ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಡ್ಜ್‌ಕಿನ್, ಡಾರತಿ ಕ್ರೋಫುಟ್

ಹಾಡ್ಜ್‍ಕಿನ್, ಡಾರತಿ ಕ್ರೋಫುಟ್

	1910-94. ಪ್ರಮುಖ ಜೀವವೈಜ್ಞಾನಿಕ ಅಣುಗಳ ಸಂರಚನೆಗಳನ್ನು ಎಕ್ಸ್-ಕಿರಣ ತಂತ್ರಗಳಿಂದ ನಿರ್ಧರಿಸಿದ್ದಕ್ಕಾಗಿ ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿ ಪುರಸ್ಕøತ (1964) ಬ್ರಿಟಿಷ್ ರಸಾಯನ ಮತ್ತು ಸ್ಫಟಿಕವಿಜ್ಞಾನಿ. ಪೆನಿಸಿಲಿನ್, ಜೀವಸತ್ವ ಡಿ, ಬಿ-12 ಮತ್ತು ಇನ್‍ಸುಲಿನ್ ಇವೇ ಮೊದಲಾದ 100ಕ್ಕೂ ಹೆಚ್ಚಿನ ಅಣುಗಳ ಒಟ್ಟಾರೆ ಆಕಾರ ಹಾಗೂ ಪರಮಾಣು ಜೋಡಣಾ ಕ್ರಮವನ್ನು ಎಕ್ಸ್-ಕಿರಣಗಳನ್ನು ಉಪಯೋಗಿಸಿ ಪತ್ತೆಹಚ್ಚಿದಾಕೆ. ಪ್ರಮುಖ ವಿಶ್ಲೇಷಣ ಸಾಧನದ ಸ್ತರಕ್ಕೆ ಎಕ್ಸ್-ಕಿರಣ ಸ್ಫಟಿಕವಿಜ್ಞಾನ ಒಯ್ದದ್ದು ಈಕೆಯ ಇನ್ನೊಂದು ಸಾಧನೆ.

1910 ಮೇ 12ರಂದು ಕೈರೋದಲ್ಲಿ ಜನನ. ಇಂಗ್ಲೆಂಡಿನ ಜಾನ್ ಲೆಮ್ಯಾನ್ ಸ್ಕೂಲ್, ಬೆಕ್‍ಲೆಸ್‍ನಲ್ಲಿ ಶಾಲಾಶಿಕ್ಷಣ ಮುಗಿಸುವ ವೇಳೆಗಾಗಲೇ (1928) ರಸಾಯನ ಹಾಗೂ ಜೀವರಸಾಯನ ವಿಜ್ಞಾನದಲ್ಲಿ ಆಸಕ್ತಿ. ಸಮರ್‍ವಿಲ್ಲೆ ಕಾಲೇಜ್, ಆಕ್ಸ್‍ಫರ್ಡ್‍ನಲ್ಲಿ ಶಿಕ್ಷಣ ಮುಂದುವರಿಕೆ (1928-32), ಸ್ನಾತಕ ಪದವಿ ಪ್ರಾಪ್ತಿ. ಅಧ್ಯಾಪಕರಿಂದ ಪ್ರೇರಿತಳಾಗಿ ಸ್ಫಟಿಕವಿಜ್ಞಾನದತ್ತ ಒಲವು. ಸಂಶೋಧನ ಸಹಾಯಕಿಯಾಗಿ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಸೇರ್ಪಡೆ. ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ತಲಾ ಒಂದೊಂದು ವರ್ಷ ಸಂಶೋಧನ ಫೆಲೋಶಿಪ್ ಪ್ರಾಪ್ತಿ. ಕೊಲೆಸ್ಟಿರಾಲ್ ಅಯೋಡೈಡ್ ಅಣುವಿನ ವಿಶ್ಲೇಷಣೆಯೊಂದಿಗೆ (1934) ಆವಿಷ್ಕಾರಗಳ ಸರಣಿಯಾರಂಭ.

ಈಕೆಯ ಆವಿಷ್ಕಾರಗಳಿಂದ ಮನುಕುಲಕ್ಕೆ ಆದ ಲಾಭ ಅಮೂಲ್ಯ. ಉದಾ: ಬಿ-12 ಜೀವಸತ್ವದ ಸಂರಚನೆಯ ಆವಿಷ್ಕಾರದಿಂದಾಗಿ ಕೆಂಪು ರಕ್ತಕಣೋತ್ಪಾದನೆಗೆ ಕಬ್ಬಿಣವನ್ನು ಮಾನವ ದೇಹ ಹೇಗೆ ಬಳಸಿಕೊಳ್ಳುತ್ತದೆ ಎಂಬುದು ಅರ್ಥವಾಯಿತು, ಕೆಲವು ಬಗೆಯ ರಕ್ತಹೀನತೆಯನ್ನು ತಡೆಗಟ್ಟಲು ಸಾಧ್ಯವಾಯಿತು. ಅನೇಕ ಪ್ರತಿಜೈವಿಕಗಳ ಸೃಷ್ಟಿ ಸಾಧ್ಯವಾದದ್ದು ಪೆನಿಸಿಲಿನ್ ಸಂರಚನೆಯ ಆವಿಷ್ಕಾರದಿಂದಾಗಿ. ಇನ್‍ಸುಲಿನ್‍ನ ಮೂರು ಆಯಾಮ ಸಂರಚನೆಯನ್ನು ಆವಿಷ್ಕರಿಸಿದ್ದು ಸಿಹಿಮೂತ್ರ ರೋಗ ನಿಯಂತ್ರಣ ವಿಧಾನ ರೂಪಣೆಗೆ ಕಾರಣವಾಯಿತು.

ಡಾಕ್ಟೊರೇಟ್ ಪದವಿ ಗಳಿಕೆಯ ಅನಂತರ ವೃತ್ತಿಜೀವನದ ಬಹುಭಾಗವನ್ನು ಕಳೆದದ್ದು ಆಕ್ಸ್‍ಫರ್ಡ್ ಮತ್ತು ಸಮರ್‍ವಿಲ್ಲೆಗಳಲ್ಲಿ. ಆರಂಭದಲ್ಲಿ ಸಮರ್‍ವಿಲ್ಲೆಯಲ್ಲಿ ಅಫೀಶಿಯಲ್ ಫೆಲೊ ಹಾಗೂ ನ್ಯಾಚುರಲ್ ಸೈನ್ಸ್‍ನ ಟ್ಯೂಟರ್ ಆಗಿ ಮಹಿಳಾ ಕಾಲೇಜುಗಳಲ್ಲಿ ರಸಾಯನವಿಜ್ಞಾನ ಬೋಧನೆ; ತದನಂತರ (1946) ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ ಹಾಗೂ ಡೆಮಾನ್‍ಸ್ಟ್ರೇಟರ್; ಎಕ್ಸ್-ಕಿರಣ ಸ್ಫಟಿಕವಿಜ್ಞಾನದ ರೀಡರ್ (1956); ರಾಯಲ್ ಸೊಸೈಟಿಯ ವೂಲ್ಫ್‍ಸನ್ ಸಂಶೋಧನ ಪ್ರಾಧ್ಯಾಪಕಿ (1960).

ಈಕೆಯ ಸಾಧನೆಗಳ ಅಗಾಧತೆಗೆ ಮನ್ನಣೆಯ ರೂಪದಲ್ಲಿ ರಾಯಲ್ ಸೊಸೈಟಿ ಸದಸ್ಯತ್ವ (1947), ರಾಯಲ್ ನೆದರ್‍ಲೆಂಡ್ಸ್ ಅಕಾಡೆಮಿ ಆಫ್ ಸೈನ್ಸಸ್‍ನ ಪರಕೀಯ ಸದಸ್ಯತ್ವ (1956), ಅಮೆರಿಕನ್ ಅಕಾಡೆಮಿ ಆಫ್ ಆಟ್ರ್ಸ್ ಅ್ಯಂಡ್ ಸೈನ್ಸಸ್‍ನ ಸದಸ್ಯತ್ವ (1958), ಆರ್ಡರ್ ಆಫ್ ಮೆರಿಟ್ ಪುರಸ್ಕಾರ (1965, ಫ್ಲಾರೆನ್ಸ್ ನೈಟಿಂಗೇಲ್ ಬಳಿಕ ಈ ಪ್ರಶಸ್ತಿ ಗಳಿಸಿದ ಎರಡನೆಯ ಮಹಿಳೆ) ಇವೇ ಮೊದಲಾದ ಗೌರವ ಪ್ರಾಪ್ತಿ. ಇಂಗ್ಲೆಂಡಿನ ಮಾಜಿ ಪ್ರಧಾನಿ ಮಾರ್ಗರೆಟ್ ತ್ಯಾಚರ್ ಈಕೆಯ ವಿದ್ಯಾರ್ಥಿಯಾಗಿದ್ದದ್ದು, ಈಕೆಯ ಕೊನೆಯ ಮಗ ಭಾರತದಲ್ಲಿ ಒಂದು ವರ್ಷ ಪ್ರಿ ಯೂನಿವರ್ಸಿಟಿ ಅಧ್ಯಯನ ಮಾಡಿದ್ದು ಮತ್ತು ವ್ಯಾಸಂಗಾನಂತರ ಭಾರತದಲ್ಲಿ ಕೆಲಸ ಮಾಡಿದ್ದು ಆಕಸ್ಮಿಕಗಳು.

ಈಕೆ 1994 ಜುಲೈ 29ರಂದು ನಿಧನರಾದಳು. *