ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಥಾರ್ನ್, ನೇಥೇನಿಯಲ್

ಹಾಥಾರ್ನ್, ನೇಥೇನಿಯಲ್ 1804-64. ಅಮೆರಿಕದ ಪ್ರಸಿದ್ಧ ಸಣ್ಣಕಥೆಗಾರ ಹಾಗೂ ಕಾದಂಬರಿಕಾರ. ಸ್ಕಾರ್ಲೆಟ್ ಲೆಟರ್ ಎಂಬ ಕಾದಂಬರಿಯಿಂದಾಗಿ ಪ್ರಪಂಚ ಪ್ರಸಿದ್ಧನಾಗಿದ್ದಾನೆ. ಈತ 1804 ಜುಲೈ 4ರಂದು ಮೆಸಾಚುಸೆಟ್ಸ್‍ನ ಸಲೆಮ್ ಎಂಬಲ್ಲಿ ಜನಿಸಿದ. ಬೌಡೊಇನ್ ಕಾಲೇಜಿನಲ್ಲಿ ವ್ಯಾಸಂಗಮಾಡಿ 1825ರಲ್ಲಿ ಪದವೀಧರನಾದ. ಮುಂದೆ ಅಮೆರಿಕದ ಅಧ್ಯಕ್ಷನಾದ ಫ್ರಾಂಕ್ಲಿನ್ ಪಿಯರ್ಸ್ ಎಂಬುವವನು ಕಾಲೇಜಿನಲ್ಲಿ ಓದುವಾಗ ಇವನ ಸ್ನೇಹಿತನಾಗಿದ್ದ. ಹಾಥಾರ್ನ್ ತನ್ನ ವಿದ್ಯಾಭ್ಯಾಸ ಮುಗಿಸಿದ ಅನಂತರ ಸಲೆಮ್‍ನಲ್ಲಿ ನೆಲಸಿ ಸಾಹಿತ್ಯರಚನೆಯಲ್ಲಿ ತೊಡಗಿದ. 1839-40ರಲ್ಲಿ ಈತ ಬಾಸ್ಟನ್ ಸುಂಕದಕಟ್ಟೆಯಲ್ಲಿ ಕೆಲಸ ಮಾಡಿದ. 1842ರಲ್ಲಿ ಸೋಫಿಯ ಪೀಬಡಿ ಎಂಬಾಕೆಯನ್ನು ವಿವಾಹವಾದ. ಅವಳ ಮೂಲಕ ಇವನಿಗೆ ಎಮರ್ಸನ್, ಥೋರೋ, ಮಾರ್ಗರೆಟ್ ಫುಲ್ಲರ್- ಮೊದಲಾದ ಪ್ರಸಿದ್ಧರ ಸ್ನೇಹಪರಿಚಯವಾಯಿತು. ಈತ ಸಲೆಮ್ ಬಂದರಿನಲ್ಲಿ ಸುಂಕದಕಟ್ಟೆ ಸೂಪರ್‍ವೈಸರ್ ಆಗಿ ಕೆಲಸಮಾಡಿದ (1846-49). ಸ್ನೇಹಿತ ಫ್ರಾಂಕ್ಲಿನ್ ಪಿಯರ್ಸ್ 1853ರಲ್ಲಿ ಇವನನ್ನು ನಾಲ್ಕು ವರ್ಷಗಳ ಅವಧಿಗೆ ಇಂಗ್ಲೆಂಡಿನ ಲಿವರ್‍ಪೂಲ್‍ಗೆ ರಾಜಪ್ರತಿನಿಧಿಯಾಗಿ ನೇಮಿಸಿದ. ಅನಂತರ ಈತ ಕೆಲಕಾಲ ಇಟಲಿ ಹಾಗೂ ಇಂಗ್ಲೆಂಡ್‍ಗಳಲ್ಲಿ ವಾಸವಾಗಿದ್ದು 1860ರಲ್ಲಿ ಕಾನ್‍ಕಾರ್ಡ್‍ನಲ್ಲಿ ನೆಲಸಿದ. ಸ್ನೇಹಿತ ಫ್ರಾಂಕ್ಲಿಲಿನ್ ಪಿಯರ್ಸ್‍ನೊಡನೆ ನ್ಯೂ ಹ್ಯಾಂಪ್‍ಷೈರ್‍ಗೆ ಭೇಟಿಕೊಟ್ಟ ಸಂದರ್ಭದಲ್ಲಿ 1864 ಮೇ 19ರಂದು ನಿಧನಹೊಂದಿದ.

ಈತ 1825-50ರ ಅವಧಿಯಲ್ಲಿ ನೂರಾರು ಕಥೆಗಳನ್ನು ಪ್ರಕಟಿಸಿದ. ಈ ಕಥೆಗಳು ಟ್ವೈಸ್‍ಟೋಲ್ಡ್ ಟೇಲ್ಸ್(1837, 1842, 1851), ಮೋಸೆಸ್ ಫ್ರಮ್ ಎನ್ ಓಲ್ಡ್‍ಮಾನ್ಸೆ(1846), ದಿ ಸ್ನೋ ಇಮೇಜ್ ಅಂಡ್ ಅದರ್ ಟ್ವೈಸ್‍ಟೋಲ್ಡ್ ಟೇಲ್ಸ್(1851) ಎಂಬ ಸಂಗ್ರಹಗಳಲ್ಲಿ ಸಂಕಲನ ಗೊಂಡಿವೆ. ಈತ ತನ್ನ ಕಾಲದ ಅನೇಕ ಕಥೆಗಾರರಂತೆ ರೋಚಕವಾಗಿ, ಓದುಗರಲ್ಲಿ ಭಾವೋದ್ರೇಕವುಂಟಾಗುವಂತೆ ಬರೆಯದೆ ಮನುಷ್ಯಸ್ವಭಾವದ ನೈಜತೆಯ ಮೇಲೆ ಬೆಳಕು ಚೆಲ್ಲುವಂತೆ ಬರೆಯಲು ಪ್ರಯತ್ನಿಸಿದ. ಇವನ ಕಥೆಗಳ ಮೂಲ ಆಶಯ ನೈತಿಕ ಸಂಘರ್ಷ. ತಪ್ಪು, ಗರ್ವ, ದುರಾಸೆಗಳೇ ವಸ್ತುಗಳಾದ ಈ ರೂಪಕ ಕಥೆಗಳು ನ್ಯೂ ಇಂಗ್ಲೆಂಡಿನಲ್ಲಿ ಪ್ಯೂರಿಟನ್‍ಧರ್ಮದ ಪರಿಣಾಮಗಳನ್ನೂ ಅದರ ಅವನತಿಯನ್ನೂ ತೆರೆದು ತೋರಿಸುತ್ತವೆ. ಈದನ್ ಬ್ರಾಂಡ್, ರಪ್ಪಾಸಿನೀಸ್ಸ್ ಡಾಟರ್ ಎಂಬ ಕಥೆಗಳು ಇವನ ಅತ್ಯುತ್ತಮ ಕಥೆಗಳೆಂದು ಪ್ರಸಿದ್ಧವಾಗಿವೆ.

ದಿ ಸ್ಕಾರ್ಲೆಟ್ ಲೆಟರ್(1850), ದಿ ಹೌಸ್ ಆಫ್ ದಿ ಸೆವೆನ್ ಗೇಬಲ್ಸ್(1851), ದಿ ಬ್ಲಿತ್‍ಡೇಲ್ ರೊಮಾನ್ಸ್(1852), ದಿ ಮಾರ್ಬಲ್ ಫಾನ್(1860) - ಇವು ಇವನ ಕಾದಂಬರಿಗಳು. ಪಾಪದಿಂದ ಒಂಟಿತನ, ಒಂಟಿತನದಿಂದ ಯಾತನೆ, ಯಾತನೆಯಿಂದ ಅತಿಪಾಪ, ಅತಿಪಾಪದಿಂದ ಮತ್ತೆ ಅತಿಯಾತನೆ-ಇದು ದಿ ಸ್ಕಾರ್ಲೆಟ್ ಲೆಟರ್ ಕಾದಂಬರಿಯ ಭಾವನಾವೃತ್ತ. ಹೆಸ್ತರ್ ಪ್ರಿನ್ನೆ, ಆರ್ಥರ್, ಡಿಮ್ಮೆಸ್‍ಡೇಲ್, ರೇಜರ್ ಚಿಲ್ಲಿಂಗ್‍ವರ್ತ್ ಎಂಬ ಮೂರು ಪಾತ್ರಗಳ ಸುತ್ತ ಈ ಕಾದಂಬರಿ ಹೆಣಿಯಲ್ಪಟ್ಟಿದೆ. ಇದು ಅಮೆರಿಕನ್ ಸಾಹಿತ್ಯದ ಮೇರುಕೃತಿಗಳ ಲ್ಲೊಂದೆಂದು ಪ್ರಸಿದ್ಧವಾಗಿದೆ.

ಈತ ಮಕ್ಕಳಿಗಾಗಿ ಎ ವಂಡರ್ ಬುಕ್ ಫಾರ್ ಬಾಯ್ಸ್ ಅಂಡ್ ಗಲ್ರ್ಸ್(1852), ಟ್ಯಾಂಗಲ್‍ವುಡ್ ಟೇಲ್ಸ್(1853) ಎಂಬ ಎರಡು ಕೃತಿಗಳನ್ನು ಬರೆದಿದ್ದಾನೆ. ದಿ ಸ್ಕಾರ್ಲೆಟ್ ಲೆಟರ್ ಕಾದಂಬರಿ ಕನ್ನಡದಲ್ಲಿ ಕೆಂಪು ಅಕ್ಷರಗಳು ಎಂಬ ಹೆಸರಿನಲ್ಲಿ ಅನುವಾದಗೊಂಡಿದೆ.

(ಎನ್.ಎಸ್.ಎಲ್.)