ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

ವಾಗರ್ಥ ಗೌರವ (2017)
Vidvan Ga.Na. Bhat, illustrated by Kallur Nagesh

Light House Hill Road, Mangaluru: Aakrithi Aashaya Publications. 

Vidvan Ga.Na. BhatKallur Nagesh98416ವಾಗರ್ಥ ಗೌರವ2017
ಪುಟನೋಟ
1. ಉದ್ಘಾಟನಾ ಭಾಷಣ
ವಾಗರ್ಥ ಗೌರವಕ್ಕೆ ಪ್ರಾರಂಭದ ಮಾತುಗಳು / ಡಾ. ರಮಾನಂದ ಬನಾರಿ
1
2 ಒಂದು ಎನ್‌ಸೈಕ್ಲೋಪೀಡಿಯಾ / ಸೇರಾಜೆ ಸೀತಾರಾಮ ಭಟ್ಟ 5
3 ಡಾ। ಜೋಷಿ ಹಲವರು ಕಂಡಂತೆ / ವೆಂಕಟರಾಮ ಭಟ್ಟ 8
4 ಡಾ. ಎಂ. ಪ್ರಭಾಕರ ಜೋಶಿಯವರ ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹಸಂಪರ್ಕ / ಚಂದ್ರಶೇಖರ ದಾಮ್ಲ 14
5 ಜೋಶಿ ಅರ್ಥಗಾರಿಕೆ :ಐತಿಹಾಸಿಕ ಆಯಾಮಗಳು / ರಾಧಾಕೃಷ್ಣ ಕಲ್ಚಾರ್ 21
6. ಪ್ರಭಾಕರ ಜೋಶಿ-ನಮ್ಮ ನಡುವಿನ ಧೀಮಂತ / ಪ್ರೊ. ಎಂ.ಎ. ಹೆಗಡೆ 26
7. ಯಕ್ಷಗಾನಕ್ಕೊಬ್ಬರೇ ಜೋಶಿ ಅಭಿನಂದನಾ ಭಾಷಣ / ಅಶೋಕ ಭಟ್, ಉಜಿರೆ 30
8. ಸಾಂಸ್ಕೃತಿಕ ರಾಯಭಾರಿ ಡಾ. ಎಂ. ಪ್ರಭಾಕರ ಜೋಶಿ / ವಿದ್ವಾನ್ ಗ.ನಾ. ಭಟ್ಟ 32
9. ಪ್ರಭಾಕರ ನಮಸ್ತುಭ್ಯಮ್ / ಡಾ. ವಿಜಯನಾಥ ಭಟ್ 38
10. ನಾಡಿನ ಕಣ್ಮಣಿ – ಡಾ. ಜೋಶಿ ಅಧ್ಯಕ್ಷ ಭಾಷಣ / ಡಾ. ಕೆ.ಎಂ. ರಾಘವ ನಂಬಿಯಾ‌ರ್ 45
11. ನಾನು ಮೂಕನಾಗಿದ್ದೇನೆ ಸಂಮಾನ ಸ್ವೀಕಾರ, ಕೃತಜ್ಞತಾ ಭಾಷಣ ಸಂಕ್ಷೇಪ 51
12. ಅತಿಥಿಗಳ ಶುಭಾಶಂಸನಗಳು 55
13. ಸಂದೇಶ-ಸ್ಪಂದನ 60






ವಾಗರ್ಥ ಗೌರವ

ಡಾ. ಜೋಶಿ ಅಭಿನಂದನಾ ಗುಚ್ಛ




ಸಂಪಾದಕ

ಗ.ನಾ. ಭಟ್ಟ




ಆಕೃತಿ ಆಶಯ ಪಬ್ಲಿಕೇಷನ್ಸ್

ಮಂಗಳೂರು

VAGARTHAGOURAVA
Collection of papers and speeches of
Dr. M. Prabhakara Joshy Felicitation Programme
held on 13,14 May 2017
at Jaganmohan Palace Auditorium, Mysuru

Editor
Vidvan Ga.Na. Bhat, Mysore
97, 'Paramahamsa'
3rd Main Road, Yadagiri, Mysore
Mobile: 9482113818

Published by
Aakrithi Aashaya Publications
Light House Hill Road, Mangaluru - 575 001
Tel.: 0824 2443002
aakrithiaashayapublications@gmail.com

First Edition: 2017
© Author
Size: Demy 1/8
Paper used: 80 gsm ns maplitho
Pages: xii+72
Price : Rs. 80

Photo Credit: Raghupathi Tamankar Mysuru
Cover Design: Kallur Nagesh

Page Designed & Printed at
Aakrithi Prints
Light House Hill Road, Mangaluru 575 001
Tel: 0824 2443002

ಮಿತ್ರ, ಕಲಾವಿದ, ಕಲಾಭಿಜ್ಞ ಡಾ. ಎಂ. ಪ್ರಭಾಕರ ಜೋಶಿಯವರಿಗೆ ಎಪ್ಪತ್ತು ತುಂಬಿದ ಸಂದರ್ಭದಲ್ಲಿ ಅವರು ಯಕ್ಷ ಪ್ರಪಂಚಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡು ಅವರನ್ನು ಮೈಸೂರಿನಲ್ಲಿ ಅಭಿನಂದಿಸಬೇಕೆಂದು ಮೈಸೂರಿನ ಅವರ ಅಭಿಮಾನಿ ಬಳಗವೊಂದು ನಿರ್ಧರಿಸಿತು. ಕೂಡಲೆ ಕಾರ್ಯತತ್ಪರವಾದ ಆ ಬಳಗ ಜೋಶಿಯವರ ಹೆಸರಿನಲ್ಲಿ ಅಭಿನಂದನಾ ಸಮಿತಿಯನ್ನು ರಚಿಸಿತು. ಅದಕ್ಕೆ ನನ್ನನ್ನೇ ಕಾರ್ಯದರ್ಶಿಯನ್ನಾಗಿ ನೇಮಿಸಿತು. ಗೌರವಾಧ್ಯಕ್ಷರಾಗಿ ಎಸ್.ಬಿ.ಎಂ.ನ ನಿವೃತ್ತ ಮ್ಯಾನೇಜರ್ ಸೀತಾರಾಮ ಭಟ್ ದಾಮ್ಲೆ ಅವರೂ, ಅಧ್ಯಕ್ಷರಾಗಿ ಖ್ಯಾತ ಉದ್ಯಮಿ ಎಂ. ಬಾಲಚಂದ್ರ ಡೋಂಗ್ರೆ ಅವರೂ ಉಪಾಧ್ಯಕ್ಷರಾಗಿ ಇನ್ನೋರ್ವ ಖ್ಯಾತ ಉದ್ಯಮಿ ಡಾ. ಸುಧೀರ ಶೆಟ್ಟಿ ಅವರೂ, ಖಜಾಂಚಿಯಾಗಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ರಘುಪತಿ ತಾಮ್ಹಣ್‌‌ಕರ್ ಅವರೂ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವೇಣುಗೋಪಾಲ ದೇವಧರ್, ಕೆ. ಶ್ರೀಕರ ಭಟ್, ಮರಾಠೆ, ಶ್ರೀಮತಿ ವೀಣಾ ಡೋಂಗ್ರೆ, ಡಾ. ಗೋಪಾಲ ಮರಾಠೆ ಕೆ. ಹಾಗೂ ಕೆ.ಬಿ. ಪುರುಷೋತ್ತಮ ಗೌಡ ನೇಮಕಗೊಂಡರು.

ಜೋಶಿಯವರ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡಿದ್ದ ನನಗೆ ಅವರ ಕುರಿತಾಗಿ ಕೆಲಸ ಮಾಡುವುದಕ್ಕೆ ಇದೊಂದು ಸಂದರ್ಭವೆಂದು ಭಾವಿಸಿ ಮಾಡಬೇಕಾದ ಕೆಲಸಗಳ ಯೋಜನೆಯನ್ನು ಸಮಿತಿ ಮುಂದೆ ಇಟ್ಟೆ. ಸಮಿತಿಯ ಎಲ್ಲ ಪದಾಧಿಕಾರಿಗಳೂ, ಸದಸ್ಯರೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಮಾತ್ರವಲ್ಲ ಎಲ್ಲರೂ ತಮ್ಮ ತಮ್ಮ ಮಿತಿಯಲ್ಲಿ ಯಥಾಶಕ್ತಿ ಆರ್ಥಿಕ ನೆರವನ್ನು ನೀಡಿದರು.

ಆರ್ಥಿಕ ನೆರವು ಬರುವಂತೆ ನೋಡಿಕೊಂಡರು. ಸಹೃದಯ ದಾನಿಗಳೂ ಬೆಂಬಲಕ್ಕೆ ನಿಂತರು. ಸಮಿತಿಯ ಸದಸ್ಯರು-ಒಬ್ಬೊಬ್ಬರೂ ಒಂದೊಂದು ಕೆಲಸವನ್ನು ವಹಿಸಿಕೊಂಡು ಇಡೀ ಸನ್ಮಾನ ಸಮಾರಂಭ ಅರ್ಥಪೂರ್ಣವಾಗಿ ಜರುಗುವಂತೆ ಮಾಡಿದರು. ಅದರಲ್ಲೂ ನಮ್ಮ ಸಮಿತಿಯ ಉಪಾಧ್ಯಕ್ಷರಾದ ಖ್ಯಾತ ಉದ್ಯಮಿ, ಸಹೃದಯ, ಡಾ. ಸುಧೀರ ಶೆಟ್ಟರು ಜೋಶಿಯವರು ತನ್ನ ಮನೆಗೆ ಬಂದ ಅತಿಥಿಯೆಂದು ಭಾವಿಸಿ ಅವರ ಹಾಗೂ ಇತರ ಅತಿಥಿಗಳ ಊಟೋಪಚಾರ ಹಾಗೂ ವಸತಿ ವ್ಯವಸ್ಥೆಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಮ್ಮ ಭಾರವನ್ನು ಮತ್ತಷ್ಟು ಹಗುರಗೊಳಿಸಿದರು. ಇನ್ನೋರ್ವ ಉತ್ಸಾಹಿ, ನಮ್ಮ ಸಮಿತಿಯ ಖಜಾಂಜಿ ರಘುಪತಿ ತಾಮ್ಹಣ್‌‌ಕರ್ ಅವರು ಕಾರ್ಯಕ್ರಮ ಸಮೀಪಿಸುತ್ತಿದ್ದಂತೆಯೇ ಕಾರ್ಯಕ್ರಮದ ಇಡೀ ಹೊಣೆಗಾರಿಕೆಯನ್ನು ತಾವೇ ಆವಾಹಿಸಿಕೊಂಡು ಎಲ್ಲಿಯೂ ಕೊರತೆಯಾಗದಂತೆ, ಸಮರ್ಪಕವಾಗಿ ನಿರ್ವಾಹ ಮಾಡಿದರು. ಎಲ್ಲರ ಸಹಾಯ-ಸಹಕಾರ-ಬೆಂಬಲದೊಂದಿಗೆ 2017, ಮೇ 13 ಮತ್ತು 14ರಂದು ನಗರದ ಜಗನ್ಮೋಹನ ಅರಮನೆಯಲ್ಲಿ 'ಜೋಶಿ ವಾಗರ್ಥ ಗೌರವ' ಅಭಿನಂದನಾ ಸಮಾರಂಭ ನಾವಂದುಕೊಂಡಂತೆ ವ್ಯವಸ್ಥಿತವಾಗಿ ಜನಮೆಚ್ಚುವಂತೆ ಸಂಪನ್ನಗೊಂಡಿತು.

ಆ ಎರಡು ದಿನ ನಾವು ಹಮ್ಮಿಕೊಂಡಿದ್ದ 'ಡಾ. ಜೋಶಿ-ಜೀವನ ಮತ್ತು ಸಾಧನೆ' ಕುರಿತಾದ ವಿಚಾರಸಂಕಿರಣ, ಸಂವಾದ, ತಾಳಮದ್ದಳೆ, ಸಾಕ್ಷ್ಯಚಿತ್ರ ಮತ್ತು ಬಯಲಾಟ ಪ್ರದರ್ಶನಕ್ಕೆ ನಾವು ಆಮಂತ್ರಿಸಿದ ಅತಿಥಿವರೇಣ್ಯರು, ನಾಡಿನ ಖ್ಯಾತ ವಿದ್ವಾಂಸರು, ಸಾಹಿತಿಗಳು, ಚಿಂತಕರು, ಕಲಾವಿದರು, ಯಕ್ಷಗಾನ ಪ್ರೇಮಿಗಳು ಪ್ರೀತ್ಯಭಿಮಾನದಿಂದ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು. ಈ ಅಭಿನಂದನಾ ಸಮಾರಂಭೋತ್ಸವದಲ್ಲಿ ನಾವು ಮಿಂದೆದ್ದು ಸಂತೋಷಪಡುತ್ತಿದ್ದರೂ ಒಂದು ಕೊರತೆ ನಮ್ಮನ್ನು ಬಾಧಿಸುತ್ತಲೇ ಇತ್ತು. ಜೋಶಿಯವರ ಮತ್ತು ಅವರ ಕೃತಿಗಳ ಕುರಿತಾಗಿ “ಅಭಿನಂದನಾ ಗ್ರಂಥ'ವೊಂದನ್ನು ತರಲಾಗಲಿಲ್ಲವಲ್ಲ ಎಂಬ ಕೊರತೆಯೇ ನಮನ್ನು ಬಾಧಿಸುತ್ತಿದ್ದ ಸಂಗತಿಯಾಗಿತ್ತು. ಅದನ್ನು ಜೋಶಿಯವರ ಮುಂದಿಟ್ಟಾಗ ಅವರು “ಅದನ್ನು ಕೈಗೆತ್ತಿಕೊಳ್ಳುವುದು ಬೇಡ. ಅದರ ಬಗ್ಗೆ ಕೆಲವು ಆಸಕ್ತರು, ಅಭಿಮಾನಿಗಳು ಈಗಲೇ ಮುಂದುವರಿದ್ದಾರೆ” ಎಂದು ಸೂಚಿಸಿದರು. ಆದರೂ ನಮ್ಮ ಮನಸ್ಸಿಗೆ ಸಮಾಧಾನವಿರಲಿಲ್ಲ. ಅದನ್ನು ಮತ್ತೆ ಜೋಶಿಯವರ ಅವಗಾಹನೆಗೆ ತಂದಾಗ “ಹಾಗಾದರೆ ಈ ಕಾರ್ಯಕ್ರಮದ ವಿಷಯಗಳನ್ನು ಆಧರಿಸಿ ಒಂದು ಕಿರು ಪುಸ್ತಕವನ್ನು ತನ್ನಿ” ಎಂದರು. ಅದರ ಫಲರೂಪವೇ ಇದು.

ಮುಖ್ಯವಾಗಿ ನಾವು 'ವಿಚಾರ ಸಂಕಿರಣ' ಮತ್ತು 'ಸಮಾರೋಪ ಸಮಾರಂಭ'ದಂದು ಬೇರೆ ಬೇರೆ ವಿದ್ವಾಂಸರು, ಚಿಂತಕರು ಮಾಡಿದ ಭಾಷಣಗಳನ್ನು ಅಕ್ಷರರೂಪಕ್ಕಿಳಿಸಿ ಇಲ್ಲಿ ದಾಖಲಿಸಿದ್ದೇವೆ. ಕಾರ್ಯಕ್ರಮ ನಡೆದ ಕೆಲವು ದಿನಗಳ ಮೇಲೆ ಭಾಷಣ ಮಾಡಿದವರಲ್ಲಿ “ತಮ್ಮ ಭಾಷಣವನ್ನು ಬರೆದುಕೊಡಿ” ಎಂದು ಕೇಳಿಕೊಂಡಾಗ

ಜೋಶಿಯವರ ಮೇಲಿನ ಪ್ರೀತಿ, ಅಭಿಮಾನ, ಗೌರವದಿಂದ ನಾವು ಕೇಳಿದ ಸಮಯಕ್ಕೆ ಬರೆದುಕೊಟ್ಟಿದ್ದಾರೆ. ಅವೆಲ್ಲರಿಗೂ ಹಾರ್ದಿಕ ಕೃತಜ್ಞತೆಗಳು.

ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಕೆ. ರಮಾನಂದ ಬನಾರಿಯವರು ತಮ್ಮ ಲೇಖನದಲ್ಲಿ ಕಾಳಿದಾಸ ಹೇಳಿದ 'ವಾಗರ್ಥ' ನುಡಿಗಟ್ಟನ್ನು ವಿಶ್ಲೇಷಿಸುತ್ತಾ “ಅದು ಗಂಡ-ಹೆಂಡತಿ ನಡುವಿನ ಸಂಬಂಧ ಮಾತ್ರವಲ್ಲ. ಬದುಕಿನ ಎಲ್ಲಾ ಸಂಬಂಧಗಳೂ ಒಂದು ಅರ್ಥದಲ್ಲಿ 'ವಾಗರ್ಥ'ವೇ ಆಗಿರಬೇಕು” ಎಂಬ ಉದಾತ್ತ ನುಡಿಗಳನ್ನು ವ್ಯಕ್ತಪಡಿಸುತ್ತಾ ಜೋಶಿಯವರ ಒಡನಾಟದ ಸವಿಯನ್ನೂ ನೆನಪಿಸಿಕೊಂಡಿದ್ದಾರೆ.

ಡಾ. ಚಂದ್ರಶೇಖರ ದಾಮ್ಲೆಯವರು ಜೋಶಿಯವರ ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹ ಸಂಪರ್ಕ ಯಾವ ಯಾವ ಮುಖದಲ್ಲಿ ವ್ಯಾಪಿಸಿಕೊಂಡಿವೆ ಅನ್ನುವುದನ್ನು ಬಹು ಹೃದ್ಯವಾಗಿ, ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ವ್ಯಕ್ತಿಯೊಬ್ಬ ತನ್ನ ಬದುಕಿನ ಪರಿಧಿಯನ್ನು ದಾಟಿದಾಗ ಅಥವಾ ವಿಸ್ತರಿಸಿಕೊಂಡಾಗ ಆತ ಅದಾವ ರೀತಿ ಬೆಳೆಯಬಲ್ಲ ಅನ್ನುವುದಕ್ಕೆ ಜೋಶಿಯವರನ್ನೇ ಉದಾಹರಣೆಯಾಗಿ ತೆಗೆದುಕೊಂಡು ಉದ್ಬೋಧಕವಾಗಿ ಬರೆದಿದ್ದಾರೆ. ಜೋಶಿಯವರು ಸಣ್ಣ ಸಣ್ಣ ಸಂಗತಿಗಳನ್ನೂ ಪರಿಭಾವಿಸುವ ರೀತಿ ಮತ್ತು ಅವನ್ನು ವಿಶ್ಲೇಷಿಸುವ ಪರಿ ಸಮಾಜದ ಮೇಲೆ ಎಂತಹ ಪರಿಣಾಮಗಳನ್ನು ಬೀರಬಲ್ಲುದು ಅನ್ನವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಜೋಶಿಯವರ ಬಹುಮುಖ ಆಸಕ್ತಿಯೇ ಅವರನ್ನು ಯಕ್ಷಗಾನ ವಲಯದಲ್ಲಿ ಪ್ರತ್ಯೇಕ ಗುರುತಿಸುವಂತೆ ಮಾಡಿದೆಯೆಂದೂ ಅವರ ಸ್ನೇಹಶೀಲ ನಡವಳಿಕೆಯೇ ಅವರನ್ನು ಜನಾನುರಾಗಿಯನ್ನಾಗಿ ಮಾಡಿದೆಯೆಂದು ಯಥಾರ್ಥವಾಗಿ ಗ್ರಹಿಸಿ ಜೋಶಿಯವರ ವ್ಯಕ್ತಿತ್ವದ ಬಹುಮುಖತೆಯನ್ನು ಅನಾವರಣಗೊಳಿಸಿದ್ದಾರೆ.

ಜೋಶಿ ಅರ್ಥಗಾರಿಕೆ: ಐತಿಹಾಸಿಕ ಆಯಾಮಗಳ ಬಗ್ಗೆ ಬರೆದ ಪ್ರೊ ರಾಧಾಕೃಷ್ಣ ಕಲ್ಚಾರ್ ಅವರು ಯಕ್ಷೇತಿಹಾಸದ ದರ್ಶನವನ್ನು ಮಾಡಿಸಿ ನಾವು 50 ವರ್ಷಗಳ ಹಿಂದಿನ ತಾಳಮದ್ದಳೆಯ ರೀತಿಯನ್ನು ನಿರುಕಿಸುವಂತೆ ಮಾಡಿದ್ದಾರೆ. ಆ ಸಂದರ್ಭದಲ್ಲೇ ಅರ್ಥ ಹೇಳಲು ತೊಡಗಿದ ಜೋಶಿಯವರಿಗೆ ಶೇಣಿ, ಸಾಮಗ, ಪೆರ್ಲ, ಕಾಂತ ರೈ ಮೊದಲಾದ ಘಟಾನುಘಟಿಗಳ ಮಧ್ಯೆ ಹೊಸ ಶೈಲಿಯ ನಿರ್ಮತೃವಾಗುವ ಅನಿವಾರ್ಯತೆ ಹೇಗುಂಟಾಯಿತು ಅನ್ನುವದನ್ನು ಸಾಧಾರಿತವಾಗಿ ನಿರೂಪಿಸಿದ್ದಾರೆ. ಜತೆಗೆ ಜೋಶಿಯವರ ಅರ್ಥಗಾರಿಕೆಯ ವೈಶಿಷ್ಟ್ಯವನ್ನೂ ಎತ್ತಿಕೊಂಡು ವಾದಭೂಮಿಕೆಗೆ ಒಂದಿಷ್ಟು ಗ್ರಾಸವನ್ನು ಒದಗಿಸಿದ್ದಾರೆ.

ಇಡೀ ಕಾರ್ಯಕ್ರಮದ ಸಮೀಕ್ಷೆಗಾಗಿಯೇ ಸುಳ್ಯ ವೆಂಕಟರಾಮ ಭಟ್ಟರನ್ನು ಆಮಂತ್ರಿಸಿದ್ದೆವು. ಅವರು ಬಹು ಪ್ರೀತಿಯಿಂದ ಆಗಮಿಸಿ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಪೂರಯಿಸಿದ್ದಾರೆ. ಮಾತ್ರವಲ್ಲ. ಎಲ್ಲರ ಭಾಷಣಗಳನ್ನೂ ಸಮೀಕ್ಷೆ ಮಾಡಿ ಪತ್ರಿಕೆಗಳಿಗೂ ಕಳುಹಿಸಿಕೊಟ್ಟು ಉಪಕರಿಸಿದ್ದಾರೆ. ಅವೆಲ್ಲವೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು

ಕೆಲವನ್ನು ಇಲ್ಲಿ ದಾಖಲಿಸಿದ್ದೇವೆ. ಅವರೂ ಒಂದು ಪ್ರಬಂಧವನ್ನು ಮಂಡಿಸಿ ಜೋಶಿಯವರ ಬರಹದ ವೈಶಿಷ್ಟ್ಯವನ್ನೂ, ಭಾಷಣದ ವೈಖರಿಯನ್ನೂ ದಾಖಲಿಸಿದ್ದಾರೆ.

ಜೋಶಿಯವರ ಅಭಿನಂದನಾ ಸಮಾರಂಭವನ್ನು ಕೇಳಿ, ನೋಡಿ ಆನಂದಿಸಬೇಕೆಂದು ಬೆಂಗಳೂರಿನಿಂದ ಆಗಮಿಸಿದ್ದ ಸೇರಾಜೆ ಸೀತಾರಾಮ ಭಟ್ಟರನ್ನು ನಾವು ವೇದಿಕೆಗೂ ಆಮಂತ್ರಿಸಿ ಜೋಶಿ ಕುರಿತಾಗಿ ಒಂದೆರಡು ಮಾತುಗಳನ್ನು ನಮ್ಮೊಡನೆ ಹಂಚಿಕೊಳ್ಳಬೇಕೆಂದು ಕೇಳಿಕೊಂಡಾಗ ಅವರು ಯಾವ ಸಿದ್ಧತೆಯಿಲ್ಲದಿದ್ದರೂ ಅಷ್ಟೇ ಪ್ರೀತ್ಯಭಿಮಾನದಿಂದ ಜೋಶಿಯವರ ಬಗ್ಗೆ ಮಾತನಾಡುತ್ತಾ ಅವರೊಬ್ಬ'ಎನ್‌ಸೈಕ್ಲೋಪೀಡಿಯಾ', 'ದೈತ್ಯ ಕೆಲಸಗಾರ' ಎಂದು ಅವರ ಕೆಲಸದ ರೀತಿಯನ್ನು ಬಣ್ಣಿಸಿದರು. ಕೆಲವು ಜನ ಹೇಳುವಂತೆ ಜೋಶಿಯವರು ನಾಸ್ತಿಕರೇನೂ ಅಲ್ಲ. ಅವರು ಆಸ್ತಿಕರು ಅನ್ನುವುದರ ಬಗ್ಗೆ ನನ್ನ ಬಳಿ ಉದಾಹರಣೆಗಳಿವೆ ಅನ್ನುತ್ತಾ ಜೋಶಿಯವರ ಬಹುಮುಖ ವ್ಯಕ್ತಿತ್ವವನ್ನು ಕೆಲವೇ ಮಾತುಗಳಲ್ಲಿ ಸೆರೆಹಿಡಿದು ಆ ಕುರಿತು ಲೇಖನವನ್ನೂ ಕೊಟ್ಟಿದ್ದಾರೆ.

ಅಂದಿನ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಪ್ರೋǁ ಎಂ.ಎ.ಹೆಗಡೆ, ದಂಟಕಲ್ ಅವರು ಜೋಶಿಯವರಿಗೂ ತನಗೂ ಇರುವ ಸ್ನೇಹದ ನಂಟು ಸುಮಾರು ಐವತ್ತು ವರ್ಷಗಳದ್ದು ಎಂದು ಹೇಳುತ್ತಾ ತಾನು ಬರವಣಿಗೆಯ ವಿಷಯದಲ್ಲಿ ಅವರಿಂದ ಹೇಗೆ ಪ್ರೇರಿತನಾದೆ ಅನ್ನವುದನ್ನು ಕೃತಜ್ಞತಾಭಾವದಲ್ಲಿ ಚಿತ್ರಿಸಿದ್ದಾರೆ. ಇತರರ ಯೋಗ್ಯತೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಜೋಶಿಯವರ ಪಾತ್ರ ಹಿರಿದಾದುದು ಮತ್ತು ಅನುಕರಣೀಯವಾದುದು ಎಂದು ಅವರ ವಿಶಾಲ ಮನೋಭಾವವನ್ನು ಎತ್ತಿಹಿಡಿದಿದ್ದಾರೆ. ಓದು, ಬರಹ ಅಥವಾ ಇನ್ಯಾವುದಾದರೂ ಶೈಕ್ಷಣಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಜೋಶಿಯವರ ಜಾಯಮಾನ ಎಂದು ಮನತುಂಬಿ ಅವರನ್ನು ನೆನೆಸಿಕೊಂಡಿದ್ದಾರೆ.

ಜೋಶಿಯವರ ಕುರಿತು ಅಭಿನಂದನಾ ಭಾಷಣ ಮಾಡಿದ ಉಜಿರೆ ಅಶೋಕ ಭಟ್ಟರು ಯಕ್ಷಗಾನಕ್ಕೊಬ್ಬರೇ ಜೋಶಿ, ಹಾಗಲಕಾಯಿ ಕೊಟ್ಟರೂ ಅದನ್ನು ಒಂದು ರುಚಿಕರವಾದ ಭಕ್ಷ್ಯವಾಗಿ ಮಾಡಿಕೊಡಬಲ್ಲ ಒಬ್ಬ ಪಾಕಪ್ರವೀಣನಿದ್ದರೆ ಅವರು ಜೋಶಿ,ಎಂತಹ ಕಚ್ಚಾ ಸರಕನ್ನೂ ಥಳಥಳಿಸುವ ವಸ್ತುವಾಗಿ ಮಾಡಬಲ್ಲ ಜಾದೂಗಾರನಿದ್ದರೆ ಅವರು ಜೋಶಿ ಎಂದು ಅವರ ವ್ಯಕ್ತಿತ್ವದ ನಾನಾ ಮಗ್ಗುಲುಗಳನ್ನು ಅನಾವರಣಗೊಳಿಸಿದರು. ಪ್ರಭಾಕರ ಜೋಶಿಯವರ Initialಲ್ಲಲ್ಲಿ ಇರುವ 'ಎಂ' ಇದುವರೆಗೆ ಮಾಳ, ಮಂಗಳೂರನ್ನು ಮಾತ್ರ ಹೇಳುತ್ತಿತ್ತು. ಈಗ ಮೈಸೂರನ್ನೂ ಹೇಳುತ್ತದೆ ಎಂದು ಮೈಸೂರು ಜನತೆಯನ್ನು ಖುಷಿಪಡಿಸಿದರು. ಹಿರಿಕಿರಿಯರೆಂಬ ಭೇದವಿಲ್ಲದೆ ಎಲ್ಲರನ್ನೂ Involve ಮಾಡುವ ಜೋಶಿಯವರ ಪರಿ ಚೇತೋಹಾರಿಯದುದು; ಅವರೊಬ್ಬ ಪ್ರೇರಕ ಶಕ್ತಿ; ಅವರು ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಮೂರು ತಲೆಮಾರುಗಳ ಕೊಂಡಿ; ಅವರು ನಮ್ಮೊಡನೆ ಇದ್ದು ನಮ್ಮಂತಹ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದುದು ನಮ್ಮೆಲ್ಲರ ಸೌಭಾಗ್ಯ ಎಂದು ಜೋಶಿಯವರ ವ್ಯಕ್ತಿತ್ವವನ್ನು ಗಗನದೆತ್ತರಕ್ಕೆ ಕಾಣಿಸಿದರು.

ನಮ್ಮ ಇನ್ನೊಬ್ಬ ಅತಿಥಿ ಡಾ.ವಿಜಯನಾಥ ಭಟ್, 'ಕೌಂಡಿನ್ಯ ಅವರು ಜೋಶಿ ಯವರಿಗೂ ತನಗೂ ಬೆಳೆದುಬಂದ ಸ್ನೇಹದ ಪರಿಯನ್ನು ತಮ್ಮ ಮನೋಜ್ಞ ಕಾವ್ಯಾತ್ಮಕ,ವಿವರಣಾತ್ಮಕ ಭಾಷೆಯಲ್ಲಿ ಸೆರೆಹಿಡಿದು ಜೋಶಿಯವರ ಹಾಗೂ ಅವರ ಕುಟುಂಬದವರ ಸ್ನೇಹದ ಮಾಧುರ್ಯ, ಕಾಂತಿ, ಪ್ರಭೆಯನ್ನು ಓದುಗರಿಗೆ ಉಣ ಬಡಿಸಿದ್ದಾರೆ. ಅಕ್ಷರ ಅಕ್ಷರ ಪದ ಪದಗಳಲ್ಲೂ ಜೋಶಿಯವರ ಕುರಿತಾದ ಭಾವಪೂರ್ಣ ಪ್ರೀತಿ ಅಂತ ಅನ್ನಿಸಿದರೂ ಅದರಲ್ಲಿ ಇರುವ ಆತ್ಮೀಯತೆ, ಗುಣಗ್ರಾಹಿತ್ವ, ಪ್ರಾಮಾಣಿಕತನ, ಭಾಷೆಯ ಸೊಗಸು, ಕಣ್ಣಿಗೆ ಕಟ್ಟಿಕೊಡುವ ಚಿತ್ರಕಶಕ್ತಿ ಯಾವುದನ್ನೂ ಅಲ್ಲಗೆಳೆಯಲಾಗದು. ಜತೆ ಜತೆಗೆ ಜೋಶಿಯವರ ಅರ್ಥಗಾರಿಕೆಯ ಸಾಮರ್ಥ್ಯವನ್ನೂ ಅವರ ತರುಣ ವಯಸ್ಸಿನ ಅಯಸ್ಕಾಂತೀಯ ವ್ಯಕ್ತಿತ್ವವನ್ನೂ ಬಹುಸೊಗಸಾಗಿ ಓದುಗರ ಮುಂದೆ ಇಟ್ಟಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಎಂ.ರಾಘವ ನಂಬಿಯಾರ್ ಅವರು ಜೋಶಿಯರಿಗೂ ತಮಗೂ ಇರುವ ಆತ್ಮೀಯ ಸಂಬಂಧ ಮತ್ತು ಬಾಲ್ಯದ ಒಡನಾಟದ ಸಹಯಾತ್ರೆಯನ್ನು ನೆನಪಿಸಿಕೊಳ್ಳುತ್ತಾ ಯಕ್ಷಗಾನದ ಭವ್ಯತೆ, ಘನತೆ, ಗಾಂಭೀರ್ಯವನ್ನು ಕಾಳಿದಾಸ ಹೇಳಿದ 'ಆಕಾರಸದೃಶಃ ಪ್ರಜ್ಞ' ಶ್ಲೋಕದೊಂದಿಗೆ ಅನ್ವಯಿಸಿ ಅದರ ಔನ್ನತ್ಯ, ಹೆಗ್ಗಳಿಕೆಯನ್ನು ಕಾದುಕೊಳ್ಳುವಲ್ಲಿ ತಾಳಮದ್ದಳೆ ಅರ್ಥಧಾರಿಗಳ ಹಾಗೂ ವೇಷಧಾರಿಗಳ ಹೊಣೆಗಾರಿಕೆ ಬಹಳ ದೊಡ್ಡದು ಅಂತ ಹೇಳಿದರು. ಜತೆಗೆ ಮೊದಲ ದಿನದ ವಿಚಾರಗೋಷ್ಠಿಯಲ್ಲಿ ಪ್ರಸ್ತಾಪವಾದ `ಶ್ರುತಿಪ್ರಜ್ಞೆಯ ವಿಚಾರವನ್ನು ಎತ್ತಿಕೊಂಡು ಅದಕ್ಕೊಂದು ಸ್ಪಷ್ಟಿಕರಣವನ್ನು ನೀಡಿದ್ದಾರೆ. ಜೋಶಿಯವರಲ್ಲಿ 'ಶ್ರುತಿಪ್ರಜ್ಞೆ ಇಲ್ಲ ಎಂಬ ಅಂಶವನ್ನು ಒಪ್ಪಲಾಗದು ಅನ್ನುತ್ತಾ ಜೋಶಿ ಅಭಿನಂದನಾ ಸಮಾರಂಭದ ಎರಡೂ ದಿನ ನಡೆದ ತಾಳಮದ್ದಳೆಯಲ್ಲಿ ಜೋಶಿ ಎರಡು ಭಿನ್ನ ವಯೋಮಾನಗಳ ಭೀಷ್ಮನ ಪಾತ್ರವನ್ನು ವಹಿಸಿ ಶ್ರುತಿಬದ್ಧತೆಯನ್ನೂ, ಭಾವಪೂರ್ಣತೆಯನ್ನೂ ಪೂರ್ಣಪ್ರಮಾಣದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಅಂತೆಯೇ ಶ್ರೀ ಸೀತಾರಾಮ ಭಟ್ ದಾಮ್ಲ, ಶ್ರೀ ಪ್ರದೀಪಕುಮಾರ್ ಕಲ್ಕೂರ, ಡಾ. ಚಿದಾನಂದ ಗೌಡ, ಶ್ರೀ ಧನಂಜಯ ನೆಲ್ಯಾಡಿ, ಶ್ರೀ ಸುಬ್ರಾಯ ಸಂಪಾಜೆ, ಶ್ರೀ ಆರ್.ಎಸ್. ಗಿರಿ ಪ್ರೊ ಎಂ.ಎಲ್, ಸಾಮಗ, ವಾಸುದೇವರಂಗ ಭಟ್ಟ, ಶ್ರೀ ಎಂ. ಬಾಲಚಂದ್ರ ಡೋಂಗ್ರೆ, ಕೆ.ವಿ. ಅಕ್ಷರ, ಪ್ರೊ ಲೀಲಾವತಿ ಎಸ್. ರಾವ್,ಡಾ. ಸುಧೀರ ಶೆಟ್ಟಿ, ಡಾ. ಧರಣೀದೇವಿ ಮಾಲಗತ್ತಿ, ಅನಂತ ಪದ್ಮನಾಭ ಪಾಠಕ್ ಮೊದಲಾದವರು ಈ ಅಭಿನಂದನಾ ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಡೀ ಕಾರ್ಯಕ್ರಮವನ್ನು ಶ್ರೀಮಂತಗೊಳಿಸಿದರು.

ಸಮಾರಂಭದ ಮೊದಲ ದಿನ ಡಾ. ಜೋಶಿಯವರನ್ನೊಳಗೊಂಡು 'ಭೀಷ್ಮ ವಿಜಯ' ತಾಳಮದ್ದಳೆ ಹಾಗೂ ಮರುದಿನ 'ಭೀಷ್ಮ ಪರ್ವ' ತಾಳಮದ್ದಳೆ ಮತ್ತು 'ರಾಧಾಂತರಂಗ' ಬಯಲಾಟ ಪ್ರದರ್ಶನಗೊಂಡು ಜೋಶಿ ಅಭಿನಂದನೆಯನ್ನು ಮನರಂಜನೆಯ ದಿಕ್ಕಿನತ್ತಲೂ ಒಯ್ದು ಶೋತ್ತುಗಳ ಮನವನ್ನು ಮುದಗೊಳಿಸಿದವು.

ಇವರಲ್ಲದೆ ಪ್ರಸಿದ್ಧ ಕಲಾವಿದರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಕುಂಬ್ಳೆ ಸುಂದರರಾಯರು, ಕೆ. ಗೋವಿಂದ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟರು, ಜಬ್ಬಾರ್ ಸಮೋ, ಕೆರೆಮನೆ ಶಿವಾನಂದ ಹೆಗಡೆ, ಹಿರಿಯ ಸಾಹಿತಿ ಪ್ರೊ. ಎಂ. ರಾಮಚಂದ್ರ ಕಾರ್ಕಳ ಮೊದಲಾದವರು ಜೋಶಿಯವರಿಗೆ ಶುಭಾಶಂಸನಗಳನ್ನು ಕಳುಹಿಸಿದ್ದು ಅವನ್ನು ಇಲ್ಲಿ ಪ್ರತ್ಯೇಕವಾಗಿ ದಾಖಲಿಸಿದ್ದೇವೆ. ಅವರೆಲ್ಲರಿಗೂ 'ಜೋಶಿ ಅಭಿನಂದನಾ ಸಮಿತಿ' ಹಾರ್ದಿಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.
ಕೊನೆಯದಾಗಿ ಒಂದು ಮಾತು. ಈ ಪುಸ್ತಿಕೆಯನ್ನು ಹೊತರುವಲ್ಲಿ ಪರೋಕ್ಷವಾಗಿ ಬೆಂಬಲಕ್ಕೆ ನಿಂತು ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಿದ ಡಾ. ಎಂ. ಪ್ರಭಾಕರ ಜೋಶಿಯವರನ್ನು ಮರೆಯುವುದಾದರೂ ಹೇಗೆ? ಅವರಿಗೆ ಹಾರ್ದಿಕ ಕೃತಜ್ಞತೆಗಳು.

ವಂದನೆಗಳೊಂದಿಗೆ
ಮೈಸೂರು
ಇತಿ ತಮ್ಮವ
ದಿನಾಂಕ: 20-11-2017
ಗ.ನಾ. ಭಟ್ಟ

ಪುಟನೋಟ
1. ಉದ್ಘಾಟನಾ ಭಾಷಣ
ವಾಗರ್ಥ ಗೌರವಕ್ಕೆ ಪ್ರಾರಂಭದ ಮಾತುಗಳು / ಡಾ. ರಮಾನಂದ ಬನಾರಿ
1
2 ಒಂದು ಎನ್‌ಸೈಕ್ಲೋಪೀಡಿಯಾ / ಸೇರಾಜೆ ಸೀತಾರಾಮ ಭಟ್ಟ 5
3 ಡಾ। ಜೋಷಿ ಹಲವರು ಕಂಡಂತೆ / ವೆಂಕಟರಾಮ ಭಟ್ಟ 8
4 ಡಾ. ಎಂ. ಪ್ರಭಾಕರ ಜೋಶಿಯವರ ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹಸಂಪರ್ಕ / ಚಂದ್ರಶೇಖರ ದಾಮ್ಲ 14
5 ಜೋಶಿ ಅರ್ಥಗಾರಿಕೆ :ಐತಿಹಾಸಿಕ ಆಯಾಮಗಳು / ರಾಧಾಕೃಷ್ಣ ಕಲ್ಚಾರ್ 21
6. ಪ್ರಭಾಕರ ಜೋಶಿ-ನಮ್ಮ ನಡುವಿನ ಧೀಮಂತ / ಪ್ರೊ. ಎಂ.ಎ. ಹೆಗಡೆ 26
7. ಯಕ್ಷಗಾನಕ್ಕೊಬ್ಬರೇ ಜೋಶಿ ಅಭಿನಂದನಾ ಭಾಷಣ / ಅಶೋಕ ಭಟ್, ಉಜಿರೆ 30
8. ಸಾಂಸ್ಕೃತಿಕ ರಾಯಭಾರಿ ಡಾ. ಎಂ. ಪ್ರಭಾಕರ ಜೋಶಿ / ವಿದ್ವಾನ್ ಗ.ನಾ. ಭಟ್ಟ 32
9. ಪ್ರಭಾಕರ ನಮಸ್ತುಭ್ಯಮ್ / ಡಾ. ವಿಜಯನಾಥ ಭಟ್ 38
10. ನಾಡಿನ ಕಣ್ಮಣಿ – ಡಾ. ಜೋಶಿ ಅಧ್ಯಕ್ಷ ಭಾಷಣ / ಡಾ. ಕೆ.ಎಂ. ರಾಘವ ನಂಬಿಯಾ‌ರ್ 45
11. ನಾನು ಮೂಕನಾಗಿದ್ದೇನೆ ಸಂಮಾನ ಸ್ವೀಕಾರ, ಕೃತಜ್ಞತಾ ಭಾಷಣ ಸಂಕ್ಷೇಪ 51
12. ಅತಿಥಿಗಳ ಶುಭಾಶಂಸನಗಳು 55
13. ಸಂದೇಶ-ಸ್ಪಂದನ 60

ಉದ್ಘಾಟನಾ ಭಾಷಣ

ವಾಗರ್ಥ ಗೌರವಕ್ಕೆ ಪ್ರಾರಂಭದ ಮಾತುಗಳು

ಡಾ. ರಮಾನಂದ ಬನಾರಿ, ಮಂಜೇಶ್ವರ

ವಾಗರ್ಥ ಎನ್ನುವುದು ಒಂದು ಸುಂದರವಾದ ರೂಪಕ. ಅದು ನಮ್ಮ ಸಂಸ್ಕೃತಿಯ ಪ್ರತೀಕವೂ ಹೌದು. ನಾವು ಆರಾಧಿಸುವ ದೇವರು ಜಗತ್ತಿಗೆ ನೀಡುವ ಸಂದೇಶವೂ ಹೌದು. ಎರಡು ಒಂದಾಗುವುದು ಮತ್ತು ಬೇರೆಯೇ ಒಂದಾಗುವುದು ಈ ಕವಿವಾಣಿಯಲ್ಲಿ ಅಂತರ್ಗತ ವಾಗಿರುವ ಸತ್ಯ. ಅದುವೇ ಆದರ್ಶವಾದಂತಹ ದಾಂಪತ್ಯ.

ಗಂಡ-ಹೆಂಡಿರ ನಡುವಿನ ಸಂಬಂಧ ಮಾತ್ರವಲ್ಲ ಬದುಕಿನ ಎಲ್ಲ ಸಂಬಂಧಗಳೂ ಒಂದು ಅರ್ಥದಲ್ಲಿ ವಾಗರ್ಥವೇ ಆಗಿರಬೇಕು. ನಮ್ಮ ವೃತ್ತಿ-ಪ್ರವೃತ್ತಿಗಳೆಲ್ಲ ಸೇರಿದಂತೆ ಜೀವನದ ಎಲ್ಲ ಕ್ಷೇತ್ರಗಳಿಗೂ ಅದು ಅಷ್ಟೇ ಸಮರ್ಪಕವಾಗಿ ಅನ್ವಯಿಸುತ್ತದೆ ಅಥವಾ ಅನ್ವಯಿಸಬೇಕು. ಯಕ್ಷಗಾನದಲ್ಲಂತೂ ಈ ಮಾತು ಇಮ್ಮಡಿಯಿಂದ ಅರ್ಥಪೂರ್ಣ ವಾಗುತ್ತದೆ. ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿಯವರ ಜೀವನ ಮತ್ತು ಯಕ್ಷಕಲಾ ಜೀವನಕ್ಕೆ ಸಲ್ಲುತ್ತಿರುವ ವಾಗರ್ಥ ಗೌರವ ಅತ್ಯಂತ ಉಚಿತವಾದದ್ದು.

ಜೋಶಿಯವರು ನನ್ನ ನಿಡುಗಾಲದ ಸ್ನೇಹಿತರು. A Friend in Deed is a Friend Indeed ಎನ್ನುವ ಒಂದು ಮಾತು ನಮ್ಮಿಬ್ಬರ ವೈಯಕ್ತಿಕ, ಕೌಟುಂಬಿಕ,

ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಆಗಾಗ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಮತ್ತು ಅದು ನನ್ನ ವೃತ್ತಿಕ್ಷೇತ್ರವನ್ನೂ ಒಳಗೊಂಡಿದೆ. ಅವರ ಮಡದಿ ಸುಚೇತಾ ಜೋಶಿ ಒಬ್ಬ ಭಾರತೀಯ ಸಂಸ್ಕೃತಿಯ ಸದ್ಗೃಹಿಣಿ, ನನ್ನ ಶ್ರೀಮತಿಯ ಅಚ್ಚುಮೆಚ್ಚಿನ ಗೆಳತಿ, ಈಗ ಅಮೇರಿಕಾದಲ್ಲಿ ನೆಲೆಸಿರುವ ಇಬ್ಬರು ಮಕ್ಕಳೂ ಅಷ್ಟೇ - ಜೋಶಿ ಕುಟುಂಬದ ಸಂಪತ್ತು. ಆಗಾಗ ನೆನಪಿಸಿಕೊಳ್ಳುವವರು. ಎಳವೆಯಲ್ಲಿ ಕಂಡಾಗಲೆಲ್ಲ ಪ್ರೀತಿಯಿಂದ ಗೌರವದಿಂದ ಮಾತಾಡಿಸುವವರು. ಮನುಷ್ಯನಿಗೆ ಇದಕ್ಕಿಂತಲೂ ಹೆಚ್ಚಿಗೆ ಇನ್ನೇನು ಬೇಕು?

ಇಷ್ಟಿದ್ದರೂ ಜೋಶಿಯವರೂ ನಾನೂ ಸಮೀಪವರ್ತಿಗಳಾದದ್ದು ಯಕ್ಷಗಾನದ ಮೂಲಕವೇ. ಅದೂ ಅರ್ಥಗಾರಿಕೆಯ ಮೂಲಕವೇ. ಕಾವ್ಯ ಮತ್ತು ಅರ್ಥಗಾರಿಕೆ ನನ್ನ ಅತ್ಯಂತ ಪ್ರೀತಿಯ ಎರಡು ಅಭಿವ್ಯಕ್ತಿಯ ಮಾಧ್ಯಮಗಳಾದ್ದರಿಂದ ಆ ಎರಡನ್ನೂ ಆಸ್ವಾದಿಸುವ ಅವಕಾಶಗಳನ್ನು ನಾನು ಕಳಕೊಳ್ಳುವುದಿಲ್ಲ. ನನ್ನ ವೃತ್ತಿಯ ಮಿತಿಯಲ್ಲಿ ಈ ಆಸಕ್ತಿಯನ್ನು ನಿರ್ಬಂಧಿಸಬೇಕಾದ ಅನಿವಾರ್ಯತೆ ಇದೆ ಎನ್ನುವುದು ಬೇರೆಯೇ ಒಂದು ವಿಷಯ.

ಹಿಂದೊಮ್ಮೆ ಮಂಗಳೂರಿಗೆ ಹೋಗಿದ್ದಾಗ ಶೇಣಿ, ದೇರಾಜೆ, ಪೆರ್ಲ ಮೊದಲಾದ ದೊಡ್ಡ ಅರ್ಥಧಾರಿಗಳ ಕೂಟವೊಂದರಲ್ಲಿ ವೇದಿಕೆಯಲ್ಲಿದ್ದ ಜೋಶಿಯವರನ್ನು ನೋಡಿದೆ. ಆ ಕ್ಷಣಕ್ಕೆ ತರುಣ ಜೋಶಿಯವರಿಂದ ಏನೋ ಒಂದು ರೀತಿಯ ಆಕರ್ಷಣೆಗೆ ಒಳಗಾದೆ. Love at first sight ಎನ್ನುತ್ತಾರಲ್ಲ ಹಾಗೆ.

ಆ ದಿವಸ 'ದಂತಭಗ್ನ'ರಾಗಿ (ಅವರ ಹಲ್ಲಿನ ಸೆಟ್ ತೊಂದರೆ ಕೊಟ್ಟಿತ್ತು) ಪೆರ್ಲ ಕೃಷ್ಣ ಭಟ್ಟರು ಪದ್ಯದ ನಡುವೆಯೇ ವೇದಿಕೆಯಿಂದ ನಿರ್ಗಮಿಸಬೇಕಾಗಿ ಬಂತು. ಆಗ ಸಂಘಟಕರು ಬಹುಶಃ ಪೊಳಲಿ ಬಾಲಕೃಷ್ಣ ಶೆಟ್ಟಿ ಅವರಿರಬೇಕು 'ಮುಂದೆ ಅರ್ಜುನನ ಪಾತ್ರವನ್ನು ಜೋಶಿಯವರು ನಿರ್ವಹಿಸುತ್ತಾರೆ' ಎಂದು ಘೋಷಿಸಿದರು. ನಿರೀಕ್ಷೆ ಇಲ್ಲದೆ, ಒಲ್ಲದ ಮನಸ್ಸಿನಿಂದ ವೇದಿಕೆಯನ್ನೇರಿದ ಜೋಶಿಯವರು ಪ್ರೇಕ್ಷಕರಿಗೆ ನಿರಾಶೆ ಯಾಗದಂತೆ, ಒಳ್ಳೆಯ ಅರ್ಥಗಾರಿಕೆಗೆ ಹೆಸರಾದ ಉಡುವೆಕೋಡಿಯವರ ಹನೂಮಂತನಿಗೆ ಅರ್ಜುನನಾಗಿ ಪ್ರಸಂಗವನ್ನು ಸುಗಮವಾಗಿ ಮುಕ್ತಾಯಕ್ಕೆ ಮುಟ್ಟಿಸಿದರು. ನಾನು ಅವರಲ್ಲಿ ಒಬ್ಬ ಭರವಸೆ ಹುಟ್ಟಿಸುವ ಉದಯೋನ್ಮುಖ ಕಲಾವಿದನನ್ನು ಅಂದೇ ಗುರುತಿಸಿದೆ.

ನಿಜಕ್ಕೂ ನಾವು ಒಂದೇ ವೇದಿಕೆಯನ್ನು ಹಂಚಿಕೊಂಡದ್ದು ಪೆರ್ಲಂಪಾಡಿಯ ನಮ್ಮ ಭಾವನ ಮನೆಯಲ್ಲಿ (1972). ಆ ದಿನ ನನ್ನ ತಂದೆಯವರ ಅತಿಕಾಯನಿಗೆ ಜೋಶಿ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದರು. ಅಂಗಧ ಸಂಧಾನದಲ್ಲಿ ದಿವಂಗತ ಯು.ಬಿ. ಗೋವಿಂದಯ್ಯ (ಅಂಗದ) ಮತ್ತು ನಾನು (ಪ್ರಹಸ್ತ) ಭಾಗವಹಿಸಿದ್ದೆವು.

ಇದೆಲ್ಲ ನಡೆದದ್ದು 1960-70ರ ದಶಕದಲ್ಲಿ ನೇತ್ರಾವತಿ ನದಿಯಲ್ಲಿ ಆಮೇಲೆ ಬೇಕಾದಷ್ಟು ನೀರು ಹರಿದುಹೋಗಿದೆ. ಆದರೆ ನಮ್ಮಿಬ್ಬರ ನಡುವಣ ಸ್ನೇಹ ಮಾತ್ರ

ಎಲ್ಲೂ ಹರಿಯದೆ ಉಳಿದಿದೆ.

ಹಾಗೆ ನೋಡಿದರೆ ಜೋಶಿಯವರ ಅರ್ಥಗಾರಿಕೆಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಅವರ ಭಾಷಣ, ಮಾತುಗಾರಿಕೆ, ಲೇಖನಗಳು ಮತ್ತು ಮರೆಯಲಾರದ ಸ್ನೇಹಶೀಲತೆ. ಅವರಿದ್ದಲ್ಲಿ ಸ್ಥಳದಲ್ಲಿ ಏಕತಾನತೆ ಬಾಧಿಸುವುದಿಲ್ಲ. ವಿಚಿತ್ರವಾದ ಹಾಸ್ಯದ ಮಾತುಗಳಿಂದ ಘಟನೆಗಳ ವಿವರಣೆಗಳಿಂದ ಅವರು ಸನ್ನಿವೇಶವನ್ನು ತಿಳಿಯಾಗಿಸುವುದ ರಲ್ಲಿ ಸಿದ್ಧಹಸ್ತರು. ಊಟಕ್ಕೆ ಕುಳಿತಾಗ ಉಪಚಾರಕ್ಕಾಗಿ 'ಜೋಶಿಯವರೆ ದಾಕ್ಷಿಣ್ಯ ಮಾಡಬೇಡಿ' ಎಂದು ಹೇಳಿದರೆ ಥಟ್ಟನೆ ಅವರ ಉತ್ತರ ನೆಗೆಯುತ್ತದೆ. 'ದಾಕ್ಷಿಣ್ಯ ಮಾಡುವುದಕ್ಕೆ ಇದೇನು ನನ್ನ ಮನೆಯೇ', 'ಇಷ್ಟೆಲ್ಲ ಬೇಡವಾಗಿತ್ತು' ಎಂದು ಅತಿಥಿ ಹೇಳಿದರೆ ಮನೆಯ ಯಜಮಾನ ಮರುನುಡಿದನಂತೆ 'ಹಾಗೆ ಹೇಳಬೇಡಿ, ಮತ್ತೆ ನಮಗೂ ಏನೂ ಸಿಕ್ಕುವುದಿಲ್ಲ' ಇಂತಹದು ನೂರಾರು.

ಇನ್ನು ಅರ್ಥಗಾರಿಕೆಗೆ ಬಂದರೆ ಅವರೊಬ್ಬರು ಒಳ್ಳೆಯ ಕಲಾವಿದರೆಂಬುದರಲ್ಲಿ ಸಂದೇಹವೇ ಇಲ್ಲ. ಈ ಬಗ್ಗೆ ವಿವರವಾಗಿ ಮಾತಾಡುವವರು ಮುಂದೆ ಇರುವುದರಿಂದ ನಾನು ಆ ಕುರಿತು ಹೆಚ್ಚಿನ ವಿಶ್ಲೇಷಣೆಗೆ ಹೋಗುವುದಿಲ್ಲ.

ನನ್ನ ದೃಷ್ಟಿಯಲ್ಲಿ ಅವರೊಬ್ಬ ಸಮರ್ಥ ಅರ್ಥಧಾರಿ, ಅವರೊಡನೆ ಅರ್ಥ ಹೇಳುವ ಸುಖವನ್ನು ಅನೇಕ ಬಾರಿ ಅನುಭವಿಸಿದ್ದೇನೆ. ಒಮ್ಮೊಮ್ಮೆ ನಾವು ಪರಸ್ಪರ ಕಿತ್ತಾಡಿದ್ದೂ ಇದೆ. ಅದು ಮನೋಧರ್ಮದ ಕುರಿತಾದ ಕೊರತೆಯಿಂದಾಗಿಯೇ ಹೊರತು ಸ್ನೇಹ ಸಂಬಂಧಕ್ಕೆ ಅದರಿಂದ ಕುಂದಾಗಲಿಲ್ಲ.

ಅಭಿವ್ಯಕ್ತಿಯ ಹಿಡಿತದಲ್ಲಿ ಇರಬಹುದಾದ ಕೆಲವು ದೌರ್ಬಲ್ಯಗಳನ್ನು ಮೀರಿ ನಿಲ್ಲಬಲ್ಲ ಪ್ರತಿಭೆ ಮತ್ತು ವ್ಯುತ್ಪತ್ತಿ ಎರಡೂ ಅವರಲ್ಲಿ ಮೇಳೈಸಿವೆ. ಪ್ರಶೋತ್ತರಗಳಲ್ಲಿ ಜೋಶಿಯವರು ಏನು ಹೇಳಿದ್ದಾರೆ ಎಂಬುದು ಫಕ್ಕನೆ ಎದುರಿನ ಅರ್ಥಧಾರಿಗೆ ಗೊತ್ತಾಗುವುದಿಲ್ಲ. ಕಾರಣ ಗೊತ್ತಾಗದ ಪೆಟ್ಟುಗಳು, ಪಟ್ಟುಗಳು ಅವರಲ್ಲಿ ಧಾರಾಳವಾಗಿ ಇವೆ. ವಿಷಯಕ್ಕೆ ಬಹುತ್ವದ ಅಂಗಾಂಗಗಳನ್ನು ತೊಡಿಸಿ ಹೊಸ ಹೊಸ ತಿರುವುಗಳನ್ನು ಕೊಡುವುದು ಅವರದ್ದೇ ಆದ ಒಂದು ರೀತಿ.

ತಿಳಿಯಾದ ಹಾಸ್ಯದ ಲೇಪನ ಅವರ ಮತ್ತೊಂದು ವೈಶಿಷ್ಟ್ಯ, ಬಲರಾಮನಾಗಿ ಅವರ ಕೌರವನನ್ನು ಪ್ರಶ್ನಿಸುತ್ತಾರೆ. 'ಭಾಷೆ ಕೊಟ್ಟದ್ದು ನಾನು; ಮುರಿದದ್ದೂ ನಾನು. ನನ್ನ ಭಾಷೆಯನ್ನು ನಾನೇ ಮುರಿದರೆ ನಿನಗೇನು ನಷ್ಟ' ಜರಾಸಂಧನಾಗಿ 'ತಿಳಿಯದಾದಿರೆ ಎಂಬಲ್ಲಿ ಸ್ವತಃ ನಗದೆ ಮುಖಕ್ಕೆ ಕೈಯನ್ನು ಅಡ್ಡ ಹಿಡಿದು ನಗುವಂತೆ ನಟಿಸಿ ಇತರರನ್ನು ನಗಿಸಬಲ್ಲವರು ಜೋಶಿ,

ಪೂರ್ವಜರ ಬಳುವಳಿಯೂ ಇರಬಹುದು. ಪರಿಸರದ ಪ್ರಭಾವವೂ ಇರಬಹುದು. ಜೋಶಿ ನಿರಂತರವಾಗಿ ಯಕ್ಷಗಾನವನ್ನು ಪ್ರೀತಿಸುತ್ತಾ ಬಂದವರು. ವಾಗರ್ಥದಂತೆ ಅದರೊಂದಿಗೆ ಒಂದಾದವರು. ಅವರಿಗೆ ಶುಭವಾಗಲಿ.

ಕಳೆದ ವರ್ಷವಷ್ಟೇ ನಮ್ಮ ತಂದೆಯವರ ನೆನಪಿನಲ್ಲಿ ಕೊಡಲಾಗುವ ಕೀರಿಕ್ಕಾಡು

ಪ್ರಶಸ್ತಿ ಅವರಿಗೆ ಪೂರ್ಣಾರ್ಹತೆಯಿಂದ ಸಂದಿದೆ. ಇದೀಗ ಸಂಭ್ರಮದ ಸಮಾರಂಭವನ್ನು ಉದ್ಘಾಟಿಸುವ ಯೋಗ ನನ್ನ ಭಾಗಕ್ಕೆ ಅನಿರೀಕ್ಷಿತವಾಗಿ ಕೂಡಿಬಂದಿದೆ. ಇದು ನಮ್ಮಿಬ್ಬರ ಮನೋಕೂಟಕ್ಕೆ ಸಾಕ್ಷಿಯೆಂದು ನಾನು ಭಾವಿಸುತ್ತೇನೆ. ಇದಕ್ಕೆ ಕಾರಣರಾಗಿರುವ ಸಂಬಂಧಿಸಿದವರಿಗೆಲ್ಲ ಪ್ರತ್ಯೇಕವಾಗಿ ಆತ್ಮೀಯರಾದ ವಿದ್ವಾಂಸ, ಅರ್ಥಧಾರಿ ಗ.ನಾ. ಭಟ್ಟರ ಪ್ರೀತಿ ವಿಶ್ವಾಸಕ್ಕೆ ಅಭಿಮಾನಪೂರ್ವಕ ಕೃತಜ್ಞತೆಗಳು.

◆ ◆ ◆

ಜೋಶಿ

ಒಂದು ಎನ್‌ಸೈಕ್ಲೋಪೀಡಿಯಾ

ಸೇರಾಜೆ ಸೀತಾರಾಮ ಭಟ್ಟ

'ಜೋಶಿಯವರು ಮನುಷ್ಯರಲ್ಲ!' 13-05-2017ರ ಶನಿವಾರದಂದು ಮೈಸೂರಿನ ಜಗಮೋಹನ ಅರಮನೆ ಸಭಾಂಗಣದಲ್ಲಿ 'ಜೋಶಿ ವಾಗರ್ಥ ಗೌರವ' ಸಮಾರಂಭದಮೊದಲನೇ ದಿವಸದಂದು ನಾನು ಭಾಷಣವನ್ನು ಆರಂಭಿಸಿದ್ದು ಹೀಗೆ. ಆದರೆ ಅಲ್ಲಿಗೆ ನನ್ನ ವಾಕ್ಯ ಪೂರ್ತಿಯಾಗುವುದಿಲ್ಲ. ಅದರ ಮುಂದುವರಿದ ತುಂಡು ಅವರೊಂದು 'ಎನ್‌ಸೈಕ್ಲೋಪೀಡಿಯಾ'. 'ಆಡು ಮುಟ್ಟದ ಸೊಪ್ಪಿಲ್ಲ' ಎಂಬ ಉಕ್ತಿಯಂತೆ ಜೋಶಿ ಮುಟ್ಟದ ವಿಷಯವಿಲ್ಲ, ತಟ್ಟದ ವಿಚಾರವಿಲ್ಲ. ಯಾವುದಾದರೊಂದು ವಿಷಯದ ಕುರಿತು ಏನಾದರೂ ಹೇಳುವಾಗ ಅವರು ಆ ವಿಷಯದ ಕುರಿತು ಸಂಪೂರ್ಣ ತಿಳಿದೇ ಮಾತನಾಡುತ್ತಾರೆ. ಅಲ್ಪ ವಿದ್ಯಾ... ಎಂಬ ಹಾಗೆ ಅಲ್ಲ.

ಪೂರ್ವ ನಿಯೋಜಿತವಾಗಿ ವೇದಿಕೆಯ ಮೇಲೆ ಭಾಗವಹಿಸುವುದಕ್ಕಾಗಿ ಬಂದವನು

ನಾನಲ್ಲ. ಆತ್ಮೀಯತೆಯಿಂದ (ಸಂಘಟಕರ- ಜೋಶಿಯವರ) ಎರಡೂ ದಿವಸಗಳಲ್ಲೂ ಸಮಾರಂಭದಲ್ಲಿ ಪಾಲ್ಗೊಂಡು ಸಂತೋಷಗೊಳ್ಳುವ ಆಸಕ್ತಿಯಿಂದ ಬಂದವನನ್ನು ವೇದಿಕೆಗೆ ಏರಿಸಿದ್ದೀರಿ. ಗ.ನಾ. ಭಟ್ಟರಾದಿಯಾಗಿ ಸಂಬಂಧಪಟ್ಟವರಿಗೆಲ್ಲ ನಾನು ಆಭಾರಿ.

ಜೋಶಿಯವರ ವಿಮರ್ಶಾ ವಿಧಾನ, ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹ ಸಂಪರ್ಕ, ತತ್ವ ಚಿಂತನೆ, ಅರ್ಥಗಾರಿಕೆಯಲ್ಲಿ ಐತಿಹಾಸಿಕ ಆಯಾಮ ಇತ್ಯಾದಿ ವಿಷಯಗಳ ಕುರಿತಂತೆ ವಿದ್ವಾಂಸರುಗಳನೇಕರು ಪ್ರಬಂಧ ಮಂಡಿಸುವುದಕ್ಕಿದ್ದಾರೆ. ಹಾಗಾಗಿ ಆ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದೆ ನನಗೆ ಸಂಬಂಧಿಯಾದ ಅವರ ಕುರಿತಾದ ಕೆಲವೇ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ.
ಫ್ರಾಂಕ್ ವರೆಲ್, ಎವರ್ಟನ್ ವಿಕ್ಷ್ರಿರಿoದ ತೊಡಗಿ ಈಗಿನ ಸಚಿನ್ ತೆಂಡುಲ್ಕರ್ ವರೆಗಿನ ಕ್ರಿಕೆಟಿನ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕೇಳಿದ ತಕ್ಷಣ ಕೊಡಬಲ್ಲವರು, ಭಾರತದಲ್ಲಿ ಹಾಕಿ ಆಟದ ಸುವರ್ಣಯುಗ ಯಾವ ಇಸವಿಯಲ್ಲಿ, ಅದು ಹೇಗೆ ಇಳಿಮುಖವಾಗಿದೆ, ಈಗ ಹೇಗಿದೆ ಎಂದು ಕೇಳಿದರೆ ಸ್ಪಷ್ಟ ಚಿತ್ರಣವನ್ನು ನೀಡಬಲ್ಲರು, ಸಾಮಾನ್ಯವಾಗಿ ಬರುವ ಜ್ವರ, ಗಂಟಲು ನೋವು, ಕಾಲಿನ ಉಳುಕು ಇತ್ಯಾದಿಗಳಿಗೆ ಯಾವ ಟ್ಯಾಬ್ಲೆಟ್ಸ್, ಹಳ್ಳಿಮದ್ದು ತೆಗೆದುಕೊಳ್ಳಬೇಕೆಂದು ಖಚಿತವಾಗಿ ಹೇಳಬಲ್ಲವರು ಡಾಕ್ಟರ್ ಜೋಶಿ, ಗರಂ ಮಸಾಲೆಯನ್ನು ಉಪಯೋಗಿಸದೇ ಪಾರಂಪರಿಕ ಗೊಜ್ಜು, ತಂಬುಳಿ ಇತ್ಯಾದಿಗಳನ್ನು ಹೇಗೆ ಮಾಡುವುದು ಎಂದು ಹೇಳುವುದು ಮಾತ್ರವಲ್ಲ ಮಾಡಿ ತೋರಿಸಬಲ್ಲ ಪಾಕ ಪ್ರವೀಣ.

ಜೋಶಿಯವರ ತಿಳುವಳಿಕೆಯ, ಅವರ ಆಸಕ್ತಿಯ ವಿಷಯಗಳನ್ನು ಸರಿಯಾಗಿ ತಿಳಿಯ ಬೇಕಾದರೆ ಅವರೊಂದಿಗೆ ಹಲವು ದಿವಸಗಳ “ತಿರುಗಾಟ” ಮಾಡಬೇಕು. ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆ ಬದಿಯ ನಾಮಫಲಕವನ್ನು ಕಂಡ ಕೂಡಲೇ ಅದರ ಕುರಿತಾದ ಅವರ ಸಂಶೋಧನೆ ಆರಂಭವಾಗುತ್ತದೆ. ಮಂಗಳೂರಿನ ಸಮೀಪದ ಒಂದು ಫಲಕ 'ಬ್ರಹ್ಮರ ಕೂಟ್ಲು”, ಸೀತಣ್ಣ ಇದು ಬಹುಶಃ 'ಬ್ರಹ್ಮೆರ ಕೂಟೇಲ್” ಎಂಬ ತುಳು ಶಬ್ದದಿಂದ ಬಂದಿರಬೇಕು' ಎಂದು ವಿಶ್ಲೇಷಿಸುತ್ತಾರೆ. ತಾನು ಪರಮ ಆಸ್ತಿಕನೆಂದು ತೋರಿಸಿಕೊಳ್ಳುವುದಕ್ಕೆ ಹಣಯಲ್ಲೋ, ಕತ್ತಿನಲ್ಲೋ, ಕಯ್ಯಲ್ಲೋ ಕೆಲವು ಕುರುಹುಗಳನ್ನು ಅಳವಡಿಸಿಕೊಳ್ಳುವುದು, ಕಂಡ ಕಂಡ ದೇವಸ್ಥಾನಗಳಿಗೆಲ್ಲಾ ವಾಹನದಲ್ಲಿ ಪ್ರಯಾಣಿಸುತ್ತಿರುವಾಗಲೇ ನಮಸ್ಕರಿಸುವುದು ಇತ್ಯಾದಿಗಳಿಂದ ಜೋಶಿಯವರು ದೂರ. “ಅವರು ನಾಸ್ತಿಕರು ಮಾರಾಯರೇ” ಎಂದು ಕೆಲವರು ಆಡಿದ್ದನ್ನು ನಾನು ಕೇಳಿದ್ದೇನೆ. ನನ್ನ ಹೆಂಡತಿಗೆ ಕಣ್ಣು ನೋವಾಗಿ ಆಪರೇಷನ್ ಸಂದರ್ಭದಲ್ಲಿ ಮನೆಗೆ ಬಂದಿದ್ದ ಜೋಶಿಯವರು ಎಲ್ಲಾ ಮಾತನಾಡಿ ಆದ ಮೇಲೆ ಹೊರಡುವಾಗ ಸೀತಣ್ಣ ನಿನ್ನ ನಂಬಿಕೆ ಹೇಗೋ ನನಗೆ ಗೊತ್ತಿಲ್ಲ. ಆದರೆ ಕತ್ತಿನ ಮೇಲಿನ ತೊಂದರೆಗಳಿಗೆ ಶಿವನು ನಿವಾರಕ, ಹಾಗಾಗಿ ಮೊದಲು ಶಿವನ ದೇವಸ್ಥಾನಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸು ಎಂದು ಹೇಳಿದರು! ಅವರ ಆಸ್ತಿಕತೆಯನ್ನು ಪ್ರಶ್ನಿಸುವವರಿಗಾಗಿ ಈ ಪ್ರಸ್ತಾವನೆ

ಯನ್ನು ಮಾಡಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಜೋಶಿಯವರೊಬ್ಬ ನಿಜಾರ್ಥದ ಸ್ನೇಹಿತ. Out of the Way ಹೋಗಿ ಸಹಾಯ ಮಾಡುವವರು. ಯಾವುದಾದರೊಂದು ಸಮಸ್ಯೆಯ ಕುರಿತಾಗಿ ಫೋನಿನಲ್ಲಿ ಕೇಳಿದಾಗ ನಾನು ರೆಫರ್ ಮಾಡಿ ಹೇಳುತ್ತೇನೆ. ನಾಳೆ ಫೋನ್ ಮಾಡಿ ಎಂದು ಹೇಳುತ್ತಾರೆ. ಆದರೆ ಆ ದಿನ ಸಂಜೆಯೇ ಅವರೇ ಕರೆಮಾಡಿ ಉತ್ತರವನ್ನು ತಿಳಿಸುವುದು ಅವರ ಸ್ವಭಾವ, ಕಿರಿಯರು, ಹಿರಿಯ ಅರ್ಥದಾರಿಗಳಲ್ಲಿ ಮಾಹಿತಿಗಾಗಿ ಏನನ್ನಾದರೂ ಕೇಳಿದರೆ ಸರಿಯಾಗಿ ವಿಷಯವನ್ನು ತಿಳಿಸುವ ಉದಾರತೆ ಯಾರಲ್ಲೂ ಇರುವುದಿಲ್ಲ. ಆದರೆ ಇವರು ಹಾಗಲ್ಲ. ಒಮ್ಮೆ 'ವಿಭೀಷಣ ನೀತಿ' ಪ್ರಸಂಗದ ಅವರ ರಾವಣನಿಗೆ ವಿಭೀಷಣ ಹೇಳಬೇಕಾಗಿದ್ದ ನನಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಕೋಚಿಂಗ್ ಕೊಟ್ಟವರು ಜೋಶಿ, ರಾವಣನಿಗೆ ಉತ್ತರಿಸಲು ಕಷ್ಟವಾಗಬಹುದಾದ ಯಾವ್ಯಾವ ವಿಚಾರಗಳನ್ನು ಹೇಗೆ ಹೇಗೆ ಮಂಡನೆ ಮಾಡಬೇಕೆಂದು ಮುಕ್ತವಾಗಿ ತಿಳಿಸಿದರು. ತಾಳಮದ್ದಳೆ ಯಶಸ್ವಿಯಾಯಿತು. ಭೀಷ್ಮ ಪರ್ವ ಪ್ರಸಂಗದಲ್ಲಿ (ಕರ್ಮಬಂಧದ ಭಾಗ ಇಲ್ಲದಿದ್ದರೆ) ಕೃಷ್ಣನಿಗೆ ಇರುವುದು ಒಂದು ಭಾಮಿನಿ ಮಾತ್ರ ಒಮ್ಮೆ ಅವರು ಕೃಷ್ಣನ ಪಾತ್ರವನ್ನು ತಾನಿಟ್ಟುಕೊಂಡು ನನಗೆ ಕೌರವನ ಪಾತ್ರವನ್ನು ಬಿಟ್ಟುಕೊಟ್ಟರು.ಬಹಳ ಹಿಂದೆ ನಾನು ಅರ್ಥಧಾರಿಯಾಗಿ ಬೆಳೆಯುತ್ತಿದ್ದಾಗಲೇ 'ಕರ್ಣ ಪರ್ವ' ಪ್ರಸಂಗದಲ್ಲಿ ನನ್ನ ಕರ್ಣನ ಪಾತ್ರಕ್ಕೆ ಅರ್ಜುನ ಹೇಳಿದ ಸಹೃದಯಿ ಜೋಶಿಯವರು
ಮಿತ್ರ ಜೋಶಿಯವರ ಎಲ್ಲಾ ಮಗ್ಗುಲುಗಳನ್ನೂ ಪರಿಚಯಿಸಲು ಒಂದು ವಾರದ ಕಾರ್ಯಕ್ರಮವಾದರೂ ಬೇಕು. ಸಮಯದ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವೇ ವಿಷಯಗಳನ್ನು ಪ್ರಸ್ತುತಪಡಿಸಿದ್ದೇನೆ. ಅಭಿನಂದನಾ ಸಮಿತಿಯವರಿಗೆ ಇನ್ನೊಮ್ಮ ವಂದಿಸುತ್ತಾ ಮಿತ್ರ ಜೋಶಿಯವರಿಗೂ, ಅವರ ಕೌಟುಂಬಿಕರಿಗೂ ಆಯುರಾರೋಗ್ಯ ಸಂತೃಪ್ತಿಗಳು ಒದಗಿಬರಲೆಂಬ ಶುಭಕಾಮನೆಗಳನ್ನು ತಿಳಿಸುತ್ತಾ ವಿರಮಿಸುತ್ತೇನೆ. ನಮಸ್ಕಾರ.

◆ ◆ ◆

ಡಾ। ಜೋಷಿ ಹಲವರು ಕಂಡಂತೆ

ವೆಂಕಟರಾಮ ಭಟ್ಟ, ಸುಳ್ಯ

ಡಾ. ಎಂ. ಪ್ರಭಾಕರ ಜೋಷಿಯವರದು ಒಂದು ವಿಶಿಷ್ಠ ವ್ಯಕ್ತಿತ್ವ, ಬರಹಗಾರನಾಗಿ, ಭಾಷಣಗಾರನಾಗಿ, ಯಕ್ಷಗಾನ ಅರ್ಥಧಾರಿಯಾಗಿ, ವಿಮರ್ಶಕನಾಗಿ, ಪ್ರಾಧ್ಯಾಪಕನಾಗಿ, ಸಂಘಟಕನಾಗಿ ಅವರಿಟ್ಟ ಹೆಜ್ಜೆ ವ್ಯಾಪಕವಾದುದು. ಸಂದ ಸನ್ಮಾನಗಳು ಹಲವು. ಅರಸುತ್ತಿರುವವುಗಳು ಇನ್ನೆಷ್ಟೋ! ಅತಿಶಯೋಕ್ತಿಗಳ ಆಡಂಬರವನ್ನು ಮಾತಿನಲ್ಲೂ, ಬದುಕಿನಲ್ಲೂ, ಬರಹದಲ್ಲೂ ಒಲ್ಲದ ಜೋಷಿಗೆ ಮೈಸೂರಿನಲ್ಲೊಂದು ಒಲವಿನ ಗೌರವ. ಅದಕ್ಕಾಗಿಯೇ 'ಡಾ| ಎಂ. ಪ್ರಭಾಕರ ಜೋಷಿ ಅಭಿನಂದನ ಸಮಿತಿ'ಯಿಂದ 'ಜೋಷಿ ವಾಗರ್ಥ ಗೌರವ'ವೆಂಬ ಕಲಾಪಗುಚ್ಛ, ಮೈಸೂರಿನ ಜಗಮೋಹನ ಅರಮನೆಯ ಸಭಾಂಗಣದಲ್ಲಿ ಮೇ 13 ಮತ್ತು 14ನೆಯ ದಿನಾಂಕದಂದು ಸಂವಾದ, ಯಕ್ಷಗಾನ ತಾಳಮದ್ದಳೆ, ವಿಚಾರಸಂಕಿರಣ, ಗೌರವಾರ್ಪಣೆ, ಬಯಲಾಟಗಳು ಎರಡು ದಿನ ಬಿತ್ತರಗೊಂಡವು. ಯಕ್ಷಗಾನದ ಅರ್ಥಧಾರಿ, ಬರೆಹಗಾರ, ವೇದವಿದ ವಿದ್ವಾನ್ ಗನಾ ಭಟ್ಟರ ಯೋಚನೆ, ಯೋಜನೆ, ದಿಗ್ದರ್ಶನಕ್ಕೆ ಬಳಗದ ಎಲ್ಲರು ಒಮ್ಮನದಿಂದ ಕೈ ಜೋಡಿಸಿದರು.

ಉದ್ಘಾಟಕರಾದ ಯಕ್ಷಗಾನದ ಅರ್ಥಧಾರಿ, ಕವಿ, ಲೇಖಕ ಡಾ। ರಮಾನಂದ ಬನಾರಿಯವರು ತಾಳಮದ್ದಳೆಯೇ ಒಂದು ವಾಗರ್ಥದ ವಿಶ್ವರೂಪ ದರ್ಶನವನ್ನು ಮಾಡಿಸುತ್ತದೆ. ತನಗೆ ರಂಗದಲ್ಲಿ ಆಪ್ತರಾದವರು ಜೋಷಿಯವರು. ರಂಗದಲ್ಲಾದ ವೈಷಮ್ಯ ಅವರನ್ನು ರಂಗದ ಹೊರಗೆ ಕಾಡಿದ್ದಿಲ್ಲವೆಂದು ನುಡಿದರು. ಕಾರ್ಯಕ್ರಮದ ಪ್ರಸ್ತಾವನೆಯ ನುಡಿಗಳಲ್ಲಿ ವಿದ್ವಾನ್ ಗನಾ ಭಟ್ಟರು ಡಾ. ಜೋಷಿಯವರು ಒಬ್ಬ ವ್ಯುತ್ಪನ್ನ, ಚಿಂತನಶೀಲ, ಮೊನಚುಮಾತಿನ ಅರ್ಥದಾರಿ. ಸದಭಿರುಚಿಯ ವಿನೋದ ಪ್ರಿಯ. ಹಲವು ಆಯಾಮಗಳ ಮೇಲ್ಪಂಕ್ತಿಯ ವಿಮರ್ಶಕನೆಂದು ಕೊಂಡಾಡಿದರು.

ಗನಾ ಭಟ್ಟರು ಮರುದಿನದ ವಿಚಾರಗೋಷ್ಠಿಯಲ್ಲಿ 'ಜೋಷಿಯವರ ತತ್ವ ಚಿಂತನ ಎಂಬ ಕುರಿತು ಮಾತನಾಡಿದರು. ಜೋಷಿಯವರು ಒಬ್ಬ ಒಳ್ಳೆಯ ತತ್ವ ಚಿಂತಕ. ಶಂಕರಾಚಾರ್ಯರ ಅದೈತವನ್ನೂ, ಚಾರುವಾಕರ ನಿರೀಶ್ವರ ವಾದವನ್ನೂ ಸಮನ್ವಯ ಗೊಳಿಸಬಲ್ಲರು. ಯಕ್ಷಗಾನ ಕಲಾವಿದ, ಉಪನ್ಯಾಸಕ, ವಿದ್ವಾಂಸ ಎಂ.ಎ. ಹೆಗಡೆಯವ ರೊಂದಿಗೆ ಅವರು ಬರೆದ 'ಭಾರತೀಯ ತತ್ವ ಶಾಸ್ತ್ರ ಒಂದು ಮೌಲಿಕ ಕೃತಿ. ಭಾರತೀಯ ದರ್ಶನಗಳ ಸಂಗಮವದು. ಅವರ ಇನ್ನೊಂದು ಕೃತಿ 'ತತ್ವ ಮನನ'. ಹದಿನೇಳು ಲೇಖನಗಳನ್ನೊಳಗೊಂಡ ವೇದಾಂತ ತತ್ವ ಸಾರ. ಒಂದೊಂದು ಶಬ್ದಕ್ಕೂ ಅವರು ವಿಶೇಷ ಅರ್ಥವನ್ನು ಕಲ್ಪಿಸಬಲ್ಲರು. ಶಿವನ ಮುಕ್ಕಣ್ಣು ಮೂರು ವೇದಗಳೆಂದು ಅವರು ವ್ಯಾಖ್ಯಾನಿಸುತ್ತಾರೆ. ಹೀಗೆ ಜೋಷಿಯವರ ಪಾಂಡಿತ್ಯದ ಆಳವನ್ನು ಉದಾಹರಣೆಯೊಂದಿಗೆ ವಿವರಿಸಿದರು.

ಯಕ್ಷಗಾನದ ಅರ್ಥದಾರಿ, ಪ್ರವಚನಕಾರ, ಕವಿ ಸೇರಾಜೆ ಸೀತಾರಾಮ ಭಟ್ಟರು ಜೋಷಿ ಒಂದು ವಿಶ್ವಕೋಶ. ಯಕ್ಷಗಾನಕ್ಕೆ ಒಂದು ಅಕಾಡಮಿಕ್ ದೃಷ್ಟಿ ಕೊಟ್ಟವರು. ವಾಗರ್ಥಗಳು ಹೂವೂ, ಪರಿಮಳವೂ ಇದ್ದಂತೆ. ಅವಿನಾಭಾವ. ತಾಳಮದ್ದಳೆ ಒಬ್ಬ ಮೆರೆಯುವ ಕಲೆಯಲ್ಲ. ಕೂಟವಾಗಿ ಹೊಂದಿಕೊಂಡು ಕಲೆಯಲ್ಲಿ ಗಲ್ಲುವತ್ತ ಜೋಷಿಯವರ ಗಮನವೆಂದು ವಿಶ್ಲೇಷಿಸಿದರು. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ। ಕೊಳಂಬೆ ಚಿದಾನಂದ ಗೌಡರು ಜೋಷಿಯವರ ನಿರ್ವಹಣೆಯನ್ನು ಕಂಡುದು ಕಡಿಮೆ. ಆದರೆ ಪ್ರಯಾಣ ಕಾಲದಲ್ಲಿ ಜೋಷಿಯವರ ಧ್ವನಿಮುದ್ರಿಕೆಗಳನ್ನು ಆಲಿಸುವ ಹವ್ಯಾಸವಿದೆ. ಅವರ ಮಾತಿನ ಮೋಡಿಗೆ ತಾನು ಒಳಗಾಗಿದ್ದೇನೆಂದರು.

ಮರುದಿನದ 'ಡಾ। ಜೋಷಿಯವರ ಜೀವನ ಮತ್ತು ಸಾಧನೆ' ಎಂಬ ವಿಚಾರ ಸಂಕಿರಣದ ಕಲಾಪದಲ್ಲಿ ಯಕ್ಷಗಾನ ಕಲಾವಿದ, ಉಪನ್ಯಾಸಕ, ನಿವೃತ್ತ ಪ್ರಾಚಾರ್ಯ ಎಂ.ಎಲ್. ಸಾಮಗರು 'ಜೋಷಿಯವರ ವಿಮರ್ಶಾ ವಿಧಾನ (ಮೌಖಿಕ ಮತ್ತು ಗ್ರಾಂಥಿಕ)' ಎಂಬ ವಿಷಯದಲ್ಲಿ ಪ್ರಬಂಧವನ್ನು ವಾಚಿಸಿದರು. ಜೋಷಿಯವರದು ಟಿಪ್ಪಣಿ ರೂಪದ ಬರೆಹ ಮತ್ತು ಮಾತು. ಅಲ್ಲಿ ಶಬ್ದದ ದುಂದುಗಾರಿಕೆಯಿಲ್ಲ. ವಿಷಯಾಂತರದ ಕವಲಿಲ್ಲ. ಗೊಂದಲಕ್ಕೆ ಎಡೆಯಿಲ್ಲ. ಡಾ। ಶಿವರಾಮ ಕಾರಂತರ ನಂತರದ ಶ್ರೇಷ್ಠ ವಿಮರ್ಶಾ ಕೊಡುಗೆ ಅವರದು. ಕಾರಂತರು ಯಕ್ಷಗಾನದ

ಹೊರಗಿನವರು (ಅವರು ಯಕ್ಷಗಾನದ ಯಾವುದೇ ವಿಭಾಗದ ಕಲಾವಿದನಲ್ಲ). ಜೋಷಿ ಯಕ್ಷಗಾನದ ಒಳಗಿನವರು. ಕಾರಂತರು ಮುಟ್ಟದೆಯಿರುವ ಯಕ್ಷಗಾನದ ವಿಷಯಗಳನ್ನು ಜೋಷಿಯವರು ಮುಟ್ಟಿದ್ದಾರೆ. ಜೋಷಿಯವರು ಬರೆಯದೆ ಇದ್ದದ್ದು ಯಕ್ಷಗಾನದ ತಾಂತ್ರಿಕ ವಿಚಾರಗಳನ್ನು ಮಾತ್ರ ಉದಾಹರಣೆಗೆ ಛಂದಸ್ಸು, ವ್ಯಾಕರಣ, ರಾಗತಾಳಗಳ ವಿಶ್ಲೇಷಣೆ, ಚೆಂಡೆಮದ್ದಳೆಗಳ ಬಡಿತಗಳ ನುಡಿಗಟ್ಟು ಇತ್ಯಾದಿ. ಅವರ ಬರವಣಿಗೆ ಅಕಾಡಮಿಕ್ ಶಿಸ್ತಿನಿಂದ ಕೂಡಿದೆ.

ತಾಳಮದ್ದಳೆಯ ವಿವಿಧ ಮಜಲುಗಳ ಕುರಿತೇ 70%ರಷ್ಟು ಅವರ ಬರೆಹಗಳಿವೆ. ಯಾವುದೇ ವಿವಾದಕ್ಕೂ ಅವರದು ಬಹುರೂಪದ ಪ್ರತಿಕ್ರಿಯೆ. ಆಸಕ್ತರ ಪ್ರಶ್ನೆಗೆ ಅವರದು ಥಟ್ಟನೆ ಉತ್ತರ. ಸೂಕ್ಷ್ಮಗ್ರಾಹಿತ್ವ, ಗಟ್ಟಿ ಅನುಭವ, ಖಚಿತ ನೇರ ಸರಳ ಉತ್ತರ. ಜೋಷಿಯವರೊಬ್ಬ ಹೊಣೆಯರಿತ ಲೇಖಕ, ನುಣುಚಿಕೊಳ್ಳುವ ಉತ್ತರ ಅವರಲ್ಲಿಲ್ಲ. ಪರಂಪರೆ, ಸಂಪ್ರದಾಯಗಳ ಕುರಿತು ಒತ್ತಿ ಹೇಳುವ ಅವರು, ಹದವರಿತು ಅರ್ಥವತ್ತಾದ ಪರಿಷ್ಕಾರ, ವಿರೂಪವಾಗದ ಆಧುನಿಕತೆ ಬೇಕೆನ್ನುತ್ತಾರೆ. ನಿರ್ದಾಕ್ಷಿಣ್ಯ ಖಂಡನೆಗೆ ಹಿಂಜರಿಯದ ಅವರಿಗೆ ತಾನು ಹೇಳಿದಂತೆಯೇ ಆಗಬೇಕೆಂಬ ಹಟಮಾರಿ ಧೋರಣೆ ಯಿಲ್ಲ. ಪ್ರಸಂಗಗಳ ಆಳ ಅಧ್ಯಯನ ಅವರಿಗಿದೆ. ಶಬ್ದಗಳ ಬಳಕೆ ವಿಶಾಲವಾದುದು. ಹೊಸ ಹೊಸ ಶಬ್ದಗಳ ಬಳಕೆ ಅವರ ಲೇಖನದ ಅಂದವನ್ನು ಹೆಚ್ಚಿಸಿದೆ. ಅಗತ್ಯವಿದ್ದಲ್ಲಿ ವಿವರಣೆಗೆ ಚಿತ್ರವನ್ನೂ ಒದಗಿಸಿ ಹೇಳಬೇಕಾದುದನ್ನು ನೇರವಾಗಿ ಓದುಗರಿಗೆ ಮುಟ್ಟಿಸುತ್ತಾರೆ. ಚದರಿಹೋದ ಅವರ ಬಿಡಿ ಬರೆಹಗಳ ಸಂಗ್ರಹವು ಅರ್ಥಗಾರಿಕೆಗೊಂದು ಸಂಹಿತೆಯಾದೀತೆಂದು ಸಾಮಗರ ಅಭಿಪ್ರಾಯ.

ಶಿಕ್ಷಣತಜ್ಞ, ಲೇಖಕ, ನಿವೃತ್ತ ಉಪನ್ಯಾಸಕ ಡಾ। ಚಂದರಶೇಖರ ದಾಮ್ಲಯವರು 'ಜೋಷಿಯವರ ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹ ಸಂಪರ್ಕ' ಎಂಬ ಕುರಿತು ಮಾತನಾಡಿದರು. ಡಾ। ಜೋಷಿಯವರ ಕಾಳಜಿ ಕೇವಲ ವಿದ್ವತ್ ಕ್ಷೇತ್ರವಲ್ಲ. ಅವರು ತಮ್ಮ ಹುಟ್ಟೂರು ಮಾಳದ ಪರಿಸರ, ಕುಟುಂಬ, ಕಲಿತ ಶಾಲೆ, ಬಂಧುಮಿತ್ರರ ಬಳಗ, ಒಡನಾಡಿಗಳ ಗೆಳೆತನ ಹೀಗೆ ಎಲ್ಲವನ್ನೂ ಆಗಾಗ ನೆನೆಯುತ್ತಾರೆ. ಅವರ ಸಾಮಾಜಿಕ ಸಂಬಂಧಗಳು ಅರ್ಥಗಾರಿಕೆಯನ್ನು ಸಂಪನ್ನಗೊಳಿಸಿವೆ. ವಿನೋದಪ್ರಿಯ ಸರಸ ಸಂಭಾಷಣೆಯಿಂದ ಅವರು ಎಲ್ಲರಿಗೂ ಆಪ್ತರಾಗುತ್ತಾರೆ. ಮಠಾಧಿಪತಿಗಳಿಂದ ಹಿಡಿದು ಸಾಮಾನ್ಯರಲ್ಲಿ ಸಾಮಾನ್ಯನಿಗೂ ಅವರು ನಿಕಟವರ್ತಿ.

ಶೈಕ್ಷಣಿಕ ಕ್ಷೇತ್ರದಲ್ಲೂ ಅವರ ಕೊಡುಗೆ ಸಣ್ಣದಲ್ಲ. ಸೃಜನಶೀಲ ಶಿಕ್ಷಣದತ್ತ ಅವರು ಗಮನಹರಿಸಿದ್ದಾರೆ. ನೆಚ್ಚಿನ ಬೋಧಕನಾಗಿ, ಜವಾಬ್ದಾರಿಯುತ ಪ್ರಾಚಾರ್ಯನಾಗಿ ಅವರು ಗೆದ್ದಿದ್ದಾರೆ. ಅವರ ನಿವೃತ್ತಿಯ ದಿನ ಕಾಲೇಜಿನಲ್ಲಿ ಸಹೋದ್ಯೋಗಿಗಳಿಂದ ಸಿಕ್ಕಿದ ಕಣ್ಣೀರಿನ ವಿದಾಯವೇ ಅವರ ಯಶಸ್ಸಿಗೆ ಸಾಕ್ಷಿ. ಅವರು ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ಕಸ ಗುಡಿಸುವಲ್ಲಿಂದ ತೊಡಗಿ ಸಭಾ ಕಲಾಪದಲ್ಲಿ ಬೆರೆಯುವವರೆಗೆ ಅಂತರವರಿಯದ ಸೇವೆ ಅವರ ಗುಣ. ಮಂಗಳೂರು ವಿಶ್ವವಿದ್ಯಾಲಯ

ದಲ್ಲಿ ನಡೆದ ಶೇಣಿ ಸನ್ಮಾನ ಕಾರ್ಯಕ್ರಮದ ನಿರ್ವಹಣೆಯ ಬಲುದೊಡ್ಡ ಪಾಲು ಅವರದು. ಈಗಿನವರಿಗೆ ಅದೊಂದು ಮಾದರಿ.

ಯಕ್ಷಗಾನದ ಅರ್ಥಧಾರಿ, ಶಿಕ್ಷಕ ವೆಂಕಟರಾಮ ಭಟ್ಟ ಸುಳ್ಯ (ಈ ಲೇಖನದ ಕರ್ತೃ) ಇವರು ಪ್ರಭಾಕರ ಜೋಷಿಯವರು ಕೋಪವನ್ನೂ ವಿನೋದವಾಗಿ ಹೊರಹಾಕಬಲ್ಲರು ಎಂಬುದಕ್ಕೊಂದು ಉದಾಹರಣೆಯನ್ನು ಕೊಟ್ಟರು. ಒಂದು ವಿಚಾರ ಸಂಕಿರಣದಲ್ಲಿ ಜೋಷಿಯವರು ಅಧ್ಯಕ್ಷ. ಒಂದು ಗಂಟೆಗೆ ಸಭೆ ಮುಗಿಯುವುದೆಂದು ನಿಗದಿಯಾಗಿತ್ತು. ಒಂದು ಗಂಟೆ ಕಳೆದು ಕೆಲವು ನಿಮಿಷಗಳ ಬಳಿಕ ಜೋಷಿಯವರು ಅಧ್ಯಕ್ಷ ಭಾಷಣಕ್ಕೆ ಎದ್ದು ನಿಂತರು. ಈ ಅಶಿಸ್ತಿಗೆ ಅವರು ರೋಸಿಹೋಗಿದ್ದರು. “ಈಗ ಮಧ್ಯಾಹ್ನದ ಹಸಿವಿನ ಹೊತ್ತು. ನೀವು ನನ್ನ ಭಾಷಣವನ್ನು ಕೇಳುವ ಸ್ಥಿತಿಯಲ್ಲಿಲ್ಲ. ಈಗ ಭಾಷಣ ಮಾಡುವುದು ಅಪರಾಧ. ಆದರೂ ಒಂದೂವರೆಯ ಮೊದಲು ನನ್ನ ಭಾಷಣವನ್ನು ಮುಗಿಸುವುದಿಲ್ಲ.” ಸಭೆಯಲ್ಲಿ ನಗು. ತನ್ನ ಕಾರ್ಯದಿಂದ ಇನ್ನೊಬ್ಬರಿಗೆ ತೊಂದರೆಯಾದೀತೆಂದು ಅವರಿಗೆ ಅನ್ನಿಸಿದರೆ ಆಗಲೂ ಹಾಸ್ಯದಿಂದ ಅದನ್ನು ನಿವಾರಿಸಿಯಾರು. ಒಂದು ದಿನ ರಾತ್ರಿ ಹನ್ನೊಂದೂವರೆಯ ಸುಮಾರಿಗೆ ನಮ್ಮ ಮನೆಯ ಕರೆಗಂಟೆಯನ್ನೊತ್ತಿದರು. ನಾನು ಬಾಗಿಲು ತೆಗೆದಾಗ “ನಿದ್ದೆ ಮಾಡಿದ್ದೀರಾ?” ಎಂದು ಕೇಳಿದರು. “ಇಲ್ಲ. ಈಗ ಮಲಗಿದ್ದೆನಷ್ಟೆ. ನಿದ್ದೆ ಬಂದಿರಲಿಲ್ಲ.” ಎಂದದ್ದಕ್ಕೆ, “ಹೌದಾ? ಹಾಗಾದರೆ ಇನ್ನರ್ಧ ಗಂಟೆ ಕಳೆದು ಬರುತ್ತಿದ್ದೆ.” ಎಂದರು.

ಜೋಷಿಯವರು ಯಾವ ವಿಚಾರವನ್ನಾದರೂ ಒಂದೇ ಮಗ್ಗುಲಿನಿಂದ ನೋಡುವವರಲ್ಲ. ಒಳ್ಳೆಯ ವಿಚಾರದ ಕೆಟ್ಟ ಮುಖಗಳನ್ನೂ, ಕೆಟ್ಟ ವಿಚಾರದ ಒಳ್ಳೆಯ ಮುಖಗಳನ್ನೂ ನಿರ್ಲಿಪ್ತವಾಗಿ ನೋಡಬಲ್ಲರು. ಎಷ್ಟೇ ಕೆಟ್ಟ ಕಲಾವಿದನಾದರೂ ಅವರಿಗೆ ಅಲ್ಲೊಂದು ಒಳ್ಳೆಯ ಅಂಶ ಕಾಣಸಿಗುತ್ತದೆ. ದೊಡ್ಡ ಕಲಾವಿದರ ದೌರ್ಬಲ್ಯಗಳೂ ಅವರಿಗೆ ತಿಳಿದಿದೆ. ಕಲಾವಿದನಾಗಿ ಅವರದು ಕಣ್ಣಿಗೆ ಕಟ್ಟುವ ಪಾತ್ರಚಿತ್ರಣವಲ್ಲ. ಆದರೂ ತೀಕ್ಷ್ಮವಾದ ವೈಚಾರಿಕತೆ, ಪಾತ್ರದ ಒಳನೋಟ, ಹಾಸ್ಯಮಯ ಅಭಿವ್ಯಕ್ತಿಯಿಂದ ಅವರು ಎಲ್ಲರನ್ನೂ ಸೆಳೆಯುತ್ತಾರೆ. ಮತ್ತೆ ಮತ್ತೆ ಬೇಕೆನಿಸುತ್ತಾರೆ. ಅವರ ಭಾಷಾ ಜ್ಞಾನದ ಹರಹೂ ದೊಡ್ಡದೆ. ಕನ್ನಡ, ತುಳು, ಕೊಂಕಣಿ, ಹಿಂದಿ, ಇಂಗ್ಲಿಷ್, ಸಂಸ್ಕೃತ, ಮರಾಠಿ ಮುಂತಾದ ಭಾಷೆಗಳಲ್ಲದೆ ಉಪಭಾಷೆಗಳಾದ ಹವ್ಯಕ, ಶಿವಳ್ಳಿ, ಚಿತ್ಪಾವನಿ ಮೊದಲಾದ ಉಪಭಾಷೆಗಳಲ್ಲೂ ನಿರಾಯಾಸವಾಗಿ ವ್ಯವಹರಿಸಬಲ್ಲರು. ಅವುಗಳ ಒಂದೊಂದು ಶಬ್ದ, ಅವುಗಳ ವ್ಯುತ್ಪತ್ತಿ, ಬೇರೆ ಭಾಷೆಗಳಲ್ಲಿ ಅವುಗಳಿಗೆ ಸಂವಾದಿ ಶಬ್ದಗಳು, ಅವುಗಳ ಹುಟ್ಟಿದ ಬಗೆ ಇತ್ಯಾದಿ ಎಲ್ಲವೂ ಅವರ ಚಿಂತನೆಗೆ ವಸ್ತುಗಳೆ, ಅವರು ಶೀಘ್ರಕೋಪಿ ಗಳಾದರೂ ದೀರ್ಘಕೋಪಿಗಳಲ್ಲ. ಹಿರಿಯರಾದ ಶೇಣಿಯವರಿಂದ ಹಿಡಿದು ಹಲವು ಹಿರಿಕಿರಿಯರ ಜೊತೆಗೂ ಜಗಳವಾಡಿದ್ದಾರೆ. ಆದರೆ ಯಾರೊಂದಿಗೂ ಮುನಿಸು ಇರಿಸಿಕೊಂಡವರಲ್ಲವೆಂದು ಜೋಷಿಯವರ ಒಳಹೊರಗುಗಳನ್ನು ತೆರೆದಿಟ್ಟರು.

ಅರ್ಥಧಾರಿ, ಲೇಖಕ, ಉಪನ್ಯಾಸಕ ರಾಧಾಕೃಷ್ಣ ಕಲ್ಟಾರ್ 'ಜೋಷಿಯವರ

ಅರ್ಥಗಾರಿಕೆಯಲ್ಲಿ ಐತಿಹಾಸಿಕ ಆಯಾಮ' ಎಂಬ ಕುರಿತು ಮಾತನಾಡಿದರು. ಜೋಷಿಯವರದೊಂದು ವಿಭಿನ್ನ ಶೈಲಿ, ದೀರ್ಘಮಾತು ಅವರ ಪ್ರವೃತ್ತಿಯಲ್ಲ. ಅವರ ಅರ್ಥ ಸಂಕ್ಷಿಪ್ತ, ಸರಳ, ವೈನೋದಿಕ. ಅದು ಗತಿಬೇಧ. ಶೃತಿಲೀನ ಅರ್ಥವಲ್ಲ. ಸಂವಾದಕ್ಕೆ ಅವರ ಪ್ರಾಶಸ್ಯ, ದೇರಾಜೆ ಸೀತಾರಾಮಯ್ಯನವರು ನಿವೃತ್ತರಾದ ಕಾಲ. ಹಲವು ಹಿರಿಯರು ಸಿದ್ಧಗೊಂಡ ಮಾದರಿಯಲ್ಲಿ ಸಾಗುತ್ತಿದ್ದಾಗ ಆ ಜಾಡನ್ನು ತೊರೆದು ಬೇರೆಯೇ ಆದ ಹಾದಿಯನ್ನು ತುಳಿದರು. ಕಲ್ಲಿನೆಡೆಯ ಬೀಜ ಗಿಡವಾಗಿ ಬೆಳೆದು ಬೆಳಕಿನೆಡೆಗೆ ಮುಖಮಾಡುವಂತೆ ಬೆಳೆದು ನಿಂತರು.

ಅರ್ಥಗಾರಿಕೆಗೆ ಶೃತಿ ಬೇಕೋ ಬೇಡವೋ ಎಂಬಂತಹ ವಿಚಾರದಲ್ಲಿ ಅವರು ಅದು ಅಸಾಧ್ಯವೆಂದು ವಾದ ಮಂಡಿಸಿದ್ದಿದೆ. ಅವರು ಒಳ್ಳೆಯ ತರ್ಕಪಟುವಾದರೂ ಪಟ್ಟು ಹಿಡಿದು ಎದುರಿನವನ ಬಾಯಿ ಮುಚ್ಚಿಸುವವರಲ್ಲ. ಜಗಳಕಾಯುವವರಲ್ಲ. ಅವರ ಅರ್ಥಗಾರಿಕೆಯಲ್ಲಿ ಭಾವುಕತೆಯಿಲ್ಲವಾದರೂ ಅವರು ಬೇಡಿಕೆ ಕಳಕೊಳ್ಳಲಿಲ್ಲ. ಅವರ ಅರ್ಥ ಅನುಸರಣೀಯವಾಗಿದೆಯೇ ಹೊರತು ಅನುಕರಣೀಯವಾಗಲಿಲ್ಲವೆಂದು ಅವರ ಅರ್ಥಕ್ಕೆ ಒಳನೋಟ ಬೀರಿದರು.

ವಿಚಾರಗೋಷ್ಠಿಯ ಅಧ್ಯಕ್ಷರಾದ ಎಂ.ಎ.ಹೆಗಡೆಯವರು ಜೋಷಿಯವರು ಕೈಹಾಕದಿದ್ದರೆ ತಾನು ಆಧ್ಯಾತ್ಮಿಕ ಬರವಣಿಗೆಗೆ ತೊಡಗುತ್ತಿರಲಿಲ್ಲ. ತಾನು ಸಂಸ್ಕೃತ ವಿದ್ವಾಂಸನೆಂದು ಗೊತ್ತಾದುದು ಜೋಷಿಯವರಿಂದಾಗಿಯೇ. ಜೋಷಿ ಸರ್ವ ಭಕ್ಷಕ. ಅವರಿಲ್ಲದೆ ಯಕ್ಷಗಾನ ಕಮ್ಮಟವಿಲ್ಲ. ಕಾರ್ಯ ಕಲಾಪಗಳಿಲ್ಲ. ಅವರಿಗೆ ಹಿಂದೆ ಶಿರಸಿಯಲ್ಲಿ ಸನ್ಮಾನವಾಗಿದೆ. ಬೆಂಗಳೂರಿನಲ್ಲಾಗಿದೆ. ಈಗ ಮೈಸೂರಿನಲ್ಲಾಗುತ್ತಿದೆ. ಆದರೆ ಅವರ ಸ್ವಂತ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ದೊಡ್ಡ ಪ್ರಮಾಣದ ಸನ್ಮಾನವಾಗಿಲ್ಲ. ಅದು ಶೀಘ್ರದಲ್ಲೇ ಆಗಬೇಕಿದೆಯೆಂದರು. ಅಭಿನಂದನ ಭಾಷಣಕಾರರಾದ ಅರ್ಥಧಾರಿ, ಪ್ರವಚನಕಾರ ಉಜಿರೆ ಅಶೋಕ ಭಟ್ಟರು ಅರ್ಥ ಆಕ್ರಮಣವಲ್ಲ. ಸಂಕ್ರಮಣ. ಅವರು ಬಿಟ್ಟುಕೊಡುವ, ಕೊಟ್ಟುಬಿಡುವ ಏಕೈಕ ಅರ್ಥಧಾರಿ. ಅವರು ವಾದದ ಸಂದರ್ಭದಲ್ಲಿ ಇದಿರಾಳಿಗೆ ಬಿಟ್ಟುಕೊಟ್ಟಾರು. ಉಳಿದವರಿಗೆ ಅವಕಾಶವನ್ನು ಕೊಟ್ಟುಬಿಡುವ ಉದಾರಿ, ತಾನೊಬ್ಬನೇ ಮೆರೆಯಬೇಕೆಂಬ ಸ್ವಾರ್ಥ ಅವರಿಗಿಲ್ಲ. ಮಾಳದ ಸಾಂಸ್ಕೃತಿಕ ನೆಲದಲ್ಲಿ ಸಾಹಿತ್ಯ ಪ್ರಜ್ಞೆ, ಆಧ್ಯಾತ್ಮಿಕ ಪ್ರಜ್ಞೆ, ಸಂಗೀತ ಪ್ರಜ್ಞೆಗಳನ್ನು ಮೈಗೂಡಿಸಿಕೊಂಡವರವರು. ಬೆಸೆಂಟ್ ಕಾಲೇಜಿನಲ್ಲಿ ಅವರು ಸಲ್ಲಿಸಿದ 32 ವರ್ಷಗಳ ಸೇವೆ ಅನುಪಮ.

ಕಪ್ಪಗಿನ ಮೂರ್ತಿಗೆ ಬೆಳ್ಳಗಿನ ಫರದೆಯಿದ್ದಂತೆ ಅವರು. ಅಂದರೆ ಬೆಳಕಿಗೆ ಬಾರದ ಎಷ್ಟೋ ಕಲಾವಿದರು ಕಾಣಿಸಿಕೊಳ್ಳುವಂತೆ ಅವರು ಮಾಡಿದ್ದಾರೆ. ಹಳೆಯ ತಲೆಮಾರಿನಿಂದ ಈ ತಲೆಮಾರಿನ ಎಲ್ಲರೊಂದಿಗೂ ಜೋಷಿ ಹೊಂದಿಕೊಳ್ಳಬಲ್ಲರು. ಅವರು ಮಾಡುವ ಸುಗ್ರೀವ, ಅರ್ಜುನ, ಶೂರ್ಪಣಖೆಗಳಂತಹ ಹಲವು ಪಾತ್ರಗಳನ್ನು ಬೇರೆಯವರು ತುಂಬಲು ಸಾಧ್ಯವಿಲ್ಲ. ಪ್ರತ್ಯುತ್ಪನ್ನ ಮತಿತ್ವದ ವಿಶಿಷ್ಟ ಅರ್ಥದಾರಿ

ಜೋಷಿಯವರ ಯಕ್ಷಗಾನ ತಾಳಮದ್ದಳೆಯ ಸಪ್ತಾಹವನ್ನು ತಾನು ಆಯೋಜಿಸಿದ್ದಾಗಿ ಅಶೋಕ ಭಟ್ಟರು ನುಡಿದರು.

ಹೆಗ್ಗೋಡಿನ ನೀನಾಸಂನ ಕೆ.ವಿ ಅಕ್ಷರ ಹೆಗ್ಗೋಡಿಗೆ ಜೋಷಿಯವರು ಬಂದ ದಿನಗಳನ್ನು, ಅವರು ಜೋಷಿಯವರನ್ನು ಭೇಟಿಯಾದ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕುತ್ತಾ ಜೋಷಿಯವರಿಗೆ ಸಲ್ಲಬೇಕಾದ ಗೌರವ ಸಲ್ಲದಿದ್ದರೆ ಅದು ನಮ್ಮ ಸೋಲು ಎಂದರು. ಮೈಸೂರಿನ ಪೋಲೀಸ್ ಅಕಾಡಮಿಯ ಉಪನಿರ್ದೇಶಕರಾದ ಚಿಂತನಶೀಲ ಬರೆಹಗಾರ್ತಿ ಧರಣೀದೇವಿ ಮಾಲಗಿತ್ತಿಯವರು ತಮ್ಮ ತಂದೆಯವರಾದ ಧೂಮಣ್ಣ ರೈ ಮಾಸ್ಟರರೊಂದಿಗೆ ಜೋಷಿಯವರು ಅರ್ಥ ಹೇಳುತ್ತಿದ್ದ ದಿನಗಳನ್ನು ನೆನಪಿಸಿಕೊಂಡು, ತನಗೆ ಅದರಿಂದಾಗಿ ಇಂದಿಗೂ ಯಕ್ಷಗಾನಾಸಕ್ತಿ ಉಳಿದಿರುವುದನ್ನು ತಿಳಿಯಪಡಿಸಿದರು.

ಯಕ್ಷಗಾನದ ಚಿಂತಕ, ಬರೆಹಗಾರ, ನಿವೃತ್ತ ಪತ್ರಿಕಾ ಸಂಪಾದಕ ಡಾ. ರಾಘವ ನಂಬಿಯಾರ್ ಅಧ್ಯಕ್ಷರ ನೆಲೆಯಿಂದ ಮಾತನಾಡಿದರು. ತಾನೂ, ಜೋಷಿಯವರೂ ಕಾರ್ಕಳದಲ್ಲಿ ಬೆಳೆದವರು. ಸಮಾನ ಪ್ರಾಯದವರು. ಸಮಾನ ಆಸಕ್ತರು. ಮೇಲ್ನೋಟಕ್ಕೆ ಕೆಲವೊಮ್ಮೆ ನಮಗೆ ಅಭಿಪ್ರಾಯಭೇದವಿದ್ದಂತೆ ಕಂಡರೂ ವೈಚಾರಿಕ ಅಂತರವಿಲ್ಲ. ನಾವು ಜೊತೆ ಜೊತೆಯಾಗಿ ಯಕ್ಷಗಾನದ ಸಂಶೋಧನೆಯಲ್ಲಿ ತೊಡಗಿದವರು. ಭಾವಪೂರ್ಣ ಶ್ರುತಿಬದ್ಧ ಅರ್ಥಗಾರಿಕೆ ಅವರಿಂದ ಸಾಧ್ಯವಿಲ್ಲವೆನ್ನುವುದು ಸುಳ್ಳು, ಈ ಎರಡು ದಿನ ಇಲ್ಲಿ ನಡೆದ ತಾಳಮದ್ದಳೆ ಕೂಟದಲ್ಲಿ ಅವರ ಭೀಷ್ಮನ ಅರ್ಥಗಾರಿಕೆಯನ್ನು ಕಂಡವರಿಗೆ ಇದು ಮನದಟ್ಟಾಗಬಹುದೆಂದು ಮನದುಂಬಿ ಹೊಗಳಿದರು.

ಹೀಗೆ ಜೋಷಿಯವರ ಕುರಿತು ಇನ್ನೆಷ್ಟೋ ಮಾತುಗಳು ಸ್ವಾಗತ ಭಾಷಣದಲ್ಲಿ, ಕಾರ್ಯಕ್ರಮ ನಿರ್ವಹಣೆಯಲ್ಲಿ, ಧನ್ಯವಾದ ಸಮರ್ಪಣೆಯಲ್ಲಿ ಬಂದುಹೋದವು. ಪುನರುಕ್ತಿಗಳು ಇಂತಹ ಕಾರ್ಯಕ್ರಮದಲ್ಲಿ ಸಾಮಾನ್ಯವಾದರೂ, ಆಶ್ಚರ್ಯವೆನ್ನುವಷ್ಟು ಅವುಗಳು ಕಡಿಮೆಯಿದ್ದವು. ಬಹುಶಃ ಜೋಷಿಯವರ ವಿಶಾಲವಾದ ಕಾರ್ಯ ಕ್ಷೇತ್ರ ಮತ್ತು ವ್ಯಕ್ತಿತ್ವದಿಂದಾಗಿ ಎಷ್ಟು ಮೊಗೆದರೂ ಅಲ್ಲಿ ಹೇರಳ ವಿಷಯಗಳು ಸಿಗುತ್ತವೆ. ಸ್ಥಳದ ಪರಿಮಿತಿಯಿಂದಾಗಿ ಕೆಲವರ ಮಾತುಗಳನ್ನು ದಾಖಲಿಸಲಾಗಲಿಲ್ಲ. ಕೆಲವರ ಮಾತುಗಳನ್ನು ಮೊಟಕುಗೊಳಿಸಿದ್ದೇನೆ. ಅಂತೂ ಕೊನೆಗೆ ಇಷ್ಟು ಹೇಳಬಹುದು. ಜೋಷಿಯವರು ಇತರರ ಕುರಿತು ಮಾಡಿದ ಅಭಿನಂದನೆಗಳ ಹತ್ತರಲ್ಲಿ ಒಂದೂ ಅವರಿಗೆ ಸಂದಿಲ್ಲ.

◆ ◆ ◆

ಡಾ. ಎಂ. ಪ್ರಭಾಕರ ಜೋಶಿಯವರ

ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹಸಂಪರ್ಕ

ಡಾ. ಚಂದ್ರಶೇಖರ ದಾಮ್ಲ

ಬಹುಮುಖೀ ವ್ಯಕ್ತಿತ್ವದ ಸಾಧಕರೆಂಬ ಹಿರಿಮೆ ಎಲ್ಲರಿಗೂ ದಕ್ಕುವುದಿಲ್ಲ. ಕೆಲವರು ಕೇವಲ ಕೃಷಿಕರಾಗಿರುತ್ತಾರೆ, ಕೆಲವರು ವ್ಯಾಪಾರಿಗಳಾಗಿರುತ್ತಾರೆ. ಇನ್ನು ಕೆಲವರು ಅಧಿಕಾರಿಗಳಾಗಿರುತ್ತಾರೆ. ಮತ್ತೆ ಕೆಲವರು ಉತ್ತಮ ಶಿಕ್ಷಕರಾಗಿರುತ್ತಾರೆ, ಕೆಲವರು ಕಲಾವಿದರು ಮಾತ್ರ ಆಗಿರುತ್ತಾರೆ. ಅವರು ತಮ್ಮ ಸುತ್ತಲೂ ಒಂದು ಪರಿಧಿಯನ್ನು ಅಂದರೆ ಬೇಲಿಯನ್ನು ನಿರ್ಮಿಸಿಕೊಂಡಿರುತ್ತಾರೆ. ಆ ಬೇಲಿಯಿಂದಾಚೆಗೆ ಅವರು ದಾಟಲಾರರು, ಹಾಗೆಯೇ ಯಾರನ್ನೂ ಒಳಗೆ ಬಿಡಲಾರರು. ಹಾಗಾಗಿ ಅವರಿಗೆ ಸಾಮಾಜಿಕ ವ್ಯಕ್ತಿತ್ವ ಎಂಬುದೊಂದು ವಿಸ್ತ್ರತವಾಗಿ ಇರುವುದಿಲ್ಲ. ತೀರಾ ಖಾಸಗಿ ಅಥವಾ ಸೀಮಿತ ಸಂಪರ್ಕದ ವರ್ತುಲದೊಳಗೆ ಇದ್ದುಬಿಡುತ್ತಾರೆ. ಆದರೆ ಇನ್ನು ಕೆಲವರು ವಿಶಿಷ್ಟ ವ್ಯಕ್ತಿಗಳಿರುತ್ತಾರೆ. ಅವರು ಯಾವೊಂದು ಪರಿಧಿಯೊಳಗೂ ಸೀಮಿತರಾಗಿ ಬಿಡುವುದಿಲ್ಲ. ಬದಲಾಗಿ ಅನೇಕರ ಪರಿಧಿಗಳೊಳಗೆ ಸಲೀಸಾಗಿ ಪ್ರವೇಶಿಸುತ್ತಾರೆ ಹಾಗೂ ಹೊರಗೆ ಬರುತ್ತಾರೆ. ಆದರೆ ಎಲ್ಲಿಯೂ ಅವರ ಪ್ರವೇಶ ವ್ಯರ್ಥವಾಗುವುದಿಲ್ಲ. ಅಲ್ಲಿ ಒಂದು ಪ್ರಭಾವ ಬೀರುತ್ತಾರೆ. ಏನಾದರೂ ಕೊಡುತ್ತಾರೆ, ಯಾರಿಂದಾದರೂ ಇನ್ಯಾರಿಗಾದರೂ ಬರಬೇಕಾದ್ದೇನಾದರೂ ಇದ್ದರೆ ಬರಿಸಿಕೊಡುತ್ತಾರೆ, ಉಪಯುಕ್ತವಾದ ಸಲಹೆಗಳನ್ನು ಕೊಡುತ್ತಾರೆ, ಪ್ರಗತಿಗೆ ಮಾರ್ಗದರ್ಶನ ಕೊಡುತ್ತಾರೆ, ಆರ್ಥಿಕ

ಸಹಾಯವನ್ನೂ ನೀಡುತ್ತಾರೆ, ದುರ್ಬಲರಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ, ಗೆಳೆಯರಿಗಾಗಿ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಾರೆ, ತಾತ್ವಿಕ ಭಿನ್ನಾಭಿಪ್ರಾಯಗಳಿದ್ದಾಗ ತನ್ನ ಅಭಿಪ್ರಾಯವನ್ನು ನಿಖರವಾಗಿ ದಾಖಲಿಸುತ್ತಾರೆ, ಸಂವಹನ ಸೌಲಭ್ಯಕ್ಕಾಗಿ ಅನೇಕ ಭಾಷೆಗಳಲ್ಲಿ ಮಾತಾಡುವ ಕೌಶಲ್ಯವನ್ನು ಪಡೆದಿರುತ್ತಾರೆ, ತಮ್ಮ ಕೆಲಸಗಳಿಗೆ ಪ್ರಶಂಸೆ ಮತ್ತು ಪ್ರಶಸ್ತಿಗಳನ್ನು ಗುರಿಯಾಗಿಟ್ಟುಕೊಳ್ಳುವ ಇವರು ನಿಜಕ್ಕೂ ಸಾಮಾಜಿಕ ವ್ಯಕ್ತಿತ್ವ ಹೊಂದಿರುತ್ತಾರೆ. ಅಂತಹ ಸಾಮಾಜಿಕ ವ್ಯಕ್ತಿತ್ವವನ್ನು ಹೊಂದಿದವರು ಡಾ. ಎಂ. ಪ್ರಭಾಕರ ಜೋಶಿಯವರು. ಅವರು ತನ್ನ ಚಲನವಲನಗಳಿಗೆ ಮಿತಿಯನ್ನಿಟ್ಟುಕೊಂಡವರಲ್ಲ. ಯಾರಲ್ಲಿ ಮಾತಾಡಲೂ ಅವರಿಗೆ ಅಂಜಿಕೆ ಇಲ್ಲ. ಯಾವುದೇ ಶಿಫಾರಸನ್ನು ಸತ್ಯವಾಗಿಲ್ಲದ ಹೊರತು ನೀಡುವುದಿಲ್ಲ. ತನ್ನಿಂದ ಸಾಧ್ಯವಾಗುವ ಸಹಕಾರವನ್ನು ನೀಡಲು ಅವರಿಗೆ ಉದಾಸೀನ ಇಲ್ಲ. ಅಂತಹ ಜೋಶಿಯವರು ತನ್ನ ಬದುಕಿನ ಪಯಣವನ್ನು ಅವಲೋಕಿಸಿದರೆ ಸಹಾಯ ಪಡೆದವರು ಅದೆಷ್ಟೋ ಮಂದಿ ಇದ್ದಾರೆ. ಜೋಶಿಯವರಿಗೂ ಸಹಕರಿಸಿದವರು ಅನೇಕರಿದ್ದಾರೆ. ಇದೇ ಅವರ ಸಾಮಾಜಿಕ ವ್ಯಕ್ತಿತ್ವದ ಬಹುವರ್ಣ ಚಿತ್ರ

ಜೋಶಿಯವರು ಕುಟುಂಬಪ್ರೇಮಿ, ಅವರ ಅಜ್ಜ, ತಂದೆ, ಅಣ್ಣಂದಿರ ಸಮೃದ್ಧ ಜ್ಞಾನದ ಪ್ರಭಾವವನ್ನು ಗೌರವದಿಂದ ನೆನೆಯುತ್ತಾರೆ. ತನ್ನ ತಾಯಿಯ ತ್ಯಾಗಮಯ ಜೀವನದ ಕೊಡುಗೆಯನ್ನು ಅಭಿಮಾನದಿಂದ ಧ್ಯಾನಿಸುತ್ತಾರೆ. ಮನೆಯ ಸಾಂಪ್ರದಾಯಿಕ ವಾತಾವರಣದಲ್ಲಿ ಶ್ಲೋಕ, ಪೂಜೆ, ಪುರಾಣವಾಚನ, ಆಧ್ಯಾತ್ಮಿಕ ಚರ್ಚೆಗಳೊಂದಿಗೆ ಬೆಳೆದ ಜೋಶಿಯವರಿಗೆ ಶಾಲೆ ಕಾಲೇಜುಗಳ ಶಿಕ್ಷಣದ ಔಪಚಾರಿಕ ಜಾತ್ಯತೀತ ಪರಿಸರದಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಲಿಲ್ಲ. ಅಂದರೆ ಅವರಿಗೆ ಯಾವುದೇ ವಿಷಯವನ್ನು ವಸ್ತುನಿಷ್ಠವಾಗಿ ಅರ್ಥೈಸುವ ಮತ್ತು ವಿವರಿಸುವ ಸಾಮರ್ಥ್ಯ ಇದೆ. ಅವರು ಜನರಲ್ಲಿರುವ ವ್ಯಕ್ತಿನಿಷ್ಠ ಚಿಂತನೆಗಳನ್ನೂ ವಸ್ತುನಿಷ್ಠವಾಗಿ ವ್ಯಾಖ್ಯಾನಿಸುವ ಜಾಣೆ ಇರುವವರು. ಉದಾಹರಣೆಗೆ ದೇವಳಗಳ ಮತ್ತು ಸ್ವಾಮೀಜಿಗಳ ಬಗ್ಗೆ ಜನರಿಗಿರುವ ವ್ಯಕ್ತಿನಿಷ್ಠ ಭಾವುಕ ಭಕ್ತಿಯನ್ನೂ ಜೋಶಿಯವರು ವಾಸ್ತವಿಕತೆಯ ನೆಲೆಯಲ್ಲೇ ವಿಮರ್ಶಿಸುತ್ತಾರೆ. ವಿಜ್ಞಾನದ ಚರ್ಚೆಯಲ್ಲಿ ನೇರಾನೇರ ವಿಚಾರಮಂಡನೆ ಮಾಡುವ ಜೋಶಿಯವರು ಸಾಂಸ್ಕೃತಿಕ ಅಂಶವಾದ ಪೂಜೆ ಮನಸ್ಕಾರಗಳಲ್ಲಿಯೂ ಬಂದು ಭಾಗವಹಿಸುತ್ತಾರೆ. ಹೀಗಾಗಿ ಕುಟುಂಬ ಬಂಧದ ಕೊಂಡಿ ಕಳಚದೆ ಸಮಾಜದ ವಿಸ್ತಾರವನ್ನು ವ್ಯಾಪಿಸುವ ಸಾಮಾಜಿಕ ವ್ಯಕ್ತಿತ್ವ ಜೋಶಿಯವರದು. ಎಲ್ಲರಿಗೂ ಸುಲಭ ಸಾಧ್ಯವಲ್ಲದ್ದು ಜೋಶಿಯವರಿಗೆ ಸಾಧ್ಯವಾಗಿದೆ.

ಮಾಳದಲ್ಲಿ ಪ್ರಾಥಮಿಕ, ಕಾರ್ಕಳದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು, ಮುಲ್ಕಿಯಲ್ಲಿ ಕಾಲೇಜು ಹಾಗೂ ಧಾರವಾಡದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದ ಜೋಶಿಯವರು ಎಲ್ಲಾ ಹಂತಗಳಲ್ಲೂ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯ ಭಾಗಿಗಳು. ಅದು ಕಸ ಗುಡಿಸುವಲ್ಲಿಂದ, ಆಸನಗಳನ್ನು ವ್ಯವಸ್ಥೆಗೊಳಿಸುವಲ್ಲಿ ಮುಂದುವರಿದು ಮುಖ್ಯ

ಅತಿಥಿಗಳನ್ನು ಮಾತಾಡಿಸಿ ಆದರಿಸುವಲ್ಲಿವರೆಗೂ ಸೈ. ಅವರ ದೃಷ್ಟಿಯಲ್ಲಿ ಸಾರ್ವಜನಿಕ ಕೆಲಸದಲ್ಲಿ ತೊಡಗಿಕೊಳ್ಳಲು ನಾಯಕತ್ವವೇ ಬೇಕೆಂದೇನಿಲ್ಲ. ಹಾಗೆಯೇ ಸೂಚನೆಗಳಿಗೂ ಕಾಯಬೇಕಿಲ್ಲ. ಎಲ್ಲಿ ಯಾವ ಕೆಲಸ ಇದೆಯೆಂದು ಕಾಣಿಸುತ್ತದೆಯೋ ಅದನ್ನು ಮಾಡುವ ಉತ್ಸಾಹವಿದ್ದರೆ ಸಾಕು. ಹಾಗಾಗಿ ಸಾಮಾಜಿಕ ವ್ಯಕ್ತಿತ್ವದ ಒರತೆ ಅವರ ಹೃದಯ ಮತ್ತು ಮನಸ್ಸುಗಳಲ್ಲೇ ಇತ್ತು. ಈ ಕಾರಣಕ್ಕಾಗಿಯೇ ಶಾಲೆ ಕಾಲೇಜುಗಳಲ್ಲಿ ಅವರು ಸ್ವಯಂಸೇವಕರಾಗಿ ಮುಂಚೂಣಿಯಲ್ಲಿದ್ದರು. ಅಂತೆಯೇ ಈ ಸ್ವಯಂಸೇವಾ ಪ್ರವೃತ್ತಿ ತನ್ನ ನೆಂಟರಿಷ್ಟರ ಮನೆಗಳಲ್ಲಿ, ದೇವಾಲಯಗಳಲ್ಲಿ, ಧಾರ್ಮಿಕ ಸಮಾರಂಭಗಳಲ್ಲಿ ಗುಡಿಸುವುದು, ಬಡಿಸುವುದು, ಸಭೆಗಳನ್ನೇರ್ಪಡಿಸುವುದು ಇತ್ಯಾದಿ ಕೆಲಸಗಳಿಗೆ ವಿಸ್ತರಿಸಿತ್ತು. ಇದು ಕೇವಲ ಬಾಲ್ಯ ಮತ್ತು ಯೌವನದ ಸಂಗತಿಯಲ್ಲ. ಈಗಲೂ ಜೋಶಿಯವರಲ್ಲಿ ಅಂದಿನ ಲವಲವಿಕೆ ಇದೆ. ತಾನು ತೊಡಗುವುದಷ್ಟೇ ಅಲ್ಲದೆ ಇನ್ನೊಬ್ಬರನ್ನೂ ಕೆಲಸದಲ್ಲಿ ತೊಡಗಿಸಿಕೊಂಡು ಒಂದು ಸಾರ್ವಜನಿಕ ಕೆಲಸ ಸುಸೂತ್ರವಾಗಿ ಆಗುವಂತೆ ಮಾಡುವಲ್ಲಿ ಜೋಶಿಯವರಿಗಿರುವ ಕಳಕಳಿ ಸಾಮಾಜಿಕವಾದುದು.

ಕಾಲೇಜು ಶಿಕ್ಷಕ ವೃತ್ತಿ ದೊರಕಿದ್ದು ಜೋಶಿಯವರಿಗೆ ದೊಡ್ಡ ಲಾಭವಾಯಿತು. ಎಂ.ಕಾಂ. ಕಲಿತ ಇವರು ಸರಕಾರಿ ಅಕೌಂಟ್ಸ್ ಅಧಿಕಾರಿಯಾಗುತ್ತಿದ್ದರೆ ಇಂದಿನ ಈ ಬಗೆಯ ಬೆಳವಣಿಗೆ ಸಾಧ್ಯವಿರಲಿಲ್ಲ. ಉಪನ್ಯಾಸಕ ವೃತ್ತಿಯಿಂದಾಗಿ ಅವರಿಗೆ ಬುದ್ಧಿಮತ್ತೆಯ ಬಿತ್ತುವಿಕೆಗೆ ಸಾಕಷ್ಟು ಕ್ಷೇತ್ರಗಳೂ ಸಮಯಾವಕಾಶವೂ ಸಿಕ್ಕಿತು. ಅವರು ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳಲ್ಲಿ ಪಾಠ ಮಾಡುತ್ತಿದ್ದರೆ ತರಗತಿಗಳಿಂದ ಹೊರಗೆ ಅವರು ಬಯಲಲ್ಲಿ ನಿಂತಲ್ಲಿ, ಹೋಟೆಲಲ್ಲಿ ಕುಳಿತಲ್ಲಿ ಸುತ್ತಲಿದ್ದವರಿಗೆ ಮಾಹಿತಿಗಳ ಪ್ರವಾಹ ಹರಿಯುತ್ತಿತ್ತು. ಅಂದರೆ ಅವರು ಕಾಲೇಜಿನ ತರಗತಿಗಳಿಂದ ಹೊರಗೆ ವ್ಯಾಪಿಸಿದ ಶಿಕ್ಷಕರಾಗಿದ್ದಾರೆ. ಇನ್ನು ಯಕ್ಷಗಾನ ಅವರ ಆಸಕ್ತಿಯ ಕ್ಷೇತ್ರವಾಗಿದ್ದುದರಿಂದ ಅವರ ಜನ ಸಂಪರ್ಕದ ವಲಯ ಪಂಡಿತರಿಂದ ಪಾಮರರವರೆಗೂ ವಿಸ್ತರಿಸಿತು. ತನ್ನಲ್ಲಿಲ್ಲದ ಸಾಮರ್ಥ್ಯವನ್ನು ಆರೋಪಿಸಿಕೊಳ್ಳುವ ಯುವಕರ ಕೆಲಸ ಹಾಗೂ ಪ್ರತಿಭೆಗಳನ್ನು ಗುರುತಿಸಿ ಪ್ರಶಂಸಿಸಿ ಸರಿಯಾದ ದಾರಿಯಲ್ಲಿ ವಿಕಸನಗೊಳ್ಳಲು ಮಾರ್ಗದರ್ಶನ ನೀಡಿದ್ದಾರೆ. ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಎಲ್ಲ ಸ್ತರದ ಶಿಕ್ಷಕರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದ ಜೋಶಿಯವರು ವಿವಿಧ ಶಿಬಿರಗಳು, ಕಾರ್ಯಾಗಾರಗಳು ಹಾಗೂ ವಿಚಾರಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಇಲ್ಲಿ ತನ್ನ ಕಲಾ ಸಿದ್ದಾಂತ ಹಾಗೂ ನಿಲುಮೆಗಳನ್ನು ಬಿಡದೆ ಸಮನ್ವಯ ಮತ್ತು ಸ್ವೀಕಾರ ದೃಷ್ಟಿಗಳಿಂದ ಚರ್ಚೆಗಳನ್ನು ಅರ್ಥಪೂರ್ಣಗೊಳಿಸಿದ್ದಾರೆ. ತಾಳಮದ್ದಳೆಗಳ ಸಂಘಟಕರ ಸಂಕಷ್ಟದ ಸ್ಪಷ್ಟ ಅರಿವು ಇರುವ ಜೋಶಿಯವರು ಸಮಸ್ಯೆಗಳಾದಾಗ ಹಿರಿಯ-ಕಿರಿಯ ಅರ್ಥಧಾರಿಗಳಿಗೆ ದೊಡ್ಡ ಪಾತ್ರಗಳನ್ನು ನೀಡಿ ತಾನು ಸಣ್ಣ ಪಾತ್ರಗಳನ್ನೂ ನಿರ್ವಹಿಸಿದ್ದೂ ಇದೆ. ಕಡಿಮೆ ಅರ್ಥ ಹೇಳಿ ಸಮಯಕ್ಕೆ ಸರಿಯಾಗಿ ತಾಳಮದ್ದಳೆ ಮುಗಿಯುವುದಕ್ಕೆ ನೆರವಾದದ್ದೂ ಇದೆ. ಅವರ ಈ ಸಹಕಾರವನ್ನು

ಗುರುತಿಸದೆ ಹೋದ ಸಂದರ್ಭಗಳಲ್ಲಿ ನೊಂದುಕೊಂಡದ್ದೂ ಇದೆ. ಆದರೆ ಸೇಡು ತೀರಿಸಲು ಹೋದವರಲ್ಲ. ಅಂದರೆ ಟೀಕಿಸುವವರ ಮಟ್ಟಕ್ಕೆ ಇಳಿಯಲಾಗದ ಅವರು ತನ್ನ ಸಹಕಾರ ಪ್ರವೃತ್ತಿಯನ್ನು ಬಿಟ್ಟವರಲ್ಲ. ಎಷ್ಟೇ ದೊಡ್ಡ ವಿದ್ವಾಂಸರಲ್ಲಿಯೂ ಮಾತಾಡಲು ಭಯ ಇಲ್ಲದಿರುವ ಅವರು ಸ್ವತಃ ವಿದ್ವಾಂಸರಾಗಿದ್ದೂ ತೀರ ಸಾಮಾನ್ಯ ವ್ಯಕ್ತಿಯೂ ಅವರಲ್ಲಿ ಭಯವಿಲ್ಲದೆ ಮಾತಾಡುವಷ್ಟು ಮುಕ್ತವಾಗಿರುತ್ತಾರೆ. ಮನುಷ್ಯ ಸಂಪರ್ಕಕ್ಕೆ ಅವರ ಜ್ಞಾನ ಯಾವತ್ತೂ ತಡೆಯಾಗಲಿಲ್ಲ.

ತನ್ನ ಹುಟ್ಟೂರಾದ ಮಾಳದ ಪರಶುರಾಮ ಯಕ್ಷಗಾನ ಸಂಘದ ಕಾರ್ಯದರ್ಶಿ ಯಾಗಿ ಅನುಭವ ಇದ್ದ ಜೋಶಿಯವರು ಕಾರ್ಕಳದ ಅನಂತಶಯನ ಯಕ್ಷಗಾನ ಸಂಘದ ಕಾರ್ಯದರ್ಶಿಯಾಗಿ ಬಹು ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಮುಂದೆ ವಿವಿಧ ಸಂಘ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಅವುಗಳ ಬಲ ಸಂವರ್ಧನೆ ಮಾಡಿದ್ದಾರೆ. 1960ರಿಂದ ಆರಂಭವಾದ ಮಂಗಳೂರು ಕನ್ನಡ ಸಂಘದ ಕಾರ್ಯದರ್ಶಿಯಾಗಿಯೂ ಪ್ರೊ, ತೆಕ್ಕುಂಜ ಗೋಪಾಲಕೃಷ್ಣ ಭಟ್, ಪೊಳಲಿ, ಮಂದಾರ ಕೇಶವ ಭಟ್ ಮೊದಲಾದವರ ಜೊತೆ ದುಡಿದ ಇವರು ಮುಂದೆ 'ಭೂಮಿಕ' ಸಂಸ್ಥೆಯ ಆರಂಭಕ್ಕೆ ತಳಪಾಯ ಹಾಕಿಕೊಟ್ಟಿದ್ದಾರೆ. ಪೊಳಲಿ ಶಾಸ್ತ್ರೀ ಸ್ಮಾರಕ ಸಮಿತಿಯ ಸ್ಥಾಪಕ ಕಾರ್ಯದರ್ಶಿಯಾಗಿದ್ದ ಇವರು ಸುಮಾರು ನಲುವತ್ತು ವರ್ಷಗಳ ಅವಧಿಯಲ್ಲಿ ಅ ಸಂಸ್ಥೆಯು ನಡೆಸಿದ ಕಾರ್ಯಕ್ರಮಗಳ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. 'ಯಕ್ಷಗಾನ ಮಕರಂದ' ಎಂಬ ಅಮೂಲ್ಯ ಅಧ್ಯಯನಯೋಗ್ಯ ಕೃತಿಯ ಸಂಪಾದಕತ್ವದಲ್ಲಿ ಪರಿಶ್ರಮ ವಹಿಸಿದ್ದಾರೆ. ಈ ಕೃತಿಯು ತಿಟ್ಟು ಮಟ್ಟುಗಳ ಭೇದವಿಲ್ಲದೆ ಯಕ್ಷಗಾನ ಕಲೆಯ ಆಳ ವಿಸ್ತಾರಗಳ ಶೋಧನೆಯಾಗಿದ್ದು ಅಭ್ಯಾಸಿಗಳಿಗೆ ಒಂದು ಆಕರ ಗ್ರಂಥವಾಗಿ ಲಭಿಸುವಂತೆ ಮಾಡುವಲ್ಲಿ ಮೂಲತಃ ಸಂಶೋಧನಾತ್ಮಕ ಚಿಂತನೆಯುಳ್ಳ ಜೋಶಿಯವರು ಪಟ್ಟ ಪರಿಶ್ರಮ ಎದ್ದು ಕಾಣುತ್ತದೆ.

ಮಂಗಳೂರಿನಲ್ಲಿ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಹಾಗೂ ದಿ. ಮುಳಿಯ ಮಹಾಬಲ ಭಟ್ಟರೊಡನೆ ಯಕ್ಷಗಾನ ಪರಿಷತ್ತನ್ನು ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಜೋಶಿಯವರು ಅದರ ಉದ್ದೇಶ ಹಾಗೂ ಕಾರ್ಯವ್ಯಾಪ್ತಿಯನ್ನು ನಿರೂಪಿಸುವಲ್ಲಿ ತನ್ನ ಕೊಡುಗೆ ನೀಡಿದ್ದಾರೆ. ಇಡಗುಂಜಿ ಕೆರೆಮನೆ ಯಕ್ಷಗಾನ ಕೇಂದ್ರದ ಸಲಹೆಗಾರರಾಗಿ ಆರಂಭದಿಂದಲೂ ಇದ್ದ ಜೋಶಿಯವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಪ್ರಾದೇಶಿಕ ಸಂಪನ್ಮೂಲ ಕೇಂದ್ರಕ್ಕೂ ಸಲಹಾ ಮಂಡಳಿ ಸದಸ್ಯರಾಗಿ ನೆರವಾಗಿದ್ದಾರೆ. ಈ ಕೇಂದ್ರದ ಆಶ್ರಯದಲ್ಲಿ ನಡೆದ ಉಡುಪಿ ಯಕ್ಷಗಾನ ಉತ್ಸವದ ಸಂಯೋಜಕರಾಗಿ ದುಡಿದಿದ್ದಾರೆ. ಅದೇ ರೀತಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1973-74ರಲ್ಲಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ವಿಶಿಷ್ಟವಾಗಿ ನಡೆದ ಶೇಣಿ ಸನ್ಮಾನದ ಒಟ್ಟು ಚೌಕಟ್ಟನ್ನು ರೂಪಿಸಿಕೊಂಡು ಅಭಿನಂದನ ಭಾಷಣ ಸಹಿತ ಕಾರ್ಯಕ್ರಮ ನಡೆಸಿಕೊಟ್ಟ ಶ್ರೇಯಸ್ಸು ಜೋಶಿಯವರದು. ಈ

ಸಮಾರಂಭ ಮತ್ತು ಭಾಷಣ ಕರಾವಳಿಯ ಸಾಧಕರ ಸಮ್ಮಾನಗಳಲ್ಲಿ ಒಂದು Trend Setter ಆಯಿತು. ಮುಂದೆ ಡಾ. ಬಿ.ಎ. ವಿವೇಕ ರೈಯವರ ಮುಂದಾಳ್ತನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಸಂಘಟನೆ ಯಲ್ಲಿಯೂ ತೊಡಗಿಸಿಕೊಂಡಿದ್ದರು. ವಿಶ್ವವಿದ್ಯಾನಿಲಯದ ಯಕ್ಷಗಾನ ಕೇಂದ್ರದ ಸಲಹೆಗಾರರಾಗಿಯೂ ಇದ್ದಾರೆ. ಇಂತಹ ಬಹುಮುಖಿ ಸಾಮರ್ಥ್ಯವನ್ನು ಗುರುತಿಸಿ ದಿ. ಶಂಭು ಹೆಗಡೆಯವರು ಜೋಶಿಯವರ ಬಗ್ಗೆ “ನೇತೃತ್ವ, ಕಾರ್ಯಕರ್ತೃತ್ವ, ನಿರ್ವಹಣೆ ಹಾಗೂ ಕಲಾ ಸಾಮರ್ಥ್ಯ ಎಲ್ಲವೂ ಸಹಜವಾಗಿ ಸೇರಿರುವ ವ್ಯಕ್ತಿ” ಎಂದಿದ್ದಾರೆ. ದಿ. ಕೊರ್ಗಿ ವೆಂಕಟೇಶ್ವರ ಉಪಾಧ್ಯರ ಮಾತುಗಳಲ್ಲಿ 'ಜೋಷಿಯವರಿದ್ದಾರೆಂದರೆ ನಮಗೆ ಎಲ್ಲ ಬಗೆಯಲ್ಲೂ ಧೈರ್ಯ, ಕಾರ್ಯಕ್ರಮದ ಸುಗಮತೆಗೆ ನಿರ್ಭೀತಿ.”

ಯಕ್ಷಗಾನ ಕಲೆಯ ಕುರಿತಾಗಿ ವಿಮರ್ಶಾತ್ಮಕ ಲೇಖನಗಳನ್ನೂ ಗ್ರಂಥಗಳನ್ನೂ ಬರೆದಿರುವ ಜೋಶಿಯವರು ಯಕ್ಷಗಾನದ ಪ್ರಥಮ ವೆಬ್‌ಸೈಟ್‌ನ ಸಂಪಾದಕರಾಗಿದ್ದಾರೆ. ಯಕ್ಷಗಾನ ಸಂಶೋಧಕಿ ಮಾರ್ಥಾ ಆಶ್ಚನ್‌ರವರು ಕಟೀಲಿನಲ್ಲಿ ಸಂಯೋಜಿಸಿದ ತೆಂಕುತಿಟ್ಟು ಯಕ್ಷಗಾನದ ನಾಲ್ಕು ದಿನಗಳ ಕಾರ್ಯಾಗಾರದ ಪ್ರಧಾನ ಮಾರ್ಗದರ್ಶಕ ರಾಗಿದ್ದರು. ಹಾಗೆಯೇ ಮಣಿಪಾಲದ ಡಾ. ವಿಜಯನಾಥ ಶೆಣೈಯವರ 'ಯಕ್ಷಮಂಡಲ' ಪ್ರಯೋಗ, ಪ್ರಥಮ ಕರಾವಳಿ ಉತ್ಸವ, ಇಂಗ್ಲಿಷ್ ಯಕ್ಷಗಾನಗಳು, ಕಟೀಲು ಸಪ್ತಾಹ ಮುಂತಾದವುಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅನೇಕ ಹಿರಿಯ ಕಲಾವಿದ ತಂಡವನ್ನು ಸಂಯೋಜಿಸಿ ಮುಂಬೈಯಿಂದ ಕಾಸರಗೋಡು ತನಕವೂ ದುಬ್ಯಾ, ಬಹೈನ್‌ಗಳಲ್ಲೂ ಪ್ರದರ್ಶನಗಳನ್ನು ನೀಡಿದ್ದಾರೆ. ಹೆಗ್ಗೋಡಿನ ನೀನಾಸಂ ಏರ್ಪಡಿಸಿದ ತಾಳಮದ್ದಳೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯ ನೇತೃತ್ವ ವಹಿಸಿದ್ದಾರೆ. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಾರ್ಯಕ್ರಮಗಳ ಯೋಜಕರಾಗಿಯೂ ನೆರವು ನೀಡಿದ್ದಾರೆ.

ಅಗರಿ ಸನ್ಮಾನ, ಮೂಡಂಬೈಲು ಶಾಸ್ತ್ರಿ ಸನ್ಮಾನ, ಡಾ. ರಾಘವ ನಂಬಿಯಾರರ 'ಹಿಮ್ಮೇಳ' ಗ್ರಂಥ ಪ್ರಕಟಣೆಗಾಗಿ ಪರಿಶ್ರಮ, ಅನೇಕ ಯಕ್ಷಗಾನ ಕ್ಯಾಸೆಟ್‌ಗಳ ನಿರ್ಮಾಣಕ್ಕೆ ಸಹಕಾರ, ಅಭಿನಂದನ ಭಾಷಣಗಳನ್ನು ಮಾಡಿದ್ದಲ್ಲದೆ ಪ್ರಧಾನವಾಗಿ ಬಲಿಪ ನಾರಾಯಣ ಭಾಗವತರ ಸುದೀರ್ಘ ಕಲಾ ಸೇವೆಯನ್ನು ಗೌರವಿಸುವ ಅಂಗವಾಗಿ ಸುಮಾರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 'ಬಲಿಪ ಅಮೃತಭವನ' ನಿರ್ಮಾಣದ ಯೋಜನೆ, ಸಂಗ್ರಹ ಹಾಗೂ ನಿರ್ವಹಣೆಯಲ್ಲಿ ದುಡಿದಿದ್ದಾರೆ. ಯಕ್ಷಗಾನದ ವಿಚಾರ ಸಂಕಿರಣಗಳು, ಧ್ವನಿಮುದ್ರಣಗಳು, ಡಾಕ್ಯುಮೆಂಟರಿಗಳು ಹೀಗೆ ಯಾವುದೇ ಅಕಾಡೆಮಿಕ್ ಯೋಜನೆಗಳು ಕಾರ್ಯಗತವಾಗುವಾಗಿ ಜೋಶಿಯವರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯುವುದು ಅನಿವಾರ್ಯವೆನ್ನುವಷ್ಟು ಜೋಶಿಯವರು ಇಂದು ಛಾಪು ಮೂಡಿಸಿದ್ದಾರೆ.

ಒಬ್ಬ ಕಾಲೇಜು ಶಿಕ್ಷಕ ಇಂತಹ ವಿಸ್ತ್ರತ ಕಾರ್ಯಕ್ರಮಗಳನ್ನು ತನ್ನ ವೃತ್ತಿಗೆ ತೊಂದರೆಯಾಗದಂತೆ ಮಾಡಲು ಸಾಧ್ಯವೇ? ಈ ಪ್ರಶ್ನೆಗೆ ಉತ್ತರ ಜೋಶಿಯವರ

ಗುರುತ್ವದಲ್ಲಿದೆ. ಅವರು ಯಶಸ್ವಿ ಪ್ರಾಧ್ಯಾಪಕರಷ್ಟೇ ಅಲ್ಲದೆ ಉತ್ತಮ ಆಡಳಿತಾರ ಎಂಬುದನ್ನು ಮಂಗಳೂರಿನ ಬೆಸೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಗಿದ್ದಾಗ ತೋರಿಸಿಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆಯ 'Vision' ಮತ್ತು A 'Mission' ನಿರೂಪಣೆ ಹಾಗೂ ಪಾಲಿಸಿ ಬದಲಾವಣೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಗೆ ಇವರ ಮೇಲೆ ಪೂರ್ಣ ವಿಶ್ವಾಸವಿತ್ತು. ಸಹೋದ್ಯೋಗಿಗಳಿಗಾಗಲೀ ವಿದ್ಯಾರ್ಥಿ ಗಳಿಗಾಗಲೀ ಎಷ್ಟು ವಿನಾಯಿತಿ ನೀಡಬೇಕು ಮತ್ತು ಎಲ್ಲಿ ಶಿಸ್ತನ್ನು ಹೇರಬೇಕು ಎಂಬ ಬಗ್ಗೆ ಜೋಶಿಯವರಲ್ಲಿ ಸರಿಯಾದ ತಿಳುವಳಿಕೆ ಇತ್ತು. ಕಾಲೇಜಿನಲ್ಲಿ ಇವರು ಗ್ರಂಥಾಲಯ ವನ್ನು ಮುಕ್ತಗೊಳಿಸಿ ವಿದ್ಯಾರ್ಥಿಗಳು ಬೇಕಾದ ಪುಸ್ತಕವನ್ನು ಕೈಹಾಕಿ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದರು. ವಿದ್ಯಾರ್ಥಿನಿಯರು ತಪ್ಪು ಮಾಡಿದಾಗ ವಿಚಾರಣೆಯನ್ನು ಮಹಿಳಾ ಪ್ರಾಧ್ಯಾಪಕಿಯರ ಮುಂದೆಯೇ ನಡೆಸುತ್ತಿದ್ದರು. ಇದು ಒಂದು ವೃತ್ತಿಪರತೆಯ ವಿಚಾರವಾದರೆ ಅವರ ಇನ್ನೊಂದು ಸಾಧನೆ ಇರುವುದು ಪದವಿಪೂರ್ವ ಕಾಲೇಜು ಶಿಕ್ಷಕರ ಜಿಲ್ಲಾ ಸಂಘಟನೆಯ ಅಧ್ಯಕ್ಷರಾಗಿ ಶಿಕ್ಷಕರ ಹೋರಾಟಕ್ಕೆ ತಾತ್ವಿಕ ನೆಲೆಗಟ್ಟನ್ನು ನೀಡಿದ್ದರು. ರಾಜ್ಯ ಮಟ್ಟದಲ್ಲಿಯೂ ಶಿಕ್ಷಕರ ಸಂಘಟನೆಯವರು ಇವರ ಸೇವೆಯನ್ನು ಬಯಸಿದರೂ ಮಂಗಳೂರಿನಲ್ಲಿದ್ದುಕೊಂಡು ಅದು ಸಾಧ್ಯವಿಲ್ಲವೆಂದು ನಯವಾಗಿಯೇ ತಿರಸ್ಕರಿಸಿದರು.

ಪ್ರಾಂಶುಪಾಲರಾಗಿ ವೃತ್ತಿಯಿಂದ ನಿವೃತ್ತರಾದ ಜೋಶಿಯವರ ಸ್ಮರಣೀಯ ಘಟನೆಯೆಂದರೆ ಅವರ ವಿದಾಯ ಸಮಾರಂಭಕ್ಕೆ ಮೂರು ದಿನ ಮೊದಲು ಅವರ ಸಹೋದ್ಯೋಗಿಗಳೆಲ್ಲ ಕಚೇರಿಯೊಳಗೆ ಬಂದು ಸುತ್ತ ಸೇರಿದರು. ಏನು ವಿಚಾರವೆಂದು ವಿವರಿಸಲಾಗದೆ ಒಮ್ಮಿಂದೊಮ್ಮೆಲೇ ಕಣ್ಣೀರು ಹಾಕಿದರು. ಏನೂ ಮಾತನಾಡಲಾಗದೆ ಕೆಲವು ನಿಮಿಷ ಕಳೆದು ಅವರೆಲ್ಲ ಅಳುತ್ತಲೇ ತೆರಳಿದರು. ಅದು ಅವರ ಭಾವಭಕ್ತಿಯ ವಿದಾಯದ ಕಣ್ಣೀರಾಗಿತ್ತು. ತಾನು ಸಹಶಿಕ್ಷಕರ ಮನಸ್ಸಿನಲ್ಲಿ ಇಂತಹ ಒಂದು ಭಾವನಾತ್ಮಕ ಗೌರವ ಹೊಂದಿದ್ದ ಸಂಗತಿಯೇ ಜೋಶಿಯವರಿಗೆ ಸುಖಾಶ್ಚರ್ಯಗಳ ಅನುಭವವಾಗಿತ್ತು.

ತಾನು ಕಲಿತ ಮಾಳದ ಗುರುಕುಲ ಖಾಸಗಿ ಅನುದಾನಿತ ಶಾಲೆಯ ಪುನರುಜ್ಜಿವನಕ್ಕೆ ಊರಿನವರು ತೊಡಗಿದಾಗ ತಾನೂ ಸೇರಿಕೊಂಡು 'ಗುರುಕುಲ ಸಂವರ್ಧನ ಸಮಿತಿ'ಯ ಕ್ರಿಯಾಶೀಲ ಕಾರ್ಯಕರ್ತನಾಗಿ ದುಡಿದಿದ್ದಾರೆ. ಇದೀಗ ಆ ಶಾಲೆಯು ಮತ್ತೆ ಹಿಂದಿನ ಕಳೆಯನ್ನು ತಳೆಯುತ್ತಿದೆ. ಇನ್ನು ಬಡವಿದ್ಯಾರ್ಥಿಗಳಿಗೆ ಸಹಾಯ, ಉಚಿತ ಪಾಠ, ಕಲಾವಿದರಿಗೆ ಮಾಸಾಶನಕ್ಕೆ ಅರ್ಜಿ, ಮಾನಪತ್ರಗಳನ್ನೂ ಆಹ್ವಾನಪತ್ರಿಕೆಗಳನ್ನೂ ಕರಪತ್ರಗಳನ್ನೂ ಬರೆದು ಕೊಡುವುದು, ಒಂದೇ ವಾಕ್ಯದ ಮಾನಪತ್ರದ ಹೊಸತನ, ಹವ್ಯಾಸಿ ಕಲಾವಿದರ ಬೆಳವಣಿಗೆಗೆ ಪ್ರೋತ್ಸಾಹ, ಕಲಾವಿದರ ವ್ಯಕ್ತಿಪರಿಚಯ, ಅನೇಕ ಅಭಿನಂದನ ಗ್ರಂಥಗಳ ಸಂಪಾದಕರು, ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಸಂಪಾದಕರಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರಗಳು ಹೀಗೆ ನಿರಂತರ ಕ್ರಿಯಾಶೀಲತೆಯು ಜೋಶಿಯವರ ವ್ಯಕ್ತಿತ್ವದ ಲಕ್ಷಣವಾಗಿದೆ. ಸಾರ್ವಜನಿಕ ವಿಚಾರಗಳಿಗೆ

ಸಂಬಂಧಿಸಿ ಸಾಮಾಜಿಕ ಕಳಕಳಿ ತೋರುವ ಪ್ರವೃತ್ತಿ ಕಲಾವಿದರಲ್ಲಿ ಕಾಣುವುದು ಅಪರೂಪ. ಆದರೆ ಜೋಶಿಯವರು ಕಂಡ ಕುಂದು ಕೊರತೆಗಳನ್ನು ಹೇಳದಿರುವವರಲ್ಲ.

ಜೋಶಿಯವರು ಅಮೇರಿಕಕ್ಕೆ ಹೋದದ್ದು ಮಗಳ ಮನೆಗಾದರೂ ಅಲ್ಲಿ ಅವರ ಹೆಚ್ಚಿನ ಸಮಯ ಉಪಯುಕ್ತವಾದದ್ದು ಅಭಿಮಾನಿಗಳು ಏರ್ಪಡಿಸಿದ ಭಾಷಣ, ತಾಳಮದ್ದಳೆ ಮತ್ತು ವಿಚಾರಸಂಕಿರಣಗಳಲ್ಲಿ, ಅಲ್ಲಿನ ಬರ್ಕ್‌ ವಿಶ್ವವಿದ್ಯಾಲಯದಲ್ಲಿಯೂ ಯಕ್ಷಗಾನವನ್ನು ಪರಿಚಯಿಸಿದ ಹಿರಿಮೆ ಜೋಶಿಯವರದ್ದು.

ಜೋಶಿಯವರಿಗೆ ಎಲ್ಲ ಮೇಳಗಳ ಚೌಕಿಗಳೊಳಗೆ ಸಲೀಸಾಗಿ ಪ್ರವೇಶ ಇದೆ. ಅಲ್ಲಿನ ಅತ್ಯಂತ ಹಿರಿಯ ಕಲಾವಿದರೊಂದಿಗೆ ಸ್ನೇಹಾಚಾರದ ಮಾತಾಡುತ್ತ ಜೋಶಿ ಯವರು ಕಿರಿಯ ಬೆಳೆವ ಕಲಾವಿದರನ್ನು ಹೆಸರು ಹಿಡಿದು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ. ದಕ್ಷಿಣೋತ್ತರ ಕರಾವಳಿಯ ಯಕ್ಷಗಾನದ ಹೆಚ್ಚಿನ ಎಲ್ಲಾ ವ್ಯವಸಾಯಿ ಮತ್ತು ಹವ್ಯಾಸಿ ಕಲಾವಿದರ ಸಂಪರ್ಕ ಇರುವ ಜೋಶಿಯವರು ಯಾರಿಗಾದರೂ ಏನೇ ಸಹಕಾರದ ಅಗತ್ಯವಿದ್ದರೂ ತಾವೇ ಮುಂದಾಗಿ ಮಾಡುತ್ತಾರೆ ಅಥವಾ ಸೂಕ್ತ ದಾರಿಯನ್ನು ತೋರುತ್ತಾರೆ. ಹೀಗಾಗಿ ಕಲಾವಿದರಷ್ಟೇ ಅಲ್ಲ, ಕಲಾಭಿಮಾನಿಗಳೂ ಜೋಶಿಯವರನ್ನು ಹತ್ತಿರದಿಂದ ಬಲ್ಲರು. ಬಂಧುಮಿತ್ರರು, ಸಂಬಂಧಿಕರು ಹಾಗೂ ಊರಿನ ತೀರಾ ಸಾಮಾನ್ಯರೊಂದಿಗೂ ಸತತ ಸಂಪರ್ಕ ಮತ್ತು ಸ್ಪಂದನ ಇರುವುದೇ ಜೋಶಿಯವರ ಅನನ್ಯತೆ.

◆ ◆ ◆

ಜೋಶಿ ಅರ್ಥಗಾರಿಕೆ

ಐತಿಹಾಸಿಕ ಆಯಾಮಗಳು

ರಾಧಾಕೃಷ್ಣ ಕಲ್ಟಾರ್

ತಾಳಮದ್ದಲೆ ಅರ್ಥಧಾರಿಯಾಗಿ ಪ್ರಭಾಕರ ಜೋಶಿಯವರದು ಐದು ದಶಕಗಳ ಅನುಭವ. ಆದುದರಿಂದ ಅವರ ಅರ್ಥಗಾರಿಕೆಯ ವಿಶ್ಲೇಷಣೆ ಅಂದರೆ ಅದು ತಾಳಮದ್ದಲೆಯ ಇತಿಹಾಸದ ವಿಶ್ಲೇಷಣೆಯೂ ಹೌದು. ಅಥವಾ ತಾಳಮದ್ದಲೆಯ ಈ ದಶಕಗಳ ಇತಿಹಾಸದ ಅವಲೋಕನ ಜೋಶಿಯವರ ಅರ್ಥಗಾರಿಕೆಯ ಹೊರತು ಅಪೂರ್ಣವೇ ಆಗಿಬಿಡುತ್ತದೆ. ಎಳೆಯ ವಯಸ್ಸಿನಲ್ಲೇ ಅರ್ಥಗಾರಿಕೆಗೆ ತೊಡಗಿದ ಜೋಶಿಯವರ ಅರ್ಥದಲ್ಲಿ ಗುರುತಿಸಬಹುದಾದ ವಿಶಿಷ್ಟಾಂಶಗಳು ಮತ್ತು ಅವುಗಳು ಮುಖೇನ ಶೈಲಿಯೊಂದನ್ನು ರೂಪಿಸಿಕೊಳ್ಳುವಲ್ಲಿ ಅವರಿಗಿದ್ದ ಐತಿಹಾಸಿಕ ಅಗತ್ಯಗಳನ್ನು ಗುರುತಿಸುವುದು ಸದ್ಯ ನನ್ನ ಉದ್ದೇಶ.

ಏನು ಜೋಶಿಯವರ ಅರ್ಥದ ವಿಶಿಷ್ಟತೆಗಳು?
1. ಸಂಕ್ಷಿಪ್ತತೆ. ಕೆಲವೇ ವಾಕ್ಯಗಳಲ್ಲಿ ಪದ್ಯದ ಸಾರವನ್ನು ಹಿಡಿದಿಡಬಲ್ಲ ಸಾಮರ್ಥ್ಯ. ಅವರ ಅರ್ಥಗಾರಿಕೆ ದೀರ್ಘವಲ್ಲ.
2. ವಿನೋದ ಪ್ರಿಯತೆ, ನವಿರಾದ ಹಾಸ್ಯ ಅವರ ಅರ್ಥಗಾರಿಕೆಯ ಒಂದು ಪ್ರಧಾನ ಲಕ್ಷಣ. ಕೆಲವೊಮ್ಮೆ ಗಂಭೀರವಾಗಿರಬೇಕಾದಲ್ಲೂ ಹಾಸ್ಯ ಇಣುಕುವುದುಂಟು.
3. ಸರಳ ಭಾಷೆ, ಎಂತಹ ಜಟಿಲ, ತಾತ್ವಿಕ ವಿಷಯವಾದರೂ ಅವರ ಭಾಷೆ


ಕ್ಲಿಷ್ಟವಾಗುವುದಿಲ್ಲ.
4. ವೇಗ. ಒಟ್ಟಾಗಿ ಅವರ ಅರ್ಥಗಾರಿಕೆಯ ಲಯ ತೀವ್ರಗತಿಯದು.
5. ಶ್ರುತಿಯಲ್ಲಿ ಲೀನತೆ ಹೊಂದದೆ ಪ್ರತ್ಯೇಕವಾಗಿ ಕೇಳುವ ಕಂಠ.
6. ಸಂಭಾಷಣಾ ಚಾತುರ್ಯ ಇತ್ಯಾದಿ.

ಇಲ್ಲಿ ಜೋಶಿ ಅರ್ಥಗಾರಿಕೆಯ ಎಲ್ಲ ಅಂಶಗಳನ್ನು ಪಟ್ಟಿಮಾಡುವುದು ಉದ್ದೇಶವಲ್ಲ. ಅವರ ಅರ್ಥಗಾರಿಕೆ ಅನನ್ಯವಾಗುವಂತೆ ರೂಪಿಸಿದ ಪ್ರಧಾನ ಲಕ್ಷಣಗಳು ಮಾತ್ರ ಇಲ್ಲಿ ಮುಖ್ಯ.ಪ್ರತಿಯೊಬ್ಬ ಕಲಾವಿದನೂ ತನ್ನ ಉಳಿವಿಗಾಗಿ ಮಂಡನೆಯಲ್ಲಿ ಇತರರಿಗಿಂತ ವಿಭಿನ್ನ ಶೈಲಿಯನ್ನು ಹೊಂದುವುದು ಅನಿವಾರ್ಯ. ಇಲ್ಲವಾದರೆ ಹತ್ತರೊಂದಿಗೆ ಹನ್ನೊಂದಾಗಿ ನಿರ್ಲಕ್ಷಿಸಲ್ಪಡುವ ಅಪಾಯವಿರುತ್ತದೆ. ಈ ನೆಲೆಯಲ್ಲಿ ಪ್ರಭಾಕರ ಜೋಶಿ ಯವರು ಅರ್ಥಧಾರಿಯಾಗಿ ರೂಪುಗೊಳ್ಳುವಾಗ ಇದ್ದ ಸನ್ನಿವೇಶವನ್ನು ಪರಿಶೀಲಿಸುವುದು ಅತ್ಯಗತ್ಯ.

ತಾಳಮದ್ದಲೆಯ ಇತಿಹಾಸದಲ್ಲಿ ತೀರ ಅಪರಿಷ್ಕೃತ ಹಂತ,ಅಲ್ಪ ಪರಿಷ್ಕೃತ ಆದರೆ ಬಹುಪಾಲು ರೂಕ್ಷ, ಪರಿಷ್ಕಾರದ ಕಾಲ, ಪರಿಷ್ಕೃತ ರೂಪ.. ಹೀಗೆ ಅನೇಕ ಘಟ್ಟಗಳನ್ನು ಗುರುತಿಸಬಹುದು. ರಂಗಭೂಮಿಯೊಂದರ ವಿಕಾಸದಲ್ಲಿ ಇವೆಲ್ಲ ಸ್ವಾಭಾವಿಕ. ಜೋಷಿ ಯವರು ರಂಗ ಪ್ರವೇಶ ಮಾಡಿದ ಕಾಲಘಟ್ಟದಲ್ಲಿ ತಾಳಮದ್ದಲೆ ಪರಿಷ್ಕೃತವಾಗಿ, ಒಂದು ಪೂರ್ಣಪ್ರಮಾಣದ ರಂಗಭೂಮಿಯಾಗಿ ಬೆಳೆದು ನಿಂತಿತ್ತು. ಮಾತ್ರವಲ್ಲ ಇದಕ್ಕೆ ಕಾರಣರಾದ ಹಿರಿಯರಲ್ಲಿ ಹೆಚ್ಚಿನವರು ಸಕ್ರಿಯರೂ ಆಗಿದ್ದರು. ಇವರಿಂದಾಗಿ ಅರ್ಥಗಾರಿಕೆಗೊಂದು ಮಾದರಿ ಸಿದ್ಧವಾಗಿತ್ತು. ನಿರ್ದಿಷ್ಟ ಭಾಷಾಶೈಲಿ ರೂಪುಗೊಂಡಿತ್ತು. ಪ್ರತಿಭಾವಂತರಾದ ಕಲಾವಿದರು ಅನೇಕ ಸಾಧ್ಯತೆಗಳನ್ನು ಕಂಡುಕೊಂಡಾಗಿತ್ತು.

ಈ ಸನ್ನಿವೇಶದಲ್ಲಿ ರಂಗಕ್ಕೆ ಬಂದ ಕಲಾವಿದ ತನ್ನ ಉಳಿವಿಗಾಗಿ ಇವರೆಲ್ಲರಿಗಿಂತ ಭಿನ್ನ ಮಾದರಿಯೊಂದನ್ನು ರೂಪಿಸಿಕೊಳ್ಳುವ ಅನಿವಾರ್ಯತೆ ಉಂಟಾಗುವುದು ಸ್ವಾಭಾವಿಕ. ಜೋಶಿಯವರ ಆಯ್ಕೆ ಈ ನೆಲೆಯಲ್ಲಿ ಹೊಸಶೈಲಿಯತ್ತ ಹೊರಳಿತು. ಅವರೇನಾದರೂ ಇಂತಹ ಆಯ್ಕೆಯೊಂದನ್ನು ಮಾಡಿಕೊಳ್ಳದೇ ಇದ್ದಿದ್ದರೆ ಇಷ್ಟು ಸುದೀರ್ಘಾವಧಿ ರಂಗದಲ್ಲಿ ಉಳಿಯುತ್ತಿದ್ದರು ಅನ್ನುವುದು ಸಂಶಯ.

ಭಿನ್ನಶೈಲಿ ಅಂದರೆ ಹೇಗೆ ಎಂದು ಪರಿಶೀಲಿಸುವುದು ಅಗತ್ಯ. ಆಗ ತಾರಾಮೌಲ್ಯ ಗಳಿಸಿದ್ದ ಮಲ್ಪೆ ಶಂಕರನಾರಾಯಣ ಸಾಮಗರದು ಕ್ಲಿಷ್ಟ ವಾಕ್ಯಗಳ ತಾತ್ವಿಕ ವಿವೇಚನಾ ಪ್ರಾಧಾನ್ಯವುಳ್ಳ ಪ್ರಗಲ್ಯ ಮಾತುಗಾರಿಕೆ. ಅವರೆದುರು ಕಾಣಿಸಿಕೊಂಡು ಮೆರೆಯುತ್ತಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರದು ಪ್ರಚಂಡ ತರ್ಕದ ಸಶಕ್ತ ಮಂಡನೆ ಹಾಗೂ ಆಕರ್ಷಕ ಅಭಿವ್ಯಕ್ತಿಯ ಅರ್ಥಗಾರಿಕೆ. ರಾಮದಾಸ ಸಾಮಗರದು ಭಾವುಕ, ಕಾವ್ಯಾತ್ಮಕ ನಿರೂಪಣೆ. ತೆಕ್ಕಟ್ಟೆಯವರದು ರಭಸದ ಮಾತುಗಾರಿಕೆ, ಕಾಂತ ರೈ ಹಾಗೂ ಪೆರ್ಲ ಪಂಡಿತರದು ಭಾವಾವೇಶವಿಲ್ಲದ ನಿರ್ಲಿಪ್ತ ನಿರೂಪಣೆ. ಇವರೆಲ್ಲರ ಅರ್ಥಗಾರಿಕೆಯಲ್ಲೂ ಲಂಬಿಸುವ ಗುಣ ಸಾಮಾನ್ಯವಿತ್ತು. (ಇದು ಆ ಕಾಲದ ಇಡಿ ಇರುಳಿನ ಕಾಲಮಿತಿಯಿಲ್ಲದ ಕೂಟಗಳಲ್ಲಿ

ದೋಷವಾಗಿ ಕಾಣುತ್ತಿರಲಿಲ್ಲ) ಇವರಿಗಿಂತ ಪ್ರತ್ಯೇಕವಾದ ಧ್ವನಿಯುಕ್ತ, ಸಂಕ್ಷಿಪ್ತ, ರಸಾತ್ಮಕ ಶೈಲಿ ದೇರಾಜೆ ಸೀತಾರಾಮಯ್ಯನವರದು, ಪಾಂಡಿತ್ಯ, ವಾದ, ತರ್ಕಗಳಲ್ಲಿ ಈ ಅರ್ಥಧಾರಿಗಳ ಜತೆ ಸ್ಪರ್ಧೆಗಿಳಿಯದ ದೇರಾಜೆಯವರು ತಮ್ಮ ಪ್ರತಿಭೆಯಿಂದ ಮಾತ್ರವೇ ಮೆರೆದರು. ಆದರೆ ಜೋಶಿಯವರು ಪ್ರಧಾನ ವೇದಿಕೆಗೆ ಪ್ರವೇಶಿಸುವ ಕಾಲಕ್ಕೆ ದೇರಾಜೆಯವರು ನಿವೃತ್ತಿಯತ್ತ ಸಾಗಿದ್ದರು.

ಘಟಾನುಘಟಿ ಅರ್ಥಧಾರಿಗಳ ಎದುರು ತನ್ನದೇ ವೈಶಿಷ್ಟ್ಯದಿಂದ ಕಾಣಿಸಿಕೊಂಡ ದೇರಾಜೆಯವರ ಮಾದರಿ ಜೋಶಿಯವರಿಗೆ ಪ್ರಿಯವಾಗಿದ್ದರೆ ಅಚ್ಚರಿಯಿಲ್ಲ. ಯಾಕೆಂದರೆ ಅವರ ಅರ್ಥಗಾರಿಕೆಯ ಕೆಲವು ಅಂಶಗಳು ಜೋಶಿಯವರಲ್ಲೂ ಇದೆಯೆನಿಸುತ್ತದೆ. ಯಾವುದು ದೀರ್ಘಕಾಲ ಉಳಿಯುವ ಮಾದರಿಯೋ (ಅಥವಾ ಹಾಗೆಂದು ತೋರಿಯೋ) ಜೋಶಿ ಇಂತಹ ದಾರಿಯನ್ನು ಆರಿಸಿಕೊಂಡರೇ?

ಇತಿಹಾಸದ ಸಂದರ್ಭಗಳನ್ನು ಹೀಗೆಯೇ ಎಂದು ತೀರ್ಮಾನಿಸುವುದು ಕಷ್ಟ. ಆದರೆ ಇಂತಹ ಊಹೆಗೆ ಆಧಾರಗಳು ಜೋಶಿಯವರ ಅರ್ಥಗಾರಿಕೆಯಲ್ಲಿ ಸಿಗುತ್ತವೆ. ಹಾಗೆಂದು ಬುದ್ಧಿಪೂರ್ವಕ ಅವರು ಮಾಡಿದಂತೆಯೂ ಇಲ್ಲ. ಎಲ್ಲೋ ಕಲ್ಲಿನ ಸಂದಿನಲ್ಲಿ ಬಿದ್ದ ಬೀಜವಾದರೂ ಮೊಳಕೆಯೊಡೆದು ಬೆಳಕಿನತ್ತ ಚಿಗುರುವ ಪ್ರಕೃತಿಯಂತೆ ಇದೂ ಸಂಭವಿಸಿರಬೇಕು. ಹೇಗಾದರೂ ಕಾಣಿಸಿಕೊಳ್ಳಲೇಬೇಕೆಂಬುದು ಅರ್ಥಗಾರಿಕೆಯ ಅನಿವಾರ್ಯವಷ್ಟೆ?

ಆದರೆ ಒಂದೆರಡು ಅಂಶಗಳನ್ನು ಮಾತ್ರ ಜೋಶಿ ಹಠಹಿಡಿದು ಅಳವಡಿಸಿಕೊಂಡಂತೆ ತೋರುತ್ತದೆ. ಅವುಗಳಲ್ಲಿ ಶ್ರುತಿ ಬದ್ಧತೆಯನ್ನು ಬಿಟ್ಟು ಅರ್ಥ ಹೇಳವುದು ಅಥವಾ ಒತ್ತಾಯದಿಂದ ಅಳವಡಿಸಿಕೊಳ್ಳದಿರುವುದು. (ಇದಕ್ಕೊಂದು ಹಿನ್ನೆಲೆಯಿದೆ. ಎಂಬತ್ತರ ದಶಕದ ಕೊನೆಗೆ ಉದಯವಾಣಿ ಪತ್ರಿಕೆಯಲ್ಲಿ ಅರ್ಥಗಾರಿಕೆ ಮತ್ತು ಶ್ರುತಿಯ ಕುರಿತು ವಿದ್ವತ್ತೂರ್ಣ ಚರ್ಚೆ ನಡೆಯಿತು. ಸಂಗೀತ ಅಥವಾ ಹರಿಕಥೆಯ ಮಾದರ ಶ್ರುತಿಲೀನತೆ ಅನಗತ್ಯ ಅಂತ ಜೋಶಿಯವರ ನಿಲುವಾಗಿತ್ತು. ಅದರ ಪರಿಣಾಮ ಮಂಗಳೂರಿನಲ್ಲಿ ಒಂದು ವಿಚಾರ ಗೋಷ್ಠಿಯೂ ನಡೆಯಿತು. ಆ ಗೋಷ್ಠಿಯ ಮೊದಲು 'ಜೋಶಿಯವರಿಗೆ ಶ್ರುತಿಯಲ್ಲಿ ಅರ್ಥಹೇಳಲು ಬರುವುದಿಲ್ಲ ಅನ್ನುವ ಟೀಕೆಗಳೂ ಕೇಳಿಬಂದವು. ಉತ್ತರವಾಗಿ ಜೋಶಿಯವರು ಶ್ರುತಿ ಬದ್ಧವಾಗಿ ಅರ್ಥ ಹೇಳಿ ಇದಲ್ಲವೇ ನಿಮ್ಮ ನಿರೀಕ್ಷೆ?' ಅಂತ ಕೇಳಿದರು) ಇಲ್ಲಿ ಇದರ ಉಲ್ಲೇಖ ಮಾಡಿದ ಉದ್ದೇಶ ಜೋಶಿ ಬುದ್ಧಿಪೂರ್ವಕ ಈ ಶೈಲಿಯನ್ನು ಅಳವಡಿಸಿಕೊಂಡರು ಅನ್ನುವುದರ ಸಮರ್ಥನೆಗೆ ಮಾತ್ರ.

ಇನ್ನೊಂದು ಸಂಕ್ಷಿಪ್ತವಾದ ಅವರ ಅಭಿವ್ಯಕ್ತಿ ವಿಧಾನ ರೂಪುಗೊಳ್ಳುವುದಕ್ಕೆ ಹಿನ್ನೆಲೆಯಾಗಿ ಗಮನೀಯ. ಆ ಕಾಲದಲ್ಲಿ ಇಡಿ ಇರುಳಿಗೆ ಎರಡು ಪ್ರಸಂಗಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಮೊದಲ ಪ್ರಸಂಗದಲ್ಲಿ ಶೇಣಿಯಂತಹ ಹಿರಿಯರಿದ್ದರೆ ಅದು ಲಂಬಿಸಿ ಎರಡನೆಯ ಪ್ರಸಂಗಕ್ಕೆ ಅವಧಿ ಮೊಟಕಾಗುತ್ತಿತ್ತು. ಅಥವಾ ಎರಡನೆಯದಕ್ಕೆ ಅವರಿದ್ದರೆ ಮೊದಲ ಪ್ರಸಂಗ ಮೊಟಕಾಗುವ ಅನಿವಾರ್ಯವಿತ್ತು.

ಅಂತಹ ಸಂದರ್ಭಗಳಲ್ಲಿ ಸಂಕ್ಷಿಪ್ತ ಮಾತುಗಳಲ್ಲಿ ವಿಕೃತ ಅರ್ಥ ತುಂಬುವ ಮತ್ತು ಅದರಿಂದಲೇ ಕಾಣಿಸಿಕೊಳ್ಳುವ ಉಳಿವಿನ ದಾರಿ ಹಿಡಿಯಲೇಬೇಕಷ್ಟೆ ಅಲ್ಲದೆ ಗಂಭೀರ ಮಂಡನೆಯ ವಾಕ್ಷವೀಣರ ಮುಂದೆ ಕಾಣಿಸಬೇಕಾಗಿ ಬಂದಾಗ ಎದುರು ಅರ್ಥದಾರಿ ಯಾಗಿ ವೈನೋದಿಕ ಶೈಲಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ. ಜೋಶಿಯವರ ಅರ್ಥದ ಶೈಲಿ ರೂಪುಗೊಳ್ಳುವಲ್ಲಿ ಇದೂ ಪ್ರಭಾವ ಬೀರಿತೆನ್ನಬಹುದು.

ಜೋಶಿಯವರು ಸಂಯೋಜಕರಾಗಿಯೂ ಅನೇಕ ತಾಳಮದ್ದಲೆಗಳನ್ನು ನಡೆಸಿಕೊಟ್ಟವರು. ಅಂತಹ ಸನ್ನಿವೇಶಗಳಲ್ಲಿ ಸಂಯೋಜಕನಾದ ಅರ್ಥಧಾರಿಗೆ ಎದುರಾಗುವ ಸಂಕಟಗಳು (ಕಡಿಮೆ ಅವಧಿ, ಪೋಷಕ ಪಾತ್ರಗಳನ್ನು ಹೇಳಬೇಕಾಗುವುದು) ಅವರಿಗೂ ಬಂದಿರಲೇಬೇಕು. ಹೀಗಾದಾಗ ಅರ್ಥಧಾರಿಯ ಮಾತು ಹೆಚ್ಚು ಮೊನಚಾಗುವುದು ಸ್ವಾಭಾವಿಕ.

ಜೋಶಿಯವರದು ಛಲ ಹಿಡಿದು ಸಾಧಿಸುವ ವಿಧಾನದ ಅರ್ಥಗಾರಿಕೆಯಲ್ಲ. ಎಲ್ಲದರಲ್ಲೂ ತರ್ಕದ ವಾದದ ಮಂಡನೆಯಲ್ಲ. ಅಗತ್ಯವಾದರೆ ಮಾತ್ರ ಆ ದಾರಿ ಹಿಡಿದಾರಷ್ಟೆ. ವಾದಕ್ಕಿಳಿದು ಗೆಲ್ಲಬಲ್ಲ ಸಾಮರ್ಥ್ಯ ಅವರಲ್ಲಿ ಸಾಕಷ್ಟಿದೆ. ಆದರೂ ಸೌಮ್ಯ ಮಾರ್ಗವನ್ನು ಅನುಸರಿಸಲು ಕಾರಣವೇನು? ಅದೂ ಅವರ ಆಯ್ಕೆಯಾಗಿ ಬಂತೇ? ಯಾಕೆಂದರೆ ಅವರು ಪ್ರಾಥಮಿಕ ಹಂತದಲ್ಲಿ ಸಂಘಗಳ ಅಭ್ಯಾಸಿ ಕೂಟಗಳಲ್ಲಿ ಅರ್ಥ ಹೇಳುತ್ತ ಬೆಳೆದವರು. ಸಾಮಾನ್ಯವಾಗಿ ಸಂಘದ ತಾಳಮದ್ದಲೆಗಳು ಅಭ್ಯಾಸಿ ಕೂಟಗಳಾದರೂ ಅಲ್ಲಿ ಸಣ್ಣ ಮಟ್ಟದ ಮೇಲಾಟವೊಂದು ಇರುತ್ತದೆ. ಇದರಿಂದಾಗಿ ಎದುರಾಳಿಯನ್ನು ಖಂಡಿಸುವ ಸ್ವಭಾವ ಮೈಗೂಡುವುದು ಸಹಜ. ಅಲ್ಲದೆ ಜೋಶಿ ರಂಗ ಪ್ರವೇಶಿಸಿದ ಕಾಲಕ್ಕೆ ತರ್ಕ, ವಾದ, ಜಗಳಗಳು ಇತ್ಯಾದಿ ಜನಪ್ರಿಯವಾಗಿದ್ದವು. ಆದರೆ ಈ ಆಕರ್ಷಣೆಯನ್ನೂ ಮೀರಿ ಹೊಂದಾಣಿಕೆಯ ಮನೋಧರ್ಮ ರೂಢಿಸಿಕೊಳ್ಳುವುದು ಉದ್ದೇಶಪೂರ್ವಕ ನಡೆದಿರಬೇಕು.

ಇನ್ನೊಂದು ಜೋಶಿಯವರ ಅರ್ಥಗಾರಿಕೆಯಲ್ಲಿ ಇಲ್ಲದ ಅಥವಾ ತೀರಾ ಕಡಿಮೆಯಾಗಿರುವ ಅಂಶ ಭಾವುಕತೆ, ಹರಿದಾಸರಾಗಿ ಬಳಿಕ ಅರ್ಥಧಾರಿಗಳಾದವರಿಗೆ ತಮ್ಮ ಕಂಠದಲ್ಲಿ ಸೇರಿಕೊಂಡ ನಾದ ಗುಣದಿಂದಾಗಿ ಭಾವ ಸಂವಹನ ಸುಲಭವಾಗುತ್ತದೆ. ಆದರೆ ಅದು ಜೋಶಿಯವರನ್ನು ಆಕರ್ಷಿಸಿದಂತೆ ಇಲ್ಲ. ಯಾಕೆಂದರೆ ಮಲ್ಪೆ ರಾಮದಾಸ ಸಾಮಗರಂತಹ ಅರ್ಥಧಾರಿ ಬಹುವಾಗಿ ಗೆದ್ದಿರುತ್ತ (ಅವರ ಪಟ್ಟಾಭಿಷೇಕದ ದಶರಥನನ್ನು ನೆಪಿಸಿಕೊಳ್ಳಬಹುದು.) ಅದೇ ದಾರಿ ತುಳಿಯುವುದು ಅವರಿಗೆ ಒಪ್ಪಿಗೆಯಾಗಿರಲಾರದು. ಅಲ್ಲದೆ ಜೋಶಿಯವರ ಸಮಕಾಲೀನರಾದ ಕುಂಬಳೆ ಸುಂದರ ರಾವ್ ಭಾವನಾತ್ಮಕ ಅಭಿವ್ಯಕ್ತಿಯಲ್ಲಿ ಪ್ರತ್ಯೇಕ ಜನಾಕರ್ಷಣೆ ಗಳಿಸತೊಡಗಿದ್ದನ್ನೂ ಜೋಶಿಯವರು ಗುರುತಿಸಿ ಕೊಂಡಿರಬೇಕು.

ಹೀಗೆ ತಾನು ತಾಳಮದ್ದಲೆಯ ಕ್ಷೇತ್ರವನ್ನು ಪ್ರವೇಶ ಮಾಡಿದಲ್ಲಿಂದ ತೊಡಗಿ ಇಲ್ಲಿಯವರೆಗೆ ಅನೇಕ ಪ್ರಭಾವಗಳಿಗೆ ತನ್ನ ಅರ್ಥಗಾರಿಕೆಯನ್ನು ಒಡ್ಡಿಕೊಳ್ಳುತ್ತ, ಅವುಗಳಿಗೆ

ಪ್ರತಿಸ್ಪಂದಿಸುತ್ತ ಬಂದವರು ಜೋಶಿ,

ಒಬ್ಬ ಅರ್ಥಧಾರಿ ಅಭಿವ್ಯಕ್ತಿಯ ವಿಧಾನ ಹಾಗೂ ಸ್ವರೂಪ ಯಶಸ್ವಿಯೇ ಅಲ್ಲವೇ ಅಂತ ಹೇಗೆ ನಿರ್ಧರಿಸುವುದು? ಸುಮಾರು ಐದು ದಶಕ ನಿರಂತರವಾಗಿ ಒಂದು ರಂಗಭೂಮಿಯಲ್ಲಿ ಸಕ್ರಿಯನಾಗಿರುತ್ತ ಬೇಡಿಕೆಯನ್ನೂ ಅದೇ ಪ್ರಮಾಣದಲ್ಲಿ ಉಳಿಸಿಕೊಂಡು ಬಂದಿರುವುದು ಮತ್ತು ತಾಳಮದ್ದಲೆಗೆ ಸಂಬಂಧಿಸಿದ ಯಾವುದೇ ಅಧ್ಯಯನವೂ ಜೋಶಿಯವರ ಅರ್ಥಗಾರಿಕೆಯನ್ನು ಲಕ್ಷಿಸಿಯೇ ಮುಂದುವರಿಯ ಬೇಕಾಗಿರುವುದು ಅವರ ಯಶಸ್ಸನ್ನೇ ಸೂಚಿಸುತ್ತದೆಂದು ನಾನು ಭಾವಿಸುತ್ತೇನೆ. ತಾಳಮದ್ದಲೆ ರಂಗಭೂಮಿಯ ಐತಿಹಾಸಿಕ ಅಗತ್ಯಗಳು ಜೋಶಿಯವರ ಅರ್ಥಗಾರಿಕೆಗೆ ಒಂದು ಅನನ್ಯತೆಯನ್ನು ಕಲ್ಪಿಸಿದ್ದು ಅವರದೇ ಶೈಲಿಯೊಂದರ ಉಗಮಕ್ಕೆ ಕಾರಣ ವಾಗಿರುವುದು ಗಮನಾರ್ಹ.

◆ ◆ ◆

ಪ್ರಭಾಕರ ಜೋಶಿ – ನಮ್ಮ ನಡುವಿನ ಧೀಮಂತ

ಪ್ರೊ. ಎಂ.ಎ. ಹೆಗಡೆ

ಡಾ. ಎಂ. ಪ್ರಭಾಕರ ಜೋಶಿಯವರಿಗೂ ನನಗೂ ಸುಮಾರು ಐವತ್ತು ವರ್ಷಗಳ ಸ್ನೇಹ. ಕಾಲೇಜಿನ ದಿನಗಳಲ್ಲಿ ಅಂಕುರಿಸಿ, ವಿಶ್ವವಿದ್ಯಾಲಯದಲ್ಲಿ ಪಲ್ಲವಿಸಿ ವರ್ಧಿಸುತ್ತ ಹೆಮ್ಮರವಾಗಿ ಶಾಖೋಪ ಶಾಖೆಗಳಲ್ಲಿ ವಿಸ್ತಾರಗೊಳ್ಳುತ್ತ ನಡೆದಿರುವುದು ನನಗೊಂದು ಹೆಮ್ಮೆ. ಅಂಥವರೊಬ್ಬರ ಸ್ನೇಹ ದೊರಕುವುದು ಪುಣ್ಯವಿಶೇಷ. ಪ್ರಥಮ ನೋಟದಲ್ಲಿಯೇ ಅವರಿಂದ ಆಕರ್ಷಿತನಾಗಿದ್ದೆ. ಅಂಥ ಆಕರ್ಷಣೆಗಳು ಶಾಶ್ವತವಾಗಿರುವುದು ಅಪರೂಪ. ದಿನಗಳೆದಂತೆ ಹಳಸಲಾರಂಭಿಸುತ್ತದೆ. ಒಂದು ದಿನ ಕೊಳೆತೋ ಕಳಿತೋ ಹೋಗ ಬಹುದು. ಹಾಗಾಗದೆ ಉಳಿದುಕೊಂಡ ಸ್ನೇಹಕ್ಕೆ ಸ್ನೇಹವೆಂಬ ಹೆಸರು ಸಲ್ಲುತ್ತದೆ. ಅದಿಲ್ಲವಾದರೆ ಅದು ಬರಿಯ ಜಿಡ್ಡು; ತೊಳೆದರೆ ಹೊರಟುಹೋಗುತ್ತದೆ. ನನ್ನ ಮತ್ತು ಜೋಶಿಯವರ ಸ್ನೇಹ ಸುದೀರ್ಘ ಕಾಲದಿಂದ ತಾಳಿಕೆ ಬಂದು ಮಾರ್ಜಕಗಳ ಹಿಡಿತಕ್ಕೆ ಸಿಗಲಾರದಂಥದು. ನನಗಂತೂ ಅವರ ಸೆಳೆತದಿಂದ ತಪ್ಪಿಸಿಕೊಳ್ಳುವ ಬಯಕೆಯಿಲ್ಲ. ಪ್ರಿಯಬಂಧನವು ವಿಮೋಚನೆಯನ್ನು ಸ್ವಾಗತಿಸುವುದಿಲ್ಲ.

ಯಕ್ಷಗಾನ ನಮ್ಮನ್ನು ಬೆಸೆದ ಕೊಂಡಿಗಳಲ್ಲಿ ಪ್ರಮುಖವಾದುದು. ನಮ್ಮ ಪರಿಚಯದ ಆರಂಭವು ಅಲ್ಲಿಯೇ, ನಾನೂ ಅರ್ಥಗಾರಿಕೆಯಲ್ಲಿ ತೊಡಗಿಕೊಂಡವನು. ನಾನು ಏಣಿಯ ಬುಡದಲ್ಲಿದ್ದರೆ ಅವರು ತುದಿಯಲ್ಲಿದ್ದಾರೆಂಬುದು ಬೇರೆ ಮಾತು. ನಾನು

ಅವರ ಜೊತೆಯಲ್ಲಿ ಅರ್ಥ ಹೇಳಿದ್ದೇನೆ ಎಂಬುದನ್ನು ಬಿಟ್ಟರೆ ಅವರ ಸಮದಂಡಿಯಲ್ಲ. ಅದು ನನ್ನ ಅಳವಿಗೆ ಮೀರಿದ್ದು. ಎಳೆಯ ವಯಸ್ಸಿನಲ್ಲಿಯೇ ಶೇಣಿ, ಸಾಮಗರಂಥ ಘಟಾನುಘಟಿಗಳೊಂದಿಗೆ ಗುರುತಿಸಲ್ಪಟ್ಟವರು ಅವರು. ಅವರೊಡನಿದ್ದೂ ಅವರಂತಾಗದೆ ತನ್ನದೇ ದಾರಿಯನ್ನು ಕಂಡುಕೊಂಡ ಧೀಮಂತ, ಅವರ ಬಲದೌರ್ಬಲ್ಯಗಳನ್ನು ವಿಶಿಷ್ಟ ವಿಚಿಕಿತ್ಸಕ ಬುದ್ಧಿಯಿಂದ ಅಳೆದು ತಿಳಿಯಬಲ್ಲ ಮೇಧಾವಿ. ಪ್ರಸಿದ್ಧ ಅರ್ಥದಾರಿ ಗಳಂತೆ ತಮ್ಮದೇ ಲೋಕದಲ್ಲಿ ವಿಹರಿಸುತ್ತ ಸಮಕಾಲೀನ ಪ್ರಪಂಚದ ಸವಾಲುಗಳ ಪರಿಚಯವೇ ಇಲ್ಲದವರಾಗಲಿಲ್ಲ. ಪುರಾಣದ ಆಖ್ಯಾನಗಳಿಗೆ ಸಮಕಾಲೀನರಿಗೆ ಸಮ್ಮತವಾಗುವ ರೀತಿಯಲ್ಲಿ ವ್ಯಾಖ್ಯಾನ ಮಾಡುವ ಕೌಶಲವನ್ನು ರೂಢಿಸಿಕೊಂಡರು. ಅದು ಅವರ ಅರ್ಥಗಾರಿಕೆಗೆ ಹೊಸ ಆಯಾಮವನ್ನೊದಗಿತು. ಅವರ ವ್ಯಾಖ್ಯಾನವನ್ನು ಆಲಿಸಲು ಶೋತೃಗಳು ಕುತೂಹಲದಿಂದ ಕಾದಿರುವಂತೆ ಮಾಡಿದರು. ಕೆಲವೇ ಸಮಯದಲ್ಲಿ ಶ್ರೇಷ್ಠ ಅರ್ಥಧಾರಿಗಳ ವರ್ಗಕ್ಕೆ ಸೇರಿದರು.

ಅರ್ಥಗಾರಿಕೆಗೆ ಅವರ ಪ್ರತಿಭೆ ಸೀಮಿತವಾಗಲಿಲ್ಲ. ಯಕ್ಷಗಾನದ ಸ್ವರೂಪದ ಬಗೆಗೆ ತುಂಬ ಗಾಢವಾಗಿ ಚಿಂತಿಸಿದವರ ಮಧ್ಯೆ ಜೋಶಿ ಪ್ರಮುಖವಾಗಿ ಕಾಣಿಸಿಕೊಳ್ಳು ತ್ತಾರೆ. ಡಾ. ಶಿವರಾಮ ಕಾರಂತರ ನಂತರ ಯಕ್ಷಗಾನದ ಚಿಂತಕರಲ್ಲಿ ಜೋಶಿ ಅಗ್ರಸ್ಥಾನದಲ್ಲಿದ್ದಾರೆ. ಕಲೆಯ ಅಂಗೋಪಾಂಗಗಳನ್ನು ಕುರಿತು ಅವರು ಹಲವಾರು ಪ್ರಬಂಧಗಳನ್ನು ಮಂಡಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಅವರ ಯಕ್ಷಗಾನ ಪದಕೋಶವಂತೂ ಕಲೆಯ ಕುರಿತು ಅಧ್ಯಯನದಲ್ಲಿ ತೊಡಗಿರುವವರಿಗೆಲ್ಲ ಅನಿವಾರ್ಯವಾದ ಆಕರಗ್ರಂಥವಾಗಿದೆ.

ಜೋಶಿಯವರದು ವ್ಯಾಪಕವಾದ ಓದು. ಅಂತೆಯೇ ಅವರಿಗೆ ಸಮಕಾಲೀನ ವಿಚಾರಧಾರೆಗಳ ಪರಿಚಯವಿದೆ. ವರ್ತಮಾನಕಾಲದ ವಿದ್ಯಮಾನಗಳನ್ನು ಚೆನ್ನಾಗಿ ವಿಶ್ಲೇಷಿಸಬಲ್ಲವರು. ಜೊತೆಗೆ ಬಹುತೇಕವಾಗಿ ಭಾರತದ ರಂಗಭೂಮಿಯ ಅಧ್ಯಯನವಿದೆ. ಕಥಕ್ಕಳಿ, ತೆರಕ್ಕೂತು, ಭರತನಾಟ್ಯ, ಆಂಧ್ರದ ಯಕ್ಷಗಾನ, ಮಣಿಪುರಿ, ಒಡಿಸ್ಸಿ ಇತ್ಯಾದಿ ಕಲೆಗಳ ಕುರಿತು ಚೆನ್ನಾಗಿ ತಿಳಿದಿದ್ದಾರೆ. ಅವರೆಂದರೆ ಮಿನಿ ವಿಶ್ವಕೋಶವಿದ್ದಂತೆ. ಹಾಗಾಗಿ ಅವರೊಂದಿಗೆ ಯಾವ ವಿಷಯವನ್ನು ಕುರಿತಾದರೂ ಮಾತನಾಡಬಹುದು. ಹಾಗಾಗಿ ಅವರ ಒಡನಾಟವೆಂದರೆ ಜ್ಞಾನಕೋಶದೊಂದಿಗೆ ಸಂಚಾರವೆನಿಸುತ್ತದೆ.

ವಿಶ್ವಕೋಶ, ಜ್ಞಾನಕೋಶಗಳ ಜೊತೆಗೆ ಬಹಳಕಾಲವನ್ನು ಕಳೆಯಲಾಗಲಿಕ್ಕಿಲ್ಲ. ಯಾಕೆಂದರೆ ಅಲ್ಲಿ ಗಾಂಭೀರ್ಯ ಹೆಚ್ಚು. ಬೇಸರವಾಗುವ ಸಾಧ್ಯತೆಯಿದೆ. ಆದರೆ ಜೋಶಿಯವರ ಜೊತೆಯಲ್ಲಿದ್ದರೆ ಅದಕ್ಕೆ ಅವಕಾಶವಿಲ್ಲ. ಧಾರಾಳವಾಗಿ ಹಾಸ್ಯದೌತಣ ವಿರುತ್ತದೆ. ಅಭಿನಯವೂ ಸೇರಿ ಮತ್ತಷ್ಟು ರಂಜಕವಾಗುತ್ತದೆ. ಕುತೂಹಲವನ್ನು ಹುಟ್ಟಿಸುವ ಮಾತುಕತೆಗಳ ಜೊತೆಗೆ ಅವರ ಅದಮ್ಯ ಕುತೂಹಲವನ್ನೂ ಕಾಣಬಹುದು.

ಜೋಶಿಯವರು ಸಹೃದಯರು. ಗುಣವನ್ನು ಗೌರವಿಸುವುದು ಹುಟ್ಟುಗುಣ. ಎಳೆಯರನ್ನು ಪ್ರೋತ್ಸಾಹಿಸುವಲ್ಲಿ ಸದಾ ಮುಂದು. ಅಂತೆಯೆ ತಾಳಮದ್ದಳೆಗಳಲ್ಲಿ

ಅವರ ಜೊತೆಯಲ್ಲಿ ಯಾರೂ ಅರ್ಥ ಹೇಳಬಹುದು. ಎದುರಾಳಿಯನ್ನು ಧೃತಿಗೆಡಿಸುವ, ತೇಜೋವಧೆಯನ್ನು ಮಾಡುವ ಪ್ರವೃತ್ತಿಯಿಂದ ದೂರ. ಎದುರಿನವರನ್ನು ಪ್ರೋತ್ಸಾಹಿಸಿ ಅವರಲ್ಲಿರುವ ಒಳಿತನ್ನು ಹೊರತರಲು ಸಹಕರಿಸುತ್ತಾರೆ. ಅವರ ಸಹೃದಯತೆಯನ್ನು ದುರುಪಯೋಗಪಡಿಸಿಕೊಳ್ಳಲು ಹೊರಟವರಿಗೆ ಶಾಸ್ತಿಯನ್ನು ಮಾಡಲೂ ಅವರು ಸಿದ್ಧ. ತಾವಾಗಿ ಮೈಮೇಲೆ ಬೀಳುವುದಿಲ್ಲ. ತಾವಾಗಿ ಬಂದು ಬಿದ್ದವರನ್ನು ಕೊಡಹಿ ಹಾಕುತ್ತಾರೆ. ಅದು ಅನಿವಾರ್ಯ ಕೂಡ.

ಜೋಶಿಯವರಲ್ಲಿ ಕವಿಹೃದಯದೊಂದಿಗೆ ದಾರ್ಶನಿಕನ ಬೌದ್ಧಿಕತೆಯೂ ಸೇರಿರುವುದು ಉಲ್ಲೇಖನೀಯ. ಯಕ್ಷಗಾನದಂಥ ಕಲೆಯ ರಸವನ್ನು ಸವಿಯಬಲ್ಲವ ರಾಗಿದ್ದು ಗಂಭೀರವಾದ ತತ್ವಚಿಂತನೆಯಲ್ಲಿ ತೊಡಗಿಕೊಂಡವರು ಅವರು. ಅವರು ಓದಿದ್ದು ವಾಣಿಜ್ಯಶಾಸ್ತ್ರವನ್ನು; ವಿದ್ಯಾರ್ಥಿಗಳಿಗೆ ಅದನ್ನೇ ಪಾಠ ಮಾಡಿದವರು. ಆದರೆ ಅವರ ಪ್ರಮುಖವಾದ ಆಸಕ್ತಿ ಭಾರತೀಯ ತತ್ವಶಾಸ್ತ್ರದಲ್ಲಿ, ಈ ಶಾಸ್ತ್ರದ ಮೂಲಗ್ರಂಥಗಳೆಲ್ಲ ಸಂಸ್ಕೃತದಲ್ಲಿವೆ. ಆದರೆ ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಅವುಗಳ ಚಿಂತನೆಗಳನ್ನು ತಿಳಿಯಲು ಅವಕಾಶವಿದೆ. ಆದರೆ ಅದಕ್ಕೆ ತುಂಬ ತಾಳ್ಮೆಯ ಅಧ್ಯಯನ ಬೇಕಾಗುತ್ತದೆ. ಜೋಶಿ ಅದನ್ನು ಸಾಧಿಸಿದ್ದಾರೆ.

ನಾನು ವಿದ್ಯಾರ್ಥಿಗಳ ಸಲುವಾಗಿ 'ಬ್ರಹ್ಮಸೂತ್ರ ಚತುಃಸೂತ್ರೀ' ಎಂಬ ಪುಸ್ತಕ ಬರೆದೆ. ಬ್ರಹ್ಮಸೂತ್ರಗಳ ಆರಂಭದ ನಾಲ್ಕು ಸೂತ್ರಗಳಿಗೆ ಶಂಕರಾಚಾರ್ಯರು ಬರೆದ ಭಾಷ್ಯದ ಅನುವಾದ ಮತ್ತು ವಿಸ್ತತ ಟಿಪ್ಪಣಿಗಳಿಂದ ಕೂಡಿದ ಗ್ರಂಥ ಅದು. ಸಂಸ್ಕೃತವನ್ನು ಪ್ರಧಾನವಿಷಯವನ್ನಾಗಿ ಆಯ್ದುಕೊಂಡವರಿಗೆ ಅದು ಪಠ್ಯವಾಗಿತ್ತು. ಅದನ್ನು ಸಾರ್ವಜನಿಕರ ಎದುರು ನಾನಂತೂ ತಂದವನಲ್ಲ. ಜೋಶಿಯವರಿಗೆ ಆ ಪುಸ್ತಕ ಎಲ್ಲಿ ಸಿಕ್ಕಿತೊ ತಿಳಿಯದು. ಒಂದುದಿನ ನಾನು ಸಿಕ್ಕಾಗ ಅದರ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜೊತೆಗೆ ನಾನು ಸುಮ್ಮನಿರುವುದಕ್ಕೆ ಆಕ್ಷೇಪಿಸಿದರು. ಅವರ ಒತ್ತಾಯಕ್ಕೆ ಮಣಿದು ಬರೆಯಲು ಸಿದ್ಧನಾದೆ. ನಾವಿಬ್ಬರೂ ಸೇರಿ ತತ್ವಾರ್ಥಪದಕೋಶವನ್ನು ಬರೆಯುವ ಯೋಜನೆ ಸಿದ್ಧವಾಯಿತು. ಪದಗಳನ್ನು ಸಂಗ್ರಹಿಸಿಕೊಡುವ ಕೆಲಸ ಅವರದು;ವಿವರಿಸುವ ಕೆಲಸ ನನ್ನದು ಎಂದಾಯಿತು. ನಾನು ಬರೆದು ಅವರಿಗೆ ಅಂಚೆಯಲ್ಲಿ ಕಳಿಸುವುದು ಅವರು ಅದನ್ನು ಓದಿ ಕುಂದು ಕೊರತೆಗಳನ್ನು ಸೂಚಿಸುವುದು ಹೀಗೆ ಕೆಲಸ ಸಾಗುತ್ತಿತ್ತು. ಅಷ್ಟುಹೊತ್ತಿಗೆ ಉದಯವಾಣಿಯಲ್ಲಿ ಭಾರತೀಯ ದರ್ಶನಗಳ ಕುರಿತು ಲೇಖನಮಾಲೆಯೊಂದನ್ನು ಬರೆಯುವ ಪ್ರಸ್ತಾಪ ಬಂತು. ಆಗ ಈಶ್ವರಯ್ಯನವರು ಸಂಪಾದಕರಾಗಿದ್ದರು. ಅವರು ಕೇಳಿದ್ದಾರೆ. ಬರೆಯೋಣವೆ? ಎಂದು ನನ್ನನ್ನು ಕೇಳಿದಾಗ ನಾನು ಒಪ್ಪಿಗೆ ಸೂಚಿಸಿದೆ. ಆ ಲೇಖನ ಮಾಲೆಯು ಸಾಕಷ್ಟು ಪ್ರಶಂಸೆಯನ್ನು ಪಡೆಯಿತು. ಅನಂತರ ಅದು ದಿಗಂತ ಪ್ರಕಾಶನದಿಂದ ಪುಸ್ತಕರೂಪದಲ್ಲಿ ಪ್ರಕಟವಾಯಿತು. ಅಲ್ಲಿಯೂ ಮುಖ್ಯಪಾತ್ರ ಜೋಶಿಯವರದೇ. ನಂತರ ಭಾರತೀಯ ತತ್ವಶಾಸ್ತ್ರ ಪ್ರವೇಶ ಎಂಬ ಹೆಸರಿನಲ್ಲಿ ಹೆಗ್ಗೋಡಿನ ಅಕ್ಷರ ಪ್ರಕಾಶನದಿಂದ ಎರಡು ಮುದ್ರಣಗಳನ್ನು ಕಂಡಿದೆ.

ಅದು ಪರಿಷ್ಕೃತ ಆವೃತ್ತಿ.

ಅನಂತರ ಅಕ್ಷರಚಿಂತನಮಾಲೆಯ ಸಲುವಾಗಿ ಕುಮಾರಿಲ ಭಟ್ಟರ ಮೇಲೆ ಕೃತಿಯೊಂದನ್ನು ರಚಿಸುವ ಪ್ರಸ್ತಾಪ ಬಂತು. ಅದು ಬಂದದ್ದು ಜೋಶಿಯವರಲ್ಲಿ.

ಅವರು ನನ್ನನ್ನು ಸಂಪರ್ಕಿಸಿದರು. ಇಬ್ಬರೂ ಸೇರಿ ಆ ಗ್ರಂಥವನ್ನು ರಚಿಸಿದೆವು. ಮೂಲಗ್ರಂಥದ ಒಂದು ಅಧ್ಯಾಯದ ಅನುವಾದ, ಟಿಪ್ಪಣಿ, ಪೀಠಿಕೆ ಮತ್ತು ಸೂಕ್ತಿಗಳನ್ನು ಒಳಗೊಂಡ ಪುಸ್ತಕ ಅದು. ಕನ್ನಡದ ಶ್ರೇಷ್ಠ ವಿಮರ್ಶಕರಲ್ಲೊಬ್ಬರಾದ ಕೀರ್ತಿನಾಥ ಕುರ್ತಕೋಟಿಯವರ ಹಿನ್ನುಡಿಯಿಂದ ಅಲಂಕೃತವಾದ ಪುಸ್ತಕ ಅದು. ನನಗೆ ಆತ್ಮವಿಶ್ವಾಸ ವನ್ನು ತಂದಿತು. ನಾನೂ ಬರೆಯಬಲ್ಲೆನೆನಿಸಿತು. ಅನಂತರ ಅನೇಕ ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದೆ. ಸ್ವತಂತ್ರ ಕೃತಿಗಳನ್ನು ರಚಿಸಿದೆ. ಅವು ಸಾಕಷ್ಟು ಮನ್ನಣೆಯನ್ನೂ ಗಳಿಸಿವೆ. ಜೋಶಿಯವರು ನನ್ನನ್ನು ಬರವಣಿಗೆಗೆ ಎಳೆಯದಿದ್ದಿದ್ದರೆ ಬಹುಶಃ ನಾನು ಈ ಕ್ಷೇತ್ರಕ್ಕಿಳಿಯುತ್ತಿರಲಿಲ್ಲ. ನನ್ನಲ್ಲಿರುವ ಶಕ್ತಿಯು ಲೋಕಕ್ಕೆ ತಿಳಿಯುತ್ತಿರಲಿಲ್ಲ. ಆಂಜನೇಯನಂತೆ ಮುದುಡಿ ಕೂಡುತ್ತಿದ್ದೆನೆನಿಸುತ್ತದೆ. ಅದನ್ನು ನೆನೆದಾಗಲೆಲ್ಲ ಜೋಶಿಯವರ ಬಗೆಗೆ ಕೃತಜ್ಞತಾಭಾವ ಮೂಡುತ್ತದೆ. ನನ್ನಂತೆ ಇನ್ನನೇಕರಿಗೆ ಅವರವರ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಿದವರು ಜೋಶಿ. ಅದು ಅವರ ದೊಡ್ಡಗುಣ.

ಅವರ ಸಾಧನೆ ದೊಡ್ಡದು. ಕ್ಷಣಕಾಲವೂ ಸುಮ್ಮನೆ ಕುಳಿತಿರದೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿರುವುದು ಅವರ ಸ್ವಭಾವ. ತಮಗೆ ಮಾಡಿದ ಸಣ್ಣ ಉಪಕಾರವನ್ನೂ ಮರೆಯುವವವರು ಅವರಲ್ಲ. ಸಂಬಂಧಗಳನ್ನು ಕಾಯ್ದುಕೊಳ್ಳುವುದನ್ನು ಅವರಿಂದ ಕಲಿಯಬೇಕು. ಮನೆಗೆ ಬಂದು ಆತಿಥ್ಯವನ್ನು ಸ್ವೀಕರಿಸಿದರೆ ಊರಿಗೆ ಹೋದ ಕೂಡಲೆ ಕಾರ್ಡ್ ಬರೆದು ಕೃತಜ್ಞತೆ ಸೂಚಿಸುವ ಅವರ ಸ್ವಭಾವ ಅಚ್ಚರಿ ಹುಟ್ಟಿಸುತ್ತದೆ. ಪತ್ರ ಬರೆಯುವುದಕ್ಕೆ ಸ್ವಲ್ಪವೂ ಬೇಸರವಿಲ್ಲ. ಅಂತೆಯೇ ಲೇಖನವನ್ನು ಕೇಳಿದರೆ ಒಂದೆರಡು ತಾಸುಗಳಲ್ಲಿ ಸಿದ್ಧ. ಅವರ ಬರವಣಿಗೆಯ ವೇಗಕ್ಕೆ ಬೆರಗಾಗಿದ್ದೇನೆ. ಅಷ್ಟೇ ಹದ. ಎಷ್ಟು ಬೇಕೊ ಅಷ್ಟು ಆಕರ್ಷಕ ಬರವಣಿಗೆ, ಅವರ ಬರಹವನ್ನು ಓದಲು ಅಭ್ಯಾಸಬೇಕು ಅಷ್ಟೇ.

ಜೋಶಿಯವರ ಸಾಧನೆಯನ್ನು ಗುರುತಿಸಿ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯು ಪಾರ್ತಿಸುಬ್ಬ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಅದಕ್ಕೆ ಅತ್ಯಂತ ಅರ್ಹವ್ಯಕ್ತಿ ಅವರು. ಅವರಿಗೆ ಇನ್ನಿತರ ಅನೇಕ ಪ್ರಶಸ್ತಿಗಳೂ ಸಮ್ಮಾನಗಳೂ ನಡೆದಿವೆ. ಅದು ಜನಾದರಣೆಯ ಪ್ರತೀಕ, ಮೈಸೂರಿನಲ್ಲಿ ಅವರನ್ನು ಗೌರವಿಸಿದ್ದು ಹಿರಿಮೆಗೆ ಸಾಕ್ಷಿ. ಅವರ ಜನಪ್ರಿಯತೆಗೆ ಪ್ರದೇಶದ ಹಂಗಿಲ್ಲ. ಯಕ್ಷಗಾನ ಪ್ರಪಂಚಕ್ಕೆ ಅವರೊಂದು ಅಮೂಲ್ಯ ಆಸ್ತಿ. ಅವರಿಗೆ ಆಯುಸ್ಸು ಆರೋಗ್ಯಗಳು ಚಿರಕಾಲ ಇರಲೆಂದು ಹಾರೈಕೆ.

◆ ◆ ◆

ಯಕ್ಷಗಾನಕ್ಕೊಬ್ಬರೇ ಜೋಶಿ

ಅಭಿನಂದನಾ ಭಾಷಣ

ಎನ್. ಅಶೋಕ ಭಟ್, ಉಜಿರ

ಡಾ. ಎಂ. ಪ್ರಭಾಕರ ಜೋಶಿ ಅನ್ನುವಲ್ಲಿ 'ಎಂ' ಅನ್ನುವುದು ಕಾರ್ಕಳದ ಮಾಳ, ಮಂಗಳೂರು ಮತ್ತು ಮೈಸೂರನ್ನು ಧ್ವನಿಸುತ್ತದೆ. ಜೋಶಿಯವರ ಕೀರ್ತಿ ಧಾವಲ್ಯ ಈ ಮೂರು ಊರಿಗಷ್ಟೇ ಸೀಮಿತವಾದುದಲ್ಲ. ಅದು ಇಡೀ ಕರ್ನಾಟಕವನ್ನು ವ್ಯಾಪಿಸಿದೆ. ಜೋಶಿಯವರು ತುಂಬಾ ದೊಡ್ಡ ಕೆಲಸವನ್ನು ಮಾಡಿದವರು. ಅರ್ಥ, ಬರಹ, ಭಾಷಣ, ಸಹಾಯ, ವಿಚಾರ, ಸಂಪನ್ಮೂಲ- ಇವುಗಳೊಟ್ಟಿಗೆ ಸರಸ ವ್ಯಕ್ತಿತ್ವಗಳೆಲ್ಲಾ ಸೇರಿ ಯಕ್ಷಗಾನಕ್ಕೊಬ್ಬನೇ ಜೋಶಿ ಎಂಬುದು ವರ್ಣನೆಯಲ್ಲ. ನಿಜವಾಗಲೂ ಕೇಳಿದಾಗಲೆಲ್ಲಾ ವಸ್ತು, ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ. ಆಹ್ವಾನ ಪತ್ರಿಕೆಯ ವಿನ್ಯಾಸದಿಂದ ಹಿಡಿದು ಪುರಾಣ ಮಾಹಿತಿ, ಶಾಸ್ತ್ರವಿಷಯದ ವರೆಗೆ ಯಾವಾಗಲೂ ಅವರನ್ನು ಕೇಳಿದರೆ ಉತ್ತರ ರೆಡಿ. ಇತರರಿಗೆ ಸಹಾಯ ಮಾಡುವಲ್ಲಿ ಡಾ. ಜೋಶಿ ದಧೀಚಿ ಪ್ರವೃತ್ತಿಯವರು. ಕೇಳಿದ್ದನ್ನು ಇಲ್ಲ ಅನ್ನುವುದೇ ಅವರ ಜಾಯಮಾನದಲ್ಲಿ ಇಲ್ಲ.

ಜೋಶಿಯವರು ಬೆಸೆಂಟ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಗಳಿಸಿದ ಜನಪ್ರಿಯತೆ, ಸಹವರ್ತಿಗಳ ಪ್ರೀತಿ ಎಲ್ಲರಿಗೆ ಸಿಕ್ಕುವಂಥಾದ್ದಲ್ಲ. ಅವರ ವಿದ್ಯಾರ್ಥಿಗಳು ಅವರ ಪಾಠ ಪ್ರವಚನ ಕಾಳಜಿಗಳನ್ನು ನೆನಪಿಸುವ ರೀತಿಯೇ ಒಂದು ಸಂಶೋಧಕ, ಸಂಸ್ಕೃತಿ ಚಿಂತಕ, ಅರ್ಥಧಾರಿ, ಸಂಘಟಕ ಡಾ. ಏ. ಪ್ರಭಾಕರ ಜೋಶಿ ಅಭಿನಂದನಾ ಸಮಿತಿ, ಮೈಸೂರು ಜೋಶಿ ವಾಗರ್ಥ ಗೌರವ ಸಂವಾದ, ವಿಚಾರ ಸಂಕಿರಣ, ತಾಳಮದ್ದಳೆ, ಬಯಲಾಟ ಪ್ರದರ್ಶನ

ಕೃತಜ್ಞತಾಗ್ರಂಥವಾದೀತು!

ಜೋಶಿಯವರು ಅರ್ಥಗಾರಿಕೆಯಲ್ಲಿ ಮೂರು ತಲೆಮಾರುಗಳ ಕೊಂಡಿಯಾಗಿದ್ದಾರೆ. ಶೇಣಿಯವರ ಸಮಗ್ರತೆ, ಸಾಮಗರ ಶೈಲಿ, ತೆಕ್ಕಟ್ಟೆಯವರ ಜ್ಞಾನ, ಪದರೀತಿ, ದೇರಾಜೆಯವರ ಮೊನಚು, ಪೆರ್ಲ ಪಂಡಿತರ ಗಂಭಿರ ವಿಧಾನ, ಮಾರೂರು ಭಂಡಾರಿಯವರ ನಿರ್ವಹಣಾ ಕ್ರಮ, ರಾಮದಾಸ ಸಾಮಗರ ಭಾವುಕತೆಗಳೆಲ್ಲಾ ಇವರಲ್ಲಿ ಮುಪ್ಪುರಿಗೊಂಡಿವೆ. ಆ ಹಿರಿಯ ತಲೆಮಾರಿನಿಂದ ನಮ್ಮ ತಲೆಮಾರಿನ ವರೆಗೆ ಎಲ್ಲರೊಂದಿಗೆ ಎರಕವಾಗಿ ಅರ್ಥ ಹೇಳುವ ಅವರ ಪರಿ ಅನ್ಯಾದೃಶವಾದುದು. ಎಲ್ಲಾ ಕಲಾವಿದರ ಮರ್ಮ, ವೈಶಿಷ್ಟ್ಯವರಿತ ಜೋಶಿ ಒಬ್ಬ ಪರಿಪಕ್ವ ಕಲಾವಿದರೆನಿಸಿಕೊಂಡಿದ್ದಾರೆ.

ಜೋಶಿ ಸದಾ ವಿನೋದಶೀಲ, ಸಹಜಸ್ಪಂದನ ಅವರ ಉಸಿರು. ಯಾರ ಮನೆಗೇ ಹೋಗಲಿ ಆ ಮನೆಯವರಿಗೆಲ್ಲಾ ಅವರು ಆಪ್ತರಾಗಿಬಿಡುತ್ತಾರೆ. ಅದಕ್ಕೆ ಕಾರಣ ಅವರ ವಿನೋದಶೀಲ ಪ್ರವೃತ್ತಿ ಮತ್ತು ಎಳೆಯ ಮಗುವಿನಂತಹ ನಿರ್ಮಲ ಮನಸ್ಸು. ಅಲ್ಲಿ ಅವರು ಯಾವುದೇ ಹಮ್ಮು - ಬಿಮ್ಮುಗಳಿಗೆ ಒಳಗಾಗುವುದಿಲ್ಲ. ಅದೇ ಅವರ ಜನಪ್ರಿಯತೆಯ ಗುಟ್ಟು.

ಜೋಶಿ ಅರ್ಥಗಾರಿಕೆಯಲ್ಲಿ ಅಕಾಡೆಮಿಕ್ ಚಿಂತನೆ, ಪಾತ್ರಚಿತ್ರಣ, ನಿರ್ವಹಣೆ, ಭಾವ, ತರ್ಕ- ಎಲ್ಲಾ ಇವೆ. ಅದು ವಿಮರ್ಶೆ, ಚಿತ್ರ, ಚಿತ್ರಣ ಎಲ್ಲವೂ ಆಗಬಲ್ಲುದು. ಜೋಶಿ ಅವರಿಗೆ ಯಕ್ಷಗಾನದ ಎಲ್ಲಾ ಪ್ರದೇಶಗಳ ಆಳವಾದ ಪರಿಚಯವಿದೆ. ಅವರಿಗೆ ತೆಂಕು, ಬಡಗು, ಉತ್ತರ ಕನ್ನಡ ಎಂಬ ಭೇದಭಾವ ಇಲ್ಲ. ಅವೆಲ್ಲವೂ ಸೇರಿ ಯಕ್ಷಗಾನ ಒಂದು ಕಲಾ ಕುಟುಂಬವೆಂದು ಭಾವಿಸುತ್ತಾರೆ. ಒಟ್ಟಿನಲ್ಲಿ ಅವರೊಬ್ಬ ಸಮಗ್ರ ಕಲಾಚಿಂತಕರು.

ಸದಾ ವಿನೋದಶೀಲರಾಗಿದ್ದು, ಹಿರಿಯ ಕಿರಿಯರೊಳಗಿನ ಅಂತರವನ್ನು ಇಲ್ಲವಾಗಿಸುವ ಜೋಶಣ್ಣ ಸಾಂಸ್ಕೃತಿಕ ಕಾರ್ಯಗಳಲ್ಲೂ, ರಂಗದಮೇಲೂ ಎಲ್ಲರನ್ನೂ ಒಳಗೊಳಿಸುವ, Involve ಮಾಡುವ ಪ್ರೇರಕ ಶಕ್ತಿಯಾಗಿದ್ದಾರೆ, ವಿಸ್ತಾರವಾದ ಓದು, ಅಧ್ಯಯನಗಳ ಪರಿಪಾಕ ಅವರು. ಬಹುಶ್ರುತ್ವ, ಸರ್ವಸಮತೆ ಮತ್ತು ಗೆಳೆತನಗಳ ವಿಶಿಷ್ಟ ಮಿಶ್ರಣ ಅವರು. ಯಕ್ಷಗಾನದ ಬಗೆಗಿನ ಅವರ ಬರಹಗಳ ವ್ಯಾಪ್ತಿ, ವಿಸ್ತಾರ, ವಸ್ತು, ವಿಷಯ ನಿಜಕ್ಕೂ ವಿಸ್ಮಯಾವಹವಾದುದು. ಅವರ ಕುಟುಂಬ ವಾತ್ಯಲ್ಯ ಬಂಧುಪ್ರೇಮ, ಗೆಳೆಯರ ಬಗೆಗಿನ ಕಾಳಜಿ ಇವೆಲ್ಲದರ ಬಗ್ಗೆ ನಾವು ನಿತ್ಯ ಕೇಳುತ್ತಾ ನೋಡುತ್ತಾ ಇರುತ್ತೇವೆ.

(ಸಂಗ್ರಹ)

◆ ◆ ◆

ಸಾಂಸ್ಕೃತಿಕ ರಾಯಭಾರಿ

ಡಾ. ಎಂ. ಪ್ರಭಾಕರ ಜೋಶಿ

ವಿದ್ವಾನ್ ಗ.ನಾ. ಭಟ್ಟ

“ಬಹುಜ್ಜತಾ ವ್ಯುತ್ಪತ್ತಿಃ” “ಅನೇಕ ವಿಷಯಗಳನ್ನು ತಿಳಿದಿರುವುದೇ ವ್ಯುತ್ಪತಿಯೆಂದು ಕಾವ್ಯಮೀಮಾಂಸಾಕಾರ ರಾಜಶೇಖರ ಹೇಳುತ್ತಾನೆ. ಇದನ್ನೇ ಅಭಿನವಗುಪ್ತ “ವ್ಯುತ್ಪತ್ತಿ ತದುಪಯೋಗಿಸಮಸ್ತವಸ್ತು ಪೌರ್ವಾಪರ್ಯಪರಾಮರ್ಶಕೌಶಲಮ್” “ಪ್ರತಿಭೆಗೆ ಉಪಯೋಗವಾಗುವ ಸಮಸ್ತವಸ್ತುಗಳ ಹಿಂದುಮುಂದನ್ನು ವಿಮರ್ಶಿಸುವ ವಿಚಕ್ಷಣತೆಯೇ ವ್ಯುತ್ಪತ್ತಿ” ಎಂದು ಮತ್ತೊಂದು ವಿಧದಲ್ಲಿ ವ್ಯಾಖ್ಯಾನಿಸು ತ್ತಾನೆ. ಈ ಎರಡೂ ವ್ಯಾಖ್ಯಾನಕ್ಕೆ ಸರಿಹೊಂದುವ ವ್ಯಕ್ತಿಯೊಬ್ಬ ಯಕ್ಷಪ್ರಪಂಚದಲ್ಲಿ ಥಟ್ಟನೆ ನೆನಪಿಗೆ ಬರುವವರಿದ್ದರೆ ಆ ವ್ಯಕ್ತಿ ಖ್ಯಾತ ಅರ್ಥಧಾರಿ, ಸಂಸ್ಕೃತಿಚಿಂತಕ ಡಾ.ಎಂ.ಪ್ರಭಾಕರ ಜೋಶಿ, ಡಾ. ಜೋಶಿ ಒಬ್ಬ ವ್ಯುತ್ಪನ್ನ: ಹಲವು ಪ್ರತಿಭೆಗಳ ಸಂಗಮ. ಯಕ್ಷಪ್ರಪಂಚ ಕಂಡ ಒಬ್ಬ ಧೀಮಂತ, ನಿರ್ಭೀತ ವಿಮರ್ಶಕ, ಸಂಶೋಧಕ, ಸಂಘಟಕ, ಚಿಂತಕ, ಗ್ರಂಥಕರ್ತಾ, ನಿವೃತ್ತ ಪ್ರಾಧ್ಯಾಪಕ, ಯಕ್ಷಸಂಪನ್ಮೂಲ ವ್ಯಕ್ತಿ, ಸಲಹೆಗಾರ, ನಿರ್ದೇಶಕ. ತಾಳಮದ್ದಳೆ ಅರ್ಥಧಾರಿ,

ತಾಳಮದ್ದಳೆ ಅರ್ಥಧಾರಿಯಾಗಿ ಅವರ ಹೆಸರು ಬಹಳ ಎತ್ತರದ್ದು. ಶೇಣಿ,

ಸಾಮಗರಂತಹ ಪ್ರಖ್ಯಾತ ಕಲಾವಿದರೊಂದಿಗೆ ಭಾಗವಹಿಸುತ್ತಾ ಬಂದ ಜೋಶಿ ಅವರಷ್ಟೇ ಎತ್ತರದ ಕೀರ್ತಿ, ಪ್ರಸಿದ್ಧಿಯನ್ನು ಪಡೆದಿದ್ದಾರೆ. ಶೇಣಿ ಸಾಮಗರ ಬಗ್ಗೆ ಒಂದು ಮಾತಿದೆ. ಒಂದು ಹೊಸೆದ ಹಗ್ಗ: ಇನ್ನೊಂದು ಮಸೆದ ಕತ್ತಿ, ಒಂದು ಕಟ್ಟಿ ಕೆಡವಿದರೆ ಇನ್ನೊಂದು ಕತ್ತರಿಸಿ ಚೆಲ್ಲುತ್ತದೆ ಅಂತ. ಜೋಶಿ ತಮ್ಮ ಅರ್ಥಗಾರಿಕೆಯಲ್ಲಿ ಈ ಎರಡನ್ನೂ ರೂಢಿಸಿಕೊಂಡವರು. ಅವರು ಕಟ್ಟಿ ಕೆಡಹುವ ಹೊಸೆದ ಹಗ್ಗವೂ ಆಗಬಲ್ಲರು; ಕತ್ತರಿಸಿ ಚೆಲ್ಲುವ ಕತ್ತಿಯೂ ಆಗಬಲ್ಲರು. ಆದರೆ ಇದೇ ಅವರ ಅರ್ಥಗಾರಿಕೆಯ ಮುಖ್ಯ ದ್ರವ್ಯವಲ್ಲ. ಅವರೊಬ್ಬ ಸರಸಂಭಾಷಣಾಕಾರರು, ತಾಳಮದ್ದಳೆ ಯಲ್ಲಿ ಸಂಭಾಷಣೆಗೆ ಹೆಚ್ಚು ಒದಗಿಬರಬಲ್ಲವರು. ಹೇಳುವಂತಹ ಸ್ವರಭಾರವಾಗಲೀ, ಶ್ರುತಿ ಮನೋಹರತೆಯಾಗಲೀ ಜೋಶಿಯವರದು ಅಲ್ಲ. ಆದರೂ ಅವರು ಜನಮಾನಸ ದಲ್ಲಿ ನೆಲೆಯೂರಿದ ಪರಿ, ಬೀರಿದ ಪ್ರಭಾವ ಅಸದೃಶವಾದುದು. ಅರ್ಥಧಾರಿಯೊಬ್ಬನಿಗೆ ವಿಶೇಷ ಕಂಠಸಂಪತ್ತು ಬೇಕು; ಸ್ವರಭಾರ ಬೇಕು; ಯಕ್ಷಗಾನ ಶೈಲಿ ಇರಬೇಕು ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಸುಳ್ಳುಮಾಡಿದವರು ಜೋಶಿ, ಅದಕ್ಕೆ ಅವರು ಕಂಡುಕೊಂಡ ಹಾದಿ-ಸರಸ ಸಂಭಾಷಣೆ, ಸಂವಾದಪ್ರಧಾನವಾದ ಮೊನಚಾದ, ಚಿಂತನಶೀಲ, ವಿಚಾರಪೂರ್ಣ ಮಾತು. ಪಾತ್ರೋಚಿತವಾಗಿ ಇಂದಿನ ರಾಜಕಾರಣದ ವಿದ್ಯಮಾನವನ್ನು ಅಂದಿನ ಪುರಾಣಕ್ಕೆ ಅನ್ವಯಿಸಿ ಹೇಳುವುದು, ಸಮಾಜದ ರೀತಿ- ನೀತಿಗಳನ್ನು ವಿಡಂಬಿಸಿ ಅರ್ಥಗಾರಿಕೆಗೆ ಸ್ವಾರಸ್ಯ ತುಂಬುವುದು, ಸದಭಿರುಚಿಯ ಹಾಸ್ಯದ ಹೊದಿಕೆಯಲ್ಲಿ ಪ್ರಖರ ವೈಚಾರಿಕತೆಯನ್ನು ಬಿತ್ತುವುದು, ಪಾತ್ರಶಿಲ್ಪವನ್ನು ಕೊನೆಯವರೆಗೂ ಕಾದುಕೊಳ್ಳವುದು. ಇಂತಹ ಗುಣಸಂಪತ್ತುಗಳೇ ಅವರನ್ನು ಅಗ್ರಮಾನ್ಯ ಕಲಾವಿದರನ್ನಾಗಿ ಮಾಡಿವೆ. ಕೆಲವು ಪಾತ್ರಗಳು ಅವರಿಗೇ ಮೀಸಲು ಎಂಬಂತಹ ಖ್ಯಾತಿ ಪಡೆದವರು ಅವರು. ಅವರು ವಾಲಿ, ರಾವಣ, ಮಾಗಧ, ಕೌರವ, ಅರ್ಜುನ, ಭೀಷ್ಮ, ಪರಶುರಾಮ, ವೀರಮಣಿಯಂತಹ ಪಾತ್ರಗಳನ್ನು ಚಿತ್ರಿಸುವ ರೀತಿ ಅನನ್ಯ ವಾದುದು.

ಜೋಶಿ ಒಬ್ಬ ಅರ್ಥಧಾರಿಯಷ್ಟೇ ಅಲ್ಲ. ಅವರೊಬ್ಬ Academic Person — ಪಾಂಡಿತ್ಯದ, ಶೈಕ್ಷಣಿಕ ಶಿಸ್ತಿನ ಮನುಷ್ಯ ಕಲಾವಿದರಲ್ಲಿ ಇಂತಹ ವ್ಯಕ್ತಿಗಳನ್ನು ನೋಡುವುದು ಬಹು ಅಪರೂಪ. ಜೋಶಿ ತಮ್ಮ ಬದುಕನ್ನು ಒಂದೇ ಮುಖವಾಗಿ ತಿರುಗಿಸಿ, ಒಂದೇ ಒಂದು ಧೈಯ-ಸಾಧನೆಗಾಗಿ ಮೀಸಲಾಗಿರಿಸಿದವರಲ್ಲ. ಹಲವು ಕೆಲಸಗಳನ್ನು ಆವಾಹಿಸಿಕೊಂಡು ಅನವರತ ದುಡಿಯುವುದು ಅವರ ಸ್ವಭಾವ. ಡಾ.ಕೆ.ಶಿವರಾಮ ಕಾರಂತರು ತಮ್ಮ “ಹುಚ್ಚು ಮನಸ್ಸಿನ ಹತ್ತು ಮುಖಗಳು” ಆತ್ಮವೃತ್ತದಲ್ಲಿ ಸೋಲು ಗೆಲುವಿನ ಬಗ್ಗೆ ವ್ಯಾಖ್ಯಾನಿಸುವಾಗ ಒಂದು ಮಾತನ್ನು ಹೇಳುತ್ತಾರೆ- “ಎಲ್ಲಿಯ ತನಕ ನಾವು ಕೆಲಸದಲ್ಲಿ ಆಸಕ್ತಿಯನ್ನು ವಹಿಸುತ್ತೇವೋ, ಅದರ ಅವಶ್ಯಕತೆಯನ್ನೂ, ಚೆಲುವನ್ನೂ ಮನಗಾಣುತ್ತೇವೋ, ಅಲ್ಲಿಯ ತನಕ ಕೆಲಸವೇ ಆನಂದ” ಎಂದು. ಇದು ಜೋಶಿಯವರಿಗೆ ಅತ್ಯಂತ ಸಮಂಜಸವಾಗಿ ಒಪ್ಪುವ ಮಾತು. ಅವರು ಯಾವುದೇ ಕೆಲಸವನ್ನು

ಎತ್ತಿಕೊಂಡರೂ ಅದರಲ್ಲಿ ಆನಂದವನ್ನು ಕಂಡುಕೊಂಡವರು. ಆ ಕೆಲಸಗಳಲ್ಲಿ ದೊಡ್ಡದು- ಸಣ್ಣದು, ಗಣ್ಯ-ನಗಣ್ಯ ಎಂಬ ಭೇದಭಾವವೇ ಇಲ್ಲ. ಸುದೀರ್ಘ ಲೇಖನದಿಂದ ಹಿಡಿದು ಒಂದು ಅಂಚೆ ಕಾರ್ಡ್ ಅಳತೆಯ ನಾಲ್ಕು ವಾಕ್ಯಗಳೂ ಅವರಿಗೆ ಮಹತ್ವ ದ್ದಾಗಿಯೇ ಕಾಣಿಸುತ್ತದೆ. ಹಾಗಾಗಿಯೇ ಅವರು ಬಹು ಜನಾನುರಾಗಿ, ಅವರ ಆಸಕ್ತಿ ಬಹುಮುಖದ್ದು. ಅವರ ಮನಸ್ಸು ಮುಕ್ತವಾದುದು. ಕಂಡಿದ್ದನ್ನು, ಅನುಭವಿಸಿದ್ದನ್ನು ಬೇರೆಯವರೊಡನೆ ಹಂಚಿಕೊಳ್ಳುವ ನಿರ್ಮಲ ಮನಸ್ಸು ಅವರದ್ದು. ಜೋಶಿಯವರ ಬಹುಮುಖ ಪ್ರತಿಭೆಯನ್ನೂ, ಅವರ ಅಗಾಧ ಶಕ್ತಿ-ಸಾಮರ್ಥ್ಯವನ್ನೂ ಗುರುತಿಸಬೇಕಾದರೆ ಕಾವ್ಯಮೀಮಾಂಸಾಕಾರ ರಾಜಶೇಖರನ ಮತ್ತೊಂದು ಮಾತನ್ನು ಸ್ಮರಿಸಿಕೊಳ್ಳಬೇಕು.

ಸ್ವಾಸ್ಥ್ಯಂ ಪ್ರತಿಭಾಭ್ಯಾಸೋ ಭಕ್ತಿವಿದ್ವತ್ಕಥಾ ಬಹುಶ್ರುತತಾ।
ಸ್ಮತಿರ್ದಾರ್ಥ್ಯಮನಿರ್ವೇದಶ್ಚ ಮಾತರೋಷ್‌ ಕವಿತ್ವಸ್ಯ ॥

“ದೇಹ ಮನಸ್ಸುಗಳ ಸ್ವಸ್ಥತೆ, ಪ್ರತಿಭೆ, ಅಭ್ಯಾಸ, ಭಕ್ತಿ, ವಿದ್ವಾಂಸರೊಡನೆ ಮಾತುಕತೆ, ಪಾಂಡಿತ್ಯ, ದೃಢವಾದ ಜ್ಞಾಪಕಶಕ್ತಿ, ಉತ್ಸಾಹ – ಇವು ಎಂಟೂ ಕವಿತ್ವಕ್ಕೆ ತಾಯಿಯರು” ಎಂದು ರಾಜಶೇಖರ ಹೇಳುತ್ತಾನೆ. ಇಲ್ಲಿ “ಕವಿತ್ವ” ಅನ್ನುವ ಜಾಗದಲ್ಲಿ ಜೋಶಿಯವರ ಸಾರಸ್ವತ ಸೇವೆಗಳಲ್ಲಿ ಒಂದಾದ ಭಾಷಣ, ವಿಮರ್ಶೆ, ಲೇಖನ ಯಾವುದನ್ನೂ ಇಟ್ಟುಕೊಳ್ಳಬಹದು.

ರಾಜಶೇಖರನ ಈ ಮಾತು ಜೋಶಿಯವರಿಗೆ ಹೇಗೆ ಅನ್ವಯವಾಗುತ್ತದೆ ಎಂದು ನೋಡೋಣ. ಸ್ವಾಸ್ಥ್ಯ= ದೇಹ, ಮನಸ್ಸುಗಳ ಆರೋಗ್ಯ, ಇದು ಜೋಶಿಯವರಿಗೆ ಚೆನ್ನಾಗಿಯೇ ಇದೆ. ಪ್ರತಿಭೆ= ಜೋಶಿ ಒಬ್ಬ ಬಹುಮುಖ ಪ್ರತಿಭೆಯುಳ್ಳವರು ಎಂಬುದು ಎಂದೋ ರುಜುವಾತಾಗಿದೆ. ಅಭ್ಯಾಸ= ಅಭ್ಯಾಸ, ಅಧ್ಯಯನ, ಚಿಂತನೆ ಇರುವುದರಿಂದಲೇ ಅವರು ಇಂದು ಇಷ್ಟು ದೊಡ್ಡ ವ್ಯಕ್ತಿಯಾಗಲು ಸಾಧ್ಯವಾಗಿದೆ. ಭಕ್ತಿ= ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ, ಆನಂದ ಇವು ಜೋಶಿಯವರಲ್ಲಿ ಸಮೃದ್ಧವಾಗಿಯೇ ಇವೆ. ವಿದ್ವತ್ಕಥಾ= ಜೋಶಿಯವರು ಹಿರಿಯರನ್ನೂ, ವಿದ್ವಾಂಸರನ್ನೂ ಕಂಡರೆ ತಲೆವಾಗುತ್ತಾರೆ; ಅಂತಹವರೊಡನೆ ಹೃದ್ಯವೂ, ವಿನೀತವೂ ಆದ ಒಡನಾಟ ಇಟ್ಟುಕೊಂಡಿದ್ದಾರೆ. ಬಹುಶ್ರುತತಾ ತಮ್ಮ ಅಧ್ಯಯನ ಬಲದಿಂದ ಪಂಡಿತರೆನಿಸಿಕೊಂಡಿದ್ದಾರೆ. ಸ್ಮತಿರ್ದಾರ್ಥ್ಯಮ್ = ಜೋಶಿಯವರ ಸ್ಮೃತಿಶಕ್ತಿ, ಮೇಧಾಶಕ್ತಿ ಅಗಾಧವಾದುದು. ತಮ್ಮ ಮನೋವಲಯಕ್ಕೆ ಬಂದ ಯಾವುದನ್ನೂ ಎಂದೂ ಮರೆಯಲಾರರು. ಅಷ್ಟು ದೃಢವಾದ ಜ್ಞಾಪಕಶಕ್ತಿ ಅವರದ್ದು. ಅನಿರ್ವೇದಃ= ಅಂದರೆ ಉತ್ಸಾಹ, ಜೋಶಿಯವರ ಉತ್ಸಾಹ ಎಂದೂ ಕುಗ್ಗದ್ದು; ಬಾಡದ್ದು. ನಿತ್ಯೋತ್ಸವದ ಉತ್ಸಾಹ ಅವರದ್ದು. ಮಾಡುವ ಕೆಲಸಕ್ಕೆ ಬೇಕಾಗುವ ಎಲ್ಲಾ ಶಕ್ತಿಗಳೂ ಅವರಲ್ಲಿ ಮೇಲೈಸಿವೆ. ರಾಜಶೇಖರನ ಈ ಮಾತು ಜೋಶಿಯಂತಹವರಲ್ಲಿ ಸಾರ್ಥಕ್ಯವನ್ನು ಪಡೆಯುತ್ತವೆ.

ಜೋಶಿಯವರದು ಪಾದರಸದಂತಹ ವ್ಯಕ್ತಿತ್ವ, ಜಗತ್ತಿನ ಪ್ರತಿಯೊಂದಕ್ಕೂ ತೀವ್ರತರವಾಗಿ ಸ್ಪಂದಿಸುವ ಮತ್ತು ಅವನ್ನು ಹಲವು ದೃಷ್ಟಿಕೋನದಲ್ಲಿ ವಿಮರ್ಶಿಸುವ, ವ್ಯಾಖ್ಯಾನಿಸುವ

ಚುರುಕು ಮತಿತ್ವ ಮುಖ್ಯವಾಗಿ ಅವರು ಸಮಾಜ, ಸಂಸ್ಕೃತಿ, ಕಲೆ, ಮೌಲ್ಯಗಳ ಬಗ್ಗೆ ವಿಶೇಷ ಕಾಳಜಿಯುಳ್ಳವರು, ಸಮಾಜದ ಅಂಕುಡೊಂಕನ್ನು, ಅಪಸವ್ಯವನ್ನು, ಮೌಡ್ಯವನ್ನು ತೀವ್ರತರವಾಗಿ ವಿರೋಧಿಸುವವರು. ಅದಕ್ಕಾಗಿ ಅವರು ಲೇಖನಿಯನ್ನು ಝಳಪಿಸಿದ್ದಾರೆ. ಮೌಖಿಕವಾಗಿ ಸಮರ ಸಾರಿದ್ದಾರೆ. ಸಹಜವಾಗಿಯೇ ಒಳ್ಳೆಯದಕ್ಕೆ ತುಡಿಯುವ, ಮೌಲ್ಯಾನುಸಂಧಾನಕ್ಕೆ ಯತ್ನಿಸುವ ವ್ಯಕ್ತಿತ್ವ ಅವರದು. ಸಮಾಜದಲ್ಲಿ ದೊಡ್ಡವರು, ಗಣ್ಯರು ಅಂತ ಅನ್ನಿಸಿಕೊಂಡವರ ಅಲ್ಪತನವನ್ನು ಕಂಡು ಮರುಗಿದ್ದಾರೆ. ಕೆಲವರ ಹೃದಯ ವೈಶಾಲ್ಯವನ್ನು ಕಂಡು ಸಂತೋಷಪಟ್ಟಿದ್ದಾರೆ. ಅದರಿಂದ ಪ್ರೇರಿತರೂ ಆಗಿದ್ದಾರೆ.

ಮಂಗಳೂರಿನ ಬೆಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಮೂರು ದಶಕಗಳ ಕಾಲ ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಿವೃತ್ತಿಹೊಂದಿದ ಜೋಶಿವರು ಒಳ್ಳೆಯ ಅಧ್ಯಾಪಕರೆಂದು ಹೆಸರು ಪಡೆದವರು. ಹಳಗನ್ನಡ, ನಡುಗನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಸಮಕಾಲೀನ ಸಾಹಿತ್ಯಗಳನ್ನು ಜೋಶಿ ಓದಿಕೊಂಡವರು, ಅದರ ಪರಿಣಾಮ ಅವರ ಅಧ್ಯಾಪನಕ್ಕೆ ಒಂದು ಶಕ್ತಿಯನ್ನೂ, ಸೊಗಸನ್ನೂ ತಂದಿದೆ. ತಾವು ಬೋಧಿಸುವ ವಿಷಯದ ಮೇಲಿನ ಪ್ರಭುತ್ವ, ನಿರರ್ಗಳ ನಿರೂಪಣಾ ಸಾಮರ್ಥ್ಯ ಅವರನ್ನು ಒಬ್ಬ ಉತ್ತಮ ಅಧ್ಯಾಪಕರ ಪಂಕ್ತಿಗೆ ಸೇರಿಸಿದೆ.

ಜೋಶಿಯವರ ಅಭಿರುಚಿ, ಆಸಕ್ತಿಗಳಲ್ಲಿ ಅವರಿಗೆ ಅತ್ಯಂತ ಪ್ರಿಯವಾದುದು ವ್ಯಕ್ತಿಚಿತ್ರ ದಾಖಲಿಸುವುದು. ಯಕ್ಷಗಾನ ಕಲಾವಿದರು, ಸಂಘಟಕರು, ಸಾಧಕರು, ಕಲಾಪೋಷಕರು ಹೀಗೆ ನೂರಾರು ಜನರ ವ್ಯಕ್ತಿಚಿತ್ರ ಕಡೆದಿದ್ದಾರೆ ಅವರು. ಚಿಕ್ಕ ವಾಕ್ಯಗಳಲ್ಲಿ, ಕೆಲವೇ ಪದಗಳಲ್ಲಿ ವ್ಯಕ್ತಿಯೊಬ್ಬನ ವ್ಯಕ್ತಿತ್ವವವನ್ನು, ಸ್ವಭಾವವನ್ನು, ಗುಣವೈಶಿಷ್ಟ್ಯವನ್ನು ಕಣ್ಮುಂದೆ ನಿಲ್ಲಿಸುವುದು ಜೋಶಿಯವರ ವ್ಯಕ್ತಿಚಿತ್ರ ಹರೆಹದ ವೈಶಿಷ್ಟವಾಗಿದೆ. ಉತ್ತೇಕ್ಷೆ, ಅತಿರಂಜನೆ ಯಾವುದೂ ಇಲ್ಲದೇ ಇದ್ದುದನ್ನು ಇದ್ದಹಾಗೆಯೇ ಹೇಳುವುದು, ಅವರ ಒಡನಾಟದಲ್ಲಿ ತಮಗಾದ ಅನುಭವವನ್ನು ಹಂಚಿಕೊಳ್ಳುವುದು, ಅವರ ಸಾಧನೆಯ ಮೌಲ್ಯಮಾಪನ ಮಾಡುವುದು, ಯಾವ ಪೂರ್ವಾಗ್ರಹವೂ ಇಲ್ಲದೆ ಅವರ ಗುಣದೋಷಗಳನ್ನು ವಿಮರ್ಶಿಸುವುದು ಮುಂತಾದುವು ಅವರ ವ್ಯಕ್ತಿಚಿತ್ರಕ್ಕೆ ಜೀವಂತಿಕೆಯನ್ನೂ, ಅಧಿಕೃತತೆಯನ್ನೂ, ರಸಪೂರ್ಣತೆಯನ್ನೂ ತಂದುಕೊಟ್ಟಿದೆ. ಇದರ ಜತೆಗೆ ಅವರು ನೂರಾರು ಕಲಾವಿದರ ಬಗ್ಗೆ, ಸಾಧಕರ ಬಗ್ಗೆ ಭಾಷಣ ಮಾಡಿದ್ದಾರೆ; ಅಭಿನಂದನೆ ಸಲ್ಲಿಸಿದ್ದಾರೆ; ಲೇಖನ ಬರೆದಿದ್ದಾರೆ.

ಎಲ್ಲರನ್ನೂ, ಎಲ್ಲವನ್ನೂ ತಿಳಿದುಕೊಳ್ಳುವ ಜೋಶಿಯವರ ಕುತೂಹಲ ಎಂದೂ ತಣಿಯದ್ದು. ಅವರ ನೆನಪು ಚಿತ್ರಾತ್ಮಕವಾದುದು. ಪ್ರತಿಯೊಬ್ಬರ ಬಗ್ಗೆಯೂ, ಪ್ರತಿಯೊಂದರ ಬಗ್ಗೆಯೂ ಅವರಲ್ಲಿ ಸಮೃದ್ಧವಾದ ವಿವರ ತುಂಬಿಕೊಡಿರುತ್ತವೆ. ಒಮ್ಮೆ ನೋಡಿದ್ದನ್ನು ಅವರು ಎಂದೂ ಮರೆಯುವುದಿಲ್ಲ. ನೆನಪಿನ ಯಾವುದೋ ಮೂಲೆಯಲ್ಲಿ ಅವು ಶಾಶ್ವತ ಸ್ಥಾನವನ್ನು ಪಡೆದುಕೊಂಡಿರುತ್ತವೆ. ಬೇಕೆಂದಾಗ ಬೆಳಕಿಗೆ ಬರುತ್ತವೆ. ಜೋಶಿಯವರ ಅಕಾಡೆಮಿಕ್ ಶಿಸ್ತು ಬಹಳ ಗಮನಾರ್ಹವಾದುದು. ಬಹುಶಃ ಯಕ್ಷಗಾನದ

ಯಾವ ಕಲಾವಿದರೂ ರೂಢಿಯಲ್ಲಿ ಇಟ್ಟುಕೊಳ್ಳದ ಒಂದು ಪದ್ಧತಿಯನ್ನು ಜೋಶಿಯವರು ರೂಢಿಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಸ್ನೇಹದ ತೆಕ್ಕೆಗೆ ಸಿಕ್ಕಿದ ಯಾರೇ ಇರಲಿ, ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದಿರಲಿ, ಮನೆಗೆ ಹಿಂತಿರುಗಿದ ಕೂಡಲೆ ಅವರಿಗೆ ಒಂದು ಕೃತಜ್ಞತಾ ಪತ್ರ ಬರೆಯವುದು ಅವರಿಗೆ ಅನ್ನ, ಉಸಿರಿನಷ್ಟೇ ಸಹಜವಾದ ಕ್ರಿಯೆಯಾಗಿದೆ. ಇದರಿಂದ ಸ್ನೇಹವರ್ಧನೆಯಷ್ಟೇ ಅಲ್ಲ; ಕಾರ್ಯಕ್ರಮ ಏರ್ಪಡಿಸಿದ ಸಂಘಟಕರಿಗೆ ಒಂದು ಕೃತಕೃತ್ಯತಾ ಭಾವ ಉಂಟಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಂಥಾದ್ದನ್ನು ಜೋಶಿ ಒಂದು ವ್ರತದಂತೆ ಮಾಡಿಕೊಂಡು ಬಂದಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕು ಮಾಳದಲ್ಲಿ 6-2-1946ರಂದು ನಾರಾಯಣ ಜೋಶಿ ಮತ್ತು ಲಕ್ಷ್ಮೀಬಾಯಿ ದಂಪತಿಗೆ ಮೂರನೆಯ ಮಗನಾಗಿ ಹುಟ್ಟಿದ ಜೋಶಿ ಎಳವೆಯಿಂದಲೂ ಯಕ್ಷಗಾನಕ್ಕೆ ಮನಸೋತವರು. ತಂದೆ ಸಂಸ್ಕೃತ ವಿದ್ವಾಂಸರು. ತಾಯಿಯ ತಂದೆ ಯಕ್ಷಗಾನ ಗುರು. ಕಲೆ, ಸಾಹಿತ್ಯದ ಹಿನ್ನೆಲೆ ಇರುವ ಕುಟುಂಬ ಅವರ ಯಕ್ಷಗಾನ ಪ್ರೇಮಕ್ಕೆ ನೀರೆರೆಯಿತು. ಉಜಿರೆ, ಮಾಳ, ಕಾರ್ಕಳ, ಮುಲ್ಕಿ, ಧಾರವಾಡದಲ್ಲಿ ವಿದ್ಯಾಭ್ಯಾಸ, ವಿದ್ಯಾರ್ಥಿ ದೆಸೆಯಲ್ಲೇ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಹಾಗೆಯೇ ಜ್ಞಾನತೃಷೆಯನ್ನೂ ಹೆಚ್ಚಿಸಿತು. ಸುತ್ತಮುತ್ತಲಿನಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳು, ಬಯಲಾಟಗಳು ಅವರ ಯಕ್ಷಗಾನ ಪ್ರೇಮಕ್ಕೆ ಪ್ರೋತ್ಸಾಹ ನೀಡಿದವು. ಅಲ್ಲಿಯ ಗ್ರಂಥಾಲಯಗಳು ಅವರ ಸಾಹಿತ್ಯಾಭಿರುಚಿಯನ್ನು ಕೆರಳಿಸಿದವು. ಇವೆಲ್ಲದರ ಫಲವಾಗಿ ಅವರಲ್ಲಿ ಒಂದು ಸಾಂಸ್ಕೃತಿಕವಾದ, ಘನವಾದ ವ್ಯಕ್ತಿತ್ವ ರೂಪುಗೊಂಡವು.

ಸಾಂಸಾರಿಕವಾಗಿ ಜೋಶಿ ಇಬ್ಬರು ಹೆಣ್ಣುಮಕ್ಕಳ ತಂದೆ. ಸ್ವಾತಿ ಮತ್ತು ಶ್ವೇತಾ. ಇಬ್ಬರಿಗೂ ಮದುವೆಯಾಗಿ ಗಂಡಂದಿರೊಡನೆ ಅವರು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಮಡದಿ ಶ್ರೀಮತಿ ಸುಚೇತಾ ಜೂನಿಯರ್ ಕಾಲೇಜೊಂದರ ಪ್ರಾಧ್ಯಾಪಕಿಯಾಗಿ ನಿವೃತ್ತರಾಗಿದ್ದಾರೆ. ಜೋಶಿಯವರ ಸಾರಸ್ವತ ಕೈಂಕರ್ಯದಲ್ಲಿ ಅವರ ಸಹಾಯ- ಸಹಕಾರ ದೊಡ್ಡದು.

ಜೋಶಿಯವರದು ಒಂದು ಅಪೂರ್ವ ವ್ಯಕ್ತಿತ್ವ ಅಧ್ಯಯನ, ಅನುಭವ, ತೆರೆದ ಮನಸ್ಸು, ಹೊಸಚಿಂತನೆ, ಸರಸ ಸಂಭಾಷಣೆ, ಅಂತಃಕರಣ, ಔದಾರ್ಯ, ಸದಭಿರುಚಿಯ ಹಾಸ್ಯ, ವ್ಯಂಗ್ಯ, ನಿರ್ದಾಕ್ಷಿಣ್ಯದ ಮಾತು ಮುಂತಾದವುಗಳಿಂದ ಜನರ ಮನಸ್ಸನ್ನು ಬಹು ಬೇಗ ಗೆಲ್ಲಬಲ್ಲರು. ಇಂತಹ ಜೋಶಿಯವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ-ಗೌರವ- ಪುರಸ್ಕಾರಗಳು ಬಂದಿವೆ. ಇತ್ತೀಚೆಗೆ ಬಂದ 'ಪಾರ್ತಿಸುಬ್ಬ ಪ್ರಶಸ್ತಿ'ಯಿಂದ 'ಯಕ್ಷಮಂಗಳ' ಪ್ರಶಸ್ತಿಯವರೆಗೆ ಅವರಿಗೆ ಬಂದ ಒಂದೊಂದು ಪ್ರಶಸ್ತಿಯೂ ಯಕ್ಷಗಾನ ಪ್ರೇಮಿಗಳ ಅಭಿಮಾನಕ್ಕೆ ಕೋಡು ಮೂಡಿಸಿವೆ. ಅವರ ಬಹುಮುಖ ಪ್ರತಿಭೆ ಮತ್ತು ಸಾಧನೆಗಳನ್ನು ಎತ್ತಿಹಿಡಿದಿವೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರದಾನ ಮಾಡುವ 'ಪಾರ್ತಿಸುಬ್ಬ

ಪ್ರಶಸ್ತಿ'ಯನ್ನು ಪಡೆದಿರುವವರಲ್ಲಿ ಜೋಶಿಯವರೂ ಒಬ್ಬರು. ಇದು ಜೋಶಿಯವರ ಜೀವನ ಮತ್ತು ಸಾಧನೆಗೆ ಸಂದ ಗೌರವವಾಗಿದೆ; ಈ ಪ್ರಶಸ್ತಿ ಅವರ ಯಕ್ಷಗಾನ ಮತ್ತು ಅಕಾಡೆಮಿಕ್ ಸೇವೆಗೆ ದೊರೆತ ಅಧಿಕೃತ ಮನ್ನಣೆಯಾಗಿದೆ; ಅವರ ಜನಾನುರಾಗಕ್ಕೆ ಸಿಕ್ಕಿದ ಅನುಮೋದನೆಯಾಗಿದೆ. ಮುಖ್ಯವಾಗಿ ತಾಳಮದ್ದಳೆ ಅರ್ಥಗಾರಿಕೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಸಂಘಟನೆ, ಸಲಹೆ, ನಿರ್ದೇಶನ, ಉಪನ್ಯಾಸ, ಭಾಷಣ ಮುಂತಾದ ಹಲವು ಪ್ರಕಾರಗಳಲ್ಲಿ ಏಕಪ್ರಕಾರವಾಗಿ ಶ್ರಮಿಸಿರುವ ಜೋಶಿಯವರಿಗೆ ಈ ಪ್ರಶಸ್ತಿ ಸಂಪ್ರಾಪ್ತವಾದುದು ಜೋಶಿಯವರಿಗಷ್ಟೇ ಅಲ್ಲ; ಅವರ ಅಭಿಮಾನಿಗಳೆಲ್ಲರಿಗೂ ಸಂತೋಷ, ಸಂಭ್ರಮವನ್ನುಂಟುಮಾಡಿದೆ.

◆ ◆ ◆

ಪ್ರಭಾಕರ ನಮಸ್ತುಭ್ಯಮ್

ಡಾ.ವಿಜಯನಾಥ ಭಟ್, “ಕೌಂಡಿನ್ಯ”

ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಗುಣದೋಷಗಳ ಬಗ್ಗೆ ನಿರ್ದಿಷ್ಟವಾಗಿ, ನಿರ್ದುಷ್ಟವಾಗಿ ಪ್ರಶಂಸೆ-ದೂಷಣೆಗಳನ್ನು ಮಾಡಬೇಕಾದರೆ, ಅಂತಹ ಉಜ್ಜುಗದಲ್ಲಿ ತೊಡಗಲುದ್ಯುಕ್ತನಾಗುವ ವ್ಯಕ್ತಿಗೆ ಕನಿಷ್ಠ ಮೂರು ಅರ್ಹತೆಗಳಿರಬೇಕು. ಉದ್ದಿಷ್ಟ ವ್ಯಕ್ತಿಯೊಡನೆ ದೀರ್ಘಕಾಲ ಮತ್ತು ನಿಕಟ ಸಹಚರ್ಯೆ, ಗುಣದೋಷ ಗ್ರಹಣಕ್ಕೆ ಅಗತ್ಯವಾಗಿ ಬೇಕಾದ ಸತ್ವ ಮತ್ತು ಅಧಿಕಾರ ಹಾಗೂ ತಾನು ಕಂಡುಕೊಂಡ ಸತ್ಯವನ್ನು ಉತ್ತರಿಸಲು ಬೇಕಾದ ಅಭಿವ್ಯಕ್ತಿಸಂಪತ್ತು ಮತ್ತು ಎದೆಗಾರಿಕೆ, ಮಾನ್ಯ ಪ್ರಭಾಕರ ಜೋಶಿಯವರ ಮತ್ತು ನನಗಿರುವ ಸಮೀಕರಣವನ್ನು ಪರಿಶೀಲಿಸಿದಾಗ ನನಗೆ ಈ ಮೂರು ವಿಷಯಗಳಲ್ಲೂ ಗ್ರಹಬಲ ಮಿತವಾದದ್ದು ಎಂದು ಪೀಠಿಕಾಪ್ರಕರಣದಲ್ಲಿಯೇ ವಿನಮ್ರನಾಗಿ ಹೇಳಬಯಸುತ್ತೇನೆ.

ಮೊಟ್ಟಮೊದಲಾಗಿ ನನ್ನ ಮತ್ತು ಅವರ ಸಹವಾಸ ಸ್ತಬ್ಧಚಿತ್ರಗಳ ಸರಮಾಲೆಯಂತೆ- ಚಲನಚಿತ್ರದಂತಲ್ಲ-ಎರಡು ಪ್ರತ್ಯಕ್ಷ ಅನುಭವಗಳ ನಡುವೆ ಸಾಕಷ್ಟು ಸಮಯದ ಅಂತರವಿದೆ. ನಾವಿಬ್ಬರೂ ಪ್ರತ್ಯಕ್ಷವಾಗಿ ಎದುರು ಬದುರು ಕುಳಿತು ಏನಾದರೂ ವಿಷಯ-ವಿಚಾರ- ಸತ್ಕಾರ ವಿನಿಮಯಗಳನ್ನು ಮಾಡಿದ್ದರೆ, ಅಂತಹ ಪ್ರಸಂಗಗಳು ಕೇವಲ ಬೆರಳೆಣಿಕೆಯಷ್ಟೇ. ಮೊದಲಬಾರಿ ನನಗೆ ಅವರ 'ದರ್ಶನ'ವಾದದ್ದು- ಅದು 'ದೂರ'ದರ್ಶನ, ಸುಮಾರು

ಅರ್ಧ ಫರ್ಲಾಂಗಿನಷ್ಟು ದೂರದಿಂದ ಈಗ ಸುಮಾರು 30 ವರ್ಷಗಳ ಹಿಂದೆ. ಆಗ ನಾನು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದೆ. ಒಂದು ದಿನ ಮುಸ್ಸಂಜೆಯ ವೇಳೆ ನನ್ನ ಕಾರ್ಯಾಲಯದ ಪಕ್ಕದಲ್ಲಿ ಇದ್ದ ನೆಹರೂ ಮೈದಾನದಲ್ಲಿ ಮೈಕಾಸುರನ ತಾರಕ ಧ್ವನಿ ಕೇಳಿ ಬಂದಾಗ ಅದೇನದು ಎಂದು ಶೋಧಿಸುವ ಬಯಕೆಯಿಂದ ಮೈದಾನಿನತ್ತ ನಡೆದುಕೊಂಡು ಹೋದರೆ ಕಂಡದ್ದು ಅಕ್ಷರಶಃ ಸಹಸ್ರಾರು ಜನರ ಜಂಗುಳಿ, ನಡುವೆ ಬಹು ಎತ್ತರದಲ್ಲೊಂದು ತಾತ್ಕಾಲಿಕ ವೇದಿಕೆ; ವೇದಿಕೆಯ ಮೇಲೆರಡು ಮನುಷ್ಯಾಕೃತಿಗಳು - ದೂರ ಮತ್ತು ಅಸಮರ್ಪಕ ಹೊನಲು ಬೆಳಕಿನಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತಿದ್ದಾರೆ. ಅವರೊಲ್ಲಬ್ಬ ಸ್ಪುರದ್ರೂಪೀ ತರುಣ ಎಂಬುದು ಖಚಿತವಾಗಿ ಕಾಣುತ್ತದೆ. ಹತ್ತಾರು ಧ್ವನಿವರ್ಧಕಗಳ ಮೂಲಕ ಎಲ್ಲಾ ದಿಕ್ಕಿನಿಂದ ಕಿವಿಗೆ ರಾಚುವಂತೆ ಅಸ್ಥಲಿತವಾಗಿ ಹರಿದು ಬರುತ್ತಿದ್ದ ಮಾತಿನ ಓಘ, ವಿಷಯ ವಿಸ್ತಾರ, ಶಬ್ದಗಳ ಜಾಲವನ್ನು ನೇಯುವ ಚಾಕಚಕ್ಯತೆ, ಪರಸ್ಪರ ಮಾತಿಗೆ ಮಾತು ಪೋಣಿಸುತ್ತಾ ಮಂದ್ರ-ತಾರಕಗಳ ಸಮರ್ಥ ಉಪಯೋಗದಿಂದ ಪೂರ್ವಪಕ್ಷ ಪ್ರತಿಪಕ್ಷದ ಮಂಡನೆ, ಖಂಡನೆಗಳನ್ನು ಸ್ಥಾಪಿಸುವ ಕೌಶಲ ಇವೆಲ್ಲಾ ನನ್ನನ್ನು ಒಮ್ಮೆಲೇ ಸೆಳೆದು ನಿಲ್ಲಿಸಿತು. ಇಬ್ಬರೂ ಮಹನೀಯರೂ 'ಆಸ್ತಿಕತೆ' ಮತ್ತು 'ನಾಸ್ತಿಕತೆ'ಯ ಪರ ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆಂದು ಮನದಟ್ಟಾಯಿತು. ಕೇಳಿದಂತೆಲ್ಲಾ ಇನ್ನಷ್ಟು ಕೇಳಬೇಕೆಂಬ ಆಸೆಯುಂಟಾಯಿತು. ಪಕ್ಕದಲ್ಲಿದ್ದವರೊಡನೆ ವಿಚಾರಿಸಿದಾಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಬ್ಬರೂ ನಾನು ಅದುವರೆಗೆ ಕೇವಲ ಕೇಳಿ, ಓದಿ ಪರಿಚಯಿಸಿಕೊಂಡಿರುವ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯಕ, ಸಾಂಸ್ಕೃತಿಕ ರಂಗಗಳಲ್ಲಿ ಅನನ್ಯ ಕೃಷಿ ಮಾಡಿ ಮನೆಮಾತಾಗಿದ್ದ ವಿದ್ವನ್ಮಣಿಗಳು. ತುಲನಾತ್ಮಕವಾಗಿ ತರುಣರಾಗಿದ್ದವರು ಶ್ರೀ ಪ್ರಭಾಕರ ಜೋಶಿ ಮತ್ತೊಬ್ಬರು ಬಹಮಾನ್ಯ ವಿದ್ವಾಂಸ ಶ್ರೀ ಪೆರ್ಲ ಕೃಷ್ಣ ಭಟ್ಟ ಅವರು ಎಂದು ತಿಳಿದುಬಂತು. ಆ ಸಂದರ್ಭವನ್ನು ನನ್ನ ಮಟ್ಟಿಗೆ ಶ್ರೀ ಜೋಶಿಯವರಿಗೆ ಸಂಬಂಧಿಸಿದಂತೆ 'Love at first sight” ಎಂದು ಬಣ್ಣಿಸದೆ ನಿರ್ವಾಹವಿಲ್ಲ. ಎಷ್ಟೋ ವರ್ಷಗಳ ನಂತರ ನಾನು 'ಶ್ರೀಮಚ್ಛಂಕರ ದಿಗ್ವಿಜಯ' ಕೃತಿಯನ್ನು ಬರೆಯುತ್ತಾ ಶ್ರೀ ಶಂಕರ-ಮಂಡನಮಿಶ್ರರ ನಡುವೆ ನಡೆದ ವಾಗ್ಯುದ್ಧದ ಪರಿಚ್ಛೇದವನ್ನು ಬರೆಯುವಾಗ ಈ ಮಂಗಳೂರಿನ ಮೂವತ್ತು ವರ್ಷಗಳ ಹಳೆಯ ಚಿತ್ರಣ ಆಗೀಗ ಮನಃಪಟಲದಲ್ಲಿ ಮೂಡಿದ್ದಿದೆ. ಸ್ವತಃ ತರ್ಕಶಾಸ್ತ್ರ ಮತ್ತು ಸಾಹಿತ್ಯ ವಿದ್ಯಾರ್ಥಿಯಾಗಿದ್ದ ನನಗೆ ಅಂದಿನ ಆ ಮೂರು ಸಂಜೆಗಳಷ್ಟು ದೀರ್ಘವಾದ ಕಾರ್ಯಕ್ರಮದಲ್ಲಿ ನಾನು ಅನುಭವಿಸಿದ ಉಭಯವಾದಿಗಳ ವಿಷಯದ ಮೇಲೆ ಹಿಡಿತ, ಆಕರ ಸಂಪತ್ತು, ಭಾಷೆಯ ಸೊಗಸು, ಕಂಠಸಿರಿ, ಮಂಡನ-ಖಂಡನಗಳ ಕೌಶಲ, ಅನುದ್ವೇಗಕರ ಸಂವಹನ ಶೈಲಿ, ಪ್ರತಿವಾದಿಯ ಶಬ್ದ, ಅರ್ಥಜಾಲದಲ್ಲಿ ಸಿಲುಕದೆ ನುಣುಚಿಕೊಳ್ಳುವ ವೈಖರಿ-ಇವನ್ನು ನೆನೆದುಕೊಂಡರೆ ರೋಮಾಂಚನವಾಗುತ್ತದೆ. ಅಂದೇ ನಾನು, ದೂರದ ಮಾಳದಲ್ಲಿ ಹುಟ್ಟಿದವರಾದರೂ ಮಂಗಳೂರಿನಲ್ಲಿ ನಮ್ಮ ಸಮೀಪದಲ್ಲೇ ನೆಲೆನಿಂತಿರುವ ಶ್ರೀ ಜೋಶಿಯವರನ್ನು ಒಮ್ಮೆಯಾದರೂ ಭೆಟ್ಟಿಯಾಗ

ಬೇಕೆಂಬ ನಿರ್ಧಾರ ಮಾಡಿದ್ದಾಯಿತು.

ಆದರೆ ಅಂತಹ ಸಂದರ್ಭ ನನಗೆ ಒದಗಿ ಬಂದದ್ದು ಕೆಲವೇ ವರ್ಷಗಳ ನಂತರ. ಸುಮಾರು ಸನ್ 1995ರಲ್ಲಿ ಯಾವುದೋ ಮಾಯೆಯಲ್ಲಿ ನಾನು ರಚಿಸಿದ 'ವಿಜಯಿನೀ ಗ್ರಂಥ (ನನ್ನ ಎರಡನೆಯ ಕೃತಿ-ಶ್ರೀಮದ್ಭಗವದ್ಗೀತೆಯ ಶ್ಲೋಕರೂಪೀ ಕನ್ನಡ ಅವತರಣಿಕೆ) ಅಚ್ಚುಮನೆಗೆ ಹೋಗಲು ಸಿದ್ಧವಾಗಿತ್ತು. ನಮ್ಮ ಕರಾವಳಿಯ ಉತ್ತುಂಗ ವಿದ್ವಾಂಸ ರಲ್ಲೊಬ್ಬರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಮುನ್ನುಡಿಯನ್ನು ಬರೆದು ಆಶಿರ್ವಚಿಸಲು ಒಪ್ಪಿಕೊಂಡಿದ್ದರು. ಆದರೂ ಹಸ್ತಪ್ರತಿಯನ್ನು ಶ್ರೀ ಬನ್ನಂಜೆಯವರಿಗೆ ಹಸ್ತಾಂತರಿಸುವ ಮುನ್ನ ಯಾರಾದರೂ ಇನ್ನೋರ್ವ ಸಮರ್ಥ ವಿದ್ವಾಂಸರು ನನ್ನೀ ಹಸ್ತಪ್ರತಿಯ ಮೇಲೊಮ್ಮೆ ಕಣ್ಣಾಡಿಸಿ ಯಥಾಯೋಗ್ಯ ತಿದ್ದುಪಡಿಗಳನ್ನು ಸೂಚಿಸಿದರೆ ನನ್ನ ಆತ್ಮಬಲ ವೃದ್ಧಿಯಾದೀತು ಎಂದೆನಿಸಿತು. ತಕ್ಷಣ ನೆನಪಾದವರು ಪ್ರಭಾಕರ ಜೋಶಿಯವರು. ಸ್ವಲ್ಪವೂ ಕಾಲ ವಿಳಂಬ ಮಾಡದೆ ಅವರಿವರನ್ನು ಕೇಳಿ ಜೋಶಿಯವರ ವಿಳಾಸವನ್ನು ಪತ್ತೆ ಮಾಡಿ ಒಂದು ರವಿವಾರದ ಬೆಳಗಿನ ಹೊತ್ತು ಯಾವುದೇ ಪೂರ್ವಸೂಚನೆಯಲ್ಲದೆ ನೇರವಾಗಿ ಅವರ ವಸತಿಸಂಕೀರ್ಣದ ಮೇಲ್ಮಹಡಿಯಲ್ಲಿದ್ದ ಅವರ ಮನೆಬಾಗಿಲಿಗೆ ತಲುಪಿ ಕರೆಗಂಟೆಯೊತ್ತಿದರೆ ಬಾಗಿಲು ತೆರೆದು ದರ್ಶನ ಕೊಟ್ಟಿದ್ದು ಜೋಶಿಯವರ ಶ್ರೀಮತಿಯವರು. ಮುಗಳಗೆಯ ಸ್ವಾಗತ. ನನ್ನ ಬೇಕು ಬೇಡಗಳನ್ನು ಕೇಳದೆ ಬಿಸಿ ಬಿಸಿ ಹಬೆಯಾಡುತ್ತಿದ್ದ ಕಾಫಿಯೊಂದಿಗೆ ಘಮಘಮಿಸುತ್ತಿದ್ದ ತಿಂಡಿಯ ತಟ್ಟೆ ಪ್ರತ್ಯಕ್ಷ. ಅದನ್ನು ಅವಸರವಸರವಾಗಿ ಹೀರಿ ಮುಗಿಸಿದ ಮೇಲೆಯೇ ಸ್ನಾಗೃಹದಿಂದ ಕಿವಿ ಮೂಗುಗಳನ್ನು ಒರೆಸಿಕೊಳ್ಳುತ್ತಾ ಪ್ರತ್ಯಕ್ಷರಾದರು ಜೋಶಿಯವರು. (ಅದೇಕೋ ನನಗಿಂತ ವಯಸ್ಸಿನಲ್ಲಿ ಹಲವು ವರ್ಷಗಳಷ್ಟು ಕಿರಿಯರಾದರೂ ಅವರನ್ನು ನಾನು ಇಂದಿಗೂ 'ಜೋಶಿ ಮಾಮ' ಎಂದೇ ಸಂಬೋಧಿಸುವುದು ಇದು ನಮ್ಮ ಕೊಂಕಣಿಗಳ ಒಂದು ಸ್ತುತ್ಯ ಸಂಪ್ರದಾಯ. ಮಾತ್ರವಲ್ಲದೇ ಅಂತಹ ಸಂಬೋಧನೆ ಕ್ಷಣಮಾತ್ರದಲ್ಲಿ ಇಬ್ಬರ ನಡುವೆ ಒಂತೆರನಾದ ಆತ್ಮೀಯತೆಯನ್ನು ಸೃಷ್ಟಿಸಿಬಿಡುತ್ತದೆ. ಜೋಶಿ ಕೊಂಕಣಿ ಬಲ್ಲವರು, ಕೊಂಕಣಿಗರ ಮಿತ್ರ)

ಸಂಕ್ಷಿಪ್ತ ಉಭಯಕುಶಲೋಪರಿಯ ನಂತರ ಸ್ವಲ್ಪ ತರಾತುರಿಯಲ್ಲೇ ನಾನು ತಂದಿದ್ದ ಹಸ್ತಪ್ರತಿಯನ್ನು ಅವರ ಕೈಗಳಲ್ಲಿ ಗೌರವಪೂರ್ವಕವಾಗಿ ಇಟ್ಟು ನಾನು ಬಂದಿದ್ದ ಕಾರಣವನ್ನು ತಿಳಿಸಿದೆ. ಅವರು ಹೆಚ್ಚೇನೂ ಮಾತನಾಡಲಿಲ್ಲ ಎಂದು ನೆನಪು. ನಿಂತಿದ್ದಂತೆಯೇ ಪ್ರತಿಯ ಕೆಲವು ಪುಟಗಳನ್ನು ಸಾವಕಾಶ ತಿರುವಿಹಾಕುತ್ತಾ ಆಗಾಗ ನನ್ನೆಡೆಗೆ ಹುಬ್ಬೇರಿಸುತ್ತಾ, ನೋಡುತ್ತಾ ಒಳಕಕ್ಷೆಯನ್ನು ಸೇರಿದರು. ಹೊರಬರುತ್ತಾ ಷರ್ಟನ್ನು ತೊಟ್ಟುಕೊಳ್ಳುತ್ತಿರುವಂತೆಯೇ “ನೀವು ನಿಮ್ಮ ವಾಹನವನ್ನು ತಂದಿರಬೇಕಲ್ಲ! ನಡೆಯಿರಿ ನನ್ನೊಂದಿಗೆ” ಎಂದು ಅಧಿಕಾರಯುತವಾಗಿ ಆಜ್ಞಾಪಿಸಿ ಅಕ್ಷರಶಃ ನನ್ನನ್ನು ಅನಾಮತ್ತಾಗಿ ಎಳೆದುಕೊಂಡೇ ಬಂದು ನನ್ನ ಕಾರಿನಲ್ಲಿ ಆಸೀನರಾಗಿ ಗುರುಪುರದತ್ತ ಚಲಿಸಲು ಸೂಚಿಸಿದರು. ಹದಿನೈದು ನಿಮಿಷಗಳ ನಂತರ ಮಂಗಳೂರಿನ ಹೊರವಲಯ

ದಲ್ಲಿ ನಾವು ಹೆದ್ದಾರಿಯನ್ನು ಬಿಟ್ಟು ಕೆಲವು ಗಜಗಳಷ್ಟು ಹಾದು ನಾವು ತಲುಪಿದ ಜಾಗ ನನಗೆ ಸಂಪೂರ್ಣ ಅಪರಿಚಿತ. ಅಲ್ಲಿ ಯಾರನ್ನು ಅರಸಿ ಬಂದಿರಬಹುದು ಎಂಬುದು ನನಗೆ ಊಹೆಗೂ ನಿಲುಕಲಿಲ್ಲ. ನಾವು ತಲುಪಿದ ಸ್ಥಳ ಒಂದು ಪುಟ್ಟ ಆದರೆ ಮನೋಹರವಾದ ತಪೋವನದಂತಿತ್ತು. ನಡುವೆ ಒಂದು ಕಿರಿದಾದ ಸಾಂಪ್ರದಾಯಿಕ ಮನೆ, ಮನೆಯೊಳಗೆ ಸಾಧಾರಣ ಉಡುಗೆಯಲ್ಲಿ ಆಚೀಚೆ ಕಂಡೂ ಕಾಣದಂತೆ ಹಾದು ಮಾಯವಾಗುತ್ತಿದ್ದ ಹೆಂಗಳೆಯರು. ಯಾರೋ ಬಂದಿದ್ದಾರೆಂಬ ಸದ್ದು ಕೇಳಿ ಹೊರಗಡೆ ತಲೆ ಹಾಕಿ ಹಣಕಿ ನೋಡುತ್ತಿದ್ದ ವಯೋವೃದ್ಧ ಮಹನೀಯರೊಬ್ಬರು ನಮ್ಮನ್ನು ನೋಡಿ ಅಗಲವಾಗಿ ನಕ್ಕರು. ಸ್ವಲ್ಪ ಜಾಸ್ತಿ ಕೃಷವೇ ಎನ್ನಬಹುದಾದಷ್ಟು ತೆಳ್ಳಗಿನ ಶರೀರ, ಮುಖದಲ್ಲಿ ಬಹು ಸಣ್ಣ ಬಿಳಿ ಗಡ್ಡದ ದಟ್ಟಣೆಯ ನಡುವೆಯೂ ಎದ್ದು ಕಾಣುವ ಪ್ರಶಾಂತವಾಗಿ ಮಿರುಗುವ ಕಣ್ಣುಗಳು, ದಯಾಮಯ ಮುಖಮುದ್ರೆ, ವಯಸ್ಸಿನಲ್ಲಿ ಅಂತಃಸತ್ವವನ್ನು ನಿರಾಯಾಸವಾಗಿ ಹೊತ್ತುಕೊಂಡಿರುವಂತೆ ಕಂಡುಬರುವ ಋಷಿಸದೃಶ ವ್ಯಕ್ತಿತ್ವ, ನನಗೆ ಅವರ ಮೊದಲ ನೋಟದಲ್ಲಿಯೇ ಅಮೃತವರ್ಷವಾದಂತಹ ಅನುಭವ, “ಓಹೋ, ಜೋಶಿಯವರು! ಬನ್ನಿ ಬನ್ನಿ ಯಾರನ್ನೋ ಜತೆಯಲ್ಲಿ ಕರೆದು ತಂದಿದ್ದೀರಲ್ಲ!” ಎಂದು ಸ್ವಾಗತಿಸಿದರು. “ಇವರೇ ನಮ್ಮ ಮಂದಾರ ಕೇಶವ ಭಟ್ಟರು” ಎಂದು ಅವರನ್ನು ನನಗೆ ಸೂಕ್ಷ್ಮವಾಗಿ ಪರಿಚಯಿಸಿ ನಿಮ್ಮ ಹಸ್ತಪ್ರತಿಯ ಮೇಲೆ ಇವರು ಕೈ, ಕಣ್ಣುಗಳನ್ನು ಆಡಿಸಿದರೆ ಅದಕ್ಕಿಂತ ದೊಡ್ಡ ಆಶೀರ್ವಾದವಿಲ್ಲ” ಎಂದು ಸೇರಿಸಿದರು. ಅಂಗುಲಗಳ ಅಳತೆಯಲ್ಲಿ ಸ್ವಲ್ಪ ಸಣ್ಣದೇ ಎಂದು ಕಂಡುಬರುವ ಈ ಕ್ಷೇತ್ರದೊಳಗೆ ಒಳಗಿರುವವರ ಆತ್ಮೀಯತೆ, ಆದರ, ಸತ್ಕಾರಗಳ ವೈಶಾಲ್ಯ ಎಷ್ಟು ವಿಸ್ತಾರ ಎಂದೆನಿಸಿತು. ಒಂದೂ ಮಾತನ್ನಾಡದೆ ಆವರನ್ನೇ ದಿಟ್ಟಿಸುತ್ತಾ ಕೂತೆ. ಅವರಿಬ್ಬರ ನಡುವೆ ಏನು ಮಾತುಕತೆ ನಡೆಯಿತೋ ಸುಮಾರು ಮೂರು ತಾಸುಗಳಷ್ಟು ದೀರ್ಘಕಾಲ ನನ್ನ ಹಸ್ತಪ್ರತಿಯ ಪುಟಗಳನ್ನು ತಿರುವಿ ತಿರುವಿ ಅದೇನನ್ನು ಕಂಡರೋ “ನಿಮ್ಮ ಕೃತಿ ಸುಂದರವಾಗಿ ಮೂಡಿಬಂದಿದೆ. ಮಾತ್ರವಲ್ಲ. ಇಂಥದೊಂದು ಕನ್ನಡ ಸಾಹಿತ್ಯದಲ್ಲಿ ಇಷ್ಟು ತಡವಾಗಿಯಾದರೂ ಬೆಳಕಿಗೆ ಬರುತ್ತಿದೆಯಲ್ಲ” ಎಂದು ಉದ್ದರಿಸಿದವರೇ ಹತ್ತಿರವಿದ್ದ ಒಂದು ಬಿಳಿ ಕಾಗದದ ತುಣುಕನ್ನು ಹುಡುಕಿ ಅದರ ಮೇಲೆ ಮುದ್ದಾದ ಅಕ್ಷರ ಮತ್ತು ಭಾಷೆಯಲ್ಲಿ “ಇದು ಕನ್ನಡದ ಗರ್ಭದಲ್ಲೇ ಬೆಳೆದು ಸಕಾಲದಲ್ಲಿ ಹುಟ್ಟಿದ ಔರಸ ಸಂತಾನವಾಗಿದೆ” ಎಂದು ಬರೆದುಕೊಟ್ಟೇಬಿಟ್ಟರು. ನನ್ನ ಚೌಪದಿಗಳಿಗೆ ಕೆಲವು ಚಿಕ್ಕ ಪರಿಷ್ಕಾರಗಳನ್ನು ಸೂಚಿಸಿದರು. ನನಗೆ ಈರ್ವರಲ್ಲೂ ಭಕ್ತಿ ಉಕ್ಕಿಬಂತು. ಕಾಲು ಮುಟ್ಟಿ ನಮಸ್ಕರಿಸಿ ಬೀಳ್ಕೊಂಡೆವು.

ಇದು ಜೋಶಿಯವರೊಂದಿಗೆ ನಾನು ತುಸು ಹೆಚ್ಚೇ ಎನ್ನಬಹುದಾದಷ್ಟು ಸಮಯವನ್ನು ಕಳೆದ ಎರಡನೇ ಸಂದರ್ಭ. ಮತ್ತೆ ಕೆಲ ತಿಂಗಳ ನಂತರ ನನ್ನ 'ವಿಜಯನಿ'ಯ ಬಿಡುಗಡೆಯ ಸಂದರ್ಭ. ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ನನ್ನ ಇನ್ನೋರ್ವ ಪರಮ ಮಿತ್ರರಾದ ಡಾ.ನಾ.ದಾಮೋದರ ಶೆಟ್ಟರ ಸಂಯೋಜಕತ್ವದಲ್ಲಿ ನಡೆದ ಅಪರೂಪದ

ಕಾರ್ಯಕ್ರಮ. ಅವರು ನನಗೆ ನೀಡಿದ ಸಹಾಯಹಸ್ತ ನನ್ನ ಮತ್ತು ಅವರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸಿತು.

ಅದೇ ವೇಳೆಯಲ್ಲಿ ನಾನು ಸ್ವಲ್ಪಕಾಲ ಸ್ಥಳೀಯ ಬೆಸೆಂಟ್ ವಿದ್ಯಾಶಾಲೆಯ ಆಡಳಿತ ಮಂಡಳಿಯ ಸದಸ್ಯನಾಗಿ ಕರ್ತವ್ಯನಿರತನಾಗಿದ್ದಾಗ ಮಾನ್ಯ ಜೋಶಿಯವರನ್ನು ಆಗಾಗ್ಗೆ ಭೆಟ್ಟಿಯಾದದ್ದಿದೆ. ಆಗೀಗೊಮ್ಮೆ ಪರಸ್ಪರ ಗೌರವಗಳೊಂದಿಗೆ ಕಿರು ಸಂಭಾಷಣೆಯಲ್ಲಿ ತೊಡಗಿದ್ದುದೂ ಇದೆ. ಇವೆಲ್ಲದರ ನಡುವೆ ನಾನು ಅವರಿಗೆ ತಿಳಿಯದಂತೆಯೇ ಅವರ ಹಲವು ಹಲವಾರು ಪ್ರವಚನಗಳಿಗೆ ಸಾಹಿತ್ಯ ಸಮಾರಂಭಗಳಿಗೆ, ತಾಳಮದ್ದಳೆ ಕಾಲಕ್ಷೇಪಗಳಿಗೆ ಹಾಜರಾಗಿ ಅವರ ವಿದ್ವತ್ತು, ವಾಕ್‌ಶಕ್ತಿ, ಕಲ್ಪನೆಯ ವಿಸ್ತಾರ, ತಾರ್ಕಿಕ ಶುದ್ಧತೆ, ಸಜ್ಜನಿಕೆ, ಸ್ನೇಹಶೀಲತೆ ಎಲ್ಲಾ ಸಂದರ್ಭಗಳಲ್ಲೂ ಪಾರದರ್ಶಕವಾಗಿ ಎದ್ದು ಕಾಣುವ ಪ್ರಾಮಾಣಿಕತೆ ಮತ್ತು ಇನ್ನಷ್ಟು ಸಕಾರಾತ್ಮಕ ಗುಣವಿಶೇಷಗಳನ್ನು ಹತ್ತಿರದಿಂದ ಕಂಡು ಪ್ರಭಾವಿತನಾಗಿದ್ದೇನೆ. ಅಂತಹ ಒತ್ತಡದ ಸನ್ನಿವೇಶಗಳಲ್ಲಿಯೂ ಶ್ರೀ ಜೋಶಿಯವರು ಸಭಾಂಗಣದ ಯಾವುದೋ ಒಂದು ಮೂಲೆಯಲ್ಲಿ ಕುಳಿತಿದ್ದ ನನ್ನನ್ನು ಕಂಡು ಗುರುತಿಸಿ ಕೈಯಾಡಿಸಿಯೋ ಕಣ್ಣು ಮಿಟಿಕಿಸಿಯೋ ಪರಿಚಯದ ಮುಗುಳ್ಳಗೆ ಹರಿಸುತ್ತಿದ್ದುದು ಅದೂ ಒಂದು ಮರೆಯಲಾಗದ ರಸಾನುಭವವಾಗಿ ಉಳಿದು ಬಂದಿದಿದೆ.

ಈಗ ಸುಮಾರು ಇಪ್ಪತ್ತೊಂದು ವರ್ಷಗಳ ಹಿಂದೆ ನಾನು, ನನ್ನ ವಿಶ್ರಾಂತ ಜೀವನವನ್ನು ಕಳೆಯುವ ಸಲುವಾಗಿ ಮೈಸೂರಿಗೆ ಬಂದು ಸೇರಿದೆ. ಸದಾ ಕಾರ್ಯಪ್ರವೃತ್ತ ರಾಗಿರುವ ಜೋಶಿಯವರು ಮಂಗಳೂರಿನಲ್ಲೇ ಉಳಿದುಕೊಂಡರು. ನಡುವೆ ಒಂದೆರಡು ಸಲ ನಾವು ದೂರವಾಣಿಯಲ್ಲಿ ಸಂಭಾಷಿಸಿಕೊಂಡಿದ್ದರೂ ಪ್ರತ್ಯಕ್ಷ ಭೇಟಿ ಒಂದು ಬಾರಿ ಆದುದು. ಆದರೆ ಕೆಲವು ತಿಂಗಳ ಹಿಂದೆ ಸನ್ನಿತರಾದ ಗ.ನಾ.ಭಟ್ಟರು ಮೈಸೂರಿನಲ್ಲಿ, ಸಮಾನ ಮನಸ್ಕ ಮಿತ್ರವೃಂದದ ಸಹಕಾರದಲ್ಲಿ ಶ್ರೀ ಜೋಶಿಯವರಿಗಾಗಿ ಹಮ್ಮಿಕೊಂಡಿದ್ದ 'ಜೋಶಿ ವಾಗರ್ಥ ಗೌರವ' ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಲು ನಮ್ಮಲ್ಲಿಗೆ ದಯಮಾಡಿಸಿದಾಗ ಶ್ರೀ ಜೋಶಿಯವರೊಡನೆ, ಅವರ ಮೈಸೂರಿನ ವಾಸ್ತವ್ಯಾವಧಿಯಲ್ಲಿ ಸ್ವಲ್ಪ ಸಮಯ ಕಳೆಯುವ ಇಚ್ಛೆಯಾಯಿತು. ಅವರದೋ ಬಿಡುವಿಲ್ಲದ ಕಾರ್ಯಕಲಾಪ. ಜಗಮೋಹನ ಅರಮನೆಯಲ್ಲಿ ನಡೆದ ಈ ಅತಿ ಪ್ರಸ್ತುತ ಕಾರ್ಯಕ್ರಮದಲ್ಲಿ ಊಟ- ತಿಂಡಿಯ ಸಂಧರ್ಭದಲ್ಲಿ ಅವರೊಡನೆ ಕಳೆಯಲು ಸಾಧ್ಯವಾದ ಕೆಲವೇ ಕ್ಷಣಗಳು ಮಾತ್ರ ಲಭ್ಯವಾಗಿ ತುಸು ನಿರಾಸೆಯೇ ಆಯಿತು. ಆದರೆ ಶ್ರೀ ಜೋಶಿಯವರು ಅತಿ ವಿಶಿಷ್ಟವಾದ ಕಚ್ಚಾವಸ್ತುವಿನಿಂದ ನಿರ್ಮಿತವಾದ 'ಜನ', ಸಮಾರಂಭವಾಗುತ್ತಲೇ ಅವರು ನಾನು ಕೂತಲ್ಲಿಗೆ 'ಶರವೇಗ'ದಲ್ಲಿ ಬಂದು ಯಾವುದೇ ಪೂರ್ವಸೂಚನೆಯನ್ನು ನೀಡದೆ ನನ್ನ ಸಮ್ಮತಿಗೂ ಕಾಯದೇ ನನ್ನನ್ನು ಸಭಾವೇದಿಕೆಗೆ ಕರೆದು ಅದಾಗಲೇ ವೇದಿಕೆಯನ್ನು ಅಲಂಕರಿಸಿದ್ದ ವಿದ್ವನ್ಮಣಿಗಳ ಸಾಲಿನಲ್ಲಿ ನನ್ನನ್ನು ಕೂರಿಸಿಕೊಂಡು ಸಭೆಯ ಅಂದ ಚೆಂದಗಳನ್ನು ಕಂಡು ಕೇಳಿ ಆನಂದಿಸಲು ಸಿದ್ಧವಾಗಿ ಕೇವಲ ಕಣ್ಣು ಕಿವಿಯಾಗಿ ಬಂದಿದ್ದ ನನ್ನ ತುಟಿಗಳನ್ನು ಬಿಚ್ಚಿಸಿ ಒಂದು ಪುಟ್ಟ ಭಾಷಣವನ್ನು ಹೊರಡಿಸಿಯೇ

ಬಿಟ್ಟರು. ಅಷ್ಟು ಎತ್ತರದಲ್ಲಿರುವ ಜೋಶಿಯವರು ನನ್ನಂತಹವರ ಮಟ್ಟಕ್ಕಿಳಿದು ಕೈಹಿಡಿದು ಎಳೆದು ಸೆಳೆದು ತಮಗೆ ಹತ್ತಿರವಾಗಿಸಿಕೊಳ್ಳುವ ನಿರಾಡಂಬರವಾದ ಅವರ ಯತ್ನ ಮತ್ತು ವರ್ತನೆ ಎರಡೂ ಸ್ತುತ್ಯ ಮತ್ತು ಅನುಕರಣೀಯ. ಅವರಿಗೆ ತುಂಬು ಹೃದಯದ ಧನ್ಯವಾದಗಳು.

★★★

ಈ ನನ್ನಲ್ಲಿಯ ಅನುಭವಗಳಿಗೆ ಕಿರೀಟಪ್ರಾಯವಾಗಿ ಒದಗಿ ಬಂದ ಒಂದು ಸಂದರ್ಭವನ್ನು ಸೂಕ್ಷ್ಮವಾಗಿ ತಮ್ಮ ಅವಗಾಹನೆಗೆ ತಂದು ಈ ನನ್ನ ಕಿರು ಪ್ರಯತ್ನಕ್ಕೆ ವಿರಾಮ ಹಾಡಲಿಚ್ಚಿಸುತ್ತೇನೆ. ಈಗಷ್ಟೇ ಕಳೆದುಹೋದ ದೀವಳಿಗೆ ಹಬ್ಬದ ಲಕ್ಷ್ಮೀಪೂಜೆಯ ದಿನ ಶ್ರೀ ಜೋಶಿಯವರು ಈಗ ನಮ್ಮಿಬ್ಬರ ಸಮಾನ ಮಿತ್ರರಾದ ಗ.ನಾ.ಭಟ್ಟರನ್ನು ಕೂಡಿಕೊಂಡು ಸುಮಾರು ನಡುಮಧ್ಯಾಹ್ನದ ಹೊತ್ತಿಗೆ ನಮ್ಮ ಪುಟ್ಟ ಅಪಾರ್ಟ್‌ಮೆಂಟನ್ನು ಕೇವಲ 15 ನಿಮಿಷಗಳ ದೂರವಾಣಿಯ ಮೂಲಕ ಸೂಚಿಸಿ ಪ್ರತ್ಯಕ್ಷರಾಗಿಯೇಬಿಟ್ಟರು. ನಮ್ಮ ಸಂಪ್ರದಾಯದಲ್ಲಿಯೇ ಅತಿ ಮುಖ್ಯವಾದ ಪರ್ವದಿನ ಅದು. ಬ್ರಾಹ್ಮಣರ ಜೋಡಿಯ ಪಾದಧೂಳಿ ನಮ್ಮ ಮನೆಯೊಳಗೆ ಆಗಮಿಸಿದ್ದು ನನಗೆ ಅತೀವ ಸಂತೋಷ ವನ್ನು ತಂದಿತು. ಬಾಗಿಲು ತೆರೆದರೆ ಅವರಿಬ್ಬರ ಹೆಗಲಮೇಲೆ ಕುಳಿತು ಸ್ವಯಂ ಮಹಾತಾಯಿ ಲಕ್ಷ್ಮಿಯೇ ನಮ್ಮಲ್ಲಿಗೆ ಬಂದಿದ್ದಾಳೆಂದು ಭಾವಿಸಿ ಭಾವುಕನಾದೆ, “ಎರಡು ನಿಮಿಷ ನಿಮ್ಮೊಡನೆ ಮಾತಾಡಿ ಮಧ್ಯಾಹ್ನದ ತುತ್ತಿಗೆ ಇನ್ನೊಬ್ಬರಲ್ಲಿ ಬರುವಂತೆ ಮಾತುಕೊಟ್ಟಿದ್ದೇವೆ” ಎಂದು ಆರಂಭಿಸಿದ ಜೋಶಿಯವರು ನನ್ನ ಮತ್ತು ನನ್ನ ಮಕ್ಕಳೊಡನೆ ಸರಿಸುಮಾರು ಎರಡು ತಾಸಿಗೂ ಮಿಕ್ಕಿ ಸಮಯವನ್ನು ವ್ಯಯಿಸಿ ನಮ್ಮನ್ನು ರಂಜಿಸಿ ತಾವು ಸಂತೋಷಪಟ್ಟು ಅವರ ನಂತರದ ವೇಳಾಪಟ್ಟಿಯನ್ನು ಅವಗಣಿಸಿ ನಮ್ಮಲ್ಲೇ ಮಧ್ಯಾಹ್ನದ ಪ್ರಸಾದ ಸ್ವೀಕರಿಸಿ ಕೊಟ್ಟ ಕಿಂಚಿತ್ತನ್ನು ಮಹತ್ತೆಂದು ಶ್ಲಾಘಿಸಿ ಹೊರಟು ನಿಂತಾಗ ಅನಿರ್ವಚನೀಯ ಧನ್ಯತಾಭಾವವೊಂದು ನಮ್ಮನ್ನು ಆವರಿಸಿತು. ಅಷ್ಟೂ ಸಾಲದೆಂಬಂತೆ ಹೆಬ್ಬಾಗಿಲಿನ ಹೊರಗೆ ನಿಂತು ಇನ್ನಷ್ಟು ಕಾಲ ಮಾತುಕತೆ ಮುಂದುವರಿ ಯಿತು. ಸಮಯ ಮತ್ತು ಕರ್ತವ್ಯ ಪ್ರಜ್ಞೆಗೆ ಹೆಸರಾದ ಮಿತ್ರ ಗ.ನಾ.ಭಟ್ಟರು ತೀವ್ರವಾಗಿ ಎಚ್ಚರಿಸಿ ಹೊರಡಿಸದಿದ್ದರೆ ಶ್ರೀ ಜೋಶಿಯವರು ಮರಳಿ ನಮ್ಮ ಮನೆಯನ್ನು ನುಗ್ಗುತ್ತಿದ್ದರೇನೋ!

ಒಟ್ಟಾರೆ ಶ್ರೀ ಜೋಶಿಯವರನ್ನು ಮಿತ್ರವೃಂದ, ವಿದ್ವದ್ವಲಯವು ಅಪ್ರತಿಮ ವಿದ್ವಾಂಸ, ಚಿಂತಕ, ಸಂಶೋಧಕ, ಅರ್ಥದಾರಿ, ಅಧ್ಯಾಪಕ, ಬಂಧು ಇತ್ಯಾದಿ ಅನೇಕ ವಿಶೇಷಣ ಗಳಿಂದ ಗುರುತಿಸಿದ್ದರೆ ಆ ಸಂತಸದಲ್ಲಿ ನನ್ನದೂ ಒಂದು ಕಿರುದನಿಯನ್ನು ಸಂತೋಷ ವಾಗಿ ಕೂಡಿಸುತ್ತಿದ್ದೇನೆ. ಆದರೆ ಅವರಲ್ಲಿ ನನಗೆ ಪ್ರಿಯವಾದವುಗಳ ಜತೆಗೆ ಪ್ರಾಯಶಃ ಅವುಗಳೆಲ್ಲವನ್ನೂ ಮೀರಿ ಅವರ ಸ್ನೇಹಶೀಲತೆ, ಸಜ್ಜನಿಕೆ, ವಿನಮ್ರತೆ ಮತ್ತು ಪ್ರಾಮಾಣಿಕತೆ, ಅಂತಹ ನಮ್ಮ ಜೋಶಿಯವರು ಇನ್ನೂ ನೂರ್ಕಾಲ ನಮ್ಮ ನಡುವೆ ಬದುಕಿ, ಬಾಳಿ,

ಬೆಳಗಿ ಇನ್ನಷ್ಟು ಕೀರ್ತಿವಂತರಾಗಿ ನಾವೆಲ್ಲಾ ಅವರನ್ನು 'ನಮ್ಮವರು' ಎಂದು ಎದೆ ಬೀಗಿಸಿ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಲಿ. ಅವರು ತಮ್ಮ ವೈಯಕ್ತಿಕ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ವ್ಯವಸಾಯ ಜೀವನದಲ್ಲಿ ಒಂದೊಂದು ಮೈಲಿಯನ್ನು ದಾಟಿದರೂ ನಾವೆಲ್ಲಾ ಅಲ್ಲಿ ಇದ್ದು ಅವರನ್ನು ಆದರಿಸಿ ಸತ್ಕರಿಸುವಂತಾಗಲಿ ಎಂಬುದೇ ನನ್ನ ನಿರೀಕ್ಷೆ, ಪ್ರಾರ್ಥನೆ ಮತ್ತು ಹರಕೆ.

॥ ಇತಿ ಶಂ ॥

(ಸಮಾರೋಪ ಸಮಾರಂಭದ ಭಾಷಣದ ಪರಿಷ್ಕೃತ ರೂಪ)

◆ ◆ ◆

ಅಧ್ಯಕ್ಷ ಭಾಷಣ

ನಾಡಿನ ಕಣ್ಮಣಿ - ಜೋಶಿ

ಡಾ. ಕೆ.ಎಂ. ರಾಘವ ನಂಬಿಯಾ‌ರ್

ದಿಕ್ಕಾಲಾದನವಚ್ಚಿನ್ನಾಂತ ಚಿನ್ಮಾತ್ರಮೂರ್ತಯೇ
ಸಾನುಭೂಕಮಾನಾಯ ನಮಃ ಶಾಂತಾಯ ತೇಜಸೇ
ವೇದಿಕೆಯಲ್ಲಿ ಮಂಡಿಸಿರುವ ಸನ್ಮಾನಮೂರ್ತಿಗಳಾದ ಡಾ. ಎಂ. ಪ್ರಭಾಕರ ಪ್ರಾ॥ ಸುಚೇತಾ ಜೋಶಿ ದಂಪತಿಗಳೇ, ಸಕಲ ಆದರಣೀಯ ಅತಿಥಿಗಳೇ, ಸಭೆಯಲ್ಲಿ ಮಂಡಿಸಿರುವ ಎಲ್ಲಾ ಹಿರಿಯರೇ, ವಿದ್ವನ್ಮಣಿಗಳೇ, ಯಕ್ಷಗಾನದ ಆರಾಧಕರಾದ ಸುಮನಸ್ಸುಗಳೇ, ಎಲ್ಲರಿಗೆ ವಂದನೆಗಳು.

ಯಕ್ಷಗಾನವನ್ನು ಪ್ರೀತಿಸಿದ, ಆದರಿಸಿದ ಎಲ್ಲರೂ ಹರುಷಪಡುವ ಸಂಭ್ರಮಿಸುವ ದಿನವಿದು. ಯಕ್ಷಗಾನ ರಂಗ ಸಂಭ್ರಮಿಸುವ ಗಳಿಗೆಯಿದು.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ನೆಗಳೆ ಹೊಂದಿರುವ ಮಹಾನಗರಿ ಮೈಸೂರಿನಲ್ಲಿ ಇತಿಹಾಸ ಪ್ರಸಿದ್ಧ ಜಗನ್ನೋಹನ ಅರಮನೆ ಸಭಾಂಗಣದಲ್ಲಿ ನನ್ನ ಅತ್ಯಂತ ಆತ್ಮೀಯ ಮಿತ್ರರಾದ ಡಾ. ಎಂ. ಪ್ರಭಾಕರ ಜೋಶಿ ಮತ್ತವರ ಕುಟುಂಬವನ್ನು ಸಂಮಾನಿಸುವ ಸದವಸರದ ಅಧ್ಯಕ್ಷಸ್ಥಾನ ನನ್ನದಾಗಿದೆ ಎಂಬುದು ನಿಜಕ್ಕೂ ನನ್ನ ಪಾಲಿನ ಪುಣ್ಯಫಲ ಎಂದೇ ಭಾವಿಸುವೆ.

ಎಲ್ಲಿಯ ಮಾಳ? ಎಲ್ಲಿಯ ಮೈಸೂರಿನ ಜಗನ್ನೋಹನ ಅರಮನೆ ಸಭಾಗೃಹ?

ಮಾಳದಲ್ಲಿ ಅಂದರೆ ಕಾರ್ಕಳ ತಾಲೂಕಿನ ಘಟ್ಟದ ಬುಡದ ಕೊನೆಯ ಗ್ರಾಮದಲ್ಲಿ ಜನಿಸಿದ ಪ್ರಭಾಕರ ಜೋಶಿ ಅವರನ್ನು ಕರಾವಳಿಯವರೆನ್ನದೆ, ಪ್ರಾದೇಶಿಕ ಭೇದವಿಲ್ಲದೆ, ಕರಾವಳಿಯಿಂದಲೂ, ಬೆಂಗಳೂರಿನಿಂದಲೂ, ಮೈಸೂರಿನಿಂದಲೂ ಬಂದ ವಿದ್ವಾಂಸರು, ಕಲಾಪ್ರೇಮಿಗಳು ಮನದುಂಬಿ ಗೌರವವನ್ನು ವ್ಯಕ್ತಪಡಿಸಿದ ಚಂದವನ್ನು ನೋಡುವುದೇ ಈ ಎರಡು ದಿನಗಳ ಭಾಗ್ಯ.
ಇವತ್ತು ಜೋಶಿ ದಂಪತಿ ಪಾಲಿಗೆ ಬಂದ ಬಲುದೊಡ್ಡ ಸುಕೃತವೆಂದರೆ ಅವರನ್ನು ತಮ್ಮದೇ ಊರವರು ಕೂಡಾ ಸತ್ಕರಿಸಿದರು ಎಂಬುದು. 'ಜೋಶಿ ವಾಗರ್ಥ ಗೌರವ'ದ ಎರಡು ದಿನಗಳ ಈ ಮಹತ್ತರ ಕಾರ್ಯಕ್ರಮವನ್ನು ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದವರಲ್ಲಿ ಜೋಶಿಯವರ ಹುಟ್ಟೂರಾದ ಮಾಳ, ತೆಳ್ಳಾರು ಮತ್ತು ನೆರೆಯ ಮುಂಡಾಜೆ, ಶಿಶಿಲ ಮೊದಲಾದೆಡೆಯ ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಹನೀಯರು, ಜೊತೆಗೆ ಮೈಸೂರಿನ ಸನ್ನಿತ್ರರು ಇರುವುದು - ವಿಶಿಷ್ಟ ಯೋಗ.
ಒಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ತನ್ನ ಸಾಧನೆ ಮೂಲಕ ಇಡಿಯ ರಾಜ್ಯದ ಕಣ್ಮಣಿಯಾಗುವ ಹಾಗೆ ಎತ್ತರಕ್ಕೆ ತಲುಪಿ ಎಲ್ಲಡೆ ಮಾನ ಸಂಮಾನ ಗಳಿಸುವುದಿದ್ದರೂ ತನ್ನ ಹುಟ್ಟೂರಿಗೆ ತಲುಪಿದಾಗ ತನ್ನ ಊರಿನ ಎಂದಿನ ಅವಜ್ಞೆ ಇದಿರಾಗುವುದನ್ನು ಯಾರೂ ಗಮನಿಸನಬಲ್ಲರು. ಅದೇ ಊರವರು ಆತನನ್ನು ಮನ್ನಿಸಿದಾಗ ಅತ್ಯಂತವಾದ ಆನಂದ ಸಾಧಕನಿಗಾಗುತ್ತದೆ. ಊರವರ ಕಡೆಯಿಂದ ಆಗಬಹುದಾಗಿದ್ದ ಒಂದು ಕೊರತೆಯನ್ನು ನೀಗಿಸಿದುದಕ್ಕಾಗಿ ನಾನು ಮಾಳ ಮತ್ತು ಹತ್ತಿರದ ಊರುಗಳ ಚಿತ್ಪಾವನ ಸಾಮಾಜಿಕರನ್ನು ಅವರ ಹೆಸರನ್ನು ಇಲ್ಲಿ ಸ್ಮರಿಸಲೇ ಸೀತಾರಾಮ್ ಭಟ್ ದಾಮ್ಲ, ಎಂ.ಬಿ. ಡೋಂಗ್ರೆ, ರಘುಪತಿ ತಾಮಣ್‌‌, ಡಾ. ಗೋಪಾಲ ಮರಾಠ, ಕೆ. ಶ್ರೀಕರ ಭಟ್ ಮರಾಠ, ಶ್ರೀಮತಿ ವೀಣಾ ಡೋಂಗ್ರೆ ಇನ್ನೂ ಹಲವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಡಾ.ಎಸ್.ಸುಧೀರ ಶೆಟ್ಟಿ ಮತ್ತು ನನ್ನನ್ನು ಈ ಸ್ಥಾನದಲ್ಲಿ ಕುಳ್ಳಿರಿಸಿದ ಅಪರಾಧಿ, ಕಾರ್ಯದರ್ಶಿ ವಿದ್ವಾನ್ ಗ.ನಾ. ಭಟ್ಟ ಅವರ ಸಾಹಸ ಸಣ್ಣದಲ್ಲ ಎಂಬುದನ್ನು ದಾಖಲಿಸುತ್ತೇನೆ.
ರಾಮಾಯಣದಲ್ಲಿ ಒಂದು ಮಾತು ಬರುತ್ತದೆ. ರಾಮ, ಸೀತೆ, ಲಕ್ಷ್ಮಣರು ಅಯೋಧ್ಯಾಮುಖರಾಗಿ ಬರುತ್ತಿದ್ದರೆಂದು ಹನುಮಂತ ನೀಡಿದ ವಾರ್ತೆಗೆ ಭರತನ ಪ್ರತಿಕ್ರಿಯಾ ವಾಕ್ಯವಿದು.
ಕಲ್ಯಾಣೀ ಬತ ಗಾಥೇಯಂ ಲೌಕಿಕೀ ಪ್ರತಿಭಾತಿ ಮೇ ।
ಏತಿ ಜೀವಂತಮಾನಂದೋ ನರಂ ವರ್ಷಶತಾದಪಿ ॥
“ಮನುಷ್ಯ ನೂರು ವರ್ಷ ಬದುಕಿದರೆ ಒಮ್ಮೆಯಾದರೂ ಆನಂದದ ಸಂದರ್ಭವನ್ನು ಕಾಣದಿರಲಾರ” ಎಂದು ಎಂದು ಇದರ ತಾತ್ಪರ್ಯ.
ತಮ್ಮ ಜೀವಿತದದ ಎಪ್ಪತ್ತು ವರ್ಷಗಳನ್ನು ದಾಟಿದ ವೇಳೆಗೆ ಜೋಶಿ ಅವರಿಗೆ ಈ ಉನ್ನತವಾದ ಆದರ-ಸಮ್ಮಾನ ಪ್ರಾಪ್ತವಾಗಿದೆ. ಇವರೇ ಇತರರ ಜತೆಯಲ್ಲಿ ಮುಂದೆ

ನಿಂತು ಮಾಡಿದ ಪ್ರಯತ್ನದಲ್ಲಿ ಎಷ್ಟು ಹಿರಿಯರು ಐವತ್ತು ಅರುವತ್ತು ವರ್ಷವಾಗುವುದ ರೊಳಗೆ ಇಂಥ ಗೌರವವನ್ನು ಪಡೆದಿಲ್ಲ? ಇದೂ ಗಮನಕ್ಕೆ ಬರುತ್ತದೆ. ಆದರೇನು? ಈಗಲಾದರೂ ಇದು ನಡೆಯಿತಲ್ಲ! ಕರಾವಳಿಯ ಜನರೇ ಮುಂದೆ ನಿಂತು ಇದನ್ನು ಮಾಡಿದ್ದರಿಂದ ಈ ಸಮಾರಂಭ ಮಾಳದಲ್ಲಿ, ಕಾರ್ಕಳದಲ್ಲಿ, ಮಂಗಳೂರಿನಲ್ಲಿ ಆಗುತ್ತಿದ್ದರೆ ಎಷ್ಟು ಆತ್ಮೀಯವೂ ಹೃದಯಸ್ಪರ್ಶಿಯೂ ಆಗಿರಬಹುದಿತ್ತೋ ಅದಕ್ಕೆ ಸರಿಮಿಗಿಲೆನಿಸಿದ ಸಂಭ್ರಮ ಇಲ್ಲಿ ಪ್ರಾಪ್ತವಾಗಿದೆ. ಇನ್ನು ಇದಕ್ಕೆ ಮಿಗಿಲಾದುದೇ ಆದ ಸಂಭ್ರಮ ಎಲ್ಲಿ ನಡೆದರೂ ಅದಕ್ಕಿನ್ನು ದ್ವಿತೀಯ ಸ್ಥಾನ.
ಜೋಶಿಯವರ ಸನ್ಮಾನಕ್ಕೆ ಮೈಸೂರಿನಲ್ಲಾದರೂ ಅವರ ಸ್ವಸಮುದಾಯದ ಚಿತ್ಪಾವನರೇ ಮುಂದಕ್ಕೆ ಬರಬೇಕಾಯಿತು. ಈ ಹಿಂದೆ ಕರಾವಳಿಯಲ್ಲಿ ನಡೆದ ಹಲವು ಹಿರಿಯರ ಸಂಮಾನ, ಸಂಸ್ಮರಣ ಸಮಾರಂಭಗಳಲ್ಲಿ ಅವರವರ ಜಾತೀಯ ಸಮುದಾಯ ಗಳವರೇ ಹೆಗಲುಗೊಟ್ಟಿದ್ದವರು. ನಿಜಕ್ಕಾದರೆ “ಜೋಶಿ ಅವರಂತಹ ಕಲಾಕಾರರು ಅಖಿಲ ಸಮಾಜಕ್ಕೆ ಸೇರಿದವರು. ಅವರ ಸನ್ಮಾನ ಸಾರ್ವಜನಿಕ ಪ್ರಯತ್ನದಲ್ಲಿ ಆಗಬೇಕು” ಎಂಬ ಅಭಿಪ್ರಾಯ ಆಗಲೇ ಇಲ್ಲಿಯ ಗೋಷ್ಠಿಯೊಂದರಲ್ಲಿ ಎತ್ತಿಹೇಳಲ್ಪಟ್ಟಿತು. ಆ ಮಾತು ಯಥಾರ್ಥವೇ. ಆದರೆ ಚಿತ್ಪಾವನರೂ ಇಂಥ ಕೆಲಸಕ್ಕೆ ಹೊರಡದಿದ್ದರೆ ಇನ್ನಾರನ್ನು ಕಾದುಕುಳ್ಳಿರಬೇಕು?
ಜಾತೀಯ ಸಂಘಟನೆಗಳ ವಿಚಾರದಲ್ಲಿ ನನಗೆ ಬೇರೆಯೇ ಹೇಳಲಿಕ್ಕಿದೆ. ಜಾತೀಯ ಸಂಘಟನೆಗಳು ಎಷ್ಟು ಸಾಧ್ಯವೋ ಅಷ್ಟು ಬಲಿಷ್ಠವಾಗಿ ಸರ್ವಮುಖಿಯಾಗಿ ಬೆಳೆಯಬೇಕು. ಇದರಿಂದ ಜಾತಿಯೊಳಗೆ ಭದ್ರತೆ, ವ್ಯಾವಹಾರಿಕ ಸುಗಮತೆ ಎಲ್ಲಾ ಉಂಟಾಗುತ್ತದೆ. ಆದರೆ ಆಧುನಿಕ ಭಾರತದ ಸ್ಥಿತಿಗತಿಯ ಸುಧಾರಣೆಯ ದೃಷ್ಟಿಯಲ್ಲಿ ಮಹಾರಾಷ್ಟ್ರದ ಭೂದಾನದ ಚಳವಳದ ನಾಯಕರಾಗಿದ್ದ ಕಾಕಾಸಾಹೇಬ್ ಕಾಲೇಲ್ಕರ್ ಅವರಂದಂತೆ “ವಿವಾಹವನ್ನು ಸ್ವಜಾತಿಯೊಳಗೆ ನಿಷೇಧಿಸಬೇಕು”. ಇವತ್ತು ಸರಕಾರದ ಪ್ರಯತ್ನದಿಂದ ಶಿಕ್ಷಣ, ಶೌಚ, ದಂಧೆ, ಜೀವನ ಶೈಲಿ, ಕುಟುಂಬ ಪದ್ಧತಿ ಇವುಗಳಲ್ಲಿ ಬಹಳಷ್ಟು ಏಕರೂಪತೆ, ಸಮಾನತೆ ವಿವಿಧ ಸಮುದಾಯಗಳಲ್ಲಿ ಆಗಿರುವುದರಿಂದ ಅಂತರ್ಜಾತೀಯ ವಿವಾಹದ ಶಾಸನಾತ್ಮಕ ಪ್ರಯತ್ನ ವಿಫಲವಾಗದು. ಈ ನಿಟ್ಟಿನಲ್ಲಿ ಹಿಂದೆ ಬ್ರಾಹ್ಮಣ ಮಾತ್ರವಲ್ಲ ಅಬ್ರಾಹ್ಮಣ ಗೋತ್ರಗಳು ಕೂಡಾ ಸಗೋತ್ರ ವಿವಾಹವನ್ನು ನಿಷೇಧಿಸಿ ವಂಶೀಯವಾಗಿ ಉತ್ತಮಿಕೆಯನ್ನು ಸಾಧಿಸಿದ್ದುಂಟು. ಇದು ತತ್ವಣವೇ ಆಗಬೇಕೆಂದಿಲ್ಲ. ಈ ಕಡೆಗೆ ಒಂದಿಷ್ಟು ಯೋಚನೆಯನ್ನು ಹರಿಸಿದರೂ ಭಾರತೀಯ ಪ್ರಜಾಕೋಟಿಯ ಕ್ಷೇಮ ಬಹವಾಗಿ ಸಾಧಿತವಾಗುತ್ತದೆ ಎಂಬುದು ನನ್ನ ಆಶಯ.
ಒಂದಿಷ್ಟು ವಿಷಯಾಂತರವಾದರೂ ಅಪ್ರಸ್ತುತವಾಗಲಿಲ್ಲ. ಯಾಕೆಂದರೆ ಗೋಷ್ಠಿಯೊಂದರಲ್ಲಿ ಎತ್ತಿದ ಮಾತೊಂದಕ್ಕೆ ಸಮಾಧಾನ ಸಿಗಲೆಂದು ಇಷ್ಟನ್ನು ಹೇಳಿದೆ.
ಡಾ. ಎಂ. ಪ್ರಭಾಕರ ಜೋಶಿ 'ವಾಗರ್ಥ ಗೌರವ'ದ ಬಗೆಗೆ ಒಂದಿಷ್ಟು ಹೇಳಲೇ ಬೇಕು. ನಾನು ಮತ್ತು ಜೋಶಿಯವರು ಬಾಲ್ಯಸ್ನೇಹಿತರು. ಒಂದೇ ವರ್ಷದಲ್ಲಿ

ಹುಟ್ಟಿದವರು. ಅರ್ಥಗಾರಿಕೆಯನ್ನು ಅಭ್ಯಸಿಸುವಲ್ಲಿ ನಮಗೆ ದೊರೆತ ಗರಡಿಗಳು ಸಮಾನ. ಕಾರ್ಕಳ ಶ್ರೀವೆಂಕಟರಮಣ ಯಕ್ಷಗಾನ ಕಲಾ ಸಮಿತಿ ಮತ್ತು ಶ್ರೀ ಅನಂತಶಯನ ದೇಗುಲದ ಪೌಳಿಯಲ್ಲಿ ಯಕ್ಷಗಾನ ತಾಳಮದ್ದಳೆ ಸಂಘ. ಅಲ್ಲಿಂದ ಹೊರಟ ನಮ್ಮ ಅಭಿಯಾನ ನಮ್ಮನ್ನು ಭಿನ್ನ ನೆಲೆಗಳಿಗೆ ತಲುಪಿಸಿರುವುದು ಸತ್ಯ. ಸುಮಾರು ಅರುವತ್ತು ವರ್ಷಗಳ ಸಹಚಿಂತನ, ಸಹಯಾತ್ರೆ ನಮ್ಮೊಳಗಾಗಿವೆ. ಅವರ ಇವತ್ತಿನ ನೆಲೆ ಯಾವ ಬಗೆಯದೆನ್ನುವುದು ಅವರ ವ್ಯಕ್ತಿತ್ವದ ವಿವಿಧ ಮುಖಗಳ ಮತ್ತು ಸಾಧನೆಯ ವಿವಿಧ ಮಜಲುಗಳ ವಿಶ್ಲೇಷಣೆ, ಮೌಲ್ಯಮಾಪನ ನಡೆಸಿದ ಕಳೆದೆರಡು ದಿನಗಳ ವಿಚಾರಗೋಷ್ಠಿ ಗಳಲ್ಲಿ ವ್ಯಕ್ತವಾಗಿವೆ. ಬಹುಶಃ ಈ ವರೆಗೆ ಸಾಧನೆಯ ವಿಶ್ಲೇಷಣೆ ಈ ಬಗೆಯಲ್ಲಿ ನಡೆದು ಮನ್ನಿಸಿದ ಯಕ್ಷಗಾನ ಕಲಾಕಾರನ ಸನ್ಮಾನವನ್ನು ನಾನು ಕಂಡಿಲ್ಲ.
ಅವರ ಅಭಿಯಾನದ ಒಂದು ದೊಡ್ಡ ಪ್ರಾಪ್ತಿಯೆಂದರೆ ನಾವು ಆರಾಧಿಸಿದ ಅರ್ಥದಾರಿಗಳಾದ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರು, ಹರಿದಾಸರಾದ ಮಲ್ಪೆ ಶಂಕರನಾರಾಯಣ ಸಾಮಗರು, ಮಲ್ಪೆ ಹರಿದಾಸ ರಾಮದಾಸ ಸಾಮಗರು, ಪಂಡಿತ ಪೆರ್ಲ ಕೃಷ್ಣ ಭಟ್ಟರು ಇಂತವರು ಬಯಸಿದ ಇದಿರು ಅರ್ಥಧಾರಿಯಾಗಿ ಹೋರಾಟಕ್ಕೆ ನಿಂತುದು. 'ಕಾಳಗ' ಪ್ರಸಂಗಗಳ ಅರ್ಥಗಾರಿಕೆ ಎಂದರೆ ವಿದ್ವತ್ತೆಯ ಒಂದು ಹೋರಾಟವೇ ತಾನೆ. ಇದರಲ್ಲಿ ಅವರಿಗೆ ಧನ್ಯತೆ ಇದೆ.
ಯಕ್ಷಗಾನಕ್ಕೆ ಜೋಶಿಯವರ ಕೊಡುಗೆ ಏನು ಎಂದು ಕೇಳಿದರೆ ಈ ರಂಗಕ್ಕೆ ಅರ್ಥಶಾಸ್ತ್ರ, ತತ್ವಶಾಸ್ತ್ರ ಸಹಿತ ಜ್ಞಾನದ ಹಲವು ಶಾಖೆಗಳ ಪರಿಜ್ಞಾನವನ್ನು ಆವರಣ ಭಂಗವಿಲ್ಲದೆ ನೀಡಿದ ಸಾಧನೆ ಎನ್ನಬಹುದು. ಅದು ಶೈಕ್ಷಣಿಕವಾಗಿ ಅವಲಂಬನೀಯ ಜ್ಞಾನದಾನ. ಬರಿಯ ಗಾಳಿಮಾತಲ್ಲ. ಯಕ್ಷಗಾನಕ್ಕೆ ಪರಿಷ್ಕಾರಯುತ ಭಾಷೆಯನ್ನು ನೀಡಿದವರಾಗಿಯೂ ಅವರನ್ನು ಪರಿಗಣಿಸಬೇಕು. ಎಲ್ಲಕ್ಕಿಂತ ಸದ್ಯ ರಂಗದಲ್ಲಿರುವ ಕಲಾವಿದರಲ್ಲಿ ತಾಂತ್ರಿಕವಾಗಿ ಅತ್ಯಂತ ಪರಿಪೂರ್ಣತೆ ಗಳಿಸಿರುವ ಅರ್ಥಧಾರಿ ಅವರು.
ತಾಂತ್ರಿಕವಾಗಿ ಅಂದರೆ ಏನು? ಪ್ರಸಂಗದ ಆಮೂಲಾಗ್ರ ಮತ್ತು ಕಾವ್ಯಾಲಂಕಾರ ನೆಲೆಯ ತಲಸ್ಪರ್ಶಿ ಅರಿವು, ಆಕರಗಳ ಖಚಿತ ತಿಳಿವಳಿಕೆ, ಪೀಠಿಕೆ, ಪದದ ಎತ್ತುಗಡೆ, ತನ್ನ ಮಂಡನೆ, ಪ್ರತಿವಾದ ಖಂಡನೆ, ಇದಿರಾಳಿಯನ್ನು ಪದದ ಚೌಕಟ್ಟಿಗೆ ಬದ್ಧಗೊಳಿಸು ವುದು, ಮುಂದಿನ ಪದಕ್ಕೆ ತಲುಪಿಸುವುದು, ಪ್ರಸಂಗದ ಯಾವ ಪಾತ್ರವನ್ನಾದರೂ ಸಫಲಗೊಳಿಸುವುದು, ಪ್ರದರ್ಶನವನ್ನು ಹೊತ್ತಿಗೆ ಸರಿಯಾಗಿ ಮುಗಿಸಲು ಬೇಕಾದಂತೆ ಅರ್ಥಧಾರಿಕೆಯನ್ನು ಪ್ರಸ್ವ ಅಥವಾ ದೀರ್ಘಗೊಳಿಸುವ ಛಾತಿ ಇವೆಲ್ಲಾ ತಾಂತ್ರಿಕ ಪರಿಜ್ಞಾನದ ಭಾಗಗಳು. ಇದೆಲ್ಲಾ ಸ್ಥಳೀಯ ತಾಳಮದ್ದಳೆ ಸಂಘಗಳಲ್ಲಿನ ತಾಲೀಮಿನಿಂದ ಒದಗುವಂಥವುಗಳು.
ಯಕ್ಷಗಾನಕ್ಕೆ ಇದುವರೆಗೆ ಒಂದು ವಿಶ್ವವಿದ್ಯಾಲಯವಿಲ್ಲ. ಹೀಗಿರುತ್ತಾ ನಮ್ಮಲ್ಲೇ ಕೆಲವರು ತಾವೇ ಯಾಕೆ ವಿಶ್ವವಿದ್ಯಾಲಯ ಆಗಕೂಡದು ಎಂದು ಹೊರಟರು. ಅವರಲ್ಲಿ ಸಫಲರಾದವರಲ್ಲಿ ಒಬ್ಬರು ಡಾ.ಜೋಶಿ. ಇದನ್ನು ಉದ್ದೇಶಿಸಿಯೇ ಸೇರಾಜೆ ಸೀತಾರಾಮ

ಭಟ್ಟರು “ಜೋಶಿಯವರೆಂದರೆ ಒಂದು ವಿಶ್ವಕೋಶ” ಎಂದುದು. ದಿನವಹಿ ಆಗುಹೋಗು ಗಳ ಬಗೆಗೆ ಒಬ್ಬ ಕಾದಂಬರಿಕಾರನಲ್ಲಿರಬೇಕಾದ ಸೂಕ್ಷಗ್ರಹಿಕೆ, ತರ್ಕಬದ್ಧ ವಿಶ್ಲೇಷಣೆ ಅವರಲ್ಲಿದೆ.
ಈ ಸಂದರ್ಭದಲ್ಲಿ ನಾನೊಂದು ಸ್ಪಷ್ಟಿಕರಣವನ್ನು ನೀಡಲೇಬೇಕು. ವಿಚಾರಗೋಷ್ಠಿ ಯೊಂದರಲ್ಲಿ ಇಲ್ಲಿ ನನ್ನ ಹೆಸರು ಉದ್ಧತವಾದ್ದರಿಂದ ನನಗಿದು ಅನಿವಾರ್ಯ. “ಅರ್ಥಗಾರಿಕೆಯಲ್ಲಿ ಶ್ರುತಿಪ್ರಜ್ಞೆ ಬೇಡವೆನ್ನುವವರು ಜೋಶಿ, ಅರ್ಥಗಾರಿಕೆಯಲ್ಲಿ ಭಾವುಕತೆ ಅವರಲ್ಲಿಲ್ಲ. ಹಾಗಿದ್ದರೂ ಕಳೆದ ಅರ್ಧಶತಮಾನದ ಕಾಲ ಅವರ ಶೈಲಿ ಜನಮನ್ನಣೆ ಗಳಿಸಿದೆ” ಎಂದು ಒಬ್ಬ ಉಪನ್ಯಾಸಕರು ಪ್ರತಿಪಾದಿಸಿ ಈ ಕುರಿತಾಗಿ ನನ್ನೊಂದಿಗೆ ಜೋಶಿಯವರಿಗೆ ಮತಭೇದವಿದೆ ಎಂದು ಸೂಚಿಸಿದರು. ಇದು ಹಿಂದೊಮ್ಮೆ ವಿಚಾರಗೋಷ್ಠಿಯೊಂದರಲ್ಲಿ ಜೋಶಿಯವರು ಹೇಳಿದ್ದೇನು? ನಾನು ಹೇಳಿದ್ದೇನು? ಎನ್ನುವುದರ ವಿವರವರಿಯದೆ ಬಂದ ಅಭಿಪ್ರಾಯ. ನಾನೆಲ್ಲೂ ಅರ್ಥಗಾರಿಕೆಯನ್ನು 'ಪದ'ವಾಗಿ ಆಲಿಸುತ್ತಾ ನಡೆಸಬೇಕೆಂದು ಪ್ರತಿಪಾದಿಸಿದ್ದಿಲ್ಲ. ಹಾಡುತ್ತಾ ಮುಂದಿನ ಪದದ ಎತ್ತುಗಡೆ ಮಾಡುವ ಪರಂಪರೆ ಇಲ್ಲಿತ್ತು. ಅದು ಬೇರೆ. ಭಾಗವತರು ಹಾಡಿದ ಪದದ ಗುಂಗಿನ ಮುಂದುವರಿಕೆಯಾಗಿ ಅರ್ಥಧಾರಿಯ ಕಂಠಗುಣದ ಬಳಕೆಯಾಗ ಬೇಕೆಂಬುದು “ಅರ್ಥದಲ್ಲಿ ಶ್ರುತಿ ಪ್ರಜ್ಞೆ” ಎಂಬುದರ ತಾತ್ಪರ್ಯ. ಇದರಲ್ಲಿ ನನಗೂ ಜೋಶಿ ಅವರಿಗೂ ಮತಭೇದವಿಲ್ಲ. ನಿನ್ನೆ ಮತ್ತು ಇವತ್ತು ಎರಡು ಭಿನ್ನ ವಯೋಮಾನಗಳ ಭೀಷ್ಮನ ಪಾತ್ರವನ್ನು ಜೋಶಿಯವರು ನಿರ್ವಹಿಸಿದ್ದಾರೆ. ಎರಡೂ ಪಾತ್ರಾಭಿನಯಗಳಲ್ಲಿ ಪ್ರಸಂಗದ ಪದಗಳ ಭಾವಪೂರ್ಣತೆಯೂ, ದನಿಯ ಶ್ರುತಿಬದ್ಧತೆಯೂ ಜೋಶಿಯವರ ಮಾತುಗಾರಿಕೆಯಲ್ಲಿ ಪೂರ್ಣಪ್ರಮಾಣದಲ್ಲಿ ವ್ಯಕ್ತವಾಗಿರುವುದನ್ನು ನೀವು ನೋಡಿದ್ದೀರಿ. ಇದು ಬಿಟ್ಟು ಉಪನ್ಯಾಸ, ಅರ್ಥಗಾರಿಕೆ, ಉಭಯಕುಶಲೋಪರಿ ಮಾತುಕತೆ ಎಲ್ಲಾ ಒಂದೇ ಬಗೆ ಎನ್ನುವವರು ಯಾವ ಕಾರಣಕ್ಕೇ ಆಗಲಿ ಎಷ್ಟು ವಿಜೃಂಭಿಸಿದರೂ ಅವರು ತಾಳಮದ್ದಳೆ ಕಲಾಕಾರರಾಗಿ ಸ್ಥಾಪನೆಗೊಳ್ಳರು.
ಯಕ್ಷಗಾನ ಅರ್ಥಗಾರಿಕೆಯಲ್ಲಿ ಕಲಾಕಾರ ಪ್ರತಿನಿಧಿಸಬೇಕಾದುದು ಮಾಮೂಲಿ ಮನುಷ್ಯರ ಜೀವನದ ಒಳತೋಟಿಗಳನ್ನಲ್ಲ. ಪ್ರಸಂಗದ ಕತೆಗಳಲ್ಲಿ ಚಿತ್ರಿತರಾಗಬೇಕಾದುದು ಸೂರ್ಯವಂಶದ, ಚಂದ್ರವಂಶದ ರಾಜಮನೆತನಗಳ ನಾಯಕರ ಜೀವನ. ಸೂರ್ಯವಂಶದ ರಾಜರು ಹೇಗಿದ್ದಿರಬಹುದು? ದಯವಿಟ್ಟು ಈ ಸಭಾಂಗಣದಲ್ಲಿ ನನ್ನ ಎಡಗಡೆ ಗೋಡೆಯಲ್ಲಿ ಸ್ಥಾಪಸಿರುವ ಚಿತ್ರವನ್ನೊಮ್ಮೆ ನೋಡಿರಿ. (ಅಲ್ಲಿ ಕೀರ್ತಿಶೇಷ ಜಯಚಾಮರಾಜೇಂದ್ರ ಒಡೆಯರ್ ಅವರ ಯೌವನದ ಚಿತ್ರವಿದೆ.) ಇಂಥವರು ನಮ್ಮ ಯಕ್ಷಗಾನ ಪ್ರಸಂಗಗಳ ಕಥಾನಾಯಕರು, ಕಾಳಿದಾಸ ಹೇಳಿದ್ದಾನಲ್ಲ!
ಆಕಾರಸದೃಶಃಪ್ರಜ್ಞಃ ಪ್ರಜ್ಞಯಾ ಸದೃಶಾಗಮಃ ।
ಆಗಮೈಃ ಸದೃಶಾರಂಭಃ ಆರಂಭಸದೃಶೋದಯಃ ॥
ಭವ್ಯವಾದ ಆಕಾರಕ್ಕೆ ತಕ್ಕುದಾದ ಎತ್ತರದ ಪ್ರಜ್ಞೆ, ಅದಕ್ಕೆ ತಕ್ಕ ವಿದ್ಯಾರ್ಜನೆ, ಅದಕ್ಕೆ

ಸದೃಶವಾದ ಕಾರ್ಯೋದ್ಯಮ, ಅದಕ್ಕೆ ತಕ್ಕ ಉತ್ತಮ ಫಲಪ್ರಾಪ್ತಿ-ಇದು ಸೂರ್ಯವಂಶದ ರಾಜರ ರೀತಿಯೆಂದು ಮೇಲಿನ ಶ್ಲೋಕದ ಸಾರ. ಅಂಥ ಪಾತ್ರಗಳನ್ನು ರಂಗಮಂಚದಲ್ಲಿ ನಿರೂಪಿಸುವ ಜವಾಬ್ದಾರಿ ನಮ್ಮ ತಾಳಮದ್ದಳೆಯ ಅರ್ಥಧಾರಿಗಳದು.
ಆ ಬಗೆಯ ಎತ್ತರದ ಪಾತ್ರಗಳನ್ನು ಅಭಿನಯಿಸಲು ಆ ಎತ್ತರವನ್ನು ತಮ್ಮ ಮಾತಿ ನಲ್ಲಿ ಕಾಯ್ದುಕೊಳ್ಳಬೇಕು. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳಾಗಲೀ, ಶೇಣಿಯವ ರಾಗಲೀ, ದೇರಾಜೆ ಸೀತಾರಾಮಯ್ಯನವರಾಗಲೀ, ಸಾಮಗದ್ವಯರಾಗಲೀ, ಮುಳಿಯ ಮಹಾಬಲ ಭಟ್ಟರಾಗಲೀ, ಪ್ರಭಾಕರ ಜೋಶಿಯವರಾಗಲೀ ಈ ನಿಟ್ಟಿನಲ್ಲಿ ಸಫಲರಾಗಿದ್ದಾರೆ ಎಂಬುದೇ ಇಲ್ಲಿನ ವಾಸ್ತವ.
ಜೋಶಿಯವರು ತಮ್ಮ ಬೌದ್ಧಿಕ ಸಂಪತ್ತಿಯನ್ನು ಬಳಸಿ ತಮ್ಮ ಅಧ್ಯಯನದ ಕಾಮರ್ಸ್ ವಿಭಾಗದಿಂದಾಗಲೀ, ತಮ್ಮ ಬಲಯುತವಾದ ರಾಜಕೀಯ ಅರಿವು ಆಗ್ರಹ ವನ್ನು ಬಳಸಿಕೊಂಡಾಗಲೀ, ದಾರಿ ಬದಲಿಸಿ ಸಾಗುತ್ತಿದ್ದರೆ ರಾಷ್ಟ್ರರಾಜಕಾರಣದಲ್ಲಿ ಅವರು ಒಂದು ಗಣ್ಯಸ್ಥಾನ ಹೊಂದಬಹುದಿತ್ತು. ಆದರೆ ಹಾಗಾಗದಿದ್ದುದು ಬಹುಶಃ ಯಕ್ಷಗಾನದ ಭಾಗ್ಯವೇ.
ಜೋಶಿಯವರ ವ್ಯಕ್ತಿತ್ವದ ನಾನಾ ಮುಖಗಳನ್ನು, ಸಮಾಜಕ್ಕೆ ಉಪಕಾರಿಯಾಗಿ ನಡೆದ ಬಗೆಯನ್ನು ಸಾಧಿಸಿದ ಬಹುಜನಪ್ರಿಯತೆಯನ್ನು ರಸಕರವಾಗಿ ಬಿಂಬಿಸಿದ ಅಭಿನಂದನಕಾರ ಉಜಿರೆ ಅಶೋಕ ಭಟ್ಟರಿಗೆ ಸಮಯ ಇರುತ್ತಿದ್ದರೆ ಇನ್ನಷ್ಟು ಹೇಳುವ ಅನುಭವ ಭಂಡಾರ ಅವರಲ್ಲಿತ್ತು.
ವೇದಿಕೆಯಲ್ಲಿಂದು ಮಾತನಾಡಿದ ಒಬ್ಬೊಬ್ಬರೂ ಸಮರ್ಪಿಸಿದ ಅಭಿನಂದನ ಪುಷ್ಪಗಳ ಸೌರಭವನ್ನು, ಅರ್ಥವತ್ತತೆಯನ್ನು ಪ್ರತ್ಯೇಕವಾಗಿ ಮೆಚ್ಚಿ ಹೇಳಲು ಇಲ್ಲಿ ಸಮಯವಿಲ್ಲ. ಇವರೆಲ್ಲರ ಮಾತುಗಳೂ ನನ್ನ ಮಾತುಗಳೇ ಎಂಬ ತಾದಾತ್ಯವನ್ನು ದಾಖಲಿಸುತ್ತೇನೆ.
ಒಂದು ಅಭಿನಂದನ ಸಮಾರಂಭವನ್ನು ಹೇಗೆ ಅರ್ಥಯುತವಾಗಿಯೂ, ಮನೋರಂಜಕವಾಗಿಯೂ, ಬೌದ್ಧಿಕವಾಗಿಯೂ ನಿಡುಗಾಲ ಮೆಲುಕಾಡುವ ಹಾಗೆಯೂ ನಡೆಸಬಹುದು ಎಂಬುದನ್ನು 'ಜೋಶಿ ವಾಗರ್ಥ ಗೌರವ ಸಮಾರಂಭದ ಆಯೋಜನೆ ಮೂಲಕ ವಿದ್ವಾನ್ ಗ.ನಾ. ಭಟ್ಟರು ತೋರಿಸಿಕೊಟ್ಟಿದ್ದಾರೆ. ಅವರನ್ನು ಅವರ ಬೆಂಬಲಿಗರನ್ನು ಹಾರ್ದಿಕವಾಗಿ ಅಭಿನಂದಿಸುತ್ತೆನೆ.
ಡಾ. ಪ್ರಭಾಕರ ಜೋಶಿ-ಪ್ರಾ॥ ಸುಚೇತಾ ಜೋಶಿ ದಂಪತಿಗೆ ಇನ್ನಷ್ಟು ಹೆಚ್ಚಿನದಾದ ಯಶಸ್ಸು, ಭಾಗ್ಯಗಳು ಸುದೀರ್ಘಕಾಲ ಪ್ರಾಪ್ತವಾಗಲೆಂಬ ಶುಭ ಹಾರೈಕೆಯೊಂದಿಗೆ ಸಮಸ್ತರ ಪರವಾಗಿ ಅಭಿನಂದಿಸುತ್ತಾ ಆಲಿಸಿದ ಒಬ್ಬೊಬ್ಬರಿಗೂ ತಲೆವಾಗುತ್ತಾ ವಿರಮಿಸುವೆ
-ನಮಸ್ತೇ.

◆ ◆ ◆

ನಾನು ಮೂಕನಾಗಿದ್ದೇನೆ

ಸಂಮಾನ ಸ್ವೀಕಾರ, ಕೃತಜ್ಞತಾ ಭಾಷಣ ಸಂಕ್ಷೇಪ

ಡಾ. ಎಂ. ಪ್ರಭಾಕರ ಜೋಶಿ

ಕಲಾತ್ಮ ಬಂಧುಗಳೆ,
ವಾಚಾತೀತಂ ಮನೋತೀತಂ ಭಾವಾತೀತಂ ನಿರಂಜನಂ ।
ಸರ್ವಶೂನ್ಯ ನಿರಾಕಾರಂ ನಿಶ್ಯಬ್ದಂ ಬ್ರಹ್ಮ ಉಚ್ಚತೇ ॥

(ಯಕ್ಷಗಾನ ಸಭಾಲಕ್ಷಣ)

ಯಕ್ಷಗಾನ ಸಭಾಲಕ್ಷಣದ ಈ ನುಡಿಯಂತೆ - ನಾನಿಂದು ನಿಮ್ಮ ಪ್ರೀತಿ ಅಭಿಮಾನದ ವರ್ಷಧಾರೆಯಲ್ಲಿ ಮುಳುಗಿ ಮೂಕನಾಗಿದ್ದೇನೆ. ಆದರೂ ಮಾತಾಡಲೇಬೇಕಾಗಿದೆ. ಅದು ನನ್ನ ಕರ್ತವ್ಯ. ಮಾತಿನ ಮಾಣಿಕ್ಯವಲ್ಲವಾದರೂ, ಎಸಳನ್ನಾದರೂ ಅರ್ಪಿಸ ಬೇಕಲ್ಲವೇ?

ಕಳೆದೆರಡು ದಿನಗಳಲ್ಲಿ ಇಲ್ಲಿ ಜರಗಿದ ಗೋಷ್ಠಿ, ಸಂಮಾನ, ಸಂತಸ ನನಗಿದು ವಿಸ್ಮಯ. ನನ್ನ ಸಪ್ತತಿ ಸಂಮಾನ ಮೈಸೂರಲ್ಲಾಗುತ್ತದೆ ಎಂದು ಎಂದೂ ಊಹಿಸಿದವನಲ್ಲ.

ನನ್ನ ಷಷ್ಟ್ಯಬ್ದವನ್ನು ಶಿರಸಿಯ ನೆಲಮಾವು ಮಠದಲ್ಲಿ ಪ್ರೊ. ಜಿ.ಎನ್. ಭಟ್ಟರು ಸಂಘಟಿಸಿದ್ದರು. ಇದನ್ನು ಸಂಘಟಿಸಿ ಇದಕ್ಕಾಗಿ ದುಡಿದ ಸಮಿತಿಯ ಸದಸ್ಯರು, ಕಾರ್ಯಕರ್ತರು ಶುದ್ಧವಾದ ಪ್ರೀತಿ ಅಭಿಮಾನಗಳಿಂದ ಇದನ್ನು ಮಾಡಿದ್ದಾರೆ. ನನ್ನಿಂದ ಯಾವುದೇ ಪ್ರಯೋಜನ ಅವರಿಗಿಲ್ಲ. ನನಗವರು ಋಣಿಗಳೂ ಅಲ್ಲ. ಕೇವಲ ಪ್ರೀತಿ. ಸಾಂಸ್ಕೃತಿಕ ಕ್ಷೇತ್ರದ ದುಡಿಮೆಗೆ, ಕೇಶಕ್ಕೆ, ಸಾರ್ಥಕ್ಯ ಒದಗುವುದು ಇಂತಹ ಕ್ಷಣಗಳಲ್ಲಿ. ಮನ್ನಣೆಯ ವಿಷಯದಲ್ಲಿ ನಾನು ಅದೃಷ್ಟಶಾಲಿಯೇ, ಅರ್ಹತೆ ಪಾಂಡಿತ್ಯಗಳನ್ನು ಮೀರಿದ ಮಾನ್ಯತೆಯನ್ನು ನಾನು ಗಳಿಸಿದ್ದೇನೆ.
ಮಿತ್ರರಾದ ವಿ ಗ.ನಾ. ಭಟ್ಟರು, ಸೀತಾರಾಮ ದಾಮ್ಲಯವರು, ಬಾಲ್ಯಮಿತ್ರ ಬಾಲಚಂದ್ರ ಡೋಂಗ್ರೆಯವರು, ಮತ್ತವರ ಸಹಕಾರಿಗಳು ಮಾಡಿರುವ ಸಿದ್ಧತೆ, ಸಂಘಟನೆ, ನೀಡಿದ ಮಾನ ಸಂಮಾನ ಆತಿಥ್ಯಗಳಿಗೆ ನಾನೇನು ಕೊಡಬಲ್ಲೆ, ಹತ್ತು ಬೆರಳಿನ ಕಾಣಿಕೆ – ನಮಸ್ಕಾರ ಮಾತ್ರ. ಮೈಸೂರಿನ ಜಗಮೋಹನ ಅರಮನೆಯಲ್ಲಿ ಕಲಾಸಂಪದದ ಬಳಿ ಈ ಸಮಾರಂಭ ನಡೆದಿದೆ. ಮೈಸೂರು ಮಹಾರಾಜ ಪರಂಪರೆ ಸಂಸ್ಕೃತಿ ಕ್ಷೇತ್ರಕ್ಕೆ ನೀಡಿದ ಪೋಷಣೆ ಅಸಾಧಾರಣವಾದುದು. ಯಕ್ಷಗಾನದ ಮಹಾಕವಿ ಭಾಗವತ ನಂಜುಂಡ ಕವಿ, ಹಲವು ಪ್ರಸಂಗಗಳ ಕವಿ ಅಳಿಯ ಲಿಂಗರಾಜರು ಮೈಸೂರಿನವರು. ಶ್ರೀಕ್ಷೇತ್ರ ಧರ್ಮಸ್ಥಳದ ಯಕ್ಷಗಾನ ಮೇಳವು ಕ್ರಿ.ಶ. 1800ರ ಸುಮಾರಿಗೆ ಇಲ್ಲಿ ಬಂದು ದಶಕಗಳ ಕಾಲ ನೆಲೆಯಾಗಿದ್ದುದು ಪ್ರಸಿದ್ಧ ವಿಚಾರ. ಶ್ರೀ ಚಾಮುಂಡೇಶ್ವರಿಯ ಈ ಊರಿನಲ್ಲಿ, ಅನೇಕ ಯಕ್ಷಗಾನ ಕಲಾವಿದರು, ನನ್ನ ಬಂಧುಮಿತ್ರರು ನೆಲೆಸಿದ್ದಾರೆ. ನಂಜುಂಡ ಕವಿಯ ವೃಷಬೇಂದ್ರ ವಿಲಾಸವನ್ನು ಪ್ರದರ್ಶನಕ್ಕೆ ಅಳವಡಿಸಿ ನಿರ್ದೇಶಿಸುವ ಒಂದು ಅವಕಾಶ ಕೆಲವು ವರ್ಷಗಳ ಹಿಂದೆ ಒದಗಿದುದನ್ನು (ಜೆ.ಎಸ್.ಎಸ್. ಸಂಸ್ಥೆಯ ಮೂಲಕ), ಹಲವು ಬಾರಿ ಮೈಸೂರಿಗೆ ಬಂದು ಕಾರ್ಯಕ್ರಮಗಳನ್ನು ನೀಡಿರುವುದನ್ನೂ ಸ್ಮರಿಸುತ್ತೇನೆ. ನನಗೆ ಭಾರತೀಯ ತತ್ವಶಾಸ್ತ್ರದಲ್ಲಿ ಆಸಕ್ತಿ ಮೂಡಲು ಕಾರಣವಾದ ಗ್ರಂಥ “ಹಿಂದೂದರ್ಶನ ಸಾರ'ದ ಲೇಖಕರಾದ ಪಂಡಿತರತ್ನಂ ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರು ಮೈಸೂರಿನವರೆಂಬುದು ಉಲ್ಲೇಖನೀಯ. ಜಗದ್ವಿಖ್ಯಾತ ವಿದ್ಯಾಕೇಂದ್ರ ಮೈಸೂರು ವಿಶ್ವವಿದ್ಯಾಲಯವಿರುವ, ಸಾಹಿತಿ ಕಲಾವಿದರು ತುಂಬಿರುವ ಈ ನೆಲೆಯಲ್ಲಿ ಸಂಮಾನಗೊಳ್ಳುವುದು ದೊಡ್ಡ ಗೌರವ.
ಯಾರಿಗೆಲ್ಲ ಕೃತಜ್ಞತೆ ಹೇಳಲಿ? ಬೆಳಗಾರ ನಾನೆದ್ದು ಯಾರಾರ ನೆನೆಯಲಿ? ಎಂದು ಜನಪದ ಕವಿ ಹಾಡಿದಂತೆ ನನ್ನ ಕಲಾ ಸಾಹಿತ್ಯಯಾನದಲ್ಲಿ ಪ್ರೇರಣೆ, ಬೆಂಬಲ, ಪ್ರೋತ್ಸಾಹ ನೀಡಿದವರು ಅಸಂಖ್ಯ. ಎಲ್ಲರಿಗೆ ನನ್ನ ಹೃದಯ ವಂದನೆ.
ನನ್ನ ಊರು ಕಾರ್ಕಳ ತಾಲೂಕಿನ ಮಾಳ, ಪಶ್ಚಿಮ ಘಟ್ಟಕ್ಕೆ ತಾಗಿದ ತಾಲೂಕಿನ ಕೊನೆಯ ಗ್ರಾಮದ ಕೊನೆಯ ಮನೆ ನಮ್ಮದು. ಹಿರಿಯರಿಂದ ಬಂದ ಚಿಕ್ಕ ಕೃಷಿ. ಪ್ರಶಾಂತ ಪರಿಸರ. ಹಲವು ಅನುಕೂಲ ಪ್ರತಿಕೂಲಗಳನ್ನು ಹೊಂದಿ ಬೆಳೆದವನು

ನಾನು. ನನ್ನ ತಂದೆ ನಾರಾಯಣ ಜೋಶಿಯವರು ಸಂಸ್ಕೃತ, ಮರಾಠಿ ವಿದ್ವಾಂಸರು. ಅಮ್ಮ ಲಕ್ಷ್ಮೀಬಾಯಿ (ಚಂದ್ರಾವತಿ) ಓರ್ವ ಅದ್ಭುತ ಮಹಿಳೆ. ಒಂದು ಅಕ್ಷರ ಬರೆಯುವಷ್ಟು ತಿಳಿಯದ, ಅತ್ಯಂತ ವಿದ್ಯಾವತಿಯಾಗಿ ಬಾಳಿದ ತ್ಯಾಗ-ದುಡಿಮೆಗಳ ಮೂರ್ತಿ. ನನ್ನ ಅಜ್ಜ (ಮಾತಾಮಹ) ಅನಿರುದ್ಧ ಭಟ್ಟರು ವಿಖ್ಯಾತ ಮದ್ದಳೆಗಾರರು, ಗುರು, ಅಣ್ಣಂದಿರು ಮೃದಂಗ ಮದ್ದಳೆ ವಾದಕರು. ಊರಲ್ಲಿದ್ದ ಹಿರಿಯ ಸಮರ್ಥ ಕಲಾವಿದರು, ಶ್ರೀ ಪರಶುರಾಮ ಯಕ್ಷಗಾನ ಸಂಘ ಇವುಗಳಿಂದ ಯಕ್ಷಗಾನದ ಸಮೃದ್ಧ ವಾತಾವರಣವಿತ್ತು. ನಾನು ಕಲಿತ ಪ್ರಾಥಮಿಕ ಶಾಲೆ - ಶ್ರೀ ಗುರುಕುಲ ಶಾಲೆ ಮಾಳ, ಶ್ರೀ ಪರಶುರಾಮ ದೇವಸ್ಥಾನದ ಸಾಂಸ್ಕೃತಿಕ ವಾತಾವರಣ ಈ ಎಲ್ಲದರ ಗಾಢವಾದ ಪ್ರಭಾವದಲ್ಲಿ ಬೆಳದು, ಮುಂದೆ ಉಜಿರೆ, ಕಾರ್ಕಳ, ಧಾರವಾಡಗಳಲ್ಲಿ ಕಲಿತು, ವಿವಿಧ ಪ್ರಭಾವಗಳಿಗೆ ಒಳಗಾಗಿ ಬೆಳೆದವನು. ಕಾರ್ಕಳದ ಶ್ರೀ ಅನಂತಶಯನ ಯಕ್ಷಗಾನ ಸಂಘ, ಶ್ರೀ ವೆಂಕಟರಮಣ ಯಕ್ಷಗಾನ ಕಲಾ ಸಮಿತಿ ಇವು ನನ್ನ ಅರ್ಥಗಾರಿಕೆಗೆ ಪ್ರಧಾನ ವೇದಿಕೆಗಳಾದವು. ಮುಂದೆ ಮಂಗಳೂರಿನಲ್ಲಿ ನೆಲೆಯಾದಾಗ ವಿಸ್ತಾರವಾದ ಸಂಪರ್ಕ. ಮಂಗಳೂರಿನಂತಹ ಅನುಕೂಲಕರ ಕೇಂದ್ರದಲ್ಲಿ ನನಗೆ ನೆಮ್ಮದಿಯ ಉದ್ಯೋಗವಿತ್ತ ಸಂಸ್ಥೆ ಬೆಸೆಂಟ್ ವಿದ್ಯಾಸಂಸ್ಥೆ. ಇವರೆಲ್ಲರಿಗೆ ನಾನು ಸದಾ ಋಣಿ.
ಮುಂದೆ ವೈಯಕ್ತಿಕ ಮತ್ತು ಸಾಂಸ್ಥಿಕವಾದ ನೆಲೆಗಳಲ್ಲಿ ನನ್ನ ವಿವಿಧ ಆಸಕ್ತಿಗಳು ಸಾಗಿದವು. ಅಸಂಖ್ಯ ಮಿತ್ರರು, ಅಭಿಮಾನಿಗಳು, ಪ್ರೋತ್ಸಾಹಕರು ನನ್ನನ್ನು ಬೆಳೆಸಿದರು. ನಾಡಿನಾದ್ಯಂತ, ಪ್ರಾಂತ, ಪರಪ್ರಾಂತಗಳಲ್ಲಿ, ವಿದೇಶಗಳಲ್ಲಿ ನಾನು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ಸಂಘ ಸಂಸ್ಥೆಗಳಲ್ಲಿ ಕಾರ್ಯಕರ್ತನಾಗಿ, ಸಂಘಟಕನಾಗಿ, ಪದಾಧಿಕಾರಿ ಯಾಗುವ ಅವಕಾಶ ಸಿಕ್ಕಿತು. ನಾಡಿನ ಅನೇಕ ಧೀಮಂತರ, ಶ್ರೇಷ್ಠರ, ಸಾಧಕರ ಒಡನಾಟ ದೊರಕಿತು. ವಿಸ್ತಾರವಾದ ಸಂಚಾರ ಒದಗಿತು.
ನನ್ನ ಅರ್ಥಗಾರಿಕೆಯ ಬಗೆಗೆ ನಾನು ಹೆಚ್ಚೇನೂ ಹೇಳಬಯಸುವುದಿಲ್ಲ. ಮಹಾನ್ ಕಲಾವಿದರಾದ ಸಾಮಗರು, ಶೇಣಿಯವರು, ದೇರಾಜೆ – ಹೀಗೆ ಅನೇಕರ ಸಹಕಲಾವಿದ ನಾಗಿ ಬೆಳೆದದ್ದು ಅಲಭ್ಯ ಯೋಗ, ನಮ್ಮಂತಹವರ ಕಾಲುಗಳು ಅಂತಹವರ ಹೆಗಲ ಮೇಲೆ ಇವೆ. ಆ ದೊಡ್ಡ ಪರಂಪರೆಗೆ, ಜೊತೆಗೆ ನನ್ನೆಲ್ಲ ಹಿರಿ, ಕಿರಿಯ ಸಹಕಲಾವಿದರಿಗೆ, ಬಂಧು ಮಿತ್ರರಿಗೆ ತಲೆಬಾಗುತ್ತೇನೆ.
ಕರಾವಳಿ, ಮಲೆನಾಡುಗಳ ಎಷ್ಟೆಷ್ಟೋ ಕಡೆ, ಅನ್ನಾನ್ಯ ಪ್ರದೇಶಗಳಲ್ಲಿ ಜನರಿತ್ತ ಆಹ್ವಾನ, ಮನ್ನಣೆ, ಪ್ರೋತ್ಸಾಹ, ಪ್ರೀತಿ, ಆತಿಥ್ಯ ಅದೆಂತಹುದು? ವರ್ಣನೆಗೆ ಮೀರಿದ್ದು, ಆಯೆಲ್ಲ ವ್ಯಕ್ತಿ, ಸಂಸ್ಥೆ, ವೇದಿಕೆಗಳಿಗೆ ಮಣಿಯುತ್ತೇನೆ. ಅವರೆಲ್ಲರ ಋಣ ತೀರಿಸಲಾರೆ. ನನ್ನಿಂದಾಗುವಷ್ಟು ಸಾಂಸ್ಕೃತಿಕ ಕಾರ್ಯವನ್ನು ಮುಂದುವರಿಸುವುದೇ ಸಂದಾಯದ ದಾರಿ ಎಂದು ಭಾವಿಸುತ್ತೇನೆ.
ನನ್ನ ವೈಯಕ್ತಿಕ, ಸಾಂಸ್ಕೃತಿಕ ಯತ್ನ ಯಶಸ್ಸುಗಳಲ್ಲಿ ಬಲು ದೊಡ್ಡ ಪಾಲು ನನ್ನ ಮನೆಯವರದು. ನನ್ನ ಕುಟುಂಬ, ಬಂಧುವರ್ಗ, ಮುಖ್ಯವಾಗಿ ನನ್ನ ಮನೆಯವಳು

ಶ್ರೀಮತಿ ಸುಚೇತಾ ಜೋಶಿ ನನ್ನನ್ನು ಪ್ರೋತ್ಸಾಹಿಸಿ, ಸಹಿಸಿಕೊಂಡು ಬೆಂಬಲ ಮಾರ್ಗದರ್ಶನ ನೀಡಿ ಹೀಗಿರುವಂತೆ ಬೆಳೆಸಿದ್ದು ಅವಳೇ. ಉದ್ಯೋಗ, ಸಂಸಾರಭಾರ ಗಳನ್ನು ಹೊತ್ತು ನನಗಾವ ಶ್ರಮವೂ ಇಲ್ಲದಂತೆ ನಿರ್ವಹಿಸಿದ್ದಾಳೆ. ನನ್ನ ಮಕ್ಕಳು (ಶ್ವೇತಾ ಸೂರ್ಯನಾರಾಯಣ, ಸ್ವಾತಿ ಕಾರ್ತಿಕ ಭಟ್) ತಾವೇ ಚೆನ್ನಾಗಿ ಕಲಿತು ಮುಂದೆ ಬಂದು ಯಶಸ್ವಿಗಳಾಗಿದ್ದಾರೆ. ನನಗೆ ಅವರು ಯಾವ ದೊಡ್ಡ ಭಾರ, ಕಷ್ಟಗಳನ್ನು ನೀಡಲಿಲ್ಲ. ಎಲ್ಲವೂ ಸಲೀಸು.
ಯಕ್ಷಗಾನವು ವಿವಿಧ ರೂಪಗಳಲ್ಲಿ ಹಬ್ಬುತ್ತಿದೆ. ಪ್ರೋತ್ಸಾಹವೂ ಉಬ್ಬರದಲ್ಲಿದೆ ಎನ್ನಬಹುದು. ಈ ರಂಗದಲ್ಲಿ ದ್ವಿಮುಖ ಚಲನೆಯಿದ್ದು ಜ್ಞಾನ, ಪ್ರತಿಭೆ, ಸೂಕ್ಷ್ಮ, ಸೃಜನಶೀಲತೆಗಳು ತುಂಬಿವೆ. ಜೊತೆಗೆ ವಿಚಲನೆ, ವಿರೂಪ, ವಿಕಾರಗಳು ಹಬ್ಬಿವೆ. ಯಕ್ಷಗಾನದ ಉಳಿವಿಗೆ, ಸಂರಕ್ಷಣಾ ವಿಸ್ತರಣ ವಿಕಸನಗಳಿಗೆ ದೊಡ್ಡ ಪ್ರಮಾಣದ, ವ್ಯವಸ್ಥಿತವಾದ ಅಕಡೆಮಿಕ್ ಚಿಂತನೆಗಳ ಯತ್ನಗಳು ಬೇಕು. ವಿಚಾರಪೂರ್ಣವಾದ ಆರ್ಥಿಕ ಪೋಷಣೆ ಬೇಕು. ಗಟ್ಟಿಯಾದ ಒಂದು ವಿಮರ್ಶಾ ವಿಧಾನ-ಪರಂಪರೆ, ಸಶಕ್ತವಾದ ಹವ್ಯಾಸಿ ಚಳವಳಿ, ಸತತ ಕ್ರಿಯಾಶೀಲವಾದ ಪ್ರಜ್ಞಾವಂತ ಪೋಷಕ ವರ್ಗ ಇವೆಲ್ಲ ಅಗತ್ಯ. ಅವು ಬೆಳೆಯಲು ನಾವೆಲ್ಲ ಶ್ರಮಿಸೋಣ.
ಈ ಎರಡು ದಿನಗಳಲ್ಲಿ ಈ ಸಮಾರಂಭದಲ್ಲಿ ಭಾಗಿಗಳಾದ ಹಿರಿ ಕಿರಿಯ ಮಿತ್ರರು ನನ್ನ ಕುರಿತು ತುಂಬ ಉದಾರವಾದ ಪ್ರಶಂಸೆಗಳನ್ನು ನೀಡಿದ್ದಾರೆ. ಅದು ಅವರ ಹೃದಯವೈಶಾಲ್ಯದ ಫಲಿತ. ಅವರೆಲ್ಲರಿಗೆ ನಿಮ್ಮಲ್ಲರಿಗೆ ವಾಗರ್ಥರೂಪಿಗಳಾದ ಶಿವ ಶಿವೆಯರ ಅನುಗ್ರಹವಿರಲಿ.
ಮತ್ತೊಮ್ಮೆ ಎಲ್ಲರಿಗೆ ಪ್ರಣತಿಗಳು.

ವಾಗರ್ಥಾವಿವ ಸಂಪ್ರಕ್ತ ವಾಗರ್ಥ ಪ್ರತಿಪತ್ತಯೇ
ಜಗತಃ ಪಿತ‌ವಂದೇ ಪಾರ್ವತೀಪರಮೇಶ್ವರ್

ಯಾ ದೇವಿ ಸರ್ವಭೂತೇಷು ಕಲಾರೂಪೇಣ ಸಂಸ್ಥಿತಾ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

◆ ◆ ◆

ಅತಿಥಿಗಳ ಶುಭಾಶಂಸನಗಳು

ಪ್ರಾಚೀನತೆಯ ಸೃಜನಶೀಲ ವ್ಯಾಖ್ಯಾನ

ಕೆ.ವಿ. ಅಕ್ಷರ, ಹೆಗ್ಗೋಡು

...ನಮ್ಮ ಪುರಾಣಗಳನ್ನು ಪ್ರಾಚೀನ ಸಾಂಸ್ಕೃತಿಕ ಸಂಪ ನ್ನು ನಾವು ನಮ್ಮ ಕಾಲದಲ್ಲಿ ಅರ್ಥ ಮಾಡಿಕೊಳ್ಳುವುದು ಹೇಗೆ? ಪುನಃ ಸೃಜನ ಗೊಳಿಸುವುದು ಹೇಗೆ? ಎಂಬುದು ನನ್ನ ಆಸಕ್ತಿಯ ವಿಷಯಗಳಲ್ಲಿ ಒಂದು. ಯಕ್ಷಗಾನ ತಾಳಮದ್ದಳೆ ಪ್ರಕಾರವನ್ನು ಈ ದೃಷ್ಟಿಯಿಂದ ನೋಡಿದಾಗ ನನಗೆ ಬಹಳ ಆಶಾದಾಯಕವಾದ, ಕುತೂಹಲಕರವಾದ ಒಂದು ಮಾದರಿಯಾಗಿ ಕಂಡಿದೆ. ನನ್ನ ನಿರೀಕ್ಷೆ ಮೀರಿ ನಾನದರಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ.

ಈ ಪ್ರಕಾರದಲ್ಲಿ ಬಹುಕಾಲದಿಂದ ಪ್ರವೃತ್ತರಾಗಿರುವ ವಿಶಿಷ್ಟ ಪ್ರತಿಭೆ, ಪಾಂಡಿತ್ಯಗಳ ಹಿರಿಯ ಅರ್ಥದಾರಿ ಜೋಶಿಯವರು ನಮ್ಮ ನೀನಾಸಂನ ಓರ್ವ ಆಪ್ತರು, ಸಂಪನ್ಮೂಲ ವ್ಯಕ್ತಿ ಎಂಬುದು ಗೌರವದ ವಿಷಯ. ಅವರ 'ವಾಗರ್ಥ ಗೌರವ'ದಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಖುಷಿ ಕೊಡುವ ಸಂಗತಿಯಾಗಿದೆ. ...

ಒಡನಾಟದ ಗೌರವ

ಪ್ರೊ. ಲೀಲಾವತಿ ಎಸ್. ರಾವ್

... ಡಾ. ಜೋಶಿಯವರು ನನಗೆ ದೀರ್ಘ ಕಾಲದ ಆತ್ಮೀಯ ಒಡನಾಡಿಗಳು, ನಾನು ಸುರತ್ಕಲ್ಲಲ್ಲಿ ಇದ್ದಾಗ ನಾವು ಏರ್ಪಡಿಸಿದ ತಾಳಮದ್ದಳೆಗಳಲ್ಲಿ ಶೇಣಿಯವರು, ಜೋಶಿಯವರು, ಕುಂಬಳೆ ಸುಂದರ ರಾಯರು ಮೊದಲಾದವರೆಲ್ಲ ಬರುತ್ತಿದ್ದರು. ಆ ತಾಳಮದ್ದಳೆಗಳಲ್ಲಿ ಅವರು ನೀಡುತ್ತಿದ್ದ ಕಲಾನುಭವ ಅಸಾಮಾನ್ಯ ವಾದುದು. ಜೋಶಿಯವರ ತತ್ವಶಾಸ್ತ್ರ ಉಪನ್ಯಾಸಗಳು, ಖಾಸಗಿ ಚರ್ಚೆಗಳು ಎಲ್ಲವೂ ವಿಶಿಷ್ಟ, ವಿದ್ವತ್ತೂರ್ಣ, ಸ್ವಾರಸ್ಯಕರವಾಗಿರು ತ್ತಿದ್ದವು. ನಮ್ಮ ಮನೆಗಳ ಮಟ್ಟದಲ್ಲಿ ನಮ್ಮ ಸ್ನೇಹ ಉಳಿದು ಬೆಳೆದು ಬಂದಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ...

ಜೋಶಿಯವರ ಸಾಧನೆಗಳು ವಿಶೇಷವಾದವು

ಡಾ. ಸುಧೀರ ಶೆಟ್ಟಿ, ಮೈಸೂರು

... ನಮ್ಮ ಊರಿನ ಓರ್ವ ಮಹಾನ್ ಕಲಾವಿದ ರಾದ ಡಾ. ಜೋಶಿ ಅವರ ಗೌರವ ಅಭಿನಂದನೆ ಯಲ್ಲಿ ಪಾಲ್ಗೊಳ್ಳುವುದು ನಮಗೂ ಗೌರವದ ಅವಕಾಶ, ಅವರ ಜ್ಞಾನ, ಸಾಧನೆಗಳು ವಿಶೇಷ ವಾದವು. ...

ನಾಡಿನ ಹೆಮ್ಮೆ

ಎಸ್. ಪ್ರದೀಪಕುಮಾರ್ ಕಲ್ಕೂರ
ಅಧ್ಯಕ್ಷರು
ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಮತ್ತು ಕಲಾಪ್ರತಿಷ್ಠಾನ, ಮಂಗಳೂರು

... ಹಿರಿಯ ಆಪ್ತರಾದ ಡಾ.ಎಂ.ಪ್ರಭಾಕರ ಜೋಶಿಯವರು ನನಗೆ ಹಲವು ರೀತಿಯಲ್ಲಿ ಆತ್ಮೀಯರು; ಕುಟುಂಬ ಮಿತ್ರರು; ನನ್ನ ತಂದೆ ಯವರ ಶಿಷ್ಯ. ಹಲವು ಸಾಮಾಜಿಕ ಕಾರ್ಯಗಳಲ್ಲಿ ನಮ್ಮ ಸಂಸ್ಥೆಗಳಾದ- ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನಗಳಿಗೆ ಇತರ ಹಲವು ಸತ್ಕಾರ್ಯಗಳಿಗೆ ಅವರು ಸದಾ ಸಹಕಾರಿಯಾಗಿ ನಡೆದುಕೊಂಡಿದ್ದಾರೆ.
ಹಲವು ವಿಷಯಗಳಲ್ಲಿ ವಿದ್ವಾಂಸರಾದ ಜೋಶಿ ಓರ್ವ ಅಸಾಮಾನ್ಯ ಪ್ರತಿಭಾಶಾಲಿ. ಅವರ ಅರ್ಥಗಾರಿಕೆ, ಭಾಷಣಗಳು, ಬರಹಗಳು ಎಲ್ಲವೂ ವಿಶಿಷ್ಟ, ಅಚ್ಚುಕಟ್ಟು, ಮೊನಚು. ತತ್ವಶಾಸ್ತ್ರದಿಂದ ತೊಡಗಿ ಪ್ರಸ್ತುತ ರಾಜಕೀಯದವರೆಗೆ, ಸಂಘಟನೆಯಿಂದ ನಿತ್ಯಜೀವನದ ತನಕ ಅವರ ಜತೆ ಮಾತನಾಡುವುದು ಒಂದು ವಿಶೇಷ ಅನುಭವ.

ಕರೆದಾಗಲೆಲ್ಲಾ ನಮ್ಮ ಜತೆ ಇದ್ದು ಸಹಕರಿಸಿದ್ದಾರೆ. ಸಮಾರಂಭ, ಸಂಘಟನೆ ಯೋಜನೆ ತಯಾರಿ, ಮನವಿ, ಸಂಪರ್ಕ- ಹೀಗೆ ಯಾವುದೇ ಕೆಲಸವಿರಲಿ ಸಣ್ಣದು ದೊಡ್ಡದೆನ್ನದೆ ಯಾವುದಕ್ಕೂ ಸಿದ್ದರು. ಅವರ ನಡೆ-ನುಡಿ ನೇರ, ಅಭಿಪ್ರಾಯಗಳು. ಕೆಲವೊಮ್ಮೆ ಕಟು ಅನ್ನುವಷ್ಟು, ಆದರೆ ಅಷ್ಟೇ ಸರಸಪ್ರಿಯರು, ಸಹಕಾರಿಗಳು.

ಯಕ್ಷಗಾನ ಸಾಹಿತ್ಯದ ಬೇರೆ ಬೇರೆ ಮಗ್ಗುಲುಗಳಲ್ಲಿ ಅರ್ಥಗಾರಿಕೆ, ವಿಮರ್ಶೆ, ಸಂಶೋಧನೆ, ಸಂಪನ್ಮೂಲಗಳಲ್ಲಿ ಇವರ ಮಟ್ಟದ ಇನ್ನೊಬ್ಬರು ಇಲ್ಲ ಎಂದೇ ಹೇಳಬಹುದು. ಓರ್ವ ಸಾಹಿತಿಯಾಗಿ, ಕಲಾವಿದನಾಗಿ ಎರಡೂ ನೆಲೆಗಳಲ್ಲಿ ಜೋಶಿಯವರು ಉನ್ನತೋನ್ನತ ಗೌರವಕ್ಕೆ ಅರ್ಹರು. ***

ಬಾಲ್ಯದ ಗೆಳೆಯನಿಗೆ ಗೌರವ

ಎಂ. ಬಾಲಚಂದ್ರ ಡೋಂಗ್ರೆ
ಜೋಶಿ ನನ್ನ ಬಾಲ್ಯಸ್ನೇಹಿತರು, ಬಂಧುಗಳು ಎಂಬುದು ನನಗೆ ಗೌರವದ ವಿಷಯ. ಅವರ - ನಮ್ಮ ಮನೆಗಳು ಬಹಳ ಹತ್ತಿರ. ನಾವು ಮಾಳ ಗುರುಕುಲದ ಶಾಲೆಯಲ್ಲಿ ಒಟ್ಟಿಗೆ ಕಲಿತವರು. ನಮ್ಮ ಮನೆತನಗಳಿಗೂ ನಿಕಟ ಬಾಂಧವ್ಯವಿತ್ತು. ಅವರ ತಂದೆ ನಾರಾಯಣ ಜೋಶಿ (ಬಾಬು ಜೋಶಿ) ಮತ್ತು ನನ್ನ ತಂದೆ ರಾಮಚಂದ್ರ ಜೋಶಿ ಅವರ ಮಾತುಕತೆಗಳ ಸ್ವಾರಸ್ಯ ಈಗಲೂ ಮರುಕಳಿಸುತ್ತದೆ. ನಾವು ಎಲ್ಲಾ ಸೋದರ ಸೋದರಿಯರೂ ಜೋಶಿ ಕುಟುಂಬದ ಆಪ್ತರು. ಮುಂದೆ ನಮ್ಮ ನಮ್ಮ ವಿದ್ಯೆ, ಉದ್ಯೋಗ, ದಾರಿಗಳು ಬೇರೆಯಾಗಿ ನಾವು ದೂರವಾದರೂ ಈವರೆಗೆ ಸ್ನೇಹ ಸಂಪರ್ಕ ಉಳಿದುಕೊಂಡಿದೆ.
ಪ್ರಭಾಕರ ಜೋಶಿ ಬಾಲ್ಯದಿಂದಲೇ ಪ್ರತಿಭಾವಂತ, ಚುರುಕುಮತಿಯವ. ಎರಡನೆ ತರಗತಿಯಲ್ಲಿರುವಾಗಲೇ ಭಾಷಣ ಮಾಡಿದ್ದರು. ಆಗಲೇ ಯಕ್ಷಗಾನ ಅರ್ಥ ಹೇಳಲಾರಂಭಿಸಿದ್ದರು. ಅವರ ಬೆಳವಣಿಗೆ, ಪ್ರತಿಭೆ, ಕೀರ್ತಿ ನಮಗೆ ನಮ್ಮ ಊರಿಗೆ ಹೆಮ್ಮೆಯ ವಿಷಯ. ಅದು ನಮ್ಮದೇ ಸಾಧನೆ. ಅವರೊಬ್ಬ ವಿಷಯಕೋಶದಂತಿದ್ದಾರೆ.
ಇಂತಹ ಓರ್ವ ಆತ್ಮೀಯ ಮಿತ್ರನಿಗೆ ಮೈಸೂರಿನಲ್ಲಿ ಗೌರವಾರ್ಪಣೆ ಮಾಡುವ ಅವಕಾಶ, ಅದಕ್ಕೆ ನಾನು ಅಧ್ಯಕ್ಷನಾಗಿರುವುದು ಒಂದು ವಿಶೇಷ ಯೋಗ. ಇದರಲ್ಲಿ ಸಂಘಟಕ ವಿದ್ವಾನ್ ಗ.ನಾ. ಭಟ್ಟರ ಪರಿಶ್ರಮ ವಿಶೇಷವಾದುದು.

ಮರುಕಳಿಸಿದ ನೆನಪು

ಡಾ. ಧರಣೀದೇವಿ ಮಾಲಗತ್ತಿ
ಉಪನಿರ್ದೇಶಕರು,
ಪೊಲೀಸ್ ಶಿಕ್ಷಣ ಅಕಾಡೆಮಿ, ಮೈಸೂರು

ಡಾ. ಜೋಶಿಯವರು ಮತ್ತು ನನ್ನ ತಂದೆ, ಅರ್ಥಧಾರಿ ಕುಕ್ಕಾಜೆ ಧೂಮಣ್ಣ ರೈಗಳು ಒಡನಾಡಿ ಗಳು. ಅವು ನನ್ನ ಬಾಲ್ಯದ ದಿನಗಳು. ಆಗ

ಅವರೊಳಗಾಗುತ್ತಿದ್ದ ತರ್ಕಗಳು, ತಮಾಷೆಗಳು ನಮಗೆ ಸ್ಫೂರ್ತಿ, ವಿಶ್ವಾಸ, ಖುಷಿ ಎಲ್ಲವನ್ನೂ ನೀಡುತ್ತಿದ್ದವು. ಇಂದಿನ ಸಮಾರಂಭದಲ್ಲಿ ಅವು ಮರುಕಳಿಸಿದವು. ತಾಳಮದ್ದಳೆಗಳ ಮೂಲಕ ಪುರಾಣವನ್ನೂ ಸಂಸ್ಕೃತಿಯನ್ನೂ ನಾವು ವಿಶಿಷ್ಟವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಯಿತು. ಇಂತಹ ಹಿರಿಯರಾದ ಜೋಶಿಯವರು ನನ್ನ ಗುರುಗಳೂ ಹೌದು. ಬೆಸೆಂಟ್ ಕಾಲೇಜಿನಲ್ಲಿ ನನಗೆ ಸೀಟು ಕೊಡಿಸಿದವರು ಕೂಡಾ. ಪ್ರೊ. ಮಾಲಗತ್ತಿಯವರಿಗೂ ಪರಿಚಿತರು. ಅವರ ಅಪಾರ ಸಾಧನೆಗಾಗಿ ಅವರಿಗೆ ಅಭಿನಂದನೆ ಸಲ್ಲಿಸಿ, ಇನ್ನೂ ಅನೇಕ ಗೌರವಗಳು ಬರಲೆಂದು ಹಾರೈಸುತ್ತೇನೆ.

ಹಲವು ಮಾನ್ಯತೆಗಳು ಪ್ರಾಪ್ತವಾಗಲಿ

ಡಾ. ಕೆ. ಚಿದಾನಂದ ಗೌಡ
ವಿಶ್ರಾಂತ ಕುಲಪತಿಗಳು, ಕುವೆಂಪು
ವಿಶ್ವವಿದ್ಯಾಲಯ, ಶಿವಮೊಗ್ಗ
ಮಾನ್ಯ ಜೋಶಿಯವರ ಅರ್ಥಗಾರಿಕೆಯ ಪ್ರತಿಭೆಯ ಬಗ್ಗೆ ತುಂಬಾ ಕೇಳಿದ್ದೇನೆ. ಅವರು ಹಿರಿಯ ಕವಿ, ಅರ್ಥಧಾರಿಯಾಗಿದ್ದ ನಮ್ಮ ತಂದೆ ಯವರು ಕೊಳಂಬೆ ಪುಟ್ಟಣ್ಣ ಗೌಡರ ಒಡನಾಡಿಯೆಂಬುದು ನನಗೆ ಗೌರವದ ವಿಚಾರ. ಅವರಿಗೆ ಹಲವು ಮಾನ್ಯತೆಗಳು ಪ್ರಾಪ್ತವಾಗಲಿ ಎಂದು ಹಾರೈಸುತ್ತೇನೆ.

ಸಂದೇಶ-ಸ್ಪಂದನ

ಸದ್ಭಾವದುಡುಗೊರೆ

ಜಬ್ಬಾರ್ ಸಮೋ}

ಕಾವ್ಯ, ದರ್ಶನ, ಪುರಾಣ ಸಂಬಂಧದ ಜಿಜ್ಞಾಸೆ, ಪ್ರಶ್ನೆ, ಸಂದೇಹಗಳಿಗೆ, ಸಮರ್ಪಕ, ಸಮಾಧಾನಕರ ವಿವರಣೆಗಳನ್ನು ನೀಡಬಲ್ಲ, ಅಧಿಕ ವಾಕ್ಯಗಳಿಗಿಂತ, ಘನ 'ವಾಗರ್ಥ' ಧ್ವನಿಸುವ ಮಿತ ಪದಗಳಿಂದ ಬಹು ಸೊಗಸಿನ ವಿವಿಧ ವಿಷಯಗಳ ಅರ್ಥ, ಲೇಖನಗಳನ್ನು ಬರೆಯಬಲ್ಲ ಡಾ. ಜೋಶಿಯವರಿಗೆ ಮೈಸೂರಿನಲ್ಲಿ 'ಜೋಶಿ ವಾಗರ್ಥ ವೈಭವ' ಎಂಬ ಹೆಸರಿನಲ್ಲಿ ಅಭಿನಂದನೆ ನಡೆಯುತ್ತಿರುವುದು ಬಹು ಸಂತೋಷದ ವಿಷಯ.
ಯಕ್ಷಗಾನದ ಬಹುರೂಪಿ ಮಜಲುಗಳ ಅನುಭವದಿಂದ ಮಾಗಿದ ಕಲಾ ಮಾಹಿತಿಕೋಶವಾಗಿ, ಅಧಿಕೃತ ಸಂಪನ್ಮೂಲವಾಗಿರುವ, ಉಪನ್ಯಾಸ ಪ್ರವೃತ್ತಿಯ ಮುಂದುವರಿಕೆಯಾಗಿ ಪರಿಪಕ್ವ ಬರೆಹ ಸಾಮರ್ಥ್ಯದ ಜೀವಂತ ದೃಷ್ಟಾಂತವಾಗಿ ಮೆಚ್ಚುಗೆ ಪಡೆಯು, ಲವಲವಿಕೆ, ಜೀವನಸ್ಪೂರ್ತಿ, ಮಕ್ಕಳ ಮನಸಿನ ಚೇತೋಹಾರಿ ಲಘುವೆನಿಸದ ಸರಳ ಜೀವನಶೈಲಿಯ, ನನ್ನ ಗೆಳೆಯರಂತಹ ಹಿರಿಯ ವಿದ್ವಾಂಸ, ಮಾರ್ಗನಿರೂಪಕ ಡಾ. ಎಂ. ಪ್ರಭಾಕರ ಜೋಶಿಯವರನ್ನು ಕೃತಿಯಾಗಿಸುವುದು ಈ ನಾಡಿನ ಮೇಧಾವೀ, ಬಹುಶ್ರುತ ಪಂಡಿತರೊಬ್ಬರಿಗೆ ಸಲ್ಲುವ ಸದ್ಭಾವದುಡುಗೊರೆಯೇ ಆಗಿದೆ. ಶ್ರೀ ಜೋಶಿಯವರ ವಾಗರ್ಥ ಕಸುವಿಗೊಂದು ಸಾರ್ಥಕ ಬೆಂಬಲವೂ ಹೌದು. ಈ ಮಾಹಿತಿ ಕಣಜ ವಯಸ್ಸಿನಲ್ಲೂ ಸಾಧನೆಯಿಂದಲೂ 'ಶತಮಾನ'ವನ್ನು ಅನುಭವಿಸಲಿ ಎಂದು ಹಾರೈಸುತ್ತೇನೆ.

ಉತ್ತರೋತ್ತರ ಗೌರವಗಳಿಗೆ ಪಾತ್ರರಾಗಲಿ

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಸಿ.

ಡಾ. ಜೋಶಿ 'ವಾಗರ್ಥ ಗೌರವ' ಕಾರ್ಯಕ್ರಮದ ಆಮಂತ್ರಣ ತಲುಪಿತು. ಕೃತಜ್ಞತೆಗಳು. ಅತ್ಯವಶ್ಯವಾಗಿ ಮಾಡಬೇಕಾಗಿದ್ದ ಅಭಿನಂದನೆಯನ್ನು ಮಾಡುತ್ತಾ ಇದ್ದೀರಿ. ಇದೊಂದು ಅತೀವ ಸಂತೋಷದ ವಿಚಾರ. ಈ ಸಮಾರಂಭವು ಯಶಸ್ವಿಯಾಗಲಿ. ಗೆಳೆಯ ಜೋಶಿಯವರು ಉತ್ತರೋತ್ತರ ಗೌರವಗಳಿಗೆ ಪಾತ್ರರಾಗಲಿ.

ಸಂತೋಷದ ಅನುಭವ

ಪ್ರೊ. ಎಂ. ರಾಮಚಂದ್ರ ಕಾರ್ಕಳ

ನನ್ನ ನೆಚ್ಚಿನ ಶಿಷ್ಯರಲ್ಲೊಬ್ಬರಾದ ಜೋಶಿ ಅವರ ಪ್ರತಿಭೆ, ಬೆಳವಣಿಗೆ, ಬಹುವಿಧದ ಆಸಕ್ತಿ ಮತ್ತು ಸಾಧನೆಗಳು ನನಗೊಂದು ವಿಸ್ಮಯ; ಸಂತೋಷದ ಅನುಭವ. ಸಮಾರಂಭಕ್ಕೆ ಅವರಿಗೆ ಸರ್ವ ಶುಭವನ್ನು ಕೋರುತ್ತೇನೆ.

ನಾಡಿನ ಹಿರಿಯ ಪ್ರತಿಭಾಶಾಲಿ, ಸಾಂಸ್ಕೃತಿಕ ಸಾಧಕನೊಬ್ಬನ ಗೌರವ ಕಾರ್ಯಕ್ರಮ ದಲ್ಲಿ ಸಂತಸಪಟ್ಟೆವು.

ಪ್ರೊ. ಜಿ.ಎಚ್. ನಾಯಕ
ಡಾ. ನಿರಂಜನ ವಾನಳ್ಳಿ

ಸೂಕ್ತ, ಶ್ಲಾಘ್ಯ ಕಾರ್ಯಕ್ರಮ

ಹಲವು ರೀತಿಯಲ್ಲಿ ಕಲಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದ, ಅಸಾಮಾನ್ಯ ಸಾಮರ್ಥ್ಯದ ಲೇಖಕ, ಕಲಾವಿದ, ಸಂಘಟಕ ಜೋಶಿಯವರು ಹಲವರಿಗೆ, ಸಹಕಲಾವಿದರಿಗೆ ಮಾನ-ಸನ್ಮಾನಗಳನ್ನು ಏರ್ಪಡಿಸಿ ಬಹಳಷ್ಟು ಕೆಲಸ ಮಾಡಿದವರು. 'ವಾಗರ್ಥ ಗೌರವ' ಅತ್ಯಂತ ಸೂಕ್ತ ಶ್ಲಾಘ ಕಾರ್ಯಕ್ರಮ.

ಪ್ರೊ. ಡಾ. ಜಿ.ಎನ್. ಭಟ್ ಬೆಂಗಳೂರು
ಕುಂಬ್ಳೆ ಸುಂದರ ರಾವ್‌
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
ಕೆ. ಗೋವಿಂದ ಭಟ್ಟ
ಡಾ. ಪುರುಷೋತ್ತಮ ಬಿಳಿಮಲೆ, ನವದೆಹಲಿ
ಶಿವಾನಂದ ಹೆಗಡೆ, ಕೆರೆಮನೆ
ಸರವು ಕೃಷ್ಣ ಭಟ್ಟ
ಸುಣ್ಣಂಬಳ ವಿಶ್ವೇಶ್ವರ ಭಟ್ಟ
ಎಸ್.ಎನ್. ಪಂಜಾಜೆ, ಬೆಂಗಳೂರು
ಪ್ರೊ. ಹೆರಂಜೆ ಕೃಷ್ಣ ಭಟ್ಟ
ಕೆ. ನಿತ್ಯಾನಂದ ಕಾರಂತ ಪೊಳಲಿ
ಜಿ.ಕೆ. ಭಟ್ ಸೇರಾಜೆ

ಹಲವಾರು ಬಂಧುಮಿತ್ರರು


ಸ್ವಾಗತ ಸೇಸೆ

ಪ್ರಾಸ್ತಾವಿಕ - ಸೀತಾರಾಮ ದಾಮ್ಲೆ

ಶುಭದೊಸಗೆ - ರಘುಪತಿ ತಾಮಸ್ಕ‌ರ್

ಉದ್ಘಾಟನೆ

ವಾಗರ್ಥ ಸನ್ಮಾನ

ಆತ್ಮೀಯ ಕ್ಷಣ

ವಿಮರ್ಶೆ ವಿವೇಚನೆ

ತಾಳಮದ್ದಳೆ

ಯಕ್ಷಗಾನ - ರಾಧಾಕೃಷ್ಣ

ಜೋಶಿ ಕೃತಿ ಪ್ರದರ್ಶನ

ವರದಿ ಸಂಕಲನ

ಈ ಲೇಖಕನ ಇತರ ಕೃತಿಗಳು

ಕೃತಿಗಳು
• ಜಾಗರ
• ಕೇದಗೆ
• ಮಾರುಮಾಲೆ
•ಪ್ರಸ್ತುತ
•ಯಕ್ಷಗಾನ ಪದಕೋಶ
• ಭಾರತೀಯ ತತ್ವಶಾಸ್ತ್ರ
•ತತ್ವಮನನ
•ತಾಳಮದ್ದಲೆ
• ವಾಗರ್ಥ
• ಕೃಷ್ಣ ಸಂಧಾನ : ಪ್ರಸಂಗ ಮತ್ತು ಪ್ರಯೋಗ
• ಮುಡಿ
• ಮಂದಾರ ಕೇಶವ ಬಟ್ (ಪರಿಚಯ-ತುಳು)
• ಗುರ್ತ (ತುಳು ಕವಿತೆಗಳು)
• ಪಂಡಿತ ಪೆರ್ಲ ಕೃಷ್ಣಭಟ್ಟ
•ಯಕ್ಷಗಾನ ಸ್ಥಿತಿ-ಗತಿ
• ಕವಿತೆಗಳು, ಅನುವಾದಗಳು ಹಲವು ನೃತ್ಯ ನಾಟಕಗಳು
ಸಂಸ್ಕೃತಿ, ರಾಜಕೀಯ, ಅರ್ಥಶಾಸ್ತ್ರ, ಕ್ರೀಡೆ, ಪ್ರಚಲಿತ ವಿದ್ಯಮಾನ ಮೊದಲಾದ
ವಿವಿಧ ವಿಚಾರಗಳಲ್ಲಿ ನೂರಾರು ಬಿಡಿ ಬರಹಗಳು, ಅಂಕಣ ಲೇಖನಗಳು

ಇತರರೊಂದಿಗೆ
• ಮಣೇಲ್ ಶ್ರೀನಿವಾಸ ನಾಯಕರು : ಜೀವನ ಪರಿಚಯ
- ಎನ್. ಮಾಧವಾಚಾರ
• ಭಾರತೀಯ ತತ್ವಶಾಸ್ತ್ರ ಪರಿಚಯ, ಭಾರತೀಯ ತತ್ವಶಾಸ್ತ್ರ ಪ್ರವೇಶ
-ಪ್ರೊ. ಎಂ.ಎ. ಹೆಗಡೆ
• ಕುಮಾರಿಲ ಭಟ್ಟ
-ಪ್ರೊ. ಎಂ.ಎ. ಹೆಗಡೆ
• ದಕ್ಷಿಣ ಕನ್ನಡ
- ಗುರುರಾಜ ಮಾರ್ಪಳ್ಳಿ
• ಹಾಜಿ ಅಬ್ದುಲ್ಲಾ - (ಕಾರ್ಪೋರೇಶನ್ ಬ್ಯಾಂಕ್ ಸ್ಥಾಪಕ, ಮಹಾದಾನಿ)
ಇಂಗ್ಲಿಷ್ ಅನುವಾದ. ಮೂಲ : ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ

ಸಂಪಾದಿತ
• ಅರ್ಥಗಾರಿಕೆ : ಸ್ವರೂಪ ಸಮೀಕ್ಷೆ
• ಯಕ್ಷಗಾನ ಚಿಂತನ
• ಕುಕ್ಕಿಲ ಸಂಪುಟ

ಸಂಪಾದಿತ : ಇತರರೊಂದಿಗೆ
• ಯಕ್ಷಗಾನ ಮಕರಂದ (ಪೊಳಲಿ ಶಾಸ್ತ್ರಿ ಸಂಸ್ಮರಣ ಗ್ರಂಥ)
• ಯಕ್ಷಕರ್ದಮ
(ಪದವೀಧರ ಯಕ್ಷಗಾನ ಸಮಿತಿ, ಮುಂಬೈ, ಸಮ್ಮೇಳನ ಸಂಕಲನ)
• ಗಾನಕೋಗಿಲೆ (ಭಾಗವತ ದಾಮೋದರ ಮಂಡೆಚ್ಚ ಸಂಸ್ಮರಣ ಗ್ರಂಥ)
• ಸ್ವರ್ಣ ರೇಖೆ, Vision 21st Century
(ಕರ್ನಾಟಕ ರಾಜ್ಯ ಸ್ವರ್ಣ ಮಹೋತ್ಸವ ನೆನಪಿನ ಲೇಖನ ಸಂಕಲನಗಳು)
• ಪೊಲಿ (ಕೆನರಾ ಜಿಲ್ಲೆ ಶತಮಾನ- ಸಂಪುಟ)
• ಕುಬಣೂರು ಸ್ಮೃತಿ (ಕುಬಣೂರು ಬಾಲಕೃಷ್ಣ ರಾವ್ ಸ್ಮೃತಿ ಗ್ರಂಥ)
• ರಂಗವೆಂಕಟ (ಪಣಂಬೂರು ವೆಂಕಟರಾಯ ಐತಾಳ ಸಂಸ್ಮರಣ ಗ್ರಂಥ)
• ದೀವಾಣ ಸಂಪದ (ದೀವಾಣ ಭೀಮ ಭಟ್ಟ ಸ್ಮರಣ ಗ್ರಂಥ)
• ಮೂಡಂಬೈಲು ಶಾಸ್ತ್ರಿ-75 (ಅಭಿನಂದನ ಗ್ರಂಥ)
• ಶೇಣಿ ಪ್ರಸಂಗ - ಶೇಣಿ ಅವರ ಎರಡು ಯಕ್ಷಗಾನ ಕೃತಿಗಳು.
• ವಾಚಿಕ (ತಾಳಮದ್ದಲೆ ವಿಮರ್ಶಾ ಸಂಕಲನ ಗ್ರಂಥ)
• ಶ್ರೀಮಯ ಅಮೃತ ಸಿಂಚನ (ಶ್ರೀ ಇಡಗುಂಜಿ ಮೇಳ-75 ಸಂಪುಟ)
• ಶ್ರೀಮಯ ಅಮೃತ ಮಂಥನ (ಶ್ರೀ ಇಡಗುಂಜಿ ಮೇಳ-80 ಸಂಪುಟ)

ಜೋಶಿಯವರನ್ನು ಕುರಿತು :
• ಪ್ರಗಲ್ಬ ಚಿಂತಕ, ಅರ್ಥವಿಹಾರಿ; ಲೇ : ಚಂದ್ರಶೇಖರ ಮಂಡೆಕೋಲು
(ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ
• ಜೋಶಿ ವಾಗರ್ಥ ಗೌರವ; ಸಂ. : ವಿ ಗ.ನಾ. ಭಟ್ಟ
(ಮೈಸೂರಲ್ಲಿ ಜರಗಿದ ಸಂಮಾನ-ಗೋಷ್ಠಿಗಳ ಸಂಗ್ರಹ)
• ಜಾಗರದ ಜೋಶಿ, ಸಂ. : ನಾ. ಕಾರಂತ ಪೆರಾಜೆ, ಪುತ್ತೂರು
(ಜೋಶಿಯವರ ಕುರಿತ ಪೂರ್ವಪ್ರಕಟಿತ ಬರಹ-ನುಡಿ-ಮುನ್ನುಡಿ ಮಾಲೆ)