ಬಂಕಿಂಚಂದ್ರ ಚಿಟ್ಟೋಪಾಥ್ಯಾಯ90861ಯುಗಳಾಂಗುರೀಯ1913ಬಿ. ವೆಂಕಟಾಚಾರ್ಯ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

NARASIMHARAJA WADIYAR SERIES

ತ್ರಿಯೈನಮಃ.


ಯುಗಳಾಂಗರೀಯ


ಬಿ. ವೆಂಕಟಾಚಾರ್ಯ
M. S. RAO & Co.,
KSELLERS, BANGALORE CITY










ವಿಜ್ಞಾಪನೆ

ಈ ಗ್ರಂಥವು ಪ್ರಸಿದ‍್ದರಾಗಿದ್ದ ಶ್ರೀ ಬಂಕಿಂಚಂದ್ರ ಚಿಟ್ಟೋಪಾಥ್ಯಾಯ
ರವರಿ೦ದ ವಂಗಭಾಷೆಯಲ್ಲಿ ರಚಿತವಾಗಿರುವದರ ಭಾಷಾಂತರವು. ಕಥೆಯು ಚಿಕ್ಕ
ದಾದರೂ ಓದಿದ ಮಾತ್ರದಿಂದಲೇ ಚಮತ್ಕಾರವಾದುದೆಂದು ತಿಳಿಯಬಹುದು, ಇತಿ.

ಮೈಸೂರು
ಬಿ. ವೆಂಕಟಾಚಾರ್ಯ
ಮಾರ್ಚಿ 1913

ನನ್ನ ಸಹಧರ್ಮಿಣಿಯಾಗಿ

ಸತಿಪರಾಯಣೆಯಾದ

ಅಕಾಲ ಮೃತ್ಯುವಿಗೆ ಗ್ರಾಸವಾದವಳ

ಸ್ಮರಣಾರ್ಥವಾಗಿ

ಗ್ರಂಥವನ್ನು ಪ್ರಚಾರ ಮಾಡಿದ್ದೇನೆ

ಶ್ರೀ:

ಶ್ರೀಯೈನಮ:

ಯುಗಳಾಂಗುರೀಯ.

______________

ಮೊದಲನೆಯ ಪರಿಚ್ಛೇದ

________

ಒಂದಾನೊಂದು ಉಪವನಕ್ಕೆ ಸೇರಿದ ಉದ್ಯಾನದೊಂದು ವೃಕ್ಷವಾ
ಟಿಕೆಯಲ್ಲಿಬ್ಬರು ನಿಂತಿದ್ದರು. ನಾವು ಹೇಳುವ ಕಾಲದಲ್ಲಿ, ಪುರಾತನ
ತಾಮ್ರಲಿಪ್ತವೆ೦ಬ ನಗರವು ದೊಡ್ಡದೊಂದು ರೇವಾಗಿ ಅನೇಕ ಹಡಗು
ಗಳಿಗೆ ನಿಲ್ದಾಣವಾಗಿ ಆಶ್ರಯಸ್ಥಾನವಾಗಿದ್ದಿತು. ಆ ನಗರದ ತಳವನ್ನು
ತೊಳಿಯುತ ಅನಂತ ನೀಲಾಕಾಶದಂತಿದ್ದ ಸಮುದ್ರವು ಮೃದುಮೃದುವಾಗಿ
ಶಬ್ದವಂ ಮಾಡುತಿದ್ದಿತು.
ತಾಮ್ರಲಿಪ್ತ ನಗರದ ಮುಂಭಾಗ ಸಮುದ್ರದ ತೀರದಲ್ಲೊಂದು ವಿಚಿ
ತ್ರವಾದ ಮಹಡಿಯ ಮನೆ ; ಅದರ ಬಳಿ ಅತ್ಯಂತ ರಮಣೀಯವಾಗಿ ನಿರ್ಮಿತ
ವಾಗಿದ್ದೊಂದು ಲತಾಗೃಹ ; ಆ ಲತಾಗೃಹಕ್ಕೆ ಧನದಾಸನೆಂಬೊಬ್ಬ ಶೆಟ್ಟಿ
ಯು ಅಧಿಕಾರಿಯಾಗಿದ್ದನು-ಶೆಟ್ಟಿಯ ಮಗಳಾದ ಹಿರಣ್ಮಯಿಯು ಆ ಲತಾ
ಮಂಟಪದಲ್ಲಿ ನಿಂತು ಒಬ್ಬ ಯೌವನ ಪುರುಷನ ಸಂಗಡ ಮಾತಾಡು
ತಿದ್ದಳು,



ಹಿರಣ್ಮಯಿಗೆ ವಿವಾಹದ ವಯಸ್ಸು ಅತಿಕ್ರಮಿಸಿದ್ದಿತು. ಅವಳು
ತನಗಿಷ್ಟವಾದ ಗಂಡನನ್ನು ಪಡೆಯಬೇಕೆಂದು, ಹನ್ನೊಂದು ವರ್ಷದ ವಯ
ಸ್ಸಿನಿಂದ, ಕ್ರಮವಾಗಿ ಐದು ವರ್ಷದಿಂದಾ ಸಮುದ್ರದ ತೀರದಲ್ಲಿ ವಾಸ
ಮಾಡುತ್ತ, “ಸಾಗರೇಶ್ವರಿ ” ಎಂಬ ದೇವಿಯನ್ನು ಪೂಜೆ ಮಾಡುತಿದ್ದಳು.
ಆದರೆ ಅವಳ ಮನೋರಥವು ಸಫಲವಾಗಲಿಲ್ಲ. ಯೌವನ ಪ್ರಾಪ್ತೆಯಾದಾ
ಕುಮಾರಿಯು ಏಕಾಂಗಿಯಾಗಿ ಆ ಯೌವನ ಪುರುಷನ ಸಂಗಡ ಮಾತಾಡು
ತಿದ್ದುದೇಕೆಂಬುದು ನಿಮ್ಮೆಲ್ಲರಿಗೂ ಗೊತ್ತಿರಬಹುದು.ಹಿರಣ್ಮಯಿಯು
ನಾಲ್ಕು ವರ್ಷದ ಹುಡುಗಿಯಾಗಿದ್ದಾಗ ಯುವಕನಿಗೆ ಎಂಟು ವರ್ಷ.
ಯುವಕನ ತಂದೆಯಾದ ಶಚೀಸೂತ ಶೆಟ್ಟಿಯು ಧನದಾಸನಿಗೆ ನೆರೆಯವನಾ
ಗಿದ್ದನು. ಅದುಕಾರಣ ಹುಡುಗನೂ ಹುಡುಗಿಯೂ ಏಕತ್ರ ಬಾಲ್ಯ
ಸ್ನೇಹಿತರಾಗಿ ಆಡುತಿದ್ದರು. ಅವರೀರ್ವರೂ ಶಚೀಸೂತನ ಮನೆಯಲ್ಲಾ
ಗಲಿ, ಧನದಾಸನ ಮನೆಯಲ್ಲಾಗಲಿ ಸರ್ವದಾ ಸಂಗಾತಿಗಳಾಗಿ ಆಡುತ್ತಿರು
ವರು. ಈಗಾ ಯುವತಿಗೆ ಹದಿನಾರು ವರ್ಷ ; ಯುವಕನಿಗೆ ಇಪ್ಪತ್ತು
ವರ್ಷ ; ಆದರೂ ಅವರಿಬ್ಬರೂ ತಮ್ಮ ಬಾಲ್ಯಸಖಿತ್ವದ ಸಂಬಂಧವನ್ನು
ಬಿಟ್ಟಿರಲಿಲ್ಲ. ಸ್ವಲ್ಪಕಾಲದ ವರೆಗೆ ಆ ಸಂಬಂಧವು ವಿಚ್ಛಿನ್ನವಾಗಿದ್ದಿತು.
ಯಥಾಕಾಲದಲ್ಲಿ ಅವರಿಬ್ಬರ ತಂದೆತಾಯಿಗಳು ಆ ಯುವಕ ಯುವತಿಯ
ರಿಗೆ ವಿವಾಹವನ್ನು ಮಾಡಲು ನಿಷ್ಕರ್ಷೆ ಮಾಡಿದ್ದರು- ವಿವಾಹಕ್ಕೆ ಲಗ್ನವೂ
ಗೊತ್ತಾಗಿದ್ದಿತು. ಅಕಸ್ಮಾತ್ತಾಗಿ ಒ೦ದುದಿನ ಹಿರಣ್ಮಯಿಯ ತಂದೆಯು,
ತಾನು ವಿವಾಹವನ್ನು ಮಾಡುವುದಿಲ್ಲವೆಂದು ಹೇಳಿಬಿಟ್ಟನು. ಅಂದಿನ
ಮೊದಲ್ಗೊಂಡು ಹಿರಣ್ಮಯಿಯು ಪುನಃ ಪುರಂದರನನ್ನು ನೋಡಿರಲಿಲ್ಲ.
ಅಂದೊಂದು ವಿಶೇಷ ವಿಷಯವಾಗಿ ಮಾತಾಡುವುದಿದೆಯೆಂತಲೂ ದಯವಿಟ್ಟು
ಬಂದು ಹೋಗಬೇಕೆಂದೂ ಅವಳಿಗೆ ಪುರಂದರನು ಹೇಳಿ ಕಳುಹಿದ್ದನು.
ಹಿರಣ್ಮಯಿಯು ಲತಾ ಮಂಟಪದ ಬಳಿ ಬಂದು, “ ನನ್ನನ್ನು ಕರೆಯಿಸಿದು
ದೇಕೆ? ನಾನೀಗ ಬಾಲೆಯಲ್ಲ, ವಿಜನವಾದೀ ಪುಪ್ಪವಾಟಕ್ಗೆ ನಾನೊಬ್ಬಳೇ
ಬಂದು ನಿನ್ನ ಸಂಗಡ ಮಾತಾಡುವುದು ಸರಿಯಾಗಿ ಕಾಣುವುದಿಲ್ಲ ; ಪುನಃ
ಕರೆಯಿಸಿದರೆ ನಾನು ಬರುವುದಿಲ್ಲ" ವೆ೦ದು ಹೇಳಿದಳು.

ಹದಿನಾರು ವರ್ಷದ ಬಾಲೆಯು, ತಾನು ಬಾಲೆಯಲ್ಲವೆಂದು ಹೇಳು

ವುದು ಬಹಳ ಪುಷ್ಕಳ ಸುರಸ ಪುಷ್ಟವಾದ ಮಾತು. ಆದರೆ ಆ ರಸವನ್ನು
ಅನುಭವಿಸುವವರು ಅಲ್ಲಾರೂ ಇರಲಿಲ್ಲ. ಪುರಂದರನ ವಯಸ್ಸು ಅಥವಾ
ಅವನ ಮನೋಭಾವವು ಅಂತಹದುದಾಗಿರಲಿಲ್ಲ.
ಪುರಂದರನಾ ಪುಷ್ಪವಾಟಕೆಯ ಮೇಲೆ ಹಬ್ಬಿದ್ದ ಲತೆಯಿಂದೊಂದು
ಪುಷ್ಪವನ್ನು ಕಿತ್ತುಕೊಂಡು, ಅದನ್ನು ಛಿನ್ನ ಛಿನ್ನವಾಗಿ ಹರಿದುಹಾಕುತ್ತ,
“ ನಾನು ಪುನಃ ಕರೆಯಿಸುವುದಿಲ್ಲ, ನಾನು ದೂರದೇಶ ಹೊರಟುಹೋಗು
ತೇನೆ, ನಿನಗೆ ಹೇಳಿ ಹೋಗೋಣವೆಂದು ಇಲ್ಲಿಗೆ ಬಂದೆನು ” ಎಂದನು.

ಹಿರಣ್ಮಯಿ-ದೂರದೇಶಕ್ಕೆ? ಎಲ್ಲಿಗೆ ?

ಪುರಂದರ-ಸಿ೦ಹಳದ್ವೀಪಕ್ಕೆ.

ಹಿರಣ್ಮಯಿ-ಸಿಂಹಳಕ್ಕೆ? ಏಕೆ ? ಸಿಂಹಳಕ್ಕೆ ಹೋಗಲೇಕೆ ?

ಪುರಂದರ-ಏಕೆ ಹೋಗಬೇಕೆ ? ನಾನು ಶೆಟ್ಟಿ, ವ್ಯಾಪಾರಕ್ಕೆ

ಸಲವಾಗಿ ಹೋಗುವೆನು.

ಹೀಗೆಂದು ಹೇಳುತಿದ್ದಹಾಗೆ ಪುರಂದರನ ಕಣ್ಣುಗಳಲ್ಲಿ ದರದರನೆ

ನೀರು ಸುರಿಯಿತು.

ಹಿರಣ್ಮಯಿಯು ವಿಮನೆಯಾಗಿ, ಆವ ಮಾತನ್ನೂ ಹೇಳದೆ, ಎವೆ

ಇಕ್ಕದೆ ತನ್ನೆದುರಿಗಿದ್ದ ಸಾಗರದ ತರಂಗದಲ್ಲಿ ಸೂರ್ಯನ ಕಿರಣಗಳು
ಕ್ರೀಡಿಸುತಿದ್ದುದನ್ನು ನೋಡತೊಡಗಿದಳು ; ಪ್ರಾತಃಕಾಲ, ತಂಗೊಳ್ದ
ತಂಗಾಳಿಯು ಬೀಸುತಿದ್ದಿತು ; ಮೃದುಪವನೋಸ್ಥಿತವಾದಾ ಚಿಕ್ಕ ಚಿಕ್ಕ
ತರಂಗಗಳಲ್ಲಿ ಬಾಲಾರುಣ ಕಿರಣಗಳು ಬಿದ್ದು ಕಂಪಿತವಾಗುತ್ತಿದ್ದುವು ;
ಸಮುದ್ರದ ನೀರಿನಲ್ಲಿ ಆ ಕಿರಣಗಳ ಅನಂತ ಉಜ್ವಲ ರೇಖೆಗಳು ಪ್ರಸ
ರಿಸುತಿದ್ದುವು ; ಶ್ಯಾಮಾಂಗಿಯ ಅಂಗದಲ್ಲಿ ಶುಭ್ರವಾದ ಬೆಳ್ಳಿಯ ಆಭರಣ
ಗಳಂತೆ ಸಮುದ್ರದ ನೊರೆಯು ಶೋಭಿಸುತ್ತಿದ್ದಿತು ; ಸಮುದ್ರದ ತೀರ
ದಲ್ಲಿ ಜಲಚರ ಪಕ್ಷಿಗಳು ಬಿಳುಪಾದ ರೇಖೆಯಂತೆ ಸಾಲಿಟ್ಟುಕೊಂಡು
ಹಾರಾಡುತಿದ್ದುವು ; ಹಿರಣ್ಮಯಿಯು ಅವುಗಳನ್ನು ನೋಡಿದಳು, ನೀಲ
ವಾದಾ ಜಲರಾಶಿಯನ್ನು ನೋಡಿದಳು, ತರಂಗಗಳ ಶಿರದಲ್ಲಿ ಫೇನಮಾಲೆ
ಯನ್ನು ನೋಡಿದಳು, ಸೂರ್ಯಕಿರಣಗಳ ಕ್ರೀಡೆಯನ್ನು ನೋಡಿದಳು,
ದೂರದಲ್ಲಿದ್ದ ಹಡಗುಗಳನ್ನು ನೋಡಿದಳು, ನೀಲಾಂಬರದಲ್ಲಿ ಕಪ್ಪುಚು ಕ್ಕಿಯಂತೆ ಹಾರುತಿದ್ದ ಹಕ್ಕಿಯನ್ನು ನೋಡಿದಳು ; ಕಡೆಗೆ ನೆಲದಮೇಲೆ
ಬಿದ್ದಿದ್ದೊಂದು ಒಣಗಿದ ಹೂವಿನಮೇಲೆ ದೃಷ್ಟಿಯಿಟ್ಟುಕೊಂಡು, “ ನೀನೇ
ಕೆ ಹೋಗುಬೇಕು ? ಮಿಕ್ಕತಡವೆಯಲ್ಲೆಲ್ಲಾ ನಿಮ್ಮ ತಂದೆಯೇ ಹೋಗು
ತ್ತಿದ್ದರು ” ಎಂದಳು.
ಪುರಂದರ-ನಮ್ಮ ತಂದೆಗೆ ವಯಸ್ಸಾಗುತ್ತ ಬಂತು ; ನನಗೆ ಹಣ
ವನ್ನು ಸಂಪಾದಿಸುವ ವಯಸ್ಸು ಬಂದಿದೆ ; ನಮ್ಮ ತಂದೆಯ ಅನುಮತಿ
ಯನ್ನು ತೆಗೆದುಕೊಂಡಿದ್ದೇನೆ.
ಹಿರಣ್ಮಯಿಯು ಲತಾಮಂಟಪದ ಅಡ್ಡಮರದ ಮೇಲೆ ತಲೆಯನ್ನಿ
ಟ್ಟುಕೊಂಡು ಕತ್ತುರುಗಾದಂತವಳಾಗಿ ನಿಂತಳು. ಪುರಂದರನು ನೋಡು
ತಿದ್ದಹಾಗೆ ಸುಂದರವಾದ ಮನ್ಮಥನ ರಂಗಭೂಮಿಯಂತಿದ್ದವಳಾ ಲಲಾಟವು
ಕುಂಚಿತವಾಯಿತು, ಅಧರವು ಸ್ಪುರಿತವಾಯಿತು, ನಾಸಿಕಾರಂಧ್ರಗಳು ಅರ
ಳಿದುವು, ಹಿರಣ್ಮಯಿಯು ಅತ್ತುಬಿಟ್ಟಳು.
ಪುರಂದರನು ಮುಖವನ್ನು ತಿರುಗಿಸಿಕೊಂಡನು. ಅವನೂ ಒಂದು
ತಡವೆ ಆಕಾಶವನ್ನು ನೋಡಿದನು, ನೆಲವನ್ನು ನೋಡಿದನು, ನಗರವನ್ನು
ನೋಡಿದನು, ಸಮುದ್ರವನ್ನು ನೋಡಿದನು, ಎಲ್ಲವನ್ನೂ ನೋಡಿದನು,
ಅದಾವದರಿಂದಲೂ ನಿಲ್ಲದ ಕಣ್ಣೀರು ಹರಿದು ಅವನ ಕಪಾಲವು ತೋಯಿದು
ಹೋಯಿತು. ಪುರಂದರನು ಕಣ್ಣೀರನ್ನೊ ರಸಿಕೊಂಡು, “ನಿನಗೆ ಸಂಗತಿ
ಯನ್ನು ತಿಳಿಸಿ ಹೋಗೋಣವೆಂದು ಇಲ್ಲಿಗೆ ಪುನಃ ಬಂದೆನು, ನಿಮ್ಮ
ತಂದೆಯು ನಿನ್ನನ್ನೆನಗೆ ಕೊಟ್ಟು ಮದುವೆಯನ್ನು ಮಾಡುವುದಿಲ್ಲವೆಂದು
ಎಂದು ಹೇಳಿದನೋ, ಅಂದಿನದ ಮೊದಲ್ಗೊಂಡು ಸಿಂಹಳ ದ್ವೀಪಕ್ಕೆ ಹೊರಟು
ಹೋಗುಬೇಕೆಂದು ಸಂಕಲ್ಪವಂ ಮಾಡಿಕೊಂಡೆನು. ನಿಂಹಳದ್ವೀಪದಿಂದ
ಹಿಂದಿರುಗಿ ಬರಕೂಡದೆಂತಲೂ ಯೋಚಿಸಿಕೊಂಡಿದೇನೆ, ನಿನ್ನ ಜ್ಞಾಪಕವು
ಶುದ್ಧವಾಗಿ ಮರೆತುಹೋದರೆ ಆಗ ಹಿಂದಿರುಗಿ ಬರುವೆನು; ನನಗೆ ಹೆಚ್ಚು
ಮಾತುಗಳನ್ನು ಹೇಳುವುದಕ್ಕೆ ತೋಚುವುದಿಲ್ಲ, ಹೆಚ್ಚು ಮಾತುಗಳನ್ನು
ಹೇಳಿದರೆ ನೀನೂ ತಿಳಯಲಾರೆ; ಇಷ್ಟೊಂದು ಮಾತ್ರ ತಿಳಯಹೇಳು
ವೆನು ; ಏನೆಂದರೆ, ನನ್ನ ಪಾಲಿಗೆ ಜಗತ್ತಿನ ಸಂಸಾರವೆಲ್ಲ ಒಂದು ತೂಕ,
ನೀನೊಂದು ತೂಕ, ಆದರೆ ಜಗತ್ತೆಲ್ಲ ಸೇರಿದರೂ ನಿನ್ನ ತೂಕಕ್ಕೆ ಸಮ
ನಾಗದು, ಅಷ್ಟೊಂದು ಹೇಳಬಲ್ಲೆನು ; ಹೆಚ್ಚು ಹೇಳಲಾರೆನು " ಎಂದು
ಹೇಳಿ ಬೇರೆಕಡೆ ತಿರುಗಿ ಹತ್ತು ಹೆಜ್ಜೆಗಳು ಹೋಗಿ ಮತ್ತೊಂದು ಮರ
ದೊಂದೆಲೆಯನ್ನು ಕಿತ್ತುಕೊಂಡನು ; ಕಣ್ಣೀರಿನ ವೇಗವು ಸ್ವಲ್ಪ ಕಡಿಮೆ
ಯಾದ ಬಳಿಕ ಹಿಂದಿರುಗಿ ಬಂದು, " ನೀನೆನ್ನನ್ನು ಬಹಳವಾಗಿ ಪ್ರೀತಿಸು
ತ್ತಿಯೆಂದು ಚೆನ್ನಾಗಿ ಬಲ್ಲೆನು ; ಆದರೆ ನೀನೊಂದು ದಿನ ಅನ್ಯನಿಗೆ ಪತ್ನಿ
ಯಾಗುವೆಯಾದಕಾರಣ ನನ್ನನ್ನು ಜ್ಞಾಪಿಸಿಕೊಳ್ಳಬೇಡ, ಮರೆತುಬಿಡು.
ನಿನಗೂ ನನಗೂ ಇದೇ ಕಡೆಯ ಸಂದರ್ಶನ, ಪುನಃ ನಾನು ನಿನ್ನನ್ನು
ನೋಡಲಾರೆನೆಂದು ತೋರುತ್ತದೆ " ಎಂದು ಹೇಳಿದನು.
ಅಷ್ಟು ಹೇಳಿ ಪುರಂದರನು ಹೊರಟುಹೋದನು. ಹಿರಣ್ಮಯಿಯು
ಅಳುವುದಕ್ಕೆ ಪ್ರಾರಂಭಿಸಿದಳು. ಅಳುವನ್ನು ನಿಲ್ಲಿಸಿ, ಮನಸ್ಸಿನಲ್ಲಿ,
" ನಾನಿಂದು ಸತ್ತು ಹೋದರೆ ಪುರಂದರನು ಸಿಂಹಳದ್ವೀಪಕ್ಕೆ ಹೋಗಬ
ಲ್ಲನೆ ? ನಾನು ಕುತ್ತಿಗೆಗೆ ಲತೆಯನ್ನು ಬಿಗಿದುಕೊಂಡು ಸಾಯಕೂಡ
ದೇಕೆ ? ಅಥವಾ ಸಮುದ್ರದಲ್ಲಿ ಮುಣುಗಿ ಹೋಗಕೂಡದೇಕೆ ? " ಎಂದು
ಭಾವಿಸಿಕೊಂಡು, ಪುನಃ " ನಾನು ಸತ್ತ ಬಳಿಕ ಪುರಂದರನು ಸಿಂಹಳದ್ವೀ
ಪಕ್ಕೆ ಹೋದರೇನು, ಬಿಟ್ಟರೇನು ? ಅದರಿಂದ ನನಗೇನಾದಂತಾಯಿತು ? "
ಎಂದಂದುಕೊಂಡು ಪುನಃ ಅಳುತ್ತ ಕುಳಿತುಕೊಂಡಳು.

ಎರಡನೆಯ ಪರಿಚ್ಚೇದ.

——————

ಧನದಾಸನು ಮಗಳನ್ನು ಪುರಂದರನಿಗೆ ಕೊಟ್ಟು ಮದುವೆ ಮಾಡು
ವುದಿಲ್ಲವೆಂದೇಕೆ ಹೇಳಿದನೋ ಅದಾರಿಗೂ ತಿಳಿಯದು. ಅವನಾ ವಿಚಾರ
ವನ್ನಾರ ಸಂಗಡಲೂ ಹೇಳಲಿಲ್ಲ. ಅವನವರಾರಾದರೂ ಕೇಳಿದರೆ, "ವಿಶೇ
ಷವಾದೊಂದು ಕಾರಣವಿದೆ " ಎಂದು ಹೇಳುತ್ತಿದ್ದನು. ಅನೇಕರು ಬಂದು
ಹೆಣ್ಣನ್ನು ಕೇಳಿದರು. ಧನದಾಸನು ಅವರಾರ ಸಂಬಂಧವನ್ನು ಬೆಳಯಿಸು
ವುದಕ್ಕೂ ಸಮ್ಮತಿಸಲಿಲ್ಲ. ವಿವಾಹದ ಪ್ರಸ್ತಾವವನ್ನೇ ಕಿವಿಗೆ ಹಾಕಿಕೊ
ಳ್ಳನು. ಹುಡುಗಿಯು ದೊಡ್ಡವಳಾದಳೆಂದವಳ ತಾಯಿಯು ಆಕ್ಷೆಪಣೆಯಂ
ಮಾಡುತ್ತಿದ್ದಳು ; ಧನದಾಸನದಕ್ಕೆ ಕಿವಿಕೊಡುತ್ತಿರಲಿಲ್ಲ ; “ನಮ್ಮ
ಗುರುಗಳು ಬರಲಿ ; ಅವರು ಬಂದ ಬಳಿಕ ಆ ಪ್ರಸ್ತಾವವಂ ಮಾಡೋಣ"
ಎಂದು ಹೇಳುವನು.
ಪುರಂದರನು ಸಿಂಹಳದ್ವೀಪಕ್ಕೆ ಹೊರಟುಹೋದನು. ಅವನು
ಸಿಂಹಳಕ್ಕೆ ಹೊರಟುಹೋಗಿ ಎರಡು ವರ್ಷಗಳಾದುವು ; ಹಿಂದಿರಿಗಿ ಬರ
ಲಿಲ್ಲ. ಹಿರಣ್ಮಯಿಗೆ ಮದುವೆಯಾಗಲಿಲ್ಲ. ಅವಳು ಹದಿನೆಂಟು ವರ್ಷದ
ಯೌವನದವಳಾಗಿ, ಉದ್ಯಾನದ ಮಧ್ಯೆ ನವಪಲ್ಲವಿತ ಚೂತವೃಕ್ಷದಂತೆ ಧನ
ದಾಸನ ಗೃಹದಲ್ಲಿ ಶೋಭಿಸುತಿದ್ದಳು.
ಹಿರಣ್ಮಯಿಯು ಅದರಿಂದ ದುಃಖಿತೆಯಾಗಲಿಲ್ಲ. ಮದುವೆಯ
ಮಾತು ಬಂದರೆ ಅವಳಿಗೆ ಪುರಂದರನ ಜ್ಞಾಪಕವು ಬರುವುದು, ಅವನಾ
ಫುಲ್ಲ ಕುಸುಮ ಮಾಲಾಮಂಡಿತ ಕುಂಚಿತ ಕೃಷ್ಣ ಕುಂತಲಾವೇಪ್ಟಿತವಾದ
ಸಹಾಸವಾದ ಮುಖಮಂಡಲವು ಜ್ಞಾಪಕಕ್ಕೆ ಬರುವುದು; ಅವನ ಪದ್ಮ
ಸದೃಶ ಹಸ್ತದ ವಜ್ರದುಂಗುರಗಳುಳ್ಳ ಬೆರಳುಗಳು ಜ್ಞಾಪಕಕ್ಕೆ ಬರುತಿ
ದ್ದುವು ; ಹಾಗೆ ನೆನವಿಗೆ ಬರುತ್ತಲೆ ಹಿರಣ್ಮಯಿಯು ಅಳುವುದಕ್ಕೆ ತೊಡಗು
ವಳು. ತಂದೆಯು ಅವಳನ್ನಾರಿಗೆ ಕೊಟ್ಟರೂ ಮದುವೆಯಾಗಬೇಕು; ತಂದೆ
ಯ ಅಪ್ಪಣೆಯನ್ನು ಮೀರುವುದಕ್ಕಿಲ್ಲ; ಆದರೆ ಬೇರೆ ಮನುಷ್ಯನೊಂದಿಗೆ
ಸಂಬಂಧವು ಬೆಳದರೆ ಜೀವನ್ಮೃತೆಯಾಗಿರಬೇಕು.
ಹಾಗಿದ್ದರೂ, ತಂದೆಯು ಅವಳ ವಿವಾಹೋದ್ಯೋಗದಲ್ಲಿ ಶುದ್ಧ
ವಾಗಿ ಪ್ರವೃತ್ತನಾಗದಿರುವುದನ್ನು ಕಂಡು ಹಿರಣ್ಮಯಿಯು ಆಶ್ಚರ್ಯಪಡು
ವಳು. ಜನರು ಹೆಣ್ಣು ಹುಡುಗರನ್ನು ಆ ವಯಸ್ಸಿನ ವರೆಗೂ ಮದುವೆ
ಯಿಲ್ಲದೆ ಮನೆಯಲ್ಲಿಟ್ಟುಕೊಳ್ಳುವುದಿಲ್ಲ. ಒಮ್ಮೆ ಇಟ್ಟು ಕೊಂಡರೂ
ಅವರಿಗೆ ಮದುವೆಯಂ ಮಾಡಿ ಮನೆಯಲ್ಲಿಟ್ಟುಕೊಳ್ಳುವರು. ತಂದೆಯು
ಅವಳ ಮದುವೆಯ ವಿಚಾರವಾಗಿ ಜನರಾರು ಬಂದು ಹೇಳಿದರೂ ಕಿವಿಗೆ
ಹಾಕಿಕೊಳ್ಳನೇಕೆ? ಒಂದು ದಿನ ಅವಳಿಗೆ ಅಕಸ್ಮಾತ್ತಾಗಿ ಅದರ ವಿಷಯ
ದಲ್ಲಿ ಸ್ವಲ್ಪ ಸೂಚನೆಯು ಸಿಕ್ಕಿತು.
ಧನದಾಸನು ಅನೇಕ ವ್ಯಾಪಾರವನ್ನು ನಡೆಯಿಸುವುದರಲ್ಲಿ ಚೀನಾ
ದೇಶದ ವಿಚಿತ್ರವಾದೊಂದು ಭರಣಿಯು ಸಿಕ್ಕಿತು. ಭರಣಿಯು ಬಹಳ
ದೊಡ್ಡದಾಗಿದ್ದಿತು. ಧನದಾಸನ ಹೆಂಡತಿಯು ಅದರಲ್ಲಿ ತನ್ನ ಒಡವೆಗಳ
ನ್ನಿಡುವಳು. ಧನದಾಸನು ಹೊಸದಾಗಿ ಕೆಲವು ಒಡವೆಗಳನ್ನು ಮಾಡಿಸಿ
ಹೆಂಡತಿಗೆ ಉಪಹಾರವಾಗಿ ಕೊಟ್ಟನು. ಶ್ರೇಷ್ಠಿಯ ಪತ್ನಿಯು ಹಳೆಯ
ಒಡವೆಗಳನ್ನೆಲ್ಲ ಭರಣಿಯ ಸಮೇತವಾಗಿ ಮಗಳಿಗೆ ಕೊಟ್ಟಳು. ಹಿರಣ್ಮ
ಯಿಯು ಆ ಆಭರಣಗಳನ್ನು ಇಟ್ಟು ತೆಗೆಯುವುದರಲ್ಲಿ ಅವಳಿಗೊಂದು ಬರೆ
ದಿದ್ದ ಕಾಗದದ ಚೂರು ಸಿಕ್ಕಿತು. ಬರವಣಿಗೆಯು ಪೂರ್ತಿಯಾಗಿರಲಿಲ್ಲ.
ಹಿರಣ್ಮಯಿಗೆ ಓದುವುದಕ್ಕೆ ಬರುತಿದ್ದಿತು. ಆ ಚೂರು ಕಾಗದದಲ್ಲಿ
ಪ್ರಾರಂಭದಲ್ಲೇ ತನ್ನ ಸ್ವಂತ ಹೆಸರು ಬರೆದಿತ್ತಾದುದರಿಂದ ಕೌತೂಹಲಾ
ವಿಷ್ಟೆಯಾಗಿ ಅದನ್ನೋದಿದಳು. ಕಾಗದವು ಅರ್ಧವೇ ಇದ್ದುದರಿಂದ
ಪೂರಾ ಅರ್ಥವಾಗಲಿಲ್ಲ. ಅದಾರಾರಿಗೆ ಬರೆದುದು, ಬರೆದಿದ್ದುದೇಕೆಂಬು
ದು ಗೊತ್ತಾಗಲಿಲ್ಲ. ಆದರೂ ಅದರಲ್ಲಿದ್ದಷ್ಟು ಓದಿದುದರಿಂದ ಅವಳಿಗೆ
ಬಹು ಭಯ ಉಂಟಾಯಿತು ; ಹರಿದ ಚೂರು ಕಾಗದದಲ್ಲಿ ಬರೆದಿದ್ದುದೇ
ನೆಂದರೆ :-
ಜಾತಕವನ್ನು ಗುಣಿಸಿನೋಡಲಾ.........
......ಹಿರಣ್ಮಯಿಯಂತಹ ಸುವರ್ಣ ಪುತ್ತಲಿ.........
......ವಾಹವಾದರೆ ಭಯಂಕರವಾದ ವಿಪತ್ತು......... •...
.....ರುಷ......ಮುಖವನ್ನು ಪರಸ್ಪರ.........
...ಗಬಹುದು.......
ಹಿರಣ್ಮಯಿಯು ಗೋಚರವಿಲ್ಲದ ವಿಪತ್ತಿನ ಶಂಕೆಯನ್ನು ಹಚ್ಚಿ
ಕೊಂಡು ಅತ್ಯಂತ ಭೀತೆಯಾದಳು. ಅವಳಾರಿಗೂ ಏನನ್ನೂ ಹೇಳದೆ
ಕಾಗದದ ಚೂರನ್ನು ತೆಗೆದಿಟ್ಟುಕೊಂಡಳು.

ಮೂರನೆಯ ಹರಿಚ್ಛೇದ

__________

ಎರಡು ವರ್ಷಗಳ ಮೇಲೆ ಮತ್ತೊಂದು ವರ್ಷವಾಯಿತು : ಆದರೂ
ಪುರಂದರನು ಸಿಂಹಳದಿಂದ ಹಿಂದಿರಿಗಿ ಬರುವ ಸಮಾಚಾರವಿಲ್ಲ; ಆದರೆ
ಹಿರಣ್ಮಯಿಯ ಹೃದಯದಲ್ಲಿ ಅವನಾ ಮನ್ಮಥ ಸದೃಶವಾದ ಮೂರ್ತಿಯು
ಪೂರ್ವದಂತೆ ಉಜ್ವಲವಾಗಿದ್ದಿತು. ಅವಳು ತನ್ನ ಮನಸ್ಸಿನಲ್ಲಿ, “ ಪುರಂ
ದರನು ನನ್ನನ್ನು ಮರೆತಿರಲಾರನು, ಹಾಗೆ ಮರೆತಿದ್ದರೆ ಹಿಂದಿರುಗುತಿದ್ದ
ನು” ಎಂದು ತಿಳಿದುಕೊಂಡಳು.
ಹೀಗೆ ಎರಡು ವರ್ಷಗಳು ಕಳೆದುವು. ಮತ್ತೊಂದು ವರ್ಷವೂ
ಕಳೆಯಿತು. ಒಂದು ದಿನ ಅಕಸ್ಮಾತ್ತಾಗಿ ಧನದಾಸನು, “ ಎಲ್ಲರೂ ಹೊ
ರಡಿ, ಸಪರಿವಾರವಾಗಿ ಕಾಶಿಗೆ ಹೋಗುಬೇಕು, ಗುರುಗಳ ಸನ್ನಿಧಿಯಿಂದ
ಶಿಷ್ಯನು ಬಂದಿದ್ದಾನೆ, ಅಲ್ಲಿಗೆ ಬರಬೇಕೆಂದು ಗುರುಗಳ ಅನುಜ್ಞೆಯಾಗಿದೆ,
ಅಲ್ಲೇ ಹಿರಣ್ಮಯಿಗೆ ಮದುವೆಯಾಗಬೇಕು, ಅಲ್ಲಿ ಮೂರು ವರಗಳನ್ನು
ಗೊತ್ತು ಮಾಡಿದ್ದಾರೆ” ಎಂದು ಹೇಳಿದನು.
ಧನದಾಸನು ಹೆಂಡತಿಯನ್ನೂ ಮಗಳನ್ನೂ ಸಂಗಡ ಕರೆದುಕೊಂಡು
ಕಾಶೀಗೆ ಹೊರಟನು. ಸರಿಯಾದ ಕಾಲದಲ್ಲಿ ಕಾಶೀಗೆ ಸೇರಿದ ಬಳಿಕ
ಧನವಾಸನ ಗುರುವಾದ ಆನಂದಸ್ವಾಮಿಯು ಬಂದು ದರ್ಶನವಂ ಕೊಟ್ಟು
ವಿವಾಹಕ್ಕೆ ಲಗ್ನವನ್ನು ನಿಷ್ಕರ್ಷೆ ಮಾಡಿ ಶಾಸ್ತ್ರೋಕ್ತವಾಗಿ ಅಣಿಮಾಡಬೇ
ಕೆಂದು ಅಪ್ಪಣೆಯಂ ಕೊಟ್ಟನು.
ಮದುವೆಗೆ ಶಾಸ್ತ್ರೋಕ್ತವಾಗಿ ಬೇಕಾದುದೆಲ್ಲ ಹವಣರಿತು ಅಚ್ಚುಗ
ಟ್ಟಾಗಿ ಹವಣಿಸಲ್ಪಟ್ಟಿದ್ದಿತು ; ಆದರೆ ಗದ್ದಲವಿಲ್ಲ; ಗುಂಪು ಕೂಡಲಿಲ್ಲ;
ಧನದಾಸನ ಜನರಿಗೆ ಹೊರತು ಮತ್ತಾರಿಗೂ ಮದುವೆಯ ಸಮಾಚಾರವು
ತಿಳಿಯದು ; ಕೇವಲ ಶಾಸ್ತ್ರೀಯವಾಗಿ ಆಗಬೇಕಾದುದು ಸಿದ್ಧವಾಯಿತು.
ವಿವಾಹದ ದಿನ ಸಾಯಂಕಾಲವೂ ಬಂತು. ರಾತ್ರಿ ಧನುರ್ಲಗ್ನ
ದಲ್ಲಿ ಮುಹೂರ್ತವಿಟ್ಟಿದ್ದಿತು. ಮನೆಯಲ್ಲಿದ್ದವರು ಹೊರತು ಮತ್ತಾರೂ
ಬಂದಿರಲಿಲ್ಲ, ನೆರೆಹೊರೆಯವರೂ ಬಂದಿರಲಿಲ್ಲ, ಅದುವರೆಗೆ ಧನದಾಸ
ನಿಗೆ ಹೊರ್ತು ಮತ್ತಾರಿಗೂ ವರನಾರೆಂಬುದು ಗೊತ್ತಾಗಲಿಲ್ಲ; ಅವನಾವ
ಊರಿನವನೆಂಬುದೂ ತಿಳಿಯದು. ಆದರೆ ಆನಂದಸ್ವಾಮಿಯು ವರನನ್ನು
ಗೊತ್ತು ಮಾಡಿದ್ದುದರಿಂದ ಅಪಾತ್ರನಾಗಿರನೆಂದು ಎಲ್ಲರಿಗೂ ಚೆನ್ನಾಗಿ ನಂ
ಬಗೆಯಿದ್ದಿತು. ಅವನು ವರನ ಪರಿಚಯವನ್ನೇಕೆ ಹೇಳಲಿಲ್ಲವೋ ಅದನ
ನಿಗೆ ತಿಳಿಯಬೇಕು. ಅವನ ಮನಸ್ಸಿನಲ್ಲಿರುವುದು ಇತರರಿಗೆ ತಿಳಿಯುವ
ಬಗೆ ಹೇಗೆ? ಒಂದು ಚಿಕ್ಕಮನೆಯಲ್ಲೊಬ್ಬ ಪುರೋಹಿತನು ಸಂಪ್ರದಾ
ನದ ಸಾಮಗ್ರಿಗಳನ್ನಿಟ್ಟುಕೊಂಡು ಏಕಾಂಗಿಯಾಗಿ ಕುಳಿತಿದ್ದನು. ಧನ
ದಾಸನೊಬ್ಬನೇ ಬಾಗಿಲಹೊರಗೆ ವರಾಗಮನವನ್ನೆದುರು ನೋಡುತ್ತ ನಿಂತಿ
ದ್ದನು. ಒಳಗೆ ಅಂತಃಪುರದಲ್ಲಿ ಕನ್ಯೆಯು ಸಾಲಂಕೃತೆಯಾಗಿ ಕುಳಿತಿದ್ದಳು.
ಮತ್ತಾರೂ ಇರಲಿಲ್ಲ, ಹಿರಣ್ಮಯಿಯು ಮನಸ್ಸಿನಲ್ಲಿ, ಇದೇನು ರಹಸ್ಯ ;
ಹೇಗಾದರೂ, ಪುರಂದರನಿಗೇನೋ ಕೊಟ್ಟು ಮದುವೆಯಾಗುವುದಿಲ್ಲ; ಆವನಿ
ಗಾದರೂ ಮದುವೆಯಾಗಲಿ ; ಅನ್ಯನಾವನೇ ಆಗಲಿ, ಅವನೆನಗೆ ಎನೆಯ
ನಾಗುವುದಿಲ್ಲ ; ನಾನವನಿಗೆ ಎನೆಯಳಾಗೆನು ; ಅದು ಖಂಡಿತವೆಂದಂದು
ಕೊಂಡಳು.

ಆ ಸಮಯದಲ್ಲಿ ಧನದಾಸನು ಮದುವೆಯ ಹೆಣ್ಣನ್ನು ಕರೆಯಲು
ಬಂದನು. ಅವಳನ್ನು ವಿವಾಹಮಂಟಪಕ್ಕೆ ಕರೆದುಕೊಂಡು ಹೋಗುವು
ದಕ್ಕೆ ಮುಂಚಿತವಾಗಿ ತಂದೆಯು ಅವಳೆರಡು ಕಣ್ಣುಗಳನ್ನು ಬಟ್ಟೆಯಿಂದ
ಭದ್ರವಾಗಿ ಕಟ್ಟಿದನು. ಹಿರಣ್ಮಯಿಯು, “ ಅಪ್ಪಾ ! ಇದೇನು ? " ಎಂದು
ಕೇಳಿದಳು, ಧನದಾಸನು, "ಗುರುಗಳ ಅಪ್ಪಣೆ ” ಎಂದು ಹೇಳಿದನಲ್ಲದೆ,
“ ನೀನು ನನ್ನಪ್ಪಣೆಯಪ್ರಕಾರ ನಡೆಯಬೇಕು, ಮಂತ್ರಗಳನ್ನೆಲ್ಲ ಮನಸ್ಸಿ
ನಲ್ಲಿ ಹೇಳಿಕೊಳ್ಳಬೇಕು ” ಎಂತಲೂ ಹೇಳಿದನು. ಹಿರಣ್ಮಯಿಯು ಕೇಳಿ
ಅದಕ್ಕೆ ಉತ್ತರವನ್ನು ಕೊಡಲಿಲ್ಲ. ಧನದಾಸನು ದೃಷ್ಟಿಹೀನೆಯಾದಾ ಕನ್ಯೆ
ಯನ್ನು ಕೈಹಿಡಿದುಕೊಂಡು ಸಂಪ್ರದಾನಮಂಟಪಕ್ಕೆ ಕರೆದುಕೊಂಡು
ಹೋದನು.

ಹಿರಣ್ಮಯಿಯು ಸಂಪ್ರದಾನಮಂಟಪಕ್ಕೆ ಕರೆತರಲ್ಪಟ್ಟವಳು ಕಣ್ಣು
ಬಿಟ್ಟು ನೋಡಬಹುದಾಗಿದ್ದರೆ ಪಾತ್ರನೂ ಅವಳಂತೆ ಆವೃತನಯನನಾಗಿದ್ದ
ನೆಂದು ತಿಳಿಯುತ್ತಿದ್ದಳು, ಈ ಪ್ರಕಾರ ವಿವಾಹವಾಯಿತು. ಆ ಸ್ಥಳದಲ್ಲಿ
ಗುರು, ಪುರೋಹಿತ, ಹೆಣ್ಣಿನ ತಂದೆ ಇವರ ಹೊರ್ತು ಮತ್ತಾರೂ ಇರ
ಲಿಲ್ಲ. ವಧೂವರರಿಬ್ಬರೂ ಆರನ್ನೂ ನೋಡಲಿಲ್ಲ. ಪರಸ್ಪರ ಶಾಸ್ತ್ರೋ
ಕ್ತವಾಗಿ ಶುಭದೃಷ್ಟಿಯಾಗಲಿಲ್ಲ.
ಸಂಪ್ರದಾನಾನಂತರದಲ್ಲಿ ಆನಂದಸ್ವಾಮಿಯು ವಧೂವರರನ್ನು ಕು
ರಿತು, “ ನಿಮ್ಮಿಬ್ಬರಿಗೂ ವಿವಾಹವಾಯಿತು, ನೀವಿಬ್ಬರೂ ಪರಸ್ಪರ ನೋಡ
ಕೂಡದು ; ಕನ್ಯಗೆ ಕನ್ಯಾತ್ವವನ್ನು ಹೋಗಲಾಡಿಸುವುದೇ ಈ ವಿವಾಹದ.
ಉದ್ದೇಶವಾಗಿದೆ. ಈ ಜನ್ಮದಲ್ಲಿ ನೀವಿಬ್ಬರೂ ಪರಸ್ಪರ ನೋಡುವಿರೋ
ಇಲ್ಲವೋ ಅದನ್ನು ಹೇಳುವುದಕ್ಕಾಗುವುದಿಲ್ಲ. ಒಂದುವೇಳೆ ನೋಡಿ
ದರೂ ಪರಸ್ಪರ ಗುರುತು ಹಿಡಿಯಲಾರಿರಿ, ಗುರುತು ಹಿಡಿಯುವುದಕ್ಕೆ
ನಾನೊಂದುಪಾಯವನ್ನು ತೋರಿಸಿಕೊಡುವೆನು; ನನ್ನ ಕೈಯಲ್ಲೀಗ ಎರಡು
ಉಂಗುರಗಳಿವೆ; ಎರಡೂ ಒಂದೇಪ್ರಕಾರವಾಗಿ ಮಾಡಲ್ಪಟ್ಟುದು ; ಉಂಗು
ರಕ್ಕೆ ಹಾಕಿರುವ ಹರಳುಗಳು ಪ್ರಾಯಶಃ ಎಲ್ಲಿಯೂ ಸಿಕ್ಕತಕ್ಕುವಲ್ಲ ;
ಎರಡು ಉಂಗುರಗಳ ಹರಳುಗಳಲ್ಲಿಯೂ ಹಿಂದುಗಡೆಯಲ್ಲಿ ಒಂದೊಂದು
ಮಯೂರವನ್ನು ಒಂದೇ ಸಮನಾಗಿ ಕೆತ್ತಿದೆ ; ಒಂದುಂಗುರವನ್ನು ವರ
ನಿಗೂ ಒಂದುಂಗುರವನ್ನು ವಧುವಿಗೂ ಕೊಡುವೆನು ; ಅ೦ತಹ ಉಂಗುರವು
ಮತ್ತಾರಿಗೂ ಸಿಗದು, ಮತ್ತಾರಲ್ಲಿಯೂ ಇಲ್ಲ. ಅದರಲ್ಲಿ ಕೆತ್ತಲ್ಪಟ್ಟಿರುವ
ಮಯೂರವು ಬೇರೊಬ್ಬರು ಕೆತ್ತುವುದಕ್ಕಾಗುವುದಿಲ್ಲ ; ನಾನೇ ಸ್ವಂತ
ವಾಗಿ ಕೆತ್ತಿ ಮಾಡಿದುದು ; ವಧುವಾವ ಪುರುಷನ ಕೈಯಲ್ಲಾ ಉಂಗುರ
ವನ್ನು ನೋಡುವಳೋ ಅವನೇ ಅವಳಿಗೆ ಪತಿಯು ; ಅದೇಪ್ರಕಾರ ವರ
ನಾವಳ ಕೈಯಲ್ಲಾ ಉಂಗುರವನ್ನು ನೋಡುವನೋ ಅವಳೇ ಅವನಿಗೆ
ಪತ್ನಿ : ನೀವಿಬ್ಬರೂ ಈ ಉಂಗುರಗಳನ್ನು ಕಳಿಯಕೂಡದು, ಅವುಗಳನ್ನಾ
ರಿಗೂ ಕೊಡಕೂಡದು, ಅನ್ನಕ್ಕೆ ಇಲ್ಲದಿದ್ದರೂ ಅದನ್ನು ಮಾರಕೂಡದು ;
ಅಲ್ಲದೆ ಇಂದಿನ ಮೊದಲ್ಗೊಂಡು ಐದುವರ್ಷಗಳ ತನಕ ನಿಮ್ಮಿಬ್ಬರಲ್ಲೊ
ಬ್ಬರೂ ಈ ಉಂಗುರಗಳನ್ನು ಧರಿಸಕೂಡದು ; ಇಂದು ಮಾಘಶುದ್ಧ
ಪಂಚಮಿ. ರಾತ್ರಿ ಹನ್ನೊಂದು ಘಳಿಗೆ ಮೇಲಾಗಿದೆ, ಮುಂದೆ ಐದನೆಯ
ವರ್ಷದ ಮಾಘಶುದ್ಧ ಪಂಚಮಿಯ ರಾತ್ರಿ ಹನ್ನೊಂದು ಘಳಿಗೆಗಳಾಗುವವ
ರೆಗೆ ಈ ಉಂಗುರಗಳನ್ನು ನೀವಾರೂ ಧರಿಸಕೂಡದು, ಧರಿಸುವುದನ್ನು
ನಿಷೇಧಿಸಿದ್ದೇನೆ; ನನ್ನೀ ಅಪ್ಪಣೆಯನ್ನು ಮೀರಿದರೆ ಗುರುತರವಾದ ಅಮಂಗ
ಳವು ಸಂಭವಿಸುವುದು ” ಎಂದು ಹೇಳಿದನು.
ಹೀಗೆಂದು ಹೇಳಿ ಆನಂದಸ್ವಾಮಿಯು ಹೊರಟುಹೋದನು.ಧನ
ದಾಸನು ಮಗಳ ಕಣ್ಣುಗಳನ್ನು ಬಿಚ್ಚಿದನು. ಹಿರಣ್ಮಯಿಯು ಕಣ್ಣುಬಿಟ್ಟು
ನೋಡಿದಳು; ಪುರೋಹಿತನೂ ಅವಳ ತಂದೆಯೂ ಅಲ್ಲಿಬ್ಬರೇ ಇದ್ದರು ;



೧೧

ಅವಳಿಗೆ ಮದುವೆಯಾದ ಗಂಡನು ಅಲ್ಲಿರಲಿಲ್ಲ. ವಿವಾಹದಾ ರಾತ್ರಿ ಅವಳೊ
ಬ್ಬಳೇ ಕಾಲಯಾಪನೆಯನ್ನು ಮಾಡಿದಳು.

ನಾಲ್ಕನೆಯ ಪರಿಚ್ಛೇದ

ವಿವಾಹವಾದ ಬಳಿಕ ಧನದಾಸನು ಹೆಂಡತಿಯನ್ನೂ ಮಗಳನ್ನೂ
ಕರೆದುಕೊಂಡು ಸ್ವದೇಶಕ್ಕೆ ಬಂದನು. ನಾಲ್ಕು ವರ್ಷಗಳು ಕಳೆದುಹೋ
ದುವು. ಪುರಂದರನು ಹಿಂದಿರುಗಿ ಬರಲಿಲ್ಲ. ಹಿರಣ್ಮಯಿಗೆ ಅವನು ಹಿಂದಿ
ರುಗಿ ಬಂದರೇನು, ಬಾರದಿದ್ದರೇನು ? ಎರಡೂ ಸಮ.
ಪುರಂದರನು ಏಳು ವರ್ಷಗಳಾದರೂ ಬರಲಿಲ್ಲವೆಂದು ಹಿರಣ್ಯ
ಯಿಯು ಸ್ವಲ್ಪ ದುಃಖಿತೆಯಾದಳು. ಅವಳು ಮನಸ್ಸಿನಲ್ಲಿ, "ನನ್ನನ್ನು
ಇನ್ನೂ ಜ್ಞಾಪಕ ದಲ್ಲಿಟ್ಟುಕೊಂಡಿರುವುದರಿಂದ ಬರಲಿಲ್ಲವೆಂದು ಹೇಳೆ
ವುದು ಅಸಂಭವವಾಗುವುದು. ಅವನು ಜೀವದಿಂದಿರುವನೋ ಇಲ್ಲವೋ ಅದು
ಸಂಶಯವಾಗಿದೆ, ನಾನವನನ್ನು ನೋಡಬೇಕೆಂದು ಇಷ್ಟಪಡುವುದಿಲ್ಲ. ನಾನೀಗ
ಬೇರೊಬ್ಬನ ಹೆಂಡತಿಯಾಗಿದ್ದೇನೆ, ಆದರೆ ನನ್ನ ಬಾಲ್ಯಕಾಲದ ಸ್ನೇಹಿ
ತನು ಬದುಕಿರಲೆಂದು ನಾನೇಕೆ ಹರಸಕೂಡದು?" ಎಂದು ಯೋಚಿಸಿದಳು.
ಧನದಾಸನು ಕಾರಣಾಂತರಗಳಿಂದ ಚಿಂತಾಕ್ರಾಂತನಾಗುತ ಬಂದನು.
ದಿನಕ್ರಮೇಣ ಚಿಂತೆಯು ಹೆಚ್ಚಾಗುತ್ತ ಬಂದು ಕಡೆಗೆ ದಾರುಣವಾದ ರೋ
ಗದಲ್ಲಿ ಬಿದ್ದನು. ಸ್ವಲ್ಪಕಾಲದಲ್ಲಿಯೇ ಅವನಿಗೆ ಮೃತ್ಯುವೂ ಸಂಭವಿ
ನಿತು; ಧನದಾಸನ ಹೆಂಡತಿಯೂ ಗಂಡನ ಚಿತಿಯಲ್ಲಿ ಅನುಮೃತೆಯಾ
ದಳು. ಹಿರಣ್ಮಯಿಗೆ ಮತ್ತಾರೂ ಇರಲಿಲ್ಲ. ಅವಳು ಬಹುವಿಧವಾಗಿ
ತಾಯಿಯ ಕಾಲುಗಳನ್ನು ಹಿಡಿದುಕೊಂಡು ಅಳುತ್ತ ಈಗಲೇ ಸಾಯ್ಬೇ
ಡೆಂದು ಬೇಡಿಕೊಂಡಳು ; ಆದರೆ ಶ್ರೇಷ್ಠಿಯ ಪತ್ನಿಯು ಕೇಳಲಿಲ್ಲ. ಹಿರ
ಣ‍್ಮಯಿಯು ಪೃಥ್ವಿಯಲ್ಲಿ ಏಕಾಂಗಿಯಾಗಿ ಉಳಿದುಕೊಂಡಳು.


>ಸಹವರಣದ ಕಾಲದಲ್ಲಿ ಹಿರಣ್ಮಯಿಯ ತಾಯಿಯು ಮಗಳನ್ನು
ಕುರಿತು, “ಮಗು ! ನೀನೇಕೆ ಯೋಚಿಸುತ್ತಿ ? ನಿನಗೇನೋ ಒಬ್ಬ ಗಂಡ

೧೨

ಸಿರುವನು ; ಕ್ಲಪ್ತವಾದ ಕಾಲಾನಂತರ ಅವನನ್ನು ನೀನು ನೋಡಿದರೂ
ನೋಡಬಹುದು ; ಹಾಗೆ ನೋಡದೆಹೋದರೆ, ನೀನೀಗ ಬಾಲೆಯಲ್ಲ, ಈ
ಪ್ರಪಂಚದಲ್ಲಿ ಮುಖ್ಯವಾದ ಸಹಕಾರಿಯೆಂದು ಹೇಳುವ ಧನವೆಂಬುದು
ನಿನಗೆ ಅತುಲವಾಗಿದೆ ; ಯೋಚನೆಯಂ ಮಾಡಬೇಡ " ವೆಂದು ಹೇಳಿದಳು.
ಆದರೆ ಆ ಆಶೆಯು ವಿಫಲವಾಗಿ ಹೋಯಿತು. ಧನದಾಸನ ಮರ
ಣಾನಂತರ ನೋಡಲಾಗಿ, ಅವನೇನೂ ಹೆಚ್ಚು ಧನವನ್ನಿಟ್ಟುಹೋಗಿರಲಿಲ್ಲ.
ಒಂದು ದೊಡ್ಡಮನೆ, ಸಂಸಾರದ ಸಾಮಗ್ರಿಗಳು, ಕೆಲವು ಅಭರಣಗಳು
ಇವು ಹೊರತು ಮತ್ತೇನೂ ಇರಲಿಲ್ಲ. ಹಿರಣ್ಮಯಿಯು ವಿಚಾರಮಾಡಿದು
ದರಲ್ಲಿ, ಧನದಾಸನ ವ್ಯಾಪಾರದಲ್ಲಿ ಕೆಲವು ವರ್ಷಗಳಿಂದ ನಷ್ಟವೇ ಉಂಟಾಗಿ
ಅದನ್ನಾರಿಗೂ ತಿಳಿಸದೆ, ಅದರಿಂದುಂಟಾದ ಸಾಲಗಳನ್ನು ತೀರಿಸುವ ಪ್ರಯ
ತ್ನವ೦ ಮಾಡುತಿದ್ದನು; ಅದೇ ಅವನಿಗೆ ಚಿ೦ತೆಯನ್ನುಂಟುಮಾಡುವುದಕ್ಕೆ
ಕಾರಣವಾಯಿತು ; ಸಾಲವನ್ನು ಹರಿಸುವುದು ಅಸಾಧ್ಯವಾಗಿ ಚಿಂತೆಯು
ಹೆಚ್ಚಾಗುತಬಂದು ಕಡೆಗೆ ಅವನ ಮರಣಕ್ಕೂ ಅದೇ ಕಾರಣವಾಯಿತೆಂದು
ತಿಳಿಯಬಂತು.
ಧನದಾಸನ ಮರಣದ ಸಮಾಚಾರವು ಮಿಕ್ಕ ಶ್ರೇಷ್ಠಿಗಳಿಗೆ ತಿಳಿ
ಯಿತು ; ಅವರು ಹಿರಣ್ಮಯಿಯ ಬಳಿ ಬ೦ದು, " ನಿಮ್ಮ ತಂದೆಯು ನಮಗೆ
ಸಾಲಗಾರನಾಗಿ ಸತ್ತು ಹೋಗಿದ್ದಾನೆ, ನಮ್ಮ ಸಾಲಗಳನ್ನು ಹರಿಸಬೇಕು "
ಎಂದು ಕೇಳಿದರು. ಹಿರಣ್ಮಯಿಯು ವಿಚಾರಮಾಡಿದಳು ; ಅವರ ಮಾತು
ನಿಜವಾದುದೆಂದು ತಿಳಿಯಬಂತು. ಆಗವಳು ಸರ್ವಸ್ವವನ್ನೂ ವಿಕ್ರ
ಯಿಸಿ ತಂದೆಯ ಸಾಲಗಳನ್ನೆಲ್ಲ ಹರಿಸಿದಳು. ವಾಸಗ್ರಹವೂ ಮಾರಿಹೋ
ಯಿತು.
ಅನಂತರ ಹಿರಣ್ಮಯಿಯು ಅನ್ನವಸ್ತ್ರಕ್ಕೆ ಮಾರ್ಗವಿಲ್ಲದೆ ಪಟ್ಟಣದ
ಹೊರಗೆ ಬಂದು ಕುಟೀರದಲ್ಲಿ ಒಬ್ಬಳೇ ವಾಸಮಾಡಿಕೊಂಡಿದ್ದಳು. ಅವ
ಳಿಗೆ ಪರಮ ಸಹಕಾರಿಯಾದವನು ಆನಂದಸ್ವಾಮಿ ; ಅವನು ದೂರದೇಶದಲ್ಲಿ
ದ್ದನು. ಅವನಿದ್ದಲ್ಲಿಗೆ ಅವಳನ್ನು ಕರೆದುಕೊಂಡು ಹೋಗುವರಾರೂ ಇಲ್ಲ.

೧೩

ಐದನೆಯ ಪರಿಚ್ಛೇದ.

——————

ಹಿರಣ್ಮಯಿಯು ಯುವತಿಯೂ ಸುಂದರಿಯೂ ಆಗಿದ್ದಳು. ಒಂದು
ಮನೆಯಲ್ಲೊಬ್ಬಳೇ ಮಲಗುವುದು ಸರಿಯಾಗಿರಲಿಲ್ಲ. ಅದರಿಂದ ಅಪಾಯ
ವುಂಟು, ಕಳಂಕಕ್ಕೂ ಕಾರಣ. ಅಮಲೆಯಂಬೊಬ್ಬ ಹೆಂಗಸು ಅವಳ ನೆರೆ
ಮನೆಯಲ್ಲಿ ವಾಸಮಾಡುತ್ತಿದ್ದಳು ; ಅವಳು ವಿತಂತು ; ಅವಳಿಗೊಬ್ಬಸಣ್ಣ
ಗಂಡುಹುಡುಗ, ನಾಲ್ಕೈದುಹೆಣ್ಣು ಮಕ್ಕಳು. ಅಮಲೆಗೆ ಯೌವನದ ಕಾಲವು
ಅತೀತವಾಗಿದ್ದಿತು ; ಸಚ್ಚರಿತ್ರೆಯೆಂದು ಖ್ಯಾತಿಗೊಂಡಿದ್ದಳು. ಹಿರಣ್ಮಯಿ
ಯು ರಾತ್ರಿಯ ಕಾಲದಲ್ಲಿ ಹೋಗಿ ಅವಳ ಮನೆಯಲ್ಲಿ ಮಲಗುತ್ತಿದ್ದಳು.
ಒಂದುದಿನ ಹಿರಣ್ಮಯಿಯು ಅಮಲೆಯ ಮನೆಯಲ್ಲಿ ಮಲಗುವು
ದಕ್ಕೆ ಹೋದಬಳಿಕ ಪ್ರಸ್ತಾವದಮೇಲೆ ಅಮಲೆಯು, " ಪುರಂದರಶ್ರೇಷ್ಠಿ
ಯು ಊರು ಬಿಟ್ಟು ಹೋಗಿ ಎಂಟು ವರ್ಷಗಳ ಬಳಿಕ ಪುನಃ ಬಂದಿದ್ದ
ನೆಂದು ಊರಲ್ಲಿ ಸುದ್ದಿಯು ಹುಟ್ಟಿದೆ " ಎಂದಳು. ಅದನ್ನು ಕೇಳಿ ಹಿರಣ್ಮ
ಯಿಗೆ ಕಣ್ಣೀರು ತುಂಬಿ ಹರಿದುಹೋಯಿತು. ಅಮಲೆಗದು ಕಾಣಲಿಲ್ಲ. ಈ
ಪೃಥ್ವಿಯಲ್ಲಿ ಅವಳಿಗೆ ಉಳಿದಿದ್ದೊಂದುಕಡೆಯ ಸಂಬಂಧವೂ ನಿವೃತ್ತಿಯಾಗಿ
ಹೋಯಿತು ; ಪುರಂದರನು ಅವಳನ್ನು ಮರೆತುಬಿಟ್ಟನು ; ಮರೆಯದೆ ಅವ
ನವಳನ್ನು ಜ್ಞಾಪಕದಲ್ಲಿಟ್ಟಿದ್ದರೆ, ಹಿಂದಿರುಗಿ ಬರುತ್ತಿರಲಿಲ್ಲ ; ಪುರಂದರನು
ಈಗವಳನ್ನು ಮರೆತಿದ್ದರೆ ನಷ್ಟವೆಷ್ಟೋ ಜ್ಞಾಪಿಸಿಕೊಂಡಿದ್ದರೆ ಲಾಭವೂ
ಅಷ್ಟೆ ; ಅವಳಿಗೇನು ಪ್ರಯೋಜನ? ಆದರೆ ಆರ ಬಾಲ್ಯಸ್ನೇಹವನ್ನು ಸದಾ
ಮನಸ್ಸಿನಲ್ಲಿಟ್ಟುಕೊಂಡು ಜ್ಞಾಪಿಸಿಕೊಳ್ಳುತ್ತ ಯಾವಜ್ಜೀವವೂ ಕಾಲಹರ
ಣೆಯನ್ನು ಮಾಡುತಿದ್ದಳೋ ಅಂಥವನು ಮರೆತನೆಂದು ಭಾವಿಸಿ ಹಿರಣ್ಮಯಿಗೆ
ಮನಸ್ಸಿನಲ್ಲಿ ವ್ಯಥೆಯುಂಟಾಯಿತು. ಹಿರಣ್ಮಯಿಯು, ಮನಸ್ಸಿನಲ್ಲಿ " ಅವನು
ಮರೆತಿರನು, ನನಗೋಸ್ಕರ ಅವನೆಷ್ಟು ದಿನ ವಿದೇಶದಲ್ಲಿರಲಾಪನು ? ಅದ
ಲ್ಲದೆ ಅವನ ತಂದೆಯೂ ಹೋಗಿದ್ದನು; ಊರಿಗೆಬಾರದೆ ಮತ್ತೆಲ್ಲಿಗೆ ಹೋ
ಗುವನು ? " ಎಂದು ಯೋಚಿಸಿಕೊಳ್ಳುವಳು. ಪುನಃ, " ನಾನು ವ್ಯಭಿಚಾರಿ
ಣಿಯ ದೋಷಕ್ಕೆ ಗುರಿಯಾದೆನು ; ಹಾಗಿಲ್ಲದಿದ್ದರೆ, ಪುರಂದರನ ಸ್ಮರಣೆಯು
ಪದೇಪದೆ ಬರಲೇಕೆ ? " ಎಂದು ತನಗೆ ತಾನೇ ತಿರಸ್ಕರಿಸಿಕೊಳ್ಳುವಳು,

೧೪

ಅಮಲೆ - ಪುರಂದರನೆಂಬುವನು ನಿನಗೆ ಜ್ಞಾಪಕಕ್ಕೆ ಬರಲಿಲ್ಲವೆ ?
ಪುರಂದರನು ಈಗ್ಗೆ ಕೆಲವು ತಿಂಗಳಿಗೆ ಮುಂಚೆ ಕಾಲವಾದ ಶಚೀಸೂತಶೆ
ಟ್ಟಿಯ ಮಗನಲ್ಲವೆ?
ಹಿರಣ್ಮಯಿ - ಬಲ್ಲೆನು.
ಅಮಲೆ - ಅವನೇ ಈಗ ಹಿಂದಿರುಗಿ ಬಂದಿರುವನು_ಎಷ್ಟೋ ಹಡಗಿ
ನಮೇಲೆ ಎಷ್ಟೋ ದ್ರವ್ಯವನ್ನು ಸಂಪಾದಿಸಿಕೊಂಡು ಬಂದಿದ್ದಾನಂತೆ,
ಅದನ್ನು ಲೆಕ್ಕಮಾಡುವುದಕ್ಕೆ ಆಗುವುದಿಲ್ಲವಂತೆ, ಅಷ್ಟು ಹಣವನ್ನು
ನಮ್ಮೀ ತಾಮಲಿಪಿನಗರದಲ್ಲಿ ಆವಾಗಲೂ ಆರೂ ಕಂಡಿಲ್ಲವಂತೆ !
ಹಿರಣ್ಮಯಿಯ ದೇಹದಲ್ಲಿ ರಕ್ತದ ವೇಗವು ಹೆಚ್ಚಾಯಿತು. ತನ್ನ
ದಾರಿದ್ರ್ಯದ ದೆಸೆಯು ಮನದಲ್ಲಿ ಬಂತು ; ತನ್ನ ಪೂರ್ವಸ್ಥಿತಿಯೂ ಜ್ಞಾಪ
ಕಕ್ಕೆ ಬಂತು ; ದಾರಿದ್ರ್ಯದ ಜ್ವಾಲೆಯು ಅತಿಮಹತ್ತಾದ ಜ್ವಾಲೆ - ಅವರ
ಜ್ವಾಲೆಗೆ ಅತುಲವಾದಾ ಧನಾರಾಶಿಯು ಅವಳದಾದರೆ ಎಷ್ಟೋ ವಾಶಿ ಆಗ
ಕೂಡದೆ ? ಹೀಗೆ ಯೋಚಿಸಿಕೊಂಡರೆ ರಕ್ತದ ವೇಗವು ಆರಿಗೆ ಹೆಚ್ಚಾಗದಿ ರುವುದು ? ಹಾಗೆ ಹೆಚ್ಚಾಗದಿರುವುದು ಹೆಂಗಸರಲ್ಲಿ ವಿರಳ. ಹಿರಣ್ಮಯಿಯು
ಕೆಲವು ನಿಮಿಷಗಳ ತನಕ ಮರೆತವಳಂತಿದ್ದು ಬಳಿಕ ಬೇರೆ ಪ್ರಸ್ತಾವವನ್ನೆ
ತ್ತಿದಳು. ಕಡೆಗೆ ನಿದ್ರೆಯು ಬರುವ ಸಮಯದಲ್ಲಿ, " ಅಮಲೆ ! ಆ ಶೆಟ್ಟಿ
ಯ ಮಗನು ಮದುವೆಯಾಗಿರುವನೆ ? " ಎಂದು ಕೇಳಿದಳು. ಅಮಲೆಯು,
" ಇಲ್ಲ, ಇನ್ನೂ ಮದುವೆಯಲ್ಲಿವಂತೆ " ಎಂದಳು.
ಹಿರಣ್ಮಯಿಯ ಇಂದ್ರಿಯಗಳೆಲ್ಲಾ ವಿವಶವಾದುವು, ಆ ರಾತ್ರಿ ಮತ್ತಾವ
ಮಾತು ಕಥೆಯು ನಡೆಯಲಿಲ್ಲ.

ಆರನೆಯ ಪರಿಚ್ಛೇದ

——————

ಅನಂತರ ಒಂದುದಿನ ಅಮಲೆಯು ಹಸನ್ಮುಖಿಯಾಗಿ ಹಿರಣ್ಮಯಿಯ
ಬಳಿ ಬಂದು ಮೃದುವಾದ ಭರ್ತ್ಸನೆಯಿಂದ " ಏನೆ, ಹುಡುಗಿ ! ಅಂಥಾ ಧರ್ಮ
ವುಳ್ಳವಳೆ, ನೀನು ? ಅಂಥಾ ಕೆಲಸವನ್ನು ಮಾಡುವುದುಂಟೇನೆ ? " ಎಂದಳು.
ಹಿರಣ್ಮಯಿ-ನಾನೇನನ್ನು ಮಾಡಿದೆನು ?
ಅಮಲೆ - ಇಷ್ಟು ದಿನವಾದರೂ ನನಗೆ ಹೇಳಬೇಡವೆ ?
ಹಿರಣ್ಮಯಿ - ನಾನಾವದನ್ನು ಹೇಳಲಿಲ್ಲ ?
ಅಮಲೆ - ಪುರಂದರಶೆಟ್ಟಿಗೂ ನಿನಗೂ ಅಷ್ಟೊಂದು ಸ್ನೇಹವೆ ?
ಹಿರಣ್ಮಯಿಯು ಸ್ವಲ್ಪ ಲಜ್ಜಿತೆಯಾಗಿ, " ನಾವಿಬ್ಬರೂ ಚಿಕ್ಕವರಾಗಿ
ದ್ದಾಗ ಅವನು ನಮ್ಮ ನೆರೆಯವನಾಗಿದ್ದನು ; ಅದನ್ನು ಕುರಿತು ಹೇಳಲೆ? "
ಎಂದಳು.
ಅಮಲೆ - ಬರಿ ನೆರೆಯವನಾಗಿದ್ದನೆ? ನೋಡು, ಏನನ್ನು ತಂದಿದ್ದೇನೆ?
ಹೀಗೆಂದು ಹೇಳಿ ಅಮಲೆಯು ಒಂದು ಭರಣಿಯನ್ನು ತೆಗೆದು ಬಹಳ
ಅಪೂರ್ವವಾದ ಮಹಾಪ್ರಕಾಶಗೊಂಡಿದ್ದು ಅತ್ಯಂತ ಬೆಲೆಯುಳ್ಳೊಂದು
ವಜ್ರದ ಹಾರವನ್ನು ಹಿರಣ್ಮಯಿಗೆ ತೋರಿದಳು. ಶೆಟ್ಟಿಯ ಮಗಳಿಗೆ ವಜ್ರದ
ಬೆಲೆಯು ಚೆನ್ನಾಗಿ ಗೊತ್ತು. ನೋಡಿ ವಿಸ್ಮಿತೆಯಾಗಿ, " ಇದು ಬಹಳ ಬೆಲೆ
ಯುಳ್ಳುದುದು : ಅದನ್ನೆಲ್ಲಿಂದ ತಂದೆ " ಎಂದಳು,
ಅಮಲೆ -- ಅದನ್ನು ಪುರಂದರನು ನಿನಗೆಂದು ಕಳುಹಿದ್ದಾನೆ. ನೀನೆನ್ನ
ಮನೆಯಲ್ಲಿರುವುದನ್ನು ಕೇಳಿ ನನ್ನನ್ನು ಕರೆಯಿಸಿ ನಿನಗದನ್ನು ಕೊಡೆಂದು
ಹೇಳಿ ಕೊಟ್ಟಿದ್ದಾನೆ.
ಹಿರಣ್ಮಯಿಯು ನೋಡಿ, ಅದನ್ನು ತೆಗೆದುಕೊಂಡರೆ ಯಾವಜ್ಜೀ
ನವೂ ತನ್ನ ದಾರಿದ್ರ್ಯವು ತೊಲಗುವುದೆಂದು ತಿಳಿವಳು. ಧನದಾಸನ ಆದ
ರದಿಂದ ಬೆಳದ ಮಗಳು ಅನ್ನವಸ್ತ್ರಕ್ಕೆ ಕಷ್ಟಪಡುತ್ತ, ಆ ಕಷ್ಟವು ಕೊನೆ
ಗಾಣುವುದಕ್ಕೆ ಅವಕಾಶವೊದಗಿದ್ದರೂ, ಕ್ಷಣೈಕ ವಿಮನೆಯಾಗಿದ್ದು ಕಡೆಗೆ
ನಿಟ್ಟೂರ್ಪನ್ನು ಬಿಟ್ಟು. " ಅಮಲೆ ! ಆ ವರ್ತಕರಿಗೆ ನಾನದನ್ನು ತೆಗೆದು
ಕೊಳ್ಳಲೊಪ್ಪಲಿಲ್ಲವೆಂದು ಹೇಳು " ಎಂದಳು.
ಅಮಲೆಯು ಆಶ್ಚರ್ಯಪಟ್ಟು, " ನಿನಗೇನು ಹುಚ್ಚೆ? ಇಲ್ಲವಾ
ದರೆ ನಾನು ಹೇಳುವ ಮಾತಿನಲ್ಲಿ ನಂಬುಗೆಯಿಲ್ಲವೊ ? " ಎಂದು ಕೇಳಿ
ದಳು.
ಹಿರಣ್ಮಯಿ - ನೀನು ಹೇಳುವುದನ್ನು ನಂಬುತ್ತೇನೆ. ನಾನು ಹುಚ್ಚಿ
ಯಲ್ಲ ; ನಾನದನ್ನು ತೆಗೆದುಕೊಳ್ಳುವುದಿಲ್ಲ,

೧೬

ಅಮಲೆಯು ಬಹಳ ಬೇಸರಗೊಂಡು ಹೇಳಿದಳು ; ಆದರೂ ಹಿರಣ್ಮ
ಯಿಯು ಅದನ್ನು ತೆಗೆದುಕೊಳ್ಳಲಿಲ್ಲ. ಬಳಿಕ ಅಮಲೆಯು ಹಾರವನ್ನು
ಕೊಂಡೊಯ್ಧು ರಾಜನಾದ ಮದನದೇವನ ಬಳಿ ಹೋಗಿ ಪ್ರಣಾಮವನ್ನು
ಮಾಡಿ ಅವನಿಗದನ್ನು ಉಪಹಾರವಾಗಿ ಒಪ್ಪಿಸಿ, " ತಾವು ಅದನ್ನು ದಯ
ವಿಟ್ಟು ಗ್ರಹಣಮಾಡಬೇಕು. ಅದು ತಮಗೆ ಯೋಗ್ಯವಾದುದು " ಎಂದು
ಬಿನ್ನೈಸಿದಳು. ರಾಜನು ಹಾರವನ್ನಂಗೀಕರಿಸಿ, ಅಮಲೆಗೆ ಯಥೇಷ್ಟ ದ್ರವ್ಯ
ವನ್ನು ಕೊಟ್ಟನು. ಹಿರಣ್ಮಯಿಗೆ ಅದಾವದೂ ಗೊತ್ತಿರಲಿಲ್ಲ.
ಇದಾದ ಕೆಲವು ದಿನಗಳಾದ ಬಳಿಕ ಪುರಂದರನ ಪರಿಚಾರಿಕೆಯ
ಲ್ಲೊಬ್ಬಳು ಹಿರಣ್ಮಯಿಯ ಬಳಿ ಬಂದು, " ನೀವು ಪರ್ಣಕುಟೀರದಲ್ಲಿರು
ವುದನ್ನು ಕೇಳಿ ನಮ್ಮ ಯಜಮಾನರಿಗೆ ಬಹಳ ಸಂಕಟವಾಯಿತು, ತಾವು
ಅವರ ಬಾಲ್ಯಸ್ನೇಹಿತರು. ಅವರ ಮನೆಯೇ ತಮ್ಮ ಮನೆಯಾಗಿದೆ, ಆದರೂ
ತಾವು ಅಲ್ಲಿ ಬಂದಿರಬೇಕೆಂದು ಕೇಳುವುದಿಲ್ಲ, ಅವರು ನಿಮ್ಮ ತಂದೆಗಳ
ಮನೆಯನ್ನು ಸಾಲಗಾರರಿಂದ ಬೆಲೆಗೆ ಪುನಃ ಪಡೆದುಕೊಂಡಿದ್ದಾರೆ, ಅದನ್ನು
ನಿಮಗೆ ದಾನವಾಗಿ ಕೊಟ್ಟಿದ್ದಾರೆ, ಆದುದರಿಂದ ನೀವು ಹೋಗಿ ಅಲ್ಲಿ ವಾಸ
ವಾಗಿರಲು ಪ್ರಾರ್ಥಿಸಿದೆನೆಂದು ತಮಗೆ ತಿಳಿಸುವಂತೆ ಹೇಳಿ ಕಳುಹಿಸಿದ್ದಾರೆ "
ಎಂದಳು,
ಹಿರಣ್ಮಯಿಗೆ ದಾರಿದ್ರ್ಯದ ದುಃಖಕ್ಕಿಂತ ತಂದೆಯ ಮನೆಯನ್ನು
ಬಿಟ್ಟು ಬಂದುದು ಹೆಚ್ಚು ದುಃಖಕರವಾಗಿದ್ದಿತು. ಬಾಲ್ಯದಲ್ಲೆಲ್ಲಿ ಆಡುತ್ತಿ
ದ್ದಳೋ, ತಾಯಿತಂದೆಗಳೊಂದಿಗೆಲ್ಲಿ ವಾಸವಾಗಿದ್ದಳೋ, ತನ್ನ ತಾಯಿತಂದೆ
ಗಳೆಲ್ಲಿ ಕಾಲವಾದರೋ, ಅಲ್ಲಿ ಪುನಃ ಅವಳಾಗಿನ ಸ್ಥಿತಿಯಲ್ಲಿ ಹೋಗಿ ವಾಸ
ಮಾಡುವುದು ಹೆಚ್ಚು ಕಷ್ಟವಾದುದಾಗಿ ಬೋಧೆಯಾಯಿತು. ಆ ಮನೆಯ
ಮಾತು ಹೇಳುತಲೇ ಅವಳ ಕಣ್ಣುಗಳಲ್ಲಿ ನೀರು ತುಂಬಿ ತಟತಟ ಸುರಿ
ಯಿತು. ಅವಳು ಪರಿಚಾರಿಕೆಗೆ ಆಶೀರ್ವಾದವಂ ಮಾಡಿ, " ನಾನಾ ದಾನ
ವನ್ನು ಗ್ರಹಣಮಾಡುವುದುಚಿತವಲ್ಲ ; ಆದರೆ ಆಕೆಯನ್ನಣಗಿಸಲಾರೆನು,
ನಿಮ್ಮ ಪ್ರಭುವಿಗೆ ಸರ್ವಪ್ರಕಾರವಾದ ಮಂಗಳತರಂಗಗಳುಂಟಾಗುವಂತೆ
ಹರಸಿದೆನೆಂದು ಹೇಳು " ಎಂದಳು.
ಪರಿಚಾರಿಕೆಯು ಪ್ರಣಾಮವನ್ನು ಮಾಡಿ ಬೀಳ್ಗೊಂಡು ಹೊರಟು
ಹೋದಳು, ಆಗಲ್ಲಿ ಅಮಲೆಯು ಕುಳಿತಿದ್ದಳು. ಹಿರಣ್ಮಯಿಯು ಅವಳನ್ನು

೧೭

ಕುರಿತು, " ಅಮಲೆ ! ನಾನೊಬ್ಬಳೇ ಹೋಗಿ ಆ ಮನೆಯಲ್ಲಿ ವಾಸಮಾಡ
ಲಾರೆನು, ನೀನೂ ಅಲ್ಲಿಗೆ ಬಂದಿರಬೇಕು " ಎಂದಳು.
ಅಮಲೆಯು ಒಪ್ಪಿಕೊಂಡಳು. ಇಬ್ಬರೂ ಹೋಗಿ ಧನದಾಸನ
ಮನೆಯಲ್ಲಿ ವಾಸಮಾಡಿಕೊಂಡಿದ್ದರು, ಆದರೂ ಆಗಾಗ್ಗೆ ಅಮಲೆಯು
ಪುರಂದರನ ಮನೆಗೆ ಹೋಗುತ್ತಿದ್ದುದನ್ನು ಹಿರಣ್ಮಯಿಯು ತಿಳಿದು, ಹಾಗೆ
ಹೋಗಕೂಡದೆಂದು ನಿಷೇಧಿಸಿದಳು. ಅಮಲೆಯು ಹೋಗುವುದನ್ನು
ಬಿಟ್ಟಳು.
ತಂದೆಯ ಮನೆಗೆ ಬಂದಾರಭ್ಯ ಅವಳಿಗೊಂದು ವಿಷಯವನ್ನು
ಕುರಿತು ಆಶ್ಚರ್ಯವುಂಟಾಯಿತು. ಒಂದುದಿನ ಅಮಲೆಯು, " ಹಿರಣ್ಮಯಿ !
ನೀನು ಸಂಸಾರನಿರ್ವಾಹಕ್ಕೋಸ್ಕರವಾಗಿ ಯೋಚಿಸಕೆಲಸವಿಲ್ಲ, ನೀನು
ಸ್ವಂತವಾಗಿ ಕಷ್ಟಪಡಬೇಕಾದ ಅವಶ್ಯಕವೂ ಇಲ್ಲ, ಅರಮನೆಯಲ್ಲೆನಗೆ
ಕೆಲಸವಾಗಿದೆ, ದುಡ್ಡು ಕಾಸಿಗೆ ಕಡಿಮೆಯಿಲ್ಲ, ನೀನು ಮನೆಯಲ್ಲಿ ಯಜ
ಮಾನಿಯಾಗಿದ್ದುಕೊಂಡಿರು " ಎಂದು ಹೇಳಿದಳು. ಅಮಲೆಯ ಕೈಯಲ್ಲಿ
ಹೆಚ್ಚು ಹಣಕಾಸು ಬಂದು ಹೋಗುತಿದ್ದುದನ್ನು ನೋಡಿ ಹಿರಣ್ಮಯಿಗೆ
ಆಶ್ಚರ್ಯವುಂಟಾಗಿ ಮನದಲ್ಲಿ ನಾನಾಪ್ರಕಾರವಾದ ಸಂಶಯವು ತಲೆದೋ
ರಿತು.

ಏಳನೆಯ ಪರಿಚ್ಛೇದ.

——————

ವಿವಾಹವಾದ ವರ್ಷದಿಂದ ಐದನೆಯ ಮಾಫುಶುದ್ಧ ಪಂಚಮಿಯು
ಪ್ರಾಪ್ತವಾಯಿತು. ಹಿರಣ್ಮಯಿಯು ಆ ದಿನವನ್ನು ಜ್ಞಾಪಕದಲ್ಲಿಟ್ಟುಕೊ೦
ಡಿದ್ದವಳು ಸಂಧ್ಯಾಕಾಲದಲ್ಲಿ, ವಿಮನೆಯಾಗಿ ಕುಳಿತಿದ್ದಳು. ಕುಳಿತಿದ್ದ
ಹಾಗೆ ಮನಸ್ಸಿನಲ್ಲಿ, " ಗುರುಗಳ ಅನುಜ್ಞೆಯಪ್ರಕಾರ ನಾಳಿನ ದಿನದಿಂದ
ನಾನು ಉಂಗುರವನ್ನು ಹಾಕಿಕೊಳ್ಳಬಹುದು. ಆದರೆ ಹಾಕಿಕೊಳ್ಳಲಾ
ಪೆನೆ ? ಹಾಕಿಕೊಂಡರೆ ನನಗೇನು ಲಾಭ ? ಬಹುಶಃ ಸ್ವಾಮಿಯನ್ನು ಕಂ

3
೧೮
ಡರೂ ಕಾಣಬಹುದು ; ಆದರೆ ಸ್ವಾಮಿಯನ್ನು ಸೇರುವುದೆನಗಿಷ್ಟವಿಲ್ಲ__
ಅಥವಾ ಚಿರಕಾಲವೂ ಅನ್ಯಪುರುಷನ ಮೂರ್ತಿಯನ್ನೇಕೆ ಮನಸ್ಸಿನಲ್ಲಿ
ಅಂಕಿತಮಾಡಿಟ್ಟುಕೊಂಡಿರಲಿ ? ದುರಂತವಾದೆನ್ನ ಮನವನ್ನು ಶಾಸನ
ಮಾಡುವುದು ಒಳ್ಳೆಯದು, ಹಾಗೆ ಶಾಸನಮಾಡದಿದ್ದರೆ ಧರ್ಮವನ್ನು ಬಿಟ್ಟು
ಪತಿತೆಯಾಗಿ ಹೋಗುವೆನು " ಎಂದು ಭಾವಿಸಿಕೊಂಡಳು.
ಆ ಸಮಯದಲ್ಲಿ ಅಮಲೆಯು ವಿಸ್ಮಯವಿಹ್ವಲೆಯಾಗಿ ಬಂದು
" ಏನೋ ಮಹದ್ವಿಪತ್ತು ಬಂದಹಾಗಿದೆ ! ಏನೂ ಗೊತ್ತಾಗುವುದಿಲ್ಲ !
ಏನಾದೀತೊ ! ಹೇಳುವುದಕ್ಕಾಗುವುದಿಲ್ಲ " ವೆಂದು ಭಯಗೊಂಡು ಹೇಳಿ
ದಳು.
ಹಿರಣ್ಮಯಿ - ಏನಾಯಿತು ?
ಅಮಲೆ - ರಾಜರ ಅರಮನೆಯಿಂದ ನಿನಗೆಸಲವಾಗಿ ಪಲ್ಲಕ್ಕಿ, ದಾಸ
ದಾಸಿಯರು ಬಂದಿದ್ದಾರೆ - ನಿನ್ನನ್ನು ಕರೆದುಕೊಂಡು ಹೋಗುವರಂತೆ.
ಹಿರಣ್ಮಯಿ - ನಿನಗೆ ಹುಚ್ಚು ಹಿಡಿಯಿತು. ನನ್ನನ್ನು ಅರಮನೆಗೇಕೆ
ಕರೆದುಕೊಂಡು ಹೋಗುವರು ?
ಹೀಗೆ ಮಾತಾಡುತಿರುವಾಗ, ರಾಜದೂತಿಯು ಬಂದು ಪ್ರಣಾಮ
ವನ್ನು ಮಾಡಿ, " ರಾಜಾಧಿರಾಜ ಪರಮ ಭಟ್ಟಾರಕ ಶ್ರೀ ಮದನದೇವನು
ಹಿರಣ್ಮಯಿಯನ್ನು ಈ ನಿಮಿಷದಲ್ಲಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅರಮನೆಗೆ
ಕರತರಬೇಕೆಂದು ಆಜ್ಞಾಪಿಸಿರುವನು " ಎಂದಳು.
ಹಿರಣ್ಮಯಿಯು ಆಶ್ಚರ್ಯಪಟ್ಟಳು ; ಆದರೆ ಬರುವುದಿಲ್ಲವೆಂದು ಹೇಳು
ವುದಕ್ಕೆ ಆಗದು ; ರಾಜಾಜ್ಞೆಯು ಅಲಂಘ್ಯವಾದುದು. ಅದಲ್ಲದೆ ರಾಜಾ
ಮದನ ದೇವನ ಅರಮನೆಗೆ ಹೋಗಲಾದ ಶಂಕೆಯೂ ಇಲ್ಲ ; ಆತನು
ಪರಮ ಧಾರ್ಮಿಕನೆಂತಲೂ ಜಿತೇಂದ್ರಿಯನೆಂತಲೂ ಖ್ಯಾತನಾಗಿದ್ದಾನೆ ;
ಅವನ ಪ್ರತಾಪದಿಂದಾವ ರಾಜಪುರುಷನಿಗಾಗಲಿ, ಹೆಂಗಸರಮೇಲೆ ಅತ್ಯಾ
ಚಾರವನ್ನು ನಡೆಯಿಸಲು ಧೈರ್ಯವಿರದು.
ಹಿರಣ್ಮಯಿಯು ಅಮಲೆಯನ್ನು ಕುರಿತು, " ಅಮಲೆ ! ನಾನು ರಾಜ
ಸಂದರ್ಶನಕ್ಕೆ ಹೋಗಲು ಸಿದ್ದವಾಗಿದ್ದೇನೆ, ನೀನೂ ಸಂಗಡ ಬಾ " ಎಂದಳು.
ಅಮಲೆಯು ಒಪ್ಪಿಕೊಂಡಳು.

೧೯

ಅಮಲೆಯನ್ನು ಸಂಗಡ ಕರೆದುಕೊಂಡು ಹಿರಣ್ಮಯಿಯು ಪಲ್ಲಕ್ಕಿ
ಯನ್ನು ಹತ್ತಿ ರಾಜಾವರೋಧವನ್ನು ಪ್ರವೇಶಿಸಿದಳು. ಶ್ರೇಷ್ಠಿಯ ಮಗಳು
ಬಂದಳೆಂದು ಪ್ರತಿಹಾರಿಗಳು ಹಿರಣ್ಮಯಿಯೊಬ್ಬಳನ್ನೇ ರಾಜನ ಸಮುಖಕ್ಕೆ
ಕರೆದುಕೊಂಡು ಹೋದರು. ಅಮಲೆಯು ಹೊರಗೆ ನಿಂತಳು.

ಎಂಟನೆಯ ಪರಿಚ್ಛೇದ.

——————

ಹಿರಣ್ಮಯಿಯು ರಾಜನನ್ನು ನೋಡಿ ವಿಸ್ಮಿತೆಯಾದಳು. ರಾಜನು
ದೀರ್ಘಾಕೃತಿ ಪುರುಷನಾಗಿಯೂ, ಕವಾಟವಕ್ಷನಾಗಿಯೂ, ದೀರ್ಘಹಸ್ತ
ನಾಗಿಯೂ, ಸುಘಟಿತ ಆಕೃತಿಯುಳ್ಳವನಾಗಿಯೂ, ಪ್ರಶಸ್ತ ಲಲಾಟನಾ
ಗಿಯೂ, ವಿಸ್ಫಾರಿತ ಆಯತ ಚಕ್ಷುಗಳುಳ್ಳವನಾಗಿಯೂ, ಶಾಂತಮೂರ್ತಿ
ಯಾಗಿಯೂ ಇದ್ದನು. ಅಂತಹ ಸುಂದರಪುರುಷನು ಹೆಂಗಸರ ದೃಷ್ಟಿಗೆ
ಬೀಳುವುದು ಅಪೂರ್ವ. ರಾಜನು ಶ್ರೇಷ್ಠಿಯ ಕನ್ಯೆಯನ್ನು ನೋಡಿ ಅಂತಹ
ಸುಂದರಿಯು ತನ್ನ ಅಂತಃಪುರದಲ್ಲಿಯೂ ಇರುವುದು ದುರ್ಲಭವೆಂದು
ತಿಳಿದನು.
ರಾಜ - ಹಿರಣ್ಮಯಿಯೆಂಬಾಕೆ ನೀನೇವೆ ?
ಹಿರಣ್ಮಯಿ - ನಾನು ತಮ್ಮ ದಾಸಿ.
ರಾಜ - ನಿನ್ನನ್ನೇಕೆ ಕರೆಯಿಸಿದನೋ ಅದನ್ನು ಕೇಳು. ನಿನ್ನ ವಿವಾ
ಹವಾದ ಸಂಗತಿಯು ನಿನಗೆ ಜ್ಞಾಪಕವುಂಟೆ ?
ಹಿರಣ್ಮಯಿ - ಜ್ಞಾಪಕವುಂಟು.
ರಾಜ - ಅಂದು ರಾತ್ರಿ ಆನಂದಸ್ವಾಮಿಯು ನಿನಗೆ ಕೊಟ್ಟುಂಗುರವು
ನಿನ್ನಲ್ಲಿದೆಯೆ ?
ಹಿರಣ್ಮಯಿ - ಮಹಾರಾಜನೆ ! ಆ ಉಂಗುರವಿದೆ, ಅವೆಲ್ಲಾ ಬಹಳ
ಗುಟ್ಟಾದ ಮಾತು, ತಮಗದಾವ ಪ್ರಕಾರವಾಗಿ ತಿಳಿಯಬಂತು ?
ರಾಜನದಕ್ಕೆ ಉತ್ತರವನ್ನು ಕೊಡದೆ, " ಆ ಉಂಗುರವೆಲ್ಲಿದೆ ?
ನನಗೆ ತೋರು " ಎಂದನು.


೨೦

ಹಿರಣ್ಮಯಿ - ಅದನ್ನು ಮನೆಯಲ್ಲಿಟ್ಟು ಬಂದಿದ್ದೇನೆ ; ಐದು ವರು
ಷವು ಮುಗಿಯುವುದಕ್ಕೆ ಕೆಲವು ಫುಳಿಗೆಗಳು ಉಳಿದವೆ ; ಆದುದರಿಂದ
ಅದನ್ನು ಧಾರಣೆ ಮಾಡಲು ಆನಂದಸ್ವಾಮಿಯು ಹೇಳಿರುವ ನಿಷೇಧವು
ನಿವಾರಣೆಯಾಗಿಲ್ಲ.
ರಾಜ - ಒಳ್ಳೆಯದು, ಆ ಉಂಗುರಕ್ಕೆ ಅನುರೂಪವಾದ ಮತ್ತೊಂದು
ಉಂಗುರವನ್ನು ನಿನ್ನ ಸ್ವಾಮಿಗೆ ಆನಂದಸ್ವಾಮಿಯು ಕೊಟ್ಟುದುದನ್ನು
ನೋಡಿದರೆ ಗುರ್ತಿಸಬಲ್ಲೆಯಾ ?
ಹಿರಣ್ಮಯಿ - ಎರಡುಂಗುರಗಳೂ ಸಮಾನವಾದಕಾರಣ ಗುರ್ತಿಸ
ಬಲ್ಲೆನು.
ಆಗ ಪ್ರತಿಹಾರಿಯು ರಾಜಾಜ್ಞಾನುಸಾರವಾಗಿ ಒಂದು ಸುವರ್ಣದ
ಭರಣಿಯನ್ನು ತಂದನು. ರಾಜನು ಭರಣಿಯನ್ನು ತೆಗೆದು ಅದರಲ್ಲಿದ್ದ
ಒಂದುಂಗುರವನ್ನು ತೆಗೆದು ಹಿರಣ್ಮಯಿಯ ಕೈಯಲ್ಲಿ ಕೊಟ್ಟು, ಆ ಉಂಗು
ರವು ಆರದು? ನೋಡು " ಎಂದು ಹೇಳಿದನು.
ಹಿರಣ್ಮಯಿಯು ಉಂಗುರವನ್ನು ತೆಗೆದುಕೊಂಡು ದೀಪದ ಬೆಳಕಿ
ನಲ್ಲಿ ನೋಡಿ, " ದೇವ! ಈ ಉಂಗುರವು ನನ್ನ ಸ್ವಾಮಿಯದೇ ಅಹುದು,
ಆದರೆ ತಮಗದೆಲ್ಲಿ ಬಂತು ? " ಎಂದು ಕೇಳಿ, ಸ್ವಲ್ಪ ಯೋಚಿಸಿ, ಪುನಃ,
" ದೇವ ! ಇದರಿಂದ ನಾನು ಪತಿಹೀನೆಯಾಗಿದ್ದೇನೆಂದು ತಿಳಿಯುತ್ತೇನೆ,
ಸ್ವಜನ ಹೀನರಾಗಿ ಮೃತರಾದವರ ಧನವು ತಮ್ಮ ಸರಕಾರಕ್ಕೆ ಬರುತ್ತದೆ.
ಹಾಗಿಲ್ಲದೆ ಅವನು ಜೀವಿತನಾಗಿದ್ದರೆ ಅದನ್ನವನು ತ್ಯಾಗಮಾಡುವುದು
ಅಸಂಭವ " ವೆಂದಳು. ರಾಜನು ನಕ್ಕು, " ನನ್ನ ಮಾತನ್ನು ನಂಬು, ನೀನು
ಪತಿಹೀನೆಯಲ್ಲ - ಸುಮಂಗಲಿ " ಎಂದನು.
ಹಿರಣ್ಮಯಿ - ಹಾಗಾದರೆ ನನ್ನ ಸ್ವಾಮಿಯು ನನಗಿಂತ ಹೆಚ್ಚು ದರಿ
ದ್ರನಾಗಿರಬೇಕು : ಧನಲೋಭದಿಂದ ಅದನ್ನು ವಿಕ್ರಯಿಸಿದ್ದಾನೆ.
ರಾಜ - ನಿನ್ನ ಸ್ವಾಮಿಯು ಐಶ್ವರ್ಯವಂತನು.
ಹಿರಣ್ಮಯಿ - ಹಾಗಾದರೆ, ತಾವು ಅವನನ್ನು ಮೋಸಗೊಳಿಸಿ ಅದನ್ನು
ಅವನಿಂದ ಅಪಹರಿಸಿರಬೇಕು.

೨೧

ರಾಜನು ಅಂತಹ ದುಸ್ಸಾಹಸಿಕವಾದ ಮಾತನ್ನು ಕೇಳಿ ವಿಸ್ಮಿತನಾಗಿ,
" ನೀನು ಬಹಳ ಸಾಹಸವುಳ್ಳವಳು ! ರಾಜಾ ಮದನದೇವನು ಕಳ್ಳನೆಂದು
ಮತ್ತಾರೂ ಹೇಳಿಲ್ಲ " ವೆಂದನು.
ಹಿರಣ್ಮಯಿ - ಹಾಗಿಲ್ಲದಿದ್ದರೆ, ತಮಗಾ ಉಂಗುರವೆಲ್ಲಿ ಸಿಕ್ಕಿತು ?
ರಾಜ - ನಿನಗೆ ವಿವಾಹವಾದ ರಾತ್ರಿ ಅನಂದಸ್ವಾಮಿಯು ಅದನ್ನು
ತಂದು ನನ್ನ ಬೆರಳಿಗೆ ಹಾಕಿದನು.
ಆಗ ಹಿರಣ್ಮಯಿಯು ಲಜ್ಜೆಯಿಂದ ಅಧೋಮಖಿಯಾಗಿ, " ಅರ್ಯ
ಪುತ್ರ ! ನನ್ನಪರಾಧವನ್ನು ಕ್ಷಮಿಸಬೇಕು : ನಾನು ಚಪಲೆ ; ತಿಳಿಯದೆ
ಕಟೂಕ್ತಿಗಳನ್ನು ಹೇಳಿದೆನು " ಎಂದಳು.

ಒಂಭತ್ತನೆಯ ಪರಿಚ್ಛೇದ.

——————

ಹಿರಣ್ಮಯಿಯು ರಾಜಮಹಿಷಿ ! ಅದನ್ನು ಕೇಳಿ ಹಿರಣ್ಮಯಿಯು ವಿಸ್ಮಿ
ತೆಯಾದಳು. ಆದರೆ ಸ್ವಲ್ಪವಾದರೂ ಆಹ್ಲಾದಿತೆಯಾಗಲಿಲ್ಲ ; ವಿಶೇಷ
ವಾಗಿ, ವಿಷಣ್ಣೆಯಾಗಿ, " ನಾನಿದುವರೆಗೆ ಪುರಂದರನನ್ನು ಪಡೆಯಲಿಲ್ಲವಾದರೂ
ಪರಪತ್ನೀತ್ವದ ಸಂಕಟವನ್ನು ಅನುಭವಿಸಲಿಲ್ಲ. ಇಂದುಮೊದಲು, ನನ
ಗಾ ವ್ಯಸನವು ಪ್ರಾರಂಭವಾಯಿತಲ್ಲದೆ, ನಾನು ಮನಸಾ ಪುರಂದರನ ಪತ್ನಿ
ಯಾಗಿ, ಅನನ್ಯಾನುರಾಗಿಣಿಯಾಗಿ ಈ ಮಹತ್ಮನಾದ ರಾಜನ ಗೃಹವನ್ನು
ಕಳಂಕಿತವಾಗಿ ಮಾಡುವುದು ಹೇಗೆ ? " ಎಂದು ಯೋಚಿಸಿಕೊಂಡಿದ್ದ
ಸಮಯದಲ್ಲಿ, ರಾಜನು, " ಹಿರಣ್ಮಯಿ : ನೀನೇನೋ ನನ್ನ ಮಹಿಷಿಯಾದೆ,
ಆದರೆ ನಿನ್ನನ್ನು ಪರಿಗ್ರಹಿಸುವುದಕ್ಕೆ ಮುಂಚಿತವಾಗಿ ನಿನ್ನಿಂದ ಕೆಲವು ಅಂ
ಶಗಳನ್ನು ತಿಳಿಯಬೇಕಾಗಿದೆ, ನೀನು ಬೆಲೆಯನ್ನು ಕೊಡದೆ ಪುರಂದರನ
ಮನೆಯಲ್ಲಿ ವಾಸ ಮಾಡುವುದು ಹೇಗೆ ? " ಎಂದು ಪ್ರಶ್ನೆಯನ್ನು
ಮಾಡಿದನು.

೨೨

ಹಿರಣ್ಮಯಿಯು ಅಧೋವದನೆಯಾದಳು. ರಾಜನು ಪುನಃ, " ನಿನ್ನ
ದಾಸಿಯಾದ ಅಮಲೆಯು ಪದೇಪದೇ ಪುರಂದರನ ಮನೆಗೆ ಹೋಗಿ ಬರು
ವುದೇಕೆ ? " ಎಂದು ಪ್ರಶ್ನೆಮಾಡಿದನು
ಹಿರಣ್ಮಯಿಯು ಮತ್ತೂ ಹೆಚ್ಚು ಲಜ್ಜಾವನತಮುಖಿಯಾಗಿ, " ರಾಜಾ
ಮದನದೇವನು ಎಂತಹ ಸರ್ವಜ್ಞನು ! " ಎಂದು ಭಾವಿಸಿದಳು.
ರಾಜನು, " ಮತ್ತೊಂದು ಹೆಚ್ಚಿನ ಮಾತು ಉಂಟು ; ನೀನು ಸರನಾ
ರಿಯಾಗಿದ್ದುಕೊಂಡು, ಪುರಂದರನು ಕೊಟ್ಟ ವಜ್ರದ ಹಾರವನ್ನು ತೆಗೆದು
ಕೊಂಡುದು ಹೇಗೆ ? ' ಎಂದು ಪುನಃ ಪ್ರಶ್ನೆಯನ್ನು ಮಾಡಿದನು.
ಹಿರಣ್ಮಯಿಯು ಆಗ ಮಾತಾಡಿದಳು. ಅವಳು, " ಆರ್ಯಪುತ್ರ !
ನೀನು ಸರ್ವಜ್ಞನಲ್ಲವೆಂಬುದು ನನಗೀಗ ಗೊತ್ತಾಯಿತು. ವಜ್ರದ ಹಾರ
ವನ್ನು ನಾನು ಹಿಂದಿರುಗಿ ಕೊಟ್ಟುಬಿಟ್ಟೆನು " ಎಂದಳು.
ರಾಜ_ನೀನಾ ವಜ್ರದ ಹಾರವನ್ನೆನಗೆ ವಿಕ್ರಯಿಸಿದೆ ; ಆ ಹಾರ
ವನ್ನು ನೋಡು.
ಹೀಗೆಂದು ಹೇಳಿ ರಾಜನು ಭರಣಿಯಿಂದ ಹಾರವನ್ನು ತೆಗೆದು ತೋರಿ
ದನು. ಹಿರಣ್ಮಯಿಯು ವಜ್ರದ ಹಾರವನ್ನು ಗುರ್ತಿಸಿ ವಿಸ್ಮಿತೆಯಾಗಿ,
" ಆರ್ಯಪುತ್ರ ! ನಾನೇ ಸ್ವಂತವಾಗಿ ನಿನ್ನಬಳಿ ಬಂದು ಆ ಹಾರವನ್ನು
ಮಾರಿದೆನೆ ? " ಎಂದು ಕೇಳಿದಳು.
ರಾಜ - ಇಲ್ಲ. ನಿನ್ನ ದಾಸಿ, ಅಥವಾ ದೂತಿಯು ತಂದು ವಿಕ್ರಯಿಸಿ
ದಳು. ಅವಳನ್ನು ಕರೆಯಿಸಲೆ ?
ಹಿರಣ್ಮಯಿಯು, ಕೋಪಗೊಂಡಿದ್ದವಳ ವದನಮಂಡಲವು ನಗುಮು
ಖವಾಗಿ, " ಆರ್ಯಪುತ್ರ ! ಅಪರಾಧವನ್ನು ಮನ್ನಿಸು, ಅಮಲೆಯನ್ನು
ಕರೆಯಿಸಬೇಕಾದುದಿಲ್ಲ: ವಿಕ್ರಯಮಾಡಿದುದನ್ನು ನಾನೊಪ್ಪುವೆನು "
ಎಂದಳು.
ಕೇಳಿ ರಾಜನಿಗೆ ಆಶ್ಚರ್ಯವುಂಟಾಗಿ, " ಹೆಂಗಸರ ಚರಿತ್ರೆಯು ಅಭಾ
ವನೀಯವಾದುದು ; ನೀನು ಅನ್ಯನ ಪತ್ನಿಯಾಗಿ ಪುರಂದರನಿಂದ ಹಾರ
ವನ್ನು ತೆಗೆದುಕೊಂಡೇಕೆ ? " ಎಂದನು
ಹಿರಣ್ಮಯಿ ಪ್ರಣಯದ ಉಪಹಾರವೆಂದು ಗ್ರಹಣಮಾಡಿದೆನು.

೨೩

ರಾಜನು ಮತ್ತಷ್ಟು ಅಚ್ಚರಿಗೊಂಡು, " ಅದು ಹೇಗೆ ? ಆದಾವ
ವಿಧವಾದ ಪ್ರಣಯೋಪಹಾರ ? " ವೆಂದು ಕೇಳಿದನು.
ಹಿರಣ್ಮಯಿ_ನಾನು, ಆಸತಿ - ಮಹಾರಾಜನೆ ! ನಾನು ತಮ್ಮ ಗ್ರಹ
ಣಕ್ಕೆ ಯೋಗ್ಯೆಯಲ್ಲ ; ನಾನು ಪ್ರಮಾಣವನ್ನು ಮಾಡುತ್ತೇನೆ, ನನಗೆ
ಅಪ್ಪಣೆಯನ್ನು ಕೊಡಬೇಕು, ತಾವು ನನ್ನನ್ನು ವಿವಾಹ ಮಾಡಿಕೊಂಡು
ದುದನ್ನು ಮರೆತುಬಿಡಿ.
ಹಿರಣ್ಮಯಿಯು ರಾಜನಿಗೆ ಪ್ರಣಾಮವನ್ನು ಮಾಡಿ ಗಮನೋದ್ಯು
ತೆಯಾದಾಗ, ರಾಜನ ವಿಸ್ಮಯವಿಕಾಶಕ ಮುಖಕಾಂತಿಯು ಒಮ್ಮಿಂದೊಮ್ಮೆ
ಪ್ರಫುಲ್ಲವಾಯಿತು. ಅವನು ಘಟ್ಟಿಯಾಗಿ ನಕ್ಕನು. ಹಿರಣ್ಮಯಿಯು
ಹಿಂದಿರುಗಿದಳು.
ರಾಜ ಹಿರಣ್ಮಯಿ ! ನೀನೇ ಜಯಿಸಿದೆ, ನಾನು ಸೋತೆನು, ನೀನು
ಅಸತಿಯಲ್ಲ ; ನಾನು ನಿನ್ನ ಸ್ವಾಮಿಯೂ ಅಲ್ಲ ; ಹೋಗಬೇಡ.
ಹಿರಣ್ಮಯಿ - ಮಹಾರಾಜನೆ ! ಹಾಗಾದರೆ, ಇದೇನು ಅವಾಂತರ !
ನನಗೆ ತಿಳಿಯಹೇಳಬೇಕು. ನಾನು ಅತಿ ಸಾಮಾನ್ಯೆಯಾದ ಹೆಂಗಸು,
ನನ್ನ ಸಂಗಡ ತಮ್ಮಂತಹ ಗಂಭೀರಪ್ರಕೃತಿಯುಳ್ಳ ರಾಜಾಧಿರಾಜರ ರಹ
ಸ್ಯವು ಅಸಂಭವ. ರಾಜನಿಗೆ ನಗುವು ನಿಲ್ಲದೆ " ನಮ್ಮಂತಹ ರಾಜರಲ್ಲಿಯೇ
ಇಂತಹ ರಹಸ್ಯವು ಸಂಭವವು. ಈಗ್ಗೆ ಆರುವರ್ಷಕ್ಕೆ ಮುಂಚೆ ನಿನ್ನ
ಆಭರಣದ ಭರಣಿಯಲ್ಲೊಂದು ಕಾಗದದ ಚೂರು ನಿನಗೆ ಸಿಕ್ಕಿತಲ್ಲವೆ ?
ಅದೆಲ್ಲಿದೆ? " ಎಂದನು.
ಹಿರಣ್ಮಯಿ_ಮಹಾರಾಜನೆ ! ತಾವು ಸರ್ವಜ್ಞರೇ ಅಹುದು ; ಪತ್ರಾ
ರ್ಧವನ್ನು ಮನೆಯಲ್ಲಿಟ್ಟಿದ್ದೇನೆ.
ರಾಜ - ನೀನು ಪಲ್ಲಕ್ಕಿಯಲ್ಲಿ ಪುನಃ ಮನೆಗೆ ಹೋಗಿ ಆ ಪತ್ರಾರ್ಧ
ವನ್ನು ತೆಗೆದುಕೊಂಡು ಬಾ. ನೀನು ಬಂದರೆ ವಿಚಾರವನ್ನೆಲ್ಲಾ
ಹೇಳುವೆನು.

೨೪

ಹತ್ತನೆಯ ಪರಿಚ್ಛೇದ.

——————

ಹಿರಣ್ಮಯಿಯು ರಾಜನ ಆಜ್ಞೆಯನ್ನು ಪಡೆದು ತನ್ನ ಮನೆಗೆ ಬಂದು
ಮೊದಲು ಹೇಳಿದ್ದ ಪತ್ರಾರ್ಧವನ್ನು ತೆಗೆದುಕೊಂಡು ಪುನಶ್ಚ ರಾಜಸನ್ನಿಧಾ
ನಕ್ಕೆ ಬಂದಳು. ರಾಜನು ಆ ಪತ್ರಾರ್ಧವನ್ನು ನೋಡಿ ಭರಣಿಯಿಂದದರ
ಮತ್ತೊಂದು ಅರ್ಧವನ್ನು ತೆಗೆದು ಹಿರಣ್ಮಯಿಯಕೈಯಲ್ಲಿ ಕೊಟ್ಟು, " ಎರ
ಡನ್ನೂ ಸೇರಿಸು " ಎಂದನು. ಹಿರಣ್ಮಯಿಯು ಸೇರಿಸಿದಳು ; ಎರಡು ತುಂ
ಡುಗಳೂ ಕೂಡಿದುವು. ಎರಡು ತುಂಡನ್ನು ಸೇರಿಸಿ ಓದೆಂದು ರಾಜನು ಹೇ
ಳಿದ ಪ್ರಕಾರ ಹಿರಣ್ಮಯಿಯು ಓದಿದಳು, ಏನೆಂದರೆ__
" (ಜಾತಕವನ್ನು ಗುಣಿಸಿ ನೋಡಲಾಗಿ) ನಿವು ಯೋಚಿಸಿರುವಂತೆ
ನಡೆಯಿಸತಕ್ಕುದಲ್ಲ. (ಹಿರಣ್ಮಯಿಯಂತಿರುವ ಸುವರ್ಣಪುತ್ತಳಿ) ಕೆಯ
ನ್ನು ಚಿರಕಾಲ ಕಷ್ಟದಲ್ಲಿ ಹಾಕುವುದು ಸರಿಯಲ್ಲ. ಅವಳಿಗೆ (ವಿವಾಹ
ವಾದರೆ ಭಯಂಕರವಾದ ವಿಪತ್ತು) ಉಂಟಾಗಿ, ಯಾವಜ್ಜೀವವೂ ಕಷ್ಟ
ವುಂಟಾಗುವುದೆಂದು ಗುಣಿಸುವುದರಲ್ಲಿ ಗೊತ್ತಾಯಿತು. ಐದುವರ್ಷಗಳ
ಪರ್ಯಂತ ದಂಪತಿಗಳು ( ಮುಖವನ್ನು ಪರಸ್ಪರ ) ದರ್ಶನ ಮಾಡದಿದ್ದರೆ
ಈ ಗ್ರಹದಿಂದ ನಿಷ್ಕೃತಿಯುಂಟಾ (ಗಬಹುದು.) ಅದರ ವಿಧಾನವನ್ನು ನಾನು
ಮಾಡುತ್ತೇನೆ " -
ಓದಿ ಪೂರೈಸಿದ ಬಳಿಕ ರಾಜನು, " ಆ ಕಾಗದವನ್ನು ಆನಂದಸ್ವಾ
ಮಿಯು ನಿಮ್ಮ ತಂದೆಗೆ ಬರೆದುದು " ಎಂದು ಹೇಳಿದನು.
ಹಿರಣ್ಮಯಿ - ಅದೀಗ ಗೊತ್ತಾಯಿತು. ನನಗೆ ವಿವಾಹಕಾಲದಲ್ಲಿ
ಕಣ್ಣುಗಳನ್ನು ಕಟ್ಟಿದ್ದರೇಕೆಂಬುದೂ ಗೋಪನವಾಗಿ ಅದ್ಭುತವಾದಾ
ವಿವಾಹವು ಹಾಗೇಕೆ ಆಯಿತು, ಐದುವರ್ಷಗಳಾಗುವತನಕ ಉಂಗುರ
ವನ್ನೇಕೆ ಹಾಕಿಕೊಳ್ಳಕೂಡದೆಂದು ನಿಷಿದ್ಧವಾಗಿತ್ತೆಂಬುದೂ ನನಗೀಗ
ಗೊತ್ತಾಯಿತು. ಮತ್ತೇನನ್ನೂ ಅರಿಯೆನು.
ರಾಜ - ಕಾಗದವು ಬಂದಕೂಡಲೆ ನಿಮ್ಮ ತಂದೆಯು ನಿನ್ನನ್ನು ಪುರಂ
ದರನಿಗೆ ಕೊಟ್ಟು ಮಾಡಬೇಕೆಂದು ನಿಷ್ಕರ್ಷೆಯಾಗಿದ್ದ ಮದುವೆಯನ್ನು

೨೫

ನಿಲ್ಲಿಸಿಬಿಟ್ಟುದುದು ನಿನಗೆ ತಿಳಿದಿದೆ. ಪುರಂದರನಾ ದುಃಖದಿಂದ ಸಿಂಹಳ
ದ್ವೀಪಕ್ಕೆ ಹೊರಟು ಹೋದನು. ಅದನ್ನು ನೀನು ತಿಳಿದಿರಬೇಕು.
ಇತ್ತಲಾಗಿ ಆನಂದಸ್ವಾಮಿಯು ವರಾನ್ವೇಷಣವನ್ನು ಮಾಡಿ ವರನ
ಜಾತಕವನ್ನು ಶೋಧಿಸಿ ನೋಡಿದನು ; ವರನಿಗೆ ಎಂಭತ್ತೈದು ವರ್ಷದ
ಮೇಲೆ ಆಯುಸ್ಸೆಂದು ಗೊತ್ತಾಯಿತು. ಆದರೆ ಅವನಿಗೆ ಇಪ್ಪತ್ತೆಂಟು ವರ್ಷ
ಗಳಿಗೆ ಮುಂಚೆ ಒಂದು ದೊಡ್ಡ ಗಂಡವಿದ್ದಿತು. ಅದಲ್ಲದೆ, ಇಪ್ಪತ್ತೆಂಟು
ವರ್ಷಕ್ಕೆ ಮುಂಚೆ, ಮತ್ತು ವಿವಾಹವಾದ ಐದುವರ್ಷಗಳೊಳಗೆ ಪತ್ನಿಯ
ಶಯ್ಯೆಯಲ್ಲಿ ಮಲಗಿದರೆ ಅವನಿಗೆ ಮರಣವುಂಟೆಂತಲೂ ಅದು ಕಳೆದರೆ
ದೀರ್ಘಜೀವಿಯೆಂತಲೂ ಗೊತ್ತಾಗಿದ್ದಿತು.
ಆದುದರಿಂದ ವರನಿಗೆ ಇಪ್ಪತ್ತು ಮೂರು ವರ್ಷವಾದ ಬಳಿಕ ವಿವಾ
ಹವು ಗೊತ್ತುಮಾಡಲ್ಪಟ್ಟಿದ್ದಿತು. ಆದರೆ ಅದುವರೆಗೆ ನೀನು ವಿವಾಹಿತೆಯಾ
ಗದಿದ್ದರೆ, ಚಂಚಲೆಯಾಗುವೆ ಎಂತಲೂ ಅಥವಾ ಗೋಪ್ಯವಾಗಿ ಬೇರೆ ವಿವಾ
ಹವನ್ನು ಮಾಡಿಕೊಳ್ಳದಿರಬೇಕೆಂತಲೂ ನಿನಗೆ ಭಯವಿರಲೆಂದು ಆ ಪತ್ರಾ
ರ್ಧವು ನಿನ್ನ ಆಭರಣಗಳಲ್ಲಿ ಇಡಲ್ಪಟ್ಟಿತು.
ಅಲ್ಲದೆ ವಿವಾಹವಾದ ಐದು ವರ್ಷಗಳು ಪರಸ್ಪರ ನೋಡದಿರುವು
ದಕ್ಕೆ ಬೇಕಾದ ಉಪಾಯಗಳನ್ನು ಕಲ್ಪಿಸಿದುದು ನಿನಗೆ ಗೊತ್ತಿದೆ. ಅದು
ಕಾರಣ ಗಂಡಹೆಂಡಂದಿರಿಗೆ ಪರಸ್ಪರ ಪರಿಚಯವಾಗಲಿಲ್ಲ.
ಆದರೆ ಈಗ ಐದಾರು ತಿಂಗಳಿಂದ ಸ್ವಲ್ಪ ರಗಳೆಗಿಟ್ಟಿತು. ಆನಂದ
ಸ್ವಾಮಿಯು ಇಲ್ಲಿಗೆ ಬಂದವನು ನೀನು ದಾರಿದ್ರ್ಯಾವಸ್ಥೆಯಲ್ಲಿರುವುದನ್ನು
ಕೇಳಿ ದುಃಖಿತನಾದನು ; ಅವನು ನಿನ್ನನ್ನು ನೋಡುವುದಕ್ಕೆ ಬಂದನು ;
ಆದರೆ ನೋಡಲಿಲ್ಲ ; ಅವನು ಬಂದು ನನ್ನನ್ನು ನೋಡಿ ನಿನ್ನ ವಿವಾಹದ
ವೃತ್ತಾಂತವನ್ನು ಅನುಪೂರ್ವಕವಾಗಿ ಹೇಳಿ, " ಹಿರಣ್ಮಯಿಯು ದಾರಿದ್ರ್ಯಾ
ವಸ್ಥೆಯಲ್ಲಿದ್ದುದು ನನಗೆ ತಿಳಿದಿದ್ದರೆ ಅದಕ್ಕೇನಾದರೂ ಮಾಡುತಿದ್ದೆನು ;
ತಾವೇನಾದರೂ ಅದಕ್ಕೆ ಪ್ರತೀಕಾರವನ್ನು ಮಾಡಿದರೆ ಬಹಳ ಬಾಧ್ಯಪಡು
ತ್ತೇನೆ. ಹಿರಣ್ಮಯಿಯು ಮತ್ತು ಅವಳ ಗಂಡನು ಪರಸ್ಪರ ನೋಡದಿರುವ
ರೀತಿ ಮಾಡಬೇಕು " ಎಂದು ಹೇಳಿದನು. ನಿನ್ನ ಸ್ವಾಮಿಯ ಪರಿಚಯ
ವನ್ನೂ ಹೇಳಿದನು. ತದಾರಭ್ಯ, ಅಮಲೆಯು ನಿನ್ನ ಮನೆಯ ವೆಚ್ಛವನ್ನು
ನಡೆಯಿಸುವಂತೆ ನಾನೇ ಏರ್ಪಾಡನ್ನು ಮಾಡಿದೆನು ; ನಿಮ್ಮ ತಂದೆಯ ಮನೆ
ಯನ್ನು ನಾನೇ ಬೆಲೆಗೆ ತೆಗೆದು ನಿನಗೆ ವಾಸಕ್ಕೆ ಕೊಟ್ಟೆನು. ವಜ್ರದ ಹಾರ
ವನ್ನು ನಾನೇ ನಿನ್ನಲ್ಲಿಗೆ ಕಳುಹಿಸಿದೆನು, ಅದು ನಿನ್ನ ಪರೀಕ್ಷಾರ್ಥವಾಗಿ.
ಹಿರಣ್ಮಯಿ - ಹಾಗಾದರೆ ತಮಗೆ ಆ ಉಂಗುರವೆಲ್ಲಿದ್ದಿತು? ತಾವೇ
ನನ್ನ ಸ್ವಾಮಿಯೆಂದು ಪರಿಚಯವಂ ಕೊಟ್ಟು ನನಗೆ ಮೋಸಗೊಳಿಸಿದಿ
ರೇಕೆ ? ಪುರಂದರನ ಮನೆಯಲ್ಲಿ ಕ್ರಯದ ಹಣವನ್ನು ಕೊಡದೆ ವಾಸಮಾ
ಡುವುದು ಸರಿಯಲ್ಲವೆಂದು ಆಕ್ಷೇಪಿಸೋಣವಾಯಿತೇಕೆ ?
ರಾಜ - ಆನಂದಸ್ವಾಮಿಯು ಬಂದು ನನಗೆ ಆ ವೃತ್ತಾಂತವನ್ನೆಲ್ಲ
ಹೇಳಿದ ಬಳಿಕ ನಿನ್ನಮೇಲೆ ಕಾವಲಿರುವುದಕ್ಕೆ ಜನರನ್ನು ನೇಮಕಮಾಡಿ
ದೆನು. ಅಂದು ಅಮಲೆಯ ಮುಖಾಂತರವಾಗಿ ಹಾರವನ್ನು ನಿನ್ನ ಬಳಿಗೆ
ಕಳುಹಿದೆನು ; ಇಂದಿಗೆ ಐದು ವರ್ಷವು ಪೂರೈಸುವುದರಿಂದ ನಿನ್ನ ಸ್ವಾಮಿ
ಯನ್ನು ಕರೆಯಿಸಿ ಅವನ ಮದುವೆಯ ವೃತ್ತಾಂತವನ್ನೆಲ್ಲಾ ಅವನಿಗೆ ಹೇಳಿ,
ರಾತ್ರಿ ಹನ್ನೊಂದು ಘುಳಿಗೆಗೆ ಸರಿಯಾಗಿ ಉಂಗುರವನ್ನು ತಂದಿಟ್ಟುಕೊಂಡಿ
ದ್ದರೆ ಹೆಂಡತಿಯೊಡನೆ ಸೇರಬಹುದೆಂದು ಹೇಳಿದುದಕ್ಕೆ, ಅವನು, ಮಹಾರಾ
ಜರ ಅಪ್ಪಣೆಯು ಶಿರೋಧಾರ್ಯವಾದುದಾದರೂ ಸಂಸಾರದಿಂದ ಸೇರಿರಲು
ತನಗಿಷ್ಟವಿಲ್ಲವೆಂತಲೂ, ಏಕಾಂಗಿಯಾಗಿರುವೆನೆಂತಲೂ ಹೇಳಿದನು. ಅದು
ಸರಿಯಲ್ಲ, " ನನ್ನ ಅಪ್ಪಣೆಯಪ್ರಕಾರ ನಡೆದುಕೊಳ್ಳತಕ್ಕುದು " ಎಂದು
ಹೇಳಿದುದಕ್ಕೆ ಅವನೊಪ್ಪಿಕೊಂಡಿದ್ದಾನೆ ; ಆದರೆ ಆ ಹೆಂಗಸು ಸಚ್ಚರಿತ್ರದ
ವಳೋ, ದುಶ್ಚರಿತ್ರದವಳೋ ಚೆನ್ನಾಗಿ ವಿಚಾರಿಸಬೇಕೆಂದೂ ದುಶ್ಚರಿತ್ರದ
ವಳನ್ನು ತನ್ನ ಸಂಗಡ ಕೂಡಿ ಹಾಕಿದರೆ ರಾಜನಿಗೆ ಪಾಪಸ್ಪರ್ಶವಾಗುವು
ದೆಂದೂ ಹೇಳಿದನು. ಅದಕ್ಕೆ " ನಾನು ಉಂಗುರವನ್ನು ಕೊಟ್ಟು ಹೋಗು,
ಅವಳ ಚರಿತ್ರೆಯನ್ನು ಪರೀಕ್ಷಿಸಿ ಹೇಳುವೆನು " ಎಂದೆನು. ಅವನು, " ಉಂ
ಗುರವನ್ನಾರಿಗೂ ನಂಬಿ ಕೊಡಲಾರೆನು ; ಆದರೆ ತಮ್ಮಲ್ಲಿ ನಂಬಿ ಕೊಡುವೆ
ನು " ಎಂದು ಹೇಳಿ ಉಂಗುರವನ್ನು ಕೊಟ್ಟನು. ನಾನು ಉಂಗುರವನ್ನು
ಇಟ್ಟುಕೊಂಡು ನಿನ್ನನ್ನು ಪರೀಕ್ಷೆ ಮಾಡಿದುದರಲ್ಲಿ ನೀನು ಗೆದ್ದೆ.
ಹಿರಣ್ಮಯಿ - ತಾವು ಆವ ಪರೀಕ್ಷೆಯನ್ನು ಹೇಗೆ ಮಾಡೋಣವಾ
ಯಿತೋ, ನಾನು ಹೇಗೆ ಜಯಿಸಿದೆನೋ ಅದೆನಗೆ ಗೊತ್ತಾಗಲಿಲ್ಲ.

೨೭

ಹೀಗೆಂದು ಹೇಳುತಿದ್ದ ಸಮಯದಲ್ಲಿ ಅರಮನೆಯಲ್ಲಿ ಮಂಗಳ
ಸೂಚಕವಾಗಿ ವಾದ್ಯಗಳು ಪ್ರಾರಂಭವಾದುವು. ರಾಜನು, " ರಾತ್ರಿ
ಹನ್ನೊಂದು ಘಳಿಗೆಯಾಯಿತು ; ಪರೀಕ್ಷೆಯ ವಿಚಾರವನ್ನು ಹಿಂದಳಿಂದ
ಹೇಳುವೆನು ; ಈಗ ನಿನ್ನ ಪತಿಯು ಬಂದಿದ್ದಾನೆ. ಶುಭಲಗ್ನದಲ್ಲಿ ಪರಸ್ಪರ
ಶುಭದೃಷ್ಟಿಯಾಗಲಿ ” ಎಂದನು.
ಆಗ ಹಿಂದುಗಡೆ ಕೊಠಡಿಯ ಬಾಗಿಲು ತೆರೆಯಲ್ಪಟ್ಟಿತು. ದೀರ್ಘಾ
ಕಾರ ಪುರುಷನೊಬ್ಬನಾ ಬಾಗಿಲಿಂದ ಕೊಠಡಿಯೊಳಗೆ ಬಂದು ನಿಂತನು.
ರಾಜ-ಹಿರಣ್ಮಯಿ ! ಇವನೇ ನಿನ್ನ ಸ್ವಾಮಿ.
ಹಿರಣ್ಮಯಿಯು ದೃಷ್ಟಿಸಿ ನೋಡಿದಳು. ಅವಳಿಗೇನೇನೂ ತೋರ
ಲಿಲ್ಲ. ಜಾಗ್ರತಾವಸ್ಥೆ ಸ್ವಪ್ನಾವಸ್ಥೆ ಎಂಬ ಭೇದಜ್ಞಾ ನಶೂನ್ಯೆಯಾಗಿದ್ದಳು.
ನೋಡಿದರೆ, ಪುರಂದರ!
ಅವರಿಬ್ಬರೂ ಪರಸ್ಪರ ನೋಡಿ ಸ್ತಂಭಿತರಾಗಿ ಉನ್ಮತ್ತಪ್ರಾಯರಾ
ದರು ; ಪರಸ್ಪರ ತಮ್ಮನ್ನು ತಾವೇ ನಂಬಲಾರದೆ ಹೋದರು.
ರಾಜನು ಪುರಂದರನನ್ನು ಕುರಿತು, “ ಸ್ನೇಹಿತನೆ ! ಹಿರಣ್ಮಯಿಯು
ನಿನಗೆ ಯೋಗ್ಯೆಯಾದ ಪತ್ನಿ ; ಆದುದರಿಂದ ಮನೆಗೆ ಕರೆದುಕೊಂಡು
ಹೋಗು ; ಅವಳು ಈಗಲೂ ಮೊದಲಿನಂತೆ ನಿನ್ನಲ್ಲಿ ಸ್ನೇಹಮಯಿಯಾಗಿ
ದ್ದಾಳೆ ; ನಾನವಳನ್ನು ರಾತ್ರಿ ಹಗಲು ಕಾವಲಿಟ್ಟು ನೋಡಿಕೊಳ್ಳುತ್ತಿದ್ದೆ
ನಾದಕಾರಣ ಅವಳು ಅನನ್ಯಾನುರಾಗಿಣಿಯಾಗಿದ್ದಾಳೆಂದು ತಿಳಿದಿದ್ದೇನೆ;
ನಿನ್ನ ಕೋರಿಕೆಯ ಪ್ರಕಾರ ಅವಳನ್ನು ಬಹುವಿಧವಾಗಿ ಪರೀಕ್ಷಿಸಿದೆನು ;
ನಾನೇ ಅವಳ ಸ್ವಾಮಿಯೆಂದು ಹೇಳಿದೆನು ; ಆದರೆ ಅವಳು ರಾಜ್ಯಲೋಭ
ದಿಂದಲೂ ನಿನ್ನನ್ನು ಮರೆಯಲಿಲ್ಲ ; ನಾನೇ ಅವಳ ಸ್ವಾಮಿಯೆಂದು ಇಂಗಿ
ತದಿಂದ ತಿಳಿಯ ಹೇಳಿ, ಅವಳು ನಿನ್ನಲ್ಲಿ ಅಸತ್ಪ್ರಣಯಾಸಕ್ತೆಯಾಗಿದ್ದ
ಳೆಂದು ಸಂದೇಹಪಟ್ಟವನಂತೆ ಕೆಲವು ಸಂಗತಿಗಳನ್ನು ಹೇಳಿದೆನು : ಅದಕ್ಕ
ವಳು ದುಃಖಿತೆಯಾಗಿ, ತಾನು ನಿರ್ದೋಷಿಯೆಂತಲೂ, ತನ್ನನ್ನು ಗ್ರಹಣಮಾ
ಡಬೇಕೆಂದೂ ಹೇಳಿದ್ದರೆ ನಿನ್ನನ್ನು ಅವಳು ಶುದ್ಧವಾಗಿ ಮರೆತಳೆಂದು
ಹೇಳುತ್ತಿದ್ದೆನು ; ಆದರೆ ಹಿರಣ್ಮಯಿಯು ಹಾಗೆ ಹೇಳದೆ, “ ಮಹಾರಾ
ಜರೆ ! ನಾನು ಅಸತಿ, ನನ್ನನ್ನು ತ್ಯಾಗಮಾಡಿಬಿಡಿ ” ಎಂದು ಹೇಳಿಕೊಂ
ಡಳಾ' ಎ ಹೇಳಿ, ' ೦ತರ ಹಿರಣ್ಮಯಿಯನ್ನು ಕುರಿತು, “ಹಿರ
ಣ್ಮಯಿ ! ನಿನ್ನಾ ಕಾಲದ ಮನೋಭಾವಗಳನ್ನೆಲ್ಲ ಚೆನ್ನಾಗಿ ತಿಳಿದುಕೊಂ
ಡೆನು ; ನೀನು ಅನ್ಯಪತಿಯ ಸಂಸರ್ಗಮಾಡತಕ್ಕುದಲ್ಲವೆಂದೂ ನಾನು
ಅಸತಿಯೆಂದೂ ಹೇಳಿಕೊಂಡೆ. ನೀವಿಬ್ಬರೂ ಸುಖವಾಗಿರಬೇಕೆಂದು
ನಾನು ಆಶೀರ್ವಾದ ಮಾಡುತ್ತೇನೆ” ಎಂದನು.
ಹಿರಣ್ಮಯಿ-ಮಹಾರಾಜನೆ! ನನಗೆ ಮತ್ತೊಂದು ಸಂಗತಿಯನ್ನು
ತಿಳಿಯಹೇಳಬೇಕು. ಇವರು ಸಿಂಹಳ ದ್ವೀಪದಲ್ಲಿದ್ದರು. ಕಾಶಿಯಲ್ಲಿ
ನನಗೂ ಅವರಿಗೂ ಪರಿಣಯವಾದುದು ಹೇಗೆ ? ಅವರು ಸಿಂಹಳದಿಂದ
ಕಾಶೀಗೆ ಬಂದಿರ್ದರೆ ನಮಗೇಕೆ ಗೊತ್ತಾಗಲಿಲ್ಲ?
ರಾಜ-ಆನಂದಸ್ವಾಮಿಯೂ ಪುರಂದರನ ತಂದೆಯೂ ಆಲೋಚಿಸಿ
ಕೊಂಡು ಜನರು ಹೋಗಿ ಅವನನ್ನು ಸಿಂಹಳ ದಿಂದ ಕಾಶೀಗೆ ಕರೆದು
ಕೊಂಡು ಹೋಗಿದ್ದರು. ಪುನಃ ಸಿಂಹಳಕ್ಕೆ ಹೊರಟುಹೋದನು. ತಾಮ್ರ
ಲಿಪ್ತಕ್ಕೆ ಬರಲಿಲ್ಲವಾದುದರಿಂದ ನಿಮಗಾರಿಗೂ ತಿಳಿಯಲಿಲ್ಲ.
ಪುರಂದರ-ಮಹಾರಾಜನೆ! ತಾವು ಹೇಗೆ ನಮ್ಮ ಚಿರಕಾಲದ
ಮನೋರಥವನ್ನು ಪೂರ್ಣಮಾಡೋಣವಾಯಿತೋ, ಹಾಗೆ ಜಗದೀಶ್ವರನು
ತಮ್ಮ ಸಕಲ ಮನೋರಥಗಳನ್ನೂ ಪೂರ್ಣಮಾಡಲಿ. ಇಂದು ನಾವು ಹೇಗೆ
ಸುಖಿಗಳಾದೆವೋ ಅಂತಹ ಸುಖಶಾಲಿಗಳು ತಮ್ಮ ರಾಜ್ಯದಲ್ಲಿ ಹಿಂದಾವಾ
ಗಲೂ ವಾಸವಾಗಿರಲಿಲ್ಲ.

_______________________________________________________________________