ಲಿಂಗಾಂಗಸಾಮರಸ್ಯವನರಿಯದೆ ಖಂಡಿತ ಬುದ್ಧಿಯಿಂದೆ ಲಿಂಗವ ಬೇರಿಟ್ಟುಕೊಂಡು ಸಕಲಭೋಗೋಪಭೋಗವನು ಅರ್ಪಿಸಿದೆವೆಂಬ ಭಂಗಗೇಡಿಗಳ ಮಾತ ಕೇಳಲಾಗದು. ಅದೆಂತೆಂದೊಡೆ : ಆ ಲಿಂಗಕ್ಕೆ ಶರಣನಂಗದ ಮಜ್ಜನಸುಖವಲ್ಲದೆ ಬೇರೆ ಮಜ್ಜನಸುಖವುಂಟೆ ? ಆ ಲಿಂಗಕ್ಕೆ ಶರಣನ ಲಲಾಟದ ಶ್ರೀವಿಭೂತಿ ಗಂಧಾಕ್ಷತೆಯ ಶೃಂಗಾರವಲ್ಲದೆ ಬೇರೆ ಶೃಂಗಾರವುಂಟೆ ? ಆ ಲಿಂಗಕ್ಕೆ ಶರಣನ ಕರ್ಣದಲ್ಲಿಯ ಪಂಚಮಹಾವಾದ್ಯದ ಕೇಳಿಕೆಯಲ್ಲದೆ ಬೇರೆ ಕೇಳಿಕೆಯುಂಟೆ ? ಆ ಲಿಂಗಕ್ಕೆ ಶರಣನ ಜಿಹ್ವೆಯಲ್ಲಿಯ ಷಡುರಸಾನ್ನದ ನೈವೇದ್ಯವಲ್ಲದೆ ಬೇರೆ ನೈವೇದ್ಯವುಂಟೆ ? ಆ ಲಿಂಗಕ್ಕೆ ಶರಣನ ಕಂಗಳಲ್ಲಿಯ ನಾನಾ ವಿಚಿತ್ರರೂಪಿನ ವಿನೋದವಲ್ಲದೆ ಬೇರೆ ವಿನೋದವುಂಟೆ ? ಆ ಲಿಂಗಕ್ಕೆ ಶರಣನ ತ್ವಕ್ಕಿನಲ್ಲಿಯ ವಸ್ತ್ರಾಭರಣದ ಅಲಂಕಾರವಲ್ಲದೆ ಬೇರೆ ಅಲಂಕಾರವುಂಟೆ ? ಆ ಲಿಂಗಕ್ಕೆ ಶರಣನ ಘ್ರಾಣದಲ್ಲಿಯ ಸುಗಂಧ ಪರಿಮಳವರ್ಪಿತವಲ್ಲದೆ ಬೇರೆ ಅರ್ಪಿತವುಂಟೆ ? ಆ ಲಿಂಗಕ್ಕೆ ಶರಣನ ಪರಮ ಹೃದಯಕಮಲವೆ ನಿಜವಾಸವಲ್ಲದೆ ಬೇರೆ ನಿಜವಾಸವುಂಟೆ ? ಇಂತೀ ಶರಣಸನ್ನಿಹಿತಲಿಂಗ
ಲಿಂಗಸನ್ನಿಹಿತ ಶರಣನೆಂಬುದನರಿಯದೆ ಅನಂತಕಾಲ ಲಿಂಗವ ಧರಿಸಿಕೊಂಡು ಲಿಂಗಾಂಗಿಯೆನಿಸಿಕೊಂಡಡೇನು ? ಅದು ಪಶುವಿನ ತೊಡೆಯಲ್ಲಿ ಬರೆದ ಮುದ್ರೆಯಂತೆ ಕಂಡೆಯಾ ಅಖಂಡೇಶ್ವರಾ.