ಹಸಲರು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ಪ್ರಮುಖ ಬುಡಕಟ್ಟುಗಳ ಪೈಕಿ ಒಂದು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸೊರಬ, ಸಾಗರ; ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರಗಳಲ್ಲಿ ಕಂಡುಬರುತ್ತಾರೆ. ಇವರಲ್ಲಿ ಬೆಳ್ಳಿಹಸಲರು, ಬಗ್ಗಾಲಿನ ಹಸಲರು, ನಾಡಹಸಲರು, ಕರು ಎಳೆಯುವ ಹಸಲರು ಮುಂತಾದ ಒಳಪಂಗಡಗ ಳಿವೆ. ಮರಗೆಲಸ ಇವರ ಕುಲಕಸಬು. ಹೆಂಗಸರು ಮನೆ ಕೆಲಸದೊಂದಿಗೆ ಹೊಲ, ಗದ್ದೆ ಹಾಗೂ ತೋಟಗಳಲ್ಲಿ ಅಡಕೆ ಸುಲಿಯುತ್ತಾರೆ. ಬಗ್ಗಾಲಿನ ಹಸಲರು ಹೆಚ್ಚಾಗಿ ಮಲೆನಾಡಿನ ಅಡಕೆ ತೋಟಗಳಲ್ಲಿ ಕೆಲಸಮಾಡು ತ್ತಾರೆ. ಬಿದಿರು, ಕಣಜ, ಬೆತ್ತದ ಬುಟ್ಟಿಗಳನ್ನು ಹೆಣೆಯುವವರೂ ಉಂಟು. ಇವರು ಶ್ರಮಜೀವಿಗಳು. ಇವರು ತಮ್ಮ ಪ್ರದೇಶದ ಮೇಲ್ವರ್ಗದ ಜಮೀನುದಾರರನ್ನು ಆಧರಿಸಿ ಬದುಕುತ್ತಿದ್ದಾರೆ. ಸಾಮಾಜಿಕವಾಗಿ ಯಾವುದೇ ಸ್ಥಾನಮಾನಗಳು ಇವರಿಗಿಲ್ಲ. ಇವರ ಉಡುಗೆ ತೊಡುಗೆಗಳು ತುಂಬ ಸರಳ. ಪುರುಷರು ತುಂಡು ಪಂಚೆಯುಟ್ಟು ಅಂಗಿ ಧರಿಸುತ್ತಾರೆ. ಸ್ತ್ರೀಯರು ಮೊಣಕಾಲವರೆಗೆ ಮಾತ್ರ ಸೀರೆ ಉಡುತ್ತಾರೆ. ಕರಿಮಣಿ, ಕಾಲುಂಗುರ, ಐದಾಳಿ ಮಂಗಳಸೂತ್ರ, ಕೊಲ್ಲಡಗ ಧರಿಸುತ್ತಾರೆ. ಇವರಲ್ಲಿ ತಿಳಿವಳಿಕೆ ಇರುವ ವ್ಯಕ್ತಿಯೊಬ್ಬ ಹಿರಿಯ ಎಂದು ಕರೆಸಿಕೊಂಡು ಆಚಾರ್ಯಸ್ಥಾನಗಳಿಸುತ್ತಾನೆ. ಶುಭಕಾರ್ಯಗಳಲ್ಲಿ ಈ ಹಿರಿಯನಿಗೆ ವಿಶೇಷ ಸ್ಥಾನಮಾನ. ಇವರಲ್ಲಿ ಮದುವೆಯಾಗುವವ ತೆರಕೊಟ್ಟು ಮದುವೆಯಾಗಬೇಕು. ಈ ತೆರದ ಮೌಲ್ಯ ನೂರರಿಂದ ನೂರೈವತ್ತು ರೂಪಾಯಿಗಳು. ಆರು ದಿನಗಳ ತನಕ ಮದುವೆ ನಡೆಯುತ್ತದೆ. ಮದುವೆ ಸಂದರ್ಭದಲ್ಲಿ ಬಿಲ್ಲು-ಬಾಣಗಳನ್ನು ಪೂಜಿಸುವುದು ಇವರ ಸಂಪ್ರದಾಯ. ವಿಧವಾವಿವಾಹ ಈ ಜನರಲ್ಲಿ ಪ್ರಚಲಿತದಲ್ಲಿದೆ. ವಿಧುರ ಮರುಮದುವೆಯಾದರೆ ತೆರದ ಮೌಲ್ಯ ಇನ್ನೂರು ರೂಪಾಯಿಗಳಿಗೂ ಅಧಿಕ.

ಹಸಲರ ಹುಡುಗಿ ಮೈನೆರದ ಬಳಿಕ ಹನ್ನೆರಡು ದಿನಗಳ ತನಕ ಪ್ರತ್ಯೇಕ ಜಾಗದಲ್ಲಿ ಉಳಿದುಕೊಳ್ಳಲು ವ್ಯವಸ್ಥೆಮಾಡುತ್ತಾರೆ. ಐದು, ಏಳು ಅಥವಾ ಹನ್ನೆರಡನೆಯ ದಿನದಂದು ಆಕೆಗೆ ಸ್ನಾನಮಾಡಿಸಿ ದಾಸಯ್ಯನ ಮನೆಯಿಂದ ತೀರ್ಥತಂದು ಕುಡಿಸಿ ಶುದ್ಧಿಗೊಳಿಸುತ್ತಾರೆ. ಇವರಿಗೆ ದೀಪಾವಳಿ ದೊಡ್ಡಹಬ್ಬ. ಅಲ್ಲದೆ ಗಣೇಶ ಚತುರ್ಥಿ, ನವರಾತ್ರಿ ಹಬ್ಬಗಳನ್ನು ಉತ್ಸಾಹದಿಂದ ಆಚರಿಸುತ್ತಾರೆ. ಜಟಗ, ಭೂತ, ಗಾಮ, ಮಾರಿ ದೇವತೆಗಳನ್ನು ಭಯಭಕ್ತಿಗಳಿಂದ ಪೂಜಿಸುತ್ತಾರೆ. ಕಡುಕಪ್ಪು ಬಣ್ಣದ ಮಿಂಚುವ ಗಟ್ಟಿದೇಹದ ಪುರುಷರಿಗೆ ತೋಟದ ಕೆಲಸ ಎಷ್ಟು ಪ್ರಿಯವೋ ಕೋವಿ ಹಿಡಿದು ಬೇಟೆಯಾಡುವುದೂ ಅಷ್ಟೇ ಪ್ರಿಯ. ದೀಪಾವಳಿ ಹಬ್ಬದಲ್ಲಿ ಅಂಟಿಕೆ ಪಂಟಿಕೆ ಹಾಡುಗಳನ್ನು ಹಾಡುತ್ತಾರೆ. ಡೊಳ್ಳುಕಟ್ಟಿ ಕುಣಿಯುತ್ತಾರೆ. ಮದುವೆ ಸಮಯದಲ್ಲಿ ಹಾಡಿಕೊಂಡು ಕುಣಿಯುವುದುಂಟು. ಇವರಲ್ಲಿ ಎಲ್ಲಮ್ಮ ದೇವತೆಯ ತಾಳಿ ಮತ್ತು ಗುತ್ಯಮ್ಮ ದೇವತೆಯ ಮಣಿ ಪಡೆದವರ ದೇಹಗಳನ್ನು ಸುಡುತ್ತಾರೆ. ಪ್ರೇತಗಳಲ್ಲಿ ಇವರಿಗೆ ಬಲು ನಂಬಿಕೆ. ಜಾನುವಾರುಗಳಿಗೆ ತೊಂದರೆಯಾದಾಗ ಗಾಚಿಗನೆಂಬ ಮಂತ್ರವಾದಿಯಲ್ಲಿ ನಿಮಿತ್ತಕೇಳುವುದು ಪರಿಹಾರದ ಮಾರ್ಗ.

ಇವರಲ್ಲಿ ಅಕ್ಷರಸ್ಥರು ಕಡಿಮೆ. ಸೇಕಡ ಮೂರರಷ್ಟು ಮಂದಿ ಮಾತ್ರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಮಲೆನಾಡಿನ ಕೆಲವಡೆ ಇವರನ್ನು ಹುಟ್ಟಾಳುಗಳೆಂದು ಕರೆಯುವುದುಂಟು.

(ಎಮ್.ಆರ್‍ಇ.)