ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹದಿನಾರು ಪಾಳೆಯಗಾರರು

ಹದಿನಾರು ಪಾಳೆಯಗಾರರು

	ಸು. 16-17ನೆಯ ಶತಮಾನಗಳಲ್ಲಿ ಮೈಸೂರು ಜಿಲ್ಲೆಯ ಹದಿನಾರು (ಹದಿನಾಡು) ಪ್ರಾಂತವನ್ನು ಆಳಿದ ಒಂದು ಮಾಂಡಳಿಕ ಮನೆತನ. ಗಂಗರ, ಚೋಳರ ಶಾಸನಗಳಲ್ಲಿ ಅದಿರಾರು ಎಂದಿರುವ, ಹೊಯ್ಸಳ ಹಾಗೂ ವಿಜಯನಗರದ ಕಾಲದ ಶಾಸನಗಳಲ್ಲಿ ಹದಿನಾಡೆಂದು ಉಕ್ತವಾಗಿದೆ. ಪದಿನಾಡು ಅಥವಾ ಹತ್ತುನಾಡು ಎಂದು ಪರಿಗಣಿಸಲ್ಪಟ್ಟಿದ್ದ ಈ ಹದಿನಾರು ಬಹುಶಃ ಪ್ರಾಚೀನಕಾಲದ ಪುನ್ನಾಡು 1000 ಎಂಬ ಒಂದು ಹೇಳಿಕೆ ಇದೆ. ಯಳಂದೂರು ಇದರ ಮುಖ್ಯ ಪಟ್ಟಣವಾಗಿತ್ತು. ಸು. 900ರ ಹೊತ್ತಿಗೆ ಚೋಳ ಮುತ್ತರಸ ಎಂಬುವನನ್ನು ಕೊಂದು ಅಸು ನೀಗಿದರೆಂದು ಹೇಳಲಾದ ಯರೆಯಂಗ, ಪಲ್ಲಪೋಚ ಮತ್ತು ಚೋಳ ಮುತ್ತರಸನ ಇಬ್ಬರು ಮಕ್ಕಳಿಗೆ ಈ ಹದಿನಾರು 12 ಪ್ರಾಂತ ಕಲ್ನಾಡಾಗಿ ಕೊಡಲ್ಪಟ್ಟಿತೆಂದು ಒಂದು ಶಾಸನದಿಂದ ತಿಳಿದುಬರುತ್ತದೆ. ಹೊಯ್ಸಳರ ಕಾಲದಲ್ಲಿ ಹದಿನಾಡು ಮೇಂಟೆ ಎಂದು ಕರೆಯಲ್ಪಟ್ಟಿದ್ದ ಇದು ದಕ್ಷಿಣ ವಾರಾಣಸಿ ಎನ್ನಿಸಿಕೊಂಡಿತ್ತು. ವಿಜಯನಗರ ಅರಸರ ಸಾರ್ವಭೌಮತ್ವ ವನ್ನು ಇವರು ಒಪ್ಪಿಕೊಂಡಿದ್ದರು. ಕೊನೆಕೊನೆಗೆ ಆಳಿದ ಈ ವಂಶದ ನಾಯಕರು ವಿಜಯನಗರದ ಕೊನೆಯ ಅರಸರ ಹೆಸರುಗಳ ಅನುಕರಣೆ ಮಾಡಿದ್ದು ಅವರ ಹೆಸರುಗಳಿಂದ ತಿಳಿದುಬರುತ್ತದೆ. ಇದಕ್ಕೆ ವಿಜಯನಗರದ ಅರಸರ ಪ್ರೋತ್ಸಾಹವೂ ಇದ್ದಿತೆಂದು ತೋರುತ್ತದೆ. ವಿಜಯನಗರದ ವೆಂಕಟಪತಿರಾಯನ ಕಾಲದಲ್ಲಿ ಈ ಅನುಕರಣೆಗೆ ಸಮ್ಮತಿಸಿ ಅದಕ್ಕೋಸ್ಕರವಾಗಿ ಮೂಗೂರು ಸೀಮೆಯ ತಾಯೂರು ಮತ್ತು ಇತರ 14 ಹಳ್ಳಿಗಳನ್ನು ಅವರ ಪಲ್ಲಕ್ಕಿಯ ಉಂಬಳಿಯಾಗಿ ಕೊಟ್ಟ ವಿಚಾರವನ್ನು ಒಂದು ಶಾಸನ ವಿವರಿಸುತ್ತದೆ. ಸಿಂಗದೇಪ, ರಾಮರಾಜನಾಯಕ, ಚಿನ್ನ, ತಿರುಮಲರಾಜ, ನಂಜರಾಜ, ಮುದ್ದರಾಜ ಮುಂತಾದವರು ಈ ಪ್ರಾಂತದ ನಾಯಕರಾಗಿದ್ದರು. ಸಿಂಗದೇಪನು ಯಳಂದೂರಿನ ಗೌರೀಶ್ವರ ದೇವಾಲಯವನ್ನು ಕಟ್ಟಿಸಿದ. ಅವನ ಅನಂತರದ ನಾಯಕರು ಆ ದೇವಾಲಯಕ್ಕೆ ದತ್ತಿಗಳನ್ನು ಬಿಟ್ಟ ವಿಚಾರ ಶಾಸನಗಳಿಂದ ತಿಳಿದುಬರುತ್ತದೆ. ಮುದ್ದರಾಜ ಈ ದೇವಾಲಯದ ಗೋಪುರವನ್ನು ಕಟ್ಟಿಸಿದನೆಂದೂ ಬಿಳಿಕಲ್ಲಿನ ತಿರುವೆಂಗಳನಾಥ ದೇವಾಲಯಕ್ಕೆ 30 ವರಹಗಳನ್ನು ಕೊಟ್ಟು ಅದರಿಂದ ಬಂದ ಬಡ್ಡಿಯ ಹಣದಿಂದ ಮಹಾನವಮಿಯ ಪೂಜೆ ನಡೆಯುವ ಏರ್ಪಾಡನ್ನು ಮಾಡಿದನೆಂದೂ ಒಂದು ಶಾಸನ ತಿಳಿಸುತ್ತದೆ. ಒಂದು ಶಾಸನದಲ್ಲಿ ದೇವಪ್ಪಗೌಡನ ಮಗ ರಾಜನಾಯಕನು ನಂದ್ಯಾಲ ಸೀಮೆಯ ಜನರ ಸಹಾಯದಿಂದ ಒಂದು ಕಟ್ಟೆಯನ್ನು ದುರಸ್ತಿಪಡಿಸಿದ ವಿಚಾರ ತಿಳಿದುಬರುತ್ತದೆ. ಈ ವಂಶದ ಕಡೆಯ ಅರಸರು ಮೈಸೂರು ಹಾಗೂ ಕಳಲೆಯ ಮನೆತನಗಳೊಡನೆ ಸ್ನೇಹಸಂಬಂಧವಿರಿಸಿಕೊಂಡಿದ್ದರೆಂದು ಹೇಳಲಾಗಿದೆ. ಹಲವು ಕಾಲಾನಂತರ ಈ ಹದಿನಾಡು ಪ್ರಾಂತ ಮೈಸೂರು ರಾಜ್ಯದಲ್ಲಿ ಲೀನವಾಯಿತು. 

ಚಿತ್ರ-ಪಾಳೆಯಗಾರರ-ವಂಶಾವಳಿ

ಈ ವಂಶದವರೇ ಮೈಸೂರು ಒಡೆಯರ ಪೂರ್ವಜರೆಂಬ ಒಂದು ಹೇಳಿಕೆ ಇದೆ. ಈ ಹೇಳಿಕೆಯಂತೆ ಸು. 15ನೆಯ ಶತಮಾನದ ಹೊತ್ತಿಗೆ ಉತ್ತರದಿಂದ ಬಂದ ವಿಜಯ ಮತ್ತು ಕೃಷ್ಣ ಎನ್ನುವ ಸಹೋದರರು ಈ ಪ್ರಾಂತದಲ್ಲಿ ನೆಲೆಸಿದ್ದರು. ಅದೇ ಹೊತ್ತಿಗೆ ಹದಿನಾಡ ಒಡೆಯನು ಮತಿಭ್ರಮಣೆಗೊಳಗಾಗಿದ್ದುದರಿಂದ ನೆರೆಯ ಪ್ರಾಂತವಾದ ಕಾರುಗಹಳ್ಳಿಯ ಮಾರನಾಯಕನು ಅನಾಯಕವಾಗಿದ್ದ ಹದಿನಾಡ ರಾಜಪುತ್ರಿಯನ್ನು ತನಗೆ ವಿವಾಹಮಾಡಿಕೊಡಬೇಕೆಂದು ಆಗ್ರಹಪಡಿಸುತ್ತಿದ್ದ. ಇದರಿಂದ ದಿಕ್ಕುಕಾಣದ ಆ ಮನೆತನದವರು ಬಲವಂತದಿಂದ ಈ ಮದುವೆಗೆ ತಮ್ಮ ಸಮ್ಮತಿಯನ್ನು ಕೊಡಬೇಕಾಯಿತು. ಇದನ್ನರಿತ ಈ ಇಬ್ಬರು ಸಾಹಸಿ ಸಹೋದರರು ಚಾಣಾಕ್ಷತನದಿಂದಲೂ ಪರಾಕ್ರಮದಿಂದಲೂ ಕಾರುಗಹಳ್ಳಿಯ ನಾಯಕನ ಕೊನೆಗಾಣಿಸಿದರು. ಹದಿನಾಡು ರಾಜಕುಮಾರಿ ಇಬ್ಬರು ಸಹೋದರರಲ್ಲಿ ವಿಜಯನನ್ನು ವರಿಸಿದಳು. ಹೀಗೆ ವಿಜಯ ಕಾರುಗಹಳ್ಳಿ ಹಾಗೂ ಹದಿನಾಡು ಪ್ರಾಂತಗಳ ಒಡೆಯನಾದ. ಮೈಸೂರು ಒಡೆಯರ ಮನೆತನ ಇಲ್ಲಿಂದ ಪ್ರಾರಂಭವಾಯಿತು. ಆದರೆ ಈ ಹೇಳಿಕೆಗಳ ಸತ್ಯಾಸತ್ಯತೆಗಳ ಬಗ್ಗೆ ಖಚಿತವಾಗಿ ಏನೂ ತಿಳಿಯದು. (ಎಲ್.ಎಸ್.ಕೆ.)