ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ನೋ, ಜಾನ್

ಸ್ನೋ, ಜಾನ್ 1813-58. ಸಂವೇದನಹರಣ ಮತ್ತು ಸಾಂಕ್ರಾಮಿಕ ರೋಗವಿಜ್ಞಾನಿ (ಎಪಿಡೀಮಿಯಾಲಜಿಸ್ಟ್). ಇಂಗ್ಲೆಂಡಿನ ಯಾರ್ಕ್‍ನಲ್ಲಿ ಜನನ. 1831-32ರಲ್ಲಿ ಗ್ರೇಟ್ ಬ್ರಿಟನ್‍ನನ್ನು ಕಾಲರಾರೋಗ ಭೀಕರ ಪಿಡುಗಾಗಿ ಘಾತಿಸಿತು. ಆಗ ಒಬ್ಬ ಉತ್ಸಾಹಿ ಯುವ ವೃತ್ತಿವೈದ್ಯನಾಗಿದ್ದ ಸ್ನೋ, ರೋಗಮೂಲದ ಶೋಧನೆಗೆ ಮುಂದಾಗಿ ಕಲುಷಿತ ಜಲಸೇವನೆಯಿಂದ ರೋಗ ಹರಡುವುದೆಂದು ಸಾಕ್ಷ್ಯಾಧಾರ ಸಹಿತ ರುಜುವಾತಿಸಿದ. 1836ರ ಅನಂತರ ಈತ ಲಂಡನ್‍ನಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದ. 1848 ಮತ್ತು 1854ರಲ್ಲಿ ಮತ್ತೆ ಕಾಲರಾ ಮರುಕಳಿಸಿದಾಗ ಕೂಲಂಕಷ ಅಧ್ಯಯನ ಪ್ರಯೋಗ ನಡೆಸಿದ ಸ್ನೋ ರೋಗಮೂಲವನ್ನು ಸೋಹೋದಲ್ಲಿಯ ಒಂದು ಬಾವಿಯಲ್ಲಿ ಪತ್ತೆಹಚ್ಚಿದ. ಚರಂಡಿನೀರಿನ ರೊಚ್ಚೆ ಆ ನೀರಿಗೆ ಸೇರಿ ಅದು ಕೂಡ ಮಲಿನವಾಗಿತ್ತು. ಜೊತೆಯಲ್ಲೆ ತೇಮ್ಸ್ ನದೀಜಲದ ಬಗ್ಗೆ ಕೂಡ ತಪಾಸಣೆ ಮಾಡಿದ: ಲಂಡನ್ನಿನ ಅನೇಕ ಒಳಚರಂಡಿಗಳ ನೀರು ಈ ನದಿಗೆ ಬಸಿಯುತ್ತಿತ್ತು; ಬೇರೆಡೆಗಳಲ್ಲಿ ಇದೇ ನದಿಯನ್ನು ಜನ ಕುಡಿವ ನೀರಿಗಾಗಿ ಅವಲಂಬಿಸಿದ್ದರು.

ಇತ್ತ ಸಂವೇದನಹರಣವಿಜ್ಞಾನ (ಅನೆಸ್ತೀಸಿಯ) ಕುರಿತಂತೆ ಸ್ನೋ ಒಬ್ಬ ಮುಂಚೂಣಿ ಮೊದಲಿಗ. ಈತರ್ ಮತ್ತು ಕ್ಲೋರೊಫಾರ್ಮ್ ಬಗ್ಗೆ ಗಮನಾರ್ಹ ಪ್ರಾಯೋಗಿಕ ಅನ್ವೇಷಣೆ ಮಾಡಿದ. ಸಂವೇದನಹಾರಿಗಳ ಬಳಕೆಗೆ ಅನುಕೂಲವಾಗುವಂತೆ ಅನೇಕ ಉಪಕರಣಗಳನ್ನು ನಿರ್ಮಿಸಿದ. ವಿಕ್ಟೋರಿಯ ರಾಣಿ (1819-1901) ರಾಜಕುಮಾರ ಲಿಯೊಪೋಲ್ಡ್‍ನನ್ನು ಪ್ರಸವಿಸುತ್ತಿದ್ದ ಸಂದರ್ಭದಲ್ಲಿ (1953) ಆಕೆಯ ಮೇಲೆ ಕ್ಲೋರೊಫಾರ್ಮನ್ನು ಪ್ರಯೋಗಿಸಿದ. ಹೀಗೆ ಪ್ರಾಯೋಗಿಕವಾಗಿ ಅಂದು ಆರಂಭವಾದ ಸಾಂಕ್ರಾಮಿಕ ರೋಗ ಮತ್ತು ಸಂವೇದನಹರಣ ಪ್ರಕಾರಗಳು ಮುಂದೆ ಪ್ರತ್ಯೇಕ ವಿಜ್ಞಾನ ವಿಭಾಗಗಳಾಗಿಯೇ ಮೈದಳೆದಿರುವುದು ಸ್ನೋನ ಅನ್ವೇಷಣ ವಿಧಾನಕ್ಕೆ ಸಂದಿರುವ ಗೌರವ. *