ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಟನ್, ಜೇಮ್ಸ್‌

ಹಟನ್, ಜೇಮ್ಸ್

	1726-97. ಸ್ಕಾಟ್ಲೆಂಡಿನ ಭೂವಿಜ್ಞಾನಿ. ಎಡಿನ್ ಬರೋದಲ್ಲಿ 1726 ಜೂನ್ 3ರಂದು ಜನಿಸಿದ. ಇನ್ನೂ ಕಿರಿಯವನಾಗಿದ್ದಾಗಲೇ ಈತನ ತಂದೆ ತೀರಿಕೊಂಡದ್ದರಿಂದ ಅದೇ ಊರಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಪದವಿ ಗಳಿಸಿ ವಕೀಲನ ಕಚೇರಿಯಲ್ಲಿ ಸಹಾಯಕನಾಗಿ ಉದ್ಯೋಗ ಹಿಡಿದ. ಸ್ವಲ್ಪ ಕಾಲಾನಂತರ ವೈದ್ಯಕೀಯ ಅಧ್ಯಯನದ ಸಲುವಾಗಿ ಎಡಿನ್‍ಬರೋ ವಿಶ್ವವಿದ್ಯಾಲಯ ಸೇರಿದ. ಮುಂದೆ ಈ ಶಾಸ್ತ್ರದ ಉನ್ನತ ವ್ಯಾಸಂಗಕ್ಕಾಗಿ ಪ್ಯಾರಿಸ್‍ಗೆ ತೆರಳಿದ. 1749ರಲ್ಲಿ ಲೇಡನ್‍ನಗರದ ವೈದ್ಯಕೀಯ ಕಾಲೇಜಿನ ಪದವೀಧರನಾದ. ಆದರೆ ವೈದ್ಯವೃತ್ತಿಯ ಅವಲಂಬನೆ ಇವನಿಗೆ ಅಷ್ಟಾಗಿ ರುಚಿಸಲಿಲ್ಲ.

ಕೊಂಚಕಾಲ ಜೇಮ್ಸ್ ಡೇವಿ ಎಂಬಾತನ ಜೊತೆ ಸೇರಿ ಸಾಲ್ ಅಮೋನಿಯಕ್ ತಯಾರಿಕೆಯನ್ನು ಪ್ರಾರಂಭಿಸಿ ಹೆಚ್ಚು ಹಣ ಗಳಿಸಿದ. ಮುಂದೆ 1752ರ ವೇಳೆಗೆ ನಾರ್‍ಘೋಕ್‍ನ ಬೇಸಾಯಗಾರನೊಬ್ಬನ ಮನೆಯಲ್ಲಿ ತಂಗಿ ವ್ಯವಸಾಯದಲ್ಲಿ ಹೆಚ್ಚಿನ ಪರಿಶ್ರಮ ಪಡೆದ. ಬಹುಶ: ಈ ಕಾಲದಲ್ಲೇ ಇವನಲ್ಲಿ ಸುಪ್ತವಾಗಿದ್ದ ಭೂವಿಜ್ಞಾನಪ್ರಿಯತೆ ಬೆಳಕಿಗೆ ಬಂದಿರಬೇಕು. ಇದಕ್ಕೆ ಮುಖ್ಯ ಪ್ರೇರಣೆ ಇವನು ವಾಸಿಸುತ್ತಿದ್ದ ಪೂರ್ವ ಆಂಗ್ಲಿಯದ ಸುಣ್ಣಶಿಲೆಯ ಅಸಂಖ್ಯಾತ ಗುಡ್ಡಗಳು, ಜೇಡುಶಿಲಾ ಪ್ರಸ್ತರಗಳು ಮತ್ತು ಕಾರ್‍ಶಿಲಾಪ್ರಸ್ತರಗಳು. ಇವುಗಳ ಅಭ್ಯಾಸವನ್ನು ಸಮರ್ಪಕವಾಗಿ ನಡೆಸಿದ. ಇದಾದ ಮೇಲೆ ಫ್ಲಾಂಡರ್ಸ್ ಪ್ರಾಂತದಲ್ಲಿ ಪ್ರವಾಸ ಮಾಡುತ್ತಿದ್ದಾಗ ಹಾದಿಯಲ್ಲಿ ದೊರೆತ ಶಿಲೆಗಳನ್ನೂ ಖನಿಜಗಳನ್ನೂ ವಿವರವಾಗಿ ಪರಿಶೀಲಿಸಿದ. ಬೆರವಿಕ್‍ಷೈರಿನಲ್ಲಿದ್ದ ತನ್ನ ಹಿರಿಯರ ಜಮೀನುಗಳಲ್ಲಿ ಆಧುನಿಕ ರೀತಿಯಲ್ಲಿ ಬೇಸಾಯ ಮಾಡತೊಡಗಿದ (1754). ಸು. 14 ವರ್ಷ ಈ ವೃತ್ತಿಯೇ ಆಯಿತು. 1768ರಲ್ಲಿ ಹಳ್ಳಿಗಾಡನ್ನು ಬಿಟ್ಟು ಎಡಿನ್‍ಬರೋನಗರಕ್ಕೆ ತೆರಳಿ ಅಲ್ಲಿ ವಿಶೇಷ ರೀತಿಯಲ್ಲಿ ಪುಸ್ತಕಗಳ ಅಧ್ಯಯನ ಮತ್ತು ವೈಜ್ಞಾನಿಕ ತತ್ತ್ವಗಳ ಚಿಂತನೆ ಮಾಡಿದ. ಬಹುಶ: ಗಣಿತವಿಜ್ಞಾನ ಹೊರತು ಮಿಕ್ಕೆಲ್ಲ ವಿಭಾಗಗಳ ಅಭ್ಯಾಸಗೈದು ಅನೇಕ ಹೊಸ ವಿಷಯಗಳನ್ನು ಕಂಡು ಕೊಂಡ. ಮಳೆ ಕುರಿತು ತನ್ನದೇ ಆದ ಒಂದು ವಾದವನ್ನು ಮುಂದಿಟ್ಟ.

ಸಂಜೆ ವಿಹಾರಾರ್ಥವಾಗಿ ನಗರದ ಯಾವ ದಿಕ್ಕಿನಲ್ಲಿ ಹೋದರೂ ಈತನ ವೈಜ್ಞಾನಿಕ ಮನೋಧರ್ಮಕ್ಕೆ ಸುತ್ತಲಿನ ವಾತಾವರಣ ಪ್ರೇರಕವಾಗಿತ್ತು. ಪೂರ್ವಾಭಿಮುಖವಾಗಿ ಹೋದಾಗ ಜ್ವಾಲಾಮುಖಿಜ ಶಿಲಾಸ್ತೋಮದಿಂದ ಕೂಡಿದ ಆರ್ಥರ್ಸ್ ಸೀಟ್ ಮತ್ತು ಸ್ಯಾಲಿಸ್ ಬರಿಕ್ರ್ಯಾಗ್ಸ್ ಇವನ ಗಮನ ಸೆಳೆಯುತ್ತಿದ್ದುವು. ಪಶ್ಚಿಮದತ್ತ ಅಡ್ಡಾಡ ಹೋದಾಗ ಲೀತ್ ನದಿಯ ಇಕ್ಕೆಲಗಳಲ್ಲೂ ಹರಡಿದ್ದ ಕಾರ್ಬಾನಿಫೆರಸ್ ಯುಗದ ಶಿಲಾಸ್ತೋಮ ಇವನನ್ನು ಆಕರ್ಷಿಸುತ್ತಿತ್ತು. ಹೀಗಾಗಿ ಭೂವಿಜ್ಞಾನಕ್ಕೆ ಇವನ ಮನಸ್ಸು ಸಂಪೂರ್ಣವಾಗಿ ಮಾರುಹೋಯಿತು.

ಇವುಗಳಿಂದ ಉತ್ತೇಜಿತನಾಗಿ ಪ್ರಕೃತಿಯನ್ನು ಇನ್ನೂ ಚೆನ್ನಾಗಿ ಅರಿತುಕೊಳ್ಳಲು ಇಂಗ್ಲೆಂಡ್, ವೇಲ್ಸ್ ಮುಂತಾದ ಪ್ರಾಂತಗಳಿಗೆ ಭೇಟಿಕೊಟ್ಟು ಅಲ್ಲಿಯ ವಿವಿಧ ಶಿಲೆಗಳನ್ನು ಅತ್ಯಂತ ಕುತೂಹಲದಿಂದ ಪರಿಶೀಲಿಸಿದ. ಇವು ಹೇಗೆ ರೂಪಿತವಾಗಿರಬಹುದೆಂಬುದನ್ನು ಕುರಿತು ಚಿಂತನೆ ಮಾಡತೊಡಗಿದ. ರಾಯಲ್ ಸೊಸೈಟಿ ಆಫ್ ಎಡಿನ್‍ಬರೋ ಎಂಬ ಸಂಸ್ಥೆಯ ಮೊತ್ತಮೊದಲ ಕಾರ್ಯಕ್ರಮಗಳಲ್ಲಿ ಭೂಮಿಯ ವಿಷಯವಾಗಿ ತಾನು ನಡೆಸಿದ ಪರಿಶೋಧನೆಗಳನ್ನು ಕುರಿತು ಉಪನ್ಯಾಸ ಮಾಡಿದ. ಇವನು ಪ್ರತಿಪಾದಿಸಿದ ಮುಖ್ಯತತ್ತ್ವ: ಭೂಗೋಳದಲ್ಲಿ ಅಧಿಕಶಾಖವಿದೆ; ಇದರ ಪರಿಣಾಮವಾಗಿ ಒಳಗೆ ಹುದುಗಿರುವ ಶಾಖದಿಂದ ಶಿಲಾದ್ರವ ಭೂಚರಿತ್ರೆಯ ನಾನಾ ಹಂತಗಳಲ್ಲಿ ಹೊರಬಂದು ಕ್ರಮೇಣ ಅರಿ ತಣ್ಣಗಾಗಿ ವಿವಿಧ ಶಿಲೆಗಳನ್ನುಂಟುಮಾಡಿದೆ. ಈ ಪ್ರತಿಪಾದನೆಯನ್ನು ಅನೇಕ ಉದಾಹರಣೆಗಳ ಮೂಲಕ ಸಮರ್ಥಿಸಿದ. ಇದು ಆಗ ಪ್ರಚಾರದಲ್ಲಿದ್ದ ವರ್ನರ್‍ನವಾದಕ್ಕೆ ತೀರ ವಿರುದ್ಧವಾಗಿತ್ತು.

(ನೋಡಿ- ವರ್ನರ್,-ಏಬ್ರಹಾಮ್-ಗಾಟ್ಲಾಬ್)

ಈ ಬಗೆಯ ಅಗ್ನಿಶಿಲೆಗಳಲ್ಲದೆ ಜಲಜಶಿಲೆಗಳೆಂಬ ಮತ್ತೊಂದು ವರ್ಗವೂ ಇದೆ. ಸಾಗರ ತಳದಲ್ಲಿ ಶಿಲಾಕಣಗಳ ಶೇಖರಣೆಯೇ ಇವುಗಳಿಗೆ ಮೂಲ. ಅನೇಕ ಬಾರಿ ಶೇಖರಣೆಯಲ್ಲಿ ತಡೆಯುಂಟಾಗಿ ಹೊಸ ತೆರನಾದ ವರ್ಗಗಳು ಕಾಣಿಸಿಕೊಳ್ಳುತ್ತವೆ. ಎರಡು ವರ್ಗಗಳ ನಡುವೆ ತೋರುವ ವಿಳಂಬವೇ ಯುಗಾಂತ ವಿಳಂಬ ಅಥವಾ ಸಂಚಯನ ವಿಳಂಬ. ಇವುಗಳ ಸಹಾಯದಿಂದ ಭೂಚರಿತ್ರೆಯ ವಿವಿಧ ಯುಗಗಳನ್ನು ಸುಲಭವಾಗಿ ಗುರುತಿಸಬಹುದೆಂದು ಈತ ವಿವರಿಸಿದ.

ಅಲ್ಲದೆ ಅಗ್ನಿಶಿಲೆಯನ್ನು ವ್ಹಿನ್‍ಸ್ಟೋನ್, ಪಾರ್ಫಿರಿ ಮತ್ತು ಗ್ರ್ಯಾನೈಟ್ ಎಂದು ಮೂರು ವರ್ಗಗಳಾಗಿ ವಿಭಾಗಿಸಿದೆ. ಇಂದಿಗೂ ಅಗ್ನಿಶಿಲೆಗಳನ್ನು ಅನುಕ್ರಮವಾಗಿ ವಾಲ್ಕ್ಯಾನಿಕ್, ಹೈಪಬಿಸಲ್ ಮತ್ತು ಪ್ಲೂಟಾನಿಕ್ ಎಂದು ಮೂರು ಗುಂಪಾಗಿ ವಿಭಾಗಿಸಿದ್ದಾರೆಂಬುದನ್ನು ನೆನಪಿನಲ್ಲಿಡಬೇಕು. ಇವನಿಗಿಂತ ಮುಂಚೆ ಅಗ್ನಿಶಿಲೆಗಳ ವರ್ಗೀಕರಣವೇ ಇರಲಿಲ್ಲ. ಅಲ್ಲದೆ ಎಲ್ಲ ಶಿಲೆಗಳೂ ಜಲಜ ಶಿಲೆಗಳೆಂಬ ಈತನ ವಾದ ತುಂಬ ಜನಪ್ರಿಯವಾಗಿತ್ತು.

ಅಗ್ನಿಶಿಲೆ ಮತ್ತು ಜಲಜಶಿಲೆಗಳಲ್ಲದೆ ಮತ್ತೊಂದು ಮುಖ್ಯವರ್ಗದ ರೂಪಾಂತರ ಶಿಲೆಗಳನ್ನೂ ಈತ ವಿವೇಚಿಸಿದ್ದಾನೆ. ಹೀಗೆ ಭೂವಿಜ್ಞಾನದ ಮೂಲಭೂತ ತತ್ತ್ವಗಳ ಪ್ರಥಮ ಪ್ರತಿಪಾದಕನೀತ.

(ಬಿ.ವಿ.ಜಿ.)