ಹಾಲೆ - ಅಪೋನೈನೇಸೀ ಕುಟುಂಬದ ರೈಟಿಯ ಟಿಂಕ್ಟೋರಿಯ ಪ್ರಭೇದದ ಮರ. ಸಣ್ಣಪ್ರಮಾಣದ ಪರ್ಣಪಾತಿಯಾದ ಈ ಮರ ದಕ್ಷಿಣ ಭಾಗದ ದಟ್ಟವಲ್ಲದ ಪರ್ಣಪಾತಿ ಕಾಡುಗಳಲ್ಲಿ ಕಂಡುಬರುತ್ತದೆ. ಕರ್ನಾಟಕದ ಬೆಳಗಾಂವಿ, ಧಾರವಾಡ, ಶಿವಮೊಗ್ಗ, ಬೆಂಗಳೂರು, ಕೊಡಗು ಜಿಲ್ಲೆಗಳಲ್ಲಿ ಇದರ ವ್ಯಾಪ್ತಿ ಇದೆ.

ಮಾರ್ಚಿನಿಂದ ಜೂನ್‍ವರೆಗೆ ಹೊಸ ಚಿಗುರಿನೊಂದಿಗೆ ಹೂಗಳು ಅರಳುವುವು. ಜನವರಿ-ಫೆಬ್ರವರಿಯಲ್ಲಿ ಉದ್ದನೆಯ ಇಜ್ಜೋಡಿ ಕಾಯಿಗಳು ಮಾಗುವುವು. ಬೀಜ ಬಿತ್ತಿ ಬೆಳೆಸಬಹುದು. ಬೇರು ಸಸಿಗಳು ಕಂಡುಬರುತ್ತವೆ. ಚೌಬೀನೆ ಹಳದಿಮಿಶ್ರ ಬಿಳಿ ಛಾಯೆಯ ಮೇಲಿದ್ದು ಆಟದ ಸಾಮಾನು, ಭರಣಿಗಳು, ಲೇಖಣಿಯ ಹಿಡಿ ಇತ್ಯಾದಿ ಕುಶಲತೆಯ ಉಪಕರಣಗಳಿಗೆ ಉತ್ಕøಷ್ಟವಾಗಿದೆ. ಚೆನ್ನಪಟ್ಟಣದ ಬಣ್ಣದ ಸಾಮಾನುಗಳು ವಿಶೇಷವಾಗಿ ಈ ಮರದಿಂದಲೇ ತಯಾರಾಗುತ್ತವೆ. (ಎ.ಕೆ.ಎಸ್.)