ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿ ಭಾರತದ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಗದಗ ಮತ್ತು ಕೊಪ್ಪಳ ಜಿಲ್ಲೆಗಳು, ದಾವಣಗೆರೆ ಜಿಲ್ಲೆಯ ಪೂರ್ವದಲ್ಲಿ ಹೊಸಪೇಟೆ ಮತ್ತು ಕೂಡ್ಲಿಗಿ ತಾಲ್ಲೂಕುಗಳೂ ದಕ್ಷಿಣದಲ್ಲಿ ಹರಪನಹಳ್ಳಿ ತಾಲ್ಲೂಕೂ ಪಶ್ಚಿಮದಲ್ಲಿ ಹಡಗಲಿ ತಾಲ್ಲೂಕೂ ಸುತ್ತುವರಿದಿವೆ. ಹಗರಿಬೊಮ್ಮನಹಳ್ಳಿ ಮೊದಲು ಹಡಗಲಿ ತಾಲ್ಲೂಕಿನ ಒಂದು ಹೋಬಳಿ ಕೇಂದ್ರವಾಗಿತ್ತು. ಅನಂತರ ಕೂಡ್ಲಿಗಿ ತಾಲ್ಲೂಕಿನಿಂದ 13 ಗ್ರಾಮಗಳನ್ನೂ ಹಡಗಲಿ ತಾಲ್ಲೂಕಿನಿಂದ 22 ಗ್ರಾಮಗಳನ್ನೂ ಮಲ್ಲಾಪುರ ತಾಲ್ಲೂಕಿನಿಂದ 20 ಗ್ರಾಮಗಳನ್ನೂ ತೆಗೆದುಕೊಂಡು ಮಲ್ಲಾಪುರ ತಾಲ್ಲೂಕಿನ ಬದಲು ಹಗರಿಬೊಮ್ಮನಹಳ್ಳಿಯನ್ನು ಕೇಂದ್ರವಾಗುಳ್ಳ ಈ ತಾಲ್ಲೂಕನ್ನು ರಚಿಸಲಾಯಿತು. ಹಂಪಸಾಗರ (ಹಂಪಾಪಟ್ಟಣ), ಮಾಳವಿ, ಹಗರಿಬೊಮ್ಮನಹಳ್ಳಿ, ತಾಂಬ್ರಹಳ್ಳಿ ಹೋಬಳಿಗಳು. ಒಟ್ಟು 55 ಗ್ರಾಮಗಳೂ ಒಂದು ಪಟ್ಟಣವೂ ಇದೆ. ತಾಲ್ಲೂಕಿನ ವಿಸ್ತೀರ್ಣ 977 ಚ.ಕಿಮೀ. ಜನಸಂಖ್ಯೆ 1,59,900.

ತಾಲ್ಲೂಕಿನ ಉತ್ತರದಲ್ಲಿ ತುಂಗಭದ್ರಾ ನದಿ ಮತ್ತು ತುಂಗಭದ್ರಾ ಜಲಾಶಯದ ಹಿನ್ನೀರು ಹರಡಿದ್ದು ತಾಲ್ಲೂಕು ಗಡಿಯಾಗಿ ಗದಗ ಮತ್ತು ಕೊಪ್ಪಳ ಜಿಲ್ಲೆಗಳನ್ನು ಈ ತಾಲ್ಲೂಕಿನಿಂದ ಬೇರ್ಪಡಿಸಿದೆ. ಚಿಕ್ಕಹಗರಿ ಈ ತಾಲ್ಲೂಕಿನ ಮುಖ್ಯ ನದಿ. ತಾಲ್ಲೂಕಿನ ದಕ್ಷಿಣದಿಂದ ಉತ್ತರಾಭಿಮುಖವಾಗಿ ಹರಿದು ತುಂಗಭದ್ರಾ ನದಿಯನ್ನು ಸೇರಿಕೊಳ್ಳುತ್ತದೆ. ಸಾಮಾನ್ಯ ಮಳೆಯಾಗುವ ಈ ತಾಲ್ಲೂಕಿನ ವ್ಯವಸಾಯಕ್ಕೆ ಅನುಕೂಲವಾಗಲು ಚಿಕ್ಕಹಗರಿ ನದಿಗೆ ಹಗರಿಬೊಮ್ಮನಹಳ್ಳಿಯ ದಕ್ಷಿಣಕ್ಕೆ 4 ಕಿಮೀ ದೂರದಲ್ಲೂ ಮಾಳವಿಯ ನೈಋತ್ಯಕ್ಕೆ ಸುಮಾರು ಅರ್ಧಮೈಲಿ ದೂರದಲ್ಲೂ ಕಟ್ಟೆ ಕಟ್ಟಿ ಹಗರಿಬೊಮ್ಮನಹಳ್ಳಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಜಲಾಶಯದ ಎರಡು ನಾಲೆಗಳಿಂದ ಸು.7,350 ಎಕರೆಗಳಿಗೆ ನೀರೊದಗುತ್ತದೆ. ಈ ತಾಲ್ಲೂಕಿನಲ್ಲಿ ಕಪ್ಪುಮಣ್ಣಿನ ಭೂಮಿ ಹೆಚ್ಚಿದ್ದು ಮರಳುಗಲ್ಲಿನ ಕೆಂಪು ಭೂಮಿಯೂ ಕಂಡುಬರುವುದು. ಜೋಳ, ಕಬ್ಬು, ಬತ್ತ, ಸೇಂಗಾ, ಹತ್ತಿ, ಮೆಣಸಿನಕಾಯಿ ಮುಖ್ಯ ಬೆಳೆಗಳು. ಪಶುಪಾಲನೆ ಹಾಗೂ ಮತ್ಸ್ಯೋದ್ಯಮವಿದೆ. ಈ ತಾಲ್ಲೂಕಿನಲ್ಲಿ ಅನೇಕ ಎಣ್ಣೆ ಕಾರ್ಖಾನೆಗಳಿದ್ದು, ತೈಲೋತ್ಪತ್ತಿ ಒಂದು ಮುಖ್ಯ ಕೈಗಾರಿಕೆ. ತಾಲ್ಲೂಕಿನಲ್ಲಿ ಕೊಟ್ಟೂರು-ಹೊಸಪೇಟೆ ರೈಲುಮಾರ್ಗ ಹಾದು ಹೋಗಿದೆ.

ಹಗರಿಬೊಮ್ಮನಹಳ್ಳಿಯ ಈಶಾನ್ಯಕ್ಕೆ ತುಂಗಭದ್ರಾನದಿಯ ಬಲದಂಡೆಯ ಕಡೆಗಿರುವ ಹಂಪಾಪಟ್ಟಣ ಗ್ರಾಮ ಕೈಮಗ್ಗದ ಬಟ್ಟೆಗೆ ಪ್ರಸಿದ್ಧ. ಹಗರಿಬೊಮ್ಮನಹಳ್ಳಿಯ ದಕ್ಷಿಣಕ್ಕಿರುವ ಕೋಗಳಿ ಗ್ರಾಮ ಹಿಂದೆ ನೊಳಂಬವಾಡಿ 32,000ದ ಒಂದು ಭಾಗವಾಗಿದ್ದು ಕೋಗಳಿ 500 ಎಂದು ಹೆಸರಾಗಿತ್ತು. ಇಲ್ಲಿರುವ ಜೈನ ದೇವಾಲಯದಲ್ಲಿ ತೀರ್ಥಂಕರ ವಿಗ್ರಹವಿದೆ. ದೇವಾಲಯದ ಒಳಗೆ ಮತ್ತು ಹತ್ತಿರದಲ್ಲಿ ಕೆಲವು ಶಾಸನಗಳಿವೆ. ಕೋಗಳಿಯಲ್ಲಿ ಚಾಳುಕ್ಯ, ಹೊಯ್ಸಳ ಮತ್ತು ವಿಜಯನಗರ ಕಾಲದ ಕೆಲವು ಶಾಸನಗಳಿವೆ. ಹಗರಿಬೊಮ್ಮನಹಳ್ಳಿಗೆ ವಾಯವ್ಯದಲ್ಲಿ ತುಂಗಭದ್ರಾ ನದಿಯ ಬಲದಂಡೆಯಲ್ಲಿರುವ ತಾಂಬ್ರಹಳ್ಳಿಯಲ್ಲಿ ಸು. 300 ವರ್ಷಗಳ ಹಿಂದೆ ಕಟ್ಟಿದ ರಂಗನಾಥ ದೇವಾಲಯವಿದೆ. ಇಲ್ಲಿ ಆದಿಶೇಷನ ಮೇಲೆ ಒರಗಿರುವ ನಾರಾಯಣನ ಮೂರ್ತಿ ಇದ್ದು ಅದರ ಪಕ್ಕದಲ್ಲಿ ಶಿವಲಿಂಗವಿದೆ.

ಹಗರಿಬೊಮ್ಮನಹಳ್ಳಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಮುಖ್ಯ ಪಟ್ಟಣ. ಹರಪನಹಳ್ಳಿ-ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ಹಡಗಲಿಯ ಪೂರ್ವಕ್ಕೆ 40 ಕಿಮೀ ದೂರದಲ್ಲಿದೆ. ತುಂಗಭದ್ರಾ ಅಣೆಕಟ್ಟಿನಿಂದ ಮುಳುಗಡೆಯಾದ ಗ್ರಾಮಗಳ ಜನರಿಗೆ ಹಗರಿಬೊಮ್ಮನ ಹಳ್ಳಿಯಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಯಿತು. ಇಲ್ಲಿ ಅನೇಕ ಎಣ್ಣೆ ಕಾರ್ಖಾನೆಗಳಿವೆ. ಹಗರಿಬೊಮ್ಮನಹಳ್ಳಿ ಜಲಾಶಯ ಇಲ್ಲಿಗೆ 4 ಕಿಮೀ ದೂರದಲ್ಲಿದೆ. ಇದು ಹೊಸಪೇಟೆ-ಕೊಟ್ಟೂರು ನಡುವಣ ಒಂದು ರೈಲ್ವೆ ನಿಲ್ದಾಣ.

(ವಿ.ಜಿ.ಕೆ.)