ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹದಿನಾಲ್ಕುನಾಡ ಅರಸರು

ಹದಿನಾಲ್ಕುನಾಡ ಅರಸರು - ಹೊಯ್ಸಳ ಅರಸರ ಮಾಂಡಲಿಕರಾಗಿದ್ದ ಒಂದು ಅರಸುಮನೆತನ. ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು ಗಳ ಕೆಲ ಪ್ರದೇಶಗಳನ್ನೊಳಗೊಂಡ ಈ ಹದಿನಾಲ್ಕು ನಾಡು ಎಂಬ ಪ್ರದೇಶದ ಮೇರೆಗಳನ್ನು ಗುರುತಿಸಲಾಗಿಲ್ಲವಾದರೂ ಕುಡುಗು ನಾಡು ಎಂಬುದು 14 ನಾಡುಗಳಲ್ಲಿ ಒಂದೆಂದು ಶಾಸನಗಳಿಂದ ತಿಳಿಯುತ್ತದೆ.

ಈ ವಂಶದ ಮೂಲಪುರುಷ ಹೊಯ್ಸಳ ಮೂರನೆಯ ನರಸಿಂಹನ ಸೇನಾನಿ ಪೆರುಮಾಳೆ ದಂಡನಾಯಕನಾಗಿದ್ದು, 1285ರ ಶಾಸನದಲ್ಲಿ ಮೊಟ್ಟಮೊದಲ ಬಾರಿಗೆ ಈತ ಉಲ್ಲೇಖಗೊಂಡಿದ್ದಾನೆ. ಈತನಿಗೆ ಹೊಯ್ಸಳ ರಾಜಲಕ್ಷ್ಮೀ ರಕ್ಷಾಪ್ರಾಕಾರ ಎಂಬ ಬಿರುದಿರುವುದರಿಂದ ಈತ ಹೊಯ್ಸಳರ ಗಣ್ಯ ಸೇನಾನಿಯಾಗಿದ್ದಿರಬೇಕು. ಇದಲ್ಲದೆ ಸಿತಗರಗಂಡ, ಕೊಂಗಮಾರಿ, ಕೊಂಗದಿಶಾಪಟ್ಟ, ನೀಲಗಿರಿಸಾಧಕ ಮುಂತಾದ ಬಿರುದುಗಳಿಂದ ಇವನು ತಮಿಳುನಾಡಿನಲ್ಲಿ ವಿಜಯಗಳನ್ನು ಸಾಧಿಸಿರಬೇಕೆಂದು ಊಹಿಸಬಹುದು. ತೆರಕಣಾಂಬಿ ಇವನ ರಾಜಧಾನಿ ಯಾಗಿತ್ತು. ತೆರಕಣಾಂಬಿಯ ಅಲ್ಲಾಳನಾಥ (ವರದರಾಜಸ್ವಾಮಿ) ಈ ವಂಶದರ ಕುಲದೇವರು. ಇವರ ಕೆಲ ಶಾಸನಗಳು ವೈಷ್ಣವ ಸ್ತುತಿಯಿಂದ ಆರಂಭವಾಗುವುದರಿಂದಲೂ ಶ್ರೀವೈಷ್ಣವರಿಗೆ ಇವರು ಅನೇಕ ದತ್ತಿಗಳನ್ನು ನೀಡಿರುವುದರಿಂದಲೂ ಏಕಾದಶೀವ್ರತನಿರತರೆಂಬ ಬಿರುದಿನಿಂದಲೂ ಇವರು ಶ್ರೀವೈಷ್ಣವರಿರಬೇಕೆಂದು ಊಹಿಸಬಹುದು. ಮುಂದೆ ಪೆರುಮಾಳೆಯ ಮಗ ಮಾಧವ 1308-15ರ ವರೆಗೆ ಇದ್ದನೆಂದು ಸೂಚಿಸುವ ಶಾಸನಗಳಿದ್ದು ಈತ ಇಮ್ಮಡಿ ಉತ್ತರಾಯ ಎಂಬ ಬಿರುದನ್ನು ತಳೆದಿದ್ದ. ಗೋಪಾಲಸ್ವಾಮಿ ಬೆಟ್ಟದ (ಗೋವರ್ಧನಗಿರಿ) ಮೇಲೆ ಇವನು ಗೋಪನಾಥ ದೇವಾಲಯವನ್ನು 1315ರಲ್ಲಿ ಕಟ್ಟಿಸಿದ. ಮುಂದೆ ಆಳಿದ ಈತನ ಮಗ ಭರತಜೀಯನ 1320ರ ಶಾಸನವಿದ್ದು, ಇವನ ಅನಂತರ ಆಳಿದ ಇವನ ಸೋದರ ಕೇತಯ್ಯನ 1327-34ರ ವರೆಗಿನ ಶಾಸನಗಳು ದೊರಕುತ್ತವೆ. ಬಂಗಯ್ಯ ಈ ವಂಶದ ಕೊನೆಯ ಅರಸು. ಈತ ಸು. 1338ರಲ್ಲಿ ಆಳುತ್ತಿದ್ದ. ಇವನ ಅನಂತರ ಹದಿನಾಲ್ಕು ನಾಡು ವಿಜಯನಗರ ಅರಸರ ಕಾಲದಲ್ಲಿ ಉಮ್ಮತ್ತೂರು ಪಾಳೆಯಗಾರರ ವಶಕ್ಕೆ ಹೋದಂತೆ ತೋರುತ್ತದೆ. ಮುಂದೆ ಬೆಟ್ಟದ ಕೋಟೆಯಿಂದ ಆಳುತ್ತಿದ್ದ ಒಂದು ವಂಶ ಇವರ ಸಂಬಂಧಿಗಳೇ ಎನ್ನಲು ಖಚಿತಾಧಾರವಿಲ್ಲ. (ಎಸ್.ಕೆ.)