ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಾತಂತ್ರ್ಯ

ಸ್ವಾತಂತ್ರ್ಯ

ಸ್ವಾಂತತ್ರ್ಯವೆಂದರೆ ನಿರ್ಬಂಧತೆ ಇಲ್ಲದಿರುವುದು ಎಂದರ್ಥ(ಫ್ರೀಡಮ್). ಆದರೆ ಸಂಪೂರ್ಣ ಅನಿರ್ಬಂಧತೆಯೂ ಅಪಾಯಕಾರಿ. ಆದ್ದರಿಂದಲೇ ಕೆಲವು ನಿರ್ಬಂಧತೆ ಇರುವುದು ಅನಿವಾರ್ಯ ಹಾಗೂ ಅವಶ್ಯಕ. ಯಾವುದೇ ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಜೀವನ ಸುಗಮ ಅಥವಾ ಸಫಲವಾಗಬೇಕಾದರೆ ಕೆಲವು ನಿರ್ಬಂಧತೆಗಳು ಇರಲೇಬೇಕು. ಈ ನಿರ್ಬಂಧತೆಗಳು ವ್ಯಕ್ತಿಗತವಾಗದೇ ಸಾಮಾಜಿಕವೂ ರಾಜಕೀಯವೂ ಅಥವಾ ಆರ್ಥಿಕವೂ ಆಗಿರುತ್ತದೆ.

ಸ್ವಾತಂತ್ರ್ಯವನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು. ಗುಣನಾತ್ಮಕವಾಗಿ ಸ್ವಾತಂತ್ರ್ಯ ಕೆಲವು ಸಾಧಾರಣ ನಿರ್ಬಂಧತೆಯನ್ನು ಬಯಸುತ್ತದೆ. ಲಿಯೋ ಸ್ಟ್ರಾಸ್ ಹಾಗೂ ಟಿ.ಎಚ್.ಗ್ರೀನ್ ಇದರ ಪ್ರತಿಪಾದಕರು. ಇದಕ್ಕೆ ವಿಭಿನ್ನವಾಗಿರುವ ಸ್ವಾತಂತ್ರ್ಯವೆಂದರೆ ನಕರಾತ್ಮಕ ಸ್ವಾತಂತ್ರ್ಯ. ಇದು ಯಾವುದೇ ರೀತಿಯ ನಿರ್ಬಂಧತೆಯನ್ನು ಒಪ್ಪಿಕೊಳ್ಳುವುದಿಲ್ಲ. ಜೆ.ಎಸ್.ಮಿಲ್ ಹಾಗೂ ಎಫ್.ಎ. ಹಯಾಕ್ ಇದರ ಮೂಲಪ್ರತಿಪಾದಕರು.

ಸ್ವಾತಂತ್ರ್ಯದಲ್ಲಿ ವಿವಿಧ ತಾತ್ತ್ವಿಕತೆಯ ದೃಷ್ಠಿಕೋನ ಕಾಣಬಹುದು. ಉದಾರವಾದಿ ಹಾಗೂ ಮಾಕ್ರ್ಸ್‍ವಾದಿ ಚಿಂತನೆಗಳು ತಮ್ಮದೇ ದೃಷ್ಟಿಕೋನದಲ್ಲಿ ಸ್ವಾತಂತ್ರ್ಯವನ್ನು ಅರ್ಥೈಸಿವೆ. ಉದಾರವಾದಿ ಚಿಂತನೆಗಳು ಸ್ವಾತಂತ್ರ್ಯವನ್ನು ಹಕ್ಕುಗಳ ಪ್ರತಿಪಾದನೆಯಲ್ಲಿ ಹಾಗೂ ಪಾಲನೆಯಲ್ಲಿ ನೋಡುತ್ತದೆ. ಆದ್ದರಿಂದಲೇ ಕೆಲವು ಉದಾರವಾದಿ ಚಿಂತಕರು ಮನುಷ್ಯನ ಹಕ್ಕುಗಳ ಆಚರಣೆಯಲ್ಲಿ ಯಾವುದೇ ಇತಿಮಿತಿಗಳಿರಬಾರದೆಂದು; ಇದ್ದರೂ ಅದು ವ್ಯಕ್ತಿ ಬೆಳೆವಣಿಗೆಗೆ ಮಾರಕವಾಗದಿರಬಾರದೆಂದು ಪ್ರತಿಪಾದಿಸುತ್ತಾರೆ.

ಮಾಕ್ರ್ಸ್‍ವಾದಿಗಳು ಸ್ವಾತಂತ್ರ್ಯವನ್ನು ಉತ್ಪಾದನ ಶಕ್ತಿಗಳ ನಿಯಂತ್ರಣದಲ್ಲಿ ಅಥವಾ ಕೇಂದ್ರೀಕರಣದಲ್ಲಿ ನೋಡುವುದರಿಂದ ಸ್ವಾತಂತ್ರ್ಯವೆಂಬುದು ಎಲ್ಲರಿಗೂ ದೊರಕಲಾರದೆಂದು ಪ್ರತಿಪಾದಿಸುತ್ತಾರೆ. ಕಾರ್ಮಿಕ ವರ್ಗಕ್ಕೆ ಸ್ವಾತಂತ್ರ್ಯವೆಂಬುದು ಒಂದು ಮರೀಚಿಕೆ ಅಥವಾ ಮಿಥ್ಯೆ ಎಂದು ನಂಬುತ್ತಾರೆ. ಕಳೆದುಕೊಂಡ ಸ್ವಾತಂತ್ರ್ಯವನ್ನು ಪಡೆಯಬೇಕಾದರೆ ಸಮಾಜವಾದಿ ಕ್ರಾಂತಿ ನಡೆಯಬೇಕೆಂದು ವಾದಿಸುತ್ತಾರೆ. ಇದಕ್ಕೆ ನಿರಂತರ ಹೋರಾಟ ಅಥವಾ ಕ್ರಾಂತಿಯ ಅವಶ್ಯಕತೆಯನ್ನು ಒತ್ತಿ ಹೇಳುತ್ತಾರೆ.

ಸ್ವಾತಂತ್ರ್ಯದಲ್ಲಿ ವಿವಿಧ ರೂಪಗಳಿವೆ. ಪ್ರಾಕೃತಿಕ ಅಥವಾ ಸಹಜ ಸ್ವಾತಂತ್ರ್ಯ ಇದರ ಮೊದಲನೆಯ ರೂಪ. ಮನುಷ್ಯನಿಗೆ ಸಹಜವಾಗಿ ಬಂದಿರುವ ಸ್ವಾತಂತ್ರ್ಯಕ್ಕೆ ಬದುಕುವ ಸ್ವಾತಂತ್ರ್ಯವೆಂದು ಹೆಸರು. ಇದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿರುವ ಸ್ವಾತಂತ್ರ್ಯವೆಂದರೆ ಸಾಮಾಜಿಕ ಸ್ವಾತಂತ್ರ್ಯ. ಇಲ್ಲಿ ವ್ಯಕ್ತಿ ಸಾಮಾಜಿಕ ವ್ಯಕ್ತಿಯಾಗಿ ರೂಪಗೊಳ್ಳಲು ಒತ್ತು ನೀಡಲಾಗುತ್ತದೆ. ಆದ್ದರಿಂದ ಮನುಷ್ಯನಿಗೆ ಧಾರ್ಮಿಕ ಸ್ವಾತಂತ್ರ್ಯ, ಕುಟುಂಬಗಳ ಸ್ವಾತಂತ್ರ್ಯ, ಸಮುದಾಯದೊಂದಿಗೆ ವಾಸಿಸುವ ಸ್ವಾತಂತ್ರ್ಯ ಸಾಮಾಜಿಕ ಸ್ವಾತಂತ್ರ್ಯದಲ್ಲಿ ಅಡಕವಾಗಿದೆ. ಮೂರನೆಯ ಸ್ವಾತಂತ್ರ್ಯ ವೈಯಕ್ತಿಕ ಸ್ವಾತಂತ್ರ್ಯ. ಇಲ್ಲಿ ಮನುಷ್ಯನಿಗೆ ಅತ್ಯವಶ್ಯಕ ಸ್ವಾತಂತ್ರ್ಯಗಳಾದ-ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವ ಸ್ವಾತಂತ್ರ್ಯ ಇತ್ಯಾದಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ರಾಜಕೀಯ ಸ್ವಾತಂತ್ರ್ಯದಲ್ಲೂ ವಿವಿಧ ಬಗೆಗಳಿವೆ. ಪ್ರತಿಯೊಬ್ಬ ವ್ಯಕ್ತಿಗೂ ಮತದಾನದ ಸ್ವಾತಂತ್ರ್ಯ, ಚುಣಾವಣೆಯಲ್ಲಿ ಸ್ಪರ್ಧಿಸುವ ಸ್ವಾತಂತ್ರ್ಯ, ಸರ್ಕಾರವನ್ನೂ ಟೀಕಿಸುವ ಸ್ವಾತಂತ್ರ್ಯ, ಪಕ್ಷ ರಾಜಕೀಯದಲ್ಲಿ ಭಾಗವಹಿಸುವ ಸ್ವಾತಂತ್ರ್ಯ ಇತ್ಯಾದಿ.

ಆರ್ಥಿಕ ಸ್ವಾತಂತ್ರ್ಯದಲ್ಲಿ ಪ್ರತಿಯೊಬ್ಬ ನಾಗರಿಕ ಉತ್ಪಾದಕನಾಗುವ, ವರ್ತಕನಾಗುವ, ಶ್ರಮವನ್ನು ಎರವಲು ಪಡೆಯುವ, ಆರ್ಥಿಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವುದು ಇತ್ಯಾದಿ ಈ ಸ್ವಾತಂತ್ರ್ಯದ ವ್ಯಾಪ್ತಿಗೊಳಪಡುತ್ತದೆ.

ರಾಷ್ಟ್ರೀಯ ಸ್ವಾತಂತ್ರ್ಯದಲ್ಲಿ ಪ್ರತಿಯೊಂದು ರಾಷ್ಟ್ರ ಯಾವುದೇ ದೇಶದ ನಿರ್ಬಂಧನೆಗೊಳಪಡದೆ ತನ್ನ ಸ್ವಾಯತ್ತವನ್ನು ಕಾಪಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದೆ. ಇದು ವಸಾಹತುಶಾಹಿ ಅಥವಾ ಸಾಮ್ರಾಜ್ಯಶಾಹಿ ವಿರೋಧದ ಸ್ವಾತಂತ್ರ್ಯವೂ ಆಗಿದೆ. ಇದೇ ರೀತಿ ಒಂದು ದೇಶ ಇನ್ನೊಂದು ದೇಶದೊಂದಿಗೆ ವ್ಯಾಪಾರ ಮಾಡುವ, ಕುದುರಿಸುವ ಅಥವಾ ಒಪ್ಪಂದ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದೆ. ಸ್ವಾತಂತ್ರ್ಯ ಎಂಬುದನ್ನು ವಿವಿಧ ದೃಷ್ಠಿಕೋನಗಳಿಂದ ಅರ್ಥೈಸಬಹುದು. ಆದ್ದರಿಂದ ಸ್ವಾತಂತ್ರ್ಯವನ್ನು ಒಂದು ಮೌಲ್ಯವೆಂದು ಪರಿಗಣಿಸಲಾಗಿದೆ. (ಎಂ.ಎ.)