ಹಂಪೆ

    ಭಾರತದ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಒಂದು ಪಟ್ಟಣ. ಇತಿಹಾಸ ಪ್ರಸಿದ್ಧ ಸ್ಥಳ. ಬೆಂಗಳೂರಿಗೆ 360 ಕಿಮೀ ದೂರದಲ್ಲಿ, ಬಳ್ಳಾರಿಗೆ 77 ಕಿಮೀ ದೂರದಲ್ಲಿ, ಹೊಸಪೇಟೆಗೆ 13 ಕಿಮೀ ದೂರದಲ್ಲಿ ತುಂಗಭದ್ರಾನದಿಯ ದಂಡೆಯ ಮೇಲಿದೆ.

ಭಾರತ ಮತ್ತು ವಿದೇಶಿ ಇತಿಹಾಸ ಗ್ರಂಥಗಳಲ್ಲಿ ವಿಜಯನಗರವೆಂದು ಪ್ರಸಿದ್ಧವಾಗಿರುವ ಹಂಪೆ, ಮಧ್ಯಯುಗದ ದಖನ್ ಭಾಗದ ಪ್ರಖ್ಯಾತ ಹಿಂದು ಮಹಾನಗರಗಳಲ್ಲಿ ಒಂದು. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಕೀರ್ತಿ ಈ ಸ್ಥಳಕ್ಕೆ ಇದೆ. ಕೃಷ್ಣದೇವರಾಯನ ಕಾಲದಲ್ಲಿ (1509-30) ವಿಜಯನಗರ ಖ್ಯಾತಿಯ ಪರಾಕಾಷ್ಠೆಯನ್ನು ಮುಟ್ಟಿತು. ಅದರ ಉಚ್ಛ್ರಾಯ ದಿನಗಳ ವೈಭವವನ್ನು ಅನೇಕ ವಿದೇಶಿ ಪ್ರವಾಸಿಗರು, ರಾಯಭಾರಿಗಳು ಹಾಗೂ ಚರಿತ್ರಕಾರರು ವರ್ಣಿಸಿದ್ದಾರೆ. ಅವರಲ್ಲಿ ನಿಕೊಲೋ ಕೋಂಟಿ, ಅಬ್ದುಲ್ ರಜಾಕ್, ಡೊಮಿಂಗೋ ಪೇಯಿಸ್-ಇವರು ಇತಿಹಾಸ ಪ್ರಸಿದ್ಧರು.

(ನೋಡಿ- ವಿಜಯನಗರ)

ಐತಿಹ್ಯದ ಪ್ರಕಾರ ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಮುನ್ನ ಇಲ್ಲಿ ಒಂದು ಪಟ್ಟಣವಿತ್ತು. ಇದರ ಹೆಸರು ಪಂಪಾ. ಬ್ರಹ್ಮನ ಮಾನಸಕನ್ಯೆ ಪಂಪಾ ಇಲ್ಲಿ ಶಿವನನ್ನು (ವಿರೂಪಾಕ್ಷ) ಕುರಿತು ತಪಸ್ಸುಮಾಡಿ ಆತನ ಪತ್ನಿಯಾದಳು; ಶಿವ ಪಂಪಾಪತಿಯಾದ, ಪಂಪಾ ವಿರೂಪಾಕ್ಷನಾದ ಎಂದು ಪುರಾಣಕಥೆ. ರಾಮಾಯಣ ಕಾಲದಲ್ಲಿ ಶ್ರೀರಾಮ ಇಲ್ಲಿಗೆ ಬಂದಿದ್ದನಂತೆ. ವಾನರ ಸಹೋದರರಾದ ವಾಲಿ-ಸುಗ್ರೀವರ ಕಿಷ್ಕಿಂಧೆ ರಾಜಧಾನಿ ಆನೆಗೊಂದಿಯಾಗಿತ್ತೆಂದು ಪ್ರತೀತಿ. ಪಂಪಾಸ ರೋವರ, ವಾಲಿಯ ದಿಬ್ಬ, ಸುಗ್ರೀವ ಗವಿ ಮುಂತಾದ ಹೆಸರಿನ ಸ್ಥಳಗಳು ಇಲ್ಲಿವೆ. ಪಂಪಾ ಎಂಬುದು ತುಂಗಭದ್ರಾ ನದಿಯ ಪ್ರಾಚೀನ ಹೆಸರು ಎಂದೂ ಪ್ರತೀತಿ.

ವಿಜಯನಗರಕ್ಕೆ ಏಳು ಸುಭದ್ರ ಕೋಟೆಗಳಿದ್ದುವೆಂದು ಹೇಳಲಾಗಿದೆ. ಅವುಗಳಿಗೆ ಅನೇಕ ದ್ವಾರಗಳಿದ್ದುವು; ಅವುಗಳಲ್ಲಿ ಒಳಭಾಗದ ಹೆಬ್ಬಾಗಿಲು ಅರಮನೆಯ ಉತ್ತರಭಾಗದಲ್ಲಿತ್ತು. ಹೇಮಕೂಟ, ಮಾತಂಗ ಪರ್ವತ, ಋಷ್ಯಮೂಕ, ಮಾಲ್ಯವಂತ ಮೊದಲಾದ ಬೆಟ್ಟಸಾಲುಗಳ ಮಧ್ಯೆ ಕಂಗೊಳಿಸುತ್ತಿದ್ದ ಈ ನಗರ ರೋಮ್ ಮಹಾನಗರದಷ್ಟೇ ದೊಡ್ಡದೆಂದು ಪ್ರವಾಸಿಗ ಪೇಯಿಸ್ ಹೇಳಿದ್ದಾನೆ.

ಈಗಿನ ಶಿಥಿಲಾವಸ್ಥೆಯಲ್ಲಿ ಸಹ ಒಳಭಾಗದ ಕೋಟೆ ಮತ್ತು ಇತರ ಪಾಳುಬಿದ್ದ ನಗರಭಾಗಗಳು ಸು. 9 ಚ. ಮೈಲಿಗಳಷ್ಟು ಪ್ರದೇಶವನ್ನು ವ್ಯಾಪಿಸಿಕೊಂಡಿವೆ. ಭೀಮನ ದ್ವಾರ, ಗೋಪುರ ದ್ವಾರ, ಯೋಧರ ದ್ವಾರ, ತಾಂಬೂಲದ್ವಾರ ಮೊದಲಾದ ನಗರದ ಬಾಗಿಲುಗಳು ತಮ್ಮ ಅವಶೇಷ ವೈಭವದಿಂದ ನಿಂತಿವೆ. ಹಂಪೆ ಬಜಾರ್, ವಿಠಲ ಬಜಾರ್, ಅಚ್ಯುತರಾಯ ಬಜಾರ್, ಹಜಾರ ರಾಮ ಬಜಾರ್-ಈ ಅಂಗಡಿಸಾಲುಗಳ ಅವಶೇಷಗಳು ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣ ವಾಗಿದ್ದು ತಮ್ಮ ಸಾಲುಗಳ ಭವ್ಯ ರಚನೆಯನ್ನು ಈಗಲೂ ಭಾಗಶಃ ಉಳಿಸಿಕೊಂಡಿವೆ. ನಗರದ ಪ್ರಮುಖ ಬೀದಿಗಳ ಇಕ್ಕೆಲದಲ್ಲಿ ಅನೇಕ ಅಲಂಕಾರ ಮಂಟಪಗಳು, ವೀಕ್ಷಕ ಮಂಟಪಗಳು ಮತ್ತು ಕಲ್ಯಾಣಿ ಗಳಿದ್ದವು. ರಾಣಿಯರು ಸ್ನಾನಘಟ್ಟದಿಂದ ಹಿಡಿದು (ಅಂತಃಪುರದ ಆವರಣದೊಳಗಿನ) ಆನೆಲಾಯಗಳವರೆಗೆ ವ್ಯಾಪಿಸಿರುವ ಪ್ರದೇಶ ಅವಶೇಷಗಳ ಶೋಭಾಯಮಾನ ಭಾಗವಾಗಿದೆ. ನಗರದ ಪ್ರಮುಖ ಸ್ನಾನಘಟ್ಟ, ಸಿಂಹಾಸನ ವೇದಿಕೆ, ಸಭಾಂಗಣ, ಹಜಾರ ರಾಮಸ್ವಾಮಿ ದೇವಾಲಯ, ದಣ್ಣಾಯಕನ ಆವರಣ, ಯೋಜಿತ ರೀತಿಯಲ್ಲಿ ಶಿಲೆಯಲ್ಲಿ ರಚಿತವಾದ ಜಲಾಶಯಗಳು, ಗಟ್ಟಿಮಣ್ಣಿನ ನಳಿಗೆಗಳ ಮೂಲಕ ನಗರಕ್ಕೆ ನೀರು ಹಾಯಿಸುತ್ತಿದ್ದು ಈಗ ಶಿಥಿಲಾವಸ್ಥೆಯಲ್ಲಿರುವ ಮೇಲ್ಗಾಲುವೆಗಳು, ಅಷ್ಟಕೋನಾಕೃತಿಯ ಸ್ನಾನಗೃಹಗಳು ಹಾಗೂ ಅಲಂಕಾರ ಮಂಟಪಗಳು ಈ ಭಾಗದಲ್ಲಿವೆ. ನಗರದ ಹಲವಾರು ದೇವಾಲಯಗಳು, ಕೋಟೆ ಗೋಡೆಗಳು ಮತ್ತು ಸಾರ್ವಜನಿಕ ಕಟ್ಟಡಗಳು ಬೆಣಚುಕಲ್ಲಿನ ಭಾರಿ ಬಂಡೆಗಳಿಂದ ನಿರ್ಮಿತವಾಗಿವೆ. ನಗರದ ಸುಂದರ ದೇವಾಲಯಗಳಲ್ಲಿ ಪ್ರಮುಖವಾದವು ವಿಠಲರಾಯ ಗುಡಿ, ಕೃಷ್ಣನ ಗುಡಿ, ವಿರೂಪಾಕ್ಷ ದೇವಾಲಯ, ಅಚ್ಯುತರಾಯ ದೇವಸ್ಥಾನ, ಪಟ್ಟಾಭಿರಾಮ ಗುಡಿ, ಚಂದ್ರಶೇಖರ ದೇವಾಲಯ, ಗಾಣಿಗಿತ್ತಿ ಜಿನಾಲಯ, ಬಂಡೆಯ ಮೇಲೆ ಕಟ್ಟಿರುವ ಹಾಗೂ ದಕ್ಷಿಣದಿಂದ ಪಂಪಾಪತಿ ದೇವಾಲಯಕ್ಕೆ ಅಭಿಮುಖವಾಗಿರುವ ಹೇಮಕೂಟದ ಗುಡಿಗಳ ಸಮೂಹ, ನದಿಯ ಬಳಿ ಬೆಟ್ಟದ ಇಳಿಜಾರಿನಲ್ಲಿರುವ ವೈಷ್ಣವ ದೇವಾಲಯಗಳ ಸಮೂಹ ಮತ್ತು ಕಲ್ಲಿನ ನರಸಿಂಹ, ರಾಣಿಯರ ಸ್ನಾನಘಟ್ಟ, ನಯನಮನೋಹರ ವಾದ ಮಹಾನವಮಿ ದಿಬ್ಬ, ಕಮಲಮಹಲ್, ಅಂತಃಪುರದ ಮೂಲೆಗೋಪುರಗಳು, ಅರಮನೆಯ ವಿಶಾಲವಾದ ಆನೆ ಮತ್ತು ಕುದುರೆಲಾಯಗಳು-ಇವುಗಳೆಲ್ಲ ಸಮಕಾಲೀನ ಮಹಮದೀಯ ಕಟ್ಟಡ ರಚನಾ ಶೈಲಿಯನ್ನು ಅನುಸರಿಸದೆ ತಮ್ಮದೇ ಆದ ವೈಶಿಷ್ಟ್ಯ ಹಾಗೂ ವೈವಿಧ್ಯವನ್ನು ಉಳಿಸಿಕೊಂಡಿದ್ದ ಹಿಂದು ವಾಸ್ತುಶಿಲ್ಪಶೈಲಿಯ ಘನತೆಯನ್ನು ಪ್ರತಿನಿಧಿಸುತ್ತವೆ.

ವಾಸ್ತವಿಕವಾಗಿ, ವಿಜಯನಗರದ ದೇವಾಲಯಗಳು ಈವರೆಗೂ ಅನುಕರಿಸಲಾಗದಿರುವ ಮತ್ತು ತಮ್ಮದೇ ವೈಶಿಷ್ಟ್ಯವುಳ್ಳ ಬೆಣಚುಕಲ್ಲು ಚಪ್ಪಡಿಗಳ ಕಟ್ಟಡರಚನೆ, ವಾಸ್ತುಶಿಲ್ಪಕ್ಕೆ ಮಾದರಿಗಳಾಗಿವೆ. ಶೈಲಿಯ ದೃಷ್ಟಿಯಲ್ಲಿ ಈ ದೇವಾಲಯಗಳು ಚಾಳುಕ್ಯರಲ್ಲಿ ಅಥವಾ ಹೊಯ್ಸಳರಲ್ಲಿ ರೂಢಿಯಲ್ಲಿದ್ದ ವಿಧಾನಗಳಿಂದ ಪ್ರಭಾವಿತವಾಗದೆ ದಕ್ಷಿಣದ ಶುದ್ಧ ವಿಮಾನ ಶೈಲಿಯನ್ನು ವ್ಯಕ್ತಪಡಿಸುತ್ತವೆ. ಮಧ್ಯಯುಗದ ಹಿಂದು ವಾಸ್ತುಶಿಲ್ಪಕ್ಕೆ ಸೇರಿದ ವಿಜಯನಗರದ ಕಟ್ಟಡ ರಚನೆಯ ಶೈಲಿಯಲ್ಲಿ ನೆಲಗಟ್ಟಿಗೆ ಶಿಲೆಯನ್ನು ಮತ್ತು ದೇವಾಲಯದ ಮೇಲ್ಕಟ್ಟಡ ಹಾಗೂ ಗೋಪುರ ರಚನೆಗೆ ಇಟ್ಟಿಗೆ ಮತ್ತು ನಯಗಾರೆಯನ್ನು ಉಪಯೋಗಿಸು ತ್ತಿದ್ದುದು ಕಂಡುಬರುತ್ತದೆ. ಆ ಕಾಲದಲ್ಲಿ ದೇವಾಲಯ ರಚನೆಯಲ್ಲಿ ಹೆಚ್ಚಿಗೆ ಸೇರಿಸಿದ ಭಾಗವೆಂದರೆ ಅಮ್ಮನವರ ಪ್ರತ್ಯೇಕವಾದ ಗುಡಿ, ಸೂಕ್ಷ್ಮ ಕೆತ್ತನೆಯ ಗೋಡೆಯ ಅಲಂಕೃತ ಬೋದಿಗೆ (ಕಾರ್ನೀಸು) ಮತ್ತು ಅಲಂಕೃತ ಛಾವಣಿಯುಳ್ಳ ಪ್ರತ್ಯೇಕವಾದೊಂದು ಕಲ್ಯಾಣಮಂಟಪ. ಶಿಲ್ಪಕಲೆಯ ಬಗ್ಗೆ ಆ ಕಾಲದಲ್ಲಿದ್ದ ಉತ್ಸಾಹ ಹಂಪೆಯ ವಿಠಲ ದೇವಾಲಯದ ಅಂಗಣದಲ್ಲಿರುವ ಕಲ್ಲುರಥದಿಂದ ವ್ಯಕ್ತವಾಗುತ್ತದೆ. ಹಂಪೆ ಪುನರುಜ್ಜೀವನಗೊಂಡ ಹಿಂದುಧರ್ಮ, ಸಾಹಿತ್ಯ ಮತ್ತು ಜನಜೀವನಕ್ಕೆ ಪ್ರಸಿದ್ಧವಾಗಿದ್ದುದಲ್ಲದೆ ತಾನು ಅಸ್ತಿತ್ವದಲ್ಲಿದ್ದ ಎರಡು ಶತಮಾನಗಳ ಕಾಲದಲ್ಲಿ (14ನೆಯ ಶತಮಾನದ ಉತ್ತರಾರ್ಧದಿಂದ 16ನೆಯ ಶತಮಾನದ ಉತ್ತರಾರ್ಧದ ವರೆಗೆ) ಶಿಲ್ಪದ ನವಶೈಲಿಗೆ ಹೆಸರುವಾಸಿಯಾಗಿತ್ತು.

ಇಲ್ಲಿನ ದೇವಾಲಯಗಳಲ್ಲಿ ಹಂಪೆ ಬಜಾರಿನ ಉತ್ತರದ ಕೊನೆಯಲ್ಲಿ ರುವ ವಿರೂಪಾಕ್ಷ ದೇವಾಲಯ ಪ್ರಸಿದ್ಧವಾದುದು. ಈ ದೇವಾಲಯಕ್ಕೆ ಪಂಪಾಪತಿ ದೇವಾಲಯ ಎಂಬ ಹೆಸರೂ ಇದೆ. ವಿರೂಪಾಕ್ಷ ವಿಜಯನಗರದ ಅರಸರ ಕುಲದೈವ. ಈ ದೇವಾಲಯದ ಮೂಲಗುಡಿ ಬಲ್ಲಾಳನ ಕಾಲದಲ್ಲಿ 11ನೆಯ ಶತಮಾನದಲ್ಲಿ ಪಶ್ಚಿಮ ಚಾಳುಕ್ಯರ ಶಿಲ್ಪಶೈಲಿಯಲ್ಲಿ ರಚಿತವಾಯಿತು. ಇದು 16ನೆಯ ಶತಮಾನದ ಹೊತ್ತಿಗೆ ಹಲವಾರು ಸೇರ್ಪಡೆಗಳೊಂದಿಗೆ ಬೃಹತ್ ದೇವಾಲಯವಾಗಿ ವೃದ್ಧಿಗೊಂಡಿತು. ದೇವಾಲಯ ಶಿವ, ಪಂಪಾ, ಭುವನೇಶ್ವರಿಯ ಗುಡಿಗಳನ್ನು ಹೊಂದಿದೆ. ಈ ದೇವಾಲಯದ ಪೂರ್ವದ್ವಾರದ ಗೋಪುರ 120 ಅಡಿ ಎತ್ತರವಿದೆ. ಕಲ್ಯಾಣಮಂಟಪವನ್ನು ಮತ್ತು ಒಳಗಡೆಯ ಕಿರುಗೋಪುರಗಳನ್ನು ಕೃಷ್ಣದೇವರಾಯನ ಕಾಲದಲ್ಲಿ ಕಟ್ಟಿಸಲಾಯಿತು. ಕಲ್ಯಾಣಮಂಟಪದ ಛಾವಣಿಯ ಮೇಲೆ ಅಮೂಲ್ಯ ಭಿತ್ತಿಚಿತ್ರಗಳು ರಚಿತವಾಗಿವೆ. ಅವುಗಳಲ್ಲಿ ಪಲ್ಲಕ್ಕಿಯಲ್ಲಿ ಯಂತ್ರವನ್ನು ಭೇದಿಸುವ ಚಿತ್ರ ಚಿತ್ತಾಕರ್ಷಕವಾಗಿದೆ.

ಹಂಪೆಯ ಒಳಕೋಟೆಯ ಭಾಗದಲ್ಲಿರುವ ಹಲವು ದೇವಾಲಯಗ ಳಲ್ಲಿ ಹಜಾರ ರಾಮಸ್ವಾಮಿ ದೇವಾಲಯ ಬಹುಮುಖ್ಯವಾದುದು. ಹಜಾರ ಎಂಬ ಹೆಸರೇ ಸೂಚಿಸುವಂತೆ ಅರಮನೆಯ ಹೊರಗಿನ ಹೆಬ್ಬಾಗಿಲ ಬಳಿ ರಚಿತವಾಗಿರುವ ಈ ದೇವಾಲಯ ಅರಮನೆಗೆ ಸೇರಿದ ಗುಡಿಯಾಗಿದ್ದಂತೆ ಕಾಣುತ್ತದೆ. ಈ ದೇವಾಲಯವನ್ನು ಕೃಷ್ಣದೇವರಾಯ ಕಟ್ಟಿಸಿದನೆಂದು ಪ್ರತೀತಿ. ಆದರೆ ಗುಡಿಯ ಶಾಸನಗಳು ಮತ್ತು ಅಲ್ಲಿನ ಶಿಲ್ಪಶೈಲಿಯನ್ನು ನೋಡಿದರೆ ಇದು ಕೃಷ್ಣದೇವರಾಯನ ಕಾಲಕ್ಕೂ ಹಿಂದಿನದೆಂದು ತೋರುತ್ತದೆ. ಬಹುಶಃ ಇದು ಇಮ್ಮಡಿ ದೇವರಾಯನ (1422-66) ಕಾಲಕ್ಕೆ ಸೇರಿರಬಹುದು. ಈ ದೇವಾಲಯ ಸ್ಥಾಪಿತವಾಗಿರುವ ಸ್ಥಳದ ವಿಸ್ತೀರ್ಣಕ್ಕೆ ಹೋಲಿಸಿದರೆ ಗಾತ್ರದಲ್ಲಿ ಸಣ್ಣದು; ಇದು ಆಕ್ರಮಿಸಿಕೊಂಡಿರುವ ಸ್ಥಳವೂ ಸ್ವಲ್ಪವೇ. ಇದರ ನಿವೇಶನ ಲಕ್ಷಣ ಮತ್ತು ಅಲಂಕಾರವೈವಿಧ್ಯ ವಿಜಯನಗರ ಸಾಮ್ರಾಜ್ಯದ ಉತ್ತರೋತ್ತರ ಕಾಲದಲ್ಲಿ ಮುಂದುವರಿಯಲ್ಲಿಲ್ಲವೆಂದು ತೋರುತ್ತದೆ. ಸ್ವಲ್ಪ ಎತ್ತರವಾಗಿರುವ ಭಾಗದಲ್ಲಿ ಗರ್ಭಗುಡಿ, ಆರಾಧನಮಂಟಪ ಮತ್ತು ಮುಖಮಂಟಪಗಳಿವೆ; ಅವುಗಳಿಗೆ ಸ್ವಲ್ಪ ತಗ್ಗಿನಲ್ಲಿ ಸಭಾಮಂಟಪವಿದೆ. ಸಭಾಮಂಟಪಕ್ಕೆ ಸೇರಿದಂತೆ ದ್ವಾರ ಮಂಟಪದ ಎರಡು ಚಾಚುಗಳಿದ್ದು, ಒಳಪಾಶ್ರ್ವಗಳಲ್ಲಿ ಪ್ರದಕ್ಷಿಣಾಪಥಕ್ಕೆ ಹೋಗಲು ಅನುಕೂಲವಾದ ಹೊರಬಾಗಿಲುಗಳಿವೆ. ಸಭಾಮಂಟಪದ ಮಧ್ಯ ಅಂಕಣದ ನಯಗೊಳಿಸಿದ ಮತ್ತು ಕಡೆತಸಾಧನದಿಂದ ಸೃಷ್ಟಿಯಾದ ಮನಮೋಹಕ ವಿಗ್ರಹಗಳು ಮತ್ತು ಕೆತ್ತನೆಗಳು ಚಾಳುಕ್ಯ ಶಿಲ್ಪಶೈಲಿಯನ್ನು ಸ್ಮರಣೆಗೆ ತರುತ್ತವೆ. ದೇವಾಲಯದ ಅಗ್ರಮಂಟಪಕ್ಕೆ ಕಿರುಸ್ತಂಭಗಳ ಮೇಲೆ ಜೋಡಿಸಿರುವ ಎತ್ತರವಾದ ಪಾಶ್ರ್ವವೇದಿಕೆಗಳಿವೆ ಹಾಗೂ ಭೂ ಮಟ್ಟದಿಂದ ಎದ್ದಿರುವ ಎತ್ತರವಾದ ಕಂಬಗಳು ಮಂಟಪದ ಮುಂಭಾಗದಲ್ಲಿವೆ. ಈಶಾನ್ಯ ಮೂಲೆಯಲ್ಲಿ ದಕ್ಷಿಣಾಭಿಮುಖವಾಗಿರುವ ಕಲ್ಯಾಣಮಂಟಪ ಸರಳ ಸುಂದರವಾದದ್ದು; ಅದು ಮೂಲ ಗುಡಿಯ ಪ್ರಾಕಾರದ ಗೋಡೆಗಳು ರಚನೆಯಾದಮೇಲೆ ಕಟ್ಟಿದ ಮಂಟಪವೆಂದು ಕಾಣುತ್ತದೆ. ಈ ಮಂಟಪದಲ್ಲಿ ರಾಮಾಯಣ ಮತ್ತು ಇತರ ಪೌರಾಣಿಕ ಕಥೆಗಳ ಘಟನೆಗಳನ್ನು ತೋರಿಸುವ ಉಬ್ಬುಚಿತ್ರಗಳ ಶ್ರೇಣಿಗಳಿವೆ. ಈ ಉಬ್ಬುಶಿಲ್ಪ ಮಹಾನವಮಿ ದಿಬ್ಬದ ತಳವೇದಿಕೆಯ ಉಬ್ಬುಚಿತ್ರ ಶೈಲಿಯನ್ನು ಹೋಲುತ್ತದೆ (ಮಹಾನವಮಿ ದಿಬ್ಬ ಸಹ ಕೃಷ್ಣದೇವರಾಯನ ಕಾಲಕ್ಕೆ ಹಿಂದಿನದು). ಪ್ರಾಕಾರದ ಮೇಲೆ ಧ್ಯಾನಮಂಟಪಗಳು ಯಾವುವೂ ಇಲ್ಲ; ನೈಋತ್ಯ ಮೂಲೆಯಲ್ಲಿ ಮಾತ್ರ ಅಡುಗೆಯ ಕೋಣೆಗಳಿವೆ. ದೇವಾಲಯಕ್ಕೆ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಎರಡು ಗೋಪುರ ದ್ವಾರಗಳಿವೆ. ಸುಂದರವಾಗಿ ಕೆತ್ತಿರುವ ಗೋಡೆಗಂಬಗಳ ಮತ್ತು ಕುಂಭಪಂಜರದ ಅಲಂಕಾರವೈವಿಧ್ಯವನ್ನು ಬಿಟ್ಟರೆ ಗೋಡೆಗಳ ರಚನೆ ಸಾಧಾರಣವಾದದ್ದು. ದೇವಾಲಯದ ಮೇಲ್ಕಟ್ಟಡ ಇಟ್ಟಿಗೆ ಮತ್ತು ನಯಗಾರೆಯಿಂದ ನಿರ್ಮಿತವಾಗಿದೆ. ಪಶ್ಚಿಮದ ಪ್ರಮುಖ ಗೋಪುರಕ್ಕೆ ಸುಖಾಸನವಿದೆ. ಅದು ರಾಜಧಾನಿ ವಿಜಯನಗರದಲ್ಲಿ ರೂಢಿಯಲ್ಲಿದ್ದ ಶೈಲಿಗೆ ಅನುಗುಣವಾದದ್ದು ಹಾಗೂ ದಕ್ಷಿಣದಿಂದ ಪಡೆದುಕೊಂಡ ಕೆಲವೇ ಶಿಲ್ಪಶೈಲಿಗಳಲ್ಲೊಂದು.

ಅಮ್ಮನವರ ಗುಡಿ ಒಂದಷ್ಟುಮಟ್ಟಿಗೆ ವಾಸ್ತುಶಿಲ್ಪವೈಶಿಷ್ಟ್ಯವನ್ನು ಹೊಂದಿದೆ. ಅದರ ಗರ್ಭಗುಡಿಯ ಮುಂದಿರುವ ಮುಖಮಂಟಪದ ಸ್ತಂಭಗಳ ಮೇಲೆ ಅರಸನೊಬ್ಬ ಗುಡಿಯ ಪ್ರಮುಖರಿಗೆ ದಾನ ನೀಡುವ ಹಾಗೂ ಅವರಿಂದ ಕಾಣ್ಕೆ ಸ್ವೀಕರಿಸುವ ದೃಶ್ಯಗಳು ಕೆತ್ತನೆಗೊಂಡಿವೆ. ಪ್ರಮುಖ ದೇವಾಲಯಕ್ಕೆ ಛಾವಣಿಯ ಹೊದಿಕೆಯುಳ್ಳ ಪ್ರದಕ್ಷಿಣಾಪಥ ವಿಲ್ಲ; ವಿಠಲ ಮತ್ತು ಅಚ್ಯುತರಾಯ ದೇವಾಲಯಗಳ ಆಕಾರ ಮತ್ತು ಲಕ್ಷಣಗಳಿಗೆ ಹೋಲಿಸುವಂಥ ಕಲಾತ್ಮಕ ಅಂತರ್ಭಾವವನ್ನು ಅದು ಪ್ರಕಟಿಸುವುದಿಲ್ಲ; ಚಾಳುಕ್ಯ ಶೈಲಿಯ ನಿವೇಶನ ಮತ್ತು ಸ್ತಂಭರಚನೆಯನ್ನು ಹೊಂದಿದೆ. ಹಾಗೂ ಉಬ್ಬುಶಿಲ್ಪದ ಬಗ್ಗೆ ಮಹಾನವಮಿ ದಿಬ್ಬದ ರಚನೆಯ ಪ್ರಥಮ ಹಂತವನ್ನೇ ಹೋಲುತ್ತದೆ. ಈ ಕಾರಣಗಳಿಂದ ಇದು 15ನೆಯ ಶತಮಾನದ ಮಧ್ಯಭಾಗದಲ್ಲಿ ರಚಿತವಾಗಿರಬೇಕು. ಇದು ಇಮ್ಮಡಿ ದೇವರಾಯನ ಕಾಲಕ್ಕೂ ಹಿಂದಿನದೆಂದು ಹೇಳಬಹುದು. ಈ ದೇವಾಲಯ ತನ್ನ ಕಾಲದ ಮತ್ತು ಪ್ರದೇಶದ ಚೊಕ್ಕ ಮಾದರಿಯಾಗಿದೆ. ರಚನೆ ಮತ್ತು ಶಿಲ್ಪವೈವಿಧ್ಯದಲ್ಲಿ ಇದು ವಿಜಯನಗರ ಸಾಮ್ರಾಜ್ಯದ ಪ್ರಾರಂಭಿಕ ಹಂತಕ್ಕೆ ಸೇರಿದ ದೇವಾಲಯ.

ವಿಜಯವಿಠಲ ದೇವಾಲಯ ಬಹುಪಾಲು ನಶಿಸಿ ಹೋಗಿದ್ದರೂ ವಾಸ್ತುಶಿಲ್ಪ ದೃಷ್ಟಿಯಿಂದ ಗಮನ ಸೆಳೆಯುತ್ತದೆ. ಈ ದೇವಾಲಯದ ಸುತ್ತುಮುತ್ತ ಸು. 23ಕ್ಕೂ ಹೆಚ್ಚು ಶಾಸನಗಳು ದೊರೆತಿವೆ. (ಇವುಗಳ ಕಾಲ 1516-64). ಈ ದೇವಾಲಯದ ನಿರ್ಮಾಣವನ್ನು (1513) ಕೃಷ್ಣದೇವರಾಯ ಕೈಗೊಂಡ ವಿಷಯವನ್ನು ಒಂದು ಶಾಸನ ತಿಳಿಸುತ್ತದೆ. ಇನ್ನೊಂದು ಶಾಸನ ಇವನ ಇಬ್ಬರು ರಾಣಿಯರು ಈ ದೇವಾಲಯದ ಗೋಪುರವನ್ನು ಕಟ್ಟಿಸಿದರೆಂದು ತಿಳಿಸುತ್ತದೆ. ಇನ್ನು ಕೆಲವು ಶಾಸನಗಳು ಈ ದೇವಾಲಯದ ನಿರ್ಮಾಣಕಾರ್ಯವನ್ನು ಅಚ್ಯುತರಾಯ, ಸದಾಶಿವರಾಯ ಮುಂದುವರಿಸಿದರೆಂದು ತಿಳಿಸುತ್ತವೆ. ಈ ದೇವಾಲಯದಲ್ಲಿರುವ ಕಲ್ಲಿನ ರಥ ಸುಂದರ ಕೆತ್ತನೆಕೆಲಸದಿಂದ ಕೂಡಿದೆ. ಉಗ್ರನರಸಿಂಹ ಗುಡಿಯಲ್ಲಿರುವ 22 ಅಡಿ ಎತ್ತರದ ನರಸಿಂಹನ ವಿಗ್ರಹ, ಮಹಾನವಮಿ ದಿಬ್ಬ, ಕಮಲ ಮಹಲ್, ಗಜಶಾಲೆ, ದಣಾಯಕ ನಿವಾಸ, ಕಾವಲು ಗೋಪುರ ಈ ಮೊದಲಾದವೂ ನೋಡತಕ್ಕುವಾಗಿವೆ. ವಿಶ್ವಸಂಸ್ಥೆಯು ಪ್ರಪಂಚಾದ್ಯಂತ 800 ವಿಶ್ವ ಪಾರಂಪರಿಕ ಕೇಂದ್ರಗಳನ್ನು ಗುರುತಿಸಿದ್ದು, ಭಾರತದ 26 ಇಂಥ ಕೇಂದ್ರಗಳಲ್ಲಿ ಹಂಪೆಯೂ ಒಂದಾಗಿದೆ. ಪಟ್ಟದಕಲ್ಲು ಇಂಥ ಇನ್ನೊಂದು ಕೇಂದ್ರ. (ಕೆ.ವಿ.ಎಸ್.)