ಹಳ್ಳೂರು ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನಲ್ಲಿ ತುಂಗಭದ್ರಾ ನದೀತೀರದಲ್ಲಿರುವ ಒಂದು ಪ್ರಮುಖ ಪ್ರಾಗೈತಿಹಾಸಿಕ ನೆಲೆ; ರಾಣೆಬೆನ್ನೂರಿಗೆ 45 ಕಿಮೀ ದೂರದಲ್ಲಿದೆ.

ಈ ಪ್ರದೇಶದಲ್ಲಿರುವ ಶಾಸನೋಕ್ತ ಹಳ್ಳವೂರು, ವಿಜಯಸಮುದ್ರ, ವಿಜಯಪುರವನ್ನು ಹಳ್ಳೂರೆಂದು ಊಹಿಸಲಾಗಿದೆ. ಈ ಪ್ರದೇಶ ಬೆಳಗುತ್ತಿ ಸಿಂದರ ಆಧಿಪತ್ಯ ಸ್ಥಳವಾಗಿತ್ತು. ಹೊಯ್ಸಳರ ಅಧೀನ ಅರಸರಾಗಿದ್ದ ಇವರು ಹಳ್ಳೂರನ್ನು ಒಂದು ಸೈನಿಕ ಠಾಣೆಯಾಗಿಟ್ಟು ಕೊಂಡಿರಬೇಕು. ಈ ಊರಿನಲ್ಲಿ ಶ್ರೀರಂಗನಾಥ ದೇವಾಲಯವಿದೆ.

ಇಲ್ಲಿ ನಡೆಸಿದ ಉತ್ಖನನಗಳಿಂದಾಗಿ ನವಶಿಲಾಯುಗ ಸಂಸ್ಕøತಿಯಿಂದ ಮೊದಲುಗೊಂಡು ಬೃಹತ್ ಶಿಲಾಯುಗ ಸಂಸ್ಕøತಿಯವರೆಗಿನ ಚಿತ್ರಣ ಸಾಧ್ಯವಾಗಿದೆ. ನವಶಿಲಾಯುಗದ ಸಂಸ್ಕøತಿಯಲ್ಲಿ ಆದಿಭಾಗ (ಕ್ರಿ.ಪೂ. ಸು. 1710) ಹಾಗೂ ಉತ್ತರ ಭಾಗ (ಕ್ರಿ.ಪೂ. ಸು. 1425-1195) ಎಂದು ಎರಡು ವಿಭಾಗಗಳನ್ನು ಗುರುತಿಸಬಹುದಾಗಿದೆ. ಆದಿಭಾಗದ ಪದರಿನಲ್ಲಿ ಕಪ್ಪುಬಣ್ಣದ ಮಡಕೆಗಳೂ ಅವುಗಳ ಮೇಲೆ ಕೆಂಪುಬಣ್ಣದ ಅಲಂಕರಣೆಗಳೂ ಕೆಂಪು ಬಣ್ಣದ ಮಡಕೆಗಳೂ ಅವುಗಳ ಮೇಲೆ ಜಾಂಬಳಿ ಬಣ್ಣದ ಅಲಂಕರಣೆಗಳೂ ಕಂಡುಬಂದಿವೆ. ನಯಗೊಳಿಸಿದ ಕಲ್ಲಿನ ಕೊಡಲಿಗಳು ಈ ಪದರಿನಲ್ಲಿ ಹೇರಳವಾಗಿ ಸಿಕ್ಕಿಲ್ಲ. ಕಟ್ಟಡಗಳ ಅವಶೇಷಗಳೂ ಸಿಕ್ಕಿಲ್ಲ. ಕ್ವಾಟ್ರ್ಜ್ ಕಲ್ಲಿನ ಚಕ್ಕೆಗಳು ದೊರೆತಿವೆ. ಚಾಲ್ಕೋಲಿತಿಕ್ ಉದ್ಯಮದಲ್ಲಿ ವಿಶೇಷವಾಗಿ ಸಿಗುವ ಬ್ಲೇಡುಗಳು ಇಲ್ಲಿ ದೊರೆತಿರುವುದು ಗಮನಾರ್ಹ. ಆದರೆ ಲೋಹದ ವಸ್ತುಗಳಾವುವೂ ಸಿಕ್ಕಿಲ್ಲ.

ಉತ್ತರಭಾಗದಲ್ಲಿ, ನವಶಿಲಾಯುಗೀನ ಸಂಸ್ಕøತಿಯ ಚಿತ್ರಣ ಇನ್ನೂ ಸ್ಪಷ್ಟ. ವೃತ್ತಾಕಾರದ ಕಟ್ಟಡದ ತಳಪಾಯ, ಪೆಟ್ಟಿಸಿ ಗಟ್ಟಿಮಾಡಿದ ನೆಲದ ಭಾಗ, ಒಲೆ, ಬೆಂಕಿ ಉರಿಸುತ್ತಿದ್ದ ಸ್ಥಳ ಇತ್ಯಾದಿಗಳನ್ನು ಗುರುತಿಸಲಾಗಿದೆ. ವೃತ್ತಾಕಾರದ ಕಟ್ಟಡದ ಮಧ್ಯದಲ್ಲಿ ಎರಡು ಕುಣಿಗಳು ಕಂಡುಬಂದಿವೆ. ಇವುಗಳಲ್ಲಿ ಬಹುಶಃ ನೆಟ್ಟಕಂಬದ ಮೇಲೆ ಇಳಿಜಾರಾದ ಮಾಡು ನಿರ್ಮಿತವಾಗಿತ್ತು. ಈ ನೆಲೆಯಲ್ಲಿ ನಯಗೊಳಿಸಿದ ಕಲ್ಲಿನ ಕೊಡಲಿಗಳೂ ತಲೆಗೆ ಊರೆಯಾಗಿಟ್ಟುಕೊಳ್ಳುತ್ತಿದ್ದಿರಬಹುದಾದ ಕೊರಡು ಸಿಕ್ಕಿವೆ. ಕೈಯಿಂದ ಮಾಡಿದ ಮಡಕೆ ಕುಡಿಕೆಗಳೂ ಶವಸಂಸ್ಕಾರದಲ್ಲಿ ಉಪಯೋಗಿಸುತ್ತಿದ್ದ ಮಣ್ಣಿನ ದೊಡ್ಡ ಪಾತ್ರೆಗಳೂ ಸಿಕ್ಕಿವೆ. ಇಂಥ ಪಾತ್ರೆಗಳಲ್ಲಿ ಎಲುಬುಗಳನ್ನಿಟ್ಟು, ಅವುಗಳ ಬಾಯಿಗಳನ್ನು ಒಂದಕ್ಕೊಂದು ಸೇರಿಸಿಬಿಡುತ್ತಿದ್ದರು. ಮಣ್ಣಿನಿಂದ ಮಾಡಿದ ಸುಟ್ಟ ಮಣಿಗಳೂ ಚಿಪ್ಪಿನಿಂದ ಮಾಡಿದ ಹಾಗೂ ಸಾಬೂನುಗಲ್ಲಿನಿಂದ ಮಾಡಿದ ಮಣಿಗಳೂ ಸಾಕಷ್ಟು ಸಿಕ್ಕಿವೆ. ಎಲುಬಿನಿಂದ ತಯಾರಿಸಿದ ದಬ್ಬಳದಂಥ ಉಪಕರಣಗಳೂ ದೊರೆತಿವೆ. ಎರಡು ಅಲಗುಳ್ಳ ತಾಮ್ರದ ಕೊಡಲಿ (ಪರಶುವಿನಂಥ ಕೊಡಲಿ) ಮೀನು ಹಿಡಿಯಲು ಬಳಸುವ ಗಾಳಗಳೂ ಕಂಡುಬಂದಿವೆ. ಸುಟ್ಟ ಎಲುಬಿನ ಚೂರುಗಳೂ ಸುಟ್ಟ ರಾಗಿಕಾಳುಗಳೂ ದೊರೆತಿದ್ದು ಇವು ಆ ಕಾಲದ ಜನರ ಆಹಾರ ವಿಧಾನದ ಬಗೆಗೆ ವಿಶೇಷ ಮಾಹಿತಿ ನೀಡುತ್ತವೆ(ರಾಗಿಯ ಅತ್ಯಂತ ಪ್ರಾಚೀನ ಕಾಳುಗಳು ದೊರೆತದ್ದು ಈ ಸ್ಥಳದಲ್ಲಿ ಎಂಬುದನ್ನು ಇಲ್ಲಿ ಗಮನಿಸಬೇಕು. ಕ್ರಿ.ಪೂ. ಸು. 1600). ಈ ಎಲ್ಲ ವಸ್ತು ವಿಶೇಷಗಳನ್ನು ಆಧರಿಸಿ ಈ ಪ್ರದೇಶದಲ್ಲಿದ್ದ ನವಶಿಲಾಯುಗದ ಜನರ ಜೀನವಕ್ರಮ, ಆಹಾರ ಪದ್ಧತಿ, ಪ್ರಾಣಿ ಸಾಕಣೆ, ಕೃಷಿ, ಕೈಗಾರಿಕೆ, ಚಾಪೆ ಹೆಣಿಗೆ, ಮೀನುಗಾರಿಕೆ ಇತ್ಯಾದಿ ಚಿತ್ರಿಸಬಹುದು. ಶವಸಂಸ್ಕಾರ ಪದ್ಧತಿಯನ್ನು ಗಮನಿಸಿದರೆ ಆ ಜನರಿಗೆ ಬಹುಶಃ ಪುನರ್ಜನ್ಮದಲ್ಲಿ ನಂಬಿಕೆಯಿದ್ದಿರಬೇಕು. ಇಂಥ ನವಶಿಲಾಯುಗದ ಸಂಸ್ಕøತಿಯ ಅನಂತರ ಕ್ರಿ.ಪೂ. ಸು. 1000ದ ಸುಮಾರಿಗೆ ಬೃಹತ್ ಶಿಲಾಯುಗೀನ ಜನಜೀವನ ಹಳ್ಳೂರಿನಲ್ಲಿ ಆರಂಭವಾಯಿತು. ಸಮಾಧಿ ರಚನೆಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸುವುದು, ವಿವರಪೂರ್ಣವಾದ ಶವಸಂಸ್ಕಾರ ಪದ್ಧತಿ, ಚರಕದ ಮೇಲಿಟ್ಟು ರಚಿಸಿದ ಕಪ್ಪು-ಕೆಂಪು ಮಡಕೆ ಕುಡಿಕೆಗಳ ಬಳಕೆ, ಕಬ್ಬಿಣದ ಆಯುಧೋಪಕರಣಗಳ ಉಪಯೋಗ (ಬಾಣದ ಮೊನೆ, ಭರ್ಜಿ, ಚಾಕು ಇತ್ಯಾದಿ) ಮುಂತಾದವು ಇಲ್ಲಿಯ ಬೃಹತ್ ಶಿಲಾಯುಗೀನ ಸಂಸ್ಕøತಿಯ ಕೆಲವು ಲಕ್ಷಣಗಳು. ಇವಲ್ಲದೆ ಹಳ್ಳೂರಿನಲ್ಲಿ ಕಬ್ಬಿಣದ ಉಪಕರಣಗಳಿಗೆ ಅಂಟಿಕೊಂಡಿದ್ದ ಬತ್ತದ ಹೊಟ್ಟು ಪತ್ತೆಯಾಗಿದ್ದು, ಇದರಿಂದ ಆ ಕಾಲದ ಆಹಾರ ಪದ್ಧತಿಯ ಬಗೆಗೆ ಮಾಹಿತಿ ದೊರೆಯುತ್ತದೆ. ಇಲ್ಲಿ ದೊರೆತ ಕಬ್ಬಿಣದ ಆಯುಧೋಪಕರಣಗಳ ಕಾಲ ಕ್ರಿ.ಪೂ. ಸು. 1000.

(ಎಚ್.ಆರ್.ಆರ್.)