ಹತ್ತಿ ವಿವಿಧ ಸಸ್ಯಜನ್ಯ ಎಳೆಗಳ ಪೈಕಿ ಬಹೋಪಯೋಗಿಯಾದ ವಸ್ತು. ಹತ್ತಿಯ ಎಳೆಗಳನ್ನು ಮೃದುವಾಗಿ, ಗಟ್ಟಿಯಾಗಿ ನೇಯ್ದು ನಾನಾ ಬಗೆಯ ಬಟ್ಟೆಗಳನ್ನೂ ಹೊದಿಕೆಗಳನ್ನೂ ನೆಲಹಾಸು ಮುಂತಾದ ಉಪಯುಕ್ತ ವಸ್ತುಗಳನ್ನೂ ತಯಾರಿಸಲಾಗುವುದು. ಹತ್ತಿಗಿಡದ ಇತರೆ ಭಾಗಗಳನ್ನು ಸಹ ವಿವಿಧ ವಸ್ತು ತಯಾರಿಕೆಗೆ ಉಪಯೋಗಿಸುತ್ತಾರೆ. ಸಾವಿರಾರು ವರ್ಷಗಳಿಂದ ಮಾನವ ಹತ್ತಿಬೆಳೆದು ನೇಯ್ದು ಉಪಯೋಗಿಸುತ್ತ ಬಂದಿದ್ದಾನೆ. ದೈನಂದಿನ ಜೀವನದಲ್ಲಿ ಹತ್ತಿ ಒಂದಲ್ಲ ಒಂದು ಬಗೆಯಲ್ಲಿ ಉಪಯೋಗವಾಗುತ್ತಲೇ ಇದೆ. ಚೀನ, ಅಮೆರಿಕಸಂಯುಕ್ತಸಂಸ್ಥಾನ, ಭಾರತ, ಪಾಕಿಸ್ತಾನ ಮತ್ತು ಉಜ್ಬೆಕಿಸ್ತಾನ್ - ಇವು ಪ್ರಪಂಚದ ಒಟ್ಟು ಹತ್ತಿ ಉತ್ಪಾದನೆಯಲ್ಲಿ 3/4 ಭಾಗ ಹತ್ತಿಯನ್ನು ಬೆಳೆಯುತ್ತಿವೆ.

ಹತ್ತಿ ವಾರ್ಷಿಕ ಬೆಳೆ. ಸು. 0.6 ರಿಂದ 1.5 ಮೀಟರ್ ಬೆಳೆಯುವ ಈ ಗಿಡ ಕೊಂಬೆರೆಂಬೆಗಳಿಂದ ಕೂಡಿರುತ್ತದೆ. ಇದರ ಮುಖ್ಯ ಬೇರು ಭೂಮಿ ಒಳಗೆ 1.2 ಮೀಟರ್‍ನಷ್ಟು ಆಳದಲ್ಲಿ ಹರಡಿರುತ್ತದೆ. ಈ ಗಿಡದ ಎಲೆಗಳು 7.5 ರಿಂದ 1.5 ಸೆಂಮೀ ಅಗಲವುಳ್ಳವು. ಗಿಡದ ಪೋಷಣೆ ಹಾಗೂ ಬೆಳೆವಣಿಗೆಯನ್ನು ಅವಲಂಬಿಸಿ ಹತ್ತಿಯ ಉತ್ಪಾದನೆಯಾಗುತ್ತದೆ.

ಹತ್ತಿಯಲ್ಲಿ ಸು. 39 ಬಗೆಗಳನ್ನು ಗುರುತಿಸಲಾಗಿದೆ. ಆದರೆ ಇದರಲ್ಲಿ ಅಪ್‍ಲೆಂಡ್, ಪೈಮ ಅಥವಾ ಈಜಿಷ್ಶಿಯನ್ ಮತ್ತು ಅಮೆರಿಕನ್ ಈಜಿಪ್ಶಿಯನ್, ಟ್ರೀ ಮತ್ತು ಲಿವ್ಯಾಂಟ್ ಎಂಬ ನಾಲ್ಕು ಬಗೆಯ ಹತ್ತಿಯನ್ನು ಹೆಚ್ಚು ಬೆಳೆಯಲಾಗುತ್ತದೆ. ಈ ನಾಲ್ಕೂ ಬಗೆಯ ಹತ್ತಿಗಳನ್ನು ನ್ಯೂ ವಲ್ರ್ಡ್ ಕಾಟನ್, ಓಲ್ಡ್‍ವಲ್ರ್ಡ್ ಕಾಟನ್ ಎಂಬುದಾಗಿ ವಿಂಗಡಿಸಲಾಗಿದೆ.

ಹತ್ತಿ ಉಷ್ಣವಲಯದ ಬೆಳೆ. ಪ್ರಪಂಚದ ಸೇಕಡ 50 ಭಾಗ ಉಷ್ಣವಲಯದಲ್ಲಿ ಬೆಳೆಯುವಂತಹದು. ಚೀನ ಮತ್ತು ಅಮೆರಿಕಸಂಯುಕ್ತಸಂಸ್ಥಾನ ಹತ್ತಿ ಬೆಳೆಯುವಲ್ಲಿ ಪ್ರಥಮ ಸ್ಥಾನದಲ್ಲಿವೆ. ಈ ಎರಡೂ ದೇಶಗಳಲ್ಲಿ ಹತ್ತಿಗೆ ಸಂಬಂಧಿಸಿದ ಅನೇಕ ಕಾರ್ಖಾನೆಗಳೂ ಬಟ್ಟೆ ತಯಾರಿಕಾ ಸಂಸ್ಥೆಗಳೂ ಹತ್ತಿ ಮತ್ತು ಅದರ ವಿವಿಧ ಉತ್ಪನ್ನಗಳಿಂದ ಲಕ್ಷಾಂತರ ಉದ್ಯೋಗಗಳೂ ಸೃಷ್ಟಿಯಾಗುತ್ತಲೇ ಇವೆ. ಏಷ್ಯದ ಭಾರತ, ಇರಾನ್, ಪಾಕಿಸ್ತಾನ, ಸಿರಿಯ, ತಜಿûಕಿಸ್ತಾನ್, ಟರ್ಕಿ, ತುರ್ಕಮೆನಿಸ್ತಾನ್, ಉಜ್ಬೆಕಿಸ್ತಾನ್, ಆರ್ಜೆಂಟಿನ, ಬ್ರಜಿಲ್, ಪರಗ್ವೆ, ಈಜಿಪ್ಟ್ ಮತ್ತು ಮಾಲಿ, ಗ್ರೀಸ್, ಸ್ಪೇನ್, ಆಸ್ಟ್ರೇಲಿಯಗಳಲ್ಲಿ ಹತ್ತಿ ಬೆಳೆಯಲಾಗುತ್ತದೆ. ಬೀಜ ನೆಟ್ಟು, ಕಾಲಕಾಲಕ್ಕೆ ನೀರುಣಿಸಿ, ಕೀಟಬಾಧೆ ತಗುಲದಂತೆ ಎಚ್ಚರವಹಿಸಿದರೆ 150 ರಿಂದ 200 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಮಾನವಶಕ್ತಿ, ಯಂತ್ರಶಕ್ತಿ ಎರಡನ್ನೂ ಈ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಕಾರ್ಖಾನೆಗಳಲ್ಲಿ ಹತ್ತಿಯಿಂದ ಬೀಜವನ್ನು ಬೇರ್ಪಡಿಸಿ, ಶುದ್ಧಗೊಳಿಸಿ ಶ್ರೇಣೀಕರಿಸಿ ಮಾರಾಟ ಮಾಡಲಾಗುತ್ತದೆ. ಬಟ್ಟೆ ತಯಾರಿಕೆಯಲ್ಲಿ ಈಗ ಸುಧಾರಿತ ಆಧುನಿಕ ಯಂತ್ರಗಳ ಬಳಕೆಯಿದೆ.

ಬಿಳಿದಾದ ಮೃದು ಹತ್ತಿಯನ್ನು ಗಿಡಗಳಿಂದ ಸಂಗ್ರಹಿಸಿ ಕಾರ್ಖಾನೆಗಳಿಗೆ ಕಳುಹಿಸುತ್ತಾರೆ. ಕಾರ್ಖಾನೆಯಲ್ಲಿ ಹತ್ತಿಯನ್ನು ಶುದ್ಧೀಕರಿಸಿ, ಬೀಜಗಳಿಂದ ಬೇರ್ಪಡಿಸಿ ನೂಲು ತೆಗೆದು ಅನಂತರ ಬಟ್ಟೆಯಾಗಿ ನೇಯುವ ಕೆಲಸ ನಡೆಯುತ್ತದೆ. ತುಂಡು ಎಳೆಗಳನ್ನು ಒತ್ತುಪಟ್ಟಿಯ ಬಟ್ಟೆಗಳಾಗಿ, ಕಾಗದ ಮತ್ತು ಸ್ಫೋಟಕಗಳ ತಯಾರಿಕೆಗೆ ಬಳಸುತ್ತಾರೆ. ಹತ್ತಿಯ ಬೀಜದಿಂದ ತೈಲ ತೆಗೆದು ವಿವಿಧ ರೀತಿಯಲ್ಲಿ ಉಪಯೋಗಿಸುವುದುಂಟು. ಹತ್ತಿಹಿಂಡಿ ಸಹ ಉಪಯುಕ್ತ, ಇದು ಪಶು ಆಹಾರವಾಗಿಯೂ ಎಲೆ ಗೊಬ್ಬರವಾಗಿಯೂ ಬಳಕೆಯಾಗುತ್ತದೆ. ಹತ್ತಿಯ ಸಿಪ್ಪೆಯನ್ನು ದನಕರುಗಳಿಗೆ ಮೇವಾಗಿ ಉಪಯೋಗಿಸುವುದುಂಟು. ನಾನಾ ಬಗೆಯ ಹತ್ತಿಯ ನೂಲಿನಿಂದ ಒರಟಾದ ಮಂದ ಬಟ್ಟೆಯಿಂದ ಹಿಡಿದು ಮೃದುವೂ ತೆಳವೂ ಆದ ವಿವಿಧ ಬಗೆಯ ಬಟ್ಟೆಗಳನ್ನು ತಯಾರಿಸುತ್ತಾರೆ. ರೇಯಾನ್, ಕಾಗದ, ಛಾಯಾಚಿತ್ರಕ್ಕೆ ಬಳಸುವ ಪಟಲ (ಫಿಲ್ಮ್) ಮುಂತಾದವುಗಳ ತಯಾರಿಕೆಯಲ್ಲಿ ಹತ್ತಿ ಹರಳುಗಳು ಉಪಯೋಗಕ್ಕೆ ಬರುತ್ತವೆ. ಹತ್ತಿಬಟ್ಟೆ ವೈದ್ಯಕೀಯ ಬಳಕೆಗೆ ಉಪಯುಕ್ತ. ಶುದ್ಧೀಕರಿಸಿದ ತೈಲವನ್ನು ಅಡುಗೆಗೂ ಬಳಸುತ್ತಾರೆ. ಇದರ ಎಣ್ಣೆಯನ್ನು ಸಾಬೂನು, ಸೌಂದರ್ಯವರ್ಧಕ ವಸ್ತುಗಳು ಮತ್ತು ಔಷಧಗಳ ತಯಾರಿಕೆಗೂ ಬಳಸುತ್ತಾರೆ.

ಮೆಕ್ಸಿಕೋದಲ್ಲಿ ಕ್ರಿ.ಪೂ.ಸು. 2900ರ ಹತ್ತಿಗಿಡದ ಪಳೆಯುಳಿಕೆ ದೊರೆತಿದೆ. ಪೆರು ಇಂಡಿಯನ್ನರು ಮೀನಿನ ಬಲೆ ಹೆಣೆಯಲು ಹತ್ತಿಯನ್ನು ಉಪಯೋಗಿಸುತ್ತಿದ್ದರು (ಕ್ರಿ.ಪೂ.ಸು. 2500). ಹತ್ತಿನೂಲು ನೇಯ್ದ ಹತ್ತಿವಸ್ತುಗಳ ಬಳಕೆ ಈ ಪ್ರದೇಶಗಳಲ್ಲಿ ಕ್ರಿ.ಪೂ.ಸು. 1900ರ ಕಾಲಕ್ಕೆ ಇತ್ತೆಂದು ತಿಳಿದುಬರುತ್ತದೆ. ಸಿಂಧೂನದಿ ಕಣಿವೆ ನಾಗರಿಕತೆಯ ಕಾಲದಲ್ಲಿ (ಕ್ರಿ.ಪೂ.2700) ವಾಯವ್ಯ ಭಾರತದಲ್ಲಿ ಹತ್ತಿಬಟ್ಟೆಯ ಉಪಯೋಗವಿತ್ತು. ಈಗಿನ ಸಿರಿಯ, ಟರ್ಕಿ ಮತ್ತು ಇರಾಕ್ ಪ್ರದೇಶವನ್ನೊಳಗೊಂಡ ಆಗಿನ ಮೆಸೊಪೊಟೇಮಿಯಕ್ಕೆ ಇಲ್ಲಿಂದ ಬಟ್ಟೆ ರಫ್ತಾಗುತ್ತಿತ್ತು. ಕ್ರಿ.ಪೂ.ಸು. 1500ರ ಹೊತ್ತಿಗೆ ಮೆಸೊಪೊಟೇಮಿಯ ಪ್ರದೇಶದಲ್ಲಿ ಹತ್ತಿ ಬೆಳೆಯಲಾರಂಭಿಸಲಾಯಿತು. ಕ್ರಿ.ಪೂ.ಸು. 700ರಲ್ಲಿ ಯುರೋಪಿಯನ್ನರು ಹತ್ತಿ ಬೆಳೆಯಲಾರಂಭಿಸಿದರು. ಕ್ರಿ.ಶ.700ರ ಹೊತ್ತಿಗೆ ಸ್ಪೇನ್ ಮತ್ತು ಇಟಲಿಯ ಜನರು ಹತ್ತಿ ಬೆಳೆಯತೊಡಗಿದ್ದರು. ಅನಂತರ ಯುರೋಪಿನ ಇತರೆ ಭಾಗಗಳಿಗೂ ಹತ್ತಿಯ ಕೃಷಿ ಹರಡಿತು.

ಆರಂಭದಲ್ಲಿ ಇಂಗ್ಲೆಂಡ್ ಹೊರಗಿನಿಂದ ಹತ್ತಿಯನ್ನು ತರಿಸಿಕೊಂಡು ತನ್ನ ಕಾರ್ಖಾನೆಗಳಿಗೆ ಒದಗಿಸುತ್ತಿತ್ತು. ಇಂಗ್ಲೆಂಡ್‍ನಲ್ಲಿ ಬಟ್ಟೆ ತಯಾರಿಕೆ ಪ್ರಾರಂಭವಾಗಿ ಮುಂದೆ ಬೇಡಿಕೆ ಹೆಚ್ಚಿದಂತೆ ಈ ಕ್ಷೇತ್ರದಲ್ಲಿ ಯಂತ್ರಗಳ ಉಪಯೋಗ ಪಡೆದುಕೊಳ್ಳಲಾಯಿತು. 1700ರ ಹೊತ್ತಿಗೆ ಇಂಗ್ಲೆಂಡ್ ಬಟ್ಟೆಯ ಉತ್ಪಾದನೆಯಲ್ಲಿ ಮುಂಚೂಣಿ ಪಡೆಯಿತು. 1600ರ ಹೊತ್ತಿಗೆ ಅಮೆರಿಕ ವಸಾಹತುಗಳಲ್ಲಿ ಹತ್ತಿ ಬೆಳೆಯಲಾರಂಭಿಸಿದ್ದರು. 1700ರ ಹೊತ್ತಿಗೆ ಅಮೆರಿಕ ಹೆಚ್ಚು ಪ್ರಮಾಣದಲ್ಲಿ ಹತ್ತಿ ಬೆಳೆದು ಇಂಗ್ಲೆಂಡಿಗೆ ಕಳುಹಿಸಿಕೊಡುತ್ತಿತ್ತು. ಇಲ್ಲಿ ಬಟ್ಟೆಯನ್ನು ತಯಾರಿಸಿ ಅಮೆರಿಕಕ್ಕೆ ಕಳುಹಿಸಲಾಗುತ್ತಿತ್ತು. 1790ರಲ್ಲಿ ಅಮೆರಿಕದ ನ್ಯೂಇಂಗ್ಲೆಂಡ್‍ನಲ್ಲಿ ಪ್ರಥಮ ಬಟ್ಟೆ ಕಾರ್ಖಾನೆ ಪ್ರಾರಂಭವಾಯಿತು. ಕಾರ್ಖಾನೆಗಳಲ್ಲಿ ಹೊಲಗದ್ದೆಗಳಲ್ಲಿ ದುಡಿಯಲು ಹೆಚ್ಚು ಮಂದಿ ಗುಲಾಮರನ್ನು ಅಮೆರಿಕ ಕೊಂಡು ತರುತ್ತಿತ್ತು. ಈ ಗುಲಾಮ ವ್ಯಾಪಾರವನ್ನೂ ಗುಲಾಮ ಗಿರಿಯನ್ನೂ ಉತ್ತರದವರು ವಿರೋಧಿಸಿದಾಗ (1861-65) ಅಮೆರಿಕದಲ್ಲಿ ಅಂತರ್ಯುದ್ಧ ನಡೆಯಿತು. ಇದಕ್ಕೆ ಹತ್ತಿ ಉದ್ಯಮವೇ ಮೂಲ ಕಾರಣವೆನ್ನಬಹುದು.

1960ರ ವೇಳೆಗೆ ಹತ್ತಿ ಉದ್ಯಮ ಉಚ್ಛ್ರಾಯ ಸ್ಥಿತಿಗೇರಿತು. ಅದುವರೆಗೆ ಹತ್ತಿಯನ್ನು ವಿವಿಧ ರೂಪಗಳಲ್ಲಿ ಬಳಸಲಾಗುತ್ತಿತ್ತು. ಅನಂತರ ಕೃತಕನಾರಿನ ವಸ್ತುಗಳ ಬಳಕೆ ಹೆಚ್ಚಿದಂತೆಲ್ಲ ಹತ್ತಿಯ ಉತ್ಪಾದನೆ ಇಳಿಮುಖವಾಯಿತು. ಹತ್ತಿ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದರು. 70ರ ದಶಕದಲ್ಲಿ ಇಂಗ್ಲೆಂಡಿನಲ್ಲಿ ಸರ್ಕಾರ ಕೆಲವು ಸುಧಾರಣೆಗಳನ್ನು ಮಾಡಿ ರೈತರಿಗೆ ಸಾಲಸೌಲಭ್ಯ ದೊರೆಯುವಂತೆ ಮಾಡಿತು. 1971ರಲ್ಲಿ ಹತ್ತಿ ಬೆಳೆಗಾರರೆಲ್ಲ ಸೇರಿ ಕಾಟನ್ ಇನ್‍ಕಾರ್ಪೊರೇಟೆಡ್ ಸಂಸ್ಥೆಯನ್ನು ಸ್ಥಾಪಿಸಿದರು. ಆ ಮೂಲಕ ಹತ್ತಿ ವಸ್ತುಗಳ ಸಂಸ್ಕರಣೆ, ಪರಿಶೋಧನೆ ಮತ್ತು ಮಾರಾಟಕ್ಕೆ ಹೊಸ ಹೊಸ ಮಾರ್ಗಗಳನ್ನು ಕಂಡುಹಿಡಿಯಲು ಅವಕಾಶ ಮಾಡಲಾಯಿತು. ಭಾರತದ ಹತ್ತಿ ಸಲಹಾ ಮಂಡಳಿಯ ಪ್ರಕಾರ 2000-2001ರ ಸಾಲಿನಲ್ಲಿ ಭಾರತದಲ್ಲಿ 81.22 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿತ್ತು. ಒಟ್ಟು ಉತ್ಪಾದನೆ 146 ಲಕ್ಷ ಬೇಲುಗಳು. ಭಾರತದ ರಾಷ್ಟ್ರೀಯ ಚಳವಳಿಯಲ್ಲೂ ಹತ್ತಿ ಪ್ರಮುಖಪಾತ್ರ ವಹಿಸಿದೆ. ಗಾಂಧೀಜಿಯವರು ಚರಕದಿಂದ ನೂಲು ತೆಗೆದು ಸ್ವದೇಶಿ ಬಟ್ಟೆನೇಯ್ದು ಉಪಯೋಗಿಸಿ ಚಳವಳಿಯನ್ನು ಆರಂಭಿಸಿದರು. ಅನಂತರ ಖಾದಿಬಟ್ಟೆ ಭಾರತದ ರಾಷ್ಟ್ರೀಯತೆಯ ಹೆಗ್ಗುರುತಾಯಿತು. ಈಗ ಕೃತಕನಾರಿನ ವಸ್ತುಗಳ ಪೈಪೋಟಿಯೇ ಮೇಲಾಗಿದ್ದು ಖಾದಿ ಗ್ರಾಮೋದ್ಯೋಗದಡಿಯಲ್ಲಿ ಹತ್ತಿ ಉದ್ಯಮ ಜೀವ ಹಿಡಿದಿದೆ. *