ಹರಿಹರ 3

ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದ ಸಂಗಮ ಸಂತತಿಯ ಪ್ರಥಮ ರಾಜ (1336-56). 14ನೆಯ ಶತಮಾನದ ಆದಿಭಾಗದ ರಾಜಕೀಯದಲ್ಲಿ ಪ್ರಭಾವಿಯಾ ಗಿದ್ದ ಹೊಯ್ಸಳ 3ನೆಯ ಬಲ್ಲಾಳನ ಸೋದರಳಿಯ ಬಲ್ಲಪ್ಪಡಣ್ಣಾಯಕ ಹರಿಹರನ ಮಗಳನ್ನು ಮದುವೆಯಾಗಿದ್ದ. ಈ ನಂಟಸ್ತನ ಹಾಗೂ ಸ್ವಶಕ್ತಿಯಿಂದ ಹರಿಹರ ಮೊದಲು ಪ್ರಾಯಃ ಹೊಯ್ಸಳ ರಾಜ್ಯದ ಉತ್ತರಭಾಗದಲ್ಲಿ ಬಲ್ಲಾಳ ಮಂಡಲೇಶ್ವರನಾಗಿ ಅಧಿಕಾರಕ್ಕೆ ಬಂದಂತೆ ತೋರುತ್ತದೆ. ಈತನ ಆರಂಭದ ಶಾಸನಗಳಲ್ಲಿ ಇವನಿಗೆ ಮಹಾಮಂಡಳೇಶ್ವರ ಎಂಬ ಬಿರುದು ಇರುವುದಲ್ಲದೆ ಹೊಯ್ಸಳರಿಗೂ ಇವನಿಗೂ ಒಳ್ಳೆಯ ಸಂಬಂಧವೇ ಇದ್ದಿತೆಂಬುದಕ್ಕೆ ಆಧಾರಗಳಿವೆ. 1336ರಲ್ಲಿ ಹರಿಹರನು ಕರಾವಳಿಯಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಬಾರಕೂರಿನಲ್ಲಿ ಒಂದು ಕೋಟೆಯನ್ನು ಕಟ್ಟಿದ; 1338ರಲ್ಲಿ 3ನೆಯ ಬಲ್ಲಾಳ ಅದನ್ನು ಸಂದರ್ಶಿಸಿದ. ಹಂಪೆಗೆ 1339ರಲ್ಲಿ ಭೇಟಿ ಇತ್ತ. 1340ರಲ್ಲಿ ತನ್ನ ಮಗ ವಿರೂಪಾಕ್ಷನಿಗೆ ಹಂಪೆಯಲ್ಲಿ ಯುವರಾಜಪಟ್ಟ ಕಟ್ಟಿದ. ಬಲ್ಲಾಳನ ಈ ಹಂಪೆಯ ಭೇಟಿಗಳಿಗೂ ಅವನಿಗೂ ಪ್ರಾಯಃ ಆ ಭಾಗದಲ್ಲಿ ಅಧಿಕಾರವಹಿಸಿದ್ದ ಹರಿಹರನಿಗೂ ಇದ್ದ ಸುಸಂಬಂಧದ ಸೂಚಕವೆಂದು ತಿಳಿಯಬಹುದು. ಬಲ್ಲಾಳ ದಕ್ಷಿಣದಲ್ಲಿ ಸೈನ್ಯ ಕಾರ್ಯಾಚರಣೆಯಲ್ಲಿ ನಿರತನಾಗಿದ್ದಾಗ ಹರಿಹರ ಉತ್ತರಭಾಗದಲ್ಲಿ ಶತ್ರುನಿಗ್ರಹಕ್ಕಾಗಿ ಶ್ರಮಿಸಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡ. ಕರ್ನೂಲು ಜಿಲ್ಲೆಯಲ್ಲಿರುವ 1339ರ ಒಂದು ಶಾಸನದಲ್ಲಿ ಈತ ಪೂರ್ವಪಶ್ಚಿಮ ಸಮುದ್ರಾಧಿಪತಿಯೆಂದು ಕರೆದುಕೊಂಡಿದ್ದರೆ 1340ರ ಬಾದಾಮಿ ಶಾಸನದಲ್ಲಿ ಇವನನ್ನು ಅರಿರಾಯ ವಿಭಾಡ, ಭಾಷೆಗೆ ರಾಯರ ಗಂಡ ಎಂದು ಹೊಗಳಲಾಗಿದೆ. 1340ರ ಇನ್ನೊಂದು ಶಾಸನದಲ್ಲಿ ಈತ ಚತುಃಸಮುದ್ರಾಧಿಪತಿ ಎಂಬ ಬಿರುದಿನೊಡನೆ ಕಾಣಿಸಿಕೊಂಡಿದ್ದಾನೆ. 1340ರ ಸುಮಾರಿನಲ್ಲಿ ಗುತ್ತಿ ಇವನ ನೆಲೆವೀಡಾಗಿತ್ತು. 1342ರ ಹೊತ್ತಿಗೆ ಪಶ್ಚಿಮ ಕರಾವಳಿಯಲ್ಲಿ ಇವನ ಅಧಿಕಾರ ನೆಲೆಗೊಂಡಿತ್ತು. 1343ರ ಹೊತ್ತಿಗೆ ಮಹಾರಾಜಾಧಿರಾಜ, ರಾಜಪರಮೇಶ್ವರ, ವೀರಪ್ರತಾಪ, ಮಹಾರಾಜ ಮೊದಲಾದ ಸಾರ್ವಭೌಮ ಬಿರುದುಗಳನ್ನೂ ಧರಿಸಿದ್ದ. 1346ರ ಹೊತ್ತಿಗೆ ಹೊಯ್ಸಳ ವಂಶದ ಕೊನೆಯ ರಾಜ 4ನೆಯ ಬಲ್ಲಾಳನ ಆಳಿಕೆಯೂ ಮುಗಿದಿತ್ತಾಗಿ ಈತ ಹೊಯ್ಸಳರಾಜ್ಯದ ಉತ್ತರಭಾಗದ ಏಕಮೇವ ಅಧಿಪತಿಯಾದ. ಈ ವಿಜಯೋತ್ಸವವನ್ನು ಶೃಂಗೇರಿಯಲ್ಲಿ ವಿದ್ಯಾತೀರ್ಥರ ನೇತೃತ್ವದಲ್ಲಿ ಅದ್ದೂರಿಯಿಂದ ಆಚರಿಸ ಲಾಯಿತು. ಹರಿಹರ ತನ್ನ ತಮ್ಮಂದಿರು, ದಂಡನಾಯಕರು ಮತ್ತು ಪುರಪ್ರಮುಖರೊಡಗೂಡಿ ಈ ಉತ್ಸವದಲ್ಲಿ ಪಾಲ್ಗೊಂಡ. ಅಲ್ಲಿನ ಗುರು ಭಾರತೀತೀರ್ಥರಿಗೆ ದತ್ತಿಗಳನ್ನು ನೀಡಿದ.

ಆಡಳಿತದ ಆರಂಭದಲ್ಲಿಯೇ ಹರಿಹರ ರಾಜ್ಯದ ಸುಭದ್ರತೆಗೆ ಹೆಚ್ಚಿನ ಗಮನ ಹರಿಸಿದ. ನೆಲ್ಲೂರು ಜಿಲ್ಲೆಯ ಪ್ರಸಿದ್ಧವಾದ ಉದಯಗಿರಿ ಕೋಟೆಯನ್ನು ಪೂರ್ವಪ್ರಾಂತಗಳ ಕೇಂದ್ರವಾಗಿ ಮಾಡಿ ಅದರ ಆಡಳಿತವನ್ನು ತನ್ನ ಕಿರಿಯ ತಮ್ಮ ಕಂಪಣನಿಗೆ ವಹಿಸಿದ. ದೋರ ಸಮುದ್ರದ ಭಾಗಕ್ಕೆ ತನ್ನ ತಮ್ಮ ಹಾಗೂ ಯುವರಾಜ ಒಂದನೆಯ ಬುಕ್ಕನನ್ನು ನೇಮಿಸಿದ. ತುಂಗಭದ್ರಾ ಪ್ರದೇಶದಲ್ಲಿ ಸೀಮಿತವಾಗಿದ್ದ ತನ್ನ ರಾಜ್ಯವನ್ನು ಬಹುವಾಗಿ ವಿಸ್ತರಿಸಿದ.

ಮಧುರೆಯ ಸುಲ್ತಾನನ ಕಾರ್ಯಚಟುವಟಿಕೆಗಳತ್ತ ಹರಿಹರನ ಗಮನ ಹರಿಯಿತು. ಶಂಬುರಾಯನನ್ನು ಸೋಲಿಸಿ ಸೆರೆಹಿಡಿದು ಮಧುರೆಗೆ ಕರೆದೊಯ್ದಾಗ ಅವನನ್ನು ಬಂಧನದಿಂದ ವಿಮುಕ್ತಗೊಳಿಸಲು 1352-53ರಲ್ಲಿ ಕಂಪಣನ ಮಗ ರಾಜಕುಮಾರ ಸಾವಣ್ಣ ಹಾಗೂ ಬುಕ್ಕನ ಮಗ ಕುಮಾರ ಕಂಪಣ ಅವರ ನಾಯಕತ್ವದಲ್ಲಿ ಎರಡು ಸೈನ್ಯವನ್ನು ಕಳಿಸಿದ. ಅವರು ಸುಲ್ತಾನನನ್ನು ಸೋಲಿಸಿ, ಶಂಬುರಾಯನನ್ನು ಬಿಡುಗಡೆ ಮಾಡಿದರು. ಅವನು ಮತ್ತೆ ಪಟ್ಟಕ್ಕೆ ಬಂದ.

ಹರಿಹರ ಪ್ರಸಿದ್ಧ ಆಡಳಿತಗಾರ. ತನ್ನ ಮಂತ್ರಿ ಅನಂತರಸ ಚಿಕ್ಕ ಒಡೆಯನ ಸಹಾಯದಿಂದ ಪೌರಾಡಳಿತ ವ್ಯವಸ್ಥೆಯನ್ನು ದೃಢಪಡಿಸಿದ. ಈ ವ್ಯವಸ್ಥೆ ವಿಜಯನಗರದ ಕಡೆಯ ದಿನಗಳವರೆಗೂ ಮುಂದುವರಿ ಯಿತು. ತನ್ನ ರಾಜ್ಯವನ್ನು ಸ್ಥಳ, ನಾಡು, ಸೀಮೆಗಳಾಗಿ ವಿಂಗಡಿಸಿ ಕಂದಾಯದ ವಸೂಲಿ ಹಾಗೂ ಸ್ಥಳೀಯ ಆಡಳಿತಕ್ಕಾಗಿ ವಿವಿಧ ದರ್ಜೆಯ ಅಧಿಕಾರಿಗಳನ್ನು ನೇಮಿಸಿದ. ಇವನ ಆಳಿಕೆಯ ಕಾಲ ಹೆಚ್ಚಿನ ರಾಜಕೀಯ ಚಟುವಟಿಕೆಗಳಿಗೆ ಹೆಸರಾಗಿತ್ತು. ಈತ 1356ರಲ್ಲಿ ಮರಣಹೊಂದಿದ. (ಎಚ್.ವಿ.ಎಸ್.)