ಲಿ ಸ್ಥಾಪಿತವಾಗಿ (1979) ಸ್ಟಡೀsಸ್ ಇನ್ ಇಂಡಿಯನ್ ಪ್ಲೇಸ್‍ನೇಮ್ಸ್ ಎಂಬ ಸಂಪುಟಗಳನ್ನು ಹೊರತಂದಿದೆ. ಅನೇಕ ವಿಚಾರ ಸಂಕಿರಣಗಳನ್ನು ನಡೆಸಿದೆ.

ಕೇರಳ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಈ ಕೆಲಸ ಗಮನಾರ್ಹವಾಗಿ ನಡೆದಿದೆ. ಕನ್ನಡದಲ್ಲಿ ಈ ಕ್ಷೇತ್ರದಲ್ಲಿ ದುಡಿದ ಮೊದಲ ಹಾಗೂ ಗಣ್ಯ ವಿದ್ವಾಂಸರೆಂದರೆ ಕೆಮ್ತೂರು ರಘುಪತಿಭಟ್ಟರು. ಈಗ ಹೆಸರುಗಳ ಅಧ್ಯಯನ ಒಂದು ವಿಜ್ಞಾನಶಾಖೆಯಾಗಿ ಬೆಳೆದು ನಿಂತಿದೆ (ಒನೊಮಾಸ್ಟಿಕ್ಸ್). ಅದರ ಒಂದು ಅಂಗ ವ್ಯಕ್ತಿನಾಮ ವಿಜ್ಞಾನ ವಾದರೆ ಮತ್ತೊಂದು ಸ್ಥಳನಾಮ ವಿಜ್ಞಾನ (ಟೊಪೊನೊಮಾನಿಟಿಕ್ಸ್).

ನಾಮ ವಿಜ್ಞಾನ

ವ್ಯಕ್ತಿನಾಮ ವಿಜ್ಞಾನ ಸ್ಥಳನಾಮ ವಿಜ್ಞಾನ

(ಮನುಷ್ಯ, ಪ್ರಾಣಿ ಇತ್ಯಾದಿಗಳ ಹೆಸರುಗಳ ಅಧ್ಯಯನ) ಟೊಪೋನಿಮಿ- ಜನವಸತಿ

                       ಸ್ಥಳಗಳ ಅಧ್ಯಯನ ಹಳ್ಳಿ,  
                       ಗ್ರಾಮ, ಬೀದಿ ಇತ್ಯಾದಿ

ಮೈಕ್ರೋಟೊಪೋನಿಮಿ- ಕಾಡು, ಹೋಲ,

              ತೋಟ  ಇತ್ಯಾದಿ  ಹೆಸರುಗಳ ಅಧ್ಯಯನ          
                ಹೊಡೋನಿಮಿ - (ನದಿ, ಕಾಲುವೆ, ಕೊಳ್ಳ 
               ಇತ್ಯಾದಿಗಳ ಹೆಸರುಗಳ ಅಧ್ಯಯನ)
            ಒರೋನಿಮಿ-  ಬೆಟ್ಟಗುಡ್ಡಗಳ 
            ಹೆಸರುಗಳ ಅಧ್ಯಯನ

ಸೇತುವೆ, ಸುರಂಗ, ಮನೆಗಳ ಹೆಸರುಗಳ ಅಧ್ಯಯನ ಕೂಡ ಸ್ಥಳನಾಮಗಳಲ್ಲಿ ಸೇರಬಹುದು. ಹೀಗೆ ಹೆಸರುಗಳ ಅಧ್ಯಯನ ಅನೇಕ ವಿಭಾಗಗಳಲ್ಲಿ ನಡೆಯುತ್ತದೆ. ಹೆಸರುಗಳ ಅಧ್ಯಯನದಲ್ಲಿ ವ್ಯಕ್ತಿನಾಮಗಳು, ಸ್ಥಳನಾಮಗಳು ಪ್ರಧಾನವಾದವು.

ನಾಮವಾಚಕಗಳಲ್ಲಿ- ರೂಢನಾಮ (ಅಪೆಲ್ಲೇಟಿಲ್ ಅಥವಾ ಕಾಮನ್ ನೌನ್) ಒಂದು ವರ್ಗವನ್ನು ಸೂಚಿಸುವಂಥದು. ಊರು, ದೇಶ, ಖಂಡ ಇಂಥವು. ಅಂಕಿತನಾಮ (ಪ್ರಾಪರ್ ನೌನ್) ಒಂದು ಬಿಡಿ ಘಟಕ ವನ್ನು ನಿರ್ದೇಶಿಸುತ್ತದೆ. ಮೈಸೂರು, ಭಾರತ, ಏಷ್ಯ ಇಂಥವು. ಇಂಗ್ಲಿಷ್ ನಲ್ಲಿ ಇಂಥ ಹೆಸರುಗಳನ್ನು ದೊಡ್ಡ ಅಕ್ಷರಗಳಿಂದ (ಕ್ಯಾಪಿಟಲ್ ಲೆಟರ್ಸ್) ಪ್ರಾರಂಭಿಸಿ ಬರೆಯುತ್ತಾರೆ. ಇವೆರಡರ ನಡುವೆ ನಿರ್ದಿಷ್ಟವಾದ ಭೇದವನ್ನು ಎಲ್ಲ ಸಂದರ್ಭಗಳಲ್ಲೂ ಗುರುತಿಸುವುದು ಸಾಧ್ಯವಾಗದೇ ಹೋಗಬಹುದು. ಇಂಗ್ಲಿಷ್ ಭಾಷೆಯಲ್ಲಿ ದೊಡ್ಡ ಅಕ್ಷರದ ಬಳಕೆಯಲ್ಲಿ ಅನೇಕ ವೇಳೆ ಕಾಣಿಸಿಕೊಳ್ಳುವ ಅನಿಶ್ಚಿತತೆಗೆ ಇದೇ ಕಾರಣ. ಜರ್ಮನ್ ಭಾಷೆಯಲ್ಲಿ ಎಲ್ಲ ಹೆಸರುಗಳನ್ನು ದೊಡ್ಡ ಅಕ್ಷರಗಳಿಂದಲೇ ಪ್ರಾರಂಭಿಸಿ ಈ ತೊಡಕನ್ನು ನಿವಾರಿಸಿಕೊಂಡಿರುವುದನ್ನು ಕಾಣಬಹುದು.

ಸ್ಥಳನಾಮಗಳನ್ನು, ಮುಖ್ಯವಾಗಿ ಕನ್ನಡಕ್ಕೆ ಸಂಬಂಧಿಸಿದಂತೆ ಇಲ್ಲಿ ನೋಡಬಹುದು: ದ್ರಾವಿಡ ಸ್ಥಳವಾಚಿಗಳಲ್ಲಿ ಸಾಮಾನ್ಯವಾಗಿ ಎರಡು ಆಕೃತಿಮಾಗಳಿರುತ್ತವೆ (ಮಾರ್ಫೀಮ್ಸ್). ಪೂರ್ವಭಾಗ ನಿರ್ದಿಷ್ಟ (ಸ್ಪೆಸಿಫಿಕ್), ಉತ್ತರ ಭಾಗ ವಾರ್ಗಿಕ (ಜೆನೆರಿಕ್) ಎನಿಸಿಕೊಳ್ಳುತ್ತದೆ. ಉದಾ: ಮುಳ್ಳೂರು. ಮುಳ್(ಳ್ಳು) + ಊರು

          (ನಿರ್ದಿಷ್ಟ ಆಕೃತಿಮಾ)   (ವಾರ್ಗಿಕ ಆಕೃತಿಮಾ)

ನಿರ್ದಿಷ್ಟ ಆಕೃತಿಮಾ ಊರಿನ ವೈಶಿಷ್ಟವನ್ನು ತಿಳಿಸಿದರೆ, ವಾರ್ಗಿಕ ಸಾಮಾನ್ಯ ಲಕ್ಷಣವಾಗಿರುತ್ತದೆ. ಇನ್ನೂ ಹೆಚ್ಚು ಆಕೃತಿಮಾಗಳು ಇರುವ ಹೆಸರುಗಳೂ ಉಂಟು. ಉದಾ: ತಿರುಮಕೂಡಲು ನರಸೀಪುರ.

ನಿರ್ದಿಷ್ಟ ಆಕೃತಿಮಾಗಳಿಗೆ ಸಂಬಂಧಿಸಿದಂತೆ, ಸಸ್ಯಗಳು, ಬೆಟ್ಟಗುಡ್ಡ, ಮರಗಳು, ಮನುಷ್ಯರ ಹೆಸರುಗಳು, ಹೂವುಗಳು ಮುಂತಾದವುಗಳಿಗೆ ಹೊಂದಿಕೊಂಡು ಬರುವ ಕೆಲವು ಗುಂಪುಗಳಾಗಿ ವಿಂಗಡಿಸಬಹುದು. ಆದರೆ ನಿರ್ದಿಷ್ಟ ಆಕೃತಿಮಾಗಳನ್ನೇ ಪಟ್ಟಿಮಾಡಿದರೆ ಬಹುಉದ್ದ ವಾಗುತ್ತದೆ. ಬೆಟ್ಟದಪುರ, ಗೋಕರ್ಣ, ನೆಲ್ಲಿಮರದ ಹಳ್ಳಿ, ಬಿದರಕಾಡಹಳ್ಳಿ; ಹಾಗೇ ರಾಮನಾಥಪುರ (ದೇವರ ಹೆಸರಿನಿಂದ), ಕೊಂಡದಹಳ್ಳಿ (ಯಾರೋ ಹೆಣ್ಣುಮಗಳು ಸಹಗಮನಕ್ಕಾಗಿ ಕೊಂಡವನ್ನು ಪ್ರವೇಶಿಸಿದ್ದರಿಂದ), ಗೊಲ್ಲರಹಳ್ಳಿ, ಕ್ರಿಶ್ಚಿಯನ್ ಕೊಪ್ಪಲು (ಜಾತಿ ಧರ್ಮಗಳ ಕಾರಣದಿಂದ). ಯಾರೋ ವಿಶಿಷ್ಟ ವ್ಯಕ್ತಿಯೊಬ್ಬನ ಕಾರಣದಿಂದ ಮಲ್ಲಿತಮ್ಮನ ಹಳ್ಳಿ, ಬಸವಾಪಟ್ಟಣ ಎಂದು ಹೆಸರಾಗುತ್ತದೆ. ಕೆಲವು ವೇಳೆ ತಂಬ, ಚಿಂಗರದಂಥ ಅತಿವಿರಳ ವ್ಯಕ್ತಿಗಳ ಹೆಸರುಗಳೂ ಸ್ಥಳನಾಮಗಳಲ್ಲಿ ಕಾಣುತ್ತವೆ. ಗಾಂಧೀನಗರದಂಥ ಪ್ರಖ್ಯಾತ ಹೆಸರುಗಳೂ ಇರಬಹುದು. ಲೆಂಕನಹಳ್ಳಿ, ಗರುಡನಹಳ್ಳಿ ಇವು ಲೆಂಕ, ಗರುಡರಿಂದಾಗಿ ಆ ಹೆಸರು ಪಡೆದಿರಬಹುದು. ದಾಸರಹಳ್ಳಿಗೂ ದಾಸಪಂಥಕ್ಕೂ ಸಂಬಂಧವಿರಬಹುದು. ಚಿತ್ರದುರ್ಗ ಜಿಲ್ಲೆಯ ಸುತ್ತ ಸ್ತ್ರೀಯರ ಹೆಸರಿನ ಊರುಗಳನ್ನು ಕಾಣಬಹುದು-ಸಿದವ್ವನಹಳ್ಳಿ, ಲಿಂಗವ್ವನಹಳ್ಳಿ ಇತ್ಯಾದಿ. ಸ್ಥಳಪುರಾಣ, ಐತಿಹ್ಯಗಳಿಂದಾಗಿಯೂ ಇಂಥ ಅನೇಕ ಹೆಸರುಗಳು ಚಾಲ್ತಿಗೆ ಬಂದಿವೆ.

ಹೀಗೆಯೇ, ವಾರ್ಗಿಕ ಆಕೃತಿಮಾಗಳನ್ನೂ ಕೆಲವು ಗುಂಪುಗಳಲ್ಲಿ ವಿಭಾಗಿಸಬಹುದು. ಅವುಗಳ ಸಂಖ್ಯೆಯೂ ನಿರ್ದಿಷ್ಟ ಆಕೃತಿಮಾಗಳಿಗಿಂತ ಕಡಿಮೆ ಆಗಿರುತ್ತದೆ. ಉದಾ: ವಾಸಸ್ಥಳ (ಊರು-ಮೈಸೂರು, ಅಂಬಲ-ಅಂಬಳೆ, ಖೇಡ-ಮಾಲ್‍ಖೇಡ್, ಪುರ-ಹಂಪಾಪುರ, ಬಾಗಿಲು-ನೆಲವಾಗಿಲು ಇತ್ಯಾದಿ), ಜಲಾಶಯ (ಅಂಬುಧಿ-ಬುಕ್ಕಾಂಬುಧಿ, ಕೆರೆ-ಅರಸೀಕೆರೆ ಇತ್ಯಾದಿ), ಪ್ರಾದೇಶಿಕ ವೈಲಕ್ಷಣ್ಯ (ಕೋಣೆ=ಮೂಲೆ-ಪಡುಕೋಣೆ, ಘಟ್ಟ-ಮತಿಘಟ್ಟ ಇತ್ಯಾದಿ), ವ್ಯವಸಾಯ, ಉದ್ಯೋಗ (ಹುಂಡಿ-ನಂಜಯ್ಯನ ಹುಂಡಿ, ಅಂಗಡಿ-ಬೆಳ್ತಂಗಡಿ ಇತ್ಯಾದಿ), ಸಂಕೀರ್ಣ (ಊಡಿ-ಹೋಸೂಡಿ, ಸೋಗೆ-ಹನಸೋಗೆ ಇತ್ಯಾದಿ). ಇಂಥ ನೂರಕ್ಕೂ ಹೆಚ್ಚು ವಾರ್ಗಿಕಗಳು ನಾಡಿನ ಜನವಸತಿಸ್ಥಳಗಳಿಗೆ ಹೊಂದಿಕೊಂಡು ಬಂದಿರುವುದನ್ನು ಕಾಣಬಹುದು. ಇವುಗಳಲ್ಲಿ ಹೆಚ್ಚಿನವೆಂದರೆ ಅಚ್ಚ ದ್ರಾವಿಡಪದಗಳಾದ ಊರು-ಹಳ್ಳಿ-ಕೊಪ್ಪಲ್; ಸಂಸ್ಕøತದ ಪುರ-ಪಟ್ಟಣ-ನಗರಗಳು. ಇವುಗಳಲ್ಲಿ ಕೆಲವು ವಾರ್ಗಿಕಗಳೇ ಸ್ವತಂತ್ರವಾಗಿ ಸ್ಥಳವಾಚಕವಾಗಬಹುದು. ಉದಾ: ಮಗ್ಗೆ, ಅಗರ, ಹುರ(ಪುರ), ಊರು ಹಳ್ಳಿಗಳಾಗಲೀ ಜಲಾಶಯ ಸೂಚಕಗಳಾಗಲೀ (ಕೆರೆ, ಕೊಳ್ಳ) ಹೀಗೆ ಸ್ವತಂತ್ರ ಹೆಸರುಗಳಾಗಿ ನಿಂತಿಲ್ಲ. ವಾರ್ಗಿಕಗಳೇ ನಿರ್ದಿಷ್ಟಗಳಾಗಿಯೂ ಕೆಲಸಮಾಡುವ ಉದಾಹರಣೆಗಳುಂಟು: ಹೊಳಲ್ಕೆರೆ, ನಗರೂರು ಇಲ್ಲಿ ಎರಡೂ ವಾರ್ಗಿಕಗಳೇ ಎಂಬುದನ್ನು ಗಮನಿಸಬಹುದು. ದ್ರಾವಿಡಭಾಷೆ ಗಳಿಗೆಲ್ಲ ಸಮಾನವಾದ ಕೆಲವು ವಾರ್ಗಿಕಗಳಿವೆ. ಇದಕ್ಕೆ ಭಾಷಾ ಸಾಮ್ಯತೆಯೇ ಕಾರಣ. ಊರು, ಕಾಡು, ಮಲೆ, ಪಾಡಿ, ಕೋಡು, ಕುಂಜ, ಕಲ್ಲು-ಅಂಥವು. ಉದಾ: ತುಳು-ಕರ್ಗಲ್, ಕನ್ನಡ-ಆನೆಕಲ್ಲು, ತಮಿಳು-ದಿಂಡಿಕಲ್, ತೆ-ಗುಂತಕಲ್ಲು, ಮಲಯಾಳ-ಕೋಟ್ಟಕ್ಕಲ್.

ಎಲ್ಲ ಸಂದರ್ಭಗಳಲ್ಲೂ ಸ್ಥಳನಾಮಗಳ ನಿಷ್ಪತ್ತಿ ಸರಳವಾಗಿ ತಿಳಿಯುವಂಥದೇ ಆಗಿರುವುದಿಲ್ಲ. ಉದಾ: ಗುಜರಾತ್ ಎಂಬುದರ ಅರ್ಥ ಗೋರಕ್ಷ ರಾಷ್ಟ್ರ ಎಂದಾಗುತ್ತದೆ. ಇಲ್ಲಿ ಗುಜರ್+ರಾತ್ ಎಂದು ಬಿಡಿಸಿಕೊಳ್ಳಬೇಕು. ಭಿಷಕ್ ಶಬ್ದದ ಮಾದರಿಯಲ್ಲಿ ಗೋರಕ್, ಗೋರಜ್, ಗೋರಗ್ ಎಂಬ ಮೂರು ರೂಪ ಸಂಸ್ಕøತದಲ್ಲಿದೆ. ಗೋರಜ್ ಪದವು ಗೋ+ರ+ಜ್, ಹೀಗಿದೆ. ಗೋ ಶಬ್ದ ಗು ಎಂದಾಗಿದೆ. ರ್-ಜ್ ಎಂಬ ಅಕ್ಷರಗಳನ್ನು ಬಲದಿಂದ ಎಡಕ್ಕೆ ಓದಬೇಕು (ಪಶ್ಯಕಃ ಕಶ್ಚಾಪೋ ಭವತಿ) ರಾತ್, ರಾಷ್ಟ್ರದ ಅಪಭ್ರಂಶ. ರಕ್ ಶಬ್ದಕ್ಕೂ ರಕ್ಷ ಎಂಬ ಅರ್ಥವೇ ಇದೆ. ಇದರ ಜೊತೆಗೆ ಸ್ಥಳನಾಮಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುವಂತೆ ಕಾಲದಿಂದ ಕಾಲಕ್ಕೂ ಬದಲಾಗುತ್ತವೆ. 9ನೆಯ ಶತಮಾನದ ಕು¾Âತ್ತಕೊಂಟೆ ಈಗ ಕುರ್ತಕೋಟಿ ಆಗಿದೆ. 10ನೆಯ ಶತಮಾನದ ಬಟ್ಟೆಕೆ¾õÉ, ಬಟ್ಟೆಗೆ¾õÉ ಆಗಿ ಈಗ ಬೆಟಗೇರಿ ಆಗಿದೆ. ಅರಕುಠಾರ, ಅರಿಕುಠಾರವಾಗಿ ಈಗ ಚಾಮರಾಜನಗರ ವಾಗಿದೆ. ಹೀಗೆ ಹೆಸರಿನ ಅರ್ಥ ತಿಳಿಯದಾಗ ತಿಳಿದ ಪದವನ್ನೆ ಬಳಸುವುದರಿಂದಲೋ ಸೌಲಭ್ಯಾಕಾಂಕ್ಷೆಯಿಂದಲೋ ರಾಜಕೀಯ ಕಾರಣ ದಿಂದಲೋ ಹೆಸರುಗಳು ಬದಲಾಗುತ್ತವೆ. ಆದರೆ ಎಲ್ಲ ಸಂದರ್ಭ ಗಳಲ್ಲೂ ಹೆಸರುಗಳು ಅಷ್ಟು ಸುಲಭವಾಗಿ ಬಿಟ್ಟುಹೋಗುವುದಿಲ್ಲ. ಶಿವಮೊಗ್ಗ ಜಿಲ್ಲೆ ಸೂಳೆಕರೆ ಶಾಂತಸಾಗರವಾಗದೆ ಮೊದಲಿನ ರೀತಿಯೇ ಬಳಕೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಬೆಳಗೊಳ ಧವಳ ತಟಾಕಿವಾಗು ವುದೂ ಚಿತ್ರಕಲ್ ದುರ್ಗ, ಚಿಟಲ್‍ಡ್ರುಗ್ ಆಗುವುದೂ ಸಂಸ್ಕøತೀಕರಣ ಮತ್ತು ಆಂಗ್ಲೀಕರಣದ ಫಲ. ನಾನಾ ಕಾರಣಗಳಿಂದಾಗಿ ಬದಲಾಗಿರುವ ಇಂಥ ಸ್ಥಳನಾಮಗಳ ಮೂಲಗಳನ್ನು ಹುಡುಕುವುದರಿಂದ ಇತರ ಸಂಶೋಧನೆಗಳಿಗೆ ನೆರವಾದೀತು. ಇಂಗ್ಲೆಂಡಿನ ಅನೇಕ ಸ್ಥಳವಾಚಿಗಳು ಕೆಲ್ಟಿಕ್ ಎಂದಾಗ ಅದರ ಕಾರಣಗಳು ಹಲವು ರೀತಿಯಲ್ಲಿರಲು ಸಾಧ್ಯ. ರಾಜಕೀಯ ಇತಿಹಾಸದ ಬಗ್ಗೆ ಹೊಸ ಸಂಗತಿಗಳನ್ನು ತಿಳಿಸುವ, ಆಗಲೇ ತಿಳಿಸಿರುವ ಸಂಗತಿಗಳನ್ನು ಸಮರ್ಥಿಸುವ ಅಥವಾ ಅವಕ್ಕೆ ಪೂರಕ ಸಾಮಗ್ರಿಯನ್ನೊದಗಿಸುವ ಕೆಲಸವನ್ನು ಸ್ಥಳನಾಮಗಳು ಮಾಡುತ್ತವೆ. ಉದಾ: ಮಂಗಲ ಎಂದು ಕೊನೆಯಾಗುವ ಹೆಸರುಗಳು ಚೋಳರ ಆಡಳಿತದ ಸೂಚಕಗಳು. ಆ ಮೂಲಕ ಚೋಳರಾಜ್ಯದ ಗಡಿಗಳನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಅಗ್ರಹಾರ, ಅಗರ, ಮಹಾಜನ, ಬ್ರಾಹ್ಮಣ, ಹಾರೋ, ಬೊಮ್ಮ ಮುಂತಾದ ಪದಗಳು (ಹಾರೋಹಳ್ಳಿ, ಬೊಮ್ಮೇನಹಳ್ಳಿ, ಶ್ರೋತ್ರಿಯೂರ್) ಬ್ರಾಹ್ಮಣರಿಗೆ ಹಿಂದೆ ದತ್ತಿಯಾಗಿ ಕೊಟ್ಟ ಊರುಗಳನ್ನು ಗುರುತಿಸಲು ನೆರವಾಗುತ್ತವೆ. ಅನೇಕ ನಂಬಿಕೆಗಳು, ಹಬ್ಬ, ಆಚರಣೆ, ಐತಿಹಾಸಿಕ ಘಟನೆಗಳು, ಮೌಲ್ಯಗಳು ಸ್ಥಳನಾಮಗಳಲ್ಲಿ ಉಳಿದುಕೊಂಡು ಬಂದಿರುವುದುಂಟು. ಪುರಾತತ್ತ್ವಶೋಧಕರು ಇತಿಹಾಸಪೂರ್ವ ನಿವೇಶನಗಳನ್ನು ಪತ್ತೆ ಮಾಡಲು ಬೂದಿ ಪದವಿರುವ ಹೆಸರುಗಳು ನೆರವಿಗೆ ಬಂದಿವೆ. ಮಾಸ್ತಿ, ಮಾಸ್ತಿ ಹೊಳೆ, ಮಾಸದಿ-ಆ ಊರಿನಲ್ಲಿ ನಡೆದ ಸಹಗಮನದಿಂದಾಗಿ ಬಂದಿದ್ದರೆ, ಬುದ್ಧನ ಹಳ್ಳಿ, ಜೈನರಹಾಳ್-ಆಯಾ ಧರ್ಮಗಳ ಸೂಚಕಗಳಾಗುತ್ತವೆ. ಕೆಲವು ಅಪೂರ್ವ ಪದಗಳು ಸ್ಥಳನಾಮಗಳಲ್ಲಿ ಉಳಿದುಕೊಂಡು ಬಂದಿವೆ. ಕೋಯಿಲ್ ಅಂಥದೊಂದು ಪದ(ಕೋಯಿಲ-ಮಂಗಳೂರು ಜಿಲ್ಲೆ) ವಿಶಿಷ್ಟ ಕಾರಣ ಗಳಿಂದಾಗಿ ಕೆಲವು ಹೆಸರುಗಳು ಪ್ರಾದೇಶಿಕವಾಗಿವೆ. ಉದಾ: ಸರದಿಂದ ಕೊನೆಯಾಗುವ ಹೆಸರುಗಳು ಮಲೆನಾಡಿನಲ್ಲಿ, ಅದರಲ್ಲೂ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ದೊರಕುತ್ತವೆ. ಉದಾ: ಕರ್ಕೆಸರ, ಬಾಳೆಸರ, ಪೇಟೆಸರ. ಸಂದ್ರ ಎಂಬ ವಾರ್ಗಿಕದ ಹೆಸರುಗಳು ಹೆಚ್ಚಾಗಿ ಬೆಂಗಳೂರು, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಕಂಡುಬರುತ್ತವೆ. ಒಂದೇ ಹೆಸರಿನ ಹಲವು ಊರುಗಳಿರುವಂತೆ ಒಂದೇ ಊರಿಗೆ ಎರಡು ಮೂರು ಹೆಸರುಗಳಿರುವುದನ್ನು ಲಂಬಾಣಿಗಳಲ್ಲಿ ಕಾಣಬಹುದು. ಒಂದು ನಿರ್ದಿಷ್ಟ ಪ್ರದೇಶ ಅಥವಾ ದೇಶದ ಸ್ಥಳನಾಮಗಳು ನಿರ್ದಿಷ್ಟ ಹಿನ್ನೆಲೆಯಿಂದಾಗಿ ಹುಟ್ಟಿಕೊಂಡಿರುತ್ತವೆ. ಆದ್ದರಿಂದಲೇ ಸ್ಥಳನಾಮಗಳಿಂದ ಆ ದೇಶದ ಲಕ್ಷಣಗಳ ಅರಿವೂ ಆಗಬಹುದು. ಉದಾ: ಕೋಲಾರ ಜಿಲ್ಲೆಯ 4000 ಸ್ಥಳನಾಮಗಳ ಪೈಕಿ ಸುಮಾರು ನಾಲ್ಕುನೂರು ಸ್ಥಳನಾಮಗಳು ಜಲಸೂಚಕಗಳಾಗಿವೆ. ಅವುಗಳಲ್ಲಿ ಅರ್ಧಕ್ಕೂ ಹೆಚ್ಚು ಕೃತಕ ಜಲಾಶಯವನ್ನು ಸೂಚಿಸುವಂಥವು. ನೈಸರ್ಗಿಕ ಜಲಾಶಯದಿಂದ ವಂಚಿತವಾಗಿರುವ ಈ ಜಿಲ್ಲೆಯಲ್ಲಿ ಸಹಜವಾಗಿಯೇ ಕೃತಕ ಜಲಾಶಯಗಳು ಹೆಚ್ಚು.

ಸ್ಥಳನಾಮ ವಿಜ್ಞಾನ ಪುರಾತತ್ತ್ವಶಾಸ್ತ್ರ, ಇತಿಹಾಸ, ಭೂಗೋಳ, ಭಾಷಾವಿಜ್ಞಾನ, ಜಾನಪದ, ಸಮಾಜಶಾಸ್ತ್ರ, ಮನೋವಿಜ್ಞಾನ, ಸಸ್ಯ ವಿಜ್ಞಾನಗಳೊಂದಿಗೆ ಸಂಪರ್ಕ ಹೊಂದಿದೆ. ಆದ್ದರಿಂದಲೇ ಅವು ಪರಸ್ಪರ ನೆರವಿನಿಂದ ಬೆಳೆಯಲೂ ಅವಕಾಶವಿದೆ. ಇಂಥದೊಂದು ಶಕ್ತಿ ಮತ್ತು ಸಾಧ್ಯತೆಯಿಂದಾಗಿಯೇ ಹಸ್ತಿನಾವತಿ, ಹರಪ್ಪ, ನಾಲಂದಾ, ಹಂಪೆ, ಪಾಂಪೆ ಕೇವಲ ಹೆಸರುಗಳಾಗಿ ಉಳಿಯುವುದಿಲ್ಲ; ಅವುಗಳ ಹಿಂದೆ ಒಂದು ಶಕ್ತಿಕಾಣುತ್ತದೆ. ಹೆಸರಿನಲ್ಲಿ ಏನಿಲ್ಲ ಎನಿಸುವುದೂ ಇಂಥ ಕಾರಣಗಳಿಂದಲೇ. ಕನ್ನಡದಲ್ಲಿ ಸ್ಥಳನಾಮವನ್ನು ಕುರಿತಂತೆ ಬಂದ ಕೆಲವು ಕೃತಿಗಳಿವು: ಶಂ.ಬಾ. ಜೋಶಿ ಅವರ ಎಡೆಗಳು ಹೇಳುವ ಕಂನಾಡ ಕತೆ(1947), ವಿ. ಗೋಪಾಲಕೃಷ್ಣ ಅವರ ಸ್ಥಳನಾಮ ಅಧ್ಯಯನಗಳು(1987), ಕೆಮ್ತೂರು ರಘುಪತಿ ಭಟ್ ಅವರ ತುಳುನಾಡಿನ ಸ್ಥಳನಾಮಗಳು(1979) ಹಾಗೂ ಹೆಸರಿನಲ್ಲೇನಿದೆ?(1989), ದೇ.ಜವರೇಗೌಡ ಅವರ ಸ್ಥಳನಾಮ ವ್ಯಾಸಂಗ(1990).

ಇತ್ತೀಚೆಗೆ ಸ್ಥಳನಾಮಗಳನ್ನು ಕುರಿತಂತೆ ಸಂಶೋಧನೆಗಳು ನಡೆಯುತ್ತಿದ್ದು ಅನೇಕ ಪಿಎಚ್.ಡಿ. ನಿಬಂಧಗಳು ಹೊರಬಂದಿವೆ. ಸ್ಥಳನಾಮಗಳ ಅಧ್ಯಯನ ವ್ಯಾಪಕವಾಗಿ ನಡೆದರೆ ಇಡೀ ಭಾರತದ ಸ್ಥಳನಾಮಗಳ ಸ್ವರೂಪವನ್ನು ತಿಳಿಯುವುದರ ಜೊತೆಗೆ ಸಮಗ್ರ ಭಾರತದ ಇತಿಹಾಸಕ್ಕೆ ಹೊಸ ತಿರುವು ಉಂಟಾಗಬಹುದು. (ವಿ.ಎಚ್.)