ಸ್ವಾಹಿಲಿ ಆಫ್ರಿಕನ್ ಭಾಷಾಪರಿವಾರದ ಬಂಟು ಭಾಷಾವರ್ಗಕ್ಕೆ ಸೇರಿದ ಪ್ರಮುಖ ಭಾಷೆ. ಇದು ಅರಬ್ ಮತ್ತು ನೀಗ್ರೊ ಮಿಶ್ರತಳಿಯ ಜನರಾಡುವ ಭಾಷೆ. ಜಾಂಜಿಬಾರ್‍ನಲ್ಲಿ ಹೆಚ್ಚು ಬಳಕೆಯಲ್ಲಿದೆ. ಪೂರ್ವ ಆಫ್ರಿಕದ ಕರಾವಳಿ, ಅದರಲ್ಲೂ ಉತ್ತರದ ಲಮೂ ಮತ್ತು ಅದರ ಸುತ್ತಮುತ್ತಲ ಸ್ಥಳಗಳಲ್ಲೂ ದಕ್ಷಿಣದ ಡೆಲ್‍ಗಡೂ ಎಂಬಲ್ಲೂ ಈ ಭಾಷೆಯನ್ನು ಮಾತನಾಡುವ ಜನರುಂಟು. ಇವರ ಸಂಖ್ಯೆ ಒಂದುಕೋಟಿಗೂ ಹೆಚ್ಚು. ಈ ಭಾಷೆ ಇತ್ತೀಚಿನ ದಿನಗಳಲ್ಲಿ ಸಂಸ್ಕಾರ ಸಂಪನ್ನ ಭಾಷೆಯಾಗಿ, ರಾಷ್ಟ್ರಭಾಷೆಯಾಗಿ ಬೆಳೆಯುತ್ತಿದೆ. ಶಾಲೆಗಳಲ್ಲೂ ಬೋಧಿಸಲಾಗುತ್ತಿದೆ. ವಿಖ್ಯಾತ ಸಾಹಿತಿ ಮೋಲಿಯರನ ಹಾಸ್ಯನಾಟಕ ಗಳನ್ನು ಸ್ವಾಹಿಲಿಗೆ ಅನುವಾದಿಸಿ, ಡರ್-ಎಸ್-ಸಲಾಮ್ ನಗರದಲ್ಲಿ ಪ್ರದರ್ಶನ ಮಾಡಲಾಗಿದೆ. ಈ ಭಾಷೆಯನ್ನು ಬರೆಯಲು ಹಿಂದೆ ಅರಬ್ಬಿ ಲಿಪಿಯನ್ನು ಬಳಸುತ್ತಿದ್ದರು. ಆದರೆ ಇಂದು ರೋಮನ್ ಲಿಪಿಯನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಇದು ರಾಜಕೀಯ ಹಾಗೂ ಮತೀಯ ಘರ್ಷಣೆಗಳಿಂದ ಆದ ಬದಲಾವಣೆ.

ಸ್ವಾಹಿಲಿಯನ್ನು ಅರಾಬಿಕ್ ಲಿಪಿಯ ಸಹಾಯದಿಂದ ಬರೆಯುವುದು ಅಸಮಂಜಸ. ಏಕೆಂದರೆ ಈ ಭಾಷೆಯಲ್ಲಿ ಸಹಜವಾಗಿರುವ ಐದು ಸ್ವರಗಳ ಕಾರ್ಯವನ್ನು ಅರಾಬಿಕ್‍ನ ಮೂರು ಸ್ವರಗಳು ಭರಿಸಲಾರವು. ಹಾಗೆಯೇ ವ್ಯಂಜನಗಳಿಗೆ ಸಂಬಂಧಿಸಿದಂತೆಯೂ ಇದೇ ಸಮಸ್ಯೆ ಇದೆ. ಆದುದರಿಂದ ಈ ಭಾಷೆಯ ಅಭಿವ್ಯಕ್ತಿ ಸಾಧ್ಯತೆಯೆಲ್ಲವನ್ನೂ ಅರಾಬಿಕ್ ಮೂಲಕ ಅಭಿವ್ಯಕ್ತಿಸುವುದು ಸಾಧ್ಯವಿಲ್ಲವೆಂದು ಸ್ವಾಹಿಲಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಎಡ್ವರ್ಡ್‍ಸ್ಟೀರೆ ಅಭಿಪ್ರಾಯ ಪಟ್ಟಿದ್ದಾನೆ.

ಇಂಗ್ಲಿಷ್ ವರ್ಣಮಾಲೆಯ ಕ್ಯು ಮತ್ತು ಎಕ್ಸ್ ವರ್ಣಗಳ ಹೊರತಾಗಿ ಉಳಿದೆಲ್ಲವೂ ಸ್ವಾಹಿಲಿಯಲ್ಲಿವೆ. ಇವುಗಳೊಂದಿಗೆ ಅರಾಬಿಕ್‍ನಿಂದ ಎರವಲು ಪಡೆದಿರುವ ಕೆಲವು ಅಕ್ಷರಗಳೂ ಇವೆ. ಈ ಭಾಷೆಯ ಧ್ವನಿಗಳು ಉಚ್ಚಾರಣೆಯಲ್ಲಿ ಅನುಕ್ರಮವಾಗಿ ಇಟಾಲಿಯನ್ ಸ್ವರಗಳನ್ನೂ ಇಂಗ್ಲಿಷ್ ವ್ಯಂಜನಗಳನ್ನೂ ಹೋಲುತ್ತವೆ. ಸ್ವರಗಳನ್ನು ಬಿಡಿ ಬಿಡಿಯಾಗಿ ಉಚ್ಚರಿಸುವುದರಿಂದ ಸಂಧ್ಯಕ್ಷರಗಳಿಲ್ಲ. ಅನಿವಾರ್ಯವಾಗಿ ಎರಡು ಸ್ವರಗಳು ಒಟ್ಟಿಗೆ ಬಂದಾಗ ಅವುಗಳ ನಡುವೆ ಲ್ ವ್ಯಂಜನ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಕು¥sóÁ>ಕು¥sóÁಲಾ ಈ ಭಾಷೆಯ ಅಕ್ಷರವಿನ್ಯಾಸ ಸ್ವರಾಂತವಾಗಿರುತ್ತದೆ. ಆದರೆ ಈ ಸ್ವರವು ಪೂರ್ವದಲ್ಲಿ ಒಂದು ವ್ಯಂಜನವನ್ನು ಹೊಂದಿರುತ್ತದೆ. ಹೀಗೆ ಪೂರ್ವದಲ್ಲಿ ಕಾಣಿಸಿಕೊಳ್ಳುವ ವ್ಯಂಜನ ನ್ ಆಗಿರಬಹುದು. ಅಥವಾ ಮ್ ಅಥವಾ ವ್ ಯ್ ಅರ್ಧಸ್ವರಗಳನ್ನು ಅನುಸರಿಸಿ ಬರಬಹುದು.

ಈ ಭಾಷೆಯಲ್ಲಿ ನಾಮವಿಶೇಷಣಗಳು, ಉಪಸರ್ಗಗಳು ಕಡಮೆ. ಕ್ರಿಯಾಪದಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. (ಆರ್.ಆರ್.)