ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಾಮಿ, ಎಸ್ ಎನ್ 1

ಸ್ವಾಮಿ, ಎಸ್ ಎನ್ 1

1906-69. ಕರ್ನಾಟಕದ ಪ್ರಸಿದ್ಧ ವರ್ಣಚಿತ್ರಕಾರರು ಹಾಗೂ ಶಿಲ್ಪಿ. ಇವರು ಶಿಲ್ಪಸಿದ್ಧಾಂತಿ ಸಿದ್ಧಲಿಂಗಸ್ವಾಮಿಗಳ ಅಣ್ಣಂದಿರಾದ ಶಿಲ್ಪಸಿದ್ಧಾಂತಿ ವೀರತ್ತಸ್ವಾಮಿಗಳ ಮಗ. ಸ್ಥಳ ಕೊಳ್ಳೇಗಾಲ. ತಮ್ಮ ತಾಯಿಯವರ ತವರೂರಾದ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ 1906 ಮಾರ್ಚ್ 26ರಂದು ಜನಿಸಿದರು. ಪಾರಂಪರ್ಯವಾಗಿ ಬಂದ ಶಿಲ್ಪಕಲೆಯ ಸಂಪ್ರದಾಯ ಇವರಲ್ಲೂ ನೆಲಸಿ, ಚಿತ್ರಕಲೆಗೆ ಶಾಸ್ತ್ರೀಯ ಅಡಿಪಾಯವನ್ನು ಹಾಕಿಕೊಟ್ಟಿತ್ತು. ಇವರು ಚಿಕ್ಕಂದಿನಿಂದ ಬಡತನದಲ್ಲಿ ಅಪಾರ ಕಷ್ಟಗಳನ್ನೆದುರಿಸಿ, ಮೈಸೂರಿನ ಶ್ರೀಚಾಮರಾಜೇಂದ್ರ ವೃತ್ತಿಶಿಕ್ಷಣ ಶಾಲೆಯಲ್ಲಿ ಚಿತ್ರಕಲೆಯ ಅಧ್ಯಾಪಕರಾಗಿ ಜೀವನ ನಡೆಸಿದರು. ಕುಶಲ ಕಲೆಯ ಎಲ್ಲ ಪ್ರಕಾರಗಳಲ್ಲೂ ಅದ್ವಿತೀಯ ಪ್ರೌಢಿಮೆಗಳಿಸಿಕೊಂಡಿದ್ದ ಇವರು ರೇಖಾಚಿತ್ರಗಳಲ್ಲಿಯೇ ಆಗಲಿ, ತೈಲಚಿತ್ರ, ಜಲವರ್ಣ ಚಿತ್ರಗಳಲ್ಲಿಯೇ ಆಗಲಿ ತೋರುತ್ತಿದ್ದ ಚಾಕಚಕ್ಯತೆ ಅಸಾಧಾರಣವಾದದ್ದು. ಪ್ರಕೃತಿಯ ಯಾವುದೇ ವರ್ಣಗಳನ್ನು ಕಣ್ಣಿಗೆ ಕಟ್ಟುವಂತೆ ಸಹಜ ಸುಂದರವಾಗಿ ಕೃತಿಗಳಲ್ಲಿ ಮೂಡಿಸುವ ಶಕ್ತಿಯನ್ನು ಇವರು ಪಡೆದಿದ್ದರು. ಮೈಸೂರಿನ ವೃತ್ತಿಶಿಕ್ಷಣಶಾಲೆಯ ಪ್ರದರ್ಶನಾಲಯದಲ್ಲಿ ಇದ್ದ ರಾಜನ ಒಡ್ಡೋಲಗದ ಚಿತ್ರ ಕೂಡ ಇವರ ಕಲಾವಂತಿಕೆಗೆ ಉತ್ತಮ ನಿದರ್ಶನವಾಗಿದೆ. ಮೈಸೂರಿನ ವಸ್ತುಪ್ರದರ್ಶನಶಾಲೆಯ ಕಟ್ಟಡವೊಂದರ ಮೇಲೆ ಇವರಿಂದ ರೂಪಿಸಲ್ಪಟ್ಟ ಜಯಚಾಮರಾಜ ಒಡೆಯರ ಭಾವಚಿತ್ರವಿತ್ತು. ಭಾವಚಿತ್ರರಚನೆಯಲ್ಲಿ ಇವರದು ಪಳಗಿದ ಕೈ ಎನ್ನುವುದಕ್ಕೆ ಇದೊಂದು ಉತ್ತಮ ಮಾದರಿ.

ರಾಮಾಯಣ, ಮಹಾಭಾರತ, ಭಾಗವತ, ಶಿವಪುರಾಣಗಳ ಪುಣ್ಯಕಥೆಗಳನ್ನು ಓದುವುದು, ಕೇಳುವುದು ಇವರಿಗೆ ಬಹಳ ಇಷ್ಟವಾದ ಸಂಗತಿಯಾಗಿತ್ತು. ಅಲ್ಲಿಯ ರಸ ಸನ್ನಿವೇಶಗಳ ಚಿತ್ರಗಳನ್ನು ಮೂಡಿಸಿ ಕೊಂಡು ಇವರು ಕಲೆಯಲ್ಲಿ ರೂಪಿಸುತ್ತಿದ್ದರು. ಇವರ ಗೆಳೆಯರಲ್ಲಿ ಸಾಹಿತಿಗಳು ಮತ್ತು ಕಲಾವಿದರೇ ಹೆಚ್ಚಾಗಿದ್ದರು. ಇವರ ಮಮತೆಯ ಒಬ್ಬ ಗೆಳೆಯರೆಂದರೆ ಕೈಲಾಸಂ.

ಅರಮನೆಯ ಕಲಾವಿದರಾಗಿದ್ದ ಕೇಶವಯ್ಯನವರ ನೆರವು ಸಿಕ್ಕಿದ್ದರಿಂದ ಇವರ ಕಲಾಸಾಧನೆ ಪಕ್ವವಾಯಿತು. ಮೈಸೂರಿನ ಶ್ರೀ ಚಾಮರಾಜೇಂದ್ರ ವೃತ್ತಿಶಿಕ್ಷಣ ಕಲಾಶಾಲೆಯಲ್ಲಿ ಕಲಾಭ್ಯಾಸಮಾಡಿದ ಅನಂತರ ಮುಂಬಯಿಯ ಜೆ.ಜೆ. ಕಲಾಶಾಲೆಯಲ್ಲಿ ಅಭ್ಯಾಸಮಾಡಿ ಹೆಚ್ಚಿನ ಅನುಭವ ಪಡೆದುಕೊಂಡಿದ್ದರಾಗಿ ಇವರ ಕಲೆಗೆ ಶಾಸ್ತ್ರದ ಭದ್ರವಾದ ತಳಹದಿ ಸಿಕ್ಕಿದಂತಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ ಪ್ರೋತ್ಸಾಹ ಸಿಕ್ಕಿತಾಗಿ ಇವರ ಕಲಾಪ್ರೌಢಿಮೆ ಪ್ರಕಾಶಕ್ಕೆ ಬರಲು ಅವಕಾಶವಾಯಿತು. ಆಗ ಇವರು ಚಿತ್ರಿಸಿದ ಕೆಲವು ತೈಲವರ್ಣಚಿತ್ರಗಳು ಮಹಾರಾಜರ ಮೆಚ್ಚುಗೆಗೆ ಪಾತ್ರವಾಗಿ ಅರಮನೆಯ ಕಲ್ಯಾಣಮಂಟಪವನ್ನು ಅಲಂಕರಿಸಿದವು. ಅವು ಈಗಲೂ ಅಲ್ಲಿವೆ. ಪಾಶ್ಚಾತ್ಯ ಶೈಲಿಯಲ್ಲಿ ರಚಿಸಲಾದ ಈ ಕೃತಿಗಳಲ್ಲಿ ಜನರ ಭಾವಭಂಗಿ, ಚಲನವಲನ ಬಹಳ ಸ್ವಾಭಾವಿಕವಾಗಿ ಮೂಡಿಬಂದಿವೆ.

ಚಿತ್ರಕಲೆ ಬೇಸರವಾದಾಗ ಇವರು ದಂತ ಮತ್ತು ಗಂಧದಲ್ಲಿ ಸುಂದರ ಮೂರ್ತಿಗಳನ್ನು ನಿರ್ಮಿಸುತ್ತಿದ್ದುದೂ ಉಂಟು. ಬೇಲೂರಿನ ಶಿಲಾಬಾಲಿಕೆಯರಿಂದ ಸ್ಫೂರ್ತಿಗೊಂಡು ಇವರು ರಚಿಸಿದ ಒಂದು ಆಕೃತಿ ಮತ್ತು ಗಣಪತಿ-ಇವು ತುಂಬ ಮೋಹಕವಾಗಿವೆ.

ಇವರಿಗೆ ವನಸ್ಪತಿ ಔಷಧಿಯ ತಯಾರಿಕೆಯಲ್ಲಿ ಆಸಕ್ತಿ ಇತ್ತು. ತಾವೇ ಮನೆಯಲ್ಲಿ ಅದನ್ನು ತಯಾರಿಸಿಕೊಳ್ಳುತ್ತಿದ್ದರು. ಒಮ್ಮೆ ಯಾವುದೋ ವ್ಯತ್ಯಾಸದಿಂದಾಗಿ ಇವರು ಸಿದ್ಧಪಡಿಸಿ ಸೇವಿಸಿದ ಔಷಧಿ ಇವರ ಮೈಚರ್ಮವನ್ನು ಕಿತ್ತುತಿಂದಿತು. ಕೊನೆಯ ದಿನಗಳಲ್ಲಿ ದೊಡ್ಡಶಿಲೆಯಲ್ಲಿ ಶ್ರೀಚಾಮುಂಡೇಶ್ವರಿ ವಿಗ್ರಹವನ್ನು ಕಡೆಯುತ್ತಿದ್ದಾಗ ಅದು ಪೂರ್ಣಗೊಳ್ಳುವಷ್ಟರಲ್ಲಿಯೇ ಇವರು 1969 ಡಿಸೆಂಬರ್ 27ರಂದು ನಿಧನರಾದರು. ಇವರಿಗೆ 1967ರಲ್ಲಿ ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

 	*