ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಫೋಟಕಗಳು

ಸ್ಫೋಟಕಗಳು ಅಗಾಧ ಪ್ರಮಾಣದ ಅನಿಲ ಅತ್ಯಲ್ಪ ಅವಧಿಯಲ್ಲಿ ಅತಿವೇಗದಿಂದ ವ್ಯಾಕೋಚಿಸಿ ತನ್ನ ಸುತ್ತಲ ಪ್ರದೇಶದ ಮೇಲೆ ಹಠಾತ್ ಸಂಮರ್ದ ಪ್ರಯೋಗಿಸುವಂತೆ ಮಾಡಬಲ್ಲ ಪದಾರ್ಥ ಅಥವಾ ಸಾಧನಗಳು (ಎಕ್ಸ್‍ಪ್ಲೋಸಿವ್ಸ್). ಪರ್ಯಾಯ ಪದಗಳು: ಆಸ್ಫೋಟಕ ಗಳು, ಸಿಡಿಮದ್ದುಗಳು. ಸ್ಫೋಟಕಗಳ ಮೂಲ ಪ್ರಭೇದಗಳು: ಯಾಂತ್ರಿಕ, ಬೈಜಿಕ ಮತ್ತು ರಾಸಾಯನಿಕ.

ಯಾಂತ್ರಿಕ ಸ್ಫೋಟಕಗಳು: ಇವು ಭೌತಕ್ರಿಯೆಯನ್ನು ಅವಲಂಬಿಸಿವೆ (ಉದಾ: ಧಾರಕದಲ್ಲಿ ಸಂಕುಚಿತ ವಾಯುವನ್ನು ಅತಿಯಾಗಿ ತುಂಬಿಸು ವುದು). ಗಣಿಗಾರಿಕೆಯಲ್ಲಿ ರಾಸಾಯನಿಕ ಸ್ಫೋಟಕಗಳ ಬಳಕೆ ಮಾಡಲಾಗದ ಸನ್ನಿವೇಶಗಳಲ್ಲಿ ಮಾತ್ರ ಇವುಗಳ ಬಳಕೆ.

ಬೈಜಿಕ ಸ್ಫೋಟಕಗಳು: ಹೆಚ್ಚುಕಡಿಮೆ ಕ್ಷಣಮಾತ್ರದಲ್ಲಿ ಬೈಜಿ ಕಕ್ರಿಯೆ ಜರಗುವಂತೆ ಮಾಡಿ ಅಗಾಧ ಪ್ರಮಾಣದ ಶಕ್ತಿಯನ್ನು ಇವು ಬಿಡುಗಡೆ ಮಾಡುತ್ತವೆ. ಸ್ಫೋಟಕಗಳ ಪೈಕಿ ಅತ್ಯಂತ ಪ್ರಬಲವಾದವು ಇವು. ಅತ್ಯಂತ ವಿನಾಶಕಾರೀ ಯುದ್ಧಾಯುಧಗಳು.

ರಾಸಾಯನಿಕ ಸ್ಫೋಟಕಗಳು: ಇವು ಕ್ಷಿಪ್ರ ದಹನ ಅಥವಾ ರಾಸಾಯನಿಕ ವಿಭಜನೆ ಮುಖೇನ ಬೃಹತ್ ಪ್ರಮಾಣದ ಅನಿಲವನ್ನೂ ಅತಿ ಉಷ್ಣವನ್ನೂ ಉತ್ಪಾದಿಸಿ ಸಂಮರ್ದ ಪರಿಣಾಮ ಉಂಟು ಮಾಡುವ ರಾಸಾಯನಿಕ ಸಂಯುಕ್ತ ಅಥವಾ ಅವುಗಳ ಮಿಶ್ರಣಗಳು. ಅನಿಲ, ದ್ರವ ಮತ್ತು ಘನ-ಈ ಪೈಕಿ ಯಾವುದೇ ರೂಪದಲ್ಲಿ ಇವು ಇರಬಹುದು. ಗಣಿಗಾರಿಕೆಯಲ್ಲಿ, ಬಾಣಬಿರುಸು ಹಾಗೂ ಪಟಾಕಿಗಳಲ್ಲಿ, ಸಂಜ್ಞಾ ಉಪಕರಣಗಳಲ್ಲಿ, ಕ್ಷಿಪಣಿ ಮತ್ತು ರಾಕೆಟ್‍ಗಳಲ್ಲಿ ನೋದನಕಾರಿಯಾಗಿ ರಾಸಾಯನಿಕ ಸ್ಫೋಟಕಗಳ ವ್ಯಾಪಕ ಬಳಕೆ ಇದೆ. ಎಂದೇ, ಈ ಲೇಖನದಲ್ಲಿ ಇವುಗಳ ವಿವರಣೆ ಮಾತ್ರ ಇದೆ.

ರಾಸಾಯನಿಕ ಸ್ಫೋಟಕಗಳ ಇತಿಹಾಸದ ಪ್ರಮುಖ ಘಟ್ಟಗಳು ಇಂತಿವೆ: ಸು. 10ನೆಯ ಶತಮಾನದಲ್ಲಿ ಚೀನೀಯರಿಂದ ಮೊದಲನೆಯ ರಾಸಾಯನಿಕ ಸ್ಫೋಟಕದ, ಅರ್ಥಾತ್, ಕೋವಿಮದ್ದು (ಗನ್‍ಪೌಡರ್) ಅಥವಾ ಕಪ್ಪುಪುಡಿಯ (ಪೊಟ್ಯಾಸಿಯಮ್ ನೈಟ್ರೇಟ್, ಗಂಧಕ ಮತ್ತು ಇದ್ದಲಿನ ಮಿಶ್ರಣ) ಉಪಜ್ಞೆ. 1300ರ ಆಸುಪಾಸಿನಲ್ಲಿ ಅರಬ್ಬರಿಂದ ಮತ್ತು 1314ರಲ್ಲಿ ಯುರೋಪಿನಲ್ಲಿ ಯುದ್ಧದಲ್ಲಿ ಇದರ ಬಳಕೆ. 19ನೆಯ ಶತಮಾನದ ಮಧ್ಯಭಾಗದ ವರೆಗೂ ಈ ಸ್ಫೋಟಕದ್ದೇ ಪ್ರಾಬಲ್ಯ. ಇಟಾಲಿಯನ್ ರಸಾಯನವಿಜ್ಞಾನಿ ಅಸ್ಕಾನಿಯೊ ಸಾಬ್ರೆರೊ ಎಂಬಾತನಿಂದ ಸ್ಫೋಟಕತೈಲದ (ನೈಟ್ರೊಗ್ಲಿಸರಿನ್) ಉಪಜ್ಞೆ (1846). ಇಮಾನ್ಯುಯೆಲ್ ಮತ್ತು ಆಲ್ಫ್ರೆಡ್ ನೊಬೆಲ್‍ರಿಂದ ಈ ಸ್ಫೋಟಕದ ವಾಣಿಜ್ಯೋತ್ಪಾದನೆಯ ಸುರಕ್ಷಿತ ವಿಧಾನದ ಆವಿಷ್ಕಾರ (1866). ಆಲ್ಫ್ರೆಡ್ ನೊಬೆಲ್‍ನಿಂದ (1833-96) ಡೈನಮೈಟ್ (ಅಪಶೋಷಕ ಕೀಸಲ್‍ಘರ್ ಮತ್ತು ನೈಟ್ರೊಗ್ಲಿಸರಿನ್ ಮಿಶ್ರಣ) ಉಪಜ್ಞೆ (1867). ಈತನಿಂದ ಜೆಲಟಿನಸ್ ಡೈನಮೈಟ್ (ನೈಟ್ರೊಗ್ಲಿಸರಿನ್ ಮತ್ತು ನೈಟ್ರೊಕಾಟನ್ ಮಿಶ್ರಣ) ಉಪಜ್ಞೆ (1875). ಫ್ರೆಂಚ್ ರಸಾಯನವಿಜ್ಞಾನಿ ಪಾಲ್ ವೈಲೆ ಎಂಬಾತನಿಂದ ಮೊದಲನೆಯ ಧೂಮರಹಿತ ನೋದನಕಾರಿಯ (ನೈಟ್ರೊಕಾಟನ್ , ಈಥರ್ ಮತ್ತು ಆಲ್ಕೊಹಾಲ್‍ಗಳ ಮಿಶ್ರಣ) ಉಪಜ್ಞೆ (1884). ನೊಬೆಲ್‍ನಿಂದ ಸುಧಾರಿತ ನೋದನಕಾರಿ ಬ್ಯಾಲಿಸೈಟ್‍ನ (ನೈಟ್ರೊಗ್ಲಿಸರಿನ್, ಈಥರ್ ಮತ್ತು ಆಲ್ಕೊಹಾಲ್‍ಗಳ ಮಿಶ್ರಣ) ಉಪಜ್ಞೆ (1887). ತದನಂತರ ಬ್ರಿಟನ್‍ನಲ್ಲಿ ತತ್ಸಮ ನೋದನಕಾರಿ ಕಾರ್ಡೈಟ್‍ನ ತಯಾರಿ. ಫ್ರಾನ್ಸ್‍ನಲ್ಲಿ ಅಮೋನಿಯಮ್ ಪಿಕ್ರೇಟ್ ತಯಾರಿ (1886). ಜೆ. ವಿಲ್‍ಬ್ರ್ಯಾಂಡ್ ಎಂಬಾತನಿಂದ ಟ್ರೈನೈಟ್ರೊಟಾಲೀನ್ (ಟಿಎನ್‍ಟಿ) ಉಪಜ್ಞೆ (1863). ಇವೆರಡರ ಮಿಶ್ರಣ ಅಮಟೋಲ್‍ನ ತಯಾರಿ. ಜರ್ಮನ್ ವಿಜ್ಞಾನಿ ಹ್ಯಾನ್ಸ್ ಹೆನ್ನಿಂಗ್‍ನಿಂದ ಅತ್ಯಂತ ಶಕ್ತಿಶಾಲಿ ಸ್ಫೋಟಕ ಸೈಕ್ಲೊನೈಟ್ (ಆರ್‍ಡಿಎಕ್ಸ್) ಉಪಜ್ಞೆ (1899). 1962ರಲ್ಲಿ ಮೊದಲನೆಯ ಆಕ್ಸೈಡ್ ಸ್ಫೋಟಕ, ಕ್ಸಿನಾನ್ ಟ್ರೈಆಕ್ಸೈಡ್ ಉಪಜ್ಞೆ.

ರಾಸಾಯನಿಕ ಸ್ಫೋಟಕಗಳನ್ನು ವೇಗವಾಗಿ ದಹಿಸಿದರೂ ಕಡಿಮೆ ಸಂಮರ್ದ ಪರಿಣಾಮ ಉಂಟುಮಾಡುವ ನೀಚ (ಲೊ) ಅಥವಾ ಪ್ರಜ್ವಲಿಸುವ (ಡೆಫ್ಲಗ್ರೇಟಿಂಗ್) ಮತ್ತು ಅತಿ ವೇಗವಾಗಿ ದಹಿಸಿ ಅಧಿಕ ಸಂಮರ್ದ ಪರಿಣಾಮ ಉಂಟುಮಾಡುವ ಉಚ್ಚ (ಹೈ) ಅಥವಾ ವಿಸ್ಫೋಟಿಸುವ (ಡೆಟೊನೇಟಿಂಗ್) ಸ್ಫೋಟಕಗಳು ಎಂದು ವರ್ಗೀಕರಿಸ ಲಾಗಿದೆ. ಸೆಕೆಂಡಿಗೆ 914 ರಿಂದ 9140 ಮೀಟರ್ ದರದಲ್ಲಿ ಉಚ್ಚ ಸ್ಫೋಟಕಗಳೂ ಕೆಲವು ಸೆಂಟಿಮೀಟರ್ ದರದಲ್ಲಿ ನೀಚ ಸ್ಫೋಟಕಗಳೂ ವಿಸ್ಫೋಟಿಸುತ್ತವೆ. ಉದಾ: ಕೋವಿಮದ್ದು ನೀಚ ಸ್ಫೋಟಕ, ಡೈನಮೈಟ್ ಉಚ್ಚ ಸ್ಫೋಟಕ. ಸ್ಫೋಟಕದ ಆಯ್ಕೆ ಉದ್ದಿಷ್ಠ ಕಾರ್ಯವನ್ನಾಧರಿಸಿದೆ. ಉದಾ: ಗಣಿಗಾರಿಕೆಗೆ ನೀಚ ಸ್ಫೋಟಕ, ಯುದ್ಧಕ್ಕೆ ಉಚ್ಚ ಸ್ಫೋಟಕ. ಉಚ್ಚ ಸ್ಫೋಟಕಗಳಲ್ಲಿ ಎರಡು ಬಗೆ: ಜ್ವಾಲೆ ಅಥವಾ ಇತರ ವಿಧಾನದ ಉಷ್ಣಪ್ರಯೋಗದಿಂದ ಆಸ್ಫೋಟಿಸುವ ಪ್ರಾಥಮಿಕ ಮತ್ತು ಪ್ರತ್ಯೇಕ ವಿಸ್ಫೋಟಕದ (ಡೆಟೊನೇಟರ್) ನೆರವಿನಿಂದ ಆಸ್ಫೋಟಿಸುವ ದ್ವಿತೀಯಕ ಸ್ಫೋಟಕ.

ವಿಸ್ಫೋಟಕಗಳು ಸಾಧಾರಣವಾದ ಯಾಂತ್ರಿಕ ಆಘಾತ ಅಥವಾ ಉಷ್ಣದಿಂದ ಆಸ್ಫೋಟಿಸಿ ಉಚ್ಚ ಸ್ಫೋಟಕ ಆಸ್ಫೋಟಿಸಲು ಅಗತ್ಯವಾದ ಶಕ್ತಿಯನ್ನು ಪೂರೈಸುತ್ತವೆ. ಸೀಸದ ಅಝೈಡ್, ಡಯಝೋಡಿನೈ ಟ್ರೊಫೀನಾಲ್ ಮತ್ತು ಮ್ಯಾನಿಟಾಲ್ ಹೆಕ್ಸನೈಟ್ರೇಟ್ ವಿಸ್ಫೋಟಕಗಳ ಪ್ರಮುಖ ಘಟಕಗಳು.

ಗಣಿಗಾರಿಕೆಯಲ್ಲಿ ಬಳಸಲೋಸುಗ ವಿಶೇಷ ಸುರಕ್ಷಾ ಸ್ಫೋಟಕಗಳೂ ಇವೆ. ಅನುದ್ದೇಶಿತ ಬೆಂಕಿ ಅಥವಾ ಭೂಕುಸಿತ ಆಗದಂತೆ ಇವು ಆಸ್ಫೋಟಿಸುತ್ತವೆ.

ನೋದನಕಾರಿಯಾಗಿ ನೀಚ ಮತ್ತು ಉಚ್ಚ, ಈ ಎರಡೂ ಬಗೆಯ ಸ್ಫೋಟಕಗಳ ಬಳಕೆ ಉಂಟು. ಎರಡೂ ಬಗೆಯ ನೋದನಕಾರಿಗಳಿಗೆ ಧೂಮರಹಿತ ಪುಡಿ ಎಂಬ ಹೆಸರಿದೆ (ವಾಸ್ತವವಾಗಿ ಇವು ಸಂಪೂರ್ಣ ಧೂಮರಹಿತವೂ ಅಲ್ಲ ಪುಡಿಯೂ ಅಲ್ಲ). ಜೆಲಟಿನೀಕರಿಸಿದ ಸೆಲ್ಯುಲೋಸ್ ನೈಟ್ರೇಟ್ ಮೊದಲನೆಯ ಬಗೆಗೂ ನೈಟ್ರೊಗ್ಲಿಸರಿನ್ ಮತ್ತು ಸೆಲ್ಯುಲೋಸ್ ನೈಟ್ರೇಟ್ ಮಿಶ್ರಣ ಹಾಗೂ ಕಾರ್ಡೈಟ್ (ನೈಟ್ರೊಗ್ಲಿಸರಿನ್ ಮತ್ತು ಪೆಟ್ರೋಲಿಯಮ್ ಜೆಲ್ಲಿ ಮಿಶ್ರಣ) ಎರಡನೆಯದಕ್ಕೂ ಉದಾಹರಣೆ.

ಬಾಣಬಿರುಸುಗಳ ತಯಾರಿಯಲ್ಲಿ ಮತ್ತು ಗಣಿಗಾರಿಕೆಯಲ್ಲಿ ಬಳಸಬಹುದಾದ ಸುರಕ್ಷಿತ ಸ್ಫೋಟಕಗಳಿಂದ ಮೊದಲ್ಗೊಂಡು, ಯುದ್ಧದಲ್ಲಿ ಬಳಸುವ ವಿನಾಶಕಾರೀ ಸ್ಫೋಟಕಗಳ ತನಕ ಅನೇಕ ಸ್ಫೋಟಕಗಳ ಉಪಜ್ಞೆ ಆಗಿದೆ.

(ಎಚ್.ಜಿ.ಎಸ್.)