ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಾಮಿ, ವೈ ಆರ್

ಸ್ವಾಮಿ, ವೈ ಆರ್ (1922-2002). ಕನ್ನಡ ಚಿತ್ರ ರಂಗಕ್ಕೆ ಅಪೂರ್ವ ಕಾಣಿಕೆ ನೀಡಿದ ಯುರ್ರಿ ರಾಮಚಂದ್ರಸ್ವಾಮಿ (ವೈ.ಆರ್. ಸ್ವಾಮಿ) 1922ರ ಸಪ್ಟೆಂಬರ್ 22ರಂದು ಜನಿಸಿದರು. ಮೂಲತಃ ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಇವರದು. ಆದರೆ ಇವರು ಜನಿಸಿದ್ದು ಹೈದರಾಬಾದಿನಲ್ಲಿ (26-9-1922). ದಕ್ಷಿಣ ಭಾರತದ ಚಲನಚಿತ್ರರಂಗದ ಪಿತಾಮಹರೆನಿಸಿದ-ಪ್ರಪ್ರಥಮ ತೆಲುಗು ವಾಕ್ಚಿತ್ರದ ನಿರ್ದೇಶಕ ಹೆಚ್.ಎಂ.ರೆಡ್ಡಿಯವರ ಸಾಕುಮಗ. ಎಂ.ಎ.ಪದವೀಧರರಾದ ವೈ.ಆರ್.ಸ್ವಾಮಿಯವರು, ಮೂಕಿ ಚಿತ್ರಗಳ ಕಾಲದಲ್ಲೇ ಸಾಕುತಂದೆ ತಯಾರಿಸಿದ ``ಭಕ್ತಪ್ರಹ್ಲಾದ ಚಿತ್ರದಲ್ಲಿ ಪ್ರಹ್ಲಾದನ ಪಾತ್ರದಲ್ಲಿ ಅಭಿನಯಿಸಿದ್ದರಲ್ಲದೆ, ಪದವೀಧರರಾದ ಮೇಲೆ ಬೇರೆ ಯಾವ ಉದ್ಯೋಗವನ್ನೂ ಸೇರದೆ, ಸಾಕು ತಂದೆಯವರ ಸಹಾಯಕರಾಗಿ ಚಿತ್ರರಂಗದಲ್ಲಿಯೇ ತೊಡಗಿಕೊಂಡರು. ಹಲವು ತೆಲುಗು-ತಮಿಳು ಚಿತ್ರಗಳನ್ನೂ ನಿರ್ದೇಶಿಸಿದರು. 1956ರಲ್ಲಿ ಪ್ರಥಮ ಬಾರಿಗೆ ``ರೇಣುಕಾಮಹಾತ್ಮೆ (1956) ಕನ್ನಡ ಚಿತ್ರವನ್ನು ನಿರ್ದೇಶಿಸಿ, ಕನ್ನಡ ಚಿತ್ರಜಗತ್ತಿನಲ್ಲಿ ಪದಾರ್ಪಣೆ ಮಾಡಿದರು. ನಂತರ ಇವರು ನಿರ್ದೇಶಿಸಿದ ``ಭಕ್ತ ಕನಕದಾಸ, ಹೆಚ್ಚು ತಂತ್ರಜ್ಞಾನದ ಅರಿವೇ ಇಲ್ಲದಿದ್ದ ಆ ಕಾಲದಲ್ಲಿ ವಿಶೇಷ ಟ್ರಿಕ್ ಷಾಟ್‍ಗಳಿಂದ ಗಮನ ಸೆಳೆದಿದ್ದಲ್ಲದೆ, ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದೆನಿಸಿತು. ವೈ.ಆರ್.ಸ್ವಾಮಿಯವರು ಡಾ|| ರಾಜಕುಮಾರ್ ಅಭಿನಯದ ಸುಮಾರು ಹದಿನೇಳು ಚಿತ್ರಗಳನ್ನು ನಿರ್ದೇಶಿಸಿದರು.

ಡಕಾಯಿತರ ತಾಣದಲ್ಲಿಯೇ ಚಿತ್ರತಂಡವನ್ನು ಒಯ್ದು ಚಿತ್ರೀಕರಣ ಮಾಡಿದ ಸಾಹಸಿ ಇವರು. ಎನ್.ಪಂಕಜ ಅವರ ``ಬರಲೇ ಇನ್ನು ಯಮುನೆ ಕನ್ನಡ ಕಾದಂಬರಿಯನ್ನು ಆಧರಿಸಿ ``ಸಿಪಾಯಿರಾಮು ಚಿತ್ರವನ್ನು ಚಂಬಲ್‍ಕಣಿವೆಯಲ್ಲಿ ವೈ.ಆರ್.ಸ್ವಾಮಿ ಚಿತ್ರೀಕರಿಸಿದರು. ಈ ಚಿತ್ರ ತೃತೀಯ ಅತ್ಯುತ್ತಮ ಚಿತ್ರವಾಗಿ 1971-72ರ ರಾಜ್ಯಸರ್ಕಾರದ ಪ್ರಶಸ್ತಿಗೆ ಪಾತ್ರವಾಯಿತು. ಸುಮಾರು 34 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ 17 ಚಿತ್ರಗಳು ರಾಜ್‍ಕುಮಾರ್ ಅಭಿನಯದ ಚಿತ್ರಗಳು. ಚಿತ್ರಕಥೆ ರಚಿಸಿ ವೈ.ಆರ್.ಸ್ವಾಮಿ ಅವರು ಕನ್ನಡ ಚಿತ್ರರಂಗದಲ್ಲಿ ಮಾಡಿದ ಸಮಗ್ರ ಸೇವೆ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರ 1990-91ನೇ ಸಾಲಿನಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ವೈ.ಆರ್.ಸ್ವಾಮಿ ಅವರು ಅಕ್ಟೋಬರ್ 2002ರಲ್ಲಿ ನಮ್ಮಿಂದ ಅಗಲಿದರು. (ಶ್ರಿಕೃಪಾ; ಎ.ಎನ್.ಪ್ರಹ್ಲಾದ್‍ರಾವ್)