ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಯ್ಗನ್ಸ್‌, ಕ್ರಿಶ್ಚಿಯನ್

ಹಾಯ್ಗನ್ಸ್, ಕ್ರಿಶ್ಚಿಯನ್ 1629-95. ಡಚ್ ಗಣಿತಜ್ಞ, ಭೌತ ಮತ್ತು ಖಗೋಳವಿಜ್ಞಾನಿ. ಮ್ಯಾರಿ ಮೆರ್ಸೆನ್ (1588-1648) ಮತ್ತು ರೆನೆ ಡೇಕಾರ್ಟೆಯಂಥ (1596-1650) ಅಂದಿನ ಅನೇಕ ಪ್ರಾಜ್ಞರ ನಿಕಟ ಸಂಪರ್ಕವಿದ್ದ ರಾಯಭಾರಿಯ ಪುತ್ರನಾಗಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ. 16 ವರ್ಷ ವಯಸ್ಸಾಗುವ ತನಕ ಮನೆಯಲ್ಲಿಯೇ ಶಿಕ್ಷಣ. ರೇಖಾಗಣಿತ, ಯಾಂತ್ರಿಕ ಮಾದರಿಗಳ ನಿರ್ಮಾಣ, ಲ್ಯೂಟ್ ವಾದನ ಮತ್ತು ಸಾಮಾಜಿಕ ಕುಶಲತೆಗಳ ಕಲಿಕೆ. ಗಣಿತ ಕಲಿಕೆಯ ಮೇಲೆ ಡೇಕಾರ್ಟೆಯ ಪ್ರಭಾವ. 1645-47ರ ಅವಧಿಯಲ್ಲಿ ಲೇಡನ್ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ನ್ಯಾಯಶಾಸ್ತ್ರಾಧ್ಯಯನ. ಫ್ರ್ಯಾನ್ಸ್ ವ್ಯಾನ್ ಶ್ಕೂಟೆನ್‍ನಿಂದ(1615-60) ಗಣಿತಾಧ್ಯಯನಕ್ಕೆ ಮಾರ್ಗದರ್ಶನ. 1647-49ರ ಅವಧಿಯಲ್ಲಿ ಬ್ರೆಡಾದ ಕಾಲೇಜ್ ಆಫ್ ಆರೆಂಜ್‍ನಲ್ಲಿ ವಿದ್ಯಾಭ್ಯಾಸದ ಮುಂದುವರಿಕೆ. ಜಾನ್ ಪೆಲ್ (1611-85) ಎಂಬ ಗಣಿತ ಪ್ರಭೃತಿಯಿಂದ ಗಣಿತ ಕಲಿಯುವ ಸೌಭಾಗ್ಯ. ಜೊತೆಯಲ್ಲಿಯೇ ಮೇರಿನ್ ಮೆರ್ಸೆನ್(1588-1648) ಎಂಬ ಇನ್ನೊಬ್ಬ ಗಣಿತ ವಿದ್ವಾಂಸನಿಂದ ಪತ್ರಮುಖೇನ ಗಣಿತ ಶಿಕ್ಷಣ. ಯುಕ್ತ ಅಂತರದಲ್ಲಿರುವ ಆಧಾರಗಳಿಗೆ ಜೋತುಬೀಳುವಂತೆ ಹಗ್ಗವೊಂದನ್ನು ಕಟ್ಟಿದರೆ ಅದು ತಾಳುವ ಆಕಾರಕ್ಕೆ ಸಂಬಂಧಿಸಿದ ಮತ್ತು ಇನ್ನಿತರ ಕೆಲವು ಸಮಸ್ಯೆಗಳನ್ನು ಪರಿಹರಿಸುವಂತೆ ಮೆರ್ಸೆನ್ ಒಡ್ಡಿದ ಸವಾಲಿನ ಸ್ವೀಕಾರ. ಸಮಸ್ಯೆಗಳನ್ನು ಪರಿಹರಿಸಲಾಗದಿದ್ದರೂ ಪರವಲಯ ಆಕಾರದಲ್ಲಿ ಹಗ್ಗ ಜೋತುಬೀಳು ವಂತೆ ಮಾಡಬೇಕಾದರೆ ತೂಕಗಳನ್ನು ಎಲ್ಲೆಲ್ಲಿ ನೇತುಹಾಕಬೇಕೆಂಬುದರ ಪತ್ತೆ.

ರಾಯಭಾರೀ ತಂಡದ ಸದಸ್ಯನಾಗಿ ಡೆನ್ಮಾರ್ಕಿಗೆ ಪ್ರಯಾಣ (1649). ಅಲ್ಲಿಂದ ಸ್ಟಾಕ್ ಹೋಮಿಗೆ ತೆರಳಿ ಡೇಕಾರ್ಟೆಯನ್ನು(1596-1650) ಭೇಟಿ ಮಾಡುವ ಬಯಕೆ ಪ್ರತಿಕೂಲ ಹವಾಮಾನದಿಂದಾಗಿ ಈಡೇರದಿದ್ದುದರಿಂದ ತಂಡದೊಂದಿಗೆ ಯುರೋಪ್ ಪ್ರವಾಸ.

ಗ್ರಿಗೋರಿಯಸ್ ಸೈಂಟ್ ವಿನ್ಸೆಂಟ್ (1584-1667) ಪ್ರತಿಪಾದಿಸಿದ್ದ ವೃತ್ತದ ಚೌಕೀಕರಣ ವಿಧಾನದ ತರ್ಕದೋಷವನ್ನು ವಿವರಿಸುವ ಸೈಕ್ಲೊಮೆಟ್ರಿಯೇ (1651) ಮತ್ತು ಇಂತಹುದೇ ಗಣಿತಸಮಸ್ಯೆಗಳ ಕುರಿತಾದ ಡೆ ಸಕ್ರ್ಯುಲೈ ಮ್ಯಾಗ್ನಿಟ್ಯೂಡೈನ್ ಇನ್ವೆಂಟ (1654) ಲೇಖನಗಳ ಪ್ರಕಟಣೆ ವೃತ್ತಿ ಜೀವನದ ಆರಂಭದಲ್ಲಿ ಈತನಿಗಿದ್ದ ಗಣಿತಾಸಕ್ತಿಯ ಸೂಚಕಗಳು.

ಅನಂತರ ಹಾಯ್ಗನ್ಸ್ ಮಸೂರ ಮತ್ತು ದೂರದರ್ಶಕ ತಯಾರಿಯಲ್ಲಿ ಆಸಕ್ತನಾದ. ಮಸೂರಗಳನ್ನು ಅರೆಯುವ ಮತ್ತು ಅವಕ್ಕೆ ಮೆರುಗು ನೀಡುವ ಹೊಸ ಉತ್ತಮ ವಿಧಾನವನ್ನು 1654ರ ಆಸುಪಾಸಿನಲ್ಲಿ ರೂಪಿಸಿದ. ತಾನೇ ತಯಾರಿಸಿದ ಮಸೂರಗಳಿರುವ ದೂರದರ್ಶಕದ ನೆರವಿನಿಂದ ಶನಿಗ್ರಹದ ಮೊದಲನೆಯ ಚಂದ್ರನನ್ನು ಆವಿಷ್ಕರಿಸಿದ (1655). ಇದೇ ವರ್ಷ ಪ್ಯಾರಿಸಿಗೆ ಹೋಗಿ ಅಲ್ಲಿಯ ಗಣಿತಜ್ಞರಿಗೆ (ವಿಶೇಷತಃ ಇಸ್ಮಾಯೆಲ್ ಬೌಲಿಯಾವ್‍ಗೆ, (1605-94) ತನ್ನ ಆವಿಷ್ಕಾರದ ಬಗ್ಗೆ ತಿಳಿಸಿದ. ಆ ಸಂದರ್ಭದಲ್ಲಿಯೇ ಬ್ಲೇಯಿಸ್ ಪಾಸ್ಕಲ್ (1623-62) ಮತ್ತು ಪಿಯರಿ ಡೆ ಫರ್ಮಾರೊಂದಿಗೆ(1601-65) ಮಾಡಿದ ಪತ್ರವ್ಯವಹಾರ ಮುಖೇನ ಸಂಭಾವ್ಯತೆಗೆ ಸಂಬಂಧಿಸಿದಂತೆ ನಡೆದಿದ್ದ ಅಧ್ಯಯನಗಳ ಮಾಹಿತಿ ಪಡೆದ. ಹಾಲೆಂಡಿಗೆ ಮರಳಿದ ಇವನು ತಾನು ಗಳಿಸಿದ ಮಾಹಿತಿಯನ್ನಾಧರಿಸಿ ಡೆ ರೇಶಿಯೊಸಿನಿಇಸ್ ಇನ್ ಲ್ಯುಡೊ ಅಲ್ಯೇಯ್ ಎಂಬ ಕಿರುಹೊತ್ತಗೆ ಪ್ರಕಟಿಸಿದ. ಸಂಭಾವ್ಯತೆ ಕುರಿತು ಪ್ರಕಟವಾದ ಮೊದಲ ಗ್ರಂಥ ಇದು. ಅದರ ಮುಂದಿನ ವರ್ಷ ಶನಿಗ್ರಹದ ಉಂಗುರಗಳ ನಿಜವಾದ ಆಕಾರದ ಬಗೆಗೆ ಆವಿಷ್ಕರಿಸಿದ. ಈ ಕುರಿತು ವಿಭಿನ್ನ ಸಿದ್ಧಾಂತಗಳನ್ನು ಮಂಡಿಸಿದ್ದ ಗಿಲ್ಲೆಸ್ ಪರ್ಸೊನೆ ಡೆ ರಾಬರ್ವಾಲ್ (1602-75), ಬೌಲಿಯಾವ್ ಮತ್ತಿತರರು ಇದನ್ನು ಒಪ್ಪಲಿಲ್ಲ. ಬೌಲಿಯಾವ್ ಉಪಯೋಗಿಸುತ್ತಿದ್ದ ಕಳಪೆ ದರ್ಜೆಯ ದೂರದರ್ಶಕವೇ ಆತನ ಭಿನ್ನಾಭಿಪ್ರಾಯಕ್ಕೆ ಕಾರಣ ಎಂದು ಗ್ರಹಿಸಿದ ಇವನು ತನ್ನ ಉಂಗುರ ಸಿದ್ಧಾಂತವನ್ನು ಅವನಿಗೆ ಮನವರಿಕೆ ಮಾಡಿದ್ದಲ್ಲದೆ (1656) ಪ್ಯಾರಿಸ್ ವಿಜ್ಞಾನಿ ಸಮೂಹಕ್ಕೆ ತನ್ನ ಅಧ್ಯಯನಗಳ ಫಲಿತಾಂಶವನ್ನು ವರದಿ ಮಾಡಿದ. ಸಿಸ್ಟೆಮ ಸ್ಯಾಟರ್ನಿಯಮ್ ಎಂಬ ಪ್ರಬಂಧದಲ್ಲಿ ಉಂಗುರಗಳ ಕಲೆಗಳು ಮತ್ತು ಅವುಗಳಲ್ಲಿ ಆಗುವ ವ್ಯತ್ಯಯಕ್ಕೆ ವಿವರಣೆ ನೀಡಿದ. ಇವನ ಸಿದ್ಧಾಂತಗಳ ಮತ್ತು ವೀಕ್ಷಣೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದ ಹಾನೊರಿ ಫ್ಯಾಬ್ರಿ (1607-88) ಕೂಡ ಅವನ್ನು ಒಪ್ಪಿದ (1665). ಸುಧಾರಿತ ದೂರದರ್ಶಕ ಗಳು ಇವನ ವೀಕ್ಷಣೆಗಳನ್ನು ದೃಢೀಕರಿಸಿದ್ದೇ ಇದಕ್ಕೆ ಕಾರಣ.

ಖಗೋಳವಿಜ್ಞಾನ ಅಧ್ಯಯನಗಳಲ್ಲಿ ನಿಖರ ಕಾಲಮಾಪನೆಯ ಅನಿವಾರ್ಯತೆಯಿಂದ ಪ್ರೇರಿತನಾದ ಇವನ ಆ ವಿಷಯದತ್ತ ಗಮನಹರಿಸಿದ. ಆಗ ಲಭ್ಯವಿದ್ದವಕ್ಕಿಂತ ಉತ್ತಮವಾದ ಲೋಲಕದ ಗಡಿಯಾರ ನಿರ್ಮಿಸಿ (1656) ಅದಕ್ಕೆ ಏಕಸ್ವಾಮ್ಯವನ್ನೂ ಪಡೆದ. ಪಾಸ್ಕಲ್‍ನಿಂದ ಪ್ರೇರಿತನಾಗಿ ಈತ ಮಾಡುತ್ತಿದ್ದ ಚಕ್ರಜಗಳ (ಸೈಕ್ಲಾಯ್ಡ್) ಅಧ್ಯಯನ ಈ ಗಡಿಯಾರ ನಿರ್ಮಾಣಕ್ಕೆ ಅನುಕೂಲಿಯಾಯಿತು. ಸಮುದ್ರದಲ್ಲಿರುವಾಗ ಕಾಲಮಾಪನೆ ಮಾಡಲು ದೀರ್ಘಚಾಪದಲ್ಲಿ ತೊನೆಯುವ ಲೋಲಕ ಅಧಿಕ ಉಪಯುಕ್ತ ಎಂದು ಭಾವಿಸಿದ. ಇಂಥ ಗಡಿಯಾರದ ನೆರವಿನಿಂದ ಸ್ಥಳೀಯ ರೇಖಾಂಶ ಗಳಿಸುವುದು ಸುಲಭ. ಇಂಥ ಅನೇಕ ಲೋಲಕಗಡಿಯಾರಗಳನ್ನು ನಿರ್ಮಿಸಿ ಪುನಃಪುನಃ ಪರೀಕ್ಷಿಸಿದ (1662, 1686). ಲೋಲಕಚಲನೆಯ ತನ್ನ ಸಿದ್ಧಾಂತದ ವರ್ಣನೆ, ಚಕ್ರಜ ಒಂದು ಸಮಕಾಲವಕ್ರ ಎಂಬುದರ ಸಾಧನೆ, ಸಂಯುಕ್ತ ಲೋಲಕದ ಸಮಸ್ಯೆಗೆ ಪರಿಹಾರ, ನಿರ್ವಾತದಲ್ಲಿ ಕಾಯಗಳ ಸರಳರೇಖಾಪಥೀಯ ಅಥವಾ ವಕ್ರರೇಖಾಪಥೀಯ ಅವರೋಹದ ವರ್ಣನೆ, ವಕ್ರ ಕೇಂದ್ರಜಗಳ (ಎವಲ್ಯೂಟ್ಸ್) ಮತ್ತು ಅಂತರ್ವಲಿತಗಳ (ಇನ್ವಲ್ಯೂಟ್ಸ್) ವ್ಯಾಖ್ಯಾನ, ಚಕ್ರಜ ಮತ್ತು ಪರವಲಯಗಳ ಕೇಂದ್ರಜಗಳನ್ನು ಕಂಡುಹಿಡಿಯುವ ವಿಧಾನ, ಕಣಗಳಿಗೆ ಬದಲಾಗಿ ಕಾಯಗಳ ಗತಿವಿಜ್ಞಾನಾಧ್ಯಯನದ ಮೊದಲ ಪ್ರಯತ್ನ ಮುಂತಾದವನ್ನೊಳ ಗೊಂಡ ಪ್ರೌಢಪ್ರಬಂಧ ಹೋರಾಲಾಜಿಯಮ್ ಆಸಿಲೇಟಾರಿಯಮ್ ಸಿವೆ ಡೆ ಮಾಟು ಪೆಂಡುಲಾರಮ್ ಪ್ರಕಟಿಸಿದ (1673). ಅಲ್ಲದೆ ಏಕರೀತಿ ವರ್ತುಳೀಯ ಚಲನೆಗೆ ಸಂಬಂಧಿಸಿದಂತೆ ಕೇಂದ್ರಾಪಗಾಮಿ ಬಲ ನಿಯಮವನ್ನೂ ನಿಷ್ಪನ್ನಿಸಿದ. ಇವೆಲ್ಲದರ ಒಟ್ಟಾರೆ ಫಲಿತವೇ ಇವನು ಎಡ್ಮಂಡ್ ಹ್ಯಾಲಿ (1656-1742) ಮತ್ತು ಕ್ರಿಸ್ಟಾಫರ್ ರೆನ್ (1632-1723) ಸಂಯುಕ್ತವಾಗಿ ರೂಪಿಸಿದ ಗುರುತ್ವಾಕರ್ಷಣೆಯ ಪ್ರತಿಲೋಮ ವರ್ಗನಿಯಮ.

ಪ್ಯಾರಿಸಿನ ವಿಜ್ಞಾನ ಸಂಸ್ಥೆಗಳ ಸಭೆಗಳಲ್ಲಿ ಅನೇಕ ವಿಜ್ಞಾನಿಗಳು ಮತ್ತು ಗಣಿತಜ್ಞರನ್ನು ಇವನು ಭೇಟಿಯಾಗಿ ತನ್ನ ಸಾಧನೆಗಳನ್ನು ವಿವರಿಸಿದ (1660). ಹೊಸತಾಗಿ ರೂಪುಗೊಳ್ಳುತ್ತಿದ್ದ ರಾಯಲ್ ಸೊಸೈಟಿ ಬಗ್ಗೆ ತಿಳಿಯಲೋಸುಗ ಲಂಡನಿಗೆ ಭೇಟಿ ನೀಡಿದ (1661). ಈ ಸಂದರ್ಭದಲ್ಲಿ ಇವನ ದೂರದರ್ಶಕಗಳು ಸರ್ವಪ್ರಿಯವಾದುವು. ಲಂಡನಿನಲ್ಲಿ ರಾಬರ್ಟ್ ಬಾಯ್ಲನ (1627-91) ನಿರ್ವಾತ ರೇಚಕದಿಂದ ಆಕರ್ಷಿತನಾದ ಇವನು ತಾಯ್ನಾಡಿಗೆ ಹಿಂತಿರುಗಿದ ಬಳಿಕ ಬಾಯ್ಲನ ಅನೇಕ ಪ್ರಯೋಗಗಳನ್ನು ಪುನರಾವರ್ತಿಸಿ ಪರೀಕ್ಷಿಸಿದ್ದು ಇವನ ಅದಮ್ಯ ಕುತೂಹಲ ಪ್ರವೃತ್ತಿಯ ಸೂಚಕ. ಈತನ ಸಾಧನೆಗಳಿಂದ ಪ್ರಭಾವಿತವಾದ ಇಂಗ್ಲೆಂಡಿನ ವಿಜ್ಞಾನಿ ಸಮುದಾಯ ಈತನನ್ನು ರಾಯಲ್ ಸೊಸೈಟಿ ಆಫ್ ಲಂಡನ್ನಿನ ಸದಸ್ಯನನ್ನಾಗಿ ಆಯ್ಕೆ ಮಾಡಿತು (1663).

ರಾಬರ್ಟ್ ಹೂಕ್ (1635-1703) ಸ್ಪ್ರಿಂಗ್ ನಿಯಂತ್ರಿತ ಗಡಿಯಾರಗಳ ದಕ್ಷತೆಯನ್ನು ಪರೀಕ್ಷಿಸುತ್ತಿರುವುದನ್ನು (1665) ತಿಳಿದ ಇವನು ಇಂಥ ಗಡಿಯಾರಗಳ ದಕ್ಷತೆಯ ಮೇಲೆ ತಾಪ ವ್ಯತ್ಯಯಗಳು ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ತನ್ನ ಅಭಿಪ್ರಾಯವನ್ನು ಪತ್ರಮುಖೇನ ಅವನಿಗೆ ತಿಳಿಸಿದುದಲ್ಲದೆ ಅವು ತಾನು ರೂಪಿಸಿದ ಗಡಿಯಾರಗಳಷ್ಟು ದಕ್ಷವಲ್ಲ ಎಂಬುದನ್ನು ಪ್ರಯೋಗಮುಖೇನ ಸಿದ್ಧಪಡಿಸಿದ.

ಫ್ರಾನ್ಸಿನ ಅಕಾಡೆಮಿ ರಾಯೇಲ್ ಡೆಸ್ ಸೈನ್ಸಸ್‍ನ ಸದಸ್ಯತ್ವ ಸ್ವೀಕರಿಸುವಂತೆ ಬಂದ (1666) ಮನವಿಗೆ ಸಮ್ಮತಿಸಿದ ಇವನು ಪ್ಯಾರಿಸಿಗೆ ಹೋದ. ಆ ಸಂಸ್ಥೆ ಇನ್ನೂ ಸ್ಥಾಪನೆಯಾಗಿಲ್ಲ ಎಂಬುದನ್ನು ತಿಳಿದ ಈತ ಅಲ್ಲಿಯೇ ನೆಲಸಿ ಅದರ ಸಂಘಟನೆಯ ಮುಖಂಡತ್ವ ವಹಿಸಿದ.

ಸ್ಥಿತಿಸ್ಥಾಪಕ ಕಾಯಗಳ ಢಿಕ್ಕಿ ಕುರಿತಾದ ಈತನ ಅಧ್ಯಯನಗಳು ಡೇಕಾರ್ಟೆ ಆವಿಷ್ಕರಿಸಿದ್ದ ಸಂಘಟ್ಟನೆಯ ನಿಯಮಗಳ ದೋಷವನ್ನು ಸಿದ್ಧಪಡಿಸಿದುವು. ಈ ವಿಷಯದ ಬಗ್ಗೆ ಪ್ರೌಢಪ್ರಬಂಧವೊಂದನ್ನು ರಾಯಲ್ ಸೊಸೈಟಿಗೆ ಕಳುಹಿಸಿದ (1668). ಸಂಘಟ್ಟನೆಗೆ ಸಂಬಂಧಿಸಿ ದಂತೆ ಅದು ಕೇಳಿದ ಪ್ರಶ್ನೆಗೆ ಉತ್ತರವಾಗಿ ಢಿಕ್ಕಿಯಾಗುವ ಮುನ್ನ ಎರಡು ಕಾಯಗಳ ನಿರ್ದಿಷ್ಟ ದಿಶೆಯಲ್ಲಿಯ ಸಂವೇಗ ಢಿಕ್ಕಿಯ ಬಳಿಕ ಅವುಗಳ ಅದೇ ದಿಶೆಯಲ್ಲಿಯ ಸಂವೇಗಕ್ಕೆ ಸಮ ಎಂದು ಪ್ರಯೋಗ ಮುಖೇನ ಸಿದ್ಧಪಡಿಸಿದ.

ಚಿಕ್ಕಂದಿನಿಂದಲೂ ಅರೋಗದೃಢಕಾಯವಂಚಿತನಾಗಿದ್ದ ಈತ ತೀವ್ರ ರೋಗಬಾಧಿತನಾಗಿ ಹಾಲೆಂಡಿಗೆ ಹಿಂತಿರುಗಿದ (1670). ಸಾವು ಸಮೀಪಿಸುತ್ತಿದೆ ಎಂದು ಭ್ರಮಿಸಿದ್ದ ಈತ ಬಲವಿಜ್ಞಾನಕ್ಕೆ ಸಂಬಂಧಿಸಿದ ತನ್ನ ಅಪ್ರಕಟಿತ ಪ್ರಬಂಧಗಳನ್ನು ರಾಯಲ್ ಸೊಸೈಟಿಗೆ ಕಳಿಸುವಂತೆ ಪ್ಯಾರಿಸ್ ಬಿಡುವ ಮುನ್ನ ಬ್ರಿಟಿಷ್ ರಾಯಭಾರಿಯನ್ನು ಕೋರಿದ. 1671ರಲ್ಲಿ ಪ್ಯಾರಿಸಿಗೆ ಮರಳಿ ತನ್ನ ಕಾರ್ಯ ಮುಂದುವರಿಸಿದ. ಪುನಃ ರೋಗಬಾಧಿತನಾಗಿ ತಾಯ್ನಾಡಿಗೆ ಮರಳಿ (1676) ಎರಡು ವರ್ಷಕಾಲ ಬೆಳಕಿನ ವೇಗ ಮತ್ತು ದ್ವಿವಕ್ರೀಭವನ ಕುರಿತು ಅಧ್ಯಯನ ಮಾಡಿದ.

ರೋಗಮುಕ್ತನಾಗಿ ಪ್ಯಾರಿಸಿಗೆ ಮರಳಿದ ಈತ ಟ್ರೇಯ್ಟ್ ಡೆ ಲಾ ಲುಮಿಯೆರ್ ಪ್ರೌಢಪ್ರಬಂಧ ಪ್ರಕಟಿಸಿದ(1678). ಬೆಳಕಿನ ತರಂಗ ಸಿದ್ಧಾಂತ ಇದರ ವಿಷಯ. ವ್ಯಾಕೋಚಿಸುತ್ತಿರುವ ಬೆಳಕಿನ ಗೋಲದಲ್ಲಿ ತರಂಗಮುಖದ ಪ್ರತಿಯೊಂದು ಬಿಂದುವೂ ವಿಕಿರಣದ ಹೊಸ ಆಕರದಂತೆ ವರ್ತಿಸುತ್ತದೆ ಹಾಗೂ ಅವುಗಳ ಆವೃತ್ತಿ ಮತ್ತು ಪ್ರಾವಸ್ಥೆ ಒಂದೇ ಆಗಿರುತ್ತದೆ ಎಂಬುದು ಅವನ ವಾದದ ತಿರುಳು. ಹದಗೆಡುತ್ತಿದ್ದ ಆರೋಗ್ಯ ನಿಮಿತ್ತ ಪುನಃ ತಾಯ್ನಾಡಿಗೆ ಹಿಂತಿರುಗಿದ (1681) ಈತ ಗಡಿಯಾರ ಮತ್ತು ಮಸೂರಗಳ ಸುಧಾರಣೆಗೆ ಕೊನೆಯ ತನಕವೂ ಶ್ರಮಿಸುತ್ತಲೇ ಇದ್ದ. ವಿಜ್ಞಾನಿ ಮಿತ್ರರ ಸಂಪರ್ಕವಿಲ್ಲದ ಬದುಕು ಅಸಹನೀಯವಾದ್ದರಿಂದ ಇಂಗ್ಲೆಂಡಿಗೆ ತೆರಳಿದ (1689). ಬಾಯ್ಲ್, ಐಸಾಕ್ ನ್ಯೂಟನ್ (1643-1727) ಮತ್ತಿತರರ ಸಹವಾಸದಲ್ಲಿ ಕೆಲಕಾಲವಿದ್ದು ಹಾಲೆಂಡಿಗೆ ಹಿಂತಿರುಗಿ ಅಲ್ಲಿಯೇ ನಿಧನನಾದ. 1698ರಲ್ಲಿ ಪ್ರಕಟಿತವಾದ ಈತನ `ಕಾಸ್ಮೊಥಿಯರಾಸ್ ಕೃತಿ ಭೂಮ್ಯತೀತ ಜೀವಿಗಳ ಬಗೆಗೆ ಚರ್ಚೆಯನ್ನು ಒಳಗೊಂಡಿದೆ. (ಎಸ್.ಎ.ಎಚ್.; ಎಸ್.ಎಚ್.ಬಿ.ಎಸ್.)