ಹಂಸಲೇಖ (1951- ). ಹಂಸಲೇಖ ಚಲನಚಿತ್ರರಂಗದ ಭಿನ್ನ ಅಭಿರುಚಿ ಆವಶ್ಯಕತೆಗಳಿಗೆ ಅನುಗುಣವಾಗಿ ವೈವಿಧ್ಯಮಯ ಶೈಲಿ ಸಂಗೀತ ನಿರೂಪಿಸುವ ಸಮರ್ಥ ಸಂಗೀತ ನಿರ್ದೇಶಕ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತ. ``ನೀನಾ ಭಗವಂತಾ. . . . . 1973ರಲ್ಲಿ ಈ ಗೀತೆಯನ್ನು ತ್ರಿವೇಣಿ ಚಿತ್ರಕ್ಕಾಗಿ ರಚಿಸುವ ಮೂಲಕ ಕನ್ನಡ ಚಿತ್ರರಂಗದ ಗೀತರಚನಕಾರರಾಗಿ ಚಿತ್ರ ಜಗತ್ತನ್ನು ಪ್ರವೇಶಿಸಿದ ಹಂಸಲೇಖ ಬೆಂಗಳೂರಿನ ಓ.ಟಿ.ಸಿ. ರಸ್ತೆಯಲ್ಲಿನ ಮುದ್ರಣಾಲಯದ ಒಂದರ ಮಾಲೀಕ ಗೋವಿಂದರಾಜು ಅವರ ಮಕ್ಕಳು. 1951ರಲ್ಲಿ ಜನಿಸಿದ ಇವರ ಮೂಲ ನಾಮಧೇಯ ಜಿ. ಗಂಗರಾಜು. ಸಂಗೀತದ ಬಗೆಗಿನ ಆಸಕ್ತಿ ಮತ್ತು ಜ್ಞಾನ ಅವರಿಗೆ ತಂದೆ ತಾಯಿಗಳಿಂದ ಆನುವಂಶೀಯವಾಗಿ ಬಂದ ಆಸ್ತಿ. ಬಾಲ್ಯದಿಂದಲೇ ಶಾಲಾ ಶಿಕ್ಷಣಕ್ಕಿಂತ ಸಂಗೀತದಲ್ಲೇ ಹೆಚ್ಚು ಪ್ರೀತಿ ಬೆಳೆಯಿತು. ಸೋದರರಾದ ಬಾಲಕೃಷ್ಣ, ಗುಂಡಣ್ಣ, ಹಂಸಲೇಖ ಇವರೆಲ್ಲರಿಗೂ ಸಂಗೀತದ ಗೀಳು. ಸೋದರ ಬಾಲಕೃಷ್ಣ ಅವರ ವಾದ್ಯಗೋಷ್ಠಿಯಲ್ಲಿ ವಿವಿಧ ವಾದ್ಯಗಳನ್ನು ನುಡಿಸುತ್ತಿದ್ದರು. ಎಸ್.ಕೆ.ಜೋಸೆಫ್ ಇವರ ಕರ್ನಾಟಕ ಸಂಗೀತದ ಗುರು. ಹಿಂದೂಸ್ಥಾನಿ ಮತ್ತು ಪಾಶ್ಚಾತ್ಯ ಸಂಗೀತ ಶೈಲಿಗಳನ್ನು ಅವರು ವಿವಿಧ ಗುರುಗಳಿಂದ ಕಲಿತರು. ತಮ್ಮ ಸ್ವಂತ ಸಾಧನೆಯಿಂದ ಬೆಳಸಿಕೊಂಡರು. ಇವರದೇ ವಾದ್ಯಗೋಷ್ಠಿ ಇತ್ತು. ಆಗ ಸಂಗೀತ ಹವ್ಯಾಸ- ತಂದೆಯ ಮುದ್ರಣಾಲಯದ ಕೆಲಸ ವೃತ್ತಿ ಆಗಿತ್ತು. ಹಂಸಲೇಖ ರಚನೆಯ ``ನೀನಾ ಭಗವಂತಾ. . . . ಗೀತೆಯನ್ನು ಹಾಡಿದವರು ಸೋದರ ಬಾಲಕೃಷ್ಣ. ಆ ಹಾಡು ಅಪಾರ ಜನಪ್ರಿಯತೆ ಪಡೆದರೂ ಮತ್ತೆ ಬರೆಯಲು ಅವಕಾಶ ಸಿಗಬೇಕಾದರೆ ಹಲವು ವರ್ಷಗಳೇ ಬೇಕಾದವು. ವಿವೇಕರಂಗ ಎಂಬ ನಾಟಕ ತಂಡ ಕಟ್ಟಿ ಹಲವು ಸಂಗೀತ ರೂಪಕಗಳನ್ನು ಪ್ರಯೋಗಗಳನ್ನು ಮಾಡಿದ ಹಂಸಲೇಖ 1984ರಲ್ಲಿ `ರಾಹುಚಂದ್ರ ಚಿತ್ರಕ್ಕೆ ತಾವೇ ಹಾಡುಗಳನ್ನು ಬರೆದೂ ಸಂಗೀತ ನಿರ್ದೇಶಿಸಿದರು. ಆ ಚಿತ್ರ ಬಿಡುಗಡೆ ಕಾಣಲಿಲ್ಲ. ``ನಾನು ನನ್ನ ಹೆಂಡ್ತಿ (1985) ಚಿತ್ರದ ಸಂಭಾಷಣೆ ಹಾಗೂ ಗೀತೆಗಳ ರಚಿಸುವ ಮೂಲಕ ಚಿತ್ರರಂಗದಲ್ಲಿ ಮರುಪ್ರವೇಶ ಮಾಡಿದ ಹಂಸಲೇಖ, ಈಶ್ವರಿ ಸಂಸ್ಥೆಯ ರವಿಚಂದ್ರನ್ ಅವರ ``ಪ್ರೇಮಲೋಕ (1987) ಚಿತ್ರಕ್ಕೆ ಹೊಸ ಧಾಟಿಯಲ್ಲಿ ಸಂಗೀತ-ಸಾಹಿತ್ಯ ರೂಪಿಸಿದರು. ಎಂಭತ್ತರ ದಶಕದ ``ಪ್ರೇಮಲೋಕ ಅತ್ಯಂತ ಯಶಸ್ವೀ ಚಿತ್ರವೆನಿಸಿತು. ಈ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ಗೀತರೂಪದಲ್ಲಿ ಬಿಂಬಿಸಿದ್ದು ಗಮನಾರ್ಹ. ಅದು ಹಂಸಲೇಖ ಅವರ ಖ್ಯಾತಿಯ ಯಶಸ್ಸಿನ ಸೋಪಾನವಾಯಿತು. ಅವಳೇ ನನ್ನ ಹೆಂಡ್ತಿ (1988) ಅಪೂರ್ವ ಯಶಸ್ಸು ಗಳಿಸಿದ ಚಿತ್ರ. ಹಂಸಲೇಖ ರೂಪಿಸಿದ ಸಂಗೀತ ಚಿತ್ರಕತೆ, ಸಂಭಾಷಣೆ ಅದರ ಯಶಸ್ಸಿಗೆ ಬುನಾದಿ. ಚಿತ್ರರಂಗದೊಂದಿಗೆ ಬೆಳೆದ 30 ವರ್ಷಗಳ ನಂಟು. ಈ ಅವಧಿಯಲ್ಲಿ ಹಂಸಲೇಖ 300 ಚಿತ್ರಗಳಿಗೆ ಗೀತೆ ಬರೆದಿದ್ದಾರೆ. ಸಂಗೀತ ನಿರ್ದೇಶಕರಾಗಿದ್ದಾರೆ.

ಹಂಸಲೇಖ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಹಲವು ದಾಖಲೆಗಳನ್ನೂ ಸೃಷ್ಟಿಸಿದವರು. ಕ್ಯಾಸೆಟ್ ಜಗತ್ತಿನಲ್ಲಿ ಹೊಸ ಪರಂಪರೆಯ ಹರಿಕಾರರಾದರು. ರವಿಚಂದ್ರನ್ ನಾಯಕರಾಗಿ ನಟಿಸಿದ ಬಹುತೇಕ ಚಿತ್ರಗಳ ಸಂಗೀತ-ಸಾಹಿತ್ಯ ಇವರದು. 1994-95ನೇ ಸಾಲಿನಲ್ಲಿ `ಹಾಲುಂಡ ತವರು ಚಿತ್ರದ ಸಂಗೀತ ನಿರ್ದೇಶನ ಹಾಗೂ ಅದೇ ಚಿತ್ರದ ಗೀತರಚನೆಗಾಗಿ ರಾಜ್ಯಸರ್ಕಾರದ ಪ್ರಶಸ್ತಿ ಪಡೆದರು. 1995-96ನೇ ಸಾಲಿನಲ್ಲಿ ``ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿ ಪಡೆದರು. 1998-99ರಲ್ಲಿ ``ಟುವ್ವಿ ಟುವ್ವಿ ಟುವ್ವಿ ಚಿತ್ರದ ಸಂಗೀತ. ಸಂಯೋಜನೆಗೆ ರಾಜ್ಯ ಪ್ರಶಸ್ತಿ ಲಭಿಸಿತು.

ಶಾಂತಿ-ಕ್ರಾಂತಿ (1990) ರಾಮಾಚಾರಿ (1991), ಆಕಸ್ಮಿಕ (1995), ಯಾರೆ ನೀನು ಚಲುವೆ (1998), ಪ್ರೀತ್ಸೆ (2000) ಇವುಗಳ ಸಂಗೀತಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ದೊರೆತಿದೆ. ಏಕಪಾತ್ರಾಭಿನಯದ ಚಿತ್ರವೆಂದು ಗಿನ್ನಿಸ್ ವಿಶ್ವ ದಾಖಲೆ ಪಡೆದ ಶಾಂತಿ ಚಿತ್ರದ ಸಂಗೀತ ನಿರ್ದೇಶಕರು. ಶ್ರೀ ಮಂಜುನಾಥ (1999) ಚಿತ್ರದ ಗೀತೆ ಲೇಖಕರಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ಪದ್ಧತಿ, ಪಾಶ್ಚಾತ್ಯ ಮತ್ತು ಜಾನಪದ ಪ್ರಕಾರಗಳ ಅಧ್ಯಯನಕ್ಕೆ ಪೂರಕವಾದ ಪಠ್ಯಕ್ರಮವೊಂದನ್ನು ಸಿದ್ಧ ಪಡಿಸಿದ್ದಾರೆ. ಜಾನಪದ ಗೀತೆಗಳ ಸಂಗ್ರಹ, ಅವುಗಳಿಗೆ ಸ್ವರ ಪ್ರಸ್ತಾರ ಹಾಕುವುದು ಅವರು ಬೆಳೆಸಿಕೊಂಡಿರುವ ಹವ್ಯಾಸ. ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಮಕ್ಕಳಿಗಾಗಿ ದೇಸಿ ಪ್ರೌಢಶಾಲೆ ಆರಂಭಿಸಿದ್ದಾರೆ. ನೃತ್ಯ, ಸಂಗೀತದ ಮೂಲಕ ಶಿಕ್ಷಣ ನೀಡುತ್ತಿರುವ ಪ್ರಯೋಗ ಇಲ್ಲಿ ಯಶಸ್ವಿಯಾಗಿದೆ. ಸಂಗೀತ ನಿರ್ದೇಶ ನೀಡಿರುವುದಾಗಿ ಹೇಳುತ್ತಾರೆ.

ಹಂಸಲೇಖ ಅವರ ಪತ್ನಿ ಲತಾ ಅವರೂ ಅತ್ಯುತ್ತಮ ಗಾಯಕಿ. ರಾಜ್ಯ ಪ್ರಶಸ್ತಿ ಪುರಸ್ಕøತೆ. ಅನೇಕ ಹೊಸಗಾಯಕರು, ಸಂಗೀತ ಪಟುಗಳು ಹಾಗೂ ಸಂಗೀತ ಗೋಷ್ಠಿ ನಿರ್ವಾಹಕರನ್ನೂ ಪ್ರೋತ್ಸಾಹಿಸುತ್ತಾ ಬಂದಿರುವ `ಹಂಸಲೇಖ' ತಮ್ಮದೇ ಆದ ರೆಕಾರ್ಡಿಂಗ್ ಸ್ಟುಡಿಯೋ ಒಂದನ್ನೂ ಆರಂಭಿಸಿದ್ದಾರೆ.

(ಶ್ರೀಕೃಪಾ; ಎಂ.ಬಿ.ಎಸ್)