ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಯಾಕರಿನ್

ಸ್ಯಾಕರಿನ್ ಅಪೌಷ್ಟಿಕ ಸಿಹಿಕಾರಕವಾಗಿ ಬಳಸುವ ಆರ್ತೊಸಲ್ಫೊಬೆನ್ಝಾಯಿಕ್ ಇಮೈಡ್ ಅಥವಾ ಬೆನ್ಝೊಸಲ್ಫಮೈಡ್ ಎಂಬ ಕಾರ್ಬನಿಕ ಸಂಯುಕ್ತ. ಅಣುಸೂತ್ರ: ಅ6ಊ4ಅಔ ಓಊ Sಔ2. ಬಿಳಿ ಸ್ಫಟಿಕೀಯ ಸಂಶ್ಲೇಷಿತ ಪುಡಿ. ಶುದ್ಧ ಸ್ಯಾಕರಿನ್ ಕಬ್ಬಿನ ಸಕ್ಕರೆಗಿಂತ 550 ಪಟ್ಟು, ವಾಣಿಜ್ಯ ಸ್ಯಾಕರಿನ್ ಸು. 375 ಪಟ್ಟು ಅಧಿಕ ಸಿಹಿ. ಸೇವಿಸಿದಾಗ ತುಸು ಕಹಿ ಹಾಗೂ ಲೋಹೀಯರುಚಿ ಅನುಭವವೂ ಆಗುತ್ತದೆ. 0.25 (1 ಚಹಾ ಚಮಚದಷ್ಟು ಸಕ್ಕರೆಗೆ ಸಮ), 0.5 ಮತ್ತು 1 ಗ್ರೇನ್ ತೂಕದ ಗುಳಿಗೆಗಳ ರೂಪಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ. ನೀರು ಮತ್ತು ಈಥರುಗಳಲ್ಲಿ ಅಲ್ಪ ವಿಲೇಯ. ಆಲ್ಕೊಹಾಲ್ ಮತ್ತು ಬೆಂಝೀನ್‍ಗಳಲ್ಲಿ ಲೀನಿಸುತ್ತದೆ. ಇದು ಟಾಲ್ವೀನ್‍ನ ವ್ಯುತ್ಪನ್ನ.

ಆರ್ತೊಟಾಲ್ವೀನ್‍ಸಲ್ಫೊನಮೈಡ್‍ನ ಉತ್ಕರ್ಷಣೆಯ ಅಧ್ಯಯನಾವಧಿಯಲ್ಲಿ ಇರಾ ರೆಮ್ಸೆನ್ (1846-1927) ಮತ್ತು ಕಾನ್ಸ್ಟೆಂಟಿನ್ ಫಾಲ್‍ಬರ್ಗ್ ಎಂಬ ಅಮೆರಿಕನ್ ರಸಾಯನವಿಜ್ಞಾನಿಗಳು ಆಕಸ್ಮಿಕವಾಗಿ ಇದನ್ನು ಆವಿಷ್ಕರಿಸಿದರು (1879). ಪ್ರಯೋಗಾನಂತರ ಚೆನ್ನಾಗಿ ಕೈತೊಳೆದು ಸೇವಿಸಿದ ಆಹಾರ ಅಕಾರಣವಾಗಿ ಸಿಹಿಯಾಗಿದ್ದುದನ್ನು ಗಮನಿಸಿದ್ದೇ ಇದಕ್ಕೆ ಕಾರಣ.

ಸ್ಯಾಕರಿನಿನ ಪೋಷಕಮೌಲ್ಯ ಶೂನ್ಯ. ದೇಹದಲ್ಲಿ ಇದು ಜೀರ್ಣವಾಗುವುದಿಲ್ಲ. ಎಂದೇ, ಮಧುಮೇಹಿಗಳು ಇದನ್ನು ಬಳಸುತ್ತಾರೆ. ಅಧಿಕ ಬಳಕೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ಎಂಬ ಸಂಶಯವಿದೆ. ಆದುದರಿಂದ ಕೆನಡ ಸರ್ಕಾರ ಇದರ ಬಳಕೆಯನ್ನು ನಿಷೇಧಿಸಿದೆ (1977). ಇತರೆಡೆಗಳಲ್ಲಿ ಸೀಮಿತ ಬಳಕೆಗೆ ಅವಕಾಶ ಉಂಟು. ಮಿದುಪಾನೀಯ (ಸಾಫ್ಟ್ ಡ್ರಿಂಕ್ಸ್), ಅಲ್ಪಕ್ಯಾಲರಿ ಆಹಾರಪದಾರ್ಥ, ದಂತಸರಿ ಹಾಗೂ ಚೂರ್ಣ ಮುಂತಾದವುಗಳ ತಯಾರಿಯಲ್ಲಿ ವ್ಯಾಪಕ ಬಳಕೆ ಇದೆ. (ಎ.ಆರ್.ಜಿ.)