ಹುಕ್ಕೇರಿ - ಭಾರತದ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಚಿಕ್ಕೋಡಿ, ಪೂರ್ವದಲ್ಲಿ ಗೋಕಾಕ, ದಕ್ಷಿಣದಲ್ಲಿ ಬೆಳಗಾಂವಿ ತಾಲ್ಲೂಕುಗಳೂ ಪಶ್ಚಿಮ ಮತ್ತು ದಕ್ಷಿಣದ ಸ್ವಲ್ಪ ಭಾಗದಲ್ಲಿ ಮಹಾರಾಷ್ಟ್ರ ರಾಜ್ಯವೂ ಸುತ್ತುವರಿದಿವೆ. ಎರಡು ಪಟ್ಟಣಗಳಿದ್ದು ಒಟ್ಟು 119 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 992.0 ಚ.ಕಿಮೀ. ಜನಸಂಖ್ಯೆ 3,57,127.
ತಾಲ್ಲೂಕಿನಲ್ಲಿ ಸಹ್ಯಾದ್ರಿ ಶ್ರೇಣಿಯ ಅನೇಕ ಕವಲುಗಳು ಹಬ್ಬಿಕೊಂಡಿವೆ. ಇವನ್ನು ಘಟಪ್ರಭಾ ಶ್ರೇಣಿಗಳೆಂದೂ ಹೇಳುವುದುಂಟು. ಘಟಪ್ರಭಾ ತಾಲ್ಲೂಕಿನ ಮುಖ್ಯನದಿ. ಈ ನದಿ ತಾಲ್ಲೂಕಿನ ಶೆಟ್ಟಿಹಳ್ಳಿಯ ಬಳಿ ದಕ್ಷಿಣದ ಅಂಚಿನಲ್ಲಿ ತಾಲ್ಲೂಕನ್ನು ಮುಟ್ಟಿ ಪೂರ್ವಾಭಿಮುಖವಾಗಿ ಮತ್ತು ತಾಲ್ಲೂಕಿನ ಗಡಿಯಾಗಿ ಸ್ವಲ್ಪ ದೂರ ಹರಿಯುವುದು. ಮುಂದೆ ಮಹಾರಾಷ್ಟ್ರ ಮತ್ತು ಬೆಳಗಾಂವಿ ತಾಲ್ಲೂಕನ್ನು ಬೇರ್ಪಡಿಸಿ ಅನಂತರ ಈ ತಾಲ್ಲೂಕಿನಲ್ಲಿ ಈಶಾನ್ಯಾಭಿಮುಖವಾಗಿ ಹರಿದು ಮುಂದೆ ಗೋಕಾಕ ತಾಲ್ಲೂಕನ್ನು ಸ್ವಲ್ಪ ದೂರ ಪ್ರತ್ಯೇಕಿಸಿ ಅನಂತರ ಗೋಕಾಕ ತಾಲ್ಲೂಕನ್ನು ಪ್ರವೇಶಿಸುವುದು. ಮಾರ್ಕಂಡೇಯ ಮತ್ತು ಹಿರಣ್ಯಕೇಶಿ ಘಟಪ್ರಭಾದ ಉಪನದಿಗಳು. ಹಿಡಕಲ್ಲು ಬಳಿ ಘಟಪ್ರಭಾ ನದಿಗೆ ಒಂದು ದೊಡ್ಡ ಅಣೆಕಟ್ಟನ್ನು ಕಟ್ಟಿ ನೀರಾವರಿಗೆ ಅನುಕೂಲ ಕಲ್ಪಿಸಲಾಗಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 808.19 ಮಿಮೀ.
ಇಲ್ಲಿನ ನೆಲ ವಿಶೇಷವಾಗಿ ಕಪ್ಪು ಮಣ್ಣಿನದು. ಕಬ್ಬು, ತಂಬಾಕು, ಮೆಣಸಿನ ಕಾಯಿ, ನೆಲಗಡಲೆ, ಬತ್ತ ಮತ್ತು ಜೋಳ ಇಲ್ಲಿನ ಮುಖ್ಯ ಬೆಳೆಗಳು. ಇವುಗಳ ಜೊತೆಗೆ ಹತ್ತಿ, ಗೋದಿ, ದ್ವಿದಳ ಧಾನ್ಯ ಮುಂತಾದು ವನ್ನು ಬೆಳೆಯುತ್ತಾರೆ. ಕೃಷಿ ಹಾಗೂ ವ್ಯಾಪಾರ ತಾಲ್ಲೂಕಿನ ಮುಖ್ಯ ಉದ್ಯೋಗಗಳು.
ತಾಲ್ಲೂಕು ಕೈಗಾರಿಕೆಯಲ್ಲೂ ಮುಂದಡಿಯಿಟ್ಟಿದೆ. ಇಲ್ಲಿ ಸಕ್ಕರೆ ಕಾರ್ಖಾನೆಯಿದ್ದು ಸಕ್ಕರೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ವಸ್ತುಗಳ ತಯಾರಿಕೆಯುಂಟು. ಬೆಲ್ಲ, ಪಾದರಕ್ಷೆ, ಸೇಂಗಾ ಎಣ್ಣೆ, ಅಗರಬತ್ತಿ, ಕಂಬಳಿ ಮುಂತಾದವುಗಳ ತಯಾರಿಕೆಗೆ ಈ ತಾಲ್ಲೂಕು ಹೆಸರಾಗಿದೆ. ತಾಲ್ಲೂಕಿನ ಪೂರ್ವದಅಂಚಿನಲ್ಲಿ ಸ್ವಲ್ಪ ದೂರ ಬೆಳಗಾಂವಿ-ಮೀರಜ್ ರೈಲು ಮಾರ್ಗ ಹಾದುಹೋಗಿದೆ. ಬೆಳಗಾಂವಿ-ಸಂಕೇಶ್ವರ-ನಿಪ್ಪಾಣಿ, ಬೆಳಗಾಂವಿ ಹುಕ್ಕೇರಿ-ಚಿಕ್ಕೋಡಿ, ನಿಪ್ಪಾಣಿ-ಸಂಕೇಶ್ವರ-ಹುಕ್ಕೇರಿ-ಗೋಕಾಕ ಜಿಲ್ಲಾ ಹೆದ್ದಾರಿಗಳಿದ್ದು ಸುತ್ತಲ ಪಟ್ಟಣ ಮತ್ತು ಗ್ರಾಮಗಳಿಗೆ ಮಾರ್ಗಸಂಪರ್ಕವಿದೆ.
ತಾಲ್ಲೂಕಿನ ಕೆಲವು ಪ್ರೇಕ್ಷಣೀಯ ಸ್ಥಳಗಳಲ್ಲಿ ಸಂಕೇಶ್ವರದ ಉತ್ತರಕ್ಕೆ 6 ಕಿಮೀ ದೂರದಲ್ಲಿರುವ ಅಕ್ಕಿವಾಟ ಒಂದು. ಇದು ಕೊಲ್ಲಾಪುರದ ಅರಸರಿಗೆ ಸೇರಿತ್ತು. 1777ರಲ್ಲಿ ತಾಸಗಾಂವದ ಪರಶುರಾಮ ಭಾವು ಇದನ್ನು ವಶಪಡಿಸಿಕೊಂಡ. ಮುಂದೆ ಈ ಪ್ರದೇಶ ದರೋಡೆಕೋರರಿಗೆ ವಾಸಸ್ಥಾನವಾಗಲು ಕೊಲ್ಲಾಪುರದ ರಾಜ 1827ರಲ್ಲಿ ಬ್ರಿಟಿಷರಿಗೆ ಒಪ್ಪಿಸಬೇಕಾಯಿತು. ಇಲ್ಲೊಂದು ಹಳೆಯ ಕೋಟೆಯಿದೆ. ಸಂಕೇಶ್ವರಕ್ಕೆ ಈಶಾನ್ಯದಲ್ಲಿ 10 ಕಿಮೀ ದೂರದಲ್ಲಿರುವ ಅಮ್ಮಣಗಿಯ ಮಲ್ಲೇಶ್ವರ ದೇವಸ್ಥಾನ ಬಹು ಪ್ರಸಿದ್ಧ. ಇಲ್ಲಿ ಪ್ರತಿ ಸಂಕ್ರಮಣದಲ್ಲಿ ಜಾತ್ರೆ ನಡೆಯುತ್ತದೆ. ಹುಕ್ಕೇರಿಯ ನೈಋತ್ಯದಲ್ಲಿ 5 ಕಿಮೀ ದೂರದಲ್ಲಿರುವ ಅರ್ಜುನವಾಡ ಹಿರಣ್ಯಕೇಶಿ ನದಿಯ ಎಡದಂಡೆಯ ಮೇಲಿದೆ. 12-13ನೆಯ ಶತಮಾನಗಳಲ್ಲಿ ಇದು ಕವಿಳಾಸಪುರವೆಂಬ ಪ್ರಸಿದ್ಧ ತೀರ್ಥಕ್ಷೇತ್ರವಾಗಿತ್ತೆಂದು ತಿಳಿದುಬರುವುದು. ಈಗಿನ ಅರ್ಜುನವಾಡದ ಅಡವಿಯಲ್ಲಿ ಕವಿಳಾಸಪುರದ ದೇವಸ್ಥಾನ ಹಾಗೂ ಶಾಸನಗಳಿವೆ. ಸಂಕೇಶ್ವರದ ಈಶಾನ್ಯಕ್ಕೆ 5 ಕಿಮೀ ದೂರದಲ್ಲಿರುವ ನಿಡುಸೋಸಿಯಲ್ಲಿ ಪ್ರಸಿದ್ಧ ದುರುದುಂಡೀಶ್ವರ ಮಠವಿದೆ. ಇದರ ವತಿಯಿಂದ ಅನ್ನದಾನ ಹಾಗೂ ವಿದ್ಯಾದಾನಕ್ಕೆ ಅವಕಾಶವಿದ್ದು ಪ್ರೌಢಶಾಲೆ ಹಾಗೂ ಸಂಸ್ಕøತ ಪಾಠಶಾಲೆಯನ್ನು ನಡೆಸುತ್ತಿದೆ. ಹುಕ್ಕೇರಿಯ ಆಗ್ನೇಯದಲ್ಲಿ 29 ಕಿಮೀ ದೂರದಲ್ಲಿರುವ ಪಾಚ್ಛಾಪುರದಲ್ಲಿ ಹಳೆಯ ಕೋಟೆಯಿದೆ. ಶಿಲಾಶಾಸನಗಳೂ ವೀರಗಲ್ಲುಗಳೂ ಮಾಸ್ತಿಕಲ್ಲುಗಳೂ ಊರಿನಲ್ಲಿವೆ. 18ನೆಯ ಶತಮಾನದ ಕೊನೆಯಲ್ಲಿ ಇಲ್ಲಿನ ರಾಮಚಂದ್ರ ಭೋಜರಾವ್ ದೇಶಪಾಂಡೆ ಎಂಬುವರು ಸಂಸ್ಕøತದಲ್ಲಿ ಚಿದಂಬರಚರಿತ್ರ ಎಂಬ ಕಾವ್ಯವನ್ನೂ ಮರಾಠೀ ಭಾಷೆಯ ಕೆಲವು ಕೃತಿಗಳನ್ನೂ ರಚಿಸಿದುದಾಗಿ ತಿಳಿದುಬರುತ್ತದೆ. ಹುಕ್ಕೇರಿಯ ನೈಋತ್ಯಕ್ಕೆ 6 ಕಿಮೀ ದೂರದಲ್ಲಿರುವ ಬಡಕುಂದ್ರಿ ಹಿರಣ್ಯಕೇಶಿ ನದಿಯ ಬಲದಂಡೆಯಲ್ಲಿದೆ. ಇಲ್ಲಿನ ಲಕ್ಷ್ಮೀ ದೇವಸ್ಥಾನ ಪ್ರಸಿದ್ಧ. ಈ ದೇವಿಯನ್ನು ಹೊಳೆವ್ವ ಎಂದೂ ಕರೆಯುತ್ತಾರೆ. ಹುಕ್ಕೇರಿಯ ನೈಋತ್ಯದಲ್ಲಿರುವ ಯಮಕನಮರಡಿ ಬೆಳಗಾಂವಿ-ಹುಕ್ಕೇರಿ ಮಾರ್ಗದಲ್ಲಿದೆ. ಈ ಊರು ಕೊಲ್ಲಾಪುರದ ಅಧಿಕಾರಿ ಮಾಮಲೇದಾರ ವಿರುಪಣ್ ಅಂಬಾಜಿ ಎಂಬವನಿಂದ ಅಸ್ತಿತ್ವಕ್ಕೆ ಬಂತೆಂದು ತಿಳಿದುಬಂದಿದೆ. 1827ರಲ್ಲಿ ಕೊಲ್ಲಾಪುರ ದರೋಡೆಕೋರರು ಇಲ್ಲಿ ಬಂದು ಸೇರಿದ್ದರಿಂದ ಇಂಗ್ಲಿಷ್ ಅಧಿಕಾರಿಗಳು ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇಲ್ಲಿ ಒಂದು ಹಳೆಯ ಕೋಟೆಯಿದೆ. ಈ ಊರಿನ ನಡುವೆ ವೇಣುಗೋಪಾಲಸ್ವಾಮಿ ದೇವಸ್ಥಾನವಿದೆ. ಇಲ್ಲಿ ಒಂದೇ ಸುತ್ತಾಲಯದಲ್ಲಿ ಐದು ಗುಡಿಗಳಿವೆ. ನೇಯ್ಗೆ ಉದ್ಯಮಕ್ಕೆ ಈ ಊರು ಪ್ರಸಿದ್ಧ. ಸಂಕೇಶ್ವರ ಈ ತಾಲ್ಲೂಕಿನ ಒಂದು ಪಟ್ಟಣ. ಸಂಕೇಶ್ವರಕ್ಕೆ ವಾಯವ್ಯದಲ್ಲಿ 3 ಕಿಮೀ ದೂರದಲ್ಲಿರುವ ಹರಗಪುರವನ್ನು ವಲ್ಲಭಗಡ ಎಂದೂ ಕರೆಯುತ್ತಾರೆ. ಇಲ್ಲಿ ಸುಮಾರು 300† ಎತ್ತರದ ಬೆಟ್ಟದ ಮೇಲೆ ವೃತ್ತಾಕಾರದ ಒಂದು ಹಳೆಯ ಕೋಟೆಯ ಅವಶೇಷವಿದೆ. ಈ ಕೋಟೆಗೆ ಎರಡು ಬಾಗಿಲುಗಳಿವೆ. ಕೋಟೆಯ ಒಳಗೆ ನೀರಿನ ನಾಲ್ಕು ಊಟೆಗಳಿವೆ. ಒಂದು ದೊಡ್ಡ ಬಾವಿಯಿದೆ. ಬೆಳಗಾಂವಿ ಜಿಲ್ಲೆಯಲ್ಲಿ ಶಿವಾಜಿ ಆಕ್ರಮಿಸಿ ವಶಪಡಿಸಿಕೊಂಡ ಹತ್ತು ಕೋಟೆಗಳಲ್ಲಿ ಇದೂ ಒಂದು. 1786ರಲ್ಲಿ ನೇಸರ್ಗಿಯ ದೊರೆ ಇದನ್ನು ಕೊಲ್ಲಾಪುರದ ಅರಸರಿಂದ ಕಸಿದುಕೊಂಡ. ಇದನ್ನು ಮತ್ತೆ 1787ರಲ್ಲಿ ಕೊಲ್ಲಾಪುರದ ಅರಸ ಗೆದ್ದುಕೊಂಡ. ಹುಕ್ಕೇರಿಯ ಆಗ್ನೇಯಕ್ಕೆ 14 ಕಿಮೀ ದೂರದಲ್ಲಿರುವ ಹಿಡಕಲ್ಲು ಬಳಿ ಘಟಪ್ರಭಾ ನದಿಗೆ ಅಣೆಕಟ್ಟನ್ನು ಕಟ್ಟಲಾಗಿದೆ. ಘಟಪ್ರಭಾ ಯೋಜನೆಯಿಂದ ಈ ಪ್ರದೇಶ ಅಭಿವೃದ್ಧಿಗೊಳ್ಳುತ್ತಿದೆ. ಇದರ ಹತ್ತಿರದಲ್ಲಿಯೇ ಘಟಪ್ರಭಾ ಆರೋಗ್ಯಧಾಮ ಇದೆ. ಇಲ್ಲಿ ದೇಶಭಕ್ತರಾದ ನಾ. ಸು. ಹರ್ಡೀಕರ ಇದ್ದರು. ಹುಕ್ಕೇರಿಗೆ ದಕ್ಷಿಣದಲ್ಲಿ 18 ಕಿಮೀ ದೂರದ ಹುನೂರಿನ ಬೆಟ್ಟದ ಮೇಲೆ ಒಂದು ಕೋಟೆಯಿದೆ. ಶಿವಾಜಿ ವಶಪಡಿಸಿಕೊಂಡಿದ್ದ ಹತ್ತು ಕೋಟೆಗಳಲ್ಲಿ ಇದೂ ಒಂದು. ಸು. 1550ರಲ್ಲಿ ಇದನ್ನು ಕೊಲ್ಲಾಪುರದ ರಾಜ ಕಟ್ಟಿಸಿದ್ದೆಂದು ತಿಳಿದುಬರುತ್ತದೆ.
ಹುಕ್ಕೇರಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಚಿಕ್ಕೋಡಿ-ಬೆಳಗಾಂವಿ ಮತ್ತು ನಿಪ್ಪಾಣಿ-ಗೋಕಾಕ ಮಾರ್ಗಮಧ್ಯದಲ್ಲಿ ಬೆಳಗಾಂವಿಯ ಈಶಾನ್ಯಕ್ಕೆ 48 ಕಿಮೀ ದೂರದಲ್ಲೂ ಸಂಕೇಶ್ವರದ ಆಗ್ನೇಯಕ್ಕೆ 13 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 19,906. ಪಟ್ಟಣ ಹಿರಣ್ಯಕೇಶಿ ನದಿಗೆ ಸೇರುವ ಒಂದು ಹಳ್ಳದ ದಡದಲ್ಲಿದೆ. ಈ ಪಟ್ಟಣ ಮುಖ್ಯ ವ್ಯಾಪಾರ ಕೇಂದ್ರವಾಗಿದ್ದು ಇಲ್ಲಿ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿವೆ. ಪಟ್ಟಣ ನಗರ ಪಂಚಾಯಿತಿಯ ಆಡಳಿತಕ್ಕೆ ಸೇರಿದೆ.
ಹುಕ್ಕೇರಿ 14ನೆಯ ಶತಮಾನದಿಂದ ಇತಿಹಾಸಪ್ರಸಿದ್ಧ. 1327ರಲ್ಲಿ ಮಹಮ್ಮದ್‍ಬಿನ್ ತುಗಲಕ್ ಇಲ್ಲಿ ಒಬ್ಬ ಅಮೀರನನ್ನು ನೇಮಿಸಿದ್ದ. 1500ರಲ್ಲಿ ಹುಕ್ಕೇರಿ ಹಾಗೂ ಅದರ ಸುತ್ತಲಿನ ಪ್ರದೇಶ ಫತೇಬಹದ್ದೂರ ಎಂಬ ವಾಜಿದಳದ ಸೇನಾ ನಾಯಕನ ಅಧೀನದಲ್ಲಿತ್ತೆಂದೂ 1502ರಲ್ಲಿ ಇದನ್ನು ಬಿಜಾಪುರದ ಸುಲ್ತಾನ ಯುಸೂಫ್ ಆದಿಲ್‍ಷಾ ತನ್ನ ವಶಕ್ಕೆ ತೆಗೆದುಕೊಂಡನೆಂದೂ ತಿಳಿದುಬರುವುದು. ಈತನ ಕಾಲದಲ್ಲಿಯೆ ಇಲ್ಲಿದ್ದ ಅಧಿಕಾರಿ ಐನ್ ಉಲ್ ಮುಲ್ಕ ಜಿಲಾನಿ ಹುಕ್ಕೇರಿಯ ಕೋಟೆಯನ್ನೂ ಅರಮನೆಯನ್ನೂ ನೀರಿನ ಕಾರಂಜಿಗಳನ್ನೂ ಕಟ್ಟಿಸಿದ. 1542ರಲ್ಲಿ ಈತ ಅಹಮದ್ ನಗರದ ಬುರಾನ್ ನಿಜಾಮ್‍ಷಾನೊಂದಿಗೆ ಸೇರಿ ಬಿಜಾಪುರದ ಸುಲ್ತಾನನನ್ನು ವಿರೋಧಿಸಿದ. ಆದರೆ ಬುರಾನ್ ಷಾ ಸೋಲಲು ಪುನಃ ಬಿಜಾಪುರದ ಷಾನೊಂದಿಗೆ ಸ್ನೇಹವನ್ನು ಬೆಳೆಸಿದ. ಆಗ ಈತನಿಗೆ ಕಿತ್ತೂರ ಸಂಸ್ಥಾನವನ್ನು ಬಳುವಳಿಯೆಂದು ಕೊಡಲಾಯಿತು. ಐನ್ ಉಲ್ ಮುಲ್ಕನ ತರುವಾಯ ಆತನ ತಮ್ಮ ಫತೇ ಮುಲ್ಕನು ಪಟ್ಟಕ್ಕೆ ಬಂದ. ಇವನ ತರುವಾಯ ಬಿಜಾಪುರದ ರಣದುಲ್ಲಾಖಾನ್ (1569) ಹಾಗೂ ಆತನ ಪುತ್ರ ರುಸ್ತುಮ್ ಜಮಾನ್ (1616) ಹುಕ್ಕೇರಿಗೆ ಅಧಿಕಾರಿಗಳಾಗಿದ್ದರು. ರುಸ್ತುಮ್ ಇಲ್ಲಿನ ಚೀನೀ ಗುಮ್ಮಟವನ್ನೂ ಕದಮ್ ರಸೂಲ್ ಮಸೀದಿಯನ್ನೂ ಕಟ್ಟಿಸಿದ. ರುಸ್ತುಮನ ತರುವಾಯ ಅಬ್ದುಲ್ ಖಾದರ್ ಹುಕ್ಕೇರಿಗೆ ಒಡೆಯನಾದ. ಪನಹಾಲದ ದೊರೆ ಇವನನ್ನು ಅಧಿಕಾರದಿಂದ ಇಳಿಸಿದ. 1643ರಲ್ಲಿ ಈತ ಮರಣಹೊಂದಿದ. 1668-86ರ ವರೆಗೆ ಹುಕ್ಕೇರಿಯನ್ನು ಇಂದುರಾವ್ ಘೋರ್ಪಡೆ ಆಳಿದುದಾಗಿ ತಿಳಿದುಬರುತ್ತದೆ. ಅನಂತರ ಹುಕ್ಕೇರಿ ಒಂದು ದೇಶಗತಿ ಯಾಯಿತು. ಈ ದೇಸಾಯಿಯು ಸಂಸ್ಥಾನಿಕ ನೆನ್ನಿಸಿಕೊಂಡ. 1687ರಲ್ಲಿ ಮುಗಲರು ಬಿಜಾಪುರವನ್ನು ನಾಶಮಾಡಿದಾಗ ದೇಸಾಯಿ ಸ್ವತಂತ್ರನಾಗಿ ಆಳಲು ಆರಂಭಿಸಿದ. ಈ ಮನೆತನದವರೇ ವಂಟಮುರಿ ದೇಸಾಯರ ಮನೆತನದ ಪೂರ್ವಿಕರೆಂದು ತಿಳಿದುಬರುತ್ತದೆ. 1763ರಲ್ಲಿ ನಾಲ್ಕನೆಯ ಪೇಶ್ವೆ ಮಾಧವರಾವ್ ದೇಸಾಯಿಯವರ ಮನೆತನವನ್ನು ಮುರಿದು ಸಂಸ್ಥಾನವನ್ನು ಕೊಲ್ಲಾಪುರದ ದೊರೆಗೆ ಪ್ರತಿವರ್ಷ 5,00,000 ಹಣವನ್ನು ನಜರ್ ಕೊಡುವಂತೆ ತಿಳಿಸಿ ಒಪ್ಪಿಸಿಕೊಟ್ಟ. ಆದರೆ ಕೊಲ್ಲಾಪುರದ ದೊರೆ ನಜರ್ ಕೊಡದಿರಲು ಪುನಃ ಸಂಸ್ಥಾನವನ್ನು ಹಿಂತೆಗೆದುಕೊಂಡು ಒಬ್ಬ ಮಾಮಲೆದಾರನನ್ನು ನೇಮಿಸಿದ. ನಿಪ್ಪಾಣಿಯ ದೇಸಾಯಿ ಜನರಲ್ ವೆಲ್ಲಸ್ಲಿಗೆ ಸಹಾಯ ಮಾಡಿದುದಕ್ಕೆಂದು ಪೇಶ್ವೆ ಹುಕ್ಕೇರಿಯನ್ನು ಚಿಕ್ಕೋಡಿ ಹಾಗೂ ಮನೋಳಿ ಭಾಗಗಳೊಂದಿಗೆ 1804ರಲ್ಲಿ ಬಹುಮಾನವೆಂದು ದೇಸಾಯಿಗೆ ಉಂಬಳಿಯಾಗಿ ಕೊಟ್ಟ. 1827ರ ಹೊತ್ತಿಗೆ ಹುಕ್ಕೇರಿ ಪುನಃ ಕೊಲ್ಲಾಪುರದ ದೊರೆಗಳಿಗೆ ಸೇರಿತು. 1906ರಲ್ಲಿ ಬ್ರಿಟಿಷರ ಆಳಿಕೆಯಲ್ಲಿ ಇದು ಸ್ವತಂತ್ರ ತಾಲ್ಲೂಕಾಯಿತು. ಇಂದಿಗೂ ಉಳಿದು ನಿಂತಿರುವ ಇಲ್ಲಿನ ದರ್ಗಾ, ಮಸೀದಿ, ಜೋಡಿಗುಮ್ಮಟಗಳೂ ಅರಮನೆ, ಕಾರಂಜಿ ಇವು ಬಹು ಆಕರ್ಷಕವಾಗಿವೆ. (ಎಸ್.ಎಸ್.ಜೆ.ಎ.)