ಹಡಗು

		ಜಲರಾಶಿಯ ಮೇಲೆ ತೇಲುವ, ಮುಖ್ಯವಾಗಿ ಸಾಗರಯಾನಕ್ಕೆ ಬಳಸುವ ಮಾನವನಿರ್ಮಿತ ಸೌಕರ್ಯ (ಶಿಪ್). ನೌಕೆ, ದೋಣಿ, ಜಹಜು ಮುಂತಾದವು ಪರ್ಯಾಯ ಪದಗಳು. ಪ್ರಸ್ತುತ ಲೇಖನದಲ್ಲಿ ಸೇನಾ ಮತ್ತು ಕ್ರೀಡಾನೌಕೆಗಳನ್ನು ಹೊರತುಪಡಿಸಿ  ಸಾಗರಯಾನ ಮಾಡಬಲ್ಲ ಇತರ ಹಡಗುಗಳನ್ನು ಹಲವು ಗುಂಪುಗಳಲ್ಲಿ ವಿಂಗಡಿಸಿ ವಿವರಿಸಿದೆ.

1. ಪ್ರಯಾಣಿಕರ ಹಡಗುಗಳು 2. ಸರಕು ಸಾಗಣೆ ಹಡಗುಗಳು 3. ಔದ್ಯಮಿಕ ಹಡಗುಗಳು ಮತ್ತು 4. ವಾಣಿಜ್ಯೇತರ ವಿವಿಧೋದ್ದೇಶ ಹಡಗುಗಳು

		1. ಪ್ರಯಾಣಿಕರ ಹಡಗುಗಳು: ಇವನ್ನು ವಿಹಾರದ ಹಡಗುಗಳು (ಕ್ರೂೈಸ್ ಶಿಪ್ಸ್) ಮತ್ತು ಕಡವಿನ ಹಡಗುಗಳು (ಫೆರಿಯರ್ಸ್) ಎಂದು ವಿಭಾಗಿಸಬಹುದು. 20ನೆಯ ಶತಮಾನದ ಮಧ್ಯಭಾಗದ ತನಕ ಖಂಡಾಂತರ ಪ್ರಯಾಣಕ್ಕೆ ಹಡಗೇ ಪ್ರಮುಖ ಯಾನಸಾಧನವಾಗಿತ್ತು. ಈ ಕಾರಣದಿಂದಾಗಿ 19ನೆಯ ಶತಮಾನದಲ್ಲಿ ಹಾಗೂ 20ನೆಯ ಶತಮಾನದ ಮಧ್ಯಭಾಗದವರೆಗೆ ಬೃಹದ್ಗಾತ್ರದ ಪ್ರಯಾಣಿಕರ ಹಡಗುಗಳು ನಿರ್ಮಾಣಗೊಂಡುವು. 20ನೆಯ ಶತಮಾನದ ಮಧ್ಯಭಾಗದ ತರುವಾಯ ಜೆಟ್ ವಿಮಾನಯಾನ ಜನಪ್ರಿಯವಾಗತೊಡಗಿದಂತೆ ಸಮುದ್ರಯಾನದ ಒಲವು ಕ್ಷೀಣಿಸತೊಡಗಿತು. ಇತ್ತೀಚಿನ ದಿನಗಳಲ್ಲಿ ಕೇವಲ ಕೆಲವು ದಿನಗಳ ಸಮುದ್ರ ವಿಹಾರಕ್ಕಾಗಿ ಹಡಗುಗಳನ್ನು ಬಳಸಲಾಗುತ್ತದೆ. ಮೊದಮೊದಲು ಹಿಂದಿನ ಪ್ರಯಾಣಿಕರ ಹಡಗುಗಳನ್ನೇ ಮಾರ್ಪಡಿಸಿ ವಿಹಾರ ನೌಕೆಗಳಾಗಿ ಪರಿವರ್ತಿಸಲಾಯಿತು. ಆದರೆ ಇಂಥ ಹಡಗುಗಳಲ್ಲಿ ಈಜುಕೊಳಗಳು, ಕ್ರೀಡಾಂಗಣಗಳು, ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆ, ತೆರೆಗಳಿಂದ ಉರುಳುವಿಕೆ ಅಥವಾ ಮುಗ್ಗರಿಸುವಿಕೆಯಿಂದ ರಕ್ಷಣೆ ಹಾಗೂ ಎಂಜಿನ್ನಿನ ಶಬ್ದ ಹಾಗೂ ಕಂಪನಗಳನ್ನು ಪ್ರತಿಬಂಧಿಸುವುದು ಇತ್ಯಾದಿ ಬೇಡಿಕೆಗಳು ಹೆಚ್ಚಿದಂತೆ ವಿಹಾರ ನೌಕೆ ವಿನ್ಯಾಸದಲ್ಲಿ ಭಾರೀ ಬದಲಾವಣೆ ಅಗತ್ಯವಾಯಿತು. ಹೀಗಾಗಿ ಈಗ (2005) ಬಳಕೆಯಲ್ಲಿರುವ ವಿಹಾರ ನೌಕೆಗಳೆಲ್ಲ 1970ರಿಂದೀಚೆಗೆ ನಿರ್ಮಾಣವಾದವಾಗಿವೆ.

ಕಡವಿನ ಹಡಗುಗಳು: ಕಡವುಗಳನ್ನು ದಾಟಲು ಸೇತುವೆಗಳನ್ನೋ ಸುರಂಗಗಳನ್ನೋ ನಿರ್ಮಿಸುವುದು ಅಸಾಧ್ಯವಾದ ಸ್ಥಳಗಳಲ್ಲಿ ಪ್ರಯಾಣಿಕರನ್ನೂ ವಾಹನಗಳನ್ನೂ ಒಂದು ದಡದಿಂದ ಇನ್ನೊಂದು ದಡಕ್ಕೆ ಕೊಂಡೊಯ್ಯಲು ಇಂಥ ಹಡಗುಗಳನ್ನು ಬಳಸುತ್ತಾರೆ. ಕೆಲವು ಚಿಕ್ಕ ಬಂದರುಗಳ ಬಳಿ ಸಮುದ್ರದ ಆಳ ಕಡಿಮೆಯಿದ್ದು ಬೃಹದ್ಗಾತ್ರದ ಹಡಗುಗಳು ದೂರದ ಆಳ ಕಡಲಿನಲ್ಲೇ ತಂಗಬೇಕಾಗುತ್ತದೆ. ಆಗ ಬಂದರಿನಿಂದ ಹಡಗುಗಳವರೆಗೆ ಪ್ರಯಾಣಿಕರು, ವಾಹನಗಳು ಹಾಗೂ ಸರಕು ಸಾಗಿಸಲು ಇಂಥ ಫೆರೀಗಳನ್ನು ಬಳಸುತ್ತಾರೆ. ದಡದಿಂದ ಹಡಗಿನ ಮೇಲೆ ವಾಹನಗಳನ್ನು ಚಾಲನೆಮಾಡಿತರಲು ಹಡಗಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ಯುಕ್ತ ಇಳಿಜಾರುಗಳನ್ನು (ರ್ಯಾಂಪ್ಸ್) ಅಳವಡಿಸಲಾಗುತ್ತದೆ. ಇಂಥ ಫೆರೀಗಳ ವೇಗವನ್ನು ಹೆಚ್ಚಿಸಲು ಕೆಲವೊಮ್ಮೆ ಎರಡು ಒಡಲಿನ ಹಡಗುಗಳ ವಿನ್ಯಾಸವನ್ನು ಬಳಸುತ್ತಾರೆ. ಇದಕ್ಕೆ ಕ್ಯಾಟಮಾರನ್ ವಿನ್ಯಾಸವೆನ್ನುತ್ತಾರೆ. ತೆರೆಗಳಿಂದ ರಕ್ಷಿಸಲ್ಪಟ್ಟ ಜಲಪ್ರದೇಶದಲ್ಲಿ ಕ್ರಮಿಸುವ ದೂರ ಕಡಿಮೆ ಇದ್ದಾಗ ಕತ್ತಿಯ ಅಲಗಿನಂಥ ಹರಿತವಾದ ಮುಂಭಾಗವುಳ್ಳ ಈ ಕ್ಯಾಟಮಾರನ್ ನೌಕೆಗಳು ವೇಗವಾಗಿ ಚಲಿಸಬಲ್ಲವು. ಆದರೆ ಇವುಗಳಲ್ಲಿ ವಾಹನಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ.

2. ಸರಕು ಸಾಗಣೆ ಹಡಗುಗಳು (ಕಾರ್ಗೋ ಕ್ಯಾರಿಯರ್ಸ್): ಸರಕು ಸಾಗಣೆಯ ಹಡಗುಗಳಲ್ಲಿ ಹಲವು ವಿಧಗಳಿವೆ. ಲೋಹದ ಅದುರು, ದ್ರವೀಕೃತ ನಿಸರ್ಗಾನಿಲ, ಪೆಟ್ರೋಲಿಯಮ್ ಮತ್ತು ಅದರ ಉತ್ಪನ್ನಗಳು ಹಾಗೂ ಇನ್ನಿತರ ಸರಕುಗಳನ್ನು ಸಾಗಿಸಲು ವಿವಿಧ ಮಾದರಿಯ ಹಡಗುಗಳನ್ನು ತಯಾರಿಸುತ್ತಾರೆ.

ಟ್ಯಾಂಕರ್‍ಗಳು: ದ್ರವರೂಪೀ ಸರಕನ್ನು ಅದರಲ್ಲೂ ಮುಖ್ಯವಾಗಿ ಪೆಟ್ರೋಲಿಯಮ್ ಹಾಗೂ ಅದರ ಉತ್ಪನ್ನಗಳನ್ನು ಸಾಗಿಸಲು ಉಪಯೋಗಿಸುವ ಹಡಗುಗಳಿವು. ಇವುಗಳಲ್ಲಿ ಜಲರೇಖೆಗಿಂತ ಮೇಲಿನ ಹಡಗಿನ ತೇಲುಭಾಗ ಬಲು ಕಡಿಮೆ ಇರುತ್ತದೆ. ಆ ರೇಖೆಗಿಂತ ಕೆಳಗಿನ ಮುಳುಗು ಭಾಗ (ಡ್ರಾಫ್ಟ್) ಬೃಹತ್ ತೈಲಟ್ಯಾಂಕರ್‍ಗಳಲ್ಲಿ ಸು. 25ಮೀ ವರೆಗೂ ಇರುತ್ತದೆ. 1970ರ ದಶಕದಲ್ಲಿ 400 ಮೀ ಉದ್ದ ಹಾಗೂ 5 ಲಕ್ಷ ಜಡ ತೂಕದ (ಡೆಡ್ ವೇಯ್ಟ್) ಇಂಥ ಬೃಹತ್ ಟ್ಯಾಂಕರ್‍ಗಳು ನಿರ್ಮಾಣಗೊಂಡುವು.

ಆದರೆ ದ್ರವೀಕೃತ ನಿಸರ್ಗಾನಿಲವನ್ನು ಕೊಂಡೊಯ್ಯಲು ವಿಶೇಷ ರೀತಿಯ ಟ್ಯಾಂಕರ್‍ಗಳನ್ನು ನಿರ್ಮಿಸಬೇಕಾಯಿತು. ಈ ಅನಿಲ -1620 ಸೆ ತಾಪದಲ್ಲಿ ಶೈತ್ಯೀಕರಣಗೊಂಡಾಗ ದ್ರವರೂಪ ಪಡೆಯುತ್ತದೆ. ದ್ರವರೂಪೀ ಅನಿಲವನ್ನು ವಿಶೇಷ ರೇಚಕಗಳ ಮೂಲಕ ಇದಕ್ಕಾಗಿಯೇ ವಿನ್ಯಾಸಗೊಳಿಸಿದ ಶಾಖನಿರೋಧಕ ಹೊದಿಕೆಯುಳ್ಳ ಅಲ್ಯೂಮಿನಿಯಮ್ ಟ್ಯಾಂಕ್‍ಗಳಲ್ಲಿ ತುಂಬಿಸುತ್ತಾರೆ. ಈ ಟ್ಯಾಂಕರ್‍ಗಳಲ್ಲಿ ಉಕ್ಕನ್ನು ಬಳಸಲಾಗದು. ದ್ರವೀಕೃತ ತಂಪು ಅನಿಲದ ಸಂಪರ್ಕ ಉಂಟಾದರೆ ಉಕ್ಕು ಗಾಜಿನಂತೆ ಭಿದುರವಾಗುತ್ತದೆ. ಆದ್ದರಿಂದ ಈ ಟ್ಯಾಂಕ್‍ಗಳನ್ನು ಅಲ್ಯೂಮಿನಿಯಮ್ ಅಥವಾ ಇನ್‍ವರ್ ಎಂಬ ನಿಕ್ಕಲ್ ಮತ್ತು ಉಕ್ಕಿನ ಮಿಶ್ರ ಲೋಹದಿಂದ ನಿರ್ಮಿಸಿ ಅದಕ್ಕೆ ಬಾಲ್ಸಾ ಎಂಬ ಮರದ ಹೊದಿಕೆಯನ್ನೂ ಅದರ ಹೊರಗೆ ಮತ್ತೆ ಉಕ್ಕಿನ ಹೊದಿಕೆಯನ್ನೂ ನಿರ್ಮಿಸುತ್ತಾರೆ.

ಕಂಟೈನರ್ ಹಡಗುಗಳು: ಬಂದರುಗಳಲ್ಲಿ ಹಡಗಿನ ಸರಕು ತುಂಬುವ ಅಥವಾ ಹಡಗಿನಿಂದ ಸರಕು ಇಳಿಸುವ ಕೆಲಸವನ್ನು ಸರಳಗೊಳಿಸುವ ಸಲುವಾಗಿ ಕಂಟೈನರ್‍ಗಳ ಬಳಕೆ ಪ್ರಾರಂಭವಾಯಿತು. ಇದರಿಂದ ಹಡಗಿನ ವಿನ್ಯಾಸದಲ್ಲೇ ಬದಲಾವಣೆ ಮಾಡಬೇಕಾಯಿತು. ಹಡಗಿನ ಒಡಲು (ಹಲ್) ಮಧ್ಯಭಾಗದಲ್ಲಿ ಅಗಲವಾಗಿದ್ದು ಮುಂದಕ್ಕೂ ಹಿಂದಕ್ಕೂ ಅಗಲ ಕಿರಿದಾಗುತ್ತ ಹೋಗುವುದರಿಂದ ಚೌಕ ಅಥವಾ ಆಯತ ಘನಾಕೃತಿಯಲ್ಲಿರುವ ಕಂಟೇನರ್‍ಗಳನ್ನು ಒಡಲಿನ ಎಲ್ಲ ಭಾಗಗಳಲ್ಲೂ ತುಂಬಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿರಿಸಿ ಇಂಥ ಹಡಗುಗಳು ಸಮತೋಲನದಲ್ಲಿರುವಂತೆ ವಿನ್ಯಾಸಮಾಡುತ್ತಾರೆ ಹಾಗೆಯೇ ಕಂಟೈನರ್‍ಗಳನ್ನು ಹಡಗಿಗೆ ಏರಿಸುವಾಗ ಅಥವಾ ಇಳಿಸುವಾಗ ಸದಾ ಹಡಗಿನೊಳಗೆ ಸಮಪಾಶ್ರ್ವತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ಒಣ-ರಾಶಿ ಸರಕಿನ ಹಡಗುಗಳು (ಡ್ರೈಬಲ್ಕ್ ಶಿಪ್ಸ್): ಲೋಹದ ಅದುರು, ಕಲ್ಲಿದ್ದಲು, ಧಾನ್ಯಗಳು ಮುಂತಾದವನ್ನು ಚೀಲಗಳಲ್ಲೋ ಕಂಟೈನರ್‍ಗಳಲ್ಲೋ ತುಂಬದೆ ನೇರವಾಗಿ ಹಡಗಿನಲ್ಲೇ ತುಂಬಿ ಸಾಗಿಸುವುದಕ್ಕೆ ಇವನ್ನು ಬಳಸಲಾಗುತ್ತದೆ.

		3. ಔದ್ಯಮಿಕ ಹಡಗುಗಳು: ಆಳ ಹಾಗೂ ದೂರ ಸಮುದ್ರದ ಮೀನುಗಾರಿಕೆಯಲ್ಲಿ ಸಂಗ್ರಹಿಸಿದ ಮೀನುಗಳನ್ನು ತೀರಕ್ಕೆ ತಂದು ಸಂಸ್ಕರಿಸಿದರೆ ಬಹಳಷ್ಟು ನಷ್ಟ ಉಂಟಾಗುವುದರಿಂದ ಸಮುದ್ರದಲ್ಲಿಯೇ ಬೃಹತ್ ಹಡಗುಗಳಲ್ಲಿ ಮೀನು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಕ್ಯಾನಿಂಗ್ ವಿಧಾನದಿಂದ ರಕ್ಷಿಸಿಡುತ್ತಾರೆ. ಇಂಥ ಹಡಗುಗಳನ್ನು ತೇಲುವ ಕಾರ್ಖಾನೆಗಳೆನ್ನಬಹುದು. ಹಿಡಿದ ಮೀನನ್ನು ಕ್ಷಿಪ್ರವಾಗಿ ಸಂಸ್ಕರಿಸುವುದರಿಂದ ಮೀನಿನ ಗುಣಮಟ್ಟ ಉತ್ತಮವಾಗಿರುತ್ತದೆ.

ಇದಲ್ಲದೆ ಭೂಮಿಯ ಮೇಲಿರುವ ಹಲವು ಕಾರ್ಖಾನೆಗಳ ಅಪಾಯಕಾರಿ ತ್ಯಾಜ್ಯವಸ್ತುಗಳನ್ನು ದಹಿಸಿ ದೂರಸಮುದ್ರದಲ್ಲಿ ವಿಸರ್ಜಿಸಲು ವಿಶೇಷವಾದ ಹಡಗುಗಳನ್ನು ನಿರ್ಮಿಸಲಾಗಿದೆ.

		4. ವಾಣಿಜ್ಯೇತರ ವಿವಿಧೋದ್ದೇಶ ಹಡಗುಗಳು: ನೀರ್ಗಲ್ಲುಛೇದಕ ಹಡಗುಗಳು ಮತ್ತು ಸಂಶೋಧನಾ ಹಡಗುಗಳು ಈ ವಿಭಾಗದಲ್ಲಿ ಬರುತ್ತವೆ. ಉತ್ತರ ಮತ್ತು ದಕ್ಷಿಣ ಧ್ರುವ ಸಾಗರಗಳಲ್ಲಿ ತೇಲಿಬರುವ ಬೃಹತ್ ನೀರ್ಗಲ್ಲುಗಳಿಂದಾಗಿ ಎಷ್ಟೋಬಾರಿ ಹಡಗುಗಳು ಅಪಘಾತಕ್ಕೀಡಾಗುತ್ತವೆ. ಆದ್ದರಿಂದ ಅವು ಸಂಚರಿಸುವ ಮಾರ್ಗಗಳಲ್ಲಿ ಬರಬಹುದಾದ ನೀರ್ಗಲ್ಲುಗಳನ್ನು ಗುರುತಿಸಿ ಇವನ್ನು ಒಡೆದು ಚೂರು ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಿದ ನೀರ್ಗಲ್ಲುಛೇದಕ ಹಡಗುಗಳನ್ನು ಬಳಸುತ್ತಾರೆ.
		ಸಾಗರವಿಜ್ಞಾನದ ಸಂಶೋಧನೆಗಾಗಿ ಕೆಲವೊಮ್ಮೆ ಸಂಶೋಧಕರು ತಿಂಗಳುಗಟ್ಟಲೆ  ಸಮುದ್ರದಲ್ಲೇ ಇರಬೇಕಾಗುತ್ತದೆ. ಇಂಥ ಹಡಗುಗಳು ತೇಲುವ ಪ್ರಯೋಗಾಲಯಗಳೇ ಆಗಿರುತ್ತವೆ. ಇವುಗಳಲ್ಲಿ ವಿಜ್ಞಾನಿಗಳು, ತಂತ್ರಜ್ಞರು ಹಾಗೂ ಇತರ ಸಿಬ್ಬಂದಿಗೆ ಯುಕ್ತವಸತಿ ಸೌಕರ್ಯ ಕಲ್ಪಿಸಬೇಕಾಗುತ್ತದೆ. ಆದ್ದರಿಂದ ಇಂಥ ಉದ್ದೇಶಕ್ಕೆ ವಿಶೇಷ ವಿನ್ಯಾಸವುಳ್ಳ ಹಡಗುಗಳು ಬೇಕಾಗುತ್ತವೆ.

(ಜಿ.ಆರ್.)