ಕನಕದಾಸರ ಸಾಹಿತ್ಯ ಸಂಪಾದಿಸಿ

  • ಕನಕದಾಸರು ಕೀರ್ತನೆಗಳನ್ನಷ್ಟೇ ಅಲ್ಲದೆ ಕಾವ್ಯ, ಮಹಾಕಾವ್ಯ, ಮುಂಡಿಗೆಗಳನ್ನೂ ಬರೆದಿದ್ದಾರೆ. ಹೀಗಾಗಿ,ಅವರು ಕೀರ್ತನೆಗಳ ದೃಷ್ಟಿಯಿಂದ ಕೀರ್ತನಕಾರರಾಗಿಯೂ, ಕಾವ್ಯಗಳ ದೃಷ್ಟಿಯಿಂದ ಕವಿಯಾಗಿಯೂ ನಮಗೆ ಕಂಡುಬರುತ್ತಾರೆ. ’ಮೋಹನ ತರಂಗಿಣಿ’, ’ನಳ ಚರಿತ್ರೆ’, ’ರಾಮಧಾನ್ಯ ಚರಿತ್ರೆ’, ’ಹರಿಭಕ್ತಿ ಸಾರ’, ಕೀರ್ತನೆ ಹಾಗೂ ಮುಂಡಿಗೆಗಳು ಕನಕದಾಸರಿಂದ ರಚಿತವಾದ ಕೃತಿಗಳು.
  • ’ಕಾಗಿನೆಲೆಯಾದಿಕೇಶವ’ ಎಂಬುದು ಇವರ ಕೀರ್ತನೆಗಳ ಅಂಕಿತ) ಹರಿಯ ಬಗೆಗಿನ ಭಕ್ತಿಯೇ ಅಲ್ಲದೆ ಕನಕದಾಸರ ಹಲವಾರು ಕೀರ್ತನೆಗಳಲ್ಲಿ ತಾತ್ವಿಕತೆ, ವೈಚಾರಿಕತೆ, ಸಾಮಾಜಿಕ ವಿಮರ್ಶೆ, ವಿಡಂಬನೆ ಕಂಡುಬರುತ್ತದೆ. ಆ ಕಾಲಕ್ಕೆ ಪ್ರಚಲಿತವಿದ್ದ ಹಲವು ಮೂಢನಂಬಿಕೆಗಳನ್ನೂ, ಕಂದಾಚಾರಗಳನ್ನೂ, ಜಾತಿ-ವರ್ಗ ಭೇದಗಳನ್ನೂ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಬಹುವಾಗಿ ಖಂಡಿಸಿದ್ದಾರೆ. "ಕುಲಕುಲ ಕುಲವೆಂದು ಹೊಡೆದಾಡುವಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ..." ಎಂಬ ಮೊದಲಾದ ಅವರ ಕೀರ್ತನೆಗಳಲ್ಲಿ ಈ ಅಂಶಗಳನ್ನು ನಾವು ಕಾಣಬಹುದು.

ರಾಮಧಾನ್ಯ ಚರಿತ್ರೆ ಸಾರಾಂಶ ಸಂಪಾದಿಸಿ

  • ಪ್ರಕೃತ "ರಾಮಧಾನ್ಯ ಚರಿತ್ರೆ"ಯು ಕನಕದಾಸರಿಂದ ರಚಿತವಾದ ಒಂದು ಪುಟ್ಟ ವಿಡಂಬನ ಕಾವ್ಯ. ಇದೊಂದು ಕಲ್ಪಿತ ಕಥೆ. ರಾಗಿ(ನರೆದಲೆಗ) ಹಾಗೂ ಭತ್ತ(ವ್ರಿಹಿಗ)- ಇವರಿಬ್ಬರ ನಡುವೆ ಯಾರು ಹೆಚ್ಚು ಯಾರು ಕಡಿಮೆ ಎಂಬ ಜಗಳವು ಉದ್ಭವಿಸಲಾಗಿ, ರಾಮನು ಇವರಿಬ್ಬರ ವ್ಯಾಜ್ಯವನ್ನು ಪರಿಹರಿಸಿ ನರೆದಲೆಗವೇ ಉತ್ತಮವೆಂದು ಸಾರಿ ತೀರ್ಪನ್ನು ನೀಡುವುದು ಇಲ್ಲಿನ ಕಥಾಹಂದರ.
  • ಆ ಕಾಲಕ್ಕೆ ಇದ್ದಿರಬಹುದಾದ ವರ್ಗ-ವರ್ಣ ತಾರತಮ್ಯಗಳ ಪ್ರತೀಕವಾಗಿ - ಉಚ್ಛ ವರ್ಗಗಳ ಪ್ರತಿನಿಧಿಯಾಗಿ ನೆಲ್ಲೂ, ಕೆಳವರ್ಗಗಳ ಪ್ರತಿನಿಧಿಯಾಗಿ ರಾಗಿಯೂ ಈ ಕಾವ್ಯದಲ್ಲಿ ಕಂಡುಬರುತ್ತವೆ. ಹೀಗಾಗಿ ’ರಾಮಧಾನ್ಯ ಚರಿತ್ರೆ’ಯನ್ನು ರೂಪಕ ಕಾವ್ಯವೆಂದೂ ಹೇಳಬಹುದು.
  • ರಾವಣನನ್ನು ಸಂಹರಿಸಿದ ನಂತರ ರಾಮನು ಸೀತೆ, ಲಕ್ಷ್ಮಣ, ವಿಭೀಷಣ, ಹನುಮಂತ ಮುಂತಾದವರೊಂದಿಗೆ ಅಯೋಧ್ಯೆಗೆ ಮರಳುತ್ತಿರುವಾಗ, ಮಾರ್ಗಮಧ್ಯದಲ್ಲಿ ಮುನಿಗಳೆಲ್ಲರೂ ಇವರಿಗೆ ವಿವಿಧ ಧಾನ್ಯಗಳಿಂದ ಸಿದ್ಧಪಡಿಸಿದ ಭಕ್ಷ್ಯ-ಭೋಜನಗಳ ಔತಣವೊಂದನ್ನು ಏರ್ಪಡಿಸಿರುತ್ತಾರೆ. ಆಗ ಅವರಲ್ಲಿ ಸಹಜವಾಗಿ ಧಾನ್ಯಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಈ ಪ್ರಶ್ನೆಯೇ ’ರಾಮಧಾನ್ಯ ಚರಿತ್ರೆ’ಯ ಕಥಾಮೂಲ. ಇಲ್ಲಿಂದಲೇ ಭತ್ತ ಹಾಗೂ ರಾಗಿಯ ನಡುವೆ ಜಗಳವೇರ್ಪಡುವುದು.
  • ಅವರಿಬ್ಬರ ನಡುವಿನ ಜಗಳವನ್ನು ನಿವಾರಿಸಿ ನ್ಯಾಯವನ್ನು ಹೇಳಲೆಂದು ರಾಮನು ಅವರಿಬ್ಬರನ್ನೂ ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸುವಂತೆ ಹೇಳುತ್ತಾನೆ. ಆರು ತಿಂಗಳ ನಂತರ ಇವರಿಬ್ಬರನ್ನೂ ಸಭೆಗೆ ಕರೆಸಲಾಗಿ, ಆ ವೇಳೆಗೆ ಭತ್ತವು ಸೊರಗಿ ಟೊಂಕ ಮುರಿದು ಬಿದ್ದರೆ, ರಾಗಿಯು ಯಾವ ಕ್ಲೇಶಕ್ಕೂ ಒಳಗಾಗದೆ ಗಟ್ಟಿಯಾಗಿ ನಿಲ್ಲುತ್ತದೆ. ಕೊನೆಗೆ, ಆರು ತಿಂಗಳುಗಳ ನಂತರವೂ ಸ್ವಲ್ಪವೂ ಕಾಂತಿಗುಂದದ ರಾಗಿಗೇ ರಾಮನ ಸಭೆಯಲ್ಲಿ ಶ್ರೇಷ್ಠತೆಯ ಪಟ್ಟ ದೊರೆಯುತ್ತದೆ. ಇಡೀ ಸಭೆಯು ರಾಗಿಯನ್ನು ಮೆಚ್ಚಿ ಹಾರೈಸುತ್ತದೆ.

ಉದಾಹರಣೆಗೆ ಸಂಪಾದಿಸಿ

ರಾಮಧಾನ್ಯ ಚರಿತ್ರೆ

ರಾಮಧಾನ್ಯದ ಕೃತಿಯನೀ ಜನ
ದಾಮವೆಲ್ಲಾದರಿಸುವಂದದಿ
ಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ
ಪ್ರೇಮದಿಂದಾದರಿಸಿ ಕೇಳ್ದ ಸ
ನಾಮರಿಗೆ ಸತ್ಕರುಣದಲಿ
ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ (೩)

ಧರೆಯನೆಲ್ಲವ ಸೋತು ಜೂಜಲಿ
ಕುರುಪತಿಗೆ, ಕೈದಳಿಸಿ ತಮ್ಮಂ
ದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತಿರಲು
ಪರಮ ಋಷಿ ಶಾಂಡಿಲ್ಯ ಸ
ತ್ಕರುಣದಲಿ ನಡೆತಂದನಲ್ಲಿಗೆ
ವರ ತಪೋಧನರೊಡನೆ ಕಾಣಿಸಿಕೊಂಡನುಚಿತದಲಿ (೪)

ಧರಣಿಪತಿ ಧರ್ಮಜನು ತಮ್ಮಂದಿರೊಡಗೂಡಿ ಶಾಂಡಿಲ್ಯ ಮುನಿಗೆ ವಂದಿಸಿ ಸತ್ಕರಿಸಿದನು. ಆಗ ಶಾಂಡಿಲ್ಯ ಮುನಿಯು "ನೃಪಸಿರಿ - ದರಿದ್ರತೆ ನಿಲದು, ಪರಿಹಾರವಹುದು" ಎಂದು ನುಡಿಯುತ್ತಾನೆ. ಆಗ ಧರ್ಮಜನು :

"ದೇವಋಷಿಗಳು ನಿಮ್ಮ ಕರುಣಾ
ಭಾವವೆಮ್ಮಲ್ಲಿರಲು ನಮಗಿ
ನ್ನಾವ ಕಷ್ಟದ ಬಳಕೆದೋರದು. ನಿಮ್ಮ ದರುಶನದಿ
ಪಾವನರು ನಾವಾದೆವೆಮಗಿ
ನ್ನಾವ ಬುದ್ಧಿಯನರುಹುವಿರಿಯದ
ನೀವು ಪೇಳೆನೆ", ನಸುನಗುತ ಮುನಿನಾಥನಿಂತೆಂದ (೬)

  • "ದೇವಋಷಿಗಳು ನಿಮ್ಮ ಕರುಣೆ ನಮ್ಮ ಮೇಲಿರುವಾಗ ನಮಗೆ ಯಾವ ಕಷ್ಟವೂ ಬರದು. ನಿಮ್ಮ ದರ್ಶನದಿಂದ ನಾವು ಪಾವನರಾದೆವು ಸ್ವಾಮಿ, ನಮಗೆ ನೀವು ಯಾವ ವಿಷಯವನ್ನು ಅರುಹುವಿರಿ ಈಗ" ಎಂದು ಕೇಳಲು,ಶಾಂಡಿಲ್ಯ ಮುನಿಯು "ಯುಧಿಷ್ಟಿರ, ಭೂಮಿಯಲ್ಲಿ ಅಧಿಕವಾದ ಖ್ಯಾತಿಯನ್ನು ಹೊಂದಿರುವ ನಾಲ್ಕು ಅರಸುಗಳೆಂದರೆ - ನಳ, ರಾಮ, ಯುಧಿಷ್ಟಿರ ಹಾಗೂ ಹರಿಶ್ಚಂದ್ರ ಎಂದು ಜಗವೆಲ್ಲ ಸಾರುತ್ತಿದೆ. ಅವರಲ್ಲಿ ರಾಮನು ಅತ್ಯಂತ ಗುಣಶೀಲನಾಗಿದ್ದಾನೆ. ಒಮ್ಮೆ ನೆಲ್ಲು(ವ್ರಿಹಿಗ) ಹಾಗೂ ರಾಗಿ(ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ, ಸರಿಯಾದ ನ್ಯಾಯವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿಸಿದ" ಎಂದು ತಿಳಿಸುತ್ತಾನೆ.
  • "ದೇವಋಷಿಗಳು ನಿಮ್ಮ ಕರುಣೆ ನಮ್ಮ ಮೇಲಿರುವಾಗ ನಮಗೆ ಯಾವ ಕಷ್ಟವೂ ಬರದು. ನಿಮ್ಮ ದರ್ಶನದಿಂದ ನಾವು ಪಾವನರಾದೆವು ಸ್ವಾಮಿ, ನಮಗೆ ನೀವು ಯಾವ ವಿಷಯವನ್ನು ಅರುಹುವಿರಿ ಈಗ" ಎಂದು ಕೇಳಲು,ಶಾಂಡಿಲ್ಯ ಮುನಿಯು "ಯುಧಿಷ್ಟಿರ, ಭೂಮಿಯಲ್ಲಿ ಅಧಿಕವಾದ ಖ್ಯಾತಿಯನ್ನು ಹೊಂದಿರುವ ನಾಲ್ಕು ಅರಸುಗಳೆಂದರೆ - ನಳ, ರಾಮ, ಯುಧಿಷ್ಟಿರ ಹಾಗೂ ಹರಿಶ್ಚಂದ್ರ ಎಂದು ಜಗವೆಲ್ಲ ಸಾರುತ್ತಿದೆ. ಅವರಲ್ಲಿ ರಾಮನು ಅತ್ಯಂತ ಗುಣಶೀಲನಾಗಿದ್ದಾನೆ. ಒಮ್ಮೆ ನೆಲ್ಲು(ವ್ರಿಹಿಗ) ಹಾಗೂ ರಾಗಿ(ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ, ಸರಿಯಾದ ನ್ಯಾಯವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿಸಿದ" ಎಂದು ತಿಳಿಸುತ್ತಾನೆ.

ರಾಮ ಚರಿತೆ ಸಂಪಾದಿಸಿ

  • ಆಗ ಧರ್ಮರಾಯನು ರಾಮಚರಿತೆಯನ್ನು ತಮಗೆ ಹೇಳಬೇಕೆಂದು ಶಾಂಡಿಲ್ಯ ಮುನಿಯನ್ನು ಬಿನ್ನವಿಸಲು, ಆ ಮುನಿಪನು ಅಲ್ಲಿದ್ದವರಿಗೆಲ್ಲ ರಾಮನ ಕಥೆಯನ್ನು ವಿಸ್ತರಿಸಿ ಹೆಳುತ್ತಾನೆ. :
  • ಕೇಳು ಕುಂತೀ ತನಯ, ಗಂಗಾ ನದಿಯ ದಡದ ಉತ್ತರ ಭಾಗದಲ್ಲಿ ವಿಶಾಲವಾಗಿಯೂ,ವೈಭವಯುತವಾಗಿಯೂ ಇರುವ ಅಯೋಧ್ಯಾಪುರ. ಆ ಪುರದ ಅರಸ ದಶರಥ. ಅವನಿಗೆ ಕೌಸಲ್ಯೆ, ಕೈಕೆ ಹಾಗೂ ಸುಮಿತ್ರೆ - ಈ ಮೂವರು ಅರಸಿಯರು.
  • ಆ ದಶರಥ ಹಾಗೂ ಕೌಸಲ್ಯೆಯರಿಗೆ ಜನಿಸಿದ ಗುಣನಿಧಿ ಆ ರಾಮ. ಅವನು ತಾಟಕಿಯೆಂಬ ರಾಕ್ಷಸಿಯನ್ನು ಸಂಹರಿಸಿ, ಮಾರೀಚ-ಸುಬಾಹುಗಳನ್ನು ಕೊಂದು, ವಿಶ್ವಾಮಿತ್ರ ಮುನಿಯು ನಡೆಸುತ್ತಿದ್ದ ಮಖ(ಯಾಗ)ವನ್ನು ಯಾವುದೇ ವಿಘ್ನ ಬಾರದಂತೆ ರಕ್ಷಿಸಿದನು. ಆ ನಂತರದಲ್ಲಿ ರಾಮನು ಗೌತಮನ ಸತಿ ಅಹಲ್ಯೆಯ ಶಾಪವನ್ನು ನಿವಾರಿಸಿ, ತನ್ನ ತಮ್ಮ ಲಕ್ಷ್ಮಣ ಹಾಗೂ ಮುನಿ ವಿಶ್ವಾಮಿತ್ರನೊಡಗೂಡಿ ಮಿಥಿಲಾನಗರಕ್ಕೆ ಬಂದನು.
  • ಮುಂದೆ, ಅಲ್ಲಿನ ಅರಸನಾದ ಜನಕನ ಮಗಳು ಸೀತೆಯ ಸ್ವಯಂವರದಲ್ಲಿ ಶಿವಧನುಸ್ಸನ್ನು ಹೆದೆಯೇರಿಸಿ ಮುರಿದು, ಶುಭಮುಹೂರ್ತದಲ್ಲಿ ರಾಮನು ಸೀತೆಯನ್ನು ವರಿಸಿದನು. ಆ ನಂತರದಲ್ಲಿ ರಾಮನು ತನ್ನವರೊಡಗೂಡಿ ಅಯೋಧ್ಯೆಗೆ ಹೊರಟುಬಂದನು.
  • ಕೇಳು ಧರ್ಮಜ, ರಾಮನಿಗೆ ಕೂಡ ನಿಮ್ಮಂತೆಯೇ ವನವಾಸ ಮಾಡಬೇಕಾಗಿ ಬಂತು. ಪಿತೃವಚನ ಪಾಲನೆಗೆಂದು ರಾಮನು ತನ್ನ ಮಡದಿ ಸೀತೆ ಹಾಗೂ ಲಕ್ಷ್ಮಣರೊಂದಿಗೆ ಘೋರವಾದ ಕಾನನದಲ್ಲಿ ಇರಬೇಕಾಯಿತು.
  • "ಭರತನನು ಸಂತೈಸಿ, ಕಾಕಾಸುರನ ಪ್ರಾಣವ ಕಾಯ್ದು, ದಾನವ ತರುಣಿ ನಾಸಿಕವರಿದು, ಮಾಯಾಮೃಗವ ಸಂಹರಿಸಿ, ಸರಸಿಜಾಕ್ಷಿಯನಗಲಿ, ಮಾರ್ಗಾಂತರದಿ ಕಂಡ ಜಟಾಯುವನು - ಮನ ಮರುಗಿ ವೃತ್ತಾಂತವನು ತಿಳಿದವನಲ್ಲಿ ಗತಗೊಳಿಸಿ..(೧೩)"
  • ಸೀತೆಯನ್ನು ಹುಡುಕಿ ಹೊರಟ ರಾಮಲಕ್ಷ್ಮಣರಿಗೆ ಸಾವಿನ ಅಂಚಿನಲ್ಲಿದ್ದ ಜಟಾಯುವು ಕಾಣಿಸುತ್ತಾನೆ. ಅವನಿಂದ ರಾಮನು ನಡೆದ ವೃತ್ತಾಂತವನ್ನು(ಸೀತಾ ಅಪಹರಣ, ಹಾಗೂ ರಾವಣನನ್ನು ಎದುರಿಸಿದ ಜಟಾಯುವನ್ನು ರಾವಣನು ಗಾಯಗೊಳಿಸಿದ್ದು) ಕೇಳಿ ತಿಳಿದುಕೊಳ್ಳುತ್ತಾನೆ. ಇಷ್ಟನ್ನೂ ತಿಳಿಸುವ ವೇಳೆಗೆ ಜಟಾಯುವು ಮೃತನಾಗುತ್ತಾನೆ. ಅವನ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ನಂತರ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಹೊರಡುತ್ತಾರೆ.
  • ಮಾರ್ಗ ಮಧ್ಯದಲ್ಲಿ ಹನುಮನನ್ನು ಕಂಡು, ಕಿಷ್ಕಿಂದೆಯನ್ನು ತಲುಪಿ, ಅಲ್ಲಿ ವಾಲಿಯನ್ನು ಹರಿಸಿ, ಸುಗ್ರೀವನು ಕಳುಹಿಸಿದ ವಾನರ ಸೈನ್ಯವನ್ನು ಒಡಗೊಂಡು ರಾಮನು ದಕ್ಷಿಣಕ್ಕೆ ಹೊರಟನು. ಸಮುದ್ರವನ್ನು ದಾಟಲು ಸೇತುಬಂಧವನ್ನು ನಿರ್ಮಿಸಿ, ಲಂಕೆಯನ್ನು ತಲುಪಿ, ರಾವಣ ಕುಂಭಕರ್ಣಾದಿ ದಾನವ ವೀರರನ್ನು ಕೊಂದು,ರಾಮನು ನಂತರದಲ್ಲಿ ವಿಭೀಷಣನಿಗೆ ಪಟ್ಟವನ್ನು ಕಟ್ಟಿದನು.
  • ಆ ನಂತರ ರಾಮನು ಸೀತೆಯನ್ನು ಕೈಕೊಂಡು, ತಮ್ಮೊಡನೆ ಅಯೋಧ್ಯೆಗೆ ಬರಲು ವಿಭೀಷಣನನ್ನೂ ಅಹ್ವಾನಿಸುತ್ತಾನೆ. ಅಗ ಅಗಣಿತ ದಾನವ ಸೇನೆಯು ಅವರೊಡನೆ ಅಯೋಧ್ಯೆಗೆ ಹೊರಡಲು ಸಿದ್ಧವಾಯ್ತು.
  • ವಿಭೀಷಣನು ತನಗೆಂದು ಅರ್ಪಿಸಿದ ಕುಬೇರನ ರಥದಲ್ಲಿ ರಾಮನು ಸೀತೆ ಹಾಗೂ ಲಕ್ಷ್ಮಣರೊಡನೆ ಕುಳಿತಿರಲು,ಅವರೊಡನೆ ಹನುಮ, ಜಾಂಬವಂತ, ವಿಭೀಷಣಾದಿಯಾಗಿ, ದಾನವ ಹಾಗೂ ವಾನರ ಸೈನ್ಯವೂ ಅಯೋಧ್ಯೆಯೆಡೆಗೆ ಹೊರಡುತ್ತಾರೆ.
  • ಮಾರ್ಗ ಮಧ್ಯದಲ್ಲಿ ಇವರೆಲ್ಲ ವಾಲ್ಮೀಕಿ, ಮುಚುಕುಂದ ಮುಂತಾದ ಮುನಿಗಳ ಆಶ್ರಮಗಳನ್ನು ಸಂದರ್ಶಿಸಿದರು. ನಂತರ ಮುಂದುವರೆದು ಇವರೆಲ್ಲ ಮಾಹವನವೊಂದರಲ್ಲಿ ಬೀಡುಬಿಟ್ಟಿರಲು ಹಲವಾರು ಮುನಿವರರು ಬಂದು ರಾಮನನ್ನು ಕಂಡರು.
  • ಕೌಶಿಕನು, ಜಮದಗ್ನಿ, ಜನ್ಹು, ಪರಾಶರನು, ಜಾಬಾಲಿ, ಭೃಗು, ದೂರ್ವಾಸ, ಗೌತಮನಾದಿಯಾದ ಸಮಸ್ತ ಮುನಿವರರು ಭಾಸುರದ ತೇಜದಲಿ ತಮ್ಮ ನಿವಾಸವನು ಹೊರವಂಟು ಬಂದರು, ದಾಶರಥಿಯನು ಕಂಡು ಹರಸಿದರಕ್ಷತೆಯ ತಳಿದು (೨೩)
  • ಅವರೆಲ್ಲ ರಾಮನನ್ನು ಮನಸಾರೆ ಪ್ರಾರ್ಥಿಸಿ, ಹೊಗಳಿ, ವಿವಿಧ ಬಗೆಯಲ್ಲಿ ಸತ್ಕರಿಸಿದರು.

ಅಲ್ಲಿ ನೆರೆದ ಮಹಾಮುನೀಶ್ವರ
ರೆಲ್ಲ ತರಿಸಿದರಖಿಳ ವಸ್ತುವ -
ಬೆಲ್ಲ, ಸಕ್ಕರೆ, ಜೇನುತುಪ್ಪ, ರಸಾಯನಂಗಳಲಿ
ಭುಲ್ಲವಿಸಿ ರಚಿಸಿದ ಸುಭಕ್ಷಗ
ಳೆಲ್ಲವನು ತುಂಬಿದರು ಹೆಡಗೆಗ
ಳಲ್ಲಿ. ಜೋಡಿಸಿ, ಹೊರಿಸಿ ತಂದರು ರಾಮನೋಲಗಕೆ (೨೮)

ಧಾನ್ಯ ಪರೀಕ್ಷೆ ಸಂಪಾದಿಸಿ

  • ರಾಮನೊಡನೆ ಬಂದವರೆಲ್ಲ ಆ ರುಚಿರುಚಿಯಾದ ಭೋಜ್ಯಗಳೆಲ್ಲವನ್ನು ಮನಸಾರೆ ಸವಿದರು. ಅವರೆಲ್ಲ ಮುನಿವರರನ್ನು ಆನಂದದಿಂದ ಕೊಂಡಾಡಿದರು. ಆಗ ರಾಮನು ಹನುಮನನ್ನು ಕರೆದು ಆ ಭಕ್ಷ್ಯಗಳ ರುಚಿಯನ್ನು ಕುರಿತು ಪ್ರಶ್ನಿಸಿದನು -

ಅನಿಲಸುತ ಬಾರೆಂದು ರಘುನಂ
ದನನು "ಕರುಣದೊಳಿವರ ರುಚಿಯೆಂ
ತೆನಲು", ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆ
’ಇನಕುಲಾನ್ವಯತಿಲಕ ಚಿತ್ತೈ
ಸೆನಗೆ ಸವಿಯಹುದಿನ್ನು ಧಾನ್ಯದ
ತನುವನೀಕ್ಷಿಸಬೇಕು, ದೇವರು ತರಿಸಿ ನೀವೆಂದ’ (೨೯)

  • ಆಗ ಹನುಮನು ’ಭಕ್ಷ್ಯಗಳೇನೋ ಬಹಳ ರುಚಿಯಾಗಿವೆ. ಆದರೆ ಈ ಭಕ್ಷ್ಯಗಳನ್ನು ಯಾವ ಯಾವ ಧಾನ್ಯಗಳಿಂದ ತಯಾರಿಸಿದ್ದಾರೋ ಆ ಧಾನ್ಯಗಳನ್ನೆಲ್ಲ ಒಮ್ಮೆ ತಾನು ನೋಡಬೇಕು. ದಯವಿಟ್ಟು ತಾವು ಆ ಧಾನ್ಯಗಳನ್ನು ತರಿಸಿ’ ಎಂದು ರಾಮನನ್ನು ಕೇಳುತ್ತಾನೆ.
  • ಹಾಗೇ ಆಗಲಿ ಎಂದು ರಾಮನು ಗೌತಮ ಮುನಿಯನ್ನು ’ಧಾನ್ಯಗಳನ್ನು ತರಿಸಬೇಕು’ ಎಂದು ವಿನಯದಿಂದ ಕೇಳಿಕೊಳ್ಳುತ್ತಾನೆ. ಆಗ ಗೌತಮ ಮುನಿಯ ಶಿಷ್ಯರು ಎಲ್ಲ ತರದ ಧಾನ್ಯಗಳನ್ನೂ ಹೊತ್ತು ತಂದು ಅಲ್ಲಿದ್ದವರೆಲ್ಲರ ಮುಂದಿಡುತ್ತಾರೆ.
  • "ನರೆದಲೆಗನಿದು, ನೆಲ್ಲು, ಹಾರಕ, ಬರಗು, ಜೋಳವು, ಕಂಬು, ಸಾಮೆಯು, ಉರುತರದ ನವಣೆಯಿದು ನವಧಾನ್ಯ"ವೆಂದೆನಲು, ಮೆರೆವ ರಾಶಿಯ ಕಂಡು - *’ಇದರೊಳು ಪರಮಸಾರದ ಹೃದಯನಾರೆಂದರಸಿ’ ಕೇಳಿದನಲ್ಲಿರುತಿಹ ಮಹಾಮುನೀಶ್ವರರ (೩೨)
  • (೧. ನರೆದಲೆಗ: ರಾಗಿ, ೨. ನೆಲ್ಲು: ಭತ್ತ. ೩. ಹಾರಕ, ಬರಗು, ಕಂಬು, ಸಾಮೆ, ನವಣೆ - ಬಗೆಬಗೆಯ ಇತರ ಧಾನ್ಯಗಳು).

ಎಲ್ಲ ಧಾನ್ಯಗಳ ಹೆಸರುಗಳನ್ನೂ ಒಂದೊಂದಾಗಿ ಹೇಳುತ್ತಿರಲು, ರಾಮನು - "ಈ ಧಾನ್ಯಗಳಲ್ಲಿ ಉತ್ತಮವಾದದ್ದು ಯಾವುದು?" ಎಂದು ಅಲ್ಲಿದ್ದ ಮುನಿಗಳನ್ನು ಕೇಳುತ್ತಾನೆ. ಆಗ

ಕೆಲರು ಗೋದಿಯ, ಸಾಮೆಯನು ಕೆಲ
ಕೆಲರು ನವಣೆಯ, ಕಂಬು, ಜೋಳವ
ಕೆಲರು ಹಾರಕವೆಂದು, ಕೆಲವರು ನೆಲ್ಲನತಿಶಯವ,
ಕೆಲರು ನರೆದಲಗನನು ಪತಿಕರಿ
ಸಲದ ನೋಡಿದ ನೃಪತಿ"ಯದರೊಳು
ಹಲವು ಮತವೇಕೊಂದನೇ ಪೇಳೆನಲು", ಗೌತಮನು: (೩೩)

  • (ಅಲ್ಲಿದ್ದ ಕೆಲವರು ಗೋಧಿಯನ್ನೂ, ಕೆಲವರು ಸಾಮೆಯನ್ನೂ, ಕೆಲವರು ಇತರ ಧಾನ್ಯಗಳನ್ನೂ, ಕೆಲವರುಭತ್ತವನ್ನೂ, ಹಾಗೇ ಇನ್ನೂ ಕೆಲವರು ರಾಗಿಯನ್ನೂ ಪತಿಕರಿಸಿ(ಪತಿಕರಿಸು: ಅಂಗೀಕರಿಸು/ಹೊಗಳು) ನುಡಿದರು. ಆಗ ರಾಮನು "ಹೀಗೆ ಹಲವು ಅಭಿಪ್ರಾಯಗಳೇಕೆ, ಯಾವುದಾದರೂ ಒಂದನ್ನು ಒಪ್ಪಿ ಹೇಳಿ" ಎನ್ನಲು, ಗೌತಮನು..)

ದಾಶರಥಿ ಚಿತ್ತೈಸು ನಮ್ಮಯ
ದೇಶಕತಿಶಯ ನರೆದಲೆಗನೇ
ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು
"ಲೇಸನಾಡಿದೆ ಮುನಿಪ ಗೌತಮ
ದೋಷರಹಿತನು ಪಕ್ಷಪಾತವ
ನೀಸು ಪರಿಯಲಿ ಮಾಡುವರೆ ಶಿವ"ಯೆಂದನಾ ವ್ರಿಹಿಗ (೩೪)

"ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರರಿಯಿರೆ ಎಲ್ಲರನು ನೀ
ವಿಲ್ಲಿ ನುಡಿವ ಉಪೇಕ್ಷೆಯುಂಟೇ! ಸಾಕದಂತಿರಲಿ,
ನೆಲ್ಲು ನಾನಿರೆ, ಗೋದಿ ಮೊದಲಾ
ದೆಲ್ಲ ಧಾನ್ಯಗಳಿರಲು ಇದರಲಿ
ಬಲ್ಲಿದನು ನರೆದಲೆಗನೆಂಬುದಿದಾವ ಮತ?"ವೆಂದ (೩೫)

  • ಗೌತಮನು "ಕೇಳು ದಾಶರಥಿ, ನಮ್ಮ ದೇಶಕ್ಕೆ ಅತಿಶಯವಾದ ಈ ನರೆದಲೆಗನೇ(ರಾಗಿ) ಮಿಕ್ಕೆಲ್ಲವುಗಳಿಗಿಂತ ಉತ್ತಮವಾದ ಧಾನ್ಯ. ಏಕೆಂದರೆ.." ಎಂದು ನುಡಿಯುತ್ತಿರುವಷ್ಟರಲ್ಲೇ ಅಲ್ಲಿದ್ದ ನೆಲ್ಲಿಗೆ(ವ್ರಿಹಿಗ: ನೆಲ್ಲು) ರೋಷವುಕ್ಕುತ್ತದೆ.
  • ಕೂಡಲೆ ನೆಲ್ಲು ಸಿಡಿದೆದ್ದು ಗೌತಮನನ್ನು ಕುರಿತು "ಆಹಾ! ಲೇಸನಾಡಿದಿರಿ ಗೌತಮರೇ, ದೋಷರಹಿತರಾದ ನೀವೂ ಹೀಗೆ ಪಕ್ಷಪಾತದಿಂದ ನುಡಿಯಬಹುದೇ. ಶಿವಶಿವಾ!

ಎಲ್ಲ ಧರ್ಮಗಳ ಸಾರವನ್ನೂ ಅರಿತ ನೀವು ಹೀಗೆ ಉಪೇಕ್ಷಿಸಿ ನುಡಿಯುವುದು ಸರಿಯೇ? ಅಲ್ಲ, ನೆಲ್ಲು ನಾನಿರುವಾಗ, ಗೋಧಿ ಮುಂತಾದ ಎಲ್ಲ ಧಾನ್ಯಗಳೂ ಇಲ್ಲಿರುವಾಗ ಇವರೆಲ್ಲರಲ್ಲಿ ಈ ರಾಗಿಯೇ ಶ್ರೇಷ್ಠ ಎಂದು ಹೇಳುವುದು ಎಷ್ಟು ಸರಿ. ಇದಾವ ನ್ಯಾಯ?" ಎಂದು ಗೌತಮನನ್ನು ಪ್ರಶ್ನಿಸುತ್ತದೆ ನೆಲ್ಲು.

ವಿವಾದ ಸಂಪಾದಿಸಿ

  • ಕನಕದಾಸರ "ರಾಮಧಾನ್ಯ ಚರಿತ್ರೆ" - ೨

ಏನೆಲವೊ ನರೆದಲೆಗ ನೀನು ಸ
ಮಾನನೇ ಎನಗಿಲ್ಲಿ ನಮ್ಮನು
ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ
ಜಾನಕೀಪತಿ ಸನಿಹದಲಿ ಕುಲ
ಹೀನ ನೀನಪ್ರತಿಷ್ಠ ಸುಡು ಮತಿ
ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ ||೩೬||

ಲೋಕದಲಧಿಕ ಭೋಜನವಿದೆಂ
ದಾಕೆವಾಳರು ಬುಧರು ಜರೆದು ನಿ
ರಾಕರಿಸಿ ಬಿಡಲಂತು ನೀ ಶೂದ್ರಾನ್ನವಾದೆಯಲ
ನಾಕನಿಳಯರು ಸಾಕ್ಷಿ ನಿನ್ನ ವಿ
ವೇಕಿಗಳು ಮೆಚ್ಚುವರೆ ಬಾಹಿರ
ಸಾಕು ನಡೆ ನೀನಾವ ಮಾನ್ಯನು ಕಡೆಗೆ ತೊಲಗೆಂದ ||೩೭||

  • ಭತ್ತವು ರಾಗಿಯನ್ನು ಹೀಯಾಳಿಸಿ ನುಡಿಯತೊಡಗಿತು : "ಏನೆಲವೋ ನರೆದೆಲಗ, ನೀನು ನನಗೆ ಸಮಾನನೇ ಇಲ್ಲಿ? ನಮ್ಮಿಬ್ಬರನ್ನು, ನಮ್ಮ ಹೆಚ್ಚು-ಕುಂದುಗಳನ್ನು ಕುರಿತು ಶ್ರೀರಾಮನು ಚೆನ್ನಾಗಿ ಬಲ್ಲ. ಜಾನಕೀಪತಿಯು ತಾನಿರುವ ಈ ಸಭೆಯಲ್ಲಿ ಕುಲಹೀನನಾದ, ಮತಿಹೀನನಾದ ನೀನೂ ಇರುವೆಯಲ್ಲ. ಅಬ್ಬಾ! ಲೋಕದಲ್ಲಿ ನೀನು ಮಹಾಭೋಜನವೆಂದೇ ವೀರರೂ, ವಿದ್ವಾಂಸರೂ ನಿನ್ನನ್ನು ನಿರಾಕರಿಸಿದರಲ್ಲವೇ? ಅದಕ್ಕೇ ನೀನು ಶೂದ್ರಾನ್ನವಾದೆ ಅಲ್ಲವೇ. ಆ ದೇವತೆಗಳೇ ಸಾಕ್ಷಿ, ವಿವೇಕಿಗಳೆನಿಸಿಕೊಂಡವರು ಯಾರಾದರೂ ನಿನ್ನನ್ನು ಮೆಚ್ಚುವರೇ? ಛಿ! ಬಾಹಿರ, ಇಲ್ಲಿ ನೀನಾವ ಮಾನ್ಯನೋ..ಸಾಕು ತೊಲಗು ಇಲ್ಲಿಂದ."

ಕ್ಷಿತಿಯಮರರುಪನಯನದಲಿ ಸು
ವ್ರತ ಸುಭೋಜನ ಪರಮ ಮಂತ್ರಾ
ಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ
ಕ್ರತುಗಳೆಡೆಯೊಳಗರಮನೆಯಲಿ
ಪ್ರತಿದಿನವು ರಂಜಿಸುತ ದೇವರಿ
ಗತಿಶಯದ ನೈವೇದ್ಯ ತಾನಹೆನೆಂದನಾ ವ್ರಿಹಿಗ ||೩೮||

ಧರಣಿಯಮರರು ಮಂತ್ರತಂತ್ರೋ
ಚ್ಛರಣೆಯಲಿ ಹಸ್ತಾಂಬುಜದಿ ಮಿಗೆ
ಹರಸಿ ಕೊಡಲಕ್ಷತೆಯ ಮಂಡೆಯೊಳಾಂತ ಮಹಿಮರಿಗೆ
ದುರಿತ ದುಃಖ ವಿನಾಶ ಮಂಗಳ
ಕರವಹುದು ತಾನೀವೆ ಸಂತತ
ಸಿರಿಯ ಸಂಪತ್ತಾಯುವನು ಕೇಳೆಂದನಾ ವ್ರಿಹಿಗ ||೪೧||

"ಬ್ರಾಹ್ಮಣರ ಮನೆಗಳಲ್ಲಿನ ಉಪನಯನ, ವ್ರತ ಮುಂತಾದ ಸಮಾರಂಭಗಳಲ್ಲಿ, ಮಂತ್ರಾಕ್ಷತೆಗಳಲ್ಲಿ, ಶುಭಕಾರ್ಯಗಳಲ್ಲಿ, ಹಿರಿಯರಲ್ಲಿ, ಯಜ್ಞ-ಯಾಗಾದಿಗಳು ನಡೆಯುವಲ್ಲಿ, ಅರಮನೆಯಲ್ಲಿ - ಹೀಗೆ ಎಲ್ಲ ಕಡೆಯೂ ನಾನು ಇರಲೇಬೇಕು. ಅಷ್ಟೇನು, ದೇವರಿಗೆ ಪ್ರಿಯವಾದ ನೈವೇದ್ಯಕ್ಕೂ ನಾನಿರಲೇಬೇಕು. ಬ್ರಾಹ್ಮಣರು ಮಂತ್ರತಂತ್ರೋಚ್ಛಾರಣೆಯಲ್ಲಿ ತಮ್ಮ ಕೈಯಲ್ಲಿ ತಳೆದು, ಹರಸಿ ಕೊಡುವ ಮಂತ್ರಾಕ್ಷತೆಯು ನಾನು. ಆ ಮಂತ್ರಾಕ್ಷತೆಯನ್ನು ತಮ್ಮ ತಲೆಯ ಮೇಲೆ ತಳೆದ ಮಹನೀಯರಿಗೆ ಅವರ ದುಃಖ-ದುರಿತಗಳೆಲ್ಲವನ್ನೂ ಕಳೆದು, ಅವರಿಗೆ ಸಿರಿ ಸಂಪತ್ತನ್ನೂ, ಆಯುರಾರೋಗ್ಯವನ್ನೂ ತಂದುಕೊಡುವವನು ನಾನೇ"

ಪರಿಮಳದ ಚಂದನದ ತರುವಿಗೆ
ಸರಿಯೆ ಒಣಗಿದ ಕಾಷ್ಠ ಗೋವದು
ಕರೆದ ಹಾಲಿಗೆ ಕುರಿಯ ಹಾಲಂತರವೆ ಭಾವಿಸಲು
ಪರಮ ಸಾಹಸಿ ವೀರ ಹನುಮಗೆ
ಮರದ ಮೇಲಣ ಕಪಿಯು ತಾನಂ
ತರವೆ ಫಡ ನೀನೆನಗೆ ಸರಿಯೇ ಭ್ರಷ್ಟ ತೊಲಗೆಂದ ||೪೨||

ಸುರನದಿಗೆ ತಾ ಸರಿಯೆ ಕಾಡೊಳು
ಹರಿವ ಹಳ್ಳದ ನೀರು ತಾ ಗರುಡನ
ಮರಿಗೆ ಹದ್ದಂತರವೆ ಹಂಸಗೆ ಬಕನು ಹೋಲುವುದೆ
ಸರಸ ಮರಿ ಕೋಗಿಲೆಗೆ ವಾಯಸ
ನಣಕಿಸುವ ತೆರನಾಯ್ತು ಸಾಕಿ
ನ್ನರದೆಲಗ ನೀನಾವ ಮಾನ್ಯನು ಕಡೆಗೆ ತೊಲಗೆಂದ ||೪೩||

  • "ಪರಿಮಳಭರಿತವಾದ ಚಂದನದ ಮರಕ್ಕೆ ಒಣಗಿದ ಕಟ್ಟಿಗೆಯು ಸಮವೇ? ಹಸುವು ಕರೆದ ಹಾಲಿಗೆ ಕುರಿಯ ಹಾಲೇನು ಸಮವೇ? ಅಲ್ಲ, ಪರಮ ಸಾಹಸಿ ವೀರ ಹನುಮನಿಗೆ ಮರದ ಮೇಲಿನ ಕಪಿಯು ಸರಿಸಮವೇ? ಛಿ! ನನಗೆ ನೀನು ಸರಿಸಾಟಿಯೇ! ಭ್ರಷ್ಟ, ತೊಲಗು ಇಲ್ಲಿಂದ.

ದೇವನದಿಗೆ ಕಾಡಿನಲ್ಲಿ ಹರಿಯುವ ಹಳ್ಳದ ನೀರು ಸಾಟಿಯಾಗಬಲ್ಲದೇ!? ಗರುಡನ ಮರಿಗೆ ಹದ್ದು ಸಮನಾದುದೇ? ಹಂಸಕ್ಕೆ ಕೊಕ್ಕರೆಯು ಸಮವೇ? ಕೋಗಿಲೆಯ ಮರಿಯನ್ನು ಕಾಗೆಯು ಅಪಹಾಸ್ಯ ಮಾಡುವ ತೆರವಾಯ್ತಿದು (ನಿನ್ನನ್ನೂ ನನ್ನನ್ನೂ ಸಮಾನರೆಂದು ಹೋಲಿಸುವುದು). ಎಲವೋ ರಾಗಿ, ಇಲ್ಲಿ ನೀನಾವ ಮಾನ್ಯನೋ! ತೊಲಗು, ತೊಲಗು ಇಲ್ಲಿಂದ"

ನುಡಿಯ ಕೇಳುತ ಕನಲಿ ಕಂಗಳು
ಕಿಡಿಮಸಗಿ ಖತಿಗೊಂಡು ನುಡಿದನು
ಸಿಡಿಲ ಘರ್ಜನೆಯಂತೆ ಸಭೆಯಲಿ ಜರೆದನಾ ವ್ರಿಹಿಯ
ನುಡಿಗೆ ಹೇಸದ ಭಂಡ ನಿನ್ನೊಳು
ಕೊಡುವರೇ ಮಾರುತ್ತರವ ಕಡು
ಜಡನಲಾ ನಿನ್ನೊಡನೆ ಮಾತೇಕೆಂದ ನರೆದೆಲಗ ||೪೪||

ಸತ್ಯಹೀನನು, ಬಡವರನು ಕ
ಣ್ಣೆತ್ತಿ ನೋಡೆ ಧನಾಢ್ಯರನು ಬೆಂ
ಬತ್ತಿ ನಡೆವ ಅಪೇಕ್ಷೆ ನಿನ್ನದು ಹೇಳಲೇನದನು
ಹೆತ್ತ ಬಾಣಂತಿಯರು, ರೋಗಿಗೆ
ಪತ್ಯ ನೀನಹೆ. ಹೆಣದ ಬಾಯಿಗೆ
ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವೆಂದ ||೪೫||

  • ಭತ್ತವು ನುಡಿದ ಈ ಎಲ್ಲ ಅವಮಾನಕರ ಮಾತುಗಳನ್ನೂ ಕೇಳಿ ರಾಗಿಗೆ ಅಭಿಮಾನಭಂಗವಾಯಿತು. ಹಾಗೆಯೇ ಕೋಪವೂ ಉಕ್ಕಿತು. ಅದಕ್ಕೇ ಕೋಪದಿಂದ ಎದ್ದು ನಿಂತು ಸಭೆಯಲ್ಲಿ ರಾಗಿಯು ನುಡಿಯತೊಡಗಿತು : "ಛಿ! ನುಡಿಗೆ ಹೇಸದ ನಿನ್ನಂತಹ ಭಂಡರಿಗೆ ಮಾರುತ್ತರವ ಕೊಡುವರೇ ಯಾರಾದರೂ! ಕಡು ಮೂರ್ಖ ನಿನ್ನೊಡನೆ ಮಾತೇಕೆ.. ಸತ್ಯಹೀನನು ನೀನು. ಬಡವರನ್ನು ನೀನು ಕಣ್ಣೆತ್ತಿಯೂ ನೋಡುವುದಿಲ್ಲ, ಆದರೆ ಶ್ರೀಮಂತರನ್ನು ಮಾತ್ರ ಬೆಂಬತ್ತಿಯೇ ಇರುವ ಅಪೇಕ್ಷೆ ನಿನ್ನದು. ಇನ್ನು ಹೆಚ್ಚಿಗೆ ಹೇಳುವುದೇನು, ಹೆತ್ತ ಬಾಣಂತಿಯರಿಗೆ, ರೋಗಿಗಳಿಗೆ ನೀನು ವರ್ಜ್ಯನಲ್ಲವೇ.. ಹೆಣದ ಬಾಯಿಗೆ ಹಾಕುವ ತುತ್ತು ನೀನಲ್ಲವೇ. ಆಹಾ! ನಿನ್ನ ಜನ್ಮ ಅದೆಷ್ಟು ನಿರರ್ಥಕವೊ!"

ಮಳೆದೆಗೆದು ಬೆಳೆಯಡಗಿ ಕ್ಷಾಮದ
ವಿಲಯಕಾಲದೊಳನ್ನವಿಲ್ಲದೆ
ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ
ಎಲವೊ ನೀನೆಲ್ಲಿಹೆಯೊ ನಿನ್ನಯ
ಬಳಗವದು ತಾನೆಲ್ಲಿಹುದು ಈ
ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ ||೪೭||

ಬಲ್ಲಿದರು ಬರೆ ಬಡವರಲಿ ನಿ
ನ್ನಲ್ಲಿಯುಂಟು ಉಪೇಕ್ಷೆ, ನಮ್ಮಲಿ
ಸಲ್ಲದೀ ಪರಿ ಪಕ್ಷಪಾತವದಿಲ್ಲ. ಭಾವಿಸಲು
ಬಲ್ಲಿದರು ಬಡವರುಗಳೆನ್ನದೆ
ಎಲ್ಲರನು ರಕ್ಷಿಸುವೆ ನಿರ್ದಯ
ನಲ್ಲ ತಾ ನಿನ್ನಂತೆ ಎಲೆ ಕುಟಿಲಾತ್ಮ ಹೋಗೆಂದ ||೪೮||

ಏನಿಹಿರಿ ಹಿರಿಕಿರಿದ ನುಡಿಯದೆ
ಮೌನದೀಕ್ಷಿತರಾದಿರಲ ಕಂ
ಡೆನು ಮುರಿದಾಡುವಿರಸಾಧ್ಯವೊ ಸಾಧ್ಯವೋ ನಿಮಗೆ
ಈ ನಪುಂಸಕನಲಿ ನಿರಂತರ
ವೇನು ಕಾರಣ ವಾದವಿದು ನಮ
ಗೇನು ಬುದ್ಧಿಯನರುಹುವಿರಿ ಪೇಳೆಂದ ನರೆದೆಲಗ ||೫೨||

  • "ಮಳೆಯೇ ಇಲ್ಲದೆ, ಬರಗಾಲ ಬಂದೊದಗಿದಾಗ ಅನ್ನವಿಲ್ಲದೆ ಅಳಿಯುವ ಪ್ರಾಣಿಗಳನ್ನು ನಾನು ಸಲಹುತ್ತೇನೆ(ಅವರಿಗೆ ನಾನು ಆಹರವಾಗಿ ಒದಗುತ್ತೇನೆ). ಅಂತಹ ವಿಲಯಕಾಲದಲ್ಲಿ ನೀನೆಲ್ಲಿರುವೆಯೋ? ನಿನ್ನಂತಹ (ಇಲ್ಲಿರುವ) ಧಾನ್ಯಗಳೆಲ್ಲಿರುತ್ತೀರೋ.. ಹೀಗಿರಲು ನನಗೆ ನಿಮ್ಮಂತಹ ಹುಲುಧಾನ್ಯಗಳು ನನಗೆ ಸರಿಸಾಟಿಯಾಗಬಲ್ಲವೇ?

ಶ್ರೀಮಂತರು ಬಂದರೆ ನಿನ್ನಲ್ಲಿ ಬಡವರನ್ನು ಕಂಡರೆ ಉಪೇಕ್ಷೆ ಮೂಡುತ್ತದೆ. ಆದರೆ ನಾನು ಹಾಗೆಲ್ಲ ಪಕ್ಷಪಾತ ಮಾಡುವವನಲ್ಲ. ನಾನು ಬಡವ-ಬಲ್ಲಿದ ಎಂಬ ಭೇದವೆಣಿಸದೆ ಎಲ್ಲರನ್ನೂ ರಕ್ಷಿಸುವೆ. ನಿನ್ನಂತೆ ನಾನು ನಿರ್ದಯನಲ್ಲ , ಕೇಳೆಲವೋ ಕುಟಿಲಾತ್ಮ." "ಸಭೆಯೊಳಗಿನವರೆಲ್ಲ ಏಕೆ ನುಡಿಯದೆ ಹೀಗೆ ಮೌನದೀಕ್ಷಿತರಾದಿರಿ. ಈ ಮೌನವನ್ನು ಮುರಿದು ನುಡಿಯುವುದು ಸಾಧ್ಯವೋ ಅಸಾಧ್ಯವೋ ನಿಮಗೆ? ಸುಮ್ಮನೆ ಹೀಗೆ ಈ ನಪುಂಸಕನ ಜೊತೆಗೆ ನನಗೆ ಇದಾವ ವಾದ! ಈ ಬಗ್ಗೆ ನೀವು ಯಾವ ಮಾತನ್ನು ಹೇಳಬಯಸುತ್ತೀರಿ, ನುಡಿಯಿರಿ"

ಮಸೆದುದಿತ್ತಂಡಕ್ಕೆ ಮತ್ಸರ
ಪಿಸುಣ ಬಲರತಿ ನಿಷ್ಠುರರು ವಾ
ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ
ಹಿಸುಣರಿವದಿರ ಮತ್ಸರವ ಮಾ
ಣಿಸುವ ಹದನೇನೆನುತ ಯೋಚಿಸಿ
ದ ಸುರಮುನಿಪರ ನೋಡೆ ಗೌತಮ ಮುನಿಪನಿಂತೆಂದ ||೫೩||

ರಾಮನ ಮಧ್ಯಸ್ತಿಕೆ - ಪರೀಕ್ಷೆ ಸಂಪಾದಿಸಿ

  • ಹೀಗೆ ಭತ್ತ ಹಾಗೂ ರಾಗಿಯ ನಡುವೆ ವಾದ ವಾಗ್ವಾದ ನಡೆಯುತ್ತಿರುವುದನ್ನು ಕಂಡು ರಾಮನು ಇವರಿಬ್ಬರ ನಡುವಿನ ಮತ್ಸರವನ್ನು ಮಾಣಿಸುವ ಬಗೆ ಹೇಗೆ ಎಂದು ಯೋಚಿಸಿ :

ಅರಸುಗಳು ನಾವೆಲ್ಲ ಭೂಮೀ
ಸುರರು ನೆರೆದಿಹ ದಾನವರು ವಾ
ನರರು ನಮಗೀ ನ್ಯಾಯವನು ಪರಿಹರಿಸಲಳವಲ್ಲ
ಕರಸುವೆವು ಹರಿಹರವಿರಿಂಚಾ
ದ್ಯರನಯೋಧ್ಯೆಗೆ ಅವರ ಗುಣವಾ
ಧರಿಸಿ ಪೇಳ್ವರು ನಯದೊಳೆಂದನು ರಾಮ ನಸುನಗುತ ||೫೪||

ಪರಮ ಧಾನ್ಯದೊಳಿಬ್ಬರೇ ಇವರಿರಲಿ
ಸೆರೆಯೊಳಗಾರು ತಿಂಗಳು
ಹಿರಿದು-ಕಿರಿದೆಂಬಿವರ ಪೌರುಷವರಿಯಬಹುದಿನ್ನು
ಪುರಕೆ ಗಮನಿಸಿ ನಾವು ನಿಮ್ಮನು
ಕರೆಸುವೆವು ಕೇಳೆನುತಯೋಧ್ಯಾ
ಪುರಿಗೆ ಪಯಣವ ಮಾಡಹೇಳಿದನಾ ವಿಭೀಷಣಗೆ ||೫೫||

  • "ಇಲ್ಲಿ ನೆರೆದಿರುವ ಅರಸುಗಳು, ಬ್ರಾಹ್ಮಣರು, ದಾನವ ಹಾಗೂ ವಾನರ ವೀರರು - ನಮಗೆ ಈ ನ್ಯಾಯವನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಆ ಹರಿಹರ ಬ್ರಹ್ಮರನ್ನೇ ಅಯೋಧ್ಯೆಗೆ ಕರೆಸುತ್ತೇವೆ. ಅವರೇ ಈ ಸಮಸ್ಯೆಯನ್ನು ಪರಿಹರಿಸಲಿ"

"ಇಲ್ಲಿರುವ ಇವಿಷ್ಟೂ ಧಾನ್ಯಗಳ ಪೈಕಿ ಇವರಿಬ್ಬರೇ (ಭತ್ತ ಹಾಗೂ ರಾಗಿ) ಇನ್ನು ಆರು ತಿಂಗಳವರೆಗೂ ಸೆರೆಯೊಳಗಿರಲಿ. ಆಮೇಲೆ ಇವರನ್ನು ಅಯೋಧ್ಯೆಗೆ ಕರೆಸುತ್ತೇವೆ. ಇವರಿಬ್ಬರಲ್ಲಿ ಹೆಚ್ಚು ಯಾರು ಕಡಿಮೆ ಯಾರು ಎಂದು ಆ ನಂತರ ತಿಳಿಯಬರುತ್ತದೆ." ’ಇನ್ನು ಅಯೋಧ್ಯೆಗೆ ಹೊರಡೋಣ,’ ಎಂದು ಪಯಣಕ್ಕೆ ಸಿದ್ಧತೆಗಳನ್ನು ಮಾಡಲು ವಿಭೀಷಣನಿಗೆ ತಿಳಿಸುತ್ತಾನೆ ರಾಮ.

ರಾಮನ ಅಯೋದ್ಯಾ ಪಯಣ ಸಂಪಾದಿಸಿ

  • ಅಂತೆಯೇ ದಾನವ ಹಾಗೂ ವಾನರ ಸೇನೆಯೊಡನೆ ರಾಮ ಲಕ್ಷ್ಮಣಾದಿಗಳು ಅಯೋಧ್ಯೆಯೆಡೆಗೆ ಪ್ರಯಾಣಿಸುತ್ತಾರೆ.

ಹೊಲಬುದಪ್ಪದೆ ಸಕಲ ನಾಯಕದಳ ಸಹಿತ ಮುಂಬಟ್ಟೆಯಲಿ ಮುನಿಕುಲದ ದರುಶನವಾಗಲಾಶೀರ್ವಾದವನು ಕೊಂಡು ಬಳಿವಿಡಿದು ಬರೆ ಜನರ ಪಾಪವ ಕಳೆದು ಸಲಹುವ ತುಂಗಭದ್ರೆಯ ಕಳೆದುಬಂದರು ಭಾರದ್ವಾಜನಾಶ್ರಮಕೆ.

  • ಹೀಗೆ ಹೊರಟ ಶ್ರೀರಾಮನ ಪರಿವಾರವು ದಾರಿಯ ಮಧ್ಯದಲ್ಲಿ ಕಂಡ ಮುನಿವರರ ದರ್ಶನವನ್ನೂ, ಆಶೀರ್ವಾದವನ್ನೂ ಪಡೆದು, ಪಾಪವಿನಾಶಿನಿಯಾದ ತುಂಗಭದ್ರೆಯನ್ನು ದಾಟಿ ಭಾರದ್ವಾಜ ಮುನಿಯ ಆಶ್ರಮವಿರುವ ವನವನ್ನು ತಲುಪಿತು.
  • "...ಸುತ್ತಲು ಕರಿ-ತುರಗ-ರಥ-ಪಾಯ್ದಳವು ಸಂದಣಿಸಿ ನಿಂದಿರಲು, ಮೊರೆವ ರಭಸವ ಕಂಡು ಸುರಮುನಿವರರ್ ’ಇದೇನೋ!’ ಎನುತ ನಿಜಮಂದಿರವ ಹೊರವಂಟು ಅಲ್ಲಿ ಕೇಳ್ದರು ರಾಮನತಿಶಯವ."

ಉರಗಮಾಲಿ, ಮತಂಗ, ಗಾರ್ಗ್ಯಾಂ
ಗಿರಸ, ಗಾಲವ, ಕಣ್ವ, ಜಯಮುನಿ
ಪರಶುರಾಮ, ಪರಾಶ, ಕೌಶಿಕ, ದಾಲ್ಬ್ಯ ಮೊದಲಾದ
ವರಮುನಿಗಳೊಡನೈದಿ ಬಂದನು
ಭರದಿ ಭಾರದ್ವಾಜ ಮುನಿ ರಘು
ವರನ ಕಾಣಿಸಿಕೊಂಡು ಹರಸಿದರತುಳ ವಿಭವದಲಿ.

  • ಅಂಗೀರಸ, ಗಾಲವ, ಪರಾಶರ ಮೊದಲಾದ ಮುನಿಗಳೊಡನೆ ಬಂದ ಭಾರದ್ವಾಜ ಮುನಿಯು ರಾಮನನ್ನು ಕಂಡನು. ಅವರೆಲ್ಲರೂ ರಾಮನನ್ನು ಮನಸಾರೆ ಹರಸಿದರು.
  • ಬಂದ ಮುನಿಗವನೀಶ ವಂದಿಸಿ ನಿಂದು, ಕರಗಳ ಮುಗಿದು ವಿನಯದೊಳೆಂದ - "ನಿಮ್ಮ ಸದಾಗ್ನಿಹೋತ್ರ, ಸುಯಾಗ ಕರ್ಮಗಳು, ಸಂದ ಜಪ-ತಪಗಳು ಸುರಕ್ಷಿತದಿಂದ ಮೆರೆವುದೆ? ದಾನವರ ಭಯದಿಂದ ದುರ್ಘಟವಿಲ್ಲಲಾ, ಮುನಿನಾಥ?" ಹೇಳೆಂದ.
  • (ಭಾರದ್ವಾಜ ಮುನಿ) : "ದಶರಥಾತ್ಮಜ, ನೀನು ಲಂಕೆಯೊಳ್ ಅಸುರ ವೀರರು - ಕುಂಭಕರ್ಣನು, ದಶಶಿರನು ಮೊದಲಾದ ದುರ್ಜನರೆಲ್ಲರನು ಮಡುಹಿ, ಅಸುರನನುಜಗೆ(ವಿಭೀಷಣನಿಗೆ) ಅಚಲ ಪದವಿಯನ್ ಒಸೆದು ಸಲಹಿದೆ. ನಮ್ಮ ಕರುಣಾರಸದಿ ಪಾಲಿಸೆ ಬಂದೆ"ಯೆಂದುಪಚರಿಸಿದನು ನೃಪನ.
  • ಹೀಗೆ ರಾಮ-ಭಾರದ್ವಾಜರು ಮಾತನಾಡುತ್ತಿರಲು, ನಂತರದಲ್ಲಿ ರಾಮನು ಹನುಮನನ್ನು ಕರೆದು, ಭರತನನ್ನು ಕಂಡು ತಾವೆಲ್ಲ ಅಯೋಧ್ಯೆಗೆ ತೆರಳುತ್ತಿರುವುದನ್ನು ತಿಳಿಸಿ ಅವನನ್ನು ಸಂತೈಸು ಎಂದು ಕಳುಹಿಸುತ್ತಾನೆ. ರಾಮನ ಆಣತಿಯನ್ನು ಹೊತ್ತ ಹನುಮ ಭರತನನ್ನು ಭೇಟಿಯಾಗಲು ಹೊರಡುತ್ತಾನೆ.
  • ಹಾಗೆ ಹೊರಟ ಹನುಮನು ಹರಿಯುವ ಗಂಗಾನದಿಯನ್ನು ದಾಟಿ ಶೃಂಗಭೇರಿ ಎಂಬ ಪುರವನ್ನು ಹೊಕ್ಕು, ಅಲ್ಲಿ ಗುಹನನ್ನು ಕಂಡು, ಅವನಿಗೆ ರಾಮನು ತನ್ನನ್ನು ಕಳುಹಿಸಿದ ಕಾರಣವನ್ನು ಅರುಹುತ್ತಾನೆ.
  • ಗುಹನು ಹನುಮಂತನನ್ನು ಪ್ರೀತಿಯಿಂದ ಸ್ವಾಗತಿಸಿ, ಸತ್ಕರಿಸಿ, ಅವನಿಗೆ ಭರತನು ನಂದಿಗ್ರಾಮದಲ್ಲಿರುವ ವಿಷಯವನ್ನು ತಿಳಿಸುತ್ತಾನೆ.
  • "...ಮಾರುತಿ ಮುಂದೆ ಪಥವಿಡಿದು ಬರುತ ಮಾರ್ಗಾಂತರದಿ ಕಾನನ ಗಿರಿ ಶಿಖರಗಳ ಕಳೆದು ಬರೆ ವಿಸ್ತರದ ನಂದೀಗ್ರಾಮವನು ಕಂಡಲ್ಲಿ ಮನನಲಿದು..

ಬಂದು ಭರತನ ಕಂಡು ನಮಿಸಿದ
ಡೆಂದ ನೀನಾರಿಲ್ಲಿಗಿಂದೈ
ತಂದ ಕಾರಣವೇನು? ನಿನ್ನಭಿದಾನವೇನೆನಲು
ನಿಂದು ಕೈಗಳ ಮುಗಿದು ನಸುನಗೆ
ಯಿಂದ ನುಡಿದನು ಹನುಮ ತಾ ರಘು
ನಂದನನ ಸೇವಕನು ಕಳುಹಿದ ದೇವ ನಿಮ್ಮಡಿಗೆ ||೭೮||

ರಾವಣನ ಸಂಹರಿಸಿ ಲಂಕೆಯ
ನಾ ವಿಭೀಷಣಗಿತ್ತು ಸೀತಾ
ದೇವಿ ಲಕ್ಷ್ಮಣ ಸಹಿತ ಭಾರದ್ವಾಜನಾಶ್ರಮಕೆ
ದೇವ ಬಂದನು ಸಕಲ ವಿಭವದಿ
ನೀವು ಚಿತ್ತದೊಳವಧರಿಸಿಯೆನೆ
ಪಾವಮಾನಿಯ ನುತಿಸಿ ತಕ್ಕೈಸಿದನು ಭರತೇಂದ್ರ ||೭೯||

  • ನಂದೀಗ್ರಾಮವನ್ನು ತಲುಪಿದ ಹನುಮನು ಭರತನನ್ನು ಕಂಡಾಗ, ಭರತನು ಅವನನ್ನು ’ನೀನಾರು? ನೀನು ಇಲ್ಲಿಗೆ ಬಂದ ಕಾರಣವೇನು? ನಿನ್ನ ಹೆಸರೇನು?’ ಹೀಗೆ ಮುಂತಾಗಿ ಪ್ರಶ್ನಿಸಲು, ಹನುಮನು ತಾನು ರಾಮನ ಸೇವಕನೆಂದೂ ತನ್ನನ್ನು ರಾಮನು ಭರತನ ಬಳಿಗೆ ಕಳುಹಿಸಿದ ಕಾರಣವನ್ನೂ ತಿಳಿಸುತ್ತಾನೆ.
  • "ರಾವಣನನ್ನು ಸಂಹರಿಸಿ, ಲಂಕೆಯನ್ನು ವಿಭೀಷಣನಿಗೆ ವಹಿಸಿದ ನಂತರ ಶ್ರೀರಾಮನು ಸೀತಾದೇವಿ ಹಾಗೂ ಲಕ್ಷ್ಮಣನೊಡನೆ ಭಾರದ್ವಾಜ ಮುನಿಯ ಆಶ್ರಮಕ್ಕೆ ಆಗಮಿಸಿದ್ದಾನೆ.."ಎಂದು ತಿಳಿಸಿದ ಹನುಮನನ್ನು ಭರತನು ಪ್ರೀತಿಯಿಂದ ಉಪಚರಿಸುತ್ತಾನೆ.
  • ಅಂತೆಯೇ ಎಲ್ಲರೊಡಗೂಡಿ ಶ್ರೀರಾಮನು ಮುಂದೆ ಅಯೋಧ್ಯೆಗೆ ಆಗಮಿಸಲಿರುವುದಾಗಿ ಹನುಮನು ಭರತನಿಗೆ ತಿಳಿಸುತ್ತಾನೆ.

ಅಯೋಧ್ಯೆಗೆ ರಾಮನ ಆಗಮನ ಮತ್ತು ಪಟ್ಟಾಭಿಷೇಕ ಸಂಪಾದಿಸಿ

ಹರುಷ ಹೆಚ್ಚಿದ ಮನದಿ ತಮ್ಮನ
ಕರೆದು ಶತ್ರುಘ್ನನನಯೋಧ್ಯಾ
ಪುರಿಗೆ ಕಳುಹಿದ - "ಜನನಿಯರಿಗೀ ವಾರ್ತೆಯೆಲ್ಲವನು
ಅರುಹಿ ಬಾ"ಯೆನಲಗ್ರಜನ ಸಿರಿ
ಚರಣಕಭಿಮುಖನಾಗಿ ವಂದಿಸಿ
ಹರುಷ ಮಿಗೆ ಹೊರವಂಟು ಹೊಕ್ಕನಯೋಧ್ಯಾಪುರವರವ -೮೦

  • ಹನುಮಂತನ ಮಾತನ್ನು ಕೇಳಿದ ಭರತನು ಅತಿ ಸಂತಸಗೊಂಡು ಶತ್ರುಘ್ನನನ್ನು ಕರೆದು ಈಗಲೇ ಅಯೋಧ್ಯೆಗೆ ಹೋಗಿ ತಾಯಿಯರಿಗೆ ರಾಮನ ಆಗಮನದ ವಿಷಯವನ್ನು ತಿಳಿಸಿ ಬಾ ಎಂದು ಹೇಳುತ್ತಾನೆ. ಅಂತೆಯೇ ಆಗಲೆಂದು ಶತ್ರುಘ್ನನು ಭರತನ ಕಾಲುಗಳಿಗೆ ನಮಸ್ಕರಿಸಿ ಅಯೋಧ್ಯೆಗೆ ಹೊರಡುತ್ತಾನೆ.

ಜನನಿಯರು ಮೂವರಿಗೆ ನಮಿಸಿದ
ತನುಜನನು ತಕ್ಕೈಸಿ ಪೇಳಿದ
ನಿನಕುಲಾನ್ವಯ ಬಂದ ಭಾರದ್ವಾಜನಾಶ್ರಮಕೆ
ಎನಲು ಹರುಷಾನಂದಮಯರಸ
ಹೊನಲಿನೊಳಗೋಲಾಡಿದರು ಮುಖ
ವನಜವರಳಿತು ಜನನಿಯರಿಗವನೀಶ ಕೇಳೆಂದ -೮೨

  • ಶತ್ರುಘ್ನನನು ಅಯೋಧ್ಯೆಯನ್ನು ತಲುಪಿ, ಕೌಸಲ್ಯೆ-ಸುಮಿತ್ರೆ-ಕೈಕೆಯರಿಗೆ ನಮಿಸಿ ಶ್ರೀರಾಮನು ಭಾರದ್ವಾಜ ಋಷಿಯ ಆಶ್ರಮದಲ್ಲಿರುವನೆಂದೂ, ಶೀಘ್ರದಲ್ಲೇ ಸೀತಾರಾಮ ಲಕ್ಷ್ಮಣರೆಲ್ಲರೂ ಅಯೋಧ್ಯೆಗೆ ಬರಲಿರುವರೆಂದೂ ತಿಳಿಸಿದನು. ಈ ಶುಭ ಸಮಾಚಾರವನ್ನು ಕೇಳಿದ ಆ ಮೂರೂ ಜನರೂ ಸಂತಸದ ಸಾಗರದಲ್ಲಿ ತೇಲಾಡಿದರು.

ಕರೆಸಿದನು ಶತ್ರುಘ್ನ ಮಂತ್ರೀ
ಶ್ವರ ಸುಮಂತನ ಕೂಡೆ ನುಡಿದನು
ತರಣಿಕುಲ ರಾಜೇಂದ್ರನಣ್ಣನ ಬರವ ಕೇಳಿದೆವು
ಪುರವ ಶೃಂಗರಿಸಲ್ಲಿ ಕರಿ ರಥ
ತುರಗ ಮೇಳೈಸಿರಲಿ ಮೋದದ
ತರುಣಿಯರು ಸಂದಣಿಸಿ ನಡೆಯಲಿ ನೃಪನ ದರುಶನಕೆ -೮೩

ಎಂದು ಮಂತ್ರಿಯೊಳರುಹಿ ತಾ ನಿಜ
ಮಂದಿರಕೆ ನಡೆತಂದು ಪಯಣವ
ನಂದು ಮಾಡಿದ ಜನನಿ ಕೌಸಲದೇವಿ ಮೊದಲಾದ
ಇಂದುವದನೆಯರೇರುತಿರ್ದರು
ಅಂದಣವ ಸೊಸೆಯರು ವರೂಥದಿ
ಹಿಂದುಮುಂದಿಟ್ಟಣಿಸಿ ನಡೆದುದು ಸತಿಯರೊಗ್ಗಿನಲಿ -೮೪

  • ಆ ನಂತರ ಶತ್ರುಘ್ನನನು ಮಂತ್ರಿ ಸುಮಂತನನ್ನು ಕರೆಸಿ, ರಾಮನು ಅಯೋಧ್ಯೆಗೆ ಬರುತ್ತಿರುವುದನ್ನು ತಿಳಿಸಿ, ಅವರೆಲ್ಲ ಬರುವ ವೇಳೆಗೆ ಅಯೋಧ್ಯೆಯು ಸರ್ವವಿಧದಲ್ಲಿಯೂ ಸಿಂಗಾರಗೊಂಡಿರಬೇಕೆಂದು ತಿಳಿಸಿದನು.
  • ಹೀಗೆ, ಮಂತ್ರಿ ಸುಮಂತನೊಡನೆ ಮುಂದೆ ನಡೆಯಬೇಕಾದ ಕಾರ್ಯಗಳೆಲ್ಲದರ ಬಗ್ಗೆ ಚರ್ಚಿಸಿದ ನಂತರ ಶತ್ರುಘ್ನನು ತನ್ನ ಮಂದಿರಕ್ಕೆ ತೆರಳಿದನು. ರಾಮನನ್ನು ಕಾಣುವ ತವಕದಿಂದ ಎಲ್ಲರೂ ಅವನನ್ನು ಬರಮಾಡಿಕೊಳ್ಳಲು ಹೊರಟರು. ಕೌಸಲ್ಯೆ ಮುಂತಾದವರೆಲ್ಲ ಅಂದಣವನ್ನೇರಿದರು(ಪಲ್ಲಕ್ಕಿ). ಸೊಸೆಯಂದಿರು ರಥದಲ್ಲಿ ಕುಳಿತರು. ಇವರಷ್ಟೇ ಅಲ್ಲದೇ ಹಲವಾರು ಸಾಮಂತ ಅರಸರೂ, ಪುರಪ್ರಮುಖರೂ ರಾಮನನ್ನು ಎದಿರುಗೊಳ್ಳಲು ಹೊರಟರು.

ವಿವಿಧ ವಾದ್ಯ ಧ್ವನಿಯ ಕಹಳಾ
ರವದ ಸನ್ನೆಯೊಳೈದಿಬಹ ನೃಪ
ನಿವಹದಲಿ ಚತುರಂಗ ಸೇನೆಯ ಪದದ ಕೆಂಧೂಳಿ
ಭುವನವಾಕಾಶವನು ಮುಸುಕಿದ
ಡವನಿ ನೆಗ್ಗಲು ಬಲವು ಭಾ
ರವಣೆಯಲಿ ಹೊರವಂಟನಾ ಶತ್ರುಘ್ನನೊಲವಿನಲಿ -೮೬

  • ವಿವಿಧ ವಾದ್ಯಗಳ, ಕಹಳೆಗಳ ಧ್ವನಿಯು ಮೊಳಗುತ್ತಿರಲು, ಚತುರಂಗ ಸೇನೆಯ ನಡಿಗೆಯಿಂದೆದ್ದ ಕೆಂಧೂಳು ಆಕಾಶವೆಲ್ಲವನ್ನೂ ತುಂಬಿತೋ.! ಅವರೆಲ್ಲರ ಭಾರಕ್ಕೆ ಭೂಮಿಯೇ ಕುಗ್ಗಿತೇನೋ ಎನ್ನುವಂತೆ ಭಾಸವಾಗುತ್ತಿರಲು, ಸಮಸ್ತ ಪರಿವಾರದವರೊಡನೆ ಶತ್ರುಘ್ನನು ಹೊರಟನು.

ಪುರವ ಕಳೆದರು ಮುಂದೆ ಯಮುನಾ
ವರನದಿಯನುತ್ತರಿಸೆ ಪಯಣದಿ
ಮೆರೆವ ನಂದೀಗ್ರಾಮವನು ಕಂಡಲ್ಲಿಗೈತಂದು
ಭರತನೊಡಗೊಂಡಲ್ಲಿ ಹನುಮನ
ಕರುಣದಲಿ ಸತ್ಕರಿಸಿ ಮುಂದಕೆ
ತೆರಳಿದರು ಕೌಸಲ್ಯರಾಮನ ಕಾಣ್ಬ ತವಕದಲಿ -೮೮

ಇತ್ತ ಕೇಳೈ ಪಾಂಡವಾಗ್ರಜ ಸತ್ವ ಗುಣನಿಧಿ ರಾಮಚಂದ್ರನು ವತ್ತರಿಸಿಬರೆ ಕಂಡು ನಲಿಯುತ ಜಾನಕಿಯ ಕರೆದು ಇತ್ತ ನೋಡೆಲೆ ದೇವಿ ಭರತನ ಶತ್ರುಹರ ಶತ್ರುಘ್ನರಿವರು ಸ ಮಸ್ತ ಬಲಸಹಿತಿದಿರು ಬರುತಿದೆ ನೋಡು ನೀನೆಂದ -೮೯

ಎಂದು ತೋರಿಸಿ ಮನದ ಹರುಷದಿ ಮಿಂದು ಲಕ್ಷ್ಮಣನೊಡನೆ ಸತಿಸಹಿ ತಂದು ರಥವೇರಿದನು ರಾಮನೃಪಾಲನಾಕ್ಷಣಕೆ ಮುಂದೆ ನೆರೆದುದು ಬನದೊಳಗೆ ಮುದ ದಿಂದ ಪಾಠಕರುಗ್ಘಡಿಸೆ ನಲ ವಿಂದ ಮುನಿಕುಲದೊಡನೆ ತೆರಳಿದನಾ ಮಹೀಪಾಲ -೯೦ </poem>

  • ಶಾಂಡಿಲ್ಯ ಮುನಿಯು ಧರ್ಮರಾಯನಿಗೆ ಮುಂದೆ ನಡೆದ ಕಥೆಯನ್ನು ಹೇಳಿದರು - "ಇತ್ತ, ರಾಮನು ಭರತ-ಶತ್ರುಘ್ನರು ಸಮಸ್ತ ಪರಿವಾರದೊಡನೆ ಬರುತ್ತಿರುವುದನ್ನು ದೂರದಿಂದಲೇ ಕಂಡು, ಸೀತೆಯನ್ನು ಕರೆದು ಅವಳಿಗೂ ತೋರಿಸಿದನು"
  • ಆ ನಂತರ ರಾಮನು ಸೀತೆ ಹಾಗೂ ಲಕ್ಷ್ಮಣರೊಡನೆ ರಥವನ್ನೇರಿ ಭರತ-ಶತ್ರುಘ್ನರು ಬರುತ್ತಿದ್ದ ಕಡೆಗೆ ಹೊರಟನು. ವಿಭೀಷಣನ ದಾನವ ಸೇನೆಯೂ, ಸುಗ್ರೀವಾದಿ ವಾನರ ಸೇನೆಯೂ, ಹಾಗೂ ಅಲ್ಲಿದ್ದ ಮುನಿಗಳೂ ರಾಮನೊಂದಿಗೇ ಹೊರಟರು.
  • ಮುಂದೆ ರಾಮನ ಪರಿವಾರವೂ ಭರತನ ಪರಿವಾರವೂ ಎದುರಾದವು.

ಇಳಿದು ರಥವನು ನೃಪತಿ ಸೀತಾ
ಲಲನೆ ಲಕ್ಷ್ಮಣಸಹಿತ ತಾ ಕೌ
ಸಲೆ ಸುಮಿತ್ರಾದೇವಿ ಕೈಕೆಯ ಚರಣಕಭಿನಮಿಸಿ
ತೊಲಗಿದಸು ಬಂದಂತೆ ತನಯರ
ಚೆಲುವನೀಕ್ಷಿಸಿ ಜನನಿಯರು ಕಂ
ಗಳಲಿ ಜಲತುಂಬಿ ನೆರೆ ಬಿಗಿಯಪ್ಪಿದರು ನಂದನರ -೯೩

ವಿಮಲಮತಿ ಶತೃಘ್ನ ಭರತರು
ನಮಿಸಿದರು ರಘುಪತಿಗೆ ಲಕ್ಷ್ಮಣ
ನಮಿಸಿದನು ಭರತಂಗೆ ಭರತಾನುಜನ ಸಂತೈಸೆ
ಸಮತೆಯಲಿ ಸುಗ್ರೀವ ಜಾಂಬವ
ರಮಿತ ಬಲವನು ಜನನಿಯ ಚರಣ
ಕಮಲವನು ಕಾಣಿಸಿದ ಸುಕರದೊಳೂರ್ಮಿಳಾರಮಣ -೯೪

  • ಸೀತಾ ರಾಮ ಲಕ್ಷ್ಮಣರು ರಥದಿಂದಿಳಿದು ಕೌಸಲ್ಯೆ-ಸುಮಿತ್ರೆ-ಕೈಕೆಯರ ಕಾಲಿಗೆ ನಮಸ್ಕರಿಸಿದರು. ಅವರಾದರೋ ಹೋಗಿದ್ದ ಪ್ರಾಣವು ಮರಳಿ ಬಂದಿತೆಂಬ ಸಂತಸದಲ್ಲಿ ಮಕ್ಕಳನ್ನು ಹರಸಿ ತಬ್ಬಿದರು. ಭರತ-ಶತೃಘ್ನರು ರಾಮನಿಗೆ ನಮಿಸಿದರು. ಲಕ್ಷ್ಮಣನು ಭರತನಿಗೆ ನಮಿಸಿ ಶತೃಘ್ನನನ್ನು ಸಂತೈಸಿದನು. ಸುಗ್ರೀವ-ಜಾಂಬವಂತ ಮುಂತಾದವರೆಲ್ಲರೂ ರಾಜಮಾತೆಯರಿಗೆ ನಮಿಸಿದರು.
  • ದಶರಥನ ಮಡದಿಯರು ಸೀತೆಯನ್ನು ಕರೆದು ಪ್ರೀತಿಯಿಂದ ತಕ್ಕೈಸಿ "..ಬನದೊಳಗೆ ಬಲುನೊಂದಲಾ ಮಾನಿನಿಯೆ ಬಾರೌ ತಾಯೆ ಬಾರೆಂದೆನುತ ಕಂಬನಿದೊಡೆದು ಲಾಲಿಸಿದರು ಮಹಾಸತಿಯ."

ಭರತನು ಸೀತಾರಾಮ ಲಕ್ಷ್ಮಣಾದಿಯಾಗಿ ಎಲ್ಲರಿಗೂ ಮಣಿಭೂಷಣಾದಿಗಳನ್ನೂ, ರೇಷಿಮೆಯ ವಸ್ತ್ರಗಳನ್ನೂ ಕೊಟ್ಟು ಉಪಚರಿಸಿದನು. ವಿಭೀಷಣಾದಿಗಳಿಗೆ ಯುಕ್ತವಾದ ಕಾಣಿಕೆಗಳನ್ನು ಕೊಟ್ಟು ಸತ್ಕರಿಸಿದನು.

ಅರಸ ಕೇಳಲ್ಲಿಂದಯೋಧ್ಯಾ
ಪುರಿಗೆ ಬಂದನು ರಾಮನೃಪ ತ
ನ್ನರಸಿ, ಲಕ್ಷ್ಮಣ, ಭರತ-ಶತೃಘ್ನಾದಿ ಬಾಂಧವರ
ಪರುಠವಣೆಯಲಿ ರಾಜ ತೇಜದಿ
ಸುರರು ದುಂದುಭಿ ಮೊಳಗೆ ನಿಜಮಂ
ದಿರದ ಬಾಗಿಲ ಬಳಿಯ ನಿಂದನು ಮುನಿಪರೊಗ್ಗಿನಲಿ -೯೯

  • "..ರಥದಿಂದಿಳಿದು ರಘುನಂದನನು ಹೊಕ್ಕನು ರಾಜಭವನವ ತನತನಗೆ ಪುರಜನರು ಕಾಣಿಕೆಗೊಟ್ಟು ನಮಿಸಿದರು".

ಅಲ್ಲಿಂದ ರಾಮನು ಎಲ್ಲರೊಡಗೂಡಿ ಅಯೋಧ್ಯೆಯನ್ನು ತಲುಪಿ, ಪುರಜನರು ಕೊಟ್ಟ ಕಾಣಿಕೆಗಳನ್ನೆಲ್ಲ ಸ್ವೀಕರಿಸಿ ಅರಮನೆಗೆ ಬಂದನು. ಮಂಗಲಸ್ನಾನಾದಿಗಳನ್ನು ಮುಗಿಸಿ ರಾಮನು ತನ್ನ ತಮ್ಮಂದಿರೊಡಗೂಡಿ ಓಲಗಕ್ಕೆ ನಡೆತಂದನು

  • ಆಗ ಮಂತ್ರಿ ಸುಮಂತ್ರನು ಅಲ್ಲಿದ್ದ ಕುಲಗುರುವಾದ ವಸಿಷ್ಠರಿಗೆ ನಮಿಸಿ "ರಾಮನೃಪಾಲನಿಗೆ ರಾಜಪಟ್ಟವನ್ನು ಕಟ್ಟಬಹುದಲ್ಲವೆ?" ಎಂದು ಕೇಳಲು, ವಸಿಷ್ಠರು ಅದಕ್ಕೆ ತಮ್ಮ ಸಮ್ಮತಿ ಸೂಚಿಸಿದರು. ಸುಮಂತ್ರನು ಸಂತಸಗೊಂಡು ರಾಮ ಪಟ್ಟಾಭಿಷೇಕಕ್ಕೆ ಮಾಡಬೇಕಾದ ಸಿದ್ಧತೆಗಳಲ್ಲಿ ತೊಡಗಿದನು. ಸಾಮಂತ ಅರಸುಗಳನ್ನೆಲ್ಲ ಆಮಂತ್ರಿಸಿ ಎಲ್ಲ ದಿಕ್ಕುಗಳ ಕಡೆಗೂ ಓಲೆಗಳನ್ನು ಬರೆಸಿ ಕಳುಹಿಸಿದನು.
  • ರಾಮ ಪಟ್ಟಾಭಿಷೇಕದ ವಿಷಯವನ್ನು ತಿಳಿದು ಅಯೋಧ್ಯೆಯು ನವವಧುವಿನಂತೆ ಸಿಂಗಾರಗೊಂಡಿತು. ಎಲ್ಲೆಡೆಯೂ ಸಂಭ್ರಮವೋ ಸಂಭ್ರಮ!
  • ವಿವಿಧ ದೇಶಗಳಿಂದ ಜನರು, ಪಂಡಿತರು, ಕವಿಗಳು, ಗಾಯಕ, ನರ್ತಕರು, ದೈವಜ್ಞರು ಅಯೋಧ್ಯೆಗೆ ಬಂದು ಸೇರಿದರು. ಸನಕ ಸನಂದಾದಿ ತಪಸ್ವಿಗಳು ಅಯೋಧ್ಯೆಗೆ ದಯಮಾಡಿಸಿದರು. ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ ವಾಮದೇವಾದಿ ಮಹಾಮುನಿಗಳೂ ಬಂದರು.
  • ಚೋಳ, ಗುರ್ಜರ, ದ್ರವಿಡ, ವಂಗ, ಸಿಂಧು, ನೇಪಾಳ, ವಿದರ್ಭ, ಮಲೆಯಾಳ, ಆಂಧ್ರ, ಮರಾಟ, ಕರ್ಣಾಟ, ಕುಂತಳ - ಹೀಗೆ ಹಲವಾರು ದೇಶದ ಅರಸರು ಅಯೋಧ್ಯೆಗೆ ಆಗಮಿಸಿದರು.

ಹೀಗೆ ಎಲ್ಲ ದಿಕ್ಕುಗಳಿಂದಲೂ ಮುಖ್ಯಜನರೆಲ್ಲರೂ ಬಂದು ಕೂಡಿದರು. ಪಟ್ಟಾಭಿಷೇಕ ಮಹೋತ್ಸವದ ದಿನವೂ ಬಂತು. ಸಭಾಸದರೆಲ್ಲರೂ ತವಕದಿಂದ ನೋಡುತ್ತಿರಲಾಗಿ -

ಭರತ ಭಾರಿಯ ಸತ್ತಿಗೆಯ ಚಾ
ಮರವ ಲಕ್ಷ್ಮಣ ದೇವ ಚಿಮ್ಮಲು
ಧರಿಸಿದನು ಶತೃಘ್ನ ಗಿಂಡಿಯ ಹೆಗಲ ಹಡಪದಲಿ
ಮರುತಸುತ ಸೇವಿಸಲು ಚರಣದಿ
ಗುರು ವಸಿಷ್ಠನ ಸಮ್ಮುಖದಿ ರಘು
ವರನು ನಿಜಸತಿ ಸಹಿತ ಸಿಂಹಾಸನದಿ ರಂಜಿಸಿದ -೧೧೪

  • ನಂತರದಲ್ಲಿ - "ಅಲ್ಲಿ ನೆರೆದ ಮುನೀಶ್ವರರೆಲ್ಲರು ಬಲ್ಲ ಭೂಸುರನಿವಹ ಮಂತ್ರಿಗಳಲ್ಲಿ ಸುಮುಹೂರ್ತದಲಿ ಪಟ್ಟವ ಕಟ್ಟಿದರು ನೃಪಗೆ......"
  • ಭರತನು ಭಾರಿಯಾದ ಒಂದು ಛತ್ರಿಯನ್ನು ಹಿಡಿದಿರಲು, ಲಾಕ್ಷ್ಮಣನು ಚಾಮರವನ್ನು ಬೀಸುತ್ತಿರಲು, ಶತೃಘ್ನನು ಗಿಂಡಿಯನ್ನು ಧರಿಸಿರಲು, ಹನುಮಂತನು ಸೇವಿಸುತ್ತಿರಲಾಗಿ ಸೀತಾದೇವಿಯ ಸಹಿತ ರಾಮನು ಸಿಂಹಾಸನದಲ್ಲಿ ಕುಳಿತು ಶೋಭಿಸಿದ.
  • ಮುಂದೆ ಅಲ್ಲಿ ಸೇರಿದ್ದ ಮುನೀಶ್ವರರೆಲ್ಲರ ಸಮಕ್ಷಮದಿ ಸುಮುಹೂರ್ತವೊಂದರಲ್ಲಿ ರಾಮನಿಗೆ ಪಟ್ಟಾಭಿಷೇಕವಾಯಿತು.

ವಿವಾದಿಗಳ 'ಕರೆದು ತಾ’ ಎಂದ ಸಂಪಾದಿಸಿ

'ಅರಸ ಕೇಳ್ಮರುದಿವಸದಲಿ ರಘು
ವರನು ತನ್ನೋಲಗಕೆ ನೃಪರನು
ಕರೆಸಿದನು ನಿಜಮಂತ್ರಿ ಬಾಂಧವಜಾಲ ವರ್ಗವನು
ತರಣಿಸುತ; ಜಾಂಬವ ವಿಭೀಷಣ
ರಿರದೆ ಬಂದರು ಕೈಮುಗಿದು ಕು
ಳ್ಳಿರಲು ಪರಿತೋಷದಲಿ ನುಡಿದನು ರಾಮ ನಸುನಗುತ' -೧೨೩

  • ’ಕೇಳು ಲಕ್ಷ್ಮಣ, ಕೇಳು ಜಾಂಬವ, ಕೇಳು ನಳ ನೀಲಾದಿ ಸುಭಟರೆ ಕೇಳಿರೈ, ನರೆದಲೆಗ-ವ್ರಿಹಿಯರು ಸೆರೆಯೊಳಿರ್ದವರ ಕಾಲ ಸವೆದುದು ದಿವಸವಿಂದಿಗೆ ಏಳು ತಿಂಗಳು ಕಳೆದವವದಿರ ಪಾಲಿಸಲು ಬೇಕು. ಅನಿಲಸುತ, ನೀ ಕರೆದು ತಾ’ ಎಂದ.
  • ಹನುಮಂತನು ರಾಮನ ಅಪ್ಪಣೆಯನ್ನು ಪಡೆದು ಗೌತಮ ಮಹರ್ಷಿಗಳ ಆಶ್ರಮಕ್ಕೆ ಬಂದನು. ಅವರಿಗೆ ನಮಿಸಿ ಆಶೀರ್ವಾದ ಪಡೆದ ನಂತರ ತಾನು ಬಂದ ವಿಷಯವನ್ನು ತಿಳಿಸಿ, ಕೂಡಲೆ ನರೆದಲೆಗ ಹಾಗೂ ವ್ರಿಹಿಗರನ್ನು ಸೆರೆಮನೆಯಿಂದ ಬಿಡಿಸಿ ತಮ್ಮೊಡನೆ ಕರೆದುಕೊಂಡು ಕೂಡಲೆ ಅಯೋಧ್ಯೆಗೆ ಬರಬೇಕಾಗಿ ಬಿನ್ನವಿಸಿದನು. ಗೌತಮ ಮಹರ್ಷಿಯು ಹನುಮಂತನ ಮಾತಿಗೆ ಒಪ್ಪಿ, ಕೂಡಲೆ ಆಶ್ರಮದ ಇತರ ತಾಪಸಿಗಳನ್ನು ಕರೆಸಿ,ನರೆದಲೆಗ-ವ್ರಿಹಿಗರನ್ನೊಡಗೊಂಡು ಅಯೋಧ್ಯೆಗೆ ಹೊರಟುಬಂದರು.

ನರೆದಲೆಗ-ವ್ರಿಹಿಗರ :(ರಾಗಿಯ - ಬತ್ತದ) ವಿವಾದ ತೀರ್ಮಾನ ಸಂಪಾದಿಸಿ

  • ಅಯೋಧ್ಯೆಗೆ ದಯಮಾಡಿಸಿದ ಗೌತಮ ಮಹರ್ಷಿಗಳನ್ನು ರಾಮನು ಪ್ರೀತ್ಯಾದರಗಳಿಂದ ಸ್ವಾಗತಿಸಿ ಸತ್ಕರಿಸಿದನು. ನಂತರದಲ್ಲಿ:

ಇವರ ವ್ಯವಹಾರವನು ಪರಿಹರಿ
ಸುವ ವಿಚಾರವ ಮಾಡಿ ಮನದಲಿ
ರವಿಕುಲಾನ್ವಯ ರಾಮ ನೆನೆದನು ಹೃದಯಶುದ್ಧಿಯಲಿ -
ಶಿವನ ಧ್ಯಾನಿಸಲಾ ಕ್ಷಣವೆ ತ್ರೈ
ಭುವನಕರ್ತರು ಇಂದ್ರ ಮೊದಲಾ
ದವರು ಬಂದರಯೋಧ್ಯಾಪುರಧಾಮನೋಲಗಕೆ -೧೨೯

ವಸುಗಳು, ಅಮರರು, ಭುಜಂಗಾಮರರು, ಅಸುರ, ಕಿನ್ನರ, ಯಕ್ಷ, ರಾಕ್ಷಸ, ಶಶಿ-ರವಿಗಳು, ಆದಿತ್ಯ,ವಿದ್ಯಾಧರರು, ಗುಹ್ಯಕರು, ವಸುಧೆಯಮರರು(ಬ್ರಾಹ್ಮಣರು), ಕ್ಷತ್ರಿಯರು, ಜೋಯಿಸರು, ವೈಶ್ಯ ಚತುರ್ಥರು,ಉನ್ನತ ಕುಶಲ ವಿದ್ಯಾಧಿಕರು ನೆರೆದುದು ನೃಪನ ಸಭೆಯೊಳಗೆ.
<poem>
ಇಂತೆಸೆವನಾ ಸಭೆಯೊಳಗೆ ಮತಿ
ವಂತ ನುಡಿದನು ಧಾನ್ಯವರ್ಗದ
ಸಂತತಿಯ ಬರಹೇಳಿಯೆನೆ, ಸೆರೆಮನೆಯೊಳಿರ್ದವರು
ನಿಂತು ಕರಗಳ ಮುಗಿದು 'ಧರಣೀ
ಕಾಂತ ರಘುವರನೀ ಸುಬುದ್ಧಿಯ
ನೆಂತು ನಮಗರುಹುವಿಯದ ಪೇಳೆಂದ' ನರೆದಲೆಗ -೧೩೧

  • ಕೂಡಿದ ಸಭೆಯೊಳಕ್ಕೆ ನರೆದಲೆಗ-ವ್ರಿಹಿಗರನ್ನು ಕರೆಸಲಾಯಿತು. ಆಗ ನರೆದಲೆಗನು "ಅಯ್ಯಾ, ರಘುವರನೇ,ನಮ್ಮಿಬ್ಬರ ನಡುವಿನ ವ್ಯಾಜ್ಯ ಬಗೆಹರಿಸಲು ನೀವು ಯಾವ ನ್ಯಾಯವನ್ನು ತಿಳಿಸಲಿರುವಿರಿ?" ಎಂದು ಕೇಳಿದ.

ಎನಲು ರಾಮನೃಪಾಲ ನೋಡಿದ
ಘನ ತಪೋಮಹಿಮರಿಗೆ ನುಡಿದನು -
’ಮನವ ವಂಚಿಸಲಾಗದೀ ಧರ್ಮವನು ನೆರೆ ತಿಳಿದು
ಅನುನಯದೆ ಪೇಳೆ’ನೆ, ಮುನೀಂದ್ರರು
ಅನಿಮಿಷರನೀಕ್ಷಿಸಿದರಲ್ಲಿಯ (ಅನಿಮಿಷರು-ದೇವತೆಗಳು)ಘನ ಮಹಾಸಭೆಯೊಳಗೆ ಭಾರ್ಗವ ರಾಮನಿಂತೆಂದ -೧೩೨

  • ’ಆರು ನುಡಿಯರೆ! ನೀವು ಹಿರಿಯರು, ಮೀರಿಸುವರಾರಿವರೊಳಗೆ ಗುಣಸಾರನ್ ಆವನು ಪೇಳ್’ ಎನಲು,ಜಂಭಾರಿ ನಸುನಗುತ "ಸಾರಹೃದಯನು ನರೆದಲೆಗ; ನಿಸ್ಸಾರನೀ ವ್ರಿಹಿ" ಎನಲು, ಮರುತಾತ್ಮಜ ನೋಡಿದನು ಸನ್ನೆಯಲಿ ನಾರದನ. (ಜಂಭಾರಿ - ಜಂಭಾಸುರ ಎಂಬ ರಾಕ್ಷಸನ ವೈರಿ, ಇಂದ್ರ; ಮರುತಾತ್ಮಜ - ಹನುಮಂತ)
  • "ಅಹುದಹುದು, ಸುರಪನ (ಇಂದ್ರ) ಮಾತು ನಿಶ್ಚಯವಹುದು; ನರೆದಲೆಗನೆ ಸಮರ್ಥನು, ಬಹಳ ಬಲಯುತ. ಸೆರೆಗೆ ತಳ್ಳಲು ಕಾಂತಿಗೆಡಲಿಲ್ಲ. ಸಹಜವಿದು. ಪರಪಕ್ಷವಾದಡೆ (ಪ್ರತಿಪಕ್ಷದವನು - ಭತ್ತ) ವ್ರಿಹಿ ಕರಗಿ ಕಂದಿದನು ಸೆರೆಯಲಿ. ವಿಹಿತವಿದು ಕೇಳ್" ಎಂದು ನಾರದ ನುಡಿದನು ನಸುನಗುತ.
  • "ಎಲ್ಲ ನವಧಾನ್ಯದಲಿ ಈತನೆ ಬಲ್ಲಿದನು, ಹುಸಿಯಲ್ಲ. ಬಡವರ-ಬಲ್ಲಿದರನಾರೈದು ಸಲಹುವನ್ ಇವಗೆ ಸರಿಯುಂಟೆ? ನೆಲ್ಲಿನಲಿ ಗುಣವೇನು, ಭಾಗ್ಯದಿ ಬಲ್ಲಿದರ ಪತಿಕರಿಸುವನು (ಪತಿಕರಿಸು - ಒಲಿಯುವುದು, ಕೃಪೆ ಮಾಡು). ಅವನಲ್ಲಿ ಸಾರವ ಕಾಣೆ" ಎಂದನು ಕಪಿಲ ಮುನಿ ನಗುತ.
  • ಹೀಗೆ, ಸುರರೂ ಮುನಿಗಳೂ ಧಾನ್ಯಗಳ ಪೈಕಿ ನರೆದಲೆಗನೇ ಉತ್ತಮನೆಂಬುದನ್ನು ಒಪ್ಪಿ ನುಡಿದರು.

ಸುರಮುನಿಗಳಿಂತೆನಲು, ಭೂಸುರ
ವರರು, ಸಂತೋಷಿಸಲು ಸಭಿಕರು
'ನರೆದಲೆಗ ನೀ ಬಾ'ರೆನುತ ರಾಮನೃಪಾಲ ನೆರೆಮೆಚ್ಚಿ
ಕರೆದು ಕೊಟ್ಟನು ತನ್ನ ನಾಮವ
ಧರೆಗೆ "ರಾಘವ"ನೆಂಬ ಪೆಸರಾ (ರಾಘವ --> ರಾಗಿ)
ಯ್ತಿರದೆ ವ್ರಿಹಿ ನಾಚಿದನು. ಸಭೆಯಲ್ಲಿ ಶಿರವ ಬಾಗಿಸಿದ. -೧೩೬

  • ಹಾಗೆ ಎಲ್ಲರ ಸಮಕ್ಷಮದಲ್ಲಿ ರಾಮನು ನರೆದಲೆಗನನ್ನು ಉತ್ತಮನೆಂದು ಘೋಷಿಸಿ, ತನ್ನ ಹೆಸರಾದ ’ರಾಘವ’ನೆಂಬ ನಾಮವನ್ನೇ ನರೆದಲೆಗನಿಗೂ ಕೊಟ್ಟನು. "ಹರುಷ ತೋರಿದ ಮನದಿ ನಲಿವುತ ನರೆದಲೆಗನೈತಂದು ರಾಮನ ಸಿರಿಚರಣಕೆ ಅಭಿನಮಿಸೆ, ದೇವಾಸುರರು ಕೊಂಡಾಡೆ, ಹರಸಿ ಮುತ್ತಿನ ಸೇಸೆಯನು ಭೂಸುರರು ಮಂತ್ರಾಕ್ಷತೆಯನ್ ಇತ್ತು ಉಪಚರಿಸಿದರು ರಾಗಿಯನು...." ಹೀಗೆ ರಾಗಿಯು ಸಭೆಯಲ್ಲಿ ಎಲ್ಲರ ಮೆಚ್ಚುಗೆ, ಗೌರವ, ಆಶೀರ್ವಾದಗಳಿಗೆ ಪಾತ್ರವಾಗುತ್ತದೆ.
  • ನಂತರದಲ್ಲಿ ಬ್ರಹ್ಮ, ಶಿವ, ಇಂದ್ರ, ಯಮ, ಕುಬೇರ ಮೊದಲಾದ ದೇವತೆಗಳು ರಾಗಿಗೆ ವಿವಿಧ ಬಹುಮಾನಗಳನ್ನೂ, ವರಗಳನ್ನೂ ಕೊಟ್ಟು ಹರಸಿದರು.
  • ಕರೆಸಿದಳು ಶರ್ವಾಣಿ(ಪಾರ್ವತಿ) ತನ್ನಯ ಮರುಳು ಬಳಗವನೆಲ್ಲ - "ನೀವೀ ಧರಣಿಯಲಿ ಸತಿ ರೂಪವಂ ತಾಳ್ದು,ಅಗಣಿತದ ಮನೆಗಳಲಿ ಹುರುಳುಗೆಡಿಸದೆ ಸರ್ವಭೂತಾತ್ಮರಿಗೆ ಪಕ್ವಾನ್ನವನು ನೀಡಿ" ಎಂದು ಉರುತರದ ಪ್ರೇಮದಲಿ ಕಳುಹಿದಳಗಜೆ (ಅಗಜೆ - ಪರ್ವತರಾಜನ ಕುಮಾರಿ, ಪಾರ್ವತಿ) ಕರುಣದಲಿ.
  • ನಂತರದಲ್ಲಿ ಹರಿಹರಬ್ರಹ್ಮಾದಿಗಳು ಅಲ್ಲಿ ನೆರೆದಿದ್ದ ಎಲ್ಲರನ್ನೂ ಹರಸಿ ತಮ್ಮತಮ್ಮ ಲೋಕಗಳಿಗೆ ತೆರಳಿದರು.
  • ಸಭೆಗೆ ಆಗಮಿಸಿದ್ದ ದೇವಾಸುರರು, ಬ್ರಾಹ್ಮಣರು ಮುಂತಾದರೆಲ್ಲ ಅನೇಕ ವರಗಳನ್ನು ಕರುಣಿಸಿ ಹರಸಿದ್ದರ ಫಲವಾಗಿ ನರೆದಲೆಗನು ಮುಂದೆ ಭುವಿಯಲ್ಲಿ ರಾಗಿ ಎಂದು ಪ್ರಖ್ಯಾತನಾದನು.

ಹೀಗೆ ಸಭೆಯಲ್ಲಿ ರಾಗಿಯು ಎಲ್ಲರಿಂದ ಪ್ರಶಂಸೆ ಪಡೆದುದನ್ನು ಕಂಡು ತನಗಾದ ಮಾನಭಂಗವನ್ನು ನೆನೆಯುತ್ತ ಚಿಂತೆಗೊಳಗಾಗಿದ್ದ ವ್ರಿಹಿಗನನ್ನು ರಾಮನು ಕರೆದು ಪ್ರೇಮದಿಂದ ಮಾತನಾಡಿಸಿದನು. "ಅಯ್ಯಾ ವ್ರಿಹಿಗ, ಏಕೆ ಕೊರಗುತ್ತೀಯೆ. ನಾವು ಭೂಮಿಯಲ್ಲಿ ನರೆದಲೆಗನೇ ಉತ್ತಮನೆಂದು ಹೇಳಿದ್ದನ್ನು ಕೇಳಿ ಖತಿಗೊಂಡಿರುವೆಯಾ? ಈತನು ಕ್ಷಾಮಕಾಲದಲ್ಲೂ ಜನರನ್ನು ಕರುಣೆಯಿಂದ ಕಾಯುತ್ತಾನೆಯಾದ್ದರಿಂದ ಅವನನ್ನು ಪತಿಕರಿಸಿದೆವು. ಅಷ್ಟೇ ಹೊರತು ನಿನ್ನನ್ನು ಹೀಗಳೆಯುವುದು ನಮ್ಮ ಉದ್ದೇಶವಲ್ಲ."

  • "...ನಮ್ಮೆಡೆಗೆ ನೀನು ಸುರಧೇನುವಿನ ಸಮ. ನಿನ್ನ ಚಿತ್ತದಿ ಹಾನಿದೋರಲದೇಕೆ, ಬಿಡು ಬಿಡು ಚಿಂತೆ ಯಾಕೆಂ"ದ

"ದೇವರಿಗೆ ಪರಮಾನ್ನ ನೀ. ಮನು
ಜಾವಳಿಗೆ ಪಕ್ವಾನ್ನವೀತನು.
ನೀವು ಧರೆಯೊಳಗಿಬ್ಬರತಿ ಹಿತದಲಿ ನೀವಿಹುದು.
ನಾವು ಕೊಟ್ಟೆವು ವರವ, ಸಲ್ಲುವು
ದಾವ ಕಾಲದಲಿನ್ನು ನೀವೇ ಪಾವನರು ಸುಖಿ"ಯೆಂದುಪಚರಿಸಿದನು ನೃಪತಿ. - ೧೪೯

  • ಹೀಗೆ ವ್ರಿಹಿಗನನ್ನು ಸಂತೈಸಿ, ಇತರ ಧಾನ್ಯಗಳನ್ನೂ ಹರಸಿ ಹಲವು ವರಗಳನಿತ್ತು ರಾಮನು ಎಲ್ಲ ಧಾನ್ಯಗಳನ್ನೂ ಕಳುಹಿಸಿದ.
  • ಶಾಂಡಿಲ್ಯ ಮುನಿಗಳು ಯುಧಿಷ್ಠಿರನಿಗೆ ಈ ಕಥೆಯೆಲ್ಲವನ್ನು ವಿಸ್ತಾರವಾಗಿ ಹೇಳಿದರು. ಯುಧಿಷ್ಠಿರನು ರಾಮಧಾನ್ಯದ ಚರಿತೆಯನ್ನು ಕೇಳುವ ಭಾಗ್ಯ ತನ್ನದಾಯ್ತೆಂದು ಸಂತಸದಿಂದ ಶಾಂಡಿಲ್ಯ ಮುನಿಯ ಪಾದಗಳಿಗೆರಗಿ ವಂದಿಸಿದ.
ಶಾಂಡಿಲ್ಯಮುನಿಯು

"ಅರಸ, ನೀ ಮನವೊಲಿದು ಕೇಳದ
ಚರಿತೆ ತಾನೊಂದಿಲ್ಲ. ಲೋಕದಿ
ಪರಮ ಪುಣ್ಯದ ರಾಮಕಥೆಯಿದ ಕೇಳ್ದೆ ನೀನಿಂದು
ಕೊರತೆಯುಂಟೇ? ಇಷ್ಟಭೋಗವ
ಹರಿ ಕೊಡುವ ನಿಮಗಿನ್ನು"ಯೆನುತುಪ
ಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶ್ರಮಕೆ. -೧೫೭

ಶರಧಿಶಯನ ಮುಕುಂದ ಸಚರಾ
ಚರಭರಿತ ನಿರ್ಗುಣ ನಿರಾಮಯ
ಸುರ ನರೋರಗವಂದ್ಯ ವರಪುರದಾದಿಕೇಶವನ
ಚರಣದಂಕಿತಮಾಗಿ ಪೇಳಿದ
ಪರಮಧಾನ್ಯದ ಚರಿತೆ ಸಂತತ
ಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ. -೧೫೮

ಮಂಗಳಂ
  • (ಕೃಪೆ ಆಚಾರಿ, ಬ್ಲಾಗ್-[೧])