ಹಳಿಯಾಳ ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಪೂರ್ವದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಮತ್ತು ಧಾರವಾಡ ತಾಲ್ಲೂಕುಗಳೂ ಉತ್ತರದಲ್ಲಿ ಬೆಳಗಾಂವಿ ಜಿಲ್ಲೆಯ ಖಾನಾಪುರ ತಾಲ್ಲೂಕೂ ಪಶ್ಚಿಮದಲ್ಲಿ ಜೋಯಿಡಾ, ದಕ್ಷಿಣದಲ್ಲಿ ಯಲ್ಲಾಪುರ ತಾಲ್ಲೂಕುಗಳೂ ಸುತ್ತುವರಿದಿವೆ. ದಾಂಡೇಲಿ, ಹಳಿಯಾಳ, ಮುರ್ತವಾಡ ಮತ್ತು ಸಾಂಬ್ರಾಣಿ ಹೋಬಳಿಗಳು. ಈ ತಾಲ್ಲೂಕಿನಲ್ಲಿ 110 ಗ್ರಾಮಗಳಿದ್ದು 2 ಪಟ್ಟಣಗಳಿವೆ. ವಿಸ್ತೀರ್ಣ 845.7 ಚ.ಕಿಮೀ. ಜನಸಂಖ್ಯೆ 1,05,816.

ಈ ತಾಲ್ಲೂಕು ಸಣ್ಣ ಬೆಟ್ಟಗುಡ್ಡಗಳಿಂದಲೂ ಅರಣ್ಯಪ್ರದೇಶದಿಂದಲೂ ಕೂಡಿದೆ. ಇಲ್ಲಿನ ಅರಣ್ಯದಲ್ಲಿ ತೇಗ, ಹೊನ್ನೆ, ಕೆಂದಳ, ನಂದಿ, ಬೀಟೆ, ಮತ್ತಿ, ಜಂಬೆ, ಶ್ರೀಗಂಧ, ನೀಲಗಿರಿ, ಬೆತ್ತ ಮತ್ತು ಬಿದಿರು ಬೆಳೆಯುತ್ತವೆ. ಗೋಂದು, ಜೇನು, ಸೀಗೆಕಾಯಿ, ಕಾಡುಮೆಣಸು, ಗಿಡಮೂಲಿಕೆಗಳು ಅರಣ್ಯೋತ್ಪನ್ನಗಳು. ಹುಲಿ, ಆನೆ, ಕರಡಿ, ಕಾಡುಕೋಣ, ಚಿಗರೆ, ಚಿರತೆ ಮತ್ತು ವಿವಿಧ ಬಗೆಯ ಹಾವುಗಳನ್ನು ಇಲ್ಲಿನ ಅರಣ್ಯಪ್ರದೇಶದಲ್ಲಿ ಕಾಣಬಹುದು. ಈ ತಾಲ್ಲೂಕಿನ ದಾಂಡೇಲಿ ಅಭಯಾರಣ್ಯ 204 ಚ.ಕಿಮೀ ಇದ್ದು ಒಟ್ಟು ಅರಣ್ಯ ಪ್ರದೇಶ 59,539 ಹೆಕ್ಟೇರ್‍ಗಳಷ್ಟಿದೆ. ಸಾಮಾನ್ಯವಾಗಿ ಇಲ್ಲಿನ ಹವೆ ತಂಪಾಗಿದ್ದರೂ ಸೆಕೆ ಹೆಚ್ಚು. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 986.5 ಮಿಮೀ. ಕಾಳಿ (ನೋಡಿ- ಕಾಳೀನದಿ) ತಾಲ್ಲೂಕಿನ ಮುಖ್ಯ ನದಿ. ಈ ನದಿ ಜೋಯಿಡಾ ತಾಲ್ಲೂಕಿನಲ್ಲಿ ಹುಟ್ಟಿ ಈ ತಾಲ್ಲೂಕನ್ನು ಪಶ್ಚಿಮದಲ್ಲಿ ದಾಂಡೇಲಿ ಮುಖಾಂತರ ತಾಲ್ಲೂಕಿನ ವಾಯವ್ಯದಿಂದ ಆಗ್ನೇಯಾಭಿಮುಖವಾಗಿ ಬೊಮ್ಮನಹಳ್ಳಿಯವರೆಗೂ ಹರಿದು ಅನಂತರ ದಕ್ಷಿಣಾಭಿಮುಖವಾಗಿ ಸ್ವಲ್ಪ ದೂರ ಪ್ರವಹಿಸಿ ಮುಂದೆ ಪಶ್ಚಿಮಾಭಿಮುಖವಾಗಿ ತಾಲ್ಲೂಕಿನ ಗಡಿಯಾಗಿ ಹರಿಯುವುದು. ಇದರ ಉಪನದಿ ತಟ್ಟಿಹಳ್ಳ, ತಾಲ್ಲೂಕಿನ ಒಳಗೆ ಉತ್ತರದಿಂದ ಆಗ್ನೇಯಾಭಿಮುಖವಾಗಿ ಹರಿದು ಮುಂದೆ ತಾಲ್ಲೂಕಿನ ದಕ್ಷಿಣದಲ್ಲಿ ಗಡಿಯಾಗಿ ಪಶ್ಚಿಮಾಭಿಮುಖವಾಗಿ ಸ್ವಲ್ಪ ದೂರ ಹರಿದು ಕಾಳಿ ನದಿಯನ್ನು ಸೇರಿಕೊಳ್ಳುವುದು.

ತಾಲ್ಲೂಕಿನಲ್ಲಿ ಸು. 17,302 ಹೆಕ್ಟೇರ್ ಭೂಪ್ರದೇಶ ಸಾಗುವಳಿಗೆ ಯೋಗ್ಯವಾಗಿದೆ; 4,480 ಹೆಕ್ಟೇರ್ ಬಂಜರುಭೂಮಿ ಇದೆ. ಸು. 4,000 ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯ ಪಡೆದಿದೆ. ಬತ್ತ ತಾಲ್ಲೂಕಿನ ಮುಖ್ಯ ಬೆಳೆ. ರಾಗಿ, ಜೋಳ, ದ್ವಿದಳ ಧಾನ್ಯಗಳನ್ನೂ ಕಬ್ಬನ್ನೂ ಬೆಳೆಯುತ್ತಾರೆ. ಹುಲ್ಲುಗಾವಲೂ ಸಾಕಷ್ಟಿದ್ದು ತಾಲ್ಲೂಕಿನಲ್ಲಿ ಪಶುಸಂಗೋಪನೆ ಇದೆ.

ಈ ತಾಲ್ಲೂಕು ಕೈಗಾರಿಕೆಯಲ್ಲೂ ಮುಂದುವರಿಯುತ್ತಿದೆಯೆನ್ನ ಬಹುದು. ಈ ತಾಲ್ಲೂಕಿನ ದಾಂಡೇಲಿಯಲ್ಲಿ ಕಾಗದದ ಕಾರ್ಖಾನೆ, ಪ್ಲೈವುಡ್, ಚಿಪ್‍ಬೋರ್ಡ್, ಫೆರೊ-ಮ್ಯಾಂಗನೀಸ್ ಮುಂತಾದವುಗಳ ಕಾರ್ಖಾನೆಗಳಿವೆ. ಮರ ಕೊಯ್ಯುವ ಕಾರ್ಖಾನೆಗಳೂ ಬಿದಿರಿನ ಕೈಗಾರಿಕೆಗಳೂ ಇವೆ.

ದಾಂಡೇಲಿಗೆ ರೈಲು ಸಂಪರ್ಕವಿದ್ದು, ದಾಂಡೇಲಿ-ಅಳಣಾವರ-ಲೋಂಡಾ ರೈಲುಮಾರ್ಗ ಇಲ್ಲಿಯ ಕೈಗಾರಿಕೆಯ ಅಭಿವೃದ್ಧಿಗೆ ಸಹಾಯಕವಾಗಿದೆ. ಕಾಳೀನದಿ ಯೋಜನೆಯ ಕೇಂದ್ರವಾಗಿ ಅಂಬಿಕಾನಗರ ವಿಸ್ತರಿಸುತ್ತಿದೆ. ಜನಸಂಖ್ಯೆ 4,848. ದಾಂಡೇಲಿಯ ಸುತ್ತಲಿನ ಕೆಲವು ಮುಖ್ಯ ಆಕರ್ಷಣೆಗಳಲ್ಲಿ ಕಾವಳಾ ಗುಹೆಗಳು, ಮಿಂಚೊಳ್ಳಿ ಜಲಪಾತ, ನಾಗಝರಿ ಕಣಿವೆ, ಸಿಂಥರಿ ರಾಕ್ಸ್, ಸೈಕ್ಸ್ ಪಾಯಿಂಟ್‍ನ ಸುಂದರನೋಟ ಇವುಗಳನ್ನು ಹೆಸರಿಸಬಹುದು. ತಾಲ್ಲೂಕು ಪ್ರಕೃತಿದತ್ತ ಸೌಂದರ್ಯಕ್ಕೆ ಹೆಸರಾಗಿದೆ.

ಹಳಿಯಾಳ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಯಲ್ಲಾಪುರದ ಉತ್ತರಕ್ಕೆ 40 ಕಿಮೀ ಅಂತರದಲ್ಲೂ ಕಾರವಾರದಿಂದ 144 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 20,652. ಈ ಪಟ್ಟಣ ಹೆದ್ದಾರಿಗಳಿಂದ ಸುತ್ತುವರಿದಿದೆ ಎನ್ನಬಹುದು. ಈ ಪಟ್ಟಣಕ್ಕೆ ಸಮೀಪದ ರೈಲ್ವೆ ನಿಲ್ದಾಣ ಅಳಣಾವರ. ಈ ಪಟ್ಟಣ ಒಂದು ವ್ಯಾಪಾರ ಕೇಂದ್ರ.

ಹಳಿಯಾಳ ಕೋಟೆಯ ಆವರಣದಲ್ಲಿರುವ ಶಿಲಾಶಾಸನದಲ್ಲಿ (ಸು. 800) ಈ ಊರಿನ ಹೆಸರು ಪಿಲ್ಲಿಯಾಳ ಎಂದಿದೆ. ಇದರ ಆಧುನಿಕ ರೂಪವೇ ಹಳಿಯಾಳ. ಈ ಪಟ್ಟಣದಲ್ಲಿ ಒಂದು ವಿಠೋಬ ಮಂದಿರ, ಈಶ್ವರನ ಗುಡಿ, ದತ್ತಾತ್ರಯ, ಹನುಮಂತ, ವೆಂಕಟರಮಣ ದೇವರ ಮಂದಿರಗಳಿವೆ. ಇಲ್ಲಿನ ದೇಮವ್ವಾಳ ದೇವಾಲಯದಲ್ಲಿ ದಸರವನ್ನು ಪಾಂಡವರ ವೇಷಗಳೊಂದಿಗೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಸ್ಥಳದಲ್ಲಿ ಪಾಂಡವರಿಗೆ ಸಂಬಂಧಪಟ್ಟ ಅನೇಕ ಪೌರಾಣಿಕ ಕಥೆಗಳಿವೆ. ಹಿಂದೆ ಬಿಜಾಪುರಕ್ಕೆ ಅರೇಬಿಯದಿಂದ ಸುಪಮಾರ್ಗವಾಗಿ ತರಲಾಗುತ್ತಿದ್ದ ಕುದುರೆಗಳಿಗೆ ಹಳಿಯಾಳ ಶಿಬಿರಸ್ಥಳವಾಗಿತ್ತು. ಹಳಿಯಾಳದಲ್ಲಿ ಮರಾಠರು ಕಟ್ಟಿಸಿದ ಕೋಟೆಯಿದ್ದು ಈಗ ಇದು ಹಾಳಾಗಿದೆ. ಮರಾಠರ ಆಂದೋಲನ ಪೂರ್ವದಲ್ಲಿ ಡ್ಯೂಕ್ ಆಫ್ ವೆಲ್ಲಿಂಗ್‍ಟನ್ ಇಲ್ಲಿ ವಾಸಿಸುತ್ತಿದ್ದ. ಈಗ ಇಲ್ಲಿ ಎರಡು ಪ್ರವೇಶ ಸ್ತಂಭಗಳನ್ನು ಕಾಣಬಹುದು.

(ವಿ.ಎನ್.ಬಿ.; ಆರ್.ಜಿ.ಆರ್.)