ವಿದ್ಯುಚ್ಚೋರನೆಂಬ ರಿಸಿಯ ಕಥೆ

ವಿದ್ಯುಚ್ಚೋರನೆಂಬ ರಿಸಿಯ ಕಥೆಯಂ ಪೇೞ್ವೆಂ

ಗಾಹೆ || ದಂಸೇಹಿಯ ಮಸಕೇಹಿಯ ಖಜ್ಜಂತೋ ವೇದಣಂ ಪರಮಘೋರಂ ವಿಜ್ಜುಚ್ಚೋರೋ ಅಯಾಸಿಯ ಪಡಿವಣ್ಣೋ ಉತ್ತಮಂ ಅಟ್ಠಂ ||

ದಂಸೇಹಿಯ – ಚಿಕ್ಕುಟುಗಳಿಂದಂ, ಮಸಕೇಹಿಯ – ಗುಂಗುಱುಗಳಿಂದಂ, ಖಜ್ಜಂತೋ – ತಿನೆಪಡುತಿರ್ದೊನಾಗಿ, ವೇದಣಂ – ವೇದನೆಯಂ, ಪರಮಘೋರಂ – ಆದಮಾನುಂ ಕಂಡಿದಪ್ಪುದಂ, ವಿಜ್ಜುಚ್ಚೋರೋ – ವಿದ್ಯುಚ್ಚೋರನೆಂಬ ರಿಸಿ, ಅಯಾಸಿಯ – ಲೇಸಾಗಿ ಸೈರಿಸಿ, ಪಡಿವಣ್ಣೋ – ಪೊರ್ದಿದೊಂ, ಉತ್ತಮ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಗಳಾರಾಧನೆಯುಂ ಅದೆಂತೆಂದೊಡೆ ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ವಿದೇಹಮೆಂಬುದು ನಾಡಲ್ಲಿ ಮಿಥಿಳೆಯೆಂಬುದು ಪೊೞಲದನಾಳ್ವೊಂ ಪದ್ಮರಥನೆಂಬೊನರಸನ ಸಂತತಿಯಿಂ ಬಂದ ವಾಮರಥ ನೆಂಬೊನರಸನಾತನ ಮಹಾದೇವಿ ಬಂಧುಮತಿಯೆಂಬೊಳಂತವರ್ಗ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತಾ ಪೊೞಲೊಳ್ ಯಮದಂಡನೆಂಬೊಂ ತಳಾಱಂಮತ್ತಲ್ಲಿ ಇರ್ಪ್ಪೊಂ ವಿದ್ಯುಚ್ಚೋರನೆಂಬೊಂ ಕಳ್ಳನಾತಂ ಜೃಂಭಿನಿ ಸ್ತಂಭಿನಿ ಮೋಹಿನಿ ಸರ್ಷಪಿ ತಾಳೋದ್ಟಾಟಿಸಿ ವಿದ್ಯಾಮಂತ್ರಂ ಚೂರ್ಣ ಯೋಗ ಘುಟಕಾಂಜನಮೆಂದಿವು ಮೊದಲಾಗೊಡೆಯ ತಸ್ಕರಶಾಸ್ತ್ರಂಗಳೊಳಾದಮಾನುಂ ಕುಶಲನಂತಪ್ಪ ಕಳ್ಳಂ ಪೊೞಲ ಕಸವರಂಗಳನಿರುಳ್ ಕಳ್ದು ಪೊೞಲ್ಗೆ ನಾಡೆಯಂತರದೊಳೊಂದು ಪರ್ವತಮುಂಟಲ್ಲಿ ಪಿರಿದೊಂದು ಗುಹೆಯುಂಟದಱೊಳಗೆ ಕಳ್ದ ಕಸವರಂಗಳೆಲ್ಲಮಂ ಪೊೞಟ್ಟು ಗುಹೆಯ ಬಾಗಿಲಂ ಪಿರಿದೊಂದು ಸಿಲೆಯಂ ತಂದಿಟ್ಟು ಮುಚ್ಚಿ ಬಂದು ಪಗಲೆಲ್ಲಂ ಪಾೞ್ದೇಗುಲದೊಳಂಜನಮನೆಚ್ಚಿ ತಾಂ ತೊನ್ನನಾಗಿ ಮುರುಂಟಿದ ಕೈಯುಂ ಕಾಲುಂ ಬೆರಸು ಮೂಗೊಳಗರ್ದು ರಸಿಗೆ ಸುರಿಯೆ ನೊೞವುಗಳ್ ಮುಸುಱೆಕೊಂಡು ತಿನೆ ಪೇಸಿದನಾಗಿ ಲೋಗರ ಮನೆಗಳೊಳ್ ಭೈಕ್ಷಮಂ ಬೇಡಿ ಮನೆಮನೆಯಂ ತೊೞಲ್ದು ತನ್ನ ತೊನ್ನುಗೊಂಡಿರ್ಪುದನಱೆಪುತ್ತುಮಿಂತು ಪಗಲೆಲ್ಲಮಿರ್ದಿರುಳಪ್ಪಾಗಳ್ ದಿವ್ಯಮಪ್ಪ ತನ್ನ ಸ್ವಾಭಾವಿಕಮಪ್ಪ ಮುನ್ನಿನ ರೂಪಂ ಕೈಕೊಂಡು ಪುಟ್ಟಿಗೆಯನುಟ್ಟು ಮೆಯ್ಯಂ ಪೂಸಿ ಪೂವಂ ಮುಡಿದು ಕರ್ಪೂರ ಸಮ್ಮಿಶ್ರಿತಮಪ್ಪ ತಂಬುಲಂದಿನುತ್ತುಂ ಸೂಳೆಗೇರಿಗಳಂ ತೊೞಲ್ದು ತನ್ನಂ ಮೆಱೆಯುತ್ತಂ ಮನಕ್ಕೆವಂದಗ್ಗಳದೊಳ್ಪೆಂಡಿರೊಳೊತ್ತೆಯನಿಟ್ಟು ಭೋಗೋಪಭೋಗಂಗಳ್ಗೆ ಕಸವರಮಂ ಕೊಟ್ಟನುಭವಿಸುತ್ತಮಾರುಮಱಯದಂತಿರ್ದು ಬಚ್ಚರ ದೂಸಿಗರ ನಿಯೋಗಿಗಳ ಅಗ್ಗಯಿಲೆಯರಪ್ಪ ಸೂಳೆಯರ ಸಾಮಂತರ ಕಸವರಂಗಳೆಲ್ಲಮಂ ಕಳ್ದು ಮತ್ತೊಂದು ದಿವಸಂ ಪದ್ಮರಥಮ್ಗೊಸೆದಚ್ಯುತೇಂದ್ರನಟ್ಟಿದ ದಿವ್ಯಮಪ್ಪ ಸರ್ವರುಜಾಪಹಾರಮೆಂಬ ಹಾರುಂ ಸಂತತಿಯಂ ವಾಮರಥಂಗೆ ಬಂದುದಂ ವಾಮರಥಂ ಕರುಮಾಡದೇೞನೆಯ ನೆಲೆಯೊಳ್ ತನ್ನ ಲುಂದುವೋವರಿಗೆಯ ಪುಡಿಕೆಯೊಳಿಟ್ಟೆಲ್ಲಾಕಾಲಮುಂ ಗಂಧ ಪುಷ್ಪ ದೀಪ ಧೂಪಾಕ್ಷತಂಗಳಿಂದರ್ಚಿಸುತ್ತುಂ ಪೊಡೆಮಡುತ್ತಮಿರ್ಕ್ಕುಮಿಂತಪ್ಪ ಹಾರಮಂ ವಿದ್ಯುಚ್ಚೋರನಂಜನಮಂ ಕಣ್ಣೊಳೆಚ್ಚಿ ಯಾರುಂ ತನ್ನಂ ಕಾಣದಂತಾಗಿರೆ ಅರಮನೆಯಂ ಪೊಕ್ಕರಸನ ಮಱಲುಂದುವೋವರಿಯಂ ಪೊಕ್ಕು ತಲೆ ದೆಸೆಯೊಳರ್ಚಿಸಿರ್ದ ಪುಡಿಕೆಯಂ ತೆಱೆದು ಹಾರಮಂ ಕೊಂಡರಮನೆಯಿಂ ಪೊಱಮಟ್ಟು ಪೋಗಿ ಪೊಱವೊೞಲ ಗುಹೆಯೊಳ್ ಪೂೞಟ್ಟು ಪೊೞಲ್ಗೆವಂದು ಮುನ್ನಿನಂತೆ ತೊನ್ನರೂಪಂ ಕೈಕೊಂಡಿರ್ದಂ ಮತ್ತಿತ್ತರಸಂ ನೇಸರ್ಮೂಡೆ ಹಾರಮಂ ಕಾಣದೆ ಆಸ್ಥಾನ ಮಂಟಪದೊಳ್ ಸಿಂಹಾಸನ ಮಸ್ತಕಸ್ಥಿತನಾಗಿರ್ದು ತಳಾಱನಪ್ಪ ಯಮದಂಡಂಗೆ ಬೞಯಟ್ಟಿವರಿಸಿ ಇಂತೆಂದನೆಲವೋ ಯಮದಂಡಾ ಪೊೞಲ ಪಾರ್ವರ ಪರದರ ಸೂಳೆಯರ ಒಕ್ಕಲ ಮಕ್ಕಳ ಕಸವರಮೆಲ್ಲಮಂ ಕಳ್ದೊಡಮಾರಯ್ಯದೆ ಕೆಮ್ಮಗಿರ್ಪೆಯಲ್ಲದೆಯುಮೆಮ್ಮ ಸೆಜ್ಜೆಯೋವರಿಯಂ ಕಳ್ಳಂ ಪೊಕ್ಕು ಪುಡಿಕೆಯಂ ತೆಱೆದಚ್ಯುತೇಂದ್ರನಿತ್ತ ಕುಲಧನಮಪ್ಪ ಹಾರಮಂ ಕೊಂಡು ಪೋದುಂ ಕಳ್ಳನನಾರಯ್ದು ಹಾರಮಂ ಕೊಂಡು ಬಾ ಅಲ್ಲದಾಗಳ್ ಕಳ್ಳಂಗೆ ತಕ್ಕ ನಿಗ್ರಹಮಂ ನಿನಗೆ ಮಾಡಿದಪ್ಪೆನೆಂದೊಡೆ ತಳಾಱನೆಂದಂ ದೇವಾ ಏಱುದಿವಸಮೆನಗೆಡೆಯನೀವುದೇಱುದಿವಸದಿಂದೊಳಗೆ ಕಳ್ಳನನಾರಯ್ಯಲಾಱದಾಗಳ್ ದೇವರೆನ್ನಂ ಮೆಚ್ಚುಕೆಯ್ವುದೆಂದೊಡರಸನೆಂತೆಯ್ಯೆಂದೊಡರಮನೆಯಿಂದಂ ಪೊಱಮಟ್ಟು ಪೊೞಲೊಳಗೆ ಸೂಳೆಗೇರಿಗಳೊಳಮಂಗಡಿಗಳೊಳಂ ಬಸದಿಗಳೊಳಂ ವಿಹಾರಂಗಳೊಳಂ ಕೇರಿಗಳೊಳಮಾರಮೆಗಳೊಳಂ ದೇವಾಲಯಂಗಳೊಳಂ ಪೊಱವೊೞಲೊಳಂ ಕೆಲದ ಪೊೞಲ್ಗಳೊಳಮಾಱುಂ ದಿವಸಂ ನಿರಂತರಮಾರಯ್ದೆಲ್ಲಿಯುಂ ಕಾಣದೇೞನೆಯ ದಿವಸದಂದು ಪಾೞ್ದೇಗುಲದೊಳಿರ್ದು ತೊನ್ನಂ ಪೋಪಾಗಳಳಿಱುವಳ್ಳಮಂ ಕಂಡದಂ ವಿದ್ಯಾಧರಕರಣದಿಂ ಲಂಘಿಸಿ ಪೋಪುದಂ ಯಮದಂಡಂ ಗೆಂಟಱೊಳಿರ್ದು ಕಂಡಿವನೆ ಕಳ್ಳನೆಂದು ನಿಶ್ಚಯಿಸಿ ಪಿಡಿದರಮನೆಗೆ ಪುಯ್ಯಲಿಡೆಯಿಡೆ ಕೊಂಡುಪೋಗಿಯರಸಮಗೆ ಕಳ್ಳನಂ ತಂದೆನೆಂದು ತೋಱ ಈತಂ ಕಳ್ಳನೆಂದರಸಂಗೆ ವೇೞ್ದೊಡೆ ತೊನ್ನನಿಂತೆಂದಂ ದೇವಾ ನಾಂ ಕಳ್ಳನಲ್ಲದುದರ್ಕ್ಕೆ ಪೊೞಲೆಲ್ಲಮಱಗುಂ ಕಳ್ಳನನಾರಯ್ಯಲಾಱದೆನ್ನಂ ತನ್ನ ಸಾವಿಂಗಂಜಿ ಬಡವನಂ ದೇಸಿಗನಂ ಪೊೞಲೊಳ್ ಬೈಕಂದಿರಿದುಂಡು ಬಾೞ್ವನಂ ಪಿಡಿದು ಕೊಂಡು ಬಂದು ಕೊಲಿಸಿದಪ್ಪನೆಂದೊಡೆ ತಳಾಱಂ ಕಳ್ಳರನಾರಯ್ವ ಶಾಸ್ತ್ರಂಗಳೊಳಾದಮಾನುಂ ಕುಶಲನಪ್ಪುದಱಂದರಸಂಗಿಂತೆಂದನೀತಂ ತನ್ನ ರೂಪುಗರೆದಿರುಳ್ ಪೊೞಲೆಲ್ಲಮಂ ಕಳ್ನು ದಿವಸಕ್ಕೀ ಪಾಂಗಿನೊಳ್ ತೊನ್ನನಾಗಿರ್ಪೊಂ ನೀಮುಂ ನಂಬದಾಗಳ್ ಪ್ರತ್ಯಯಮಂ ಮಾಡಿ ತೋರ್ಪೆನೆಂದಾಗಳ್ ಪ್ರತಿಘುಟಿಕಾಂಜಂಗಳಂ ತೊನ್ನನ ಕಣ್ಣಿನೊಳೆಚ್ಚಿದೊಡೆ ದಿವ್ಯಮಪ್ಪ ತನ್ನ ಮುನ್ನಿನ ರೂಪಾಗಿರ್ದಿಂತೆಂದನೀತಂ ಘುಟಕಾಂಜನ ಕುಹಕಂ ಇಂದ್ರಜಾಲಂಗಳಂ ಬಲ್ಲೊನಪ್ಪುದಱಂದೆಲ್ಲಾ ರೂಪುಗಳಂ ಮಾಡಲ್ ಬಲ್ಲೊನೆಂದೊಡೆ ತಳಾಱನೆಂದಂ ಪೆಱರ್ಗ್ಗೆ ಮಾಡೀ ಪ್ರತ್ಯಯಮಂ ತೋರ್ಪೆನೆಂದರಸನನುಮತದಿಂದರಸಿಯರ ಸೂಳೆಯರ ಕಣ್ಗಳೊಳ್ ಘುಟಿಕಾಂಜನಂಗಳನೆಚ್ಚಿದೊಡ ನಿಬರುಂ ತೊನ್ನೆಯರಾಗಿರ್ಪ್ಪನ್ನೆಗಂ ಮತ್ತಂ ಬೞಕ್ಕೆ ಪ್ರತಿಘುಟಿಕಾಂಜನಂಗಳನೆಚ್ಚಿದೊಡೆ ಸ್ವಾಭಾವಿಕಮಪ್ಪ ತಮ್ಮ ಮುನ್ನಿನ ರೂಪುಗಳಂ ಕೈಕೊಂಡಿರ್ದ್ದೊರಾಗಳರಸಂಗೆ ನಂಬುಕೆಯಾಗಿ ನೆಟ್ಟನಿವಂ ಕಳ್ಳನಪ್ಪೊನೀತನಂ ದಂಡಿಸೆಂದು ಯಮದಂಡಂಗೆ ಬೆಸವೇೞ್ದೊಡಾತನಂತೆ ಗೆಯ್ಯೆನೆಂದಾತನಂ ತನ್ನ ಮನೆಗೊಡಗೊಂಡು ಪೋಗಿ ಮಾಘಮಾಸದಿರುಳ್ ಕಡುಸೀತದೊಳ್ ಘೋರಮಪ್ಪ ಮೂವತ್ತೆರಡು ದಂಡಣೆಗಳಿಂ ನೀಡುಂ ದಂಡಿಸೆಯನಿತುಮಂ ಬಾೞೆವಾೞೆ ಅವಯವದೆ ಸೈರಿಸಿಯುಂ ಕಳ್ಳನಲ್ಲೆನಯ್ಯೊ ಬಲ್ಲಾಳ್ತನದಿಂದೆನ್ನಂ ತಳಾಱಂ ಕೊಂದಪ್ಪನೆಂದೊಳಱ ಪುಯ್ಯಲಿಡೆ ತಳಾಱಂಗೆ ಕಳ್ಳನೀತಲ್ಲೆಂಬುದೊಂದು ನಂಬುಗೆಯಾಗಿ ನೇಸಱ್ ಮೂಡೆಯರಮನೆಗೆ ಪೋಗಿ ಅರಸಂಗಿಂತೆಂದು ಬಿನ್ನಪಂಗೆಯ್ದುಂ ದೇವಾ ಮೂವತ್ತೆರಡು ಘೋರಮಪ್ಪ ದಂಡಣೆಗಳಿಂದಂ ಶ್ಮಶಾನದ ಸೂಲದೊಳ್ ಯಮದಂಡನ ನಿಕ್ಕಿಮೆಂದಾಳ್ಗಳ್ಗೆ ಬೆಸವೇೞ್ದೊಡವರುಮಾತನಂ ಶ್ವಶಾನಕ್ಕೆೞೆದುಕೊಂಡು ಪೋಗಿ ದರ್ಕ್ಕಂ ಬಸಿದು ಸೂಲದೊಳಿಕ್ಕುವಾಗಳವರೊಡವೋಗಿ ತೊನ್ನಂ ರೂಪಪರಾವರ್ತನಂಗೆಯ್ದು ತನ್ನ ಸ್ವಾಭಾಮಿಕಮಪ್ಪ ವಿದ್ಯುಚ್ಚೋರನಪ್ಪ ದಿವ್ಯರೂಪಂ ಕೈಕೊಂಡು ಸೂಲದೊಳಿಕ್ಕಲೀಯದೆ ಅಡ್ಡಮಾಗಿರ್ದರಸನ ಕಾಪಿನವನೆಂದನೆಲೆಯಣ್ಣಗಳಿರಾ ನೀಮೀತನಂ ಕೊಂದಿರೀತನುಂ ಸೂಲದೊಳಿಕ್ಕೆಪಟ್ಟನಾಗಿ ಸತ್ತವನೆಂದವರೊಳ್ ನುಡುದು ತಳಾಱನನಿಂತೆಂದನೆಲೆ ಗಳಾ ಯಮದಂಡಾ ನೀನುಮಾನುಂ ಕಿಱಯಂದೊರ್ವರುಪಾಧ್ಯಾಯರ ಪಕ್ಕದೊಳೋದುವಂದು ನಂದನವನದೊಳಗೆ ನೀನೆನ್ನ ಪೂಣ್ದ ಪ್ರತಿಜ್ಞೆಯಂ ನೆನೆದಾ ಒಂದುಂ ದೋಷಮಿಲ್ಲದೆ ನಿನ್ನಂ ಕೊಲಿಸಿದೆನೊ ಕೊಲಿಸೆನೊ ಪುಣ್ಯ ಪ್ರತಿಜ್ಞೆಯಂ ನೆನೆವೆಯೊ ನೆನೆಯೆಯೊ ಎನೆ ಯಮದಂಡನೊಳ್ಳಿತ್ತಾಗಿ ನೆನೆದೆನೆಂದೊಡೆ ವಿದ್ಯುಚ್ಚೋರನಿಂತೆಂದು ಮತ್ತೀಗಳ್ ನೀನೇನ್ ಸತ್ತೆಯೊ ಸಾಯೆಯೊ ಮತ್ತೇನೊ ಎಂದಾಗಳ್ ಯಮದಂಡನೆಂದಂ ದೇವ ನೀಂ ಗೆಲ್ದೆಯಾಂ ಸೋಲ್ತೆನುಂ ಸತ್ತೆನುಮಂದಿರ್ವರ್ ಪದಿರಿನಿಂ ನುಡಿವ ಸೂೞ್ಮೂತುಗಳಂ ಕಾಪಿನವರುಂ ಪೊೞಲ ಜನಮುಂ ಕೇಳ್ದು ಚೋದ್ಯಂಬಟ್ಟು ಬೆಱಗಾಗಿರ್ದೊಡೆ ವಿದ್ಯುಚ್ಚೋರಂ ಕಾಪಿನವರನಿಂತೆಂದನೆನ್ನುಮನೀತನುಮನರಸನಲ್ಲಿಗೆ ಕೊಂಡು ಪೋಗಿಮರಸನ ಮುಂದೀತಂಗಮೆನಗಂ ಮಾತುಂಟಲ್ಲಿ ನುಡಿದ ಬೞಕ್ಕರಸನೀತನಂ ಮೆಚ್ಚುಕೆಯ್ಗೆ ಎಂತುಂ ಕೊಲವೇೞ್ದೊಡಂ ಮೂಱು ಸೂೞ್ ಬೆಸಗೊಂಡಲ್ಲದೆ ಕೊಲಲಾಗದೆಂದು ನೀತಿಶಾಸ್ತ್ರದೊಳ್ ಪೇೞ್ದುದಱಂದೆಮ್ಮಿರ್ವರುಮನರಮನೆಗೆ ಕೊಂಡು ಪೋಗಿ ಅರಸಂಗೆ ತೋಱಮೆಂದೊಡಾ ಕಾಪಿನವರಿರ್ವರುಮನರಸನಲ್ಲಿಗೆ ಕೊಂಡು ಪೋಗಿ ಇಂತೆಂದು ಬಿನ್ನಪಂಗೆಯ್ದರ್ ದೇವಾ ಈತಂ ಯಮದಂಡನಂ ಕೊಲಲೀಯದೆ ಬಾರಿಸಿದನೆಂದು ವಿದ್ಯುಚ್ಚೋರನಂ ತೋಱ ನುಡಿದೊಡರಸನೇಕೆ ನೀಂ ಬಾರಿಸಿದೆಯೆಂದು ಬೆಸಗೊಂಡೊಡೆ ವಿದ್ಯುಚ್ಚೋರನೆಂದಂ ಯಮದಂಡಂಗೇನುಂ ಪೊಲ್ಲಮೆಯುಂ ದೋಷಮುಮಿಲ್ಲ ನಿಮ್ಮ ದೇವತಾರಕ್ಷಿತಮಪ್ಪ ಸರ್ವರುಜಾಪಹಾರಮೆಂಬುದು ಮೊದಲಾಗಿ ಪೊೞಲ ಕಸವರಮನಿರುಳೀ ರೂಪಿನೊಳ್ ಕಳ್ದು ಪಗಲೆಲ್ಲಂ ತೊನ್ನನಾಗಿ ಪಾೞ್ದೇಗುಲದೊಳಿರ್ಪೆನದಱಂದೆನ್ನಂ ಕೊಲ್ಲಿಮೀತಂಗೇನುಂ ದೋಷಮಿಲ್ಲೆಂದೊಡರಸನೆಂದನಾ ಕಳ್ದ ಕಸವರಮನೆಲ್ಲಮನೇಗೆಯ್ದೆಯೆಂದು ಬೆಸಗೊಂಡೊಡನಿತುವಿರ್ದುವಯ್ಸಾಸಿರಮಱುಸಾಸಿರ ದೀನಾರಮೆನ್ನ ಸೂಳೆಗೆ ಬಿಯಾಮಾದುದುೞದುವೆಲ್ಲಂ ವಣ್ಣಂ ಚಳಿಯದಿರ್ದುದೆಂದೊಡರಸಂ ವಿದುಚ್ಚೋರನಂ ಹಾರಮಂ ಕೊಂಡು ಬಾ ಪೊೞಲವರ್ಗ್ಗಂ ಕಸವರಮಂ ಮಡಗಿದೆಡೆಯಂ ತೋಱೆಂದಾತನೊಡನೆ ಪೂೞಲ ಜನಮುಮನಟ್ಟೆ ಕಾಪುವೆರಸು ಪೋಗಿ ಪೊೞಲ್ಗೆ ನಾಡೆಯಂತರದೊಳ್ ಪಿರಿದೊಂದು ಪರ್ವತಮುಂಟಲ್ಲಿಯೊಂದು ವಿಸ್ತೀರ್ಣ ಗುಹೆಯುಂಟದಱ ಬಾಗಿಲಂ ಮುಚ್ಚಿರ್ದ ಪಿರಿಯ ಸಿಲೆಯಂ ಕಳೆದದಱೊಳಗೆ ಪೊಕ್ಕು ಹಾರಮಂ ಕೊಂಡು ಪೊೞಲ ಜನಮೆಲ್ಲಮನೆಂದಂ ನಿಮ್ಮ ನಿಮ್ಮ ಕಸವರಮಪ್ಪುದನಾರಯ್ದು ಪಲ್ಲಟಿಸಲೀಯದೆ ನೋಡಿಕೊಳ್ಳಿಮೆಂದು ತೋಱದೊಡವರುಂ ತಂತಮ್ಮ ಕಸವರಮನೆಲ್ಲಮನಾರಯ್ದು ಕೊಂಡರ್ ಮತ್ತೆ ವಿದ್ಯುಚ್ಚೋರನುಂ ಹಾರಮಂ ಕೊಂಡು ಪೋಗಿಯರಸಂಗೊಪ್ಪಿಸಿದೊಡರಸನಿಂತೆಂದು ವಿದ್ಯುಚ್ಚೋರನಂ ಬೆಸಗೊಂಡಂ ಮಾಘಮಾಸದಿರುಳಿನ ಸೀತದೊಳ್ ನಾಲ್ಕು ಜಾವಮುಂ ಮೂವತ್ತೆರಡು ಘೋರಮಪ್ಪ ದಂಡಣೆಯನೆಂತು ಸೈರಿಸಿದೆಯೆಂದೊಡಾತನಿಂತೆಂದರಸಂಗೆ ಪೇೞ್ಗುಂ ದೇವಾ ಒಂದು ದಿವಸಂ ಸಹಸ್ರಕೂಟ ಚೈತ್ಯಾಲಯಕ್ಕೆ ಕಿಱಯಂದೆನ್ನನೋದಿಸುವೋಜರುಮಾನುಂ ಪೋಗಿ ಓಜಂ ದೇವರಂ ಬಂದಿಸುವನ್ನೆಗಂ ಚರಿತಪುರಾಣಂಗಳಂ ವಖ್ಖಾಣಿಸುತ್ತಿರ್ದ ಶಿವಗುಪ್ತರೆಂಬಾಚಾರ್ಯರ ಪಕ್ಕದೆ ಕುಳ್ಳಿರ್ದು ವಖ್ಖಾಣೆಯಂ ಕೇಳುತ್ತಿರ್ಪನ್ನೆಗಂ ನರಕವ್ಯಾವರ್ಣನೆಯನಾ ಭಟಾರರಿಂತೆಂದು ಪೇೞ್ವುದಂ ಕೇಳ್ದೆಂ ವ್ರತ ಶೀಲ ಚಾರತ್ರ ಗುಣಂಗಳನಿಲ್ಲದವರುಂ ಜೀವಂಗಳಂ ಕೊಲ್ವರುಂ ಬೇಂಟೆಯಾಡುವರುಂ ರಾಗದ್ವೇಷಲೋಭಂ ಕಾರಣಮಾಗಿ ಪುಸಿ ನುಡಿದು ಜೀವಂಗಳ್ಗೆ ಸಂತಾಪಮಂ ವಧೆಯುಮಂ ಮಾಡಿಸುವರುಮಾಱಡಿಗೊಳ್ವರುಂ ಕಳ್ವೊರುಂ ಪೆಱರ ಪೆಂಡಿರೊಳ್ ಮಱೆವಾೞ್ವರುಮಪರಿಮಿತ ಪರಿಗ್ರಹಮಂ ನೆರಪುವರುಂ ಮತ್ತಂ ಮಧುಮದ್ಯ ಮಾಂಸಂಗಳುಮಯ್ದು ಪಾಲ್ಮರದ ಪಣ್ಗಳುಮಾಳಂಬೆಯುಂ ಸಣಂಬಿನ ಪೂವುಮೆಂದಿವಂ ಸೇವಿಸುವರುಂ ಮತ್ತಮಮೋಘಮಪೇಯ ಪೇಯಮಭಕ್ಷ್ಯ ಭಕ್ಷಮೆಂದಿವಱೊಳ್ ನೆಗೞ್ವರುಂ ಪಂಚಮಹಾಪಾತಕಂಗಳಂ ಗೆಯ್ದೊರುಮಿವರೆಲ್ಲಂ ನಿವೃತ್ತಿಪರಿಣಾಮಮಿಲ್ಲದೆ ಕಾಲಂಗೆಯ್ದೇೞುಂ ನರಕಂಗಳೊಳ್ ಪುಟ್ಟಿ ದುಃಖಂಗಳನೆಯ್ದುವರ್

ಗಾಹೆ || ಅಚ್ಛಿಣಿಮೀಳಣ ಮೆತ್ತಂ ಣತ್ಥಿಸುಹಂ ದುಖ್ಖಮೇವ ಅನುಬದ್ಧಂ ಣಿರಯೇ ಣಿರಯಿಯಾಣಂ ಅಹಣ್ಣಿಸಂ ಪಚ್ಚಮಾಣಾಣಂ ||

ವೃ || ಕರಜನಿವೇಶಿತ ತೀಕ್ಷ್ಣಶಲಾಕಾಃ ಕ್ರಕಚ ವಿಪಾಟತ ಭಿನ್ನ ಶರೀರಾಃ ನರಕ ಭವೇ ವಿರಸಾ ವಿಷಹಂತೇ ಚಿರಮಪಿ ತತ್ಕ್ಷಣ ದುಃಖವಿಷಾದಂ || ಮತ್ತಂ ಕಂದ || ಇಱಕಿಱದನೊದಱ ಕೈರಂ ದಱ ಮುಱ ನಿಟ್ಟೆಲ್ವನರಿದು ನೆಱನೆಡೆಗಳ್ ಬಾ ಯ್ದೆಱೆಯೆ ಪೊಸವುಣ್ಗಳೊಳ್ ಪೊಯ್ ಮಱುಗುವಿನಂ ಲೋಹವಾರಿಯಂ ಮಱುಗುವಿನಂ || ಕಡಿ ಕಟಿವಮನುಡಿ ಕೊಡೆಯಂ ನಡನಡನಡುಗುವಿನಮಡಸಿ ತಡೆಯದೆ ಖಳನಂ ಪಿಡಿದುಡಿಯೆ ಕಟ್ಟು ಮಿಡ ಮಿಡ ಮಿಡುಕುವಿನಂ ಬಡಿಯೊಳೊಡೆಯೆ ಪೊಡೆ ಪೆಡತಲೆಯಂ |

ಬಡಿ ಕೊಲ್ ಕಟ್ಟಿಱ ಮುಱ ಕಡಿ ನಡುವಂ ಕೊಱೆ ಕುತ್ತಿಕರುಳ್ಗಳಂ ತೆಗೆ ಮೊಗಮಂ ಸುಡು ಪಿಡಿ ಬಡಿ ನಿಮಿರ್ದಿಱ ಬಯ್ ಕಡಂಗಿ ನುಂಗೆಂದು ಮುಸುಱ ನಾರಕರಾಗಳ್ ||

ಮತ್ತಂ ಕೊಂತಂಗಳಿಂದಮಿಟ್ಟಗಳಿಂದಂ ಕುತ್ತಿಸಿಱಂದಂ ಕರುಳ್ಮಾಲೆಗಳ್ ನೆಲದೊಳ್ ಸುರಿಯೆ ಕುತ್ತುವುದುಂ ಮುಟ್ಟಗೆಗಳೊಳಿಟ್ಟು ತೆಗಪುವುದುಂ ಕರಗಸಂಗಳಿಂದಂ ಮರನಂ ಪೋೞ್ವಂತೆ ಕೆಯ್ಯಂ ಕಾಲನಗಲ್ಚಿ ಪಿಡಿದಡಸಿ ಕಟ್ಟಿಯುದ್ದಂಬಿಡಿದು ಪೋೞ್ವುದುಮಿಂತಿವು ಮೊದಲಾಗೊಡೆಯ ದುಃಖಂಗಳಂ ಕಣ್ಣಿಮೆಯಿಕ್ಕುವನಿತು ಪೊೞ್ತಪ್ಪೊಡಮುಸಿರ್ ಪತ್ತಿಲ್ಲದುತ್ಕೃಷ್ಟದಿಂದಮೇೞನೆಯ ನರಕದೊಳ್ ಮೂವತ್ತುಮೂಱು ಸಾಗರೋಪಮಕಾಲಂಬರೆಗಂ ದುಃಖಂಗಳನೆಯ್ದುವರ್ ಮತ್ತಂ ದಾನ ಪೂಜೆ ಶೀಲೋಪವಾಸಮೆಂದಿಂತು ಚತುರ್ವಿಧಮಪ್ಪ ಶ್ರಾವಕಧರ್ಮದೊಳ್ ನೆಗೞ್ವವರುಂ ತಪಂಗೆಯ್ವರುಂ ಸ್ವರ್ಗಾಪವರ್ಗ ಸುಖಂಗಳನೆಯ್ದುವರೆಂದಿಂತು ಪೇೞೆ ಕೇಳ್ದು ಭಟಾರರ ಪಕ್ಕದೆ ಅನಣುವ್ರತ ಗುಣವ್ರತ ಶಿಕ್ಷಾವ್ರತಮೆಂದಿಂತು ದ್ವಾದಶವಿಧಮಪ್ಪ ಶ್ರಾವಕಧರ್ಮಮುಮನರ್ಹಂತ ಪರಮದೇವರೆ ದೇವರ್ ಕೊಲ್ಲದುದೆ ಧರ್ಮಂ ಬಾಹ್ಯಾಭ್ಯಂತರ ಪರಿಗ್ರಹಮಿಲ್ಲದುದೆ ತಪಮರ್ಹಂತ ಪರಮ ದೇವರಾಗಮದೊಳ್ ಪೇೞೆಪಟ್ಟ ಜೀವಾಜೀವ ಪುಣ್ಯಪಾಪಾಸ್ರವ ಸಂವರ ನಿರ್ಜರ ಬಂಧ ಮೋಕ್ಷಮೆಂದಿಂತು ನವಪದಾರ್ಥಂಗಳುಮಂ ಪಂಚಾಸ್ತಿಕಾಯಂಗಳುಮಂ ಷಡ್ದ್ರವ್ಯಂಗಳುಮಂ ನಂಬುವುದು ಸಮ್ಯಕ್ತ್ವಮೆಂಬುದಕ್ಕುಮಾ ಸಮ್ಯಕ್ತ್ವದತಿಚಾರಂಗಳ್ ಶಂಕಾದ್ಯಷ್ಟಮಳಂಗಳುಮೆಂಟು ಮದಂಗಳುಂ ಮೂಱುಮೂಢಮುಮಾಱನಾಯತನ ಸೇವೆಗಳುಮೆಂದಿಂತಿರ್ಪ್ಪತ್ತಯ್ದಕ್ಕುಮವಂ ಪಿಂಗಿಸಿ ನಿಶ್ಯಂಕಾದ್ಯಷ್ಟಗುಣಂಗಳಿಂ ಕೂಡಿದ ಶುದ್ಧಮಪ್ಪ ಸಮ್ಯಕ್ತ್ವಪೂರ್ವಕಂ ವ್ರತಂಗಳನೇಱಸಿಕೊಂಡು ಮತ್ತೆ ನರಕಂಗಳ ದುಃಖಂಗಳಂ ಕೇಳ್ವವಱ ಶತಸಹಸ್ರಭಾಗಕ್ಕಪ್ಪೊಡಮೀ ದುಃಖಮಿಲ್ಲೆಂದು ಮನದೊಳ್ ಬಗೆದು ಮೂವತ್ತೆರಡುಂ ದಂಡಣಿಗಳಂ ಸೈರಿಸಿದೆನೆಂದೊಡರಸಂ ಕೇಳ್ದು ನಿನಗೊಸೆದೆಂ ಬೇಡಿಕೊಳ್ ನಿನ್ನ ಬೇಡಿದುದೆಲ್ಲಮಂ ಕುಡುವೆನೆಂದೊಡೆ ಪೆಱತೇನುಮನೊಲ್ಲೆನೆನ್ನ ಕೆಳೆಯನಪ್ಪ ಯಮದಂಡಂಗೆ ಕ್ಷಮಿಯಿಸುವುದನೆ ಬೇಡಿದೆನೆಂದೊಡರಸನಿಂತೆಂದು ಬೆಸಗೊಂಡಂ ಯಮದಂಡಂ ನಿನಗೆಂತು ಕೆಳೆಯನಾದಂ ಮತ್ತೆ ನೀಂ ಶ್ರಾವಕವ್ರತಂಗಳಂ ಕೈಕೊಂಡೆಯಪ್ಪೊಡೇಕೆ ಕಳ್ವೆಯೆಂದು ಬೆಸಗೊಂಡೊಡಾತನಿಂತೆಂದು ಯಮದಂಡನೆನಗೆ ಕೆಳೆಯನಪ್ಪುದುಮಂ ನಿಮ್ಮ ಪೊೞಲ ಕಸವರಮಂ ಕಳ್ದುದರ್ಕೆ ಕಾರಣಮುಮಂ ಪೇೞ್ವೆಂ ಕೇಳರಸಾ ಎಂದು ವಿದ್ಯುಚ್ಚೋರನಿಂತೆಂದು ಪೇೞಲ್ತೊಡಂಗಿದಂ ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ತಿಲಕಮನೆ ಪೋಲ್ವುದು ದಕ್ಷಿಣಾಪಥದೊಳಾಭೀರಮೆಂಬುದು ನಾಡಲ್ಲಿ ವರ್ಣೆಯೆಂಬ ತೊಱೆಯಾ ತಡಿಯೊಳ್ ವೇಣಾತಟಮೆಂಬುದು ಪೊೞಲದು ಪೊೞಲಗುಣಂಗಳಿನಾದಮಾನುಂ ರಮ್ಯಮಪ್ಪುದು ಸ್ವರ್ಗಮನೆ ಪೋಲ್ವುದದನಾಳ್ವೊಂ ಜಿತಶತ್ರುವೆಂಬೊನರಸನಾತನ ಮಹಾದೇವಿ ವಿಜಯಮತಿಯೆಂಬೊಳಾ ಇರ್ವರ್ಗ್ಗಂ ಮಗನೆನಾಂ ವಿದ್ಯೂಚ್ಚೋರನೆಂಬೆಂ ಮತ್ತಾ ಪೊೞಲೊಳ್ ಯಮಪಾಶನೆಂಬೊಂ ತಳಾಱನಾತನ ಪೆಂಡತಿ ನಿಜಗುಣದೇವತೆಯೆಂಬೊಳಾ ಇರ್ವರ್ಗ್ಗಂ ಮಗನೀತಂ ಯಮದಂಡನೆಂಬೊಂ ಮತ್ತಾಮಿರ್ವೆಮುಂ ಸಮಾನವಯಸರೆಮಯ್ದಾಱು ವರ್ಷದ ಪ್ರಾಯದಂದು ಶ್ರಾವಕನಪ್ಪ ಸಿದ್ದಾರ್ಥನೆಂಬುಪಾಧ್ಯಾಯನ ಪಕ್ಕದೆ ಇರ್ವರುಮನೋದಲಿಟ್ಟೊಡೇೞೆಂಟು ವರುಷದೊಳಗೆ ವ್ಯಾಕರಣಂ ಪ್ರಮಾಣಂ ಛಂದಮಲಂಕಾರಂ ನಿಘಂಟು ಕಾವ್ಯಂ ನಾಟಕಂ ಸಾಮುದ್ರಿಕಂ ವಾತ್ಸಾಯನಂ ಶಾಲಿಹೋತ್ರಂ ಪಾಲಕಾಷ್ಯಂ ಚಾಣಕ್ಯಂ ವೈದ್ಯಂ ಮೊದಲಾಗೊಡೆಯ ಶಾಸ್ತ್ರಗಳನೆಲ್ಲಮನಿರ್ವರುಂ ಕಲ್ತು ಬೞಕ್ಕೀತಂ ತಳಾಱನ ಮಗನಪ್ಪುದಱಂ ತನಗೆ ತಕ್ಕ ಕಳ್ಳರನಾರಯ್ಯ ತೆಱನಂ ಪೇೞ್ವ ಸುರಖಮೆಂಬೋದಂ ಕಲ್ತೊನಾನುಂ ಕಳ್ವುಪಾಯಮಂ ಪೇೞ್ವಕರಪಟಶಾಸ್ತ್ರಮಂ ಕಲ್ತೆನಿಂತೆಮಗನ್ಯೋನ್ಯ ಪ್ರೀತಿಯಿಂದಂ ಕಾಲಂ ಸಲೆ ಮತ್ತೊಂದು ದಿವಸಮಿರ್ವರುಂ ವನಕ್ರೀಡೆಯಾಡಲೆಂದಿದ್ರೋಪಮಮೆಂಬ ವನಕ್ಕೆ ಪೋಗಿಯಲ್ಲಿಯಶೋಕ ಪುನ್ನಾಗ ವಕುಳ ತಿಳಕ ತಮಾಳ ಚಂಪಕ ಕ್ರಮುಕ ನಾಳಿಕೇರ ಖರ್ಜೂರ ಜಂಬು ಜಂಬೀರ ಪನಸ ದಾಡಿದು ಕದಳೀ ದ್ರಾಕ್ಷಾ ಸಹಕಾರಂ ಮೊದಲಾಗೊಡೆಯ ಪಲವುಂ ತೆಱದ ವೃಕ್ಷಜಾತಿಗಳಿಂದಂ ಕಿಕ್ಕಿಱಗಿಱದಿರ್ದ ನಂದನವನದೊಳಿರ್ವರುಮುಳಿಸೆಂಡನಾಡುತ್ತಿರಲೋಕನ ವಿದ್ಯೆಯನೀತಂ ಕಲ್ತನಪ್ಪುದಱಂದೆಲ್ಲಿಯುಳಿದೊಡಂ ಕಾಣಲಾಗದೀತನಂ ನೀಡುಮಱಸಿ ಕಾಣದೆ ದೆಸೆಗೆಟ್ಟು ಬೇಸತ್ತಾನಿಂತೆಂದೆನಕ್ಕುಂ ಮಗನೆ ನೀಂ ತಳಾಱನಪ್ಪಂದು ನಿನ್ನ ಕಾಪಿನೊಳ್ ಕಳ್ದು ನಿನ್ನಂ ಕೊಲಿಸದಾಗಳೆನಾಯ್ತೆಂದು ನುಡಿದೊಡೀತನುಮಿಂತೆಂದನಕ್ಕುಂ ಮಗನೆ ನೀನೆನ್ನ ತಳಾಱುಗೆಯ್ಯಂದು ಕಳ್ದೊಡೆ ನಿನ ಪಿಡಿದುಡಿಯೆ ಕಟ್ಟಿ ಕಳ್ಳರ ದಂಡಣೆಯಿಂ ದಂಡಿಸದಾಗಳೇನಾಯ್ತೆಂದು ನುಡಿದೊಡೀ ನುಡಿಯಂ ಮಱೆಯಲ್ವೇಡೆಂದಿರ್ವರುಮೋರೊರ್ವರಂ ಮೂದಲಿಸಿ ಪ್ರತಿಜ್ಞೆಗೆಯ್ದು ಕೆಲಕಾಲದಿಂದೆನ್ನ ತಂದೆಯೆನಗೆ ರಾಜ್ಯಪಟ್ಟಂಗಟ್ಟಿ ಶ್ರುತಸಾಗರರೆಂಬ ಭಟಾರರ ಪಕ್ಕದೆ ತಪಂಬಟ್ಟನೀತನ ತಂದೆಯುಂ ತನ್ನ ಸಂತಾನಮನೀತಂಗೆ ಕೊಟ್ಟರಸನೊಡನೆ ತಪಂಬಟ್ಟಂ ಮತ್ತಾನುಂ ರಾಜ್ಯಂಗೆಯ್ಯುತ್ತಿರೆ ಈತನುಮಾ ಪೊೞಲೊಳ್ ತಳಾಱುಗೆಯ್ಯುತ್ತಿರ್ಕುಮಿಂತು ಸುಖದೊಳಿರ್ವರ್ಗ್ಗಂ ಕಾಲಂ ಸಲೆ ಮತ್ತೊಂದು ದಿವಸಮೀತಂ ತನ್ನ ಮನದೊಳಿಂತೆಂದು ಬಗೆದನೆನ್ನರಸಂ ಕಳ್ಳನಾನುಮೀ ಪೊೞಲೊಳ್ ತಳಾಱು ಗೆಯ್ದೆನಿದು ಕಜ್ಜಮೊಳ್ಳಿತ್ತಲ್ತೆಂದೆನಗಂಜಿ ನಾಡಂ ಬಿಟ್ಟು ಬಂದು ನಿಮಗಾಳಾದನಾನುಮೀತನನೆನ್ನಾಳ್ವ ನಾಡೆಂಟುದೆಸೆಯ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳೊಳಾರಯ್ಸಿಯುಂ ಕಾಣದೆ ಪರಮಂಡಲಂಗಳೊಳಮಾರಯ್ಸಿಯುಂ ಕಾಣದಿಲ್ಲಿಗಾರಯ್ಯಲಟ್ಟಿದೊಡೆ ಚರಪುರುಷರಾರಯ್ದು ಕಂಡು ಬಂದೆನಗಿಂತೆಂದು ಪೇೞ್ವರ್ ದೇವಾ ಮೀಥಿಳೆಯೆಂಬುದು ಪೊೞಲದನಾಳ್ವೊಂ ವಾಮರಥನೆಂಬರಸಂಗೆ ಯಮದಂಡಂ ಪೋಗಿಯಾಳಾಗಿ ಪೊೞಲ ಕಾಪಂಬೆತ್ತು ಸುಖದೊಳಿರ್ದೊನೆಂದು ಪೇೞ್ದೊಡಾ ಮಾತಂ ಕೇಳ್ದು ಪುರುಷೋತ್ತಮನೆಂಬ ಮಂತ್ರಿಗೆ ಮಿಥಿಳೆಯೆಂಬ ಪೊೞಲ್ಗಾನಾರುಮಱಯದಂತಿರೆ ಪೋಗಿ ಯಮದಂಡನೊಡಗೊಂಡು ಬಂದಪೆನೆಂದು ಪೇೞ್ದು ವಜ್ರಸೇನನೆಂಬ ಪೆರ್ಗಡೆಯಂ ಕರೆಯಿಸಿ ಅನೊಂದು ಮನೆವಾೞ್ತೆಗೆ ಪೋಗಿ ಬಂದಪೆನೆನ್ನ ಬರ್ಪನ್ನೆಗಂ ರಾಜ್ಯಮಂ ಪ್ರತಿಪಾಲಿಸುತ್ತಿರೆಂದು ಕಲ್ಪಿಸಿ ಸಮಸ್ತರಾಜ್ಯಭಾರಮಂ ಸಮರ್ಪಿಸಿ ಆರ್ಧರಾತ್ರದಾಗಳ್ ಕಪ್ಪಡಮಂ ಪಱೆದುಟ್ಟು ಬೞಕಾರು ಮಱಯಲೀಯದೊರ್ವನೆ ಪೊಱಮಟ್ಟು ಬಂದೀ ಪೊೞಲಂ ಪೊಕ್ಕು ಪ್ರತಿಜ್ಞೆ ಕಾರಣವಾಗಿ ಕಸವರಮಂ ಕಳ್ದೀತನಂ ಕೊಲಿಸುವಂತು ಮಾಡಿದೆನಿದು ಕಳ್ದುದರ್ಕೆ ಕಾರಣಮೀತನುಮೆನಗೀ ಪಾಂಗಿನೊಳ್ ಮಿತ್ರನೆಂದು ಪೇೞ್ದು ಮತ್ತಮಿಂತೆಂದಂ ನಿಮ್ಮ ದೇವತಾಷ್ಠಿತಮಪ್ಪ ಸರ್ವರುಜಾಪಹಾರಮೆಂಬ ಹಾರಮಗಮಸಮ್ಯಗ್ದೃಷ್ಟಿಯೆನಪ್ಪುದಱಂದೆನ್ನ ಕೆಯ್ಗೆವಂದುದುೞದ ಮಿಥ್ಯಾದೃಷ್ಟಿಗಳ ಕೆಯ್ಗೆವಾರದೆಂದೊಡರಸಂ ತನ್ನ ಸಭೆಯೊಳಿರ್ದ ನೆರವಿಗೆಲ್ಲಂ ಹಾರಂ ಬಂದ ತೆಱನನಿಂತೆಂದು ಪೇೞಲ್ ತೊಡಡಗಿದೊಂ ಧನ್ವಂತರಿ ವಿಶ್ವಾನುಲೋಮರ್ಕಳ ಕಥೆಯಂ ಮೊದಲಿಂ ತಗುಳ್ದು ಪೇೞುತ್ತುಮಿಂತೆಂದನೆಮ್ಮ ಸಂತತಿಯ ಪದ್ಮರಥನೆಂಬರಸನೊಂದು ದಿವಸಂ ವಾಸುಪೂಜ್ಯತೀರ್ಥಕರ ಪರಮದೇವರಂ ಬಂದಿಸಲ್ ಪೋಗುತ್ತಿರ್ದೊನನೆಡೆಯೊಳ್ ಅಚ್ಯುತೇಂದ್ರನುಂ ವಿಶ್ವಾನುಲೋಮಚರನಪ್ಪ ವಾಹನದೇವನುಮಿಂತಿರ್ವರುಂ ಕಂಡು ಅಚ್ಯುತೇಂದ್ರ ವಾಹನದೇವನನಿಂತೆಂದನೀತಂ ಆಧರ್ಮಿಯಿಂದೆ ಧರ್ಮಮಂ ಕೆಯ್ಕೊಂಡು ವಾಸುಪೂಜ್ಯ ತೀರ್ಥಕರ ಪರಮದೇವರಂ ಬಂದಿಸಿದಲ್ಲದುಣ್ಣೆನೇಂದಾಗ್ರಹಂ ಗೊಂಡು ಚಂಪಾನಗರಕ್ಕೆವೋದಪೊನೀತನಂ ಪೋಗಲೀಯದೆ ಮಗುೞ್ಚಲಾಱಡೆ ಮಗುೞ್ಚೆಂದು ನುಡಿದೊಡೆ ವಾಹನದೇವನುಂ ತನ್ನಾರ್ಪ ತೆಱದಿಂದೆಲ್ಲಮೆನಿತಾನುಂ ತೆಱದುಪಸರ್ಗಂಗೆಯ್ದು ಮಗುೞ್ಚಲಾಱದೆ ಬೇಸತ್ತುೞದೊಡೆ ಅಚ್ಯುತೇಂದ್ರಂ ಪದ್ಮರಥಂಗೊಸೆದು ನತ್ನ ತೊಟ್ಟ ಸರ್ವರುಜಾಪಹಾರ ಮೆಂಬ ಹಾರಮನಾತನ ಕೊರಳೊಲ್ ತಾನೆ ಕಟ್ಟಿ ಪೊಗೞ್ದು ಪೂಜಿಸಿ ಪೋದೊನಿಂತೀ ಪಾಂಗಿನೊಳೆಮಗೀ ಹಾರಂ ಸಂತತಿಯಿಂ ಬಮದುದೆಂದು ಪೇೞ್ದರ್ದ ತದನಂತರಂ ಇರ್ವರ್ ಪರಿವೊಟ್ಟೆಯವರೋಲೆಯಂ ಕೊಂಡು ಬಂದರಸನ ಮನೆಯ ಬಾಗಿಲೊಳ್ ನಿಂದು ಪಡಿಯಱಂಗೆ ಪೇೞ್ದೊಡೆ ಪಡಿಯಱಂ ತಮ್ಮರಸಂಗೆ ವೇೞ್ದೊಡರಸನನುಮತದಿಂದರಮನೆಯಂ ಪೊಕ್ಕಾಸ್ಥಾನಮಂಟಪ ದೊಳಿರ್ದ ವಿದ್ಯುಚ್ಚೋರನಂ ಕಂಡು ಪೊಡೆವಟ್ಟಾತನ ಮೂಂದೋಲೇಯನಿಕ್ಕಿದಾಗಳ್ ಸಂವಿಗ್ರಹಿ ಓಲೆಯಂ ಕೊಂಡರಸನ ಮುಂದಿಂತೆಂದು ಬಾಚಿಸಿದಂ ವಿದ್ಯುಚ್ಚೋರ ಪರಮಸ್ವಾಮಿಗೆ ಮಂತ್ರಿ ಪುರುಷೋತ್ತಮನುಂ ಪೆರ್ಗಡೆ ವಜ್ರಸೇನನುಂ ಸಾಷ್ಟಾಂಗವೆಱಗಿ ಪೊಡೆವಟ್ಟು ಕಾರ್ಯಮಂ ಬಿನ್ನವಿಪ್ಪರ್ ತಾಮುಂ ಪಲವು ದಿವಸಂ ಪೋಗಿರ್ದರ್ ಪೆಱತಣ ಮನೆವಾೞ್ತೆಯಂ ಮಱೆದಿರ್ದರ್ ತಾಮಿಲ್ಲದೆ ರಾಜ್ಯಮಂ ಪ್ರತಿಪಾಲಿಸುವೊರಾರುಮಿಲ್ಲೀಯೋಲೆಯಂ ಕಾಣಲೊಡಂ ತಡೆಯದೆ ಪೊಱಮಟ್ಟು ಬೇಗಂ ಬರ್ಕೆಂದು ಬಾಚಿಸಿದುದಂ ವಾಮರಥಂ ಕೇಳ್ದು ಮುನ್ನೀತನ ಪೇೞ್ದುದುಮೋಲೆಯ ಮಾತುಮೊಂದಾದಾದುದೆಂದು ಸಂದೇಹಮಿಲ್ಲದಾಗಳ್ ನಂಬಿ ಈತಂ ಮಂಡಳಿಕನೆಂದಱದು ತನ್ನ ಸಿಂಹಾಸನದೊಳೋರಂತಪ್ಪಾಸನ ಮನಿಕ್ಕಲ್ವೇೞರಿಸಿ ಇಂತೆಂದನೆನ್ನ ತಂಗೆಯ ಮಗನಯ್ ಸೋದರಳಿಯನಯ್ ನಿನಗೆನ್ನ ಮಕ್ಕಳಂ ಶ್ರೀಮತಿ ವಸುಮತಿ ಗುಣಮತಿ ಸುಲೋಚನೆ ಸುಪ್ರಭೆ ಸುಕಾಂತೆ ಸುಶೀಲೆ ಮನೋಹರಿಯೆಂಬೆಣ್ಣರುಂ ಕನ್ನೆಯರತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡೆಯರ್ ನವಯೌವನೆಯರಕ್ಷರಾಲೇಖ್ಯ ಗಣಿತ ಗಾಂಧರ್ವ ನೃತ್ಯ ಚಿತ್ರಕರ್ಮ ಪತ್ರಚ್ಛೇದ್ಯಮೆಂದಿವು ಮೊದಲಾಗೊಡೆಯ ಚತುಷ್ಪಷ್ಟಿ ಕಲೆಗಳೊಳಾದಮಾನುಂ ಕುಶಲೆಯರ್ ಪರಮಂಡಲಿಕರ್ ಪಲರ್ ಪಾಗುಡಂಗಳುಮೋಲೆಗಳುಂ ಪೆರ್ಗಡೆಗಳುಮನೆನವರತಂ ಕೂಸುಗಳಂ ಬೇಡಿಯಟ್ಟುತ್ತಿರ್ಪರವರಾರುಮಂ ನಾಂ ಮೆಚ್ಚದೆ ಕುಡದಿನ್ನೆಗಮಿಂತಿವರ್ಗಳಂ ತಾಂಗಿರ್ದೆನೀ ಕನ್ಯಾರತ್ನಂಗಳ್ಗೆ ನೀನೆ ಯೋಗ್ಯನಯ್ ನಿನಗೆಣ್ವರುಮಂ ಕೊಟ್ಟೆನ್ ಮದುವೆನಿಲ್ಲೆಂದೊಡಾತನಿಂತೆಂದನಾನೊರ್ವಳ್ಗೆ ಬೇಂಟಂಗೊಂಡಿರ್ದೆನಿವರಂ ಕೊಂಡೇವೆನೆಂದೊಡರಸನಾರ್ಗೆ ಬೇಂಟಂಗೊಂಡಿರ್ದೆಯೆಂದು ಬೆಸಗೊಂಡೊಡೆ ಮುಕ್ತಿಶ್ರೀಯೆಂಬೊಳ್ ಪೆಂಡತಿಗೆ ಬೇಂಟಂ ಗೊಂಡಿರ್ದನಾಕೆಯಂ ಮದುವೆನಿಲಲ್ವೇೞ್ದುಮೆಂದು ಪರಿಚ್ಛೇದಿಸಿ ನುಡಿದು ಮತ್ತಮಿಂತೆಂದನೆನ್ನ ಕೆಳೆಯನನೆಗೊಪ್ಪಿಸಲ್ವ್ೞ್ಕುಮೆಂದೊಡರಸನುಮೊಪ್ಪಿಸಿದೆನೆಂದೊಡೆ ಅರಸನಂ ಬೀೞ್ಕೊಂಡು ಯಮದಂಡ ಪುರಸ್ಸರಮಿರ್ವರುಮೊಟ್ಟೆಯನೇಱ ತುರಿಪದಿಂ ಕತಿಪಯ ದಿವಸಂಗಳಿಂ ವೇಣಾತಟಮನೆಯ್ದಿ ಪೊಱವೊಱಲೊಳಿರ್ದು ಪೇೞ್ದಟ್ಟಿಯಪ್ಪಶೋಭೆಯಂ ಮಾಡಿಸಿ ಮಂತ್ರಿಮಹತ್ತರ ಪರಿವಾರ ಸಾಮಂತ ಮಹಾಸಾಮಂತರುಂ ಪೆಂಡವಾಸದ ಸೂಳೆಯರುಂ ಪೊೞಲ ಜನಮೆಲ್ಲಮಿದಿರಂ ಬಂದು ಕಂಡು ಪೊಡೆವಟ್ಟು ಸೇಸೆಗಳನಿಕ್ಕಿದ ಬಱಕ್ಕೆ ಪಟ್ಟವರ್ಧನಮನಿರ್ವರುಮೇಱ ಬೆಳ್ಗೊಡೆ ಮೊದಲಾಗೊಡೆಯ ರಾಜಚಿಹ್ನಂಗಳ್ ಮುಂದೆ ಪರಿಯೆ ಪಂಚಮಹಾಶಬ್ದಂಗಳುಂ ಬದ್ದವಣದ ಪಱೆಗಳುಂ ಬಾಜಿಸೆ ಅರಮನೆಯಂ ಪೊಕ್ಕು ಮಱುದಿವಸಮಾಸ್ತಾನಮಂಡಪದೊಳ್ ಸಿಂಹಾಸನಮಸ್ತಕಸ್ಥಿತನಾಗಿ ಸಾಮಂತ ಮಹಾಸಾಮಂತರ್ಕಳಂ ಮಂತ್ರಿಮಹತ್ತರ ಪುರೋಹಿತ ಪರಿವಾರದವರ್ಗಳಮರಸಿಯರ್ಕಳಂ ಬೞಯಟ್ಟಿ ಬರಿಸಿ ಇಂತೆಂದು ನುಡಿದನಾನೀ ಸಂಸಾರದೊಳಪ್ಪ ಭೋಗೋಪಭೋಗಂಗಳ್ಗೆ ಪೇಸಿ ವಿರಕ್ತನಾಗಿ ತಪಂಬಡಲ್ ಬಗೆದಪ್ಪೆನೆಂದೊಡನಿಬರುಂ ನೆರೆದಿಂತೆಂದರಿನ್ನುಮಾವುದು ಕಾಲಂ ತಪಂಬಡಲಿನ್ನುಂ ನೀ ಕೂಸನಯ್ ನವಯೌವನನಯ್ ಕೆಲಕಾಲಮರಸುಗೆಯ್ದು ಪಶ್ಚಾತ್ಕಾಲದೊಳ್ ತಪಂಬಡಲಕ್ಕುಮೆಂದೊಡರಸನಿಂತೆಂತನೆಂತಱಯಲಕ್ಕು ಮನ್ನೆಗಂ ಸಾವರೊ ಬಾೞ್ವರೊ ಎಂದೀ ಪ್ರಸ್ತುತುಂಗಳನವರ್ಗ್ಗಾಡಿ ಪೇೞಲ್ ತೊಡಂಗಿದಂ

ಶ್ಲೋಕ || ಡಿಂಡೀರಪಿಂಡಸಂಕಾಶಮಾಯುಃ ಸಂಸಾರವರ್ತಿನಾಂ ಆಖಂಡಲ ಧನುಷ್ಕಾಂಡ ಸನ್ನಿಭಂ ರೂಪಯೌವನಂ ||

ವೃತ್ತ || ರೂಪಂ ಯೌವನಮಾಯುರಕ್ಷವಿಷಯಾ ಭೋಗೋಪಭೋಗಾ ವಪುಃ ವೀರ್ಯಂ ಸ್ವೇಷ್ಟಸಮಾಗಮೋ ವಸುಮತಿಃ ಸೌಭಾಗ್ಯಭಾಗ್ಯೋದಯೋ ಯೇ – ನಿತ್ಯಾಃ ಸುಟಮಾತ್ಮನಃ ಸಮುದಿತಾ ಜ್ಙಾನೇಕ್ಷೀಣಾಂ ಭೂಭೃತಾಂ ಶೇಷಾ ಇತ್ಯನುಚಿಂತಯಂತು ಸುಯಃ ಸರ್ವೇಸದಾ – ನಿತ್ಯತಾಂ ||

ಯದಿ ಜಾತಿಜರಾಮರಣಂ ನ ಭವೇತ್ ಯದಿ ಚೇಷ್ಟ ವಿಯೋಗಭಯಂ ನ ಭವೇತ್ ಯದಿ ಸರ್ವಮನಿತ್ಯಮಿದಂ ನ ಭವೇತ್ ಇಹ ಜನ್ಮನಿ ಕಸ್ಯ ರತಿರ್ನಭವೇತ್ ||

ಅದಱಂ ಮಾನಸರ ರೂಪುಂ ಯೌವನಮುಂ ತೇಜಮುಂ ಲಾವಣ್ಯಮುಂ ಸೌಭಾಗ್ಯಮುಂ ಆಯುಷ್ಯಮುಂ ಶ್ರೀಯುಂ ಸಂಪತ್ತುಂ ವಿಭವಮುಂ ನಲ್ಮೆಯುಂ ಎಂದಿವು ಮೊದಲಾಗೊಡೆಯವನಿತ್ಯಂಗಳ್ ಮತ್ತಂ ಮೆಯ್ಯೊಳ್ಳಿತ್ತೆಯೆಂದೊಡದುವುಂ ತಾನಿಂತುಟೆ

ಗಾಹೆ || ಏದಂ ಸರೀರಮಸುಚಿಂ ಣಿಚ್ಚಂ ಕಲಿ ಕಲುಸಭಾಜಣಮಚೊಕ್ಖಂ ಅಂತೋ ಬಾಹಿರದಿಟ್ಟಂ ಸಕ್ಕಿಬ್ಬಿಸ ಭಿರಿದಂ ತು ಅಮೇಜ್ಜಪುರಂ ವಸಮಜ್ಜ ಮಾಂಸ ಸೇಣಿದ ಪುಪ್ಪುಸ ಕಾಲಿಜ್ಜ ಸೇಮ್ಮ ಸೀಹಾಣಂ ಬಿಡಜಾಲ ಅಟ್ಠಿಸಕಲ (?) ಚಮ್ಮಾಣದ್ಧಂ (?) ಸರೀರಪುರಂ ಅಟ್ಮಿಹಿ ಛಣ್ಣಂ ಣಾಳಿಹಿ ಬದ್ಧಂ ಕಲಿಮಲಭರಿದಂ ಕಿಮಿಕಉಲಪುಣ್ಣಂ ಮಾಂಸವಿಲಿತ್ತಂ ತಯಪಡಿಛಣ್ಣಂ ಸರೀರಪುರಂತಂ ಸಂತತಮಚೊಕ್ಖಂ ಏದಾರಿಸೇ ಸರೀರೇ ದುಗ್ಗಂಧೇ ಕುಣಿಮಪೂತಿಏ ಯಚೊಕ್ಖೇ ಪಡಣ ಪಡಣಯ ಸಾರೇ ರಾಗಂ ಣ ಕರೇಂತಿ ಸಪ್ಪುರಿಸಾ ಛಾಯೇವ ಸಕದಕ್ಕಮ್ಮಂ ಅಣುಯಾದಿ ಕಾರಗಂ ಣ ಸೇಸಂ (?) ಪಲಾಯಿದಂ ದುಸ್ಸಕ್ಕಂ ಅನ್ಣತ್ಥ ಜಿಣಸಾಸಣೇ (?)

ಶ್ಲೋಕ || ದುರ್ಗಂಧೇ ದುರ್ಧರಶ ದುಃಖೇ ದುಃಸ್ವಭಾವೇ ಚ ನಶ್ವರೇ ದುರ್ವಿಲೋಕೇ ವೃಥಾ ಕಾಯೇ ಕಿಂತು ಜ್ಞಾನಿ ತವಾಗ್ರಹಃ ಅಚ್ಛೇದ್ಯೋನಂತ ಸೌಖ್ಯೋಹಂ ವೇತ್ತಾ ಪೂರ್ವೋನಿರಂಜನಃ ಸರ್ವದುಃಖಾಕರಂ ದೇಹಂ ತ್ಯಜಾಮ್ಯೇತತ್ ಪರಿಸುಟಂ

ವೃತ || ಜಾತಿಕ್ಷ್ಮಾಜತತೇ ಕೃತಾಂತಕಯಪಿತ ಕ್ರೂರೋರು ದುಃಶ್ವಾಪದೇ ವೈ ವೈಧಭಯೇ ದುರಂತ ದುರಿತ ಸೂರ್ಜ್ಜದವಾಗ್ನಿಚ್ಛದೇ ನಿಸ್ತ್ರಾಣಸ್ಯ ವಿಚೇತಸೋ ದೈಢತೃಷಾ ದುಃಖಾಕುಳಸ್ಯಾಂಗಿನೋ ಜೈನಂ ಶಾಸನಮೇಕಮೇವ ಶರಣಂ ಜನ್ಮಾಟವೀಸಂಕಟೇ

ವೃತ್ತ || ಯಾವತ್ ಸ್ವಸ್ಥಮಿದಂ ಶರೀರಮರುಜಂ ಯಾವಜ್ಜರಾದೂರತಃ ಯಾವಚ್ಛೇಂದ್ರಿಯ ಶಕ್ತಿಪ್ರತಿಹತಾ ಯಾವತ್ ಕ್ಷಯೋ ನಾಯುಷಃ ಆತ್ಮಶ್ರೇಯಸಿ ತಾವದೇವ ವಿದುಷಾ ಕಾರ್ಯಃ ಪ್ರಯತ್ನೋ ಮಹಾನ್ ಪ್ರೋದ್ದೀಪ್ತೇ ಭವನೇ ತು ಕೂಪಜನನಂ ಪ್ರತ್ಯುದ್ಯಮಃ ಕೀದೃಶಃ

ಎಂದಿವು ಮೊದಲಾಗೊಡೆಯವನೋದಿಯವಱರ್ಥಮಂ ನೆರವಿಗೆಲ್ಲಂ ವಖ್ಖಾಣಿಸಿ ಪೇೞ್ದು ಮತ್ತಮಿಂತೆಂದಂ

ಕಂದ || ಅನಾಳ್ದ ನಾಳ್ಗಳಿವರೆನ ಗೇನಾಯ್ತೆಂದರಱದುಮಱಯದುಱದಾಂ ನುಡಿದೊಂ ದೇನಾನುಮೇವಮುಳ್ಳೊಡ ಮಾ ನುಡಿಯಂ ಮಱೆಯಿಮೆಲ್ಲಮಿಂ ನಿಶ್ಯಲ್ಯಂ

ಗಾಹೆ || ಖಮ್ಮಾಮಿ ಸವ್ವಜೀವಾಣಂ ಸವ್ವೇ ಜೀವಾ ಖಮಂತು ಮೇ ಮೇತ್ತೀ ಮೇ ಸವ್ವಭೂದೇಸು ವೇರಂ ಮಜ್ಝಣ ಕೇಣ ಚಿ

ಎಂದೆಲ್ಲರುಮಂ ಕ್ಷಮೆಗೊಳಿಸಿ ನಿಶ್ಯಲ್ಯಂಗೆಯ್ದು ವಿದ್ಯುದಂಗನೆಂಬ ಪಿರಿಯ ಮಗಂಗೆ ರಾಜ್ಯಂಗಟ್ಟಿ ರಾಜ್ಯಭಿಷೇಕಂಗೆಯ್ದೀತನಂ ಪಿಡಿದು ನೀಮೆಲ್ಲಂ ಸುಖಂ ಬಾಱಮೆಂದು ಕಲ್ಪಿಸಿ ಯಮದಂಡಂಗಂ ಪೊೞಲ ತಲಾಱಕೆಯಂ ಕೊಟ್ಟು ಮಂಗಳವಸದನಂಗೊಂಡು ಪಟ್ಟವರ್ಧನಮನೇಱ ಸತಿಯರ್ ಸಂಗಡಂ ಬರೆ ಪೆಂಡವಾಸದ ಸೂಳೆಯರಿರ್ಬರ್ ಪೆಱಗೇಱರ್ಕೆಲದೊಳಂ ಚಾಮರಂಗಳನಿಕ್ಕುತ್ತುಂ ಬರೆ ಬೆಳ್ಗೊಡೆಗಳುಂ ಪಾಳಿದ್ವಜಂಗಳುಂ ತಜಿನೆವೞಯಿಗೆಗಳುಂ ಚಂದ್ರಾದಿತ್ಯರ್ಕಳುಂ ಸಿಂಹ ವ್ಯಾಘ್ರ ಮಕರ ಮತ್ಸ್ಯಂಗಳೆಂದಿವು ಮೊದಲಾಗೊಡೆಯ ರಾಜ್ಯಚಿಹ್ನಂಗಳ್ ಮುಂದೆ ಪರಿಯೆ ಪಂಚಮಹಾಶಬ್ದಂಗಳುಂ ಬದ್ದವಣದ ಪಱೆಗಳುಂ ಬಾಜಿಸೆ ವಂದಿ ಮಾಗಧ ಯಾಚಕ ಪ್ರಭೃತಿಗಳ್ಗಂ ದೀನಾನಾಥಾಂಧರ್ಕಳ್ಗಂ ತುಷ್ಟಿದಾನಮಂ ಕೊಡುತ್ತಂ ಪೋಗಿ ಸಹಸ್ರಕೂಟ ಚೈತ್ಯಾಲಯಮನೆಯ್ದಿ ಪಟ್ಟವರ್ಧನದಿಂದಿೞದು ಬಸದಿಯಂ ತ್ರಿಃ ಪ್ರದಕ್ಷಿಣಂಗೆಯ್ದು ದೇವರಂ ವಂದಿಸಿ ಗುಣಧರರೆಂಬಾಚಾರ್ಯರಂ ಗುರುಭಕ್ತಿಗೆಯ್ದು ವಂದಿಸಿ ಇಂತೆಂದಂ ಭಟಾರಾ ಸಂಸಾರಮೆಂಬ ಸಮುದ್ರದೊಳ್ ಮುೞುಗುತ್ತಿರ್ದೆನ್ನಂ ಮುೞುಗಲೀಯದೆತ್ತಿಮೆನಗೆ ದೀಕ್ಷೆಯಂ ಪ್ರಸಾದಂಗೆಯ್ಯಿಮೆಂದು ನುಡಿದೊಡಂಬಡಿಸಿ ಸಾಸಿರ್ವರರಸು ಮಕ್ಕಳ್ವೆರಸು ಕಟಕ ಕಟಿಸೂತ್ರ ಕುಂಡಲಾಭರಣಾದಿಗಳಂ ಕಳೆದು ಬಾಹ್ಯಾಭ್ಯಂತರ ಪರಿಗ್ರಹಮೆಲ್ಲಮಂ ತೊಱೆದು ಗುಣಧರ ಭಟ್ಟಾರರ ಪಕ್ಕದೆ ತಪಂಬಟ್ಟಂ ಮತ್ತಂ ದೇವಗಣಿಕೆಯರನೆ ಪೋಲ್ವ ಸೌಂದರಿಮಹಾದೇವಿ ಮೊದಲಾಗೇೞ್ವೂರ್ವರರಸಿಯರ್ಕಳ್ ಗುಣಧರ ಭಟಾರರೆ ಗುರುಗಳಾಗೆ ತಮ್ಮತ್ತೆವಿರಪ್ಪ ವಿಜಯಮತಿ ಕಂತಿಯರ್ ಕಂತಿಯರಾಗೆ ತಪಂಬಟ್ಟು ಗಿಡಿಗಿಡಿಜಂತ್ರಂ ಮಿಳಿಮಿಳಿ ನೇತ್ರಮಾಗಿ ಘೋರವೀರ ತಪಶ್ಚರಣದೊಳ್ ನೆಗೞುತ್ತಿರ್ದರ್ ಇತ್ತ ವಿದ್ಯುಚ್ಚೋರ ಮುನಿಯಂ ಪನ್ನೆರಡುವರ್ಷಂಬರೆಗಂ ಗುರುಗಳನಗಲದೆ ದ್ವಾದಶಾಂಗ ಚತುರ್ದಶ ಪೂರ್ವಮಪ್ಪಾಗಮಮೆಲ್ಲಮಂ ಕಲ್ತುಗ್ರೋಗ್ರ ತಪಶ್ಚರಣದೊಳ್ ನೆಗೞುತ್ತುಮಾಚಾರ್ಯರಾಗಿ ಆಯ್ನೂರ್ವರ್ ಶಿಚ್ಯರ್ಕಳ್ವೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಪೋಗಿ ಪೂರ್ವದೇಶದೊಳ್ ಖಾಳಿಮಂಡಳಮೆಂಬ ನಾಡೊಳ್ ತಾಮ್ರಲಿಪ್ತಿಯೆಂಬ ಪೊೞಲ ಪೊಱವೊೞಲನೆಯ್ದಿದಾಗಳಲ್ಲಿ ವರಾಂಗಾಯಿಯೆಂಬೊಳುಗ್ರದೇವತೆಗಱುದಿಂಗಳಱುದಿಂಗಳಿಂಗೆಲ್ಲಾ ಕಾಲಮುಂ ಜಾತ್ರೆಯಪ್ಪುದಾ ಜಾತ್ರೆಗೆ ನಾಡೆಯಷ್ಟಮಿಯಂದು ಬಂದು ನೆರೆದು ಜಾತ್ರೆಯಂ ಮಾಡೆ ದುರ್ಗಾದೇವತೆ ರಿಸಿಯರ ಬರವಂ ಗೆಂಟಱೊಳಿರ್ದು ಕಂಡಿದಿರಂ ಪೋಗಿ ಇಂತೆಂದಳೆನ್ನ ಜಾತ್ರೆ ಸಮೆವನ್ನೆಗಂ ನೀಮೀ ಪೊೞಲಂ ಪುಗದಿರಿಮೆಂದು ಬಾರಿಸಿದೊಡೆ ಶಿಷ್ಯರ್ಕಳೆಂದರ್ ನಮ್ಮಂ ದೇವತೆಯೇಗೆಯ್ದಪ್ಪೊಳ್ ಪೋಪಂ ಭಟಾರಾ ಎಂದು ಭಟಾರರನೊಡಗೊಂಡು ದೇವತೆ ಬಾರಿಸೆವಾರಿಸೆ ಪೊೞಲಂ ಪೊಕ್ಕು ಮತ್ತಿರುಳ್ ಪೊೞಲ ಪಡುವಣ ದೆಸೆಯಂ ಕೊಂಟೆಯಿಂ ಪೋಱಗಣ ದೆಸೆಯೊಳ್ ವಿದ್ಯುಚ್ಚೋರ ಭಟಾರರ್ ಪ್ರತಿಮಾಯೋಗಂ ನಿಂದೊಡೆ ದೇವತೆ ಮುಳಿದು ಪೊಱಸುಗಳನಿವಿರಿಯವು ದಂಸಮಸಂಕಂಗಳಂ ವಿಗುರ್ವಿಸೆ ಮೆಯ್ಯೆಲ್ಲಮನಿರುಳ್ ನಾಲ್ಕು ಜಾವಮುಂ ತಿನೆ ನರಕವೇದನೆಯಿಂದ ಮಗ್ಗಳಮೆ ವೇದನೆಯಪ್ಪಂತುಪಸರ್ಗಂಗೆಯ್ಯೆ ಅಂತಪ್ಪ ದುಃಖಮುಂ ವೇದನೆಯುಮಂ ಮನದೊಳಿಲ್ಲದಂತಿರೆ ಸೈರಿಸಿ ಆಜ್ಞಾವಿಚಯಮಪಾಯವಿಚಯ ವಿಪಾಕವಿಚಯ ಸಂಸ್ಥಾನ ವಿಚಯಮೆಂಬೀ ನಾಲ್ಕು ಧರ್ಮಧ್ಯಾನಂಗಳಂ ಧ್ಯಾನಿಸಿ ಬೞಕ್ಕೆ ಪೃಥಕ್ತ್ವ ವಿತರ್ಕ ವೀಚಾರಮೆಂಬ ಪ್ರಥಮ ಶುಕ್ಲಧ್ಯಾನಮಂ ಧ್ಯಾನಿಸುತ್ತಂ ಕ್ಷಪಕ ಶ್ರೇಣಿಯನೇಱ ಏಕತ್ವ ವಿತರ್ಕ ವೀಚಾರಂ ಸೂಕ್ಷ್ಮಕ್ರಿಯಾ ಪ್ರತಿಪಾತಿ ಸಮುಚಿನ್ನ ಕ್ರಿಯಾನಿವೃತ್ತಿಯೆಂಬ ಶುಕ್ಲಧ್ಯಾನಂಗಳಂ ಧ್ಯಾನಿಸಿ ಘಾತಿಕರ್ಮಂಗಳಂ ಕಿಡಿಸಿ ಅಂತರ್ಗತಕೇವಳಿಯಾಗಿ ಅಘಾತಿಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆ ವೋದರ್ ಮತ್ತೆ ಸಂನ್ಯಸನಂಗೆಯ್ಯುತ್ತಿರ್ದ ಭವ್ಯರ್ಕಳ್ ಪರಮ ಶುದ್ಧ ಸಹಜ ರತ್ನತ್ರಯಮನಾರಾಸುತ್ತಿರ್ದೊರ್ ವಿದ್ಯುಚ್ಚೋರ ಋಷಿಯರಂ ಮನದೊಳ್ ಬಗೆದು ದಂಡಣೆಗಳುಮಂ ವೇದನೆಗಳುಮಂ ವ್ಯಾಗಳುಮಂ ಚತುರ್ವಿಧಮಪ್ಪುಪಸರ್ಗಮುಮಂ ಪಸಿವುಂ ನೀರೞ್ಕೆಯುಂ ಶೀತೋಷ್ಣವಾತ ದಂಸಮಸಕಂ ಮೊದಲಾಗೊಡೆಯವಱಂದಪ್ಪ ವೇದನೆಗಳುಂ ದುಃಖಂಗಳುಮಂ ಸೈರಿಸಿ ಪರಮ ಶುದ್ದ ಸಹಜ ರತ್ನತ್ರಯಂಗಳಂ ಸಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ