ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಲೀವಿ, ಜ್ಯುದಾ ಬಿನ್ ಸ್ಯಾಮ್ಯುವೆಲ್

ಹಾಲೀವಿ, ಜ್ಯುದಾ ಬಿನ್ ಸ್ಯಾಮ್ಯುವೆಲ್ 1085-1141. ಸ್ಪೇನ್ ದೇಶದ ಅತ್ಯಂತ ಶ್ರೇಷ್ಠ ಯೆಹೂದಿ ಕವಿ; ತತ್ತ್ವಜ್ಞಾನಿ, ಅನುಭಾವಿ. 1085ರಲ್ಲಿ ಟೊಲೆಡೊ ಎಂಬ ಊರಿನಲ್ಲಿ ಹುಟ್ಟಿದ. ಕೊರ್ಡೋವ ನಗರದಲ್ಲಿ ಜೀವಿತದ ಬಹುಕಾಲವನ್ನು ಕಳೆದ. ಕಾವ್ಯರಚನೆ, ತತ್ತ್ವಾಧ್ಯಯನಗಳಲ್ಲಿ ತೊಡಗುವ ಮೊದಲು ವೈದ್ಯನಾಗಿದ್ದ.

ಈತ ಬರೆದ ಸಾಂಗ್ಸ್ ಆಫ್ ಜಿಯನ್ ಎಂಬುದು ಪ್ರಾರ್ಥನೆಯ ಹಾಡುಗಳ ಸಂಕಲನ; ಒಂದು ಚಿರಂತನ ಕೃತಿ. ಭಗವಚ್ಚಿಂತನ ಮಾಡುತ್ತ ಜೆರುಸಲೆಮ್ ಪುಣ್ಯಕ್ಷೇತ್ರದಲ್ಲಿ ನೆಲಸಬೇಕೆಂಬ ಈತನ ತೀವ್ರ ಹಂಬಲ ಈ ಎಲ್ಲ ಹಾಡುಗಳಲ್ಲೂ ವ್ಯಕ್ತವಾಗಿದೆ. ಈತ ಬರೆದ ನಿತ್ಯ ಹಾಗೂ ಹಬ್ಬದ ದಿನಗಳಲ್ಲಿ ಆಚರಿಸುವ ಯೆಹೂದಿ ಧಾರ್ಮಿಕವಿಧಿಗಳಿಗೆ ಸಂಬಂಧಿಸಿದ ಸ್ತೋತ್ರಗಳು ಈಗಲೂ ಯೆಹೂದಿ ಪೂಜಾಮಂದಿರಗಳಲ್ಲಿ ಬಳಕೆಯಲ್ಲಿವೆ. ನಿಸರ್ಗದ ಚೆಲುವು, ಪ್ರೇಮ, ಮದಿರೆ, ಸ್ನೇಹ ಮುಂತಾದ ಲೌಕಿಕ ವಸ್ತುಗಳನ್ನು ಕುರಿತ ಭಾವಗೀತೆಗಳು ಸುಮಾರು ನಾನೂರು ಇವೆ. ಪ್ರೇಮಗೀತೆಗಳು ಉತ್ಕಟ ಶೃಂಗಾರಭಾವದಿಂದ ಕೂಡಿದ್ದರೂ ಸುಸಂಸ್ಕøತ ಅಭಿರುಚಿಯ ಎಲ್ಲೆಯನ್ನು ಮೀರಿಲ್ಲ. ಈ ಎಲ್ಲ ಲೌಕಿಕ ಮತ್ತು ಧಾರ್ಮಿಕ ಗೀತೆಗಳು ಹೀಬ್ರೂಭಾಷೆಯಲ್ಲಿವೆ. ಯೆಹೂದಿ ಧರ್ಮವನ್ನು ಸ್ವೀಕರಿಸಿದ ಖಜಾರ್ ದೇಶದ ದೊರೆಯ ಮತ್ತು ಓರ್ವ ಯೆಹೂದಿ ಪಂಡಿತನ ನಡುವೆ ನಡೆದುದು ಎಂಬಂತೆ ಕಲ್ಪಿಸಿಕೊಂಡ ಐದು ಸಂಭಾಷಣೆಗಳಲ್ಲಿ ಸೆಮೆಟಿಕ್ ಧರ್ಮಗಳ ಮೂಲತತ್ತ್ವಗಳ ವಿವೇಚನೆಮಾಡಿ ಕಿತಾಬ್ ಅಲ್ ಖಜರಿ ಎಂಬ ಗ್ರಂಥವನ್ನು ಅರಬ್ಬಿ ಭಾಷೆಯಲ್ಲಿ ಬರೆದಿದ್ದಾನೆ. ಆದರೆ ಈಗ ಹೆಚ್ಚು ಪ್ರಚುರವಾಗಿರುವುದು, ಜ್ಯುದಾ ಇಬ್ನ ಟಿಬ್ಬನ್ ಮಾಡಿರುವ ಈ ಗ್ರಂಥದ ಹೀಬ್ರೂ ಭಾಷಾಂತರ. ಈ ಧಾರ್ಮಿಕ ತತ್ತ್ವಗ್ರಂಥದಲ್ಲಿ ಹಾಲೀವಿಯವನದೇ ಆದ ಒಂದು ತತ್ತ್ವದೃಷ್ಟಿ ಕಾಣುತ್ತದೆ. ಬುದ್ಧಿ, ತರ್ಕ, ಸಂಶಯಗಳಿಗೆ ಅತೀತವಾದ ಶ್ರದ್ಧೆಯೇ ಅತ್ಯಂತ ಶ್ರೇಷ್ಠವಾದುದು; ಅನುಭಾವದ ಅಂತ:ಪ್ರಜ್ಞೆಗೆ ಮಾತ್ರ ಸತ್ಯದರ್ಶನವಾಗುವುದೇ ವಿನಾ ಕೇವಲ ಶಾಸ್ತ್ರಜ್ಞಾನದಿಂದ ಅಲ್ಲ-ಈ ಬಗೆಯ ವಿಚಾರಧಾರೆ ಈತನದು.

ಈಜಿಪ್ಟಿನ ಯೆಹೂದಿ ಸಮಾಜದ ಕೆಲವು ಗಣ್ಯರ ಆಹ್ವಾನ ಮನ್ನಿಸಿ ತುಂಬ ಆದರೋಪಚಾರಗಳಿಗೆ ಪಾತ್ರನಾದ ಅತಿಥಿಯಾಗಿ ಎರಡೂವರೆ ವರ್ಷಕಾಲ ಅಲ್ಲಿದ್ದ. ಅನಂತರ ತನ್ನ ಬಾಳಿನ ಮುಖ್ಯಹಂಬಲವಾದ ಜೆರುಸಲೆಮ್ ಯಾತ್ರೆ ಕೈಗೊಂಡ. ಆ ಪುಣ್ಯನಗರಿಯನ್ನು ಪ್ರವೇಶಿಸುತ್ತಿದ್ದಂತೆ ಭಾವ ಪರವಶನಾಗಿ ತಾನೆ ರಚಿಸಿದ್ದ ಭಕ್ತಿಗೀತೆಗಳನ್ನು ಹಾಡತೊಡಗಿದ. ರಸ್ತೆಯಲ್ಲಿ ವೇಗವಾಗಿ ಬಂದ ಸಾರಸೆನ್ ಅಶ್ವಾರೋಹಿಯ ಕುದುರೆಯ ಕಾಲಿಗೆ ಆಕಸ್ಮಿಕವಾಗಿ ಸಿಕ್ಕು ಮರಣ ಹೊಂದಿದ. ಮಧ್ಯಯುಗದ ಯೆಹೂದಿ ಕವಿ ಶ್ರೇಷ್ಠನೆನಸಿದ ಈತನ ಕಾವ್ಯಕೃತಿಗಳನ್ನು ಮೀರಿಸುವ ಮತ್ತೊಂದು ಕಾವ್ಯ ಹೀಬ್ರೂ ಭಾಷೆಯಲ್ಲಿ ಇದುವರೆಗೂ ಬಂದಿಲ್ಲ. ಸ್ಪೇನಿನ ಧಾರ್ಮಿಕ ಹಾಗೂ ಸಾಹಿತ್ಯ ಲೋಕಗಳಲ್ಲಿ ಈತನ ಸ್ಥಾನ ಅತ್ಯುನ್ನತವಾದುದು, ಶಾಶ್ವತವಾದುದು. (ಕೆ.ಬಿ.ಪಿ.)