ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಲ್ಮಿಡಿಶಾಸನ

ಹಲ್ಮಿಡಿಶಾಸನ

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದಲ್ಲಿ ದೊರೆತ ಕನ್ನಡ ಭಾಷೆಯ ಪ್ರಾಚೀನತಮ ಶಾಸನ. ಕಾಲ ಸು. 450. ಈ ಶಾಸನವನ್ನು 1930ರ ಸುಮಾರಿಗೆ ಪತ್ತೆಹಚ್ಚಲಾಯಿತು. ಈಗ ಈ ಶಾಸನವನ್ನು ಬೆಂಗಳೂರಿನ ಪುರಾತತ್ತ್ವ ವಸ್ತುಸಂಗ್ರಹಾಲಯದಲ್ಲಿ ರಕ್ಷಿಸಿಡಲಾಗಿದೆ.

ವಿದ್ವಾಂಸರಾದ ಎಂ.ಎಚ್.ಕೃಷ್ಣ ಅವರು ಈ ಕುರಿತು 1936ರ ಮೈಸೂರು ಪುರಾತತ್ತ್ವ ಇಲಾಖೆಯ ವಾರ್ಷಿಕ ವರದಿಯಲ್ಲಿ ಮೊತ್ತಮೊದಲ ಬಾರಿಗೆ ವಿವರವಾಗಿ ಪ್ರಕಟಿಸಿದರು; ಅವರೇ ಅಲ್ಪಸ್ವಲ್ಪ ಗೌಣ ವ್ಯತ್ಯಾಸಗಳೊಡನೆ 1939ರಲ್ಲಿ ಪ್ರಬುದ್ಧ ಕರ್ಣಾಟಕ ಪತ್ರಿಕೆಯಲ್ಲಿ ಪ್ರಕಟಿಸಿದರು. ಹಲವು ವಿದ್ವಾಂಸರು ಈ ಶಾಸನದ ಪಠ್ಯ ಮತ್ತು ಅರ್ಥ ವಿವರಣೆಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.

ಶಾಸನಶಿಲೆಯ ಎತ್ತರ 4 ಅಡಿ, ಅಗಲ 1 ಅಡಿ, ದಪ್ಪ 9 ಅಂಗುಲ. ಇದರಲ್ಲಿ ಮೂರು ಭಾಗಗಳಿವೆ - ಕೆಳಗಣ ಹಾಸುಗಲ್ಲಿನ ಗುಳಿಗೆ ಸಿಕ್ಕಿಸಲು ಕೆತ್ತಿರುವ ಪಾದಭಾಗ; ನಯಗೊಳಿಸಿರುವ ಕಂಬದ ಭಾಗ; ಕಂಬದ ಮೇಲೆ ಕಮಾನಿನ ಆಕಾರ ಹೊಂದಿರುವ ಶಿರಭಾಗ. ಶಿರಭಾಗದಲ್ಲಿ 7 ಅಂಗುಲ ಅಗಲವಿರುವ ಚಕ್ರದ ಕೆತ್ತನೆ ಇದೆ. ಇದರ ಸುತ್ತ ಕಂಡರಿಸಿರುವ ಶ್ಲೋಕದಿಂದ ಅದು ಸುದರ್ಶನ ಚಕ್ರದ ಶಿಲ್ಪವೆಂದು ತಿಳಿಯುತ್ತದೆ. ಶಾಸನಕ್ಕೆ ಬಳಸಿದ ಶಿಲೆ ಒಂದು ಬಗೆಯ ಹಿಟ್ಟುಗಲ್ಲು.

ಶಾಸನ ಮುಖದಲ್ಲಿ 15 ಸಾಲುಗಳಿವೆ; 16ನೆಯ ಸಾಲನ್ನು ಬಲಪಾಶ್ರ್ವದಲ್ಲಿ ಕಂಡರಿಸಿದೆ. ಇಲ್ಲಿನ ಲಿಪಿ ಸಾತವಾಹನ ಕಾಲದ ಗುಹಾಲಿಪಿ ಮತ್ತು ಕದಂಬರ ಕಾಲದ ತಾಳಗುಂದ ಶಾಸನದ ಲಿಪಿಗಳನ್ನು ಹೋಲುತ್ತದೆ. ಶಿಲೆಗೆ ಪೆಟ್ಟಾಗಿರುವುದರಿಂದ ಅಕ್ಷರಗಳು ಅಲ್ಲಲ್ಲಿ ನಷ್ಟವಾಗಿವೆ. ಭಾಷಿಕವಾಗಿ ಕೆಲವು ದೋಷಗಳೂ ಕಂಡುಬರುತ್ತವೆ.

ಹಲ್ಮಿಡಿ ಶಾಸನದ ಭಾಷಾಶೈಲಿ ಸಂಸ್ಕøತ ಮಿಶ್ರ ಕನ್ನಡ. ಕನ್ನಡದ 25 ಪದಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಪ್ರಾರಂಭದ ಸಂಸ್ಕøತ ಶ್ಲೋಕವನ್ನು ಹೊರತುಪಡಿಸಿ ಉಳಿದೆಲ್ಲ ಪಾಠ ಗದ್ಯದಲ್ಲಿದೆ. ಇಲ್ಲಿನ ಕನ್ನಡವನ್ನು ಪೂರ್ವದ ಹಳಗನ್ನಡವೆಂದು ಕರೆಯಲಾಗಿದೆ. ವ್ಯಾಕರಣದ ದೃಷ್ಟಿಯಿಂದ ಕರ್ಮಣಿ ಪ್ರಯೋಗದ ಒಂದು ರೂಪವಿರುವುದು ಗಮನಾರ್ಹ. ಕನ್ನಡದ ಮೇಲೆ ಸಂಸ್ಕøತದ ಪ್ರಭಾವ ನಿಚ್ಚಳವಾಗಿದೆ. ಹಲ್ಮಿಡಿ ಶಾಸನಕ್ಕಿಂತ ಹಿಂದಿನ ಕೆಲವು ಶಾಸನಗಳಲ್ಲಿ ಕನ್ನಡದ ಕೆಲವು ಸ್ಥಳನಾಮಗಳು ಕಾಣಸಿಗುತ್ತವೆಯಾದರೂ ಕನ್ನಡದಲ್ಲಿ ಪ್ರೌಢಗದ್ಯದ ಬಳಕೆಯಾದುದು ಈ ಶಾಸನದಿಂದಲೇ. ಇದಕ್ಕೂ ಹಿಂದೆ ಕನ್ನಡ ಸಾಹಿತ್ಯ ಸಾಕಷ್ಟು ಬೆಳೆದಿರಬೇಕೆಂದು ಅಭಿಪ್ರಾಯಪಡಲಾಗಿದೆ. ಶಾಸನದಲ್ಲಿ ಉಕ್ತವಾಗಿರುವ ಸ¿್ಬಙ್ಗದರ್, ಪತ್ತೊನ್ದಿ, ಬಾಳ್ಗ¿್ಚು, ಕುರುಮ್ಬಿಡಿ ಮುಂತಾದ ವಿಶೇಷ ಪದಗಳ ಬಗ್ಗೆ ವಿದ್ವಾಂಸರು ಸಾಕಷ್ಟು ಚರ್ಚಿಸಿದ್ದಾರೆ.

ವಿಷ್ಣುಸ್ತುತಿಯಿಂದ ಪ್ರಾರಂಭವಾಗುವ ಶಾಸನ ಕದಂಬದೊರೆ ಕಕುಸ್ಥವರ್ಮನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಸೇಂದ್ರಕ ಮತ್ತು ಬಾಣ ಸೈನ್ಯದಿಂದ ಕೂಡಿದ ಕದಂಬರಿಗೂ ಕೇಕಯ ಸೈನ್ಯಸಹಿತವಾದ ಪಲ್ಲವರಿಗೂ ಯುದ್ಧವೊಂದು ನಡೆಯಿತು. ಅದರಲ್ಲಿ ಎಲ್ಲಭಟರಿಯ ಮಗನಾದ ವಿಜರಸ ಕದಂಬರ ಪರ ಹೋರಾಡಿ ಪಲ್ಲವರನ್ನು ಸೋಲಿಸಿದ. ಆಗ ನರಿದಾವಿಳೆನಾಡಿನ ಇಬ್ಬರು ಅಧಿಕಾರಿಗಳಾದ ಮೃಗೇಶ ಮತ್ತು ನಾಗ ಎಂಬುವರು ವಿಜರಸನಿಗೆ ಹಲ್ಮಿಡಿ ಮತ್ತು ಮೂ¾Âವಳ್ಳಿ ಎಂಬ ಎರಡು ಗ್ರಾಮಗಳನ್ನು ಕೊಡುಗೆಯಾಗಿ ನೀಡಿದರು. ಇದು ಶಾಸನದ ಸಾರ. ಯುದ್ಧ ನಡೆದುದು ನರಿದಾವಿಳೆನಾಡಿನಲ್ಲಿ ಎಂದು ಕಾಣುತ್ತದೆ. ಆ ನಾಡು ಈಗಿನ ಹಾಸನ, ಚಿಕ್ಕಮಗಳೂರು ಜಿಲ್ಲೆಯ ಭಾಗಗಳನ್ನು ಒಳಗೊಂಡ ದೇವಳಿಗೆನಾಡೆಂದು ಭಾವಿಸಲಾಗಿದೆ. ಶಾಸನೋಕ್ತ ಹಲ್ಮಿಡಿ ಈಗಿನ ಪಲ್ಮಿಡಿ ಹಾಗೂ ಮೂ¿Âವಳ್ಳಿಯು ಹಲ್ಮಿಡಿ ಸಮೀಪವಿರುವ ಈಗಿನ ಮಳವಳ್ಳಿ.

ಶಾಸನದಲ್ಲಿ ಪಶುಪತಿ ಎಂಬ ಭಟರಿಕುಲದ ನಾಯಕನನ್ನು ಪ್ರಶಂಸಿಸಲಾಗಿದೆ. ಈತನಿಗೂ ವಿಜರಸನಿಗೂ ಇರುವ ಸಂಬಂಧ ಸ್ಪಷ್ಟವಿಲ್ಲ. ಈತ ಕದಂಬ ದೊರೆಯ ಅಳಿಯನೆಂದೂ ಮಗಳ ಮಗನೆಂದೂ ವಿದ್ವಾಂಸರು ಬೇರೆ ಬೇರೆ ರೀತಿಯಲ್ಲಿ ಊಹಿಸಿದ್ದಾರೆ. ಶಾಸನ ಉಲ್ಲೇಖಿಸುವ ಆಳುಪ, ಸೇಂದ್ರಕ, ಕೇತಯ ಹಾಗೂ ಬಾಣರು ಕನ್ನಡನಾಡಿನ ಬೇರೆ ಬೇರೆ ಭಾಗಗಳಲ್ಲಿ ಆಡಳಿತ ನಡೆಸುತ್ತಿದ್ದರು.

ನಾಡಿನ ಸಂಸ್ಕøತಿಯ ಹಿರಿಮೆಯ ಹಾಗೂ ಪ್ರಾಚೀನತೆಯ ಪ್ರತೀಕವಾಗಿರುವ ಹಲ್ಮಿಡಿ ಶಾಸನದ ಪ್ರತಿಕೃತಿಯೊಂದನ್ನು ಮಾಡಿಸಿ ಹಲ್ಮಿಡಿ ಗ್ರಾಮದಲ್ಲಿ ಇತ್ತೀಚೆಗೆ ಸ್ಥಾಪಿಸಲಾಗಿದೆ. (ಎಚ್.ಎಮ್.ಎನ್.ಆರ್.)