ಹುಬ್ಬಳ್ಳಿ - ಭಾರತದ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಧಾರವಾಡ ಮತ್ತು ನವಲಗುಂದ ತಾಲ್ಲೂಕುಗಳೂ ಪಶ್ಚಿಮದಲ್ಲಿ ಕಲಘಟಗಿ, ದಕ್ಷಿಣದಲ್ಲಿ ಕುಂದಗೋಳ ಮತ್ತು ಪೂರ್ವದಲ್ಲಿ ನವಲಗುಂದ ಮತ್ತು ಗದಗ ತಾಲ್ಲೂಕುಗಳು ಸುತ್ತುವರಿದಿವೆ. ಒಟ್ಟು 57 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 826.9 ಚ.ಕಿಮೀ. ಜನಸಂಖ್ಯೆ 1,28,315.
ಈ ತಾಲ್ಲೂಕಿನ ಬೆಟ್ಟಗುಡ್ಡಗಳೆಂದರೆ ಹುಬ್ಬಳ್ಳಿ ಹತ್ತಿರದ ಉಣಕಲ್ಲು ಗುಡ್ಡ ಮತ್ತು ಧಾರವಾಡ-ಹುಬ್ಬಳ್ಳಿ ಮಧ್ಯೆ ಬರುವ ರಾಯಾಪುರ ಬೆಟ್ಟಗಳು. ಈ ತಾಲ್ಲೂಕು ಮಲೆನಾಡು ಮತ್ತು ಪೂರ್ವದ ಬೆಳವಲನಾಡುಗಳ ಮಧ್ಯೆ ಇರುವ ಗಡಿನಾಡು ಪ್ರದೇಶದಿಂದ ಕೂಡಿದೆ. ಶಿಗ್ಗಾಂವಿ ತಾಲ್ಲೂಕಿನ ಧುಂಡಸಿ ಗ್ರಾಮದ ಬಳಿ ಹುಟ್ಟುವ ಬೆಣ್ಣೆಹಳ್ಳ ಈ ತಾಲ್ಲೂಕಿನಲ್ಲಿ ಉತ್ತರಾಭಿಮುಖವಾಗಿ ಹರಿಯುವುದು. ತಾಲ್ಲೂಕಿನ ಪೂರ್ವಭಾಗದಲ್ಲಿ ಎರೆಮಣ್ಣಿನ ಭೂಪ್ರದೇಶವೂ ಪಶ್ಚಿಮ ಭಾಗ ಹುಳಕೆರೆ ಮಣ್ಣಿನ ಪ್ರದೇಶದಿಂದಲೂ ಕೂಡಿದೆ. ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಸ್ವಲ್ಪ ಗಂಧದ ಮರಗಳಿರುವ ಸಾಮಾನ್ಯ ಕುರುಚಲು ಕಾಡುಗಳಿವೆ. ಹವೆ ಹಿತಕರ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 719.62 ಮಿಮೀ.
ತಾಲ್ಲೂಕಿನ ಕೆಲವು ಪ್ರದೇಶಗಳು ಮಲಪ್ರಭಾ ಬಲದಂಡೆ ಯೋಜನೆ ಯಿಂದ ನೀರಾವರಿಗೊಳಪಡುವುದು. ತಾಲ್ಲೂಕಿನ ಮುಖ್ಯ ಬೆಳೆ ಜೋಳ. ಇದರ ಜೊತೆಗೆ ಬತ್ತ, ಕಬ್ಬು, ಗೋದಿ, ಸೇಂಗಾ, ನವಣೆ ಮತ್ತು ವಿವಿಧ ದ್ವಿದಳಧಾನ್ಯ ಮತ್ತು ತೈಲಬೀಜಗಳನ್ನೂ ಹತ್ತಿ, ತಂಬಾಕು ಇವನ್ನೂ ಬೆಳೆಯುತ್ತಾರೆ. ವ್ಯವಸಾಯದ ಜೊತೆಗೆ ಪಶುಪಾಲನೆಯುಂಟು. ತಾಲ್ಲೂಕಿನಲ್ಲಿ ಬಟ್ಟೆ ಕಾರ್ಖಾನೆಯಿದೆ. ಇಲ್ಲಿ ತಯಾರಾಗುವ ಹಿತ್ತಾಳೆ ಪಾತ್ರೆಗಳು ಪ್ರಸಿದ್ಧ. ಮರ ಕೊಯ್ಯುವ ಕಾರ್ಖಾನೆ, ಕಿರ್ಲೋಸ್ಕರ್ ವಿದ್ಯುತ್ ಕಾರ್ಖಾನೆ, ಎ.ಕೆ. ಇಂಡಸ್ಟ್ರೀಸ್, ಸಿಮೆಂಟ್ ವಸ್ತು ತಯಾರಿಕಾ ಕಾರ್ಖಾನೆ, ಸುಂದತ್ತಾ ಆಹಾರ ಮತ್ತು ನೂಲಿನ ವಸ್ತುಗಳ ತಯಾರಿಕಾ ಕಾರ್ಖಾನೆಗಳಿವೆ. ಹುಬ್ಬಳ್ಳಿಯಲ್ಲಿ ತಿಜೋರಿ, ಕಪಾಟು, ಕುರ್ಚಿ, ಟೇಬಲ್ ಮುಂತಾದವುಗಳ ಮತ್ತು ಇತರ ಉಕ್ಕು ಮತ್ತು ಕಬ್ಬಿಣ ವಸ್ತುಗಳ ತಯಾರಿಕೆಯುಂಟು. ತಾಲ್ಲೂಕಿನ ಕೈಗಾರಿಕೆ, ವ್ಯಾಪಾರ, ವಾಣಿಜ್ಯಗಳ ಅಭಿವೃದ್ಧಿಗೆ ಸಹಾಯಕವಾಗಿ ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳೂ ವಿವಿಧ ಸಹಕಾರಿ ಸಂಘಗಳೂ ಇವೆ.
ತಾಲ್ಲೂಕಿನಲ್ಲಿ ಬೆಂಗಳೂರು-ಪುಣೆ, ಗೂಟಿ-ಅಂಕೋಲ ರಾಷ್ಟ್ರೀಯ ಹೆದ್ದಾರಿಗಳ ಜೊತೆಗೆ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳು ಹಾದುಹೋಗಿ ಸುತ್ತಲ ಪಟ್ಟಣ ಮತ್ತು ಗ್ರಾಮಗಳಿಗೆ ಉತ್ತಮ ಮಾರ್ಗಸಂಪರ್ಕವಿದೆ. ಬೆಂಗಳೂರು-ಪುಣೆ ರೈಲುಮಾರ್ಗ, ಹುಬ್ಬಳ್ಳಿ-ಸೊಲ್ಲಾಪುರ, ಹುಬ್ಬಳ್ಳಿ-ಹೊಸಪೇಟೆ ರೈಲುಮಾರ್ಗಗಳು ಹಾದು ಹೋಗಿದ್ದು ಹುಬ್ಬಳ್ಳಿ ಒಂದು ಮುಖ್ಯ ರೈಲುನಿಲ್ದಾಣವಾಗಿದೆ. ಇದರಿಂದ ತಾಲ್ಲೂಕಿನ ವ್ಯಾಪಾರ ವಾಣಿಜ್ಯ ಮತ್ತು ಕೈಗಾರಿಕಾಭಿವೃದ್ಧಿಗೆ ಅನುಕೂಲವಾಗಿದೆ. ತಾಲ್ಲೂಕಿನಲ್ಲಿ ವೈದ್ಯಕೀಯ ಕಾಲೇಜು ಸೇರಿ ವಿವಿಧ ಶಾಲಾಕಾಲೇಜುಗಳಿವೆ. ಹುಬ್ಬಳ್ಳಿ-ಧಾರವಾಡದ ಹೆದ್ದಾರಿಯಲ್ಲಿ ಹುಬ್ಬಳ್ಳಿಯ ವಾಯವ್ಯಕ್ಕಿರುವ ಅಮರ ಗೋಳದ ಜನವಸತಿ ಪ್ರದೇಶವನ್ನು ಹುಬ್ಬಳ್ಳಿ-ಧಾರವಾಡ ನಗರಸಭೆಗೆ ಸೇರಿಸಿಕೊಳ್ಳಲಾಗಿದೆ. ಈ ಗ್ರಾಮದ ಮಧ್ಯದಲ್ಲಿ ಜಕಣಾಚಾರಿ ನಿರ್ಮಿತ ವೆಂದು ಹೇಳುವ ಹಳೆಯ ಶಂಕರಲಿಂಗ ದೇವಾಲಯವೂ ಇದರ ಹತ್ತಿರ ಬನಶಂಕರಿ ದೇವಾಲಯವೂ ಇವೆ. ಹುಬ್ಬಳ್ಳಿಯ ವಾಯವ್ಯಕ್ಕೆ ಹುಬ್ಬಳ್ಳಿ-ಧಾರವಾಡ ಹೆದ್ದಾರಿಯಲ್ಲಿರುವ ಉಣಕಲ್ಲು ಗ್ರಾಮದ ಜನವಸತಿ ಪ್ರದೇಶ ಹುಬ್ಬಳ್ಳಿ-ಧಾರವಾಡ ನಗರಸಭೆಗೆ ಸೇರಿದೆ. ಈ ಗ್ರಾಮದಲ್ಲಿ ಪುರಾತನ ಕಮಲೇಶ್ವರ, ವೀರಭದ್ರ ಮತ್ತು ಚಂದ್ರಮೌಳೇಶ್ವರ ದೇವಾಲಯ ಗಳೂ ಒಂದು ಶಿಥಿಲ ಕೋಟೆ ಮತ್ತು 12ನೆಯ ಶತಮಾನಕ್ಕೆ ಸೇರಿದ ಎರಡು ಶಾಸನಗಳೂ ಇವೆ. ಹುಬ್ಬಳ್ಳಿ-ಧಾರವಾಡಕ್ಕೆ 16 ಕಿಮೀ ದೂರದಲ್ಲೂ ಹುಬ್ಬಳ್ಳಿಯ ಪೂರ್ವಕ್ಕೆ ಹುಬ್ಬಳ್ಳಿ-ಗದಗ ರಾಜ್ಯ ಹೆದ್ದಾರಿಯಲ್ಲೂ ಇರುವ ಶಿರಗುಪ್ಪದಲ್ಲಿ ಹನುಮಂತ ದೇವಾಲಯದ ಬಳಿ ಒಂದು ಕಪ್ಪುಕಲ್ಲಿನ ಭೈರವ ವಿಗ್ರಹವಿದೆ. ಇಲ್ಲಿ ದೊರೆತಿರುವ ಐದು ಶಾಸನಗಳಲ್ಲಿ ಒಂದು ಸೇಂದ್ರಕದೊರೆ ವನಸತ್ತಿಗೆ (7ನೆಯ ಶತಮಾನ) ಸೇರಿದುದೆಂದು ಗುರುತಿಸಲಾಗಿದೆ. ಹುಬ್ಬಳ್ಳಿ-ಧಾರವಾಡಕ್ಕೆ 33 ಕಿಮೀ ದೂರದಲ್ಲಿರುವ ಕೋಳಿವಾಡ ಹುಬ್ಬಳ್ಳಿಯ ಉತ್ತರಕ್ಕಿದೆ. ಕುಮಾರವ್ಯಾಸ ಹುಟ್ಟಿದ್ದು ಈ ಗ್ರಾಮದಲ್ಲಿ. ವೀರನಾರಾಯಣ ದೇವಾಲಯ ಗ್ರಾಮದ ಒಳಗೂ ಭಗ್ನವಾಗಿರುವ ಬೌದ್ಧದೇವತೆ ತಾರಾ ವಿಗ್ರಹವಿರುವ ಕಾಳಮೇಶ್ವರ ದೇವಾಲಯ ಗ್ರಾಮದ ಹೊರಗೂ ಇವೆ. ಹುಬ್ಬಳ್ಳಿ-ಧಾರವಾಡಕ್ಕೆ 10 ಕಿಮೀ ದೂರದಲ್ಲಿರುವ ಕುಸುಗಲ್ಲು ಹುಬ್ಬಳ್ಳಿಯ ಈಶಾನ್ಯದಲ್ಲಿ ಹುಬ್ಬಳ್ಳಿ-ನವಲಗುಂದ ರಾಜ್ಯ ಹೆದ್ದಾರಿಯಲ್ಲಿದೆ. ಇಲ್ಲಿ ಟಿಪ್ಪು ಸುಲ್ತಾನನ ಸೇನಾಧಿಪತಿ ಬದ್ರುಲ್ ಜಮಾನ್‍ಖಾನ್ ಕಟ್ಟಿಸಿದ್ದೆಂದು ಹೇಳುವ ಹಳೆಯ ಕೋಟೆಯಿದೆ. ಈ ಕೋಟೆಯಲ್ಲಿ ಕಾಳಮೇಶ್ವರ ದೇವಾಲಯವಿದೆ. ಹುಬ್ಬಳ್ಳಿ-ಧಾರವಾಡಕ್ಕೆ 16 ಕಿಮೀ ದೂರದಲ್ಲಿರುವ ಬ್ಯಾಹಟ್ಟಿ ಹುಬ್ಬಳ್ಳಿಯ ಈಶಾನ್ಯದಲ್ಲಿದೆ. ಈ ಗ್ರಾಮದಲ್ಲಿ ವೀರಭದ್ರ ಮತ್ತು ರಾಮಲಿಂಗ ದೇವಾಲಯಗಳೂ ಕಂಬಳ್ಳಿ ಮತ್ತು ಕರಂತಿ ವೀರಶೈವ ಮಠಗಳೂ ಸೇವುಣ, ಹೊಯ್ಸಳ ಮತ್ತು ಕದಂಬರಿಗೆ ಸೇರಿದ ಶಾಸನಗಳೂ ಇದ್ದು ಇತ್ತೀಚೆಗೆ ಕಳಚುರಿ ದೊರೆ ಸಿಂಘಣನಿಗೆ ಸೇರಿದ ಒಂದು ತಾಮ್ರಶಾಸನ ಸಿಕ್ಕಿದೆ. ಹುಬ್ಬಳ್ಳಿ-ಧಾರವಾಡಕ್ಕೆ 10 ಕಿಮೀ ದೂರದಲ್ಲಿರುವ ಛಬ್ಬಿ ಹುಬ್ಬಳ್ಳಿಯ ಆಗ್ನೇಯಕ್ಕಿದೆ. ಈ ಗ್ರಾಮ ಹಿಂದೆ ಜೈನ ದೊರೆಯ ಆಡಳಿತಕ್ಕೆ ಸೇರಿದ್ದು ಸೋಭನಪುರವೆಂಬ ಹೆಸರಿತ್ತೆಂದೂ ಆಗಿನ ಏಳು ಜೈನದೇವಾಲಯಗಳಲ್ಲಿ ಈಗ ಒಂದು ಉಳಿದಿದೆ. ಚಾಳುಕ್ಯ ದೊರೆಗಳ ಶಾಸನಗಳು ದೊರೆತಿವೆ. ಈ ಊರಿನಲ್ಲಿ ವಿಜಯನಗರದ ಕೃಷ್ಣದೇವರಾಯ (1509-29) ಇದ್ದನೆಂದೂ ಮುಂದೆ ಸವಣೂರ ನವಾಬರ ಆಡಳಿತಕ್ಕೆ ಇದು ಸೇರಿತೆಂದೂ ತಿಳಿದು ಬರುವುದು. ಹುಬ್ಬಳ್ಳಿ-ಧಾರವಾಡಕ್ಕೆ 5 ಕಿಮೀ ದೂರದಲ್ಲಿ ಹುಬ್ಬಳ್ಳಿಯ ದಕ್ಷಿಣಕ್ಕಿರುವ ಅದರಗುಂಚಿ ಗ್ರಾಮದಲ್ಲಿ 10 ರಿಂದ 14ನೆಯ ಶತಮಾನಗಳಿಗೆ ಸೇರಿದ ಶಾಸನಗಳಿವೆ. ಇಲ್ಲಿಯ ಗ್ರಾಮಸ್ಥರು ದೊಡ್ಡಪ್ಪ ಎಂದು ಕರೆಯುವ ಕುಳಿತ ಭಂಗಿಯಲ್ಲಿರುವ ಒಂದು ದೊಡ್ಡ ಜಿನಮೂರ್ತಿ ಇಲ್ಲಿದೆ. *