ಹರಿಯಾಣ

	ಉತ್ತರ ಭಾರತದಲ್ಲಿರುವ ಒಂದು ರಾಜ್ಯ. ಹಿಂದೆ ಇದು ಪಂಜಾಬ್ ರಾಜ್ಯದಲ್ಲಿ ಸೇರಿತ್ತು. 1966 ನವೆಂಬರ್ 1 ರಂದು ರಾಜ್ಯ ಪುನರ್ವಿಂಗಡಣೆಯಲ್ಲಿ ಪಂಜಾಬ್ ರಾಜ್ಯದಿಂದ ಬೇರ್ಪಡಿಸಿ ಈ ರಾಜ್ಯವನ್ನು ರಚಿಸಲಾಯಿತು. ರಾಜಧಾನಿ ಚಂಡೀಗಢ. ಈ ರಾಜ್ಯ ಉತ್ತರ ಅಕ್ಷಾಂಶ 270 371 ದಿಂದ 300 251 ವರೆಗೆ ಹಾಗೂ ಪೂ. ರೇ. 740 281 ನಿಂದ 770 361 ದವರೆಗಿದೆ. ಒಟ್ಟು ವಿಸ್ತೀರ್ಣ 44,212 ಚ.ಕಿಮೀ. ಜನಸಂಖ್ಯೆ 2,10,82,989. ಈ ರಾಜ್ಯ ಸಮುದ್ರ ಮಟ್ಟದಿಂದ ಸು. 212-224 ಮೀ ಎತ್ತರದಲ್ಲಿದೆ. ಈ ರಾಜ್ಯ ಉತ್ತರ ಭಾಗದಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಂಚಲ, ಪೂರ್ವ ಭಾಗದಲ್ಲಿ ಉತ್ತರ ಪ್ರದೇಶ, ದಕ್ಷಿಣ ಭಾಗದಲ್ಲಿ ದೆಹಲಿ ಮತ್ತು ರಾಜಸ್ತಾನ ಹಾಗೂ ವಾಯವ್ಯ ಭಾಗದಲ್ಲಿ ಪಂಜಾಬ್ ರಾಜ್ಯಗಳಿಂದ ಸುತ್ತುವರಿಯಲ್ಪಟ್ಟಿದೆ. ಇದು 81 ನಗರ ಮತ್ತು ಪಟ್ಟಣಗಳನ್ನು ಒಳಗೊಂಡಿದೆ. ಅಂಬಾಲ, ಭಿವಾನಿ, ಫರೀದಾಬಾದ್, ಫತೇಹಬಾದ್, ಗುರ್‍ಗಾಂವ್, ಹಿಸ್ಸಾರ್, ಜಾಜರ್, ಜಿಂದ್, ಕೈತಲ್, ಕರ್ನಲ್, ಕುರುಕ್ಷೇತ್ರ, ಮಹೇಂದ್ರಘರ್, ಪಂಚಕುಲ, ಪಾಣಿಪಟ್, ರೆವಾರಿ, ರ್ಹೋಟಕ್, ಸಿರ್ಸಾ, ಸೋನಿಪತ್ ಮತ್ತು ಯಮುನಾನಗರ ಇವು ಈ ರಾಜ್ಯದ 19 ಜಿಲ್ಲೆಗಳು. ಈ ರಾಜ್ಯ 67 ತಾಲ್ಲೂಕುಗಳನ್ನೂ 6,759 ಗ್ರಾಮಗಳನ್ನೂ ಒಳಗೊಂಡಿದೆ. ಎಲ್ಲ ಹಳ್ಳಿಗಳು ವಿದ್ಯುತ್ ಸಂಪರ್ಕ ಪಡೆದಿವೆ.

ಈ ರಾಜ್ಯವನ್ನು ಭೂ ಮೇಲ್ಮೈ ಲಕ್ಷಣದ ಆಧಾರದ ಮೇಲೆ 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಶಿವಾಲಿಕ್ ಬೆಟ್ಟಗಳು. ಈ ಬೆಟ್ಟಗಳು ಸು. 900 — 2300 ಮೀ ಎತ್ತರವಾಗಿದ್ದು ಈ ರಾಜ್ಯದ ಪಂಚಕುಲ, ಅಂಬಾಲ ಮತ್ತು ಯಮುನಾನಗರ ಜಿಲ್ಲೆಗಳಲ್ಲಿ ಹಂಚಿಕೆಯಾಗಿವೆ. ಎರಡನೆಯದು ಘಾಗರ್ ಯಮುನಾ ಮೈದಾನ, ಈ ಮೈದಾನವನ್ನು ಭಂಗಾರ್ ಮತ್ತು ಖಾದರ್ ಎಂಬುದಾಗಿ ವಿಂಗಡಿಸಲಾಗಿದೆ. ಈ ಮೆಕ್ಕಲು ಮಣ್ಣಿನ ಮೈದಾನ ಮರಳು, ಜೇಡಿ ಮತ್ತು ಸುಣ್ಣಕಲ್ಲುಗಳನ್ನು ಒಳಗೊಂಡಿದ್ದು ಇದನ್ನು ಕಂಕರ್ ಎಂದು ಕರೆಯುವರು. ಮೂರನೆಯದು ಅರೆ ಮರುಭೂಮಿ ಮೈದಾನ. ಇದು ರಾಜಸ್ತಾನ ಗಡಿ ಭಾಗದಲ್ಲಿದೆ. ಈ ವಿಭಾಗವು ಸಿರ್ಸಾ, ಫತೇಹಬಾದ್, ಹಿಸ್ಸಾರ್, ಭಿವಾನಿ ಮತ್ತು ಮಹೇಂದ್ರಘರ್ ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ. ನಾಲ್ಕನೆಯದು ಅರಾವಳಿ ಬೆಟ್ಟಗಳು. ಇದು ಶುಷ್ಕ ಪ್ರದೇಶವಾಗಿದ್ದು ವೈವಿಧ್ಯಮಯವಾದ ಭೂ ಸ್ವರೂಪವನ್ನು ಒಳಗೊಂಡಿದೆ. ಈ ರಾಜ್ಯದಲ್ಲಿ ಸು. 1553 ಚ.ಕಿಮೀ ಅರಣ್ಯ ಪ್ರದೇಶವಿದೆ. (ಡಿ.ಐ.)

ಈ ರಾಜ್ಯಕ್ಕೆ ಪ್ರಾಚೀನ ಇತಿಹಾಸವಿದೆ. ಭರತವಂಶದ ಮೂಲ ಪುರುಷ ಭರತ ಇಲ್ಲಿಯವನೆಂದು ಹೇಳಲಾಗಿದೆ. ಮಹಾಭಾರತದ ಯುದ್ಧ ನಡೆಯಿತೆಂದು ಹೇಳಲಾದ ಕುರುಕ್ಷೇತ್ರ ಇಲ್ಲಿದೆ. ಮುಸ್ಲಿಮರ ಆಗಮನ ಹಾಗೂ ದೆಹಲಿಯ ಸುಲ್ತಾನರ ಆಡಳಿತ ಬರುವವರೆಗೆ ಇದಕ್ಕೆ ಬಹು ಪ್ರಾಮುಖ್ಯವಿತ್ತು. 1857ರ ಸಿಪಾಯಿ ದಂಗೆ ನಡೆದಾಗ ಇಲ್ಲಿಯ ಜನತೆ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದರು. ತರುವಾಯ ಇದನ್ನು ಪಂಜಾಬ್ ಪ್ರಾಂತಕ್ಕೆ ಸೇರಿಸಲಾಯಿತು.

ಕಾಗದ, ಹತ್ತಿ, ಸೈಕಲ್, ಟ್ರಾಕ್ಟರ್, ಟೈರು, ಟ್ಯೂಬು, ಉಕ್ಕಿನ ವಸ್ತುಗಳ ತಯಾರಿಕೆಗೆ ಈ ರಾಜ್ಯ ಪ್ರಸಿದ್ಧವಾಗಿದೆ. ಎಚ್.ಎಮ್.ಟಿ. ಟ್ರಾಕ್ಟರ್, ಮಾರುತಿ ಉದ್ಯೋಗ್ ಮೊದಲಾದ ಪ್ರಸಿದ್ಧ ಉದ್ಯಮಗಳು ಇಲ್ಲಿವೆ. ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಒದಗಿಸಿದ ಮೊದಲ ರಾಜ್ಯವಿದು. ಭಾರತೀಯ ಸೇನೆಯಲ್ಲಿ ಈ ರಾಜ್ಯದ ಸೇ.11.2 ಜನ ಸೇರಿದ್ದಾರೆ.

ಇಲ್ಲಿನ ಪ್ರವಾಸಿ ತಾನಗಳಲ್ಲಿ ರಾಜಹಂಸ್, ಬದ್ಕಲ್ ಸರೋವರ, ಸೂರಜ್‍ಕುಂಡ, ದಬ್‍ಚಿಕ್, ಸುಲ್ತಾನ್‍ಪುರ, ಬಾರ್ಬೆಟ್, ಸೋಹ್ನ ಹಾಗೂ ಪಿಂಜೋರ್ ಮುಖ್ಯವಾದುವು. *