ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವೀಡನ್ಬರ್ಗ್, ಇಮ್ಯಾನ್ಯುಯಲ್

ಸ್ವೀಡನ್‍ಬರ್ಗ್, ಇಮ್ಯಾನ್ಯುಯಲ್ 1688-1772. ಜರ್ಮನಿಯ ಪ್ರಖ್ಯಾತ ಅನುಭಾವಿ. ಈತ 1688ರಲ್ಲಿ ಸ್ಟಾಕೋಮ್‍ನಲ್ಲಿ ಜನಿಸಿದ. ಈತ ಖನಿಜಶಾಸ್ತ್ರದಲ್ಲಿ ಪರಿಣತನಾಗಿದ್ದ. ಹನ್ನೆರಡನೆಯ ಚಾಲ್ರ್ಸ್ ಇವನಿಗೆ ಎಂಜಿನಿಯರ್ ಕೆಲಸ ಕೊಟ್ಟ. ಈತ ಅವನಿಗೆ ಅಚ್ಚುಮೆಚ್ಚಿನ ಸೇವೆ ಸಲ್ಲಿಸಿದ. ಇವನು 1734ರಲ್ಲಿ ಮೂರು ಸಂಪುಟಗಳಲ್ಲಿ ತತ್ತ್ವದರ್ಶನವನ್ನು ಬರೆದ. ಮೊದಲನೆಯ ಸಂಪುಟದಲ್ಲಿ ನಮ್ಮ ಸಾಮಾನ್ಯ ಅನುಭವದ ಜಗತ್ತನ್ನು ಕುರಿತು ಹೇಳಿದ್ದಾನೆ. ಇನ್ನೆರಡು ಸಂಪುಟಗಳಲ್ಲಿ ಖನಿಜ ಸಂಪತ್ತನ್ನು ಬಳಸಿಕೊಳ್ಳುವ ವಿಚಾರವನ್ನೂ ದೇಹ ರಚನೆಯ ಸಂಶೋಧನೆಯನ್ನು ಆತ್ಮವನ್ನು ಹುಡುಕಲು ಹೇಗೆ ಬಳಸಿಕೊಳ್ಳಬಹುದೆಂಬುದನ್ನು ಹೇಳಿದ್ದಾನೆ. ಬುದ್ಧಿಯ ಸ್ವರೂಪವನ್ನು ಕುರಿತು ಮಾನಸಿಕ ವಿಶ್ಲೇಷಣೆಯನ್ನು ನಡೆಸಿ, ಮಾನವನ ಸ್ವರೂಪವೆಂತಹುದೆಂದು ಸ್ಥಾಪಿಸಲು ಪ್ರಯತ್ನಮಾಡಿದ. ಹೀಗೆ ಇವನು ವ್ಯಕ್ತಪಡಿಸಿದ ಅಭಿಪ್ರಾಯಗಳು ಮುಂದೆ ಬೆಳೆದ ವೈಜ್ಞಾನಿಕ ಭಾವನೆಗಳಿಗೆ ಮುನ್ಸೂಚನೆಗಳಾಗಿದ್ದವು. 1743ರ ಅನಂತರ ಇವನ ಜೀವನದ ಧೋರಣೆಯೇ ಬದಲಾಯಿಸಿತು. ಭಗವದ್ವಚನಗಳನ್ನು ಎಲ್ಲರಿಗೂ ಬಿಡಿಸಿ ಹೇಳಲು ಭಗವಂತ ತನ್ನನ್ನು ಆರಿಸಿದ್ದಾನೆಂಬ ಭಾವ ಇವನಲ್ಲಿ ಮೂಡಿತು. ಭಗವತ್ ಪ್ರೇಮದ ಕಲೆಯನ್ನು ಕುರಿತೂ ಈತ ಗ್ರಂಥ ಬರೆದ. ಇವನ ಬೋಧನೆಗಳನ್ನು ಹೆಚ್ಚಾಗಿ ಪ್ರಚಾರಮಾಡಿದವನು ಚರ್ಚ್ ಆಫ್ ಇಂಗ್ಲೆಂಡಿನ ಪಾದ್ರಿ ಜಾನ್ ಕ್ಲೌಸ್. ಅವನು ಸ್ವೀಡನ್‍ಬರ್ಗ್‍ನ ಗ್ರಂಥಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ. ಸ್ವೀಡನ್‍ಬರ್ಗ್‍ನ ಗ್ರಂಥಗಳನ್ನೂ ಉಪದೇಶಗಳನ್ನೂ ಪ್ರಚಾರ ಮಾಡಲು ಅನೇಕ ಸಂಘಗಳು ಹುಟ್ಟಿಕೊಂಡವು. (ಎಂ.ವೈ.)