11203ವಿಮೋಚನೆ — ಗುರುವಾರನಿರಂಜನ
...ಗುರುವಾರ

...ಗುರುವಾರ

ಬೆಳಕು ಹರಿದು ಎರಡು ಘಂಟೆಗಳಾಗಿವೆ. ಸೆರೆಮನೆಯ
ಕೊಳಾಯಿಯಲ್ಲಿ ಮುಖ ತೊಳೆಸಿ, ಮತ್ತೆ ಕೊಠಡಿಗೆ ತಂದುಬಿಟ್ಟದಾರೆ.
ನಿನ್ನೆ ಒಂದೇ ಸಮನೆ ಅಷ್ಟು ಬರೆದೆನೆಂದೂ ಏನೊ, ಕೈಕಾಲುಗಳು
ಜಡವಾಗಿವೆ.

ಮನಸ್ಸೂ ಕುಂಠಿತವಾಗಿದೆ. ನಾನು ಬಲ್ಲೆ. ಮನಸ್ಸಿಗೆ ಹೀಗಾ
ಗಿರುವುದು ಬಳಲಿಕೆಯಿಂದಲ್ಲ. ಬಾಲ್ಯದ ಅಷ್ಟು ದಿನಗಳ ಅಷ್ಟೊಂದು
ಅನುಭವ ರಾಶಿಯನ್ನು ಅನುಕ್ರಮವಾಗಿ ನೆನೆಸಿಕೊಂಡುದರಿಂದ
ಹೀಗಾಗಿದೆ. ಹಿಂದಿನ ದಿನಗಳಲ್ಲಾಗಿದ್ದರೆ ದೆವ್ವದ ಹಾಗೆ ಇಷ್ಟು ದುಡಿದ
ಮೇಲೆ, ದಿನ ರಾತ್ರೆ ನಾನು ದೀರ್ಘವಾಗಿ ನಿದ್ದೆ ಹೋಗಬಹುದಿತ್ತು.
ಈಗ ಹಾಗೆ ಮಾಡುವಂತಿಲ್ಲ. ನಾನು ಮಾಡಬೇಕಾದ ಕೆಲಸವಿದೆ
ಕೊನೆಯ ಕೆಲಸ. ನಿರ್ದಿಷ್ಟ ಅವಧಿಯೊಳಗೆ ನಾನು ಅದನ್ನು ಮಾಡಿ
ಮುಗಿಸಲೇಬೇಕು........

ಮುಂಜಾವದ ಗಾಳಿ ಸೇವನೆಗಾಗಿ ಒಳಗೆ ಒಂದು ರೌಂಡ್ ಬಂದ ಅಧಿಕಾರಿ ಕೇಳಿದ.

"ಏನು ಮಿಸ್ಟರ್ ಚಂದ್ರಶೇಕರ್, ನಿದ್ದೇನೆ ಮಾಡಿಲ್ಲ ಅಂತ
ತೋರುತ್ತೆ. ಏನು ಓದ್ತಾಯಿದ್ರೇನು?"

"ಇಲ್ಲಾ ರೀ. ಆಂಥಾದೇನೂ ಇಲ್ಲ. ನಿದ್ದೆ ಬರ್ಲಿಲ್ಲ. ಹಾಗೇ
ಕೂತಿದ್ದೆ."

"ಸ್ಲೀಪಿಂಗ್ ಡೋಸ್ ಕಳಿಸ್ಲೇನು?"

ಇನ್ನು ನಿದ್ದೆಗುಳಿಗೆಯ ಔಷಧಿ! ಹಾಗೆ ಔಷಧಿ ಸೇವಿಸಿದೆ
ನೆಂದರೆ ನನ್ನ ಆತ್ಮವೃತ್ತವನ್ನು ನಾನು ಬರೆದ ಹಾಗೆಯೇ! ಬರೆಯುವ

ವಿಮೋಚನೆ
೮೯
ಚೈತನ್ಯಕೋಸ್ಕರ ಸ್ವಲ್ಪ ಹೊತ್ತು ನಿದ್ದೆ ನನಗೆ ದೊರೆತರಾಯಿತು- ಅಷ್ಟಾದರಾಯಿತು.

"ಬೇಡಿ, ಥ್ಯಾಂಕ್ಸ್."

ದಿನಪತ್ರಿಕೆಯನ್ನೂ ಕಳುಹುವುದು ಬೇಡವೆಂದು ತಿಳಿಸಲು
ಬಾಯಿ ತೆರೆದೆ. ಆದರೆ ನನ್ನ ಬಗ್ಗೆ ಆ ಆಧಿಕಾರಿ ತಳೆದಿದ್ದ ಗೌರವಕ್ಕೆ
ಚ್ಯುತಿಬರುವ ಹಾಗೆ ಯಾಕೆ ವರ್ತಿಸಲಿ? ಇನ್ನು ಪತ್ರಿಕೆಗಳನ್ನೋದಿ
ಪ್ರಪಂಚದ ಆಗು ಹೋಗುಗಳನ್ನು ತಿಳಿದುಕೊಳ್ಳುವ ಆಪೇಕ್ಷೆ ನನಗಿಲ್ಲ.
ಪ್ರಯಾಣ ಸನ್ನದ್ಧನಾಗುತ್ತಿರುವ ಹೊತ್ತು ಇದು....... ಜೈಲಿನ ಜವಾನ
ಪತ್ರಿಕೆ ತಂದುಕೊಡುತ್ತಿರಲಿ, ಆದಕ್ಕೆನು? ಮೂಲೆಯಲ್ಲಿ ಅದು ಬಿದ್ದಿರು
ವಷ್ಟು ಜಾಗವಿದೆ ಈ ಕೊಠಡಿಯಲ್ಲಿ.

"ಬರ್ತೀನಿ ಮಿಸ್ಟರ್ ಬಂದ್ರಶೇಖರ್."

"ರೈಟೊ ಸಾರ್."

ಇನ್ನು ಸ್ವಲ್ಪ ಹೊತ್ತಿನಲ್ಲೆ ಜೈಲಿನ ಡಾಕ್ಟ್‌ರ್ ಬಂದು ಹೋಗ
ಬಹುದು. ಆತನೊಡನೆ ಬೇರೆ ಔಪಚಾರಿಕವಾದ ಮಾತುಕತೆ.

ಈ ಬ್ರೆಡ್ದು ಕಾಫಿ.......ನನ್ನ ವಕೀಲರು, ಕಾಲೇಜಿನಲ್ಲಿ ಸೆರೆ
ಮನೆಯ ಅಧಿಕಾರಿಯ ಸಹಪಾಠಿಯಾಗಿದ್ದುದರಿಂದ-ಈ ಅನು
ಕೂಲತೆಗಳು ದೊರೆತಿವೆ. ಈ ಬ್ರೆಡ್ದು ಕಾಫಿ......... ಮಧ್ಯಾಹ್ನದ
ಹೊತ್ತಿಗೆ ಊಟ.........ಸಂಜೆ ಕಾಫಿ.........ರಾತ್ರೆ ಊಟ.

ಆದರೆ ನಾನು ಕಳೆದ ಬಡತನದ ಆ ಬಾಲ್ಯ......ತಂದೆಯ
ಮರಣದ ಅನಂತರದ ಆ ದಿನಗಳು.......

ಆಜ್ಜಿ ನನ್ನನ್ನು ಬಹುವಾಗಿ ಸಂತೈಸಿದರು. ಉತ್ತರಕ್ರಿಯೆಗಳು
ಮುಗಿದ ಮೇಲೂ ನನ್ನ ಮನಸ್ಸು ಹತೋಟಗೆ ಬರಲಿಲ್ಲ. ಬಿಮ್ಮನೆ
ಬಿಗಿದಿದ್ದ ನನ್ನ ತುಟಿಗಳೆಡೆತಯಿಂದ ಮುಗುಳುನಗು ಬರಿಸಲು ಆಕೆ
ಯತ್ನಿಸಿದರು. ನಾಲ್ಕು ದಿವಸ ಕೆಲಸಕ್ಕೆ ಹೋಗ್ಲೇ ಬೇಡ. ಇಲ್ಲೇ
ಇದ್ಬಿಡು ಮರಿ," ಎಂದರು.

ನಾನು ಕೆಲಸಕ್ಕೆ ಹೋಗಲಿಲ್ಲ. ಮತ್ತೆ ನಾನು ಆ ಕೆಲಸಕೆ

೯೦
ವಿಮೋಚನೆ

ಹೋಗಲೇ ಇಲ್ಲ. ನನಗೀಗ ಯಾವ ಜವಾಬ್ದಾರಿ ಇತ್ತು? ನನ್ನ
ಭವಿತವ್ಯದ ಬಗ್ಗೆ ನೂರು ಆಸೆಗಳನ್ನು ಕಟ್ಟಿಕೊಂಡಿದ್ದ ತಂದೆ ಹೊರಟು
ಹೋಗಿದ್ದ. ನಮ್ಮಮ್ಮ ನದಿಯ ಪಾಲಾದಮೇಲೆ, ಇಷ್ಟು ವರ್ಷಗಳ
ಕಾಲ, ನನ್ನನ್ನು ಸಾಕಿ ಸಲಹಿ ದೊಡ್ದವನಾಗಿ ಮಾಡಿದ್ದ ಆ ತಂದೆ,
ನನ್ನ ಜೀವನ ರಂಗದಿಂದ ಮುಂದೆಂದೂ ಬರದಹಾಗೆ ಮರೆಯಾಗಿದ್ದ,
ನನ್ನೆದುರು ಎಲ್ಲವೂ ಶೂನ್ಯವಾಗಿ ತೋರುತ್ತಿತ್ತು. ನನ್ನ ಬಾಳ್ವೆಯ
ಬೋರ್ಡಿನ ಮೇಲೆ ಸುಣ್ಣದ ಕಡ್ಡಿಯಿಂದ ಹತ್ತಾರು ಸುಂದರ ಚಿತ್ರ
ಗಳನ್ನು ಹಿಂದೆ ನಾನೆ ಬರೆದಿದ್ದೆ. ಈಗ ಯಾರೊ, ಒಂದು ಹರ

ಕಾದ ಡಸ್ಟರ್ ಹಿಡಿದು, ಬೋಡಿನ ಮೇಲಿದ್ದುದನ್ನೆಲ್ಲಾ ಅಳಿಸಿಬಿಟ್ಟ
ದ್ದರು. ಸುಣ್ಣದ ಪುಡಿ ಕಣ್ಣಿಗೂ ಕಾಣಿಸದಂಥ ಧೂಳಾಗಿ ಗಾಳಿಯಲ್ಲಿ
ಬೆರೆತಿತ್ತು.

ದಿನಗಳು ನಾಲ್ಕು ದಾಟಿ ಎಂಟಾದರೂ ನನ್ನ ಮಾನಸಿಕ
ಕಾಹಿಲೆ ನನ್ನ ಮೇಲೆ ದಯೆತೋರಲಿಲ್ಲ.

ಒಂದು ದಿನ ರಾತ್ರೆಹೊತ್ತು, ಅಜ್ಜಿ ನನಗೆ ಊಟ ಬಡಿಸುತ್ತಿ
ದ್ದಾಗ ಮಾತು ತೆಗೆದೆ.

"ಅಜ್ಜಿ, ಅಮ್ಮ ಹೋದಳು. ತಂದೇನೂ ಹೋದ ಹಾಗಾ
ಯಿತು."

"ಇನ್ನು ಅಜ್ಜಿಯೊಂದು ಉಳ್ಕೊಂಡ್ಬಿಟ್ಟಿದೆ, ಅಲ್ವಾ?"

ಅವರು ಯಾವಾಗಲೂ ಹಾಗೆಯೇ. ನನ್ನ ವಿಚಾರಸರಣಿ
ಯನ್ನು ಸೂಕ್ಷ್ಮವಾಗಿ ಗ್ರಹಿಸಿಬಿಡುತ್ತಿದ್ದರು. ಅದು ಹಿತಕರವಲ್ಲ
ವೆಂದು ತಿಳಿದೊಡನೆ, ಬೇರೆ ಮಾತು ತೆಗೆದು ನನ್ನ ದೃಷ್ಟಿಯನ್ನು ಆ
ಕಡೆಗೆ ಸೆಳೆಯಲು ಯತ್ನಿಸುತ್ತಿದ್ದರು.

ನಾನು ತಲೆಯೆತ್ತಿ ಅಜ್ಜಿಯನ್ನೆ ನೋಡಿದೆ. ಆಂದಿಗೂ ಇಂದಿಗೂ
ಅಂತರವಿತ್ತು. ನಾನು ಜುಟ್ಟುಬಿಟ್ಟದ್ದ ಏನೂ ತಿಳಿಯದ ತಂದೆಗೇ
ಅಂಟಿಕೊಂಡಿದ್ದ ಮಗುವಾಗಿ ಆ ಮನೆಗೆ ಬಂದಾಗ ಇವರಿಗೆ ಐವತ್ತು
ವಷಗಳಾಗಿರಬೇಕು. ಈಗ ಆ ಜೀವ ಅರವತ್ತರ ಗಡಿಯನ್ನು ದಾಟಿ
ಮುಂದೆ ಹೋಗಿದೆ ಸುಕ್ಕುಗಟ್ಟುತ್ತಿರುವ ಆ ಮುಖ ವಯಸ್ಸನ್ನು

ವಿಮೋಚನೆ
೯೦
ಸೂಚಿಸುತ್ತಿದೆ. ಅದರೂ ಆಕೆ ದೃಢ ಕಾಯರು. ಪರಕೀಯನಾಗಿದ್ದ
ನಾನು ಆವರಿಗೆ ಮಗನೂ ಆಗಿದ್ದೆ, ಮೊಮ್ಮಗನೂ ಆಗಿದ್ದೆ.

"ಅಜ್ಜಿ, ನನಗಿನ್ನು ಇರೋದು ನೀವೊಬ್ಬರೇ, ಅಜ್ಜಿ.

"ನನ್ನ ಧ್ವನಿಯಲ್ಲಿ ವ್ಯಥೆಯ ಛಾಯೆಯನ್ನು ಅವರು ಕಂಡಿರ
ಬೇಕು.

"ಹೂ ಕಣ್ಣೋ. ನನಗ್ಮತ್ರ ಒಂದಿಪ್ಪತ್ಜನ ಇದಾರೆ, ಅಲ್ವ?"

ಅವರೊಡನೆ ಮಾತನಾಡುವುದು ಸಾಧ್ಯವೇ ಇರಲಿಲ್ಲ. ನನ್ನ
ಬಾಳ್ವೆಗೆ ಸಂಬಂಧಿಸಿದ ಗಹನವಾದೊಂದು ವಿಷಯವನ್ನು ಆಕೆಯೊಡನೆ
ಪ್ರಸ್ತಾಪಿಸಬೇಕೆಂದು ನಾನು ಯೋಚಿಸಿದ್ದೆ. ಅದು ಸಾಧ್ಯವಾಗಲೇ
ಇಲ್ಲ.
ಮತ್ತೊಂದು ದಿನ ಕಳೆಯಿತು.

ಮತ್ತೆಯೂ ಒಂದು ದಿನ.
ಆಮೇಲೆ ಮನಸ್ಸನ್ನು ಕಲ್ಲಾಗಿ ಮಾಡಿ, ಒಂದು ಬೆಳಿಗ್ಗೆ ಅಜ್ಜಿಗೆ
ಮ ತಿಳಿಸಿದೆ.

"ಅಜ್ಜಿ, ನಾನು ಸ್ವಲ್ಪ ದಿವಸ ಎಲ್ಲಿಗಾದರೂ ಹೋಗ್ಬೇಕು ಅಜ್ಜಿ.

" ಆಕೆ ಆವಾಕ್ಕಾದರು.

"ಯಾಕೆ ಮರಿ?" "ಎಲ್ಲಿಗೆ ಮರಿ?"

"ಎಲ್ಲಿಗಾದರೂ ಹೋಗ್ತೀನಿ ಅಜ್ಜಿ. ಇಲ್ಲಿ ಇರೋಕಾಗಲ್ಲ
ಅಜ್ಜಿ."

"ಯಾಕೆ ಚಂದ್ರೂ? ನನ್ನ ಕೈ ಅನ್ನ ರುಚಿಯಾಗಲ್ವೇನೊ
ಚಂದ್ರು?"
"ಹಾಗನ್ಬಾರ್ದು ಅಜ್ಜಿ."

"ಮತ್ಯಾಕೆ ಮರಿ?"

ಯಾಕೆ ಎಂದು ನಾನು ಹೇಗೆ ವಿವರಿಸಲಿ? ನನ್ನ ಹೃದಯ
ದಲ್ಲಾಗುತ್ತಿದ್ದ ಕಸಿವಿಸಿ ವೇದನೆಯನ್ನು ಮಾತುಗಳಲ್ಲಿ ವರ್ಣಿಸಿ
ಹೇಗೆ ತಿಳಿಸಲಿ? ನನ್ನ ಅಜ್ಜಿಗೆ ಹೇಗೆ ತಿಳಿಸಲಿ? ಕಣ್ಣೀರು ನಿರ್ಲಜ್ಜ
ವಾಗಿ ಮುಸುಕಿನಿಂದ ಹೊರ ಬರಲು ನೋಡಿತು. ನಾನು ತಡೆ ಹಿಡಿದೆ.
ಚಂದ್ರಶೇಕರ ಇನ್ನು ಅಳಲಾರ. ತಂದೆಯನ್ನು ಕಳೆದುಕೊಂಡ ರಾತ್ರೆ

೯೨
ವಿಮೋಚನೆ
ಹೃದಯ ಸೋರಿಹೋದಮೇಲೆ ಮತ್ತೆ ಒರತೆ ಬರುವುದು ಯಾವ ನ್ಯಾಯ?"

ಅಜ್ಜಿಯ ಸ್ವರ ನಡುಗುತಿತ್ತು. ಕೆಂಪು ಸೀರೆಯ ಸೆರಗು ಆ ಕಣ್ಣುಗಳನ್ನು ಮುಚ್ಚಿಕೊಂಡಿತು.

"ನನ್ನ ಬಿಟ್ಹೋಗ್ತೀಯಾ ಚಂದ್ರೂ? ಅಜ್ಜೀನ ಬಿಟ್ಟು ಹೋಗ್ತಿಯೇನೊ ಮರಿ?"

ಆ ಕ್ಷಣ, ನಾನು ಮಹಾಪರಾಧ ಮಾಡುತ್ತಿದ್ದೆನೆಂಬ ಭಾವನೆ ಮೂಡಿತು. ತಂದೆ ಇದ್ದಾಗ ನಾನು ಅವನಿಗೆ ಒಂದು ದಿನವೂ ಮನ ಶ್ಯಾಂತಿ ಕೊಟ್ಟಿರಲಿಲ್ಲ. ಈಗ ಇನ್ನೊಂದು ಜೀವದ ಮನಸ್ಸನ್ನು ನೋಯಿ
ಸಲು ಸಿದ್ಧನಾಗಿದ್ದೆ.

ಇಲ್ಲ; ನಾನು ಈ ಅಜ್ಜಿಯನ್ನು ಬಿಟ್ಟು ಹೋಗಬಾರದು-ಎಂದು ಕೊಂಡೆ. ಆದರೆ ಮನಸ್ಸು ಮತ್ತೆ ಹೊಯ್ದಾಡಿತು.

"ಅಜ್ಜಿ. ಒಂದಷ್ಟು ದಿನ ಎಲ್ಲಾದರೂ ಇದ್ದು, ತಿರ್ಗ ಬರ್ತೀನಿ ಅಜ್ಜಿ. ನಿಮ್ಮಲ್ಲಿಗೇ ಬರ್ತೀನಿ ಅಜ್ಜಿ."

ಆಗ ಆ ಅಜ್ಜಿ ನಾನು ನಿರೀ‍‍ಕ್ಷಿಸದೆ ಇದ್ದ ಇನ್ನೊಂದು ವಿಷಯ ಹೇಳಿದರು.

"ನೋಡು ಚಂದ್ರು. ಒಂದಿನ್ನೂರು ರೂಪಾಯಿ ಎತ್ತಿಟ್ಟಿದ್ದೀನಿ. ಬದುಕಿರೋವಾಗ ಯಾವ ಸಂಬಂಧಿಕರೂ ಯಾವ ಊರಿನಿಂದಲು ಬರ್ಲಿಲ್ಲ. ಸತ್ಹೋದಮೇಲೆ ಯಾಕೆ ಬೇರೆಯವರಿಗೆ ಕೊಡ್ಲಿ? ನೋಡ್ಮರಿ, ನಿಂಗೆ ಸ್ಕೂಲಿಗೆ ಹೋಗೊ ಇಷ್ಟ ಇದ್ರೆ ಹೇಳು, ಕಳಿಸ್ತೀನಿ.... ....... ಈ ಮನೆ ಎಮ್ಮೆ ಎಲ್ಲಾ ನಿಂದೇನೆ........"

ಇಂತಹ ಮಾತುಗಳೆಲ್ಲಾ ನಾನೆಂದೂ ತೀರಿಸಲಾರದ ಋಣದ ಭಾರವನ್ನು ಹೆಚ್ಛಿಸುತ್ತಿದ್ದವು........ವಿದ್ಯಾಭ್ಯಾಸದ ಆಸೆ ಹುಟ್ಟಿಸಿ ನನ್ನನ್ನು ಅಲ್ಲಿಯೇ ಇರಿಸಿಕೊಳ್ಳಲು ಆಕೆ ಯತ್ನಿಸಿದರು. ಆ ಮಾತುಗಳನ್ನು ಅವರು ಹೇಳುತ್ತಿದ್ದಂತೆ, ನಾನು ಯೋಚಿಸುತ್ತಲಿದ್ದೆ. ಇಲ್ಲ, ಮತ್ತೊಮ್ಮೆ ವಿದ್ಯಾರ್ಥಿಯಾಗುವುದು ನನ್ನಿಂದಾಗದ ಮಾತು--- ನನ್ನಿಂದಾಗದ ಮಾತು.

ನಾನು ಅಜ್ಜಿಗೆ ಉದ್ದಂಡ ನಮಸ್ಕಾರ ಮಾಡಿದೆ. ಆಕೆಯ ಪಾದಗಳನ್ನು ಹಿಡಿದುಕೊಂಡೆ.

"ನನ್ನ ಕ್ಷಮಿಸ್ಬೇಕು ಅಜ್ಜಿ. ನಾನು ಬೊಂಬಾಯಿಗೆ ಹೋಗ್ತೀನಿ ಅಜ್ಜಿ. ಒಂದು ವರ್ಷದೊಳಗೆ ವಾಪಸ್ಸು ಬರ್ತೀನಜ್ಜಿ. ಆಮೇಲೆ ನಿಮ್ಮನ್ನ ಬಿಟ್ಟು ಎಲ್ಲಿಗೂ ಹೋಗೋದಿಲ್ಲ ಅಜ್ಜಿ."

ಅಜ್ಜಿ ಮೌನವಾಗಿದ್ದರು. ಆ ದಿನವೆಲ್ಲಾ ಆಕೆಯ ಹೃದಯ ಬುದ್ಧಿ ತಿಳಿಯದ ಮರಿಗಾಗಿ ಮಿಡಿದುಕೊಂಡಿರಬೇಕು.

ನಾನು ಹೊರಟು ನಿಂತಾಗ. ಚಿಲ್ಲರೆ ಖರ್ಚಿಗೆಂದು ಅಜ್ಜಿ ಹದಿನೈದು ರೂಪಾಯಿ ಕೊಟ್ಟರು. ರವೆ ಉಂಡೆ, ಕೋಡುಬಳೆ, ಚಕ್ಕುಲಿಗಳ ಗಂಟು ಕಟ್ಟಕೊಟ್ಟರು. ನನ್ನಿಂದ ಮಾತನಾಡುವುದಾಗಲೇ ಇಲ್ಲ. "ಎಂಥ ಕಟುಕ ನೀನು, ಪಾಪಿ ನೀನು" ಎನ್ನುತ್ತಿತ್ತು, ಮನಸ್ಸಿನೊಂದು ಭಾಗ.

ಅಜ್ಜಿ ನನಗೆ ಆಶೀರ್ವಾದ ಮಾಡಿದರು.

"ಏನಾದರೂ ಕೆಲಸ ನೋಡ್ಕೊಂಡು ಒಂದು ವರ್ಷ ಸುಖವಾಗಿರು ಚಂದ್ರು. ಆಮೇಲೆ ಬಂದ್ದಿಡು, ಖಂಡಿತ ಬಂದ್ದಿಡು."

"............ಹೂನಜ್ಜಿ."

"ಕಾಗದ ಬರೀತಾ ಇರು ಚಂದ್ರು..........ತಪ್ಪದೆ ಬರೀತಾಇರು."

"ತಪ್ಪದೆ ಬರೀತೀನಿ ಅಜ್ಜಿ."

ಮುಂದುವರೆಯಲು ನಿರಾಕರಿಸುತ್ತಿದ್ದೆ ಕಾಲುಗಳನ್ನು ಎಳೆದು ಕೊಂಡು ನಾನು ಬೀದಿಗಿಳಿದೆ. ಮುಂದೆ ನಡೆದು ರಸ್ತೆ ತಿರುಗುವಲ್ಲಿ ಹಿಂತಿರುಗಿ ನೋಡಿದೆ. ಕೆಂಪು ಸೀರೆಯುಟ್ಟದ್ದ ಅಜ್ಜಿ ಮನೆಯ ಮುಂದೆ ಬೀದಿಯ ಅಂಚಿನಲ್ಲಿ ನಿಂತು ನನ್ನನ್ನೇ ನೋಡುತ್ತಿದ್ದರು. ನನಗೆ ತಡೆಯಲಾಗಲಿಲ್ಲ. "ವಾಪಸ್ಸು ಓಡು, ತಪ್ಪಾಯಿತು ಎನ್ನು," ಎಂದಿತು ಅರ್ಧ ಮನಸ್ಸು. ಆದರೆ ಇನ್ನೊಂದರ್ಧ ಅದಕ್ಕಿಂತಲೂ ಹೆಚ್ಚು ಬಲವಾಗಿತ್ತು. ನಾನು ವೇಗವೇಗವಾಗಿ ಹೆಜ್ಜೆಯಿಟ್ಟು ರೈಲು ನಿಲ್ದಾಣ ಸೇರಿದೆ.

ಟಿಕೇಟು ಕೊಂಡುಕೊಂಡು ನಾನು ಪ್ರಯಾಣ ಮಾಡಿದೆ. ಅದು ನನ್ನ ಮೊದಲ ರೈಲ್ವೆ ಪ್ರಯಾಣ. ರಾತ್ರೆ ಕಳೆದು ಬೆಳಗಾಯಿತು. ಆಮೇಲೆ ರಾತ್ರೆ, ಮತ್ತೆ ಹಗಲು. ಹಾದಿಯಲ್ಲಿ ನಾನು, ಒಮ್ಮೆಯೂ ಕೆಳಕ್ಕಿಳಿಯಲಿಲ್ಲ. ಅಜ್ಜಿ ಕೊಟ್ಟ ಪೊಟ್ಟಣವನ್ನೂ ಬಿಚ್ಚಲಿಲ್ಲ. ಕಿಟಕಿಯ ಬಳಿ ನಿಲ್ಧಾಣಗಳಲ್ಲಿ ಏನನ್ನಾದರೂ ಕೊಂಡುಕೊಂಡು ತಿನ್ನುತ್ತಿದ್ದೆ. ಹಲವು ಊರುಗಳು ಹಿಂದೆ ಉಳಿದುವು. ನಾನಾ ವಿಧವಾಗಿ ಕನ್ನಡ ಮಾತನಾಡುವ ಜನ ಹತ್ತುತ್ತಿದ್ದರು, ಇಳಿಯುತ್ತಿದ್ದರು. ಆಮೇಲೆ ಮರಾಠಿ ಭಾಷೆ--ಹಿಂದೂಸ್ಥಾನಿ. ನನಗೆ ಜಟಕಾ ಸಾಬಿಗಳ ಕ್ಯಾಬೇ ಮಾತು ಸ್ವಲ್ಪ ಸ್ವಲ್ಪ ಬರುತ್ತಿತ್ತು........ಆ ಹೊಸ ವಾತಾವರಣ ಅಪರಿ ಚಿತ ಮುಖಗಳಿಂದ ನನಗೆ ದಿಗಿಲಾಗಲಿಲ್ಲ. ಬದಲು ಯಾವುದೋ ಹೊಸ ಅನುಭವವಾಗುತ್ತಿತ್ತು.

ಆ ಮಹಾನಗರಕ್ಕೆ ಬಂದಿಳಿದಾಗ ಕತ್ತಲಾಗಿತ್ತು. ನಿಲ್ದಾಣದ ಹೊರಗೆ, ಉದ್ದಕ್ಕೂ ಮೈಮುಚ್ಚದೆ ಮಲಗಿದ್ದ ಹಲವಾರು ಜನರ ನಡುವೆ ನಾನೂ ಒಬ್ಬನಾಗಿ, ಕೈ ಚೀಲವನ್ನು ತಬ್ಬಿಕೊಂಡು, ಆ ರಾತ್ರೆಯನ್ನು ಕಳೆದೆ.

ಬೆಳಿಗ್ಗೆ ಎದ್ದಾಗ ತುಂಬಾ ಹಸಿವಾಗಿತ್ತು. ಅಲ್ಲಿಯೇ ಒಂದು ಅಂಗಡಿಗೆ ಹೋಗಿ ಬೊಂಬಾಯಿ ಚಹಾದ ಪರಿಚಯ ಮಾಡಿಕೊಂಡೆ. ಅಜ್ಜಿಯ ತಿಂಡಿಪೊಟ್ಟಣವನ್ನು ಬಿಚ್ಚಿದೆ. ಅಲ್ಲಿ ಕೋಡುಬಳೆಗಳ ನಡುವೆ ಐದು ರೂಪಾಯಿನ್ ನಾಲ್ಕು ನೋಟುಗಳು ಎಣ್ಣೆ ಸವರಿಕೊಂಡು ಮುದುಡಿಕುಳಿತ್ತಿದ್ದವು! ನನ್ನ ಅಜ್ಜಿ--

ಅಲ್ಲಿ ಒಬ್ಬರನ್ನೊಬ್ಬರು, ಏನು ಯಾರೆಂದು ವಿಚಾರಿಸುತ್ತಿರಲಿಲ್ಲ. ಆ ಟ್ರಾಂಗಳ ರೈಲುಗಳ ಕಾರ್ ಮೋಟಾರುಗಳ ಜನಜಂಗುಳಿಯ ಗೊಂದಲದಲ್ಲಿ ಮಾನವ ಪ್ರಾಣಿಗೆ ಯಾರೂ ಮಹತ್ವಕೊಡುತ್ತಿರಲಿಲ್ಲ. ನಾನು ಗಲಿವರನ ಪ್ರವಾಸದ ಕತೆಯನ್ನೋದಿದ್ದೆ. ಲಿಲ್ಲಿಪುಟ್ಟಿನ ಪುಟ್ಟ ಜನರ ಬಗ್ಗೆ ತಿಳಿದಿದ್ದೆ. ಈ ನಗರದ ಜನರೆಲ್ಲಾ ಕಿರಿಮಾನವರ ಹಾಗೆ ಕಾಣುಬರುತ್ತಿದ್ದರು. ಆದರೆ ನಾನು ಗಲಿವರನಾಗಿರಲಿಲ್ಲ. ಆ ಮಾನವರಲ್ಲೊಬ್ಬನಾಗಿದ್ದೆ.

ಅದು ಕೆಟ್ಟ ಕಾಲ.ಈ ಶತಮಾನದ ಮೂವತ್ತೊಂದನೆಯ

ಇಸವಿ ಮುಕ್ತಾಯಕ್ಕೆ ಬರುತ್ತಿತ್ತು. ಹೋರಾಟ-ನಿರುದ್ಯೋಗದ ಮಾತುಗಳೇ ಕೇಳಿಬರುತ್ತಿದ್ದವು. ನಾನು ಉದ್ಯೋಗ ಹುಡುಕುತ್ತಿದ್ದೆ. ಆದರೆ ಜನ ನಿರುದ್ಯೋಗದ ಮಾತನ್ನಾಡುತ್ತಿದ್ದರು. ಹಿಂದೆ ನನ್ನ ತಂದೆ ದುಡಿಯುತ್ತಿದ್ದ ಕಾರ್ಖಾನೆಗಳ ಅಪ್ಪನಂತಹ ಹಲವಾರು ಕಾರ್ಖಾನೆ ಗಳು ಅಲ್ಲಿದ್ದವು. ಆದರೆ ಅವುಗಳಲ್ಲಿ ಹಲವು ಈಗ ಹೊಗೆ ಉಗುಳು ವುದರ ಬದಲು, ಹಲವಾರು ಜನರನ್ನು ಹೊರಕ್ಕೆ ಉಗುಳುತ್ತಿದ್ದವು. ಒಮ್ಮೆಲೆ ಸಹಸ್ರ ಸಹಸ್ರ ಜನ ನಿರುದ್ಯೋಗಿಗಳಾಗಿ ಬೀದಿ ಪಾಲಾ

ಗುತ್ತಿದ್ದರು.

‍‍

ಯಾಕೆ ಹಾಗೆ ಎಂಬುದು ನನಗೆ ಆಗ ತಿಳಿದಿರಲಿಲ್ಲ. ನಮ್ಮ ಸಮಾಜದ ಆರ್ಥಿಕ ವ್ಯವಸ್ಥೆಯ ಪರಿಣಾಮವಾಗಿ ಕಾಲಕಾಲಕ್ಕೆ ಇಂತಹ ಕುಸಿತ ಆಗಲೇಬೇಕೆಂಬುದು ಆಗ ನನಗೆ ತಿಳಿದಿರಲಿಲ್ಲ....... ........ನಿರುದ್ಯೋಗ ಹೆಚ್ಚುತ್ತಿದ್ದಾಗ ನಾನು ಉದ್ಯೋಗ ಹುಡುಕಿದೆ. ಹೋಟೆಲುಗಳಲ್ಲಿ ಕಾರ್ಖಾನೆಗಳಲ್ಲಿ ಬಂದರದಲ್ಲಿ ಆಫೀಸುಗಳಲ್ಲಿ--- ಎಲ್ಲಲ್ಲೂ-ಕೆಲಸ ದೊರೆಯಲೇ ಇಲ್ಲ.

ಅಜ್ಜಿ ಕಟ್ಟಿಕೊಟ್ಟಿದ್ದ ತಿಂಡಿಯ ಪೊಟ್ಟಣ ಎಂದೋ ಕರಗಿ ಹೋಗಿತ್ತು. ನನ್ನ ಪಾಲಿಗೆ ಉಳಿದಿದ್ದುದು ಅಜ್ಜಿಯ ನೆನಪುಮಾತ್ರ. ಇನ್ನೂ ಖರ್ಚಾಗದೇ ಇದ್ದ ಹತ್ತು ಹನ್ನೆರಡು ರೂಪಾಯಿಗಳು ಮಾತ್ರ. ಕಾಗದ ಬರೆಯಬೇಕೆಂದು ಅಜ್ಜಿ ಹೇಳಿದ್ದರು. ನಾನು ಆವರೆಗೆ ಯಾರಿಗೂ ಕಾಗದ ಬರೆದಿರಲಿಲ್ಲ. ಆಗ ಬರೆದೆ. ಸುಖವಾಗಿದ್ದೀನಿ ಕೆಲಸ ಸಿಕ್ಕಿದೆ. ನೀವು ಹೇಗಿದ್ದೀರಿ? ಎಮ್ಮೆಗಳು ಹೇಗಿವೆ? ದೊಡ್ಡೆಮ್ಮೆ ಕರು ಹಾಕಿತೆ-ಎಂದೆಲ್ಲಾ ಕೇಳಿ ಬರೆದೆ. ಅಂಚೆಯ ಲಕ್ಕೋಟೆಯಮೇಲೆ ಅಜ್ಜಿಯ ಮನೆ ಎಂತಹವರಿಗಾದರೂ ಗೊತ್ತಾಗುವಹಾಗೆ ವಿಳಾಸವನ್ನು ವಿವರಿಸಿ ಬರೆದೆ. ಅಜ್ಜಿಗೆ ಮನಸ್ಸಮಾಧಾನವಾಗುವಂತೆ ಮಾಡು ವುದೇ ನನ್ನ ಉದ್ದೇಶವಾಗಿತ್ತು.

ಅಜ್ಜಿಯಿಂದ ನನಗೆ ಉತ್ತರ ಬರಲಿಲ್ಲ. ನಾನು ವಿಳಾಸಕೊಟ್ಟಿ ದ್ದರಲ್ಲವೆ ಬರುವುದು? ನನಗೆ ವಿಳಾಸವಿದ್ದರಲ್ಲವೆ ನಾನು ಕೊಡುವುದು?

ಆ ಊರಲ್ಲೂ ಪತ್ರಿಕೆ ಮಾರುವ ಹುಡುಗರಿದ್ದರು. ಕುತೂಹಲ ದಿಂದ ಅಸೂಯೆಯಿಂದ ಅವರನ್ನು ನಾನು ನೋಡುತ್ತಿದ್ದೆ. ಮಾರಾ ಟದ ವಿಧಾನದಲ್ಲಿ ಇಲ್ಲಿ ಹೊಸತನವಿತ್ತು. ಆ ದಿನದ ಮುಖ್ಯ ಘಟನೆ ಯನ್ನು ಮರಾಠಿಯಲ್ಲೊ ಇಂಗ್ಲಿಷಿನಲ್ಲೊ ಕೂಗಿ ಹೇಳುತ್ತಾ ಹುಡು ಗರು ಓಡಾಡುತ್ತಿದ್ದರು. ಇಲ್ಲಿ "ಪೇಪರ್ ಬೇಕೆ ಸಾರ್?" ಎಂದು ಕೇಳಬೇಕಾಗಿರಲಿಲ್ಲ. ಬೇಕಾದವರು ತಾವಾಗಿಯೆ ಹುಡುಗರನ್ನು ಸಮೀಪಿಸಿಯೋ ಕರೆದೋ ದುಡ್ಡು ಕೊಟ್ಟು ಕೊಳ್ಳುತ್ತಿದ್ದರು.

ನಾನು ಅವರಲ್ಲಿ ಒಬ್ಬಿಬ್ಬರ ಪರಿಚಯಮಾಡಿಕೊಳ್ಳಲ್ಲು ಯತ್ನಿ ಸಿದೆ. ಹರಕು ಮುರುಕು ಮರಾಠಿಯಲ್ಲಿ ಮಾತನಾಡಲು ಪ್ರಯತ್ನಿ ಸಿದೆ. ಅವರ ದೃಷ್ಟಿಯಲ್ಲಿ ನಾನು ಅನ್ಯದೇಶದವನು. ಅವರು ನಕ್ಕು ನನ್ನನ್ನು ದೂರ ಸರಿಸಿದರು. "ಹೋಗಲೆ. ಹಮಾಲಿಮಾಡು ಹೋಗು," ಎಂದರು.

ಹಮಾಲಿ ಎಂದರೆ ಸಾಮಾನು ಹೊರುವ ಕೂಲಿ ಕೆಲಸ. ಬೋರಿ ಬಂದರ್ ಸ್ಟೇಷನ್ನಿನ ಹೊರ ಆವರಣದಲ್ಲಿ ನಿಂತು, ಬರುತ್ತಲಿದ್ದ ಪ್ರತಿಯೊಂದು ರೈಲುಗಾಡಿಯನ್ನೂ ಇದಿರುಗೊಂಡೆ. ಮುಂಬಯಿಗೆ ದಕ್ಷಿಣ ಕನ್ನಡದಿಂದ, ಧಾರವಾಡದ ಕಡೆಯಿಂದ, ಮೈಸೂರಿನಿಂದ ಕನ್ನಡ ಮಾತನಾಡುವ ಜನ ಬರುತ್ತಿದ್ದರು. ಸೂಕ್ಷ್ಮ ನಿರೀಕ್ಷಣೆಯಿಂದ ಅಂತಹವರನ್ನು ಗುರುತಿಸಲು ಕಲಿತೆ. ಅವರ ಬಳಿಗೆ ಧಾವಿಸಿ ಕನ್ನಡ ದಲ್ಲೇ ಮಾತನಾಡುತ್ತ ಸಾಮಾನು ಹೊತ್ತುಕೊಳ್ಳುತ್ತಿದ್ದೆ. ನಿಲ್ದಾಣದ ಒಳಕ್ಕೆ ಹೋಗಲು ನನಗೆ ಅನುಮತಿಯಿರಲಿಲ್ಲ. ನನ್ನೊಡನೆ ಬಿಲ್ಲೆಯಿರಲ್ಲಿಲ್ಲ. ಹೊರಗೇ ಕಾದು ನಿಂತಾಗ, ತಮ್ಮ ಸಾಮಾನುಗಳನ್ನು ತಾವೇ ಪ್ರಯಾಸದಿಂದ ಹೊತ್ತುಕೊಂಡು ಹೊರಬರುತ್ತಿದ್ದ ಬಡ ಪ್ರಯಾಣಿಕರು ಮಾತ್ರ ಸಿಗುತ್ತಿದ್ದರು. ಎಷ್ಟು ದೊರೆತರೆ ಅಷ್ಟೇ ಪರಮ ಭಾಗ್ಯವೆಂದು ನಾನು ಅವರನ್ನು ಸಮೀಪಿಸುತ್ತಿದ್ದೆ. ಹೊಸತಿನಲ್ಲಿ ಊರಿಗೆ ಬಂದವರು ನನ್ನನ್ನೂ ನನ್ನ ಕನ್ನಡವನ್ನೂ ನಂಬುತ್ತಿರಲಿಲ್ಲ. ಸಾಮಾನು ಹೊತ್ತು ಓಡಿ ಹೋಗಲು ಬಂದ ಕಳ್ಳನೇ ನಾನು, ಎಂಬ ಹಾಗೆ ಅವರು ವರ್ತಿಸು ತ್ತಿದ್ದರು.ಬೇರೆ ಕೆಲವರು ನನಗೆ ತಿಳಿಯದಂತಹ ಯಾವುದೋ ವಿಳಾಸಗಳನ್ನು ಕೊಟ್ಟು, "ಅಲ್ಲಿ ತನಕ ಬರ್ತೀಯಾ, ಹಾದಿ ತೋರಿ ಸ್ತೀಯಾ?" ಎನ್ನುತ್ತಿದ್ದರು. ಮುಂಬಯಿಗೆ ಹೊಸಬನಾದ ನನಗೆ ಆ ಎಲ್ಲ ಜಾಗಗಳ ಪರಿಚಯವಿರಲಿಲ್ಲ. ಆದರೂ ನಿರಾಕರಿಸದೆ, ಎಲ್ಲ ವನ್ನೂ ಬಲ್ಲವನ ಹಾಗೆ ನಟಿಸುತ್ತಾ, ಕೂಲಿ ಹಿಡಿಯುತ್ತಿದ್ದೆ. ಆಮೇಲೆ ಯಾರ ಯಾರನ್ನಾದರೂ ಕೇಳಿ ವಿಳಾಸದ ಶೋಧನೆ........ ಪ್ರಯಾಣಿಕರ ಬಯ್ಗಳು............ ಘಂಟೆಗಟ್ಟಲೆ ಸುತ್ತಾಡಿದ ಮೇಲೆ ನನಗೆ ದೊರೆಯುತ್ತಿದ್ದ ಮೂರು ನಾಲ್ಕಾಣೆ.

ಅದೂ ಕೂಡ ಕಷ್ಟವಾಗುತ್ತಿತ್ತು. ಬೇರೆ ಹುಡುಗರು ಕಾನಡಿ ವಾಲಾ ಆದ ನನ್ನನ್ನು ದ್ವೇಷಿಸುತ್ತಿದ್ದರು. ಅವರ ಸ್ನೇಹ ಸಂಪಾದನೆ ಸಾಧ್ಯವಾಗುವುದಕ್ಕೆ ಮುಂಚೆ ನಾನು ಮುಂಬಾಯಿವಾಲಾನಾಗಿ ಮಾರ್ಪಡುವುದು ಅವಷ್ಯವಿತ್ತು. ಆ ಮಾರ್ಪಾಟಗೋಸ್ಕರ ನಾನು ಮನಪೂರ್ವಕವಾಗಿ ದುಡಿದೆ. ಆ ಹುಡುಗರಷ್ಟೇ ಅಲ್ಲ----ನನ್ನ ಸಂಪಾ ದನೆಗೆ ಅಡ್ಡಿಯಾದವರಲ್ಲಿ ಅದೇ ಆಗ ನಿರುದ್ಯೋಗಿಗಳಾಗಿದ್ದ ಸಹಸ್ರ ಸಹಸ್ರ ಜನರಿದ್ದರು. ಕಾರ್ಖಾನೆಯ ಕೆಲಸಗಾರರಷ್ಟೇ ಅಲ್ಲ. ವಿದ್ಯಾ ವಂತರಾದ ಪ್ಯಾಂಟುಧಾರಿಗಳೂ ಕೂಡ ಹಮಾಲಿ ಕೆಲಸಕ್ಕೆ ಬರುತ್ತಿ ದ್ದರು. ಪೇಟೆಯ ಅಂಗಡಿಗಳಲ್ಲಿ ವಿಧ ವಿಧದ ಸಾಮಾನುಗಳು ರಾಶಿ ಬಿದ್ದಿದ್ದುವು. ಕೊಳ್ಳುವ ಗಿರಾಕಿಗಳಿರಲಿಲ್ಲ. ಕೊಳ್ಳಲು ಜನರಲ್ಲಿ ದುಡ್ಡಿರಲಿಲ್ಲ.

ಬದುಕಿನಲ್ಲಿ ಆಸಕ್ತಿಯಿರುವ ಯಾವ ಮನುಷ್ಯನೂ ಸ್ನೇಹ ಜೀವಿಯಾಗದೇ ಇರುವುದು ಸಾಧ್ಯವಿಲ್ಲ . ಆ ಪ್ರತಿಕೂಲ ವಾತಾ ವರಣದಲ್ಲೂ ನಾನು ನನ್ನ ಹಾಗೆಯೇ ಇದ್ದ ಒಬ್ಬಿಬ್ಬರ ಗೆಳೆತನ ಕಟ್ಟಿ ಕೊಂಡೆ. ಯಾವ ಕೆಲಸವೂ ದೊರೆಯದೇ ಹೋದಾಗ ಬೀದಿಯ ಬದಿಯಲ್ಲಿ ಕುಳಿತು ಎದುರಿನ ಗೋಡೆಗಳ ಮೇಲೆ ದೊಡ್ಡ ದೊಡ್ಡ ದಾಗಿ ಅಂಟಿಸಿದ್ದ ಸಿನಿಮಾ ಜಾಹೀರಾತುಗಳನ್ನು ನೋಡುತ್ತಿದ್ದೆವು. ಯಾವನಾದರೊಬ್ಬ ಹಾಡುತಿದ್ದ: "ಛೋಟೀಸಾಬ್ ಅಂಗನಾಮೆ ಗಿಲ್ಲಿ ಖೇಲ್" ಕಣ್ಣಿಗ ಕರಿಯ ಕನ್ನಡಕ ಹಾಕಿ ಕೈಯಲ್ಲಿ ಪಿಸ್ತೂ ಲನ್ನೊ ಚಬುಕನ್ನೊ ಹಿಡಿದ ಮಾರಾಮಾರಿ ಚಿತ್ರದ ನಾಯಿಕೆಯರೆ
ಕೆಲ ಹುಡುಗರ ಆರಾಧ್ಯ ದೇವತೆಗಳಾಗಿದ್ದರು. ಒಬ್ಬ ದೊಡ್ಡ
ಹುಡುಗ, ತನಗೆಲ್ಲಾ ಸಿನಿಮಾ ತಾರೆಯರೂ ಆಪ್ತ ಮಿತ್ರರೆನ್ನುವ
ಹಾಗೆ ಮಾತನಾಡುತ್ತಿದ್ದ.
"ಸರ್ದಾರ್ ಆಖ್ತಾರ್? ಓ ಅವಳಿರೋದು ಮಾಹಿಮ್‌ನಲ್ಲಿ
ಮೂರನೆಯ ಗಂಡನ ಜೊತೆಗಿದ್ದಾಳೆ. ಷೂಟಿಂಗಿಗೆ ಹೋದಾಗ ಏನೋ
ಸರೀನಪ್ಪಾ. ಆದರೆ ಬೇರೆ ಹೊತ್ತಿನಲ್ಲಿ ಆಕೆ ಎಲ್ಲಾದರೂ ಲಂಗ ಎತ್ತಿದ್ಲು
ಅಂದರೆ..... ....."
ಆಮೇಲೆ, ಅವನ ಅಸಭ್ಯವಾದ ನಗೆಮಾತಿಗೆ ಉತ್ತರವಾಗಿ
ಎಲ್ಲರ ನಗು. ಆದರೆ ಅದು ಅಸಭ್ಯ ಮಾತೆಂದು ಅವರಲ್ಲಿ ಯಾರೂ
ಭಾವಿಸಿದಂತೆ ಕಾಣಲಿಲ್ಲ. ನಮ್ಮಲ್ಲಿ ಚಿಕ್ಕವರಾದವರು, ಇಜ್ಜಲು
ಪುಡಿ ತಂದು, ಪೇಷನ್ಸ್ ಕೂಪರಿಗೆ ಮೀಸೆ ಬಿಡಿಸುತ್ತಿದ್ದರು. ಅವರೆ
ಲ್ಲರಿಗೆ ದ್ವೇಷವಿದ್ದುದು ಹೀರೋಗಳ ಮೇಲೆ. ಅವರ ಮುಖಗಳನ್ನು
ಸೊಟ್ಟಗೋ ವಿಕಾರವಾಗಿಯೋ ಮಾಡದ ಹೊರತು, ಇಲ್ಲವೆ ಅಷ್ಟು
ಅಂಶಗಳನ್ನು ಹರಿದು ಹಾಕದ ಹೊರತು, ಅವರಿಗೆ ನೆಮ್ಮದಿ ಇಲ್ಲ.
ಯಾವುದಾದರೂ ನಟ ಎದೆಯ ಭಾಗದ ಪ್ರದರ್ಶನ ಮಾಡಿದ್ದರೆ,
ಹುಡುಗರಲ್ಲೊಬ್ಬ ಆ ಭಾಗವನ್ನು ಹರಿದುಹಾಕುತ್ತಿದ್ದ.
ಇವರೊಡನೆ ಮುಂಬಯಿವಾಲಾನಾಗುವುದು ಬಲು ಕಷ್ಟ
ವಾಗಿತ್ತು. ನಾನು ಓದು ತಿಳಿದವನಾಗಿದ್ದೆ. ವಿದ್ಯಾವಂತನಾಗಿದ್ದೆ
ಸ್ವಲ್ಪ ಮಟ್ಟಿಗೆ ದೇಶ ವಿದೇಶಗಳ ಸಾಹಿತ್ಯವನ್ನು ಓದಿದ್ದ ನಾನು,
ಸಂಸ್ಕಾರದ ಮೂಸೆಯಲ್ಲಿ ಸ್ವಲ್ಪ ಬೆಂದಿದ್ದ ನಾನು, ಎಲ್ಲವನ್ನೂ
ಮರೆತು ಮತ್ತೆ ಆ ಆಳಕ್ಕೆ ಧುಮುಕಬೇಕಾಗಿತ್ತು.
ನನ್ನ ಸ್ನೇಹಿತನಾದವನೊಬ್ಬ ಮರಾಠಿ ಪುಸ್ತಕ ಪತ್ರಿಕೆಗಳನ್ನು
ಓದುತ್ತಿದ್ದ. ಆತನಿಗೆ ಇಷ್ಟವಾಗಿದ್ದುದು ಪತ್ತೇದಾರಿ ಕಾದಂಬರಿಗಳು
-ಸಿನಿಮಾ ಪತ್ರಿಕೆಗಳು. ನಾನೂ ಪತ್ತೇದಾರಿ ಕಾದಂಬರಿಗಳನ್ನು
ಸಾಕಷ್ಟು ಓದಿದ್ದೆ. ಆದರೆ ಆ ಆಸಕ್ತಿ ಸ್ಥಿರವಾಗಿರಲಿಲ್ಲ.
ಆದರೆ ಅವನಾದರೋ ಮರಾಠಿ ಭಾಷೆಯಲ್ಲಿ ಮತ್ತೆ ಮತ್ತೆ ಆ ಕತೆಗಳನ್ನು
ಹೇಳುತ್ತಿದ್ದ. ಕಳ್ಳ ಸಿ.ಐ.ಡಿ.ಗಳಿಗೆ ಗಸ್ತುಕೊಟ್ಟು ಓಡಿ ಹೋಗು ವುದನ್ನು ಬಾರಿ ಬಾರಿಗೂ ವರ್ಣಿಸುತ್ತಿದ್ದ. ಆದರೆ ಕಾದಂಬರಿಗಳಲ್ಲಿ ಸಿ.ಐ.ಡಿಗಳಿಗೇ ಜಯವಾಗುವುದಲ್ಲವೆ? ಅದಕ್ಕೆ ಆತ ಸಮಾಧಾನ ಹೇಳುತ್ತಿದ್ದ.

"ನಿನಗೆ ತಿಳೀದು ಶೇಖರ್, ಈ ಪುಸ್ತಕ ಬರೆದು ಅಚ್ಚು ಹಾಕಿಸೋರೆಲ್ಲಾ ಸಿ.ಐ.ಡಿ.ಕಡೆಯವರು. ತಮಗೆ ಸೋಲಾಗುತ್ತೇಂತ ಅವರು ಯಾವತ್ತಾದರೂ ಒಪ್ಕೊಂಡಾರ?"

ಮುಂಬಯಿ ನಗರದಲ್ಲಿ ಶೇಖರನಾಗಿ ಮೆಲ್ಲನೆ ಮಾರ್ಪಟ್ಟ ನಾನು ಆ ಮಾತು ಕೇಳಿ ಮುಗುಳ್ನಕ್ಕು ಸುಮ್ಮನಾಗುತ್ತಿದ್ದೆ.

ಒಮ್ಮೆ ಆತ, ಯಾವಳೋ ಶ್ರೀಮಂತ ಯುವತಿಯ ಕಾರಿನ ಕೆಳಗೆ ಸಿಕ್ಕು, ಸುಂದರನಾದ ಬಡ ಯುವಕನೊಬ್ಬನ ಅದೃಷ್ಟ ಖುಲಾಯಿ ಸಿದ್ದನ್ನು ಹೇಳಿದ.

"ಅದು ಕತೆ ಅಲ್ವ?"

"ಛೆ! ಛೆ! ಕತೆ ಆದರೇನಂತೆ? ಹಾಗೆಲ್ಲಾ ಆಗ್ದೆ ಇದ್ರೆ ಕತೆ ಬರೀತಾರ?"

ನಾನು ಆತನಿಗೆ ಕಲ್ಪನೆಯ ಕುದುರೆಯನ್ನೇರಿ ಕವಿಗಳು ಮೂರು ಲೋಕ ಸಂಚಾರ ಮಾಡುವುದು ಉಂಟೆಂದು ಹೇಳಿದೆ. ಅವನ ಮನ ಸ್ಸಿಗೆ ನೋವಾಯಿತು.

"ಹಾಗೆ ಯಾಕಂತೀಯ? ಹೀಗೆ ಆಗ್ಲೇಬಾರದು ಅಂತ ಉಂಟೇನು?"

ಆಗಬಾರದೆಂದೇನೂ ಇರಲಿಲ್ಲ. ಆದರೆ ಹಾಗೆ ಆಗಲಿಲ್ಲ ಅಷ್ಟೆ. ಯಾವ ಶ್ರೀಮಂತ ಹುಡುಗಿಯ ಕಾರಿನ ಕೆಳಗೂ ನಾವು ಬೀಳಲಿಲ್ಲ. ನಮ್ಮ ಅದೃಷ್ಟ ಖುಲಾಯಿಸಲಿಲ್ಲ.

ಇನ್ನೊಂದು ದಿನ ಆತ, ತನ್ನ ಪ್ರೀತಿಪಾತ್ರನಾದ ಚಲಚ್ಚಿತ್ರ ನಾಯಕನ ಬಗ್ಗೆ ಹೇಳಿದ. ಅವನು ಚಿಲ್ಲರೆ ಸಾಮಾನು ಹರವಿ ಕೊಂಡು ನಾಲ್ಕು ಕಾಸು ಸಂಪಾದನೆಗಾಗಿ ಎಲ್ಲಿಯೊ ಬೀದಿಯ ಬಳಿಯಲ್ಲಿ ಕುಳಿತಿದ್ದಾಗ, ನಿರ್ಮಾಪಕರು ಅವನನ್ನು ನೋಡಿ ಕರೆ ದೊಯ್ದು ನಾಯಕನ ಪಾತ್ರ ಕೊಟ್ಟರಂತೆ. ಈಗ ಆತನ ಜತೆಯಲ್ಲಿ ನಟಿಸಲು ಹಾತೊರೆಯದ ತಾರೆಯೇ ಇಲ್ಲ. ನಾಲ್ಕು ಬ್ಯಾಂಕುಗಳಲ್ಲಿ ಆತ ದುಡ್ಡಿಟ್ಟಿದ್ದಾನೆ. ಅಷ್ಟೆ ಅಲ್ಲ. ತಾನು ಹಿಂದೆ ಚಿಲ್ಲರೆ ಸಾಮಾನು ಮಾರುತ್ತಿದ್ದ ಜಾಗಕ್ಕೆ ಬಂದು ಈಗ ಅಲ್ಲಿರುವ ಇನ್ನೊಬ್ಬನಿಂದ ಪ್ರತಿ ದಿನವೂ ಏನಾದರೊಂದು ಸಾಮಾನು ಕೊಳ್ಳುತ್ತಾನೆ! ........

ನನಗೆ ನಗು ಬರುತ್ತಿತ್ತು. ನನಗಿಂತ ಎರಡು ವರ್ಷ ಚಿಕ್ಕವನು ಆ ಹುಡುಗ. ಅವನ ಕಲ್ಪನೆಯ ಪ್ರಪಂಚ ರಹಸ್ಯಮಯವಾಗಿತ್ತು. ಅದರ ಒಳಹೊಕ್ಕರೆ ಮೈ ಮರೆಯದೆ ಇರುವುದು ಸಾಧ್ಯವೇ ಇರಲಿಲ್ಲ. ನನ್ನ ಮುಖದ ಮೇಲಿದ್ದ ತೆಳ್ಳಗಿನ ಕಪ್ಪನೆಯ ಬಾಲ್ಯ ಮೀಸೆಯ ಮೇಲೆ, ನಯವಾಗಿ ನೀಳವಾಗಿ ಬೆಳೆದ್ದಿದ್ದ ಕ್ರಾಪಿನ ಮೇಲೆ, ಕೈಯಾಡಿ ಸಿದೆ. ಚಲಚ್ಛಿತ್ರ ನಿರ್ಮಾಪಕರ ಯಾವುದಾದರೂ ಕಾರು ಬಂದು ನನ್ನೆದುರು ನಿಂತು ನನಗಾಗಿ ಬಾಗಿಲು ತೆರೆಯಬಾರದೇಕೆ?

ಆ ದಿನ ನನ್ನ ಬಳಿ ನಿಂತು, ಬೇರೊಂದು ಲೋಕದ ಇಣಿಕು ನೋಟವನ್ನು ಒದಗಿಸಿಕೊಟ್ಟ ಆ ಕಾರಿನ ನೆನಪಾಯಿತು -- ದೊಡ್ಡ ಮನುಷ್ಯರ ಕಾರು........ಲೋಕಪರಾಯಣರ ಕಾರು........ಆಮೇಲೆ ನಕ್ರಹುಬ್ಬಿನ ಚಿಕ್ಕ ಮೂಗಿನ ಕುಣಿಯುವ ಜಡೆಯ ಆ ಹುಡುಗಿ .... ಪರಾಯಣರ ಮಗಳು. ಅವಳ ನೆನಪು ಹಿತಕರವಾಗಿರಲಿಲ್ಲ---ಆದರೆ?

ಹೊಟ್ಟೆ ಹಸಿದ ಮೇಲೆ ಮನುಷ್ಯನಿಗೆ ಬೇರೆ ಬಯಕೆಗಳಿರುತ್ತವೆ ಅಲ್ಲವೆ? ಹೊಟ್ಟೆ ಹಸಿದಾಗಲೂ ಬಯಕೆಗಳಿರುತ್ತವೆ ಅಲ್ಲವೆ? ಅವ ನಿಗೆ ಅನ್ನ, ರೊಟ್ಟಿ, ಅಷ್ಟೇ ಸಾಕೆ? ಆತ ಪ್ರೀತಿಯನ್ನು ಬಯಸು ತ್ತಾನೆ. ನಾನು ಆ ಮರಾಠಿ ಹುಡುಗನನ್ನು ಪ್ರೀತಿಸುತ್ತಿದ್ದೆ. ಈ ಪ್ರೀತಿಗೂ ಹುಡುಗ ಹುಡುಗಿಯರ ನಡುವಿನ ಪ್ರೀತಿಗೂ ವ್ಯತ್ಯಾಸ ವಿದೆ ಅಲ್ಲವೆ? ಹದಿನೇಳು-ಹದಿನೆಂಟರ ವಯಸ್ಸಿನಲ್ಲಿ ನಾನು, ಅಂತಹ ಪ್ರೀತಿಯೆಂದರೇನೆಂಬುದನ್ನು ತಿಳಿದಿರಲಿಲ್ಲ. ತಾಯಿಯ ಪ್ರೀತಿ ಗತ ಕಾಲದ ಸ್ಮರಣೆ ಮಾತ್ರ. ತಂಗಿ ಅಕ್ಕ ನನಗಿರಲಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಚಿಕ್ಕವರಾದ ಶ್ರೀಮಂತ ಹುಡಿಗಿಯರಿದ್ದರು. ಆದರೆ ಅವರು ಶ್ರೀಮಂತ ಹುಡಿಗಿಯರು.ಮಳೆನಾಡಿನಿಂದ ಇಳಿದು ಬಂದಿದ್ದ ಹಳ್ಳಿಯ ಬಡ ಹುಡುಗನನ್ನು ಅವರು ಪ್ರೀತಿಸಿರಲಿಲ್ಲ. ಈಗ....

ನನ್ನ ಓರಗೆಯ ಹುಡುಗಿಯರು ನಡೆದು ಹೋಗುತ್ತಿದ್ದರೆ ನನ್ನಲ್ಲಿ ಹೊಸ ಅನುಭವಗಳಾಗುತ್ತಿದ್ದುವು. ಕೊಳೆಯಾದ ಉಡುಗೆ ಧರಿಸಿದ್ದ ನನ್ನನ್ನು ಅವರು ನೋಡುತ್ತಿರಲಿಲ್ಲ ನಿಜ. ಚಲಚ್ಚಿತ್ರದಲ್ಲಿ ತೋರಿಬರು ತ್ತಿದ್ದ ಘಟನೆಗಳು ನಿಜ ಜೀವನದಲ್ಲಿ ಆಗುತ್ತಿರಲಿಲ್ಲ ನಿಜ. ಆದರೆ, ಯಾವಳಾದರೂ ಹುಡುಗಿ ಯಾರನ್ನಾದರೂ ನೋಡಿ ಕಂಡೂ-ಕಾಣದ ಹಾಗೆ ತುಟಿಗಳ ಮೇಲೆ ಮುಗುಳುನಗೆ ಹಾಯಿಸಿದಾಗ, ನನಗೆ ನೋವಾಗುತ್ತಿತ್ತು. ಆ ಕಣ್ಣುಗಳು ಯಾರನ್ನೊ ಹುಡುಕಿದಾಗ, ನಾನು ಕಾತರಗೊಳ್ಳುತ್ತಿದ್ದೆ.......ಆದರೆ ಅದು ಕ್ಷಣ-ಕಾಲ. ನನಗೆ ಬಿಡುವಿ ದ್ದಾಗ. ಯೋಚನೆಗಳು ತರ್ಕಬದ್ಧವಾಗದೆ, ಬೇರೆ ಬೇರೆಯಾಗಿ ಹರಡಿಕೊಂಡಾಗ. ಆದರೆ, ಅಂತಹ ಸಂದರ್ಭಗಳು ಹೆಚ್ಚಾಗಿರು ತ್ತಿರಲಿಲ್ಲ.

ದಿನ ನಿತ್ಯದ ಬದುಕಿನ ಹೋರಾಟ ನನ್ನನ್ನು ಹೆಚ್ಚು ಹೆಚ್ಚು ಅನುಭವಿಯಾಗಿ ಮಾಡುತ್ತಿತ್ತು. ಆ ವರ್ಷದ ನಿರುದ್ಯೋಗ ಪ್ರದರ್ಶ ನಗಳು ಒಂದು ಪಾಠವನ್ನು ನನಗೆ ಕಲಿಸಿದವು: ನಾನು ಒಬ್ಬನೇ ಆಗಿರಲಿಲ್ಲ. ಈ ಪ್ರಪಂಚದಲ್ಲಿ ಸಂಕಟಪಡುವ ಜೀವ ನನ್ನದೊಂದೇ ಆಗಿರಲಿಲ್ಲ.......

ಅಜ್ಜಿ ಇಟ್ಟಿದ್ದ ನೋಟುಗಳಲ್ಲಿ ಒಂದು ಮಾತ್ರ ಉಳಿದಿತ್ತು. ಅಂಗಿಯ ಜೇಬಿನೊಳಗೆ ಅದನ್ನು ಇರಿಸಿದ್ದೆ. ಆ ಮಧ್ಯಾಹ್ನ, ಬೋರಿ ಬಂದರದ ದೊಡ್ಡದೊಂದು ಅಂಗಡಿಯ ಹೊರಗೆ ಬಲ ಸಂಧಿಯಲ್ಲಿ ನಾನು ಆಕಾಶ ನೋಡುತ್ತಾ ಮಲಗಿದ್ದೆ. ಆದರೆ ಹಲವಾರು ತಂತಿಗಳು ನನ್ನಮೇಲೆ ಬಲೆಯಂತೆ ಹರಡಿ, ಆಕಾಶವನ್ನು ನನ್ನ ದೃಷ್ಟಿಯಿಂದ ಮರೆಮಾಡಿದ್ದುವು. ಒಂದಷ್ಟು ಮೋಡಗಳು ಎಡದಿಂದ ಬಲಕ್ಕೆ ಹಾದು ಹೋದ ಮೇಲೆ ನಾನು ಮಗ್ಗುಲಿಗೆ ತಿರುಗಿಕೊಂಡು ನಿದ್ದೆಹೋಗಲು ಯತ್ನಿಸಿದೆ. ಐದು ನಿಮಿಷಗಳಾಗಿರಬೇಕು. ಕಣ್ಣುಗಳು ಒಲ್ಲೆ ವೆನ್ನುತ್ತಾ ತೂಕಡಿಸುತ್ತಿದ್ದುವು........ಆಗ ಒಂದು ನೆರಳು ನನ್ನ ಮೇಲಿಂದ ಹಾಯ್ದಹಾಗಾಯಿತು. ಒಮೈ, ಮತ್ತೊಮ್ಮೆ. ನಾನು ಚಲಿಸಲಿಲ್ಲ. ಮುಚ್ಚಿದ ಕಣ್ಣನ್ನು ತೆರೆಯಲಿಲ್ಲ. ಉಸಿರು ಬಿಡಲಿಲ್ಲ. ಒಂದು ಕೈ ಮೆಲ್ಲನೆ ನನ್ನ ಜೇಬಿನೊಳಕ್ಕೆ ಇಳಿಯಿತು-ಬಲು ಮೌನ ವಾಗಿ. ಅಷ್ಟೇ ಮೌನವಾಗಿ ನಾನು ಆ ಕೈಯನ್ನು ಬಿಗಿಹಿಡಿದೆ. ಯಾರೂ ಮಾತನಾಡಲಿಲ್ಲ. ಆ ಕೈ ಬಂದ ಹಾದಿಯಲ್ಲೆ ವಾಪಸ್ಸುಹೋ ಗಲು ಯತ್ನಿಸುತ್ತಿತ್ತು. ಅದರೆ ನನ್ನ ಮುಷ್ಟಿ ಬಲವಾಗಿತ್ತು........ ಹಾಗೆ ಒಂದೆರಡು ನಿಮಿಷ. ನಾನು ತುಂಬ ಕುತೂಹಲಿಯಾಗಿದ್ದೆ. ಆ ವ್ಯಕ್ತಿಯನ್ನು ನೋಡಬೇಕೆಂಬ ತವಕ ಹೆಚ್ಚುತ್ತಿತ್ತು............ಬಲು ದೀರ್ಘವೆಂದು ಕಂಡ ಮೂರು ನಾಲ್ಕು ನಿಮಿಷಗಳ ಆ ಸಂದಿಗ್ಧ ಸರಿ ಸ್ಥಿತಿಯನ್ನು ಕೊನೆಗಾಣಿಸುವ ಹಾಗೆ, ಆ ವ್ಯಕ್ತಿ ನಕ್ಕಿತು. ನಾನು ಕಣ್ಣು ತೆರೆದೆ. ತೆರೆದು, ಬಿಗಿಹಿಡಿದಿದ್ದ ಕೈಯನ್ನು ಹೊರಕ್ಕೆ ತರುತ್ತ ಎದ್ದು ಕುಳಿತೆ,

"ಆನ್ಯಾಯ"

ಆತ ಮಾತನಾಡಲಿಲ್ಲ.

"ಚಾಲಾಕಿ ಇದ್ದರೆ ಶ್ರೀಮಂತರ ಮೇಲೆ ಪ್ರಯೋಗಿಸು. ನನ್ನ ಐದು ರೂಪಯಿ ನಿನಗೆ ಬಲಿಯಾಗೋದು ಯಾವ ನ್ಯಾಯ?"

ಕ್ಷಣ ಕಾಲ ಅವನ ಮುಖ ಕಪ್ಪಿಟ್ಟತು. ಮತ್ತೆ ನಟನೆಯ

ಮುಖವಾಡವನ್ನು ಆತ ಧರಿಸಿದ.

"ಕ್ಷಮಿಸು ತಮ್ಮ."

ಮುಖದಮೇಲೆ ವಿಷಾದದ ಛಾಯೆ ಇಲ್ಲದಿದ್ದರೂ ಆ ಸ್ವರ ಕಂಪಿ ಸುತ್ತಿತು. ನನಗಿಂತ ಆತ ಮೂರು ನಾಲ್ಕು ವರ್ಷ ದೊಡ್ಡವನಿದ್ದಿರ ಬೇಕು. ಕಸಬಿಗೆ ಹೊಸಬನಲ್ಲ. ಅವನ ದೃಷ್ಟಿ ಅದನ್ನು ಹೇಳುತ್ತಿತ್ತು. ಉತ್ತರದವನ ಹಾಗೆ ಮಾತನಾಡುತ್ತಿದ್ದ. ಅವನ ಹಿಂದೂಸ್ಥಾನಿ ಆಕರ್ಷಣೀಯವಾಗಿತ್ತು-ನಮ್ಮ ತಂದೆ ನಾವಿಬ್ಬರೆ ಇದ್ದಾಗ ಮಾತ ನಾಡುತ್ತಿದ್ದ ಹಳ್ಳಿಯ ಕನ್ನಡದ ಹಾಗೆ.

"ಬಾ, ಚಾ ಕುಡಿಯೋಣ" ಎಂದು ಅವನು ಆಹ್ವಾನಿಸಿದ. ನಾನು ಮುಗುಳ್ನಕ್ಕು, ಅವನೊಡನೆ ಸಮಿಪದ ಇರಾನಿ ಹೋಟೆಲನ್ನು ನುಗ್ಗಿದೆ.

.......ಹಾಗೆ ಅರಂಭವಾದ ಪರಿಚಯ ಅಲ್ಲಿಗೇ ಮುಕ್ತಾಯವಾ ಗಲಿಲ್ಲ. ನನಗೆ ತಿಳಿದಿದ್ದ ಓದುಬರಹ, ಅವನ ಮೆಚ್ಚುಗೆಗೆ ಪಾತ್ರ ವಾಯಿತು. ಅತನಿಗೆ ನನ್ನ ಕೈಯಲ್ಲಿ ಆದ ಮುಖಭಂಗ, ವಿಚಿತ್ರ ರೀತಿಯಲ್ಲಿ ಅವನನ್ನು ನನ್ನೆಡೆಗೆ ತಂದಿತು

"ಶೇಖರ್, ನನಗೂ ಸಂಬಂಧಿಕರು ಯಾರೂ ಇಲ್ಲ. ಪ್ರಪಂಚ ವಿಶಾಲವಾಗಿದೆ ಎಂತ ದೇಶವೆಲ್ಲಾ ಸುತ್ತಾಡ್ತಿದ್ದೇನೆ. ಕಲ್ಕತ್ತಾ, ಢಿಲ್ಲಿ ಗಳಾದ ಮೇಲೆ, ಈಗ ಬೊಂಬಾಯಿ".

ನಾನು ಮುಗುಳ್ನಕ್ಕೆ.

ಆತ ಮರುದಿನವೂ ನನ್ನನ್ನು ಹುಡುಕಿಕೊಂಡು ಬಂದ. ನೋಡು ವವರ ದೃಷ್ಟಿಯಲ್ಲಿ ಆತನೊಬ್ಬ ಕೆಳ ಮಟ್ಟದ ವ್ಯಕ್ತಿ. ಅವನದು ತುಂಡು ಸಿಗರೇಟನ್ನು ಕಿವಿಯಲ್ಲಿರಿಸಿಕೊಳ್ಳುವ ಸಂಸ್ಕೃತಿ. ಅವನ ಜೀವನ ಕ್ರಮವನ್ನು ತಿಳಿದವರ ದೃಷ್ಟಿಯಲ್ಲಿ, ಆತನೊಬ್ಬ ಜೇಬುಗಳ್ಳ. ಜೇಬುಗಳ್ಳ ರು ಓಳ್ಳೆಯ ಮನುಷ್ಯರಾಗಿ ಇರುವುದು ಎಂದಾದರೂ ಸಾಧ್ಯವೆ? ಒಳ್ಳೆಯ ಮನುಷ್ಯರೆನ್ನಿಸಿಕೊಳ್ಳಬೇಕಾದುದು ಯಾರ ದೃಷ್ಟಿಯಲ್ಲಿ? ಒಳ್ಳೆತನವೆಂದರೇನು?

ನಾನು ಅವನ ಜೇವನದ ಒಳಹೊಕ್ಕು ಪರೀಕ್ಷಿಸ ಬಯಸಿದೆ, ಕೊನೆಯಿಲ್ಲದೆ ಪತ್ತೇದಾರಿ ಕಥೆ ಚಲಚ್ಚಿತ್ರ ತಾರೆಯರ ಜೀವನಗಳ ಬಗ್ಗೆ ಮಾತನಾಡುತ್ತಿದ್ದ ಮರಾಠಿ ಹುಡುಗನ ಸಹವಾಸಕ್ಕಿಂತ ಇದು ಹಿತಕರವಾಗಿತ್ತು.

"ನಿಮ್ಮನ್ನು ಏನೆಂದು ಕರೀಲಿ?"

"ಜನ ಕೂಗೋದು ಭಾಷ ಎಂತ. ನಮ್ಮ ತಾಯಿ ಇಟ್ಟ ಹೆಸರು ಅಮಿರ್. ನೀನು ಅಮಿರ್ ಅಂತಾನೆ ಕೂಗು."

"ಅಮಿರ್, ನಿನ್ನ ಒಂದು ವಿಷಯ ಕೇಳ್ಬೇಕೂಂತ"

"ಅದಕ್ಕೇನಂತೆ, ಧಾರಾಳವಾಗಿ ಕೇಳು."

"ಈ ವೃತ್ತಿ ನಿನಗೆ ತುಂಬ ಇಷ್ಟಾನ?"

ನಾನು ಮಾತನಾಡುತ್ತಿದ್ದ ಹಿಂದೂಸ್ಧಾನಿ ಹರಕು ಮುರು ಕಾಗಿತ್ತು. ಆತ ಅದನ್ನು ಗಮನಿಸುತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿದ್ದುದನ್ನು ತಿಳಿದುಕೊಂಡು ಉತ್ತರ ಕೊಡುತ್ತಿದ್ದ.

"ಈ ಹಮಾಲಿ ಕೆಲಸ ನಿನಗೆ ಇಷ್ಟಾನ?"

ಆ ಕೆಲಸ ನನಗೆ ಇಷ್ಟವಾಗಿರಲಿಲ್ಲ. ಪರಿಸ್ಧಿತಿ, ನನ್ನನ್ನು ಆ ಗತಿಗೆ ಇಳಿಸಿತ್ತು.

"ನಾನೂ ಅಷ್ಟೇ, ನಾನು ಅಷ್ಟೇ ಶೇಖರ್."

ಆತ, ತಂದೆಯನ್ನು ಬಾಲ್ಯದಲ್ಲೆ ಕಳೆದುಕೊಂಡಿದ್ದ. ಮನೆ ತುಂಬ ಮಕ್ಕಳಿದ್ದ ಸಂಸಾರ ಅವರದು. ಮೂವರು ಸೋದರರು. ನಾಲ್ವರು ಹುಡಿಗಿಯರು. ಅಮಿರ್ ಮೂರನೆಯವನು. ಬಡತನದ ಲ್ಲೇ ನಿರ್ಗತಿಕನಾಗಿ ಅವರ ತಂದೆ ಸತ್ತಮೇಲೆ, ಆ ಮನೆಯೊಂದು ಪರಸ್ಪರ ಕೊಯ್ದು ಕಿತ್ತಾಡುವ ಯುದ್ಧ ಭೂಮಿಯಾಯಿತು. ಯಾರಿಗೂ ವಿದ್ಯಾಭ್ಯಾಸವಿರಲಿಲ್ಲ. ಅವರ ಸಂಪಾದನೆಯೆಲ್ಲವೂ ಆಷ್ಟಕಷ್ಟೆ. ಹಿರಿಯಣ್ಣನನ್ನೂ ಮದುವೆಗಾಗಿ ನೆರೆನಿಂತಿದ್ದ ಅಕ್ಕತಂಗಿಯರನ್ನೂ ಬಿಟ್ಟು ಅಮೀರ್ ಮತ್ತು ಅವನಣ್ಣ ಆ ಮನೆಯಿಂದ ಹೊರಟರು. ಅದು ಆರು ವರ್ಷಗಳ ಹಿಂದಿನ ಕತೆ. ಸೋದರರು ಹಿಡಿದ ಹಾದಿ ಬೇರೆ ಬೇರೆ.

ಅಮೀರ್ ಸಂಭಾವಿತನಾಗಿ ಒಳ್ಳೆಯವನಾಗಿ ಬದುಕಲು ಯತ್ನಿ ಸಿದ. ಆದರೆ ಅವನು ವಿದ್ಯಾವಂತನಾಗಿರಲಿಲ್ಲ. ಹಣವಂತನಾಗಿರ ಲಿಲ್ಲ. ಉಳಿದವರ ಮೇಲೆ ಪ್ರಭಾವ ಬೀರುವಂತಹ ಮನೆತನದ ಪ್ರತಿಷ್ಠೆ ಆತನಿಗಿರಲಿಲ್ಲ. ಅವನು ಹೆಸರಿನಲ್ಲಿ ಮಾತ್ರ ಆಮೀರ್. ಕಡು ಬಡವನಾದ ಲಕ್ಷ್ಮೀನಾರಾಯಣ್ ಇದ್ದ ಹಾಗೆ. ಹೀಗೆ ಆಮೀರ್ ಬಲು ತರ್ಕ ಬದ್ಧವೆಂದು ಕಾಣುವ ಹಾದಿಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ಜೇಬುಗಳ್ಳರ ವೃತ್ತಿಯ ಹೊಸ್ತಿಲಿಗೆ ಬಂದ; ಮೊದಲ ಪಾಠಗಳನ್ನು ಕಲಿತ.

ಆತನ ಕತೆಯನ್ನು ಕೇಳುವುದರ ಮೂಲಕ, ಕಾಲ್ಪನಿಕ ಕತೆಗಳ ಬದಲು ವಾಸ್ತವ ಜೀವನದ ಅಂಶಗಳನ್ನು ತಿಳಿಯುವುದರ ಮೂಲಕ, ನಾನು ಎಲ್ಲ ಕಡೆಯಲ್ಲೂ ಒಂದೇ ರೀತಿಯಾಗಿ ಕಾಣಿಸಿ ಕೊಳ್ಳುತ್ತಿದ್ದ ಜೀವನದ ವಿರಾಟ್ ರೂಪವನ್ನು ಮನಸ್ಸಿನಲ್ಲೆ ಚಿತ್ರಿಸಿ ಕೊಂಡೆ.

ಮತ್ತೆಯೊಂದು ದಿನ ಆತ ಹಸನ್ಮುಖೀಯಾಗಿ ಬಂದ.

"ಏನು ಅಮೀರ್? ಮುಖ ಚಂದ್ರನ ಹಾಗಿದೆಯೆಲ್ಲಾ. ಏನ್ಸಮಾಚಾರ ?"

ಅವನು, "ಬಾ ನಡಿ," ಎಂದ.

ಇರಾನಿಯಂಗಡಿಗೆ ಕರೆದೊಯ್ದು ಯಾರೂ ಇಲ್ಲದಿದ್ದ ಮೂಲೆಯಲ್ಲಿ ಕುಳಿತು ಕೇಕು ಬಿಸ್ಕತ್ತುಗಳ ತಟ್ಟೆಯನ್ನೇ ತರಿಸಿದ. ಆ ಮುಂಜಾವದಿಂದ ಬರಿ ಹೊಟ್ಟೆಯಲ್ಲಿದ್ದ ನಾನು ಶ್ರೀಮಂತರ ತಿಂಡಿ ಯಾದ ಕೇಕು ಬಿಸ್ಕತ್ತುಗಳನ್ನು ನಿರಾಕರಿಸಲಿಲ್ಲ. ಹಸಿದ ಹೊಟ್ಟೆಗೆ ಯಾವುದಾದರೇನಂತೆ?

"ನೋಡು ಶೇಖರ್. ಆ ದಿವಸ ನೀನು, ಚಾಲಾಕಿ ಇದ್ದರೆ ಶ್ರೀಮಂತರ ಮೇಲೆ ಪ್ರಯೋಗಿಸು ಎಂದಿದ್ದೆ. ಈ ದಿನ ಹಾಗೆಯೇ ಮಾಡ್ದೆ, ಈ ಷರಾಯಿ ಜೇಬಿನಲ್ಲಿ ಎಷ್ಟು ರೊಪಾಯಿ ಇದೆ ಹೇಳ್ತೀಯಾ?"

"ಓ ಹಾಗೋ ? ಆಮೀರ್ ಆಮೀರನೇ ಆಗಿರಬೇಕು ಹಾಗಾದರೆ."

"ಆಂಥಾದೇನೂ ಇಲ್ಲ. ಎರಡು ಹಸುರು ನೋಟು, ಐದರದು ಹತ್ತು."

ನಾನು ಯಾವ ಮುಖ ವಿಕಾರವೂ ಇಲ್ಲದೆ ಮೌನವಾಗಿ ಕುಳಿತೆ, ನಮ್ಮ ಊರಲ್ಲಿ ಪಾಕೀಟು ಕಳೆದುಕೊಂಡ ದೊಡ್ಡ ಮನುಷ್ಯರು ........ ಆ ಲಾಕಪ್ಪು.. .. ಕ್ಷಯರೋಗದಿಂದ ನರಳುತ್ತಿದ್ದರೂ ರಾತ್ರೆಯಲ್ಲಾ ಮರದ ಕೆಳಗೆ ಕಾದು ಕುಳಿತ ತಂದೆ........ ಆ ಕೊನೆಯ ಘಳಿಗೆಯ ಸಂಭಾಷಣೆ: "ಚಂದ್ರೂ, ಆ ದಿವ್ಸ ನೀನು ಪಾಕೀಟು ಕದ್ದಿರಲಿಲ್ಲ ಅಲ್ವಾ?"... ... "ಇಲ್ಲಪ್ಪಾ ನಾನು ಯಾವತ್ತಾದರೂ ಹೀಗ್ಮಾ ಡೇನಾ?"..............

ಆಮೀರ್ ಚಹಾವನ್ನು ಸಾಸರಿಗೆ ಬಸಿದುಕೊಂಡು ಹೀರುತ್ತಾ ನನ್ನ ಮುಖವನ್ನೇ ದಿಟ್ಟಿಸಿದ.

"ಆ ನೋಟುಗಳ ಜೊತೇಲಿ ಆ ವ್ಯಾನಿಟಿ ಬ್ಯಾಗ್ ನಲ್ಲಿ ವಿಸಿ ಟಿಂಗ್ ಕಾರ್ಡೂ ಇತ್ತು. ಅವರ ಬಂಗಲೆ ಇರೋದು ತಾರ್ದೇವ್ ನಲ್ಲಿ. ಅಲ್ಲಿಗೆ ಹೋಗಿ, ತಪ್ಪಾಯ್ತು ಅಂತ ಕ್ಷಮೆ ಕೇಳಿ, ಕೊಟ್ಟ ಡೋಣವೇನು ವಾಪಸ್ಸು ದುಡ್ನ?"

ಅಮೀರ್ ಹಾಗೆ ಕೇಳಿದಾಗ ನಗುತ್ತಿರಲಿಲ್ಲ.

"ಯಾಕೆ ಅಮೀರ್, ಗೇಲಿ ಮಾಡೋದು ತುಂಬ ಇಷ್ಟವೇನು ನಿಂಗೆ?" "ಮತ್ತೆ ದೇವರ ಹಾಗೆ ಕೂತಿದೀಯಲ್ಲ? ಮನಸ್ಸಿನಲ್ಲಿ ರೋದನ್ನ ಸ್ಪಷ್ಟವಾಗಿ ಹೇಳ್ಬಾರ್ದ್ದೆ?"

"... .... ...."

"ನೋಡು ಶೇಖರ್,ಇಷ್ಟು ದಿವಸದಿಂದ ನಾವು ಸ್ನೇಹಿತರು. ನಾನು ಮಾಡೋದು ತಪ್ಪು ಅಂತಿದ್ದರೆ ಬಾಯ್ಬಿಟ್ಟು ಹೇಳು. ಯಾವ

ಸುಡುಗಾಡಿಗೆ ಮುಚ್ಚುಮರೆ?"

ಆ ಸ್ವರದಲ್ಲಿ ನೋವಿತ್ತು. ಉದ್ವೇಗವಿತ್ತು, ತಿಳಿವಳಿಕೆ ಬಂದಾ ಗಿನಿಂದ ಸಂಕಷ್ಟ, ಪರಂಪರೆಗಳನ್ನೇ ಅನುಭವಿಸುತ್ತ ಬಂದ ನಾನು ಆ ಘಾಸಿಕೊಂಡ ಹೃದಯವನ್ನು ಅರ್ಥ ಮಾಡಿಕೊಳ್ಳಲು ಸಮರ್ಥ

ನಾಗಿದ್ದೆ. ಅಂದ ಮೇಲೆ-

"ಅಣ್ಣಾ ನನ್ನ ತಪ್ಪು ತಿಳೀಬೇಡ . ಇದು ಇಷ್ಟವಾದ ಕೆಲಸ ಅಂತ ಯಾರಾದರು ಮಾಡ್ತಾರ?" ಅಮೀರ್ ಗೆ ಸ್ವಲ್ಪ ಸಮಾಧಾನವಾದಂತೆ ತೋರಿತು. "ಶೇಖರ್ , ನಾನು ನಿನ್ನ ಜೇಬಿನಿಂದ ಐದು ರೂಪಾಯಿ ಕದಿಯೋಕೆ ಪ್ರಯತ್ನಪಟ್ಟ ದಿನದಿಂದ ತುಂಬ ಬದಲಾಗಿದ್ದೇನೆ. ಆಗ ನನಗೆ ಹಸಿವಾಗಿತ್ತು. ಎಂಜಲೆಲೆಗಾಗಿ ನಾಯಿಗಳು ಕಿತ್ತಾಡೋ ದಿಲ್ಲವೆ? ಹಾಗೆ. ನಾನು ಯಾರ ಮೇಲೆ ಬೀಳೋದಕ್ಕೂ ಸಿದ್ಧವಾಗಿದ್ದೆ. ಆದರೆ ನಿನ್ನನ್ನು ಕಂಡ ಮೇಲೆ, ನಿನ್ನ ಮಾತು ಕೇಳಿದ ಮೇಲೆ,ನಾನು ಸಾಮಾನ್ಯ ಜನರ ವಿರುದ್ಧ ಕೈ ಎತ್ತಿಯೇ ಇಲ್ಲ. ಅಥವರ ಜೇಬಿಗೆ ಕೈ ಹಾಕೇ ಇಲ್ಲ. ಆದರೆ ಶ್ರೀಮಂತರ ವಿಷಯ ಬೇರೆ."

..... ಹೊರಡುತ್ತಲಿದ್ದಾಗ ಒಂದು ನೋಟನ್ನು ಅಮಾರ್ ನನ್ನ ಜೇಬಿಗೆ ತುರುಕಿದ. ನಾನು ಬೇಡನೆಂದೆ. ಅವಶ್ಯತೆ ಇದ್ದರೂ ಅವನಿಂದ ಐದು ರೂಪಾಯಿ ಪಡೆಯಲು ಮನಸ್ಸು ಇಷ್ಟಪಡಲಿಲ್ಲ.

"ಗೊತ್ತು ಶೇಖರ್. ನಿನಗೆ ಪಾಪದ ಹಣ ಬೇಕಾಗಿಲ್ಲ. ನೀನು ದುಡಿದು ಸಂಪಾದಿಸೋ ಮರ್ಯಾದಸ್ಥ, ನಾನು ಸುಲಿದು ತಿನ್ನೋ ಬೇಬು ಕಳ್ಳ ಅಲ್ವಾ ?"

"ಹಾಗೆ ಹೇಳ್ಬಾರ್ದು ಅಮೀರ್."

"ಮತ್ತೆ -?"

ನಾನು ಉತ್ತರವೀಯದೆ, ನನ್ನ ಜೇಬು ಸೇರಿದ್ದ ನೋಟಿ ನೊಡನೆ ಹೊರಟುಹೋದೆ. ಬಲು ದೂರ ಹೋದೆ. ಪಶ್ಚಿಮ ತೀರದ ಸಮುದ್ರ ಮೆರಿನ್ ಡ್ರೈವಿನ ದಡಕ್ಕೆ ಅಪ್ಪಳಿಸುತ್ತಿತ್ತು. ಸಮುದ್ರ ವನ್ನೇ ನೋಡುತ್ತ ಭವ್ಯವಾದ ಕಟ್ಟಡಗಳು ಸಾಲಾಗಿ ನಿಂತಿದ್ದುವು. ಆ ಹಾದಿಯಲ್ಲಿ ಸಾಗಿದಾಗ, ನಾನೊಬ್ಬ ಬಲು ಸಣ್ಣ ಮನುಷ್ಯ ಪ್ರಾಣಿಯಾಗಿ ಕಂಡೆ. ಅಲ್ಲಿಂದ ಚೌಪಾಟಿಯ ಮರಳು ರಾಶಿಗಿಳಿದು ಸಹಸ್ರಾರು ಜನರೊಡನೆ ಬೆರೆತಾಗ, ನನ್ನ ವ್ಯಕ್ತಿತ್ವ ಅನರೆಡೆಯಲ್ಲಿ ಅಳಿಸಿಹೋಯಿತು. ಆಗ ಮನಸ್ಸಿಗೆ ನೆಮ್ಮದಿ ಎನಿಸಿತು.

ಗತ ಕಾಲದ ಘಟನೆಗಳನ್ನು ಮನಸ್ಸಿನಲ್ಲಿ ಮೆಲುಕು ಹಾಕ ತೊಡಗಿದೆ. ಅಂತರ್ಮುಖಿಯಾಗಿ ಯೋಚಿಸುತ್ತ ಕುಳಿತ್ತಿದ್ದ ನಾನು ಜೇಬಿನೊಳಕ್ಕೆ ಕೈ ಹಾಕಿದೆ. ನೋಟು ಮುದುಡಿಕೊಂಡಿತ್ತು. ಅದನ್ನು ಹೊರ ತೆಗೆದೆ. ಆ ನೋಟು-ಐದು ರೂಪಾಯಿನದಾಗಿರಲಿಲ್ಲ. ತನ್ನ ಬೆಲೆ ನೂರು ಎಂದು ಅದರ ಬಣ್ಣ ಸಾರುತ್ತಿತ್ತು. ಎಂತಹ ವ್ಯಕ್ತಿ ಈ ಅಮೀರ್! ಇದರರ್ಥವೇನು ? ನನ್ನ ಕೈಯಲ್ಲಿ ನೂರು ರೂಪಾಯಿ! ಕ್ಷಯ ರೋಗಿಯಾದ ತಂದೆಗೋಸ್ಕರ ನೆರವು ಪಡೆಯಲು ಹೋದಾಗ ಆ ದೊಡ್ಡಮನುಷ್ಯರ ಮನೆಯಲ್ಲಿ ನನಗೆ ದೊರೆತಿದ್ದ ಎರಡು ನಾಣ್ಯ ಗಳು ಮತ್ತು ಈ ನೂರು ರೂಪಾಯಿ!

ಇದು ಸರಿಯಲ್ಲವೆಂದು ನನಗೆ ತೋರಿತು. ನಾಳೆಯ ದಿನ

ಅಮೀರ್ ಬಂದಾಗ ಹಿಂದಿರುಗಿಸಬೇಕೆಂದುಕೊಂಡೆ.

........ಮತ್ತೆ ಎರಡು ದಿನ ಅಮೀರ್ ಕಣಿಸಲಿಲ್ಲ ನನಗೆ ಸಾಕಷ್ಟು ಕೂಲಿಯೂ ಸಿಗಲಿಲ್ಲ. ಆ ನೋಟಿಗೆ ‌ಚಿಲ್ಲರೆ ಪಡೆದು ಒಂದು ರೂಪಯಿ ಖರ್ಚುಮಾಡಿ ನಾಳೆಯ ಸಂಪಾದನೆಯಿಂದ ಸೇರಿಸಿ ಹಿಂತಿರುಗಿಸಬಹುದು ಎಂದು ಯೋಚಿಸಿದೆ. ಅದು ಸರಿಯಲ್ಲ ಎಂಬ ಭಾವನೆ ಮತ್ತೆ ಬಾಧಿಸಿತು. ಆದರೆ ಹಸಿವು, "ಅದರಲ್ಲೇನು ತಪ್ಪು?" ಎಂದು ಕೇಳುತ್ತಿತ್ತು.

ನಾನು ಒಂದು ಹೋಟೆಲಿನ ಬಳಿ ಸಾರಿ, "ನೂರು ರೂಪಾಯಿಗೆ ಚಿಲ್ಲರೆ ಇದೆಯಾ?" ಎಂದು ಕೇಳಿದೆ.

ಹೋಟೆಲಿನಲ್ಲಿ ದುಡ್ಡು ಎಣಿಸುತ್ತಲಿದ್ದವನು ನನ್ನನ್ನೇ ನೋಡಿದ. ಆ ದೃಷ್ಟಿಯ ವಿಧಾನ ನನಗೆ ಪರಿಚಿತವಾಗಿತ್ತು. ಸಂದೇಹದಿಂದ ಸಂಶಯದಿಂದ ಅಷ್ಟರವರೆಗೆ ಎಷ್ಟೊಂದು ಜನ ನನ್ನನ್ನು ನೋಡಿರಲಿಲ್ಲ! ನನ್ನಂತಹ ಭಿಕಾರಿ ನೂರು ರೂಪಾಯಿಯ ಚಿಲ್ಲರೆ ಕೇಳುವುದರಲ್ಲಿ ಅಸಾಮಾನ್ಯವಾದುದು ಇದ್ದೇ ಇರಬೇಕಲ್ಲವೆ?

ಬೊಂಬಾಯಿಯ ಪೋಲೀಸರ-ಲಾಕಪ್ಪಿನ ಪರಿಚಯ ನನಗೆ ಆಗಿರಲಿಲ್ಲ. ಮಾಡಿಸಿಕೊಳ್ಳುವ ಇಷ್ಟವೂ ನನಗಿರಲಿಲ್ಲ.

"ಚಾ ತಗೊಂಡು ಎಂಟು ಹತ್ತಾಣೆ ಬಿಲ್ ಆದರೆ ಕೊಡ್ತೀ ನಪ್ಪಾ" ಎಂದನಾತ.

ಮುಂದೆ ಏನಾಗಬಹುದಾಗಿತ್ತೋ ಹೇಳುವುದು ಸಾಧ್ಯವಿರಲಿಲ್ಲ. ನಾನು ಹೋಟಲಿನ ಒಳಹೋದಾಗ ಪೋಲೀಸರಿಗೆ ಬರಲು ಆತ ಆಮಂತ್ರಣವಿತ್ತರೂ ಇತ್ತನೆ. ನಾನು ಒಳಹೋಗಲಿಲ್ಲ.

"ಚಿಲ್ಲರೆ ನನಗಲ್ಲ. ಬೇರೆ ಯಾರಿಗೋ ಬೇಕಾಗಿತ್ತು. ನಾನು ಖರ್ಚು ಮಾಡೋಕಾಗಲ್ಲ" ಎಂದೆ.

ಹಾಗೆ ಹೇಳಿ ಮುಂದೆ ಸಾಗಿದೆ....

ಮರುದಿನ ನನ್ನನ್ನು ಹುಡುಕಿಕೊಂಡು ಬಂದ ಆಮೀರನನ್ನು ನೋಡಿ ಅವಾಕ್ಕಾಗಿ ನಿಂತೆ. ಆತ ಖಿಲಾಡಿಯ ಹಾಗೆ ನಗುತ್ತಿದ್ದ. ಉಣ್ಣೆಯ ಸೂಟು, ಹೊಳೆಯುತ್ತಿದ್ದ ಷೂಗಳು, ತಿದ್ದಿ ಬಿಡಿಸಿದ್ದ ಕ್ರಾಪು__ಸಣ್ಣ ಮೀಸೆ, ಉರಿಯುತ್ತಿದ್ದ ಸಿಗರೇಟು........

"ಏನಣ್ಣಾ ಇದು ?"

"ಯಾಕೆ, ಚೆನ್ನಾಗಿಲ್ವೇನೊ?"

"ಇಲ್ದೇ ಏನು? ನಿಜವಾಗಿಯೂ ಅಮೀರನಾಗೇ ಕಾಣ್ತೀಯ. ಎಷ್ಟು ಬೇಗ ಹೊಸ ಬಟ್ಟೆ ಹೊಲಿಸ್ಕೊಂಡೆ!"

"ನೀನೊಬ್ಬ ಗುಗ್ಗು. ಸರಿಯಾಗಿ ನೋಡ್ಬಾರ್ದ? ಹೊಸ ಬಟ್ಟೇನ ಇದು?"

ಅದು ಹೊಸದಾಗಿರಲಿಲ್ಲ.

"ಗುಜರಿಯಿಂದ ತಗೊಂಡೆ ಕಣೋ. ಹಿಂದೆ ಯಾವ ಶ್ರೀಮಂತ ಹುಡುಗನ ಮೈ ಬೆಚ್ಚಗೆ ಮಾಡಿತ್ತೊ, ಏನೊ. ಆದರೆ ಈಗ ನನ್ನ ಕೈಗೆ ಬಂದಿದೆ. ಹೀಗಾಗ್ಬೇಕಾದರೆ ಈ ಉಣ್ಣೆ ಹೊತ್ತಿದ್ದ ಆ ಕುರಿಗಳು ಎಷ್ಟು ಪುಣ್ಯ ಮಾಡಿರ್‍ಬೇಡ ಹೇಳು?"

ನಾನು ನಕ್ಕುಬಿಟ್ಟೆ.

"ಶೇಖರ್, ಇವತ್ತು ಮಜವಾಗಿರ್ಬೇಕು ನಡಿ ಹೋಗೋಣ. ಎಲ್ಲಿಗಾದರೂ_"

ಆತನಿಗೆ ಪ್ರಾಯಶಃ ತಾನು ನನಗೆ ಕೊಟ್ಟಿದ್ದ ಹಸುರು ನೋಟಿನ ನೆನಪೇ ಇರಲಿಲ್ಲವೇನೊ.

"ಯಾಕ್ಮಗು? ಯಾಕೆ ಹಾಗಿದ್ದೀಯ? ಇನ್ಯಾವ ಗಾಡಿ ಬರೋದಿದೆ? ನಿಮ್ಮಾವ ಮತ್ತು ಮಾವನ ಮಗಳು ಬರ್‍ತಾರೇನು? ಅವರ ಜಿಡ್ಡಿಂಗ್ ಹೊರ್‍ಬೇಕೆನೊ ಪಾಪ!"

ಆಂತಹ ವ್ಯಂಗ್ಯ ಮಾತಿನಿಂದ ನನಗೆ ನೋವಾಗುತ್ತಿರಲಿಲ್ಲ_ ಅಮೀರನ ಹೃದಯ ನಿರ್ಮಲವಾಗಿತ್ತು.

"ಅಮೀರ್, ನಿಂಗೆ ನಗು ಬರುತ್ತೊ ಏನೋ. ನಿನ್ನ ನೋಟು ವಾಪಸ್ಸುಕೊಡ್ಬೇಕೂಂತ ಎರಡು ದಿವ್ಸ ನಿನ್ನ ಹಾದಿ ನೋಡ್ದೆ. ಕಡೆಗೆ ಚಿಲ್ಲರೆಮಾಡಿ ಒಂದು ರೂಪಾಯಿ ಖರ್ಚುಮಾಡೋಣಾಂತಿದ್ದೆ. ಚಿಲ್ಲರೆ ಕೇಳೊಕ್ಕೋದರೆ ಹೋಟೆಲಿನವನಿಗೆ ಸಂಶಯ ಬಂದ್ಬಿಡ್ತು

೧೧೦
ವಿಮೋಚನೆ
ಕಣಪ್ಪಾ."

ಆಮೀರನಿಗೆ ಅದು ತಮಾಷೆಯಾಗಿ ತೋರಲಿಲ್ಲ.

ಅಯ್ಯೊ! ನಾನೆ ತಪ್ಮಾಡ್ದೆ. ಹಿಂದೆ ನನಗೇ ಒಂದ್ಸಾರಿ
ಹೀಗಾಗಿತ್ತು. ಅದು ಗೊತ್ತಿದ್ದೂ ನಾನು ಹಾಗ್ಮಾಡೋದೆ ?

ಪರವಾಗಿಲ್ಲ. ಸದ್ಯಕ್ಕೇನೂ ಆಗ್ಲಿಲ್ಲಾ ಆಂತಿಟ್ಕೊ.??

ಹಾಗಾದರೆ ಖರ್ಚಿಗೇನ್ಮಾಡ್ಡೆ ? ಉಪವಾಸ ಇದ್ಯೇನು ?

ನಾನು ಸುಳ್ಳುಹೇಳಬೇಕಾದ ಪ್ರಮೇಯವಿರಲಿಲ್ಲ. ಹೇಳಿದ್ದರೂ ಆತ ನಂಬುತ್ತಿರಲಿಲ್ಲ. ಹಸಿವಿನ ಅನುಭವವಿರುವ ವ್ಯಕ್ತಿಗೆ, ಇನ್ನೊಬ್ಬ ಹಸಿದಿರುವಾಗ, ಅದು ಗೊತ್ತಾಗಿಯೇ ಆಗುತ್ತದೆ.

ಆಲ್ಲಾ ಶೇಖರ್ , ನೀನು ನಿಜವಾಗಿಯೂ ಮಗೂನೆ. ನನಗೆ ವಾಸಸ್ಸು ಕೊಡೋದು ಅಂದರೇನು ?

ಎರಡು ನಿಮಿಷ ನಾವಿಬ್ಬರು ಮೌನವಾಗಿದ್ದೆವು. ನನ್ನ ಮೂಖ ಬಾಡಿತ್ತು. ಆದರೆ ಅವನು ನಿತ್ಯ ಉತ್ಸಾಹಿ: ಆವನೆಂದ

ಇದಿರು ಮಾತನಾಡದೆ ನನ್ನ ಜತೇಲಿ ಬಾ

ನಾನು ಅವನ ಜತೆಯಲ್ಲಿ ಸೆಲ್ಲೂನಿಗೆ ಹೋದೆ. ಅಮೀರನ ನಿರ್ದೇಶಕತ್ವದ ಕೆಳಗೆ ನನ್ನ ಹುಲುಸಾದ ತಲೆಗೂದಲ ಮೇಲೆ ಕತ್ತರಿ ಬಾಚಣಿಗೆಗಳು ಕಣ್ಣು ಮುಚ್ಚಾಲೆಯ ಕುಸ್ತಿ ನಡೆಸಿದವು. ಹಲವು ವರ್ಷಗಳ ಹಿಂದೆ ನನ್ನ ತಂದೆ ನನ್ನನ್ನು ಕ್ಶೌರಿಕನ ಅಂಗಡಿಗೆ ಒಯ್ದಿದ್ದ. ನಾನು ದೊಡ್ಡ ಮನುಷ್ಯನಾಗಲು ಸಹಯಕವಾಗು ವಂತೆ, ಜುಟ್ಟಿನ ಬದಲು ಕ್ರಾಪು ಬಂದಿತ್ತು. ಈಗ ಇನ್ನೊಂದು ವಾತಾವರಣದಲ್ಲಿ, ಅಮೀರ್ ನನ್ನನ್ನು ಕರೆದುಕೊಂಡು ಬಂದಿದ್ದಾನೆ. ಇನ್ನು ಮುಂದೆ ಏನಾಗುವುದು ?

ನಿಲುವು ಗನ್ನಡಿಯಲ್ಲಿ ಮುಖ ನೋಡುತ್ತಾ ನನಗೆ ನಗು ಬಂತು.

ಆಲ್ಲಿಂದ ಹೊರಬಿದ್ದಾಗ, ಅಮೀರ್ ನನ್ನ ಸೌಂದರ್ಯದ ಬಗ್ಗೆ ಗೇಲಿಮಾಡುತ್ತಿದ್ದ.

ನೋಡು ಶೇಖರ್ , ಮೊನ್ನೆ ದಿವಸ ನಾನು ಕ್ಷೌರ ಮಾಡಿದ ಆ ಹುಡುಗಿ ಇದ್ಲು ನೋಡು, ಅವಳೇನಾದರು ನಿನ್ನ ನೋಡಿದ್ದಿದ್ದರೆ, ಹಣದ ಚೀಲ ನಿನ್ನ ಪಾದಗಳಿಗೊಪ್ಪಿಸಿ, ತಾನು ಚರಣದಾಸಿಯಾಗಿ ನಿನ್ನ ಹಿಂದೇನೆ ಬರ್ತಿದ್ಲು

"ವಾಹವ್ಹಾ, ಅಷ್ಟು ಕುರೂಪೀನೆ ಅವಳು?"‍

"ಛೆ!ಛೆ!ಅಷ್ಟು ದುಡ್ಡಿರೋರು ಕುರೂಪವಾಗಿರ್ತಾರ?"

"ಯಾಕೆ? ನೀನು ನೋಡ್ಲಿಲ್ವೇನು?"

"ಒಳೇದ್ಹೇಳ್ದೆ. ನಾನು ಅವಳ ರೂಪ ನೋಡ್ಲೊ? ಆ ಚೀಲ ಎತ್ಕೊಂಡು ಬರ್ಲೋ ?...ಅವಳ್ನ ನೋಡ್ತಾ ನಿಂತು ಕೆಲಸ ನಿಧಾನ ಮಾಡಿದ್ರೆ, ಇಷ್ಟೊತ್ತಿಗೆ ಲಾಕಪ್ಪಿನಲ್ಲಿ ಇರ್ತಿದ್ದೆ!"

ಅಲ್ಲಿಂದ ಆತನನ್ನು ಗುಜರಿಗೆ ಕರೆದೊಯ್ದ. ನಾವು ಹೋಗು ತ್ತಿದ್ದುದು ಗುಜರಿಗೆ ಎಂದು ತಿಳಿದಾಗ, ಆತನ ಮನಸ್ಸಿನಲ್ಲಿದ್ದುದು ನನಗೆ ಸ್ಪಷ್ಟವಾಯಿತು.

"ಶೇಖರ್, ನನ್ನಂಥ ಕರೀ ಕೊರಮನಿಗೆ ಏನಿದ್ರೂ ನಡೆ ಯುತ್ತೆ"

"ನಾನೇನು ಬಿಳೇ ಜಿರಳೆಯೇನು?"

"ಹಾಗಲ್ಲಪ್ಪಾ, ಎಣ್ಣೆಗೆಂಪು ಮೈ ನಿಂದು.....ಬಣ್ಣ ಹೊಂದಿಕೆಯಾಗ್ಬೇಕು."

ನನಗೆ ಬಣ್ಣಗಳ ತಾರತಮ್ಯದ ಅನುಭವವಿರಲಿಲ್ಲ. ಆತನಿಗೂ ಇರಲಿಲ್ಲ. ಅವೆಲ್ಲಕ್ಕಿಂತ ಮುಖ್ಯವಾಗಿ ಆ ಅಂಗಡಿಯಲ್ಲಿದ್ದುದು, ನನಗೆ ಸರಿಹೋಗುವಂತಹ ಒಂದೇ ಸೂಟು. ಅದರ ಬಣ್ಣ ಹಸುರು- ಸ್ವಲ್ಪ ಮಸುಕಾಗಿತ್ತು ಅಷ್ಟೆ. ಅದನ್ನು ಕೊಳ್ಳುವ ಕೆಲಸವನ್ನು ಬಲು ಚೌಕಾಶಿಯಿಂದ ಅಮೀರ್ ಮಾಡಿದ. ನನ್ನ ಹಸುರು ನೋಟು ಅಲ್ಲಿ ಚಿಲ್ಲರೆಯಾಯಿತು. ಹತ್ತು ರೂಪಾಯಿ ಕೊಟ್ಟು, ಉಳಿದು ದನ್ನು ನನ್ನ ಕೈಯಲ್ಲೆ ಅಮೀರ್ ಇರಿಸಿದ.

"ಜೋಪಾನವಾಗಿಟ್ಕೋಪ್ಪಾ, ಶೇಖರ್.ನಿನ್ನ ಹಣ. ನಿದ್ದೆ ಗಿದ್ದೆ ಹೋದೆ ಅಂತಂದ್ರೆ ನಾನೇ ಲಪ್ಟಾಯಿಸ್ಬಿಟ್ಟೇನು!"

ಅಂತಹ ನಗೆ ಮಾತು ನನಗೆ ಅಹ್ಲಾದಕರವಾಗಿತ್ತು. ಮನುಷ್ಯ ಜೀವದ ಲಘುವಾದ ಒಳ್ಳೆಯದಾದ ಅಂತಹ ಹೃದಯ ನನ್ನ ಕತ್ತ ಲೆಯ ಪಾಲಿಗೆ ಬೆಳುದಿಂಗಳ ಚಂದ್ರನಾಗಿತ್ತು.

ಹಾದಿಯಲ್ಲಿ ನನಗಾಗಿ ಒಂದು ಷರಟು ಕೊಂಡುದಾಯಿತು.

"ಇವತ್ನಿಂದ ನಾವಿಬ್ಬರೂ ಇರೋದಿಕ್ಕೆ ಒಂದು ರೂಮು ಗೊತ್ಮಾಡಿದೀನಿ. ಈಗ ಅಲ್ಲಿರೋದು ಒಬ್ಬ ಮುದುಕ ಮತ್ತು ಅವನ ಮಗಳು. ನೀನು ಆಗೊಲ್ಲಾ ಅನ್ಬಾರ್ರ್ದು. ನಾವಿಬ್ಬರೂ ಇನ್ಮೇಲಿಂದ ಒಂದೇ ಕಡೆ ಇರೋಣ."

ಏನು ಹೇಳಬೇಕೊ ನನಗೆ ತೋಚಲಿಲ್ಲ.

"ನೋಡು ಶೇಖರ್, ನೀನು ನನ್ನ ಜೊತೇಲಿ ಜೇಬುಗಳ್ಳ ಆಗಬೇಕು ಅಂತ ಇದರ ಅರ್ಥವಲ್ಲ. ಹಮಾಲಿ ಕೆಲಸವೇ ನಿನಗೆ ಇಷ್ಟವಾದರೆ ಅದನ್ನೇ ಮಾಡು. ಉಳಿದ ಹೊತ್ತು ಜೊತೇಲಿ ಇರೋದು ಅಷ್ಟೆ."

ನಾನು ಆ ಸೂಚನೆಯನ್ನು ವಿರೋಧಿಸಲಿಲ್ಲ. ತಲೆಯ ಮೇ ಲೊಂದು ಸೂರು ಇಲ್ಲದೇ ಇದ್ದ ಅನಾಥನಾದ ನಾನು, ಅಮೀರನ ಆ ಹೊಸ ಬಂಧುಗಳಲ್ಲಿಗೆ ಹೋದೆ. ಮುದುಕ ಗೂರಲು ರೋಗದಿಂದ ನರಳುತ್ತಿದ್ದ. ಆ ಕೆಮ್ಮು ಅಸಹನೀಯವಾಗಿತ್ತು. ತಂದೆಯ ನೆನಪಾಗು ತ್ತಿತ್ತು ನನಗೆ. ಆ ಹುಡುಗಿಗೆ ನನ್ನಷ್ಟೆ ವಯಸ್ಸಾಗಿರಬೇಕು. ಆದರೂ ಹಿರಿತನದಿಂದ ನನ್ನನ್ನು "ತಮ್ಮಾ" ಎಂದು ಅವಳು ಸಂಬೋಧಿಸು ತ್ತಿದ್ದಳು. ಅಮೀರನನ್ನು ಮಾತ್ರ "ಅಣ್ಣಾ"ಎನ್ನುತ್ತಿರಲಿಲ್ಲ. ಈ ಸೋದರಿ ವಾತ್ಸಲ್ಯ ನನಗೆ ಹೊಸದಾಗಿತ್ತು. ಆದರೆ ಅಮೀರನಿಗೆ ಮೀಸಲಾಗಿದ್ದ ಆ ವಿಶೇಷ ವಾತ್ಸಲ್ಯವನ್ನು ಕಂಡಾಗ ನನ್ನ ಹೃದಯದಲ್ಲಿ ಕಸಿವಿಸಿಯಾಗುತ್ತಿತ್ತು.ಆಗ ನನ್ನನ್ನು ಕಂಡು ನನಗೇ ನಾಚಿಕೆ ಎನಿಸುತ್ತಿತ್ತು.

ಆ ಹೊಸ ವಾತಾವರಣಕ್ಕೆ ನಾನು ಸುಲಭವಾಗಿ ಅಂಟಿಕೊಂಡೆ. ಸೂಟು ಧರಿಸಿದ ಮೊದಲ ದಿನ ಮೆಚ್ಚುಗೆ ಸೂಚಿಸಿ ಕೈ ತಟ್ಟಿ ಕುಣಿದ ಮೊದಲ ವ್ಯಕ್ತಿ ಆ ಹುಡುಗಿ.ಆಕೆ ನನ್ನ ಎಡಗೈ ಹಿಡಿದು ಬಲವಾಗಿ ಕುಲುಕಿ,"ನೀನು ಅಮೀರ್ ಗಿಂತ ಚೆನ್ನಾಗಿದ್ದೀಯಾ!" ಎಂದಳು.

ಅಮೀರ್ ನಗುತ್ತಾ, " ಹುಷಾರಿ ಶೇಖರ್. ಈಕೆ ಮಹಾ

ಘಾಟಿ. ಏನೋ ಹಂಚಿಕೆ ಹಾಕ್ತಿದಾಳೆ, ಎಂದ.

ನನ್ನ ಮುಖ ಕೆಂಪಗಾಯಿತು.

"ಆ ಮಗೂನ ಲೇವಡಿ ಮಾಡ್ತೀಯಲ್ಲಾ. ನಾಚಿಕೆಯಾಗ ಬೇಕು ನಿಂಗೆ," ಎಂದು ಆ ಹುಡುಗಿ ಅಮೀರನಿಗೆ ಛೀಮಾರಿ ಹಾಕಿದಳು.

ಹಾಗಾದರೆ ನಾನು ಅವಳ ದೃಷ್ಟಿಯಲ್ಲಿ ಮಗುವಾಗಿದ್ದೆ!

ನನ್ನ ಮುಖ ಮತ್ತಷ್ಟು ಕೆಂಪಗಾಯಿತು.

ನನ್ನ ಸಂಪಾದನೆಯ ಪುಡಿಕಾಸನ್ನು ಆ ಅತ್ತಿಗೆಯ ಕೈಗೆ ತಂದೊ ಪ್ಪಿಸುತ್ತಿದ್ದೆ -ಹಿಂದೆ ನನ್ನ ತಂದೆ, ಸಂಪಾದನೆಯನ್ನೆಲ್ಲಾ ಅಜ್ಜಿಗೆ ತಂದೊಪ್ಪಿಸುತ್ತಿದ್ದ ಹಾಗೆ. ಅವರು ಯಾವ ಜಾತಿಯೊ ಯಾವ ಮತವೊ ನಾನು ಕೇಳಲಿಲ್ಲ. ಅವರು ಮಾನವರಾಗಿದ್ದರು-ಹೃದಯ ಗಳಿದ್ದ ಮಾನವರಾಗಿದ್ದರು. ಅವರಲ್ಲಿ 'ವಿದ್ಯೆ' ಇರಲಿಲ್ಲ. 'ನಾಗರಿ ಕತೆ' ,'ಸಂಸ್ಕಾರ' ವಿರಲಿಲ್ಲ. ಆದರೆ ಮಾನವೀಯ ಹೃದಯಗಳಿ ದ್ದುವು.ಅವರು ಯಾರೆಂದು, ಆ ಹುಡುಗಿಯ ಗತಜೀವನ ಎಂಥ ದೆಂದು, ನಾನು ಕೇಳಲಿಲ್ಲ.ಅಮೀರ್ ಅವಳನ್ನು ಪ್ರೀತಿಸುತ್ತಿದ್ದ. ಅವಳ ತಂದೆಯನ್ನೂ ಕೂಡ. ಹಗಲು ಹೊತ್ತಿನಲ್ಲೂ ದೀಪ ಉರಿಸ ಬೇಕಾದಷ್ಟು ಕತ್ತಲು ತುಂಬಿದ್ದ ಒಂದೇ ಕೊಠಡಿ-ಮೂರನೆಯ ಮಹಡಿಯ ಮೇಲೆ.ಅದರ ನಡುವೆ, ರಾತ್ರೆ ಹೊತ್ತು ಸೀರೆಯನ್ನು ಅಡ್ಡವಾಗಿ ಕಟ್ಟ ಎರಡು ವಿಭಾಗಗಳಾಗಿ ಮಾಡುತ್ತಿದ್ದರು. ಒಂದೆಡೆ ಅಮೀರ್ ಮತ್ತು ಆಕೆ--ಶೀಲಾ. ಇನ್ನೊಂದೆಡೆ ಶೀಲಳ ತಂದೆ ಮತ್ತು ನಾನು.

ನನಗರಿಯದಂತೆಯೆ ನಾನು ಶೇಖರನ ವೃತ್ತಿಬಾಂಧವನಾದೆ. ಆತ ಧಾಳಿಮಾಡಿದ ಜಾಗದ ಸಮಾಪದಲ್ಲೆ ನಾನಿರುತ್ತಿದ್ದೆ. ಕೈಗೆ ವಸ್ತು ಬಂದಾಗ ಅದನ್ನು ನನಗೊಪ್ಪಿಸಿ ಅವನು ಅಲ್ಲೆ ನಿಂತಿರುತ್ತಿದ್ದ. ನಾನು ಸುರಕ್ಷಿತ ಸ್ಥಳಕ್ಕೆ ವಸ್ತುವಿನೊಡನೆ ಹೊರಟುಹೋಗುತ್ತಿದ್ದೆ.

...ಅಮೀರನೊಡನೆ ನಾನು ಲಾಕಪ್ಪಿನ ಸವಿ ನೋಡಿದೆ ಎಂದರೆ

ನಿಮಗೆ ಆಶ್ಚರ್ಯವಾಗಲಾರದು. ಆದರೆ ನಾವು ಕಳ್ಳರಾಗಿ ಅಲ್ಲಿಗೆ ಹೋಗಲಿಲ್ಲ ; ರಾಜ ಅತಿಥಿಗಳಾಗಿ ದೇಶಪ್ರೇಮಿಗಳಾಗಿ ಹೋದೆವು ; ---ಎಂದರೆ ನಿಮಗೆ ಆಶ್ಚರ್ಯವಾದೀತು.

ಅದು ನಡೆದುದು ಹೀಗೆ.

ಚೌಪಾಟಿಯಲ್ಲಿ ಆ ದಿನ ಸಂಜೆ ಗಾಂಧಿ ಸಭೆ ಜರುಗಿತು. ಯಾರೋ ವೃದ್ಧರಾದ ಮುಖಂಡರೊಬ್ಬರು, ಆವೇಶಪೂರಿತವಾದ ಭಾಷಣ ಮಾಡಿದರು. ಉಪ್ಪಿನ ಸತ್ಯಾಗ್ರಹ, ಉಪ್ಪು ತಯಾರಿಸಿ ಸರ್ಕಾ ರದ ಕಾನೂನು ಕಟ್ಟಳೆಗಳನ್ನು ಮುರಿಯುವ ಸತ್ಯಾಗ್ರಹ, ಯಶಸ್ವಿ ಯಾಗಬೇಕೆಂದು ಕರೆಕೊಟ್ಟರು. ಸಭೆಯಾದ ಮೇಲೆ ಮೆರವಣಿಗೆ ಹೊರಟಿತು. ದೊರಗು ದೊರಗಾದ ಬಿಳಿಯ ಬಟ್ಟೆಯುಟ್ಟು ಆ ಜನ ತಲೆಯ ಮೇಲೆ ಬಿಳಿಯ ಟೋಪಿ ಧರಿಸಿದ್ದರು. ಏನಾದರೂ ಗೊಂದಲ ವಾಗುವಲ್ಲೆಲ್ಲಾ ಹಾಜರಿರುವುದು ಆಮೀರನ ಅಭ್ಯಾಸ. ನಾವಿಬ್ಬರೂ ಅಲ್ಲಿದ್ದೆವು. ಆಮೀರ್ ಭಾಷಣಕ್ಕೆ ಕಿವಿಗೊಡುತ್ತಿರಲಿಲ್ಲ. ಭಾಷಣ ಕೇಳುತ್ತಾ ಗುಂಪುಗುಂಪಾಗಿ ದೂರದೂರ ನಿಂತಿದ್ದವರಲ್ಲಿ ಕೆಲವರ ಜೇಬು ಖಾಲಿಮಾಡುವ ಕಾರ್ಯದಲ್ಲಿ ಆತ ನಿರತನಾಗಿರುತ್ತಿದ್ದ. ನಾನು ಭಾಷಣ ಕೇಳುತ್ತಿದ್ದೆ. ಆ ಮಾತುಗಳೆಲ್ಲವೂ ನನಗೆ ಅರ್ಥ ವಾಗುತ್ತಿರಲಿಲ್ಲ. ಆದರೂ ಕಿವಿಗೊಟ್ಟು ಕೇಳಬೇಕು ಎನ್ನಿಸುತ್ತಿತ್ತು. ಸ್ವಾತಂತ್ರ್ಯ---ದಾಸ್ಯ, ಸಾಮ್ರಾಜ್ಯಶಾಹಿ---ಕಾಂಗ್ರೆಸ್ಸು, ಈ ಮಾತು ಗಳೆಲ್ಲಾ ಪದೇಪದೇ ನನ್ನೆದುರು ಹಾರಾಡುತ್ತಿದ್ದುವು.

ಆಮೀರ್ ನನ್ನೆಡೆಗೆ ಬಂದು ಭುಜ ಕುಲುಕಿ ನಕ್ಕು ನುಡಿದ.

"ಒಂದು ಟೋಪಿ ತಂದ್ಕೊಡ್ಲೇನು ? ಲೀಡರ್ ಆಗ್ಬುಡು. ಒಳ್ಗೆ ಕರ್ಕೋಂಡ್ಹೋಗಿ ರೊಟ್ಟಿ ಹಾಕ್ತಾರೆ. ಹಿಂದೆ ಕಳ್ಳತನ ಮಾಡಿ ಸಿಕ್ಹಾಕ್ಕೊಂಡ್ರೆ ಮಾತ್ರ ಜೈಲು ಸಿಕ್ತಿತ್ತು. ಈಗ ಜೈ ಜೈ ಎಂದರೂ ಜೈಲಿಗೆ ಕಳಿಸ್ತಾರೆ."

ನಾನು ಉತ್ತರ ಕೊಡಬೇಕೆನ್ನುವಷ್ಟರಲ್ಲಿ ಆ ಘಟನೆ ನಡೆಯಿತು. ಸಭೆ ಮೆರವಣಿಗೆಯಾಗಿ ಮಾರ್ಪಾಟು ಹೊಂದಿ ಬೀದಿ ಸೇರುತ್ತಿತ್ತು. ಅರ್ಧಕ್ಕರ್ಧ ಜನ ದೂರವೇ ನಿಂತಿದ್ದರು.ಆಗ ಪೋಲೀಸರ ಧಾಳಿ ನಡೆಯಿತು. ಗುಂಡುಗಳು ಹಾರಲಿಲ್ಲ. ಆದರೆ ಲಾಟಿಗಳು ಸಪ್ಪಳ ಮಾಡಿದುವು. ತೋಳ ನುಗ್ಗಿದಾಗ ಚೆದರಿ ಹೋಗುವ ಕುರಿಯ ಹಿಂಡಿನಹಾಗೆ ಜನ ಚೆಲ್ಲಾಪಿಲ್ಲಿಯಾಗುತ್ತಿದ್ದರು. ಧೈರ್ಯವಾಗಿ ಅಲ್ಲೇ ನಿಂತವರ ತಲೆಯೊಡೆದು ರಕ್ತ ಸೋರುತ್ತಿತ್ತು. ಬಾವುಟ ಹಿಡಿದವ ನನ್ನೂ ಅವನ ಹಿಂದಿದ್ದ ಹತ್ತಾರು ಜನರನ್ನೂ ಅವರ ಪಾಡಿಗೆ ಬಿಟ್ಟು ಎಷ್ಟೋಜನ ಸತ್ಯಾಗ್ರಾಹಿಗಳು ಚೌಪಾಟಿಗೆ ವಾಪಸ್ಸು ಧಾವಿಸಿದರು. ಸರಕಾರದ ರಕ್ಷಕರಾಗಿದ್ದ ಪೋಲೀಸರು ಅವರನ್ನು ಬೆನ್ನಟ್ಟಿದರು. ನಾನು ಮತ್ತು ಅಮೀರ್ ಹಿಂದಕ್ಕೆ ಸರಿಯಬೇಕೆಂದು ಯೋಚಿಸುತ್ತಿರು ವಷ್ಟರಲ್ಲೇ ಲಾಟಿ ಬೀಸಿತ್ತು. ನಮ್ಮ ಮೇಲಲ್ಲ-ನಮ್ಮ ಬಳಿಗೆ ಬಂದಿದ್ದ ಹದಿನೆಂಟು ಇಪ್ಪತ್ತರ ಗುಜರಾತಿ ಯುವತಿಯೊಬ್ಬಳ ಮೇಲೆ, ಅವಳ ತಮ್ಮನಂತೆ ಕಾಣುತ್ತಿದ್ದ ಹುಡುಗನೊಬ್ಬನ ಮೇಲೆ. ಅವರು ನೆಲಕ್ಕು ರುಳಿದರು.ಆಕೆ, "ಅಯ್ಯೊ" ಎಂದಳು. ಆ ಹುಡುಗ "ಮಹಾತ್ಮ ಗಾಂಧಿಕಿ ಜೈ," ಎಂದು ಕೂಗಾಡಿದ. ನೋಡಿದರೆ, ಎಂದಿಗೂ ಬೀದಿಗೆ ಇಳಿಯದೇ ಇದ್ದಂತಹ ಕೋಮಲ ಕಾಯರ ಹಾಗೆ ಅವರು ತೋರುತ್ತಿದ್ದರು. ನಾನು ಅವರಿಗೆ ಶುಶ್ರೂಷೆ ಮಾಡಲೆಂದು ಬಾಗಿದೆ. ಆ ಗೊಂದಲದಲ್ಲಿ ಸಿಲುಕಲು ಇಷ್ಟವಿಲ್ಲದೇ ಇದ್ದರೂ ಅಮೀರ್, ತಾನೂ ನನಗೆ ನೆರವಾದ. ಕ್ಷಣಾರ್ಧದಲ್ಲಿ ಆ ಇಬ್ಬರೊಡನೆ ನಮ್ಮನ್ನೂ ಬಂಧಿಸಿದ್ದರು.

ಲಾಕಪ್ಪಿನಲ್ಲಿ ಹಲವಾರು ಸತ್ಯಾಗ್ರಹಿಗಳ ಜತೆಯಲ್ಲಿ ನಾವು ಒಂದು ದಿನ ಕಳೆದವು. ಅಮೀರ್ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದ. ಪರಿಸ್ಥಿತಿ ವಿಚಿತ್ರವಾಗಿಯೇ ಇತ್ತು. ಸೂಟು ಧರಿಸಿದ್ದ ನಾವು ಖಾದಿ ಧಾರಿಗಳ ಜತೆಯಲ್ಲಿದ್ದೆವು. ಜೇಬುಗಳ್ಳರಾದ ನಾವು ಸತ್ಯಾಗ್ರಹಿಗಳ ಸಂಗಾತಿಗಳಾಗಿದ್ದೆವು. ಹಿಂದೆ ನನಗೆ ಲಾಕಪ್ಪಿನ ಅನುಭವವಾದಾಗ ನನ್ನ ಕೈಲಿದ್ದ ಹಣವನ್ನೆಲ್ಲಾ ಪೋಲೀಸ್ ಅಧಿಕಾರಿ ಪಡೆದಿದ್ದ. ಆದರೆ ಈ ಸಾರಿ ನಾವು ಸತ್ಯಾಗ್ರಹಿಗಳ ಜತೆಯಲ್ಲಿದ್ದುದರಿಂದ ಅಮೀರನ ಆ ದಿನದ ಸಂಪಾದನೆ ಅವನ ಕೈ ಬಿಡಲಿಲ್ಲ.

೧೧೬
ವಿಮೋಚನೆ

ಮರುದಿನ ಸತ್ಯಾಗ್ರಹಿಗಳನ್ನು ಸೆರೆಮನೆಗೆ ಒಯ್ಬರು. ನಮ್ಮನ್ನು
ಬಿಟ್ಟುಬಿಟ್ಟರು. ಪೋಲೀಸ್ ಅಧಿಕಾರಿಯ ದೃಷ್ಟಿಯಲ್ಲಿ ನಾವಿಬ್ಬರು
ಸಂಭಾವಿತರ ಹಾಗೆ ತೋರಿದೆವು. ಈ ಚಳವಳಿಗೂ ನಮಗೂ
ಸಂಬಂಧವಿಲ್ಲವೆಂದು ಇಂಗ್ಲಿಷಿನಲ್ಲಿ ನಾನು ವಿವರಿಸಿದ ಮೇಲೆ, ನಮ್ಮ
ಸ್ವಾತಂತ್ರ್ಯ ನಮಗೆ ದೊರೆಯಿತು.

ಕೊಠಡಿಗೆ ಬಂದ ಮೇಲೂ ಅಮೀರ, ಮೇಲಿನ ಕೆಳಗಿನ ಮಹ
ಡಿಯವರು ಗಾಬರಿಯಾಗುವ ಹಾಗೆ ಸಂತೋಷದಿಂದ ಕೂಗಾಡಿದ.

" ನಾವು ಲಾಕಪ್ಪಿನಲ್ಲಿ ಇದ್ದೆವು " ಎಂದು ನನ್ನ ಅತ್ತಿಗೆಗೆ
ಅವನು ಹೇಳಿದಾಗ, ಆಕೆ ಗಾಬರಿಯಾಗಿ ಅವನನ್ನು ಮೇಲಿನಿಂದ
ಕೆಳಗಿನವರೆಗೆ ಸೂಕ್ಷ್ಮವಾಗಿ ಪರೀಕ್ಷಿಸಿದಳು.

ಆದರೆ ಮುಂದೆ ಅವನು ವಿವರಿಸಿದ ಕತೆ ಕೇಳುತ್ತಾ ಅವಳೂ
ಬಿದ್ದು ಬಿದ್ದು ನಕ್ಕಳು. ಅದೊಳ್ಳೆಯ ತಮಾಷೆಯಾಗಿತ್ತು. ಜೇಬು
ಗಳ್ಳರಾದ ನಾವು, ದೇಶಪ್ರೇಮಿಗಳಾಗಿದ್ದೆವು. ದೇಶಪ್ರೇಮೀ ಜೇಬು
ಗಳ್ಳರಾಗಿದ್ದೆವು.

ಒಬ್ಬನೇ ಇದ್ದಾಗ ಮಾತ್ರ ಏನೇನೊ ವಿಚಾರಗಳು ನನ್ನನ್ನು
ಬಾಧಿಸುತ್ತಿದ್ದವು. ಪತ್ರಿಕೆ ಕೊಂಡುಕೊಂಡು ಓದುತ್ತಿದ್ದೆ. ದಿನ
ನಿತ್ಯದ ಗೋಳಿನ ಜೀವನಕ್ಕಿಂತ ಸ್ವಲ್ಪ ಭಿನ್ನವಾದುದು ಏನೋ
ನಡೆಯುತ್ತಿದ್ದಂತೆ ಭಾಸವಾಗುತ್ತಿತ್ತು. ವಾತಾವರಣದಲ್ಲಿ ಹೊಸದಾದು
ದ್ದೇನೊ ಸಂಚಾರ ಮಾಡುತ್ತಿತ್ತು. ನಮ್ಮನ್ನು ಆಳುತ್ತಿದ್ದವರು
ಬ್ರಿಟಿಷರು ನಿಜ. ಅವರು ಪರದೇಶೀಯರು. ನಮ್ಮನ್ನು ನಾಗರಿಕರಾಗಿ
ಮಾಡಲು ಅವರು ಬಂದಿರುವರೆಂಬುದು ಬರಿಯ ಬುರುಡೆ. ಅವರು
ಈ ದೇಶವನ್ನು ಬಿಟ್ಟು ಹೋಗಬೇಕು, ಎನ್ನುವುದರಲ್ಲಿ ಅರ್ಥವಿತ್ತು.

ಹಾಗೇಂದು ನಾನು ಅಮೀರ್ ಗೆ ವಿವರಿಸಿ ಹೇಳುತ್ತಿದ್ದೆ. ಆತನಿಗೆ
ಆ ವಿಷಯ ಸ್ಪಷ್ಟವಾಗುತ್ತಿತ್ತು. ಆದರೆ ಸತ್ಯಾಗ್ರಹಿಗಳ ಹೆಸರೆತ್ತಿದಾಗ
ಮಾತ್ರ ಅವನು ನಗುತ್ತಿದ್ದ.

" ನಿನಗೆ ಹುಚ್ಚು ಶೇಖರ್. ಬಡಕಲು ನಾಯಿ ಬೌ ಎಂದರೆ.

ವಿಮೋಚನೆ

ಸಾಕು, ಗಾವುದ ದೂರ ಓಡುವ ವೀರರು ಇವರು. ಬಯನೆಟ್- ಮಿಲಿಟರಿ ಮುಂದೆ ಇವರು ಒಂದು ನಿಮಿಷವಾದರೂ ನಿಲ್ಲೋದು ಸಾಧ್ಯವೆ ?"

ಆದರೂ ಸತ್ಯಾಗ್ರಹಿಗಳ ಹೋರಾಟ ನೈತಿಕ ವಿಜಯ ಗಳಿಸು ತ್ತಿತ್ತು. ಜನತೆಯ ಮೇಲೆ ಆಗುತ್ತಿದ್ದ ಪರಿಣಾಮವನ್ನು ದುರ್ಲಕ್ಷಿಸು ವುದು ಸಾಧ್ಯವೇ ಇರಲಿಲ್ಲ.

ನಾನು ಮತ್ತೂ ಯೋಚಿಸುತ್ತಿದ್ದೆ. ಈಗ ಇರುವ ಸಮಾಜ ಇಂಥಾದ್ದು. ಇದಕ್ಕೆಲ್ಲಾ ಬ್ರಿಟಿಷರೆ ಕಾರಣ ಎನ್ನೋಣವೆ? ದೊಡ್ಡ ಮನುಷ್ಯ ರಾಮಸ್ವಾಮಿಯವರು ನನಗೆ ಎರಡೇ ರೂಪಾಯಿ ಕೊಟ್ಟುದಕ್ಕೆ, ನನಗೆ ವಿದ್ಯಾಭ್ಯಾಸ ದೊರೆಯದೇ ಹೋದುದಕ್ಕೆ, ನಾನೀಗ ಜೇಬುಗಳ್ಳನಾದುದಕ್ಕೆ, ಬ್ರಿಟಿಷರ ಆಳ್ವಿಕೆ ಕಾರಣವೆ? ಹೌದೆನ್ನಲು ಸಾಕಷ್ಟು ಸಮರ್ಥನೆ ನನ್ನಲ್ಲಿ ಇರಲ್ಲಿಲ್ಲ. ಸ್ವಾತಂತ್ರ್ಯದ ಹೆಸರಲ್ಲಿ ನಡೆದ ಹೋರಾಟವನ್ನು ನಾನು ವಿರೋಧಿಸುವುದು ಸಾಧ್ಯವೇ ಇರಲಿಲ್ಲ. ಆದರೆ ನಾನೂ ಕೂಡ ಅದಕ್ಕೆ ಧುಮುಕುವಷ್ಟರ ಮಟ್ಟಿಗೆ ನನ್ನನ್ನು ಅದು ಆಕರ್ಷಿಸಲಿಲ್ಲ.

ಆ ನಡುವೆ ನಾನೊಮ್ಮೆ ಕಾಹಿಲೆ ಬಿದ್ದು ಹಾಸಿಗೆ ಹಿಡಿದೆ. ನನ್ನ ಜೀವಮಾನದಲ್ಲಿ ನಾನು ಹಾಸಿಗೆ ಹಿಡಿಯುವಂತಾದುದು ಅದೇ ಮೊದಲ ಬಾರಿ ಮತ್ತು ಅದೇ ಕೊನೆಯ ಬಾರಿ. ಅದು ವಿಷನು ಜ್ವರ. ಅಮೀರ್ ಅದೇನು ಏರ್ಪಾಟು ಮಾಡಿದನೋ ನನಗೆ ತಿಳಿಯದು. ನನ್ನನ್ನು ಆತ ಆಸ್ಪತ್ರೆ ಸೇರಿಸಿದ. ಹದಿನಾಲ್ಕನೆಯ ದಿವಸದಿಂದ ನಾನು ಗುಣಮುಖನಾಗುತ್ತ ಬಂದೆ. ಅತ್ತಿಗೆ ಶೀಲ ಪ್ರತಿ ದಿನವೂ ಮಧ್ಯಾಹ್ನ ಬಂದು ಹೋಗುತ್ತಿದ್ದಳು. ಸಂಜೆ ಅಮೀರ್ ಬರುತ್ತಿದ್ದ. ಯಾವುದೇ ಒಂದು ದಿನ ಅತ್ತಿಗೆ ಬರುವುದು ತಡವಾದರೆ, ನನಗೆ ಬಲು ದುಃಖವಾಗುತ್ತಿತ್ತು. ಬಲು ಪ್ರಯಾಸದಿಂದ ನೋವನ್ನು ಹತ್ತಿಕ್ಕುತ್ತಿದ್ದೆ. ನನ್ನೋಡನೆ ಸಲಿಗೆಯಿಂದಿರುತ್ತಿದ್ದ ನರ್ಸ್, ಬಾಡಿದ ನನ್ನ ಮುಖವನ್ನು ನೋಡಿದ ಒಡನೆ,"ಏನು ನಿಮ್ಮತ್ತಿಗೆ ಬರ ಲಿಲ್ಲವಾ?" ಎಂದು ಕೇಳುತ್ತಿದ್ದಳು.

ನಾನು ಗುಣಮುಖನಾಗಿ ಹೊರಬಂದೆ. ಅಜ್ಜಿಯ ನೆನೆಪು

ನನ್ನನ್ನು ಕಾಡುತ್ತಿತ್ತು. ಒಂದು ದಿನ ಸಂಜೆಯೆಲ್ಲಾ ಕುಳಿತು ದೀರ್ಘ ವಾದ ಒಂದು ಕಾಗದವನ್ನು ಅಜ್ಜಿಗೆ ಬರೆದೆ. ಅರ್ಧ ಸುಳ್ಳು, ಅರ್ಧ ಸತ್ಯ. ನನ್ನ ಬಗ್ಗೆ ಅಜ್ಜಿ ಕಾತರಗೊಳ್ಳಬೇಕೆಂಬ ಆಸೆಯಿಂದ, ನನ ಗಾದ ಕಾಹಿಲೆಯನ್ನು ಉಪ್ಪು ಖಾರ ಹಚ್ಚಿ ವಿವರಿಸಿದೆ. ಆದರೆ ಮರು ಕ್ಷಣವೇ, ಅಜ್ಜಿ ಗಾಬರಿಯಾಗಬಹುದೆಂದು ಹೆದರಿ, "ಈಗ ಗುಣ ವಾಗಿದೆ. ಪೂರ್ತಿ ಗುಣವಾಗಿದೆ. ಈಗ ಮೊದಲಿಗಿಂತ ಚೆನ್ನಾಗಿದ್ದೀನಿ" ಎಂದು ಬರೆದೆ. ಆ ಕಾಗದದ ವರದಿ ಪ್ರಕಾರ, ನನಗೆ ಉದ್ಯೋಗ ವಿತ್ತು __ ತಕ್ಕ ಮಟ್ಟಿಗೆ ಸಂಬಳ ಬರುವ ಉದ್ಯೋಗ. ಊರಿಗೆ ವಾಪಸ್ಸು ಬರುವ ಆಸೆ ಆಗುತ್ತಿತ್ತು. ಆದರೆ ಸಾಕಷ್ಟು ಸಂಪಾದನೆ ಮಾಡದೆ ಹಿಂತಿರುಗುವುದು ಹೇಗೆ? ಕಾಗದದ ಮುಕ್ತಾಯದಲ್ಲಿ ಹೃತ್ಪೂರ್ವಕವಾಗಿ ಹೃದಯ ತೋಡಿಕೊಳ್ಳುತ್ತಾ ಬರೆದೆ.

"ಅಜ್ಜೀ, ಆಗಾಗ್ಗೆ ನಿಮ್ಮ ನೆನಪಾಗ್ತದೆ. ನಿಮ್ಮನ್ನು ನೋಡ ಬೇಕೆಂಬ ಆಸೆ. ನೀವು ಮಾಡಿದ ಚಕ್ಕುಲಿ ಕೋಡುಬಳೆ ಈ ಹಾಳು ಬೊಂಬಾಯಿಯಲ್ಲಿ ಎಲ್ಲಿ ಸಿಗಬೇಕು? ಈ ಅತ್ತಿಗೆ ಒಳ್ಳೆಯವಳು. ಆದರೂ ನಾನು ಬೆಳೆದು ದೊಡ್ಡವನಾದ ಊರು ನನ್ನನ್ನು ಕರೆಯು ತ್ತಿದೆ. ಇನ್ನೂ ಕೆಲವು ತಿಂಗಳು. ಆಮೇಲೆ ಬಂದೇ ಬಿಡ್ತೇನೆ ಅಜ್ಜಿ, ಊರಿಗೆ ಬಂದೇ ಬಿಡ್ತೇನೆ."

ಆಮೀರ್ ಕೇಳಿದ:

" ಅಜ್ಜಿಗೆ ಬರೀತಾ ಇದ್ದೀಯೇನೋ"

"ಹೂನಪ್ಪ".

ಆತ ಸಿಗರೇಟು ಹಚ್ಚುತ್ತಾ ಹೊಗೆಯ ಮುಸುಕಿನ ಹಿಂದೆ ಮುಖಮರೆಸಿಕೊಂಡು ಕುಳಿತ. ಆದರೆ ನನಗೆ ಗೊತ್ತಿತ್ತು. ಹಳೆಯ ನೆನಪು ಅವನನ್ನು ಬಾಧಿಸುತ್ತಿರಬೇಕು. ಊರೆಲ್ಲಾ ಬಿಟ್ಟು ಬಂದಿದ್ದ ವಯಸ್ಸಾದ ತಾಯಿಯ ದೊಡ್ಡಣ್ಣನ ಮತ್ತು ಅಕ್ಕತಂಗಿಯರ ನೆನಪು ಅವರಲ್ಲಿ ಯಾರು ಯಾರು ಗಂಡದಿರ ಮನೆಗೆ ಹೋದರೊ. ಅವನು ಎಂದೂ ಕಾಗದ ಬರೆದವನೆಲ್ಲ. ಅವನ ಮನೆಯ ವಿಳಾಸ ಅವನಿಗೆ ಸರಿಯಾಗಿ ನೆನಪಿರಲಿಲ್ಲ.ನೆನಪಿದ್ದಂತೆ ಬರೆಯುವ ಇಷ್ಟವೊ ಅವನಿಗಿರಲಿಲ್ಲ.

ಅಮೀರನ ಭಾವನೆಗಳನ್ನು ತಿಳಿದುಕೊಂಡ ಶೀಲ ಅವನ ಬಳಿಗೆ ಬಂದಳು. ಅವನ ಕೊರಳಿನ ಸುತ್ತಲೂ ಕೈ ಹಾಕಿದಳು ಆ ಕ್ರಾಪಿನ ಮೇಲೆ ಮೂಗನ್ನಿರಿಸಿದಳು. "ಅಮೀರ್ ಅಮೀರ್", ಎಂದಳು.

ಊರಿನ ನೆನಪಾಗಿ ಆತ ತನ್ನನ್ನು ಎಲ್ಲಾದರೂ ಬಿಟ್ಟುಹೋಗ ಬಹುದೆಂಬ ಭೀತಿ ಅವಳನ್ನು ಕಾಡುತಿತ್ತೇನೊ. ಅಥವಾ ತನಗಿಂತ ಬೇರೆಯಾದ ಯಾವುದನ್ನು ಯಾರನ್ನೂ ಆತ ಪ್ರೀತಿಸಬಾರದೆಂಬ ಅಸೂಯೆ ಅವಳನ್ನು ಬಾಧಿಸುತಿತ್ತೇನೊ.

ಮೂಲೆಯಲ್ಲಿ ಕುಳಿತಿದ್ದ ಆಕೆಯ ತಂದೆ, ಇದ್ದೊಂದೆ ಪುಟ್ಟ ಕಿಟಕಿಯ ಮೂಲಕ ಹೊರಕ್ಕೆ ನೋಡುತ್ತಿದ್ದ. ನಾನು ಕ್ಷಣ ಕಾಲ ಮುಕ್ತಾಯಗೊಳಿಸಿದ ಕಾಗದದ ಮೇಲೆಯೇ ದೃಷ್ಟಿ ಬೀರಿದ್ದೆ.......... ತಲೆ ಎತ್ತಿ ನೋಡಿದಾಗ, ಶೀಲಳ ಮುಖ ಲಜ್ಜೆಯಿಂದ ಕೆಂಪಾಗಿತ್ತು. ಅಮೀರ್ ನಗುತಿದ್ದ. ನನಗೆ ನಾಚಿಕೆ ಎನಿಸಿತು.

"ನಾನು ಹೊರಕ್ಕೆ ಹೋಗ್ಬಿಟ್ಟು ಬರ್ತೀನಿ ಅಮೀರ್," ಎಂದೆ.

"ತಾಳು, ಶೀಲನೂ ಬರ್ತಾಳೆ. ಮೂವರೂ ಹೋಗಿ ಯಾವು ದಾದರೂ ಸಿನಿಮಾ ನೋಡ್ಕೊಂಡು ಬರೋಣ."

ನಾನು ಲಕೋಟಿ ಮೇಲೆ ವಿವರವಾಗಿ ಅಜ್ಜಿಯ ವಿಳಾಸ ಬರೆದೆ. ಕೆಳ ಮಗ್ಗುಲಲ್ಲಿ ನನ್ನ, ಅಂದರೆ ಅಮೀರನ ಕೊಠಡಿಯ, ವಿಳಾಸ ಬರೆದೆ. ಲಕೋಟಿಯನ್ನು ಮುಚ್ಚಿ ಅದರ ಮೇಲೆ ಬೆರಳಾಡಿಸುತ್ತಾ ಕುಳಿತೆ.

ಅಷ್ಟು ಹೊತ್ತಿಗೆ ಶೀಲ ಸಿದ್ದಳಾಗಿ ಬಂದಳು. ಅವಳುಟ್ಟಿದ್ದ ಗುಲಾಬಿ ವರ್ಣದ ಪತ್ತಳ ಮೋಹಕವಾಗಿತ್ತು. ಅಮೀರ್ ಮಾತ್ರ ಪಾಯಜಾಮ ತೊಟ್ಟು ಹಳೆಯದೊಂದು ಷರಟು ಹಾಕಿ ಹೊರಟಿದ್ದ. ಶೀಲ ವಿರೋಧಿಸಿದಳು. ನನಗೆ ದೂರು ಕೊಟ್ಟಳು

"ನೋಡು ಶೇಖರ್, ಎಂಥ ಕೊಳಕು ಬಟ್ಟೆ ಹಾಕ್ಕೊಂಡಿದಾನೆ. ನೀನ್ಸೊಲ್ಪ ಹೇಳಪ್ಪಾ ಅವನಿಗೆ. ಇಲ್ದೆಹೋದ್ರೆ ನಾನು ಬರೋದೇ ಇಲ್ಲ" ನಾನು ನಗುತ್ತಾ ಅಮೀರನ ಮುಖ ನೋಡಿದೆ.

"ಈ ಆಟವೆಲ್ಲಾ ಬಿಟ್ಟುಡು. ಸಿನಿಮಾ ಬೇಕಾಗಿದ್ರೆ ತೆಪ್ಪಗೆ ಬಾ.

ನೀನು ಚೆಂದವಾಗಿದ್ರೆ ಸಾಕು. ಅಲ್ವಾ ಶೇಖರ್?"

ಅವರ ಜಗಳ ನನಗೆ ಹೊಸದಾಗಿರಲಿಲ್ಲ. ಆದರೆ ಅಮೀರ್ ಎಂದೂ ಸೋತವನಲ್ಲ. ಅವನ ವ್ಯಕ್ತಿತ್ವವೇ ಅಂಥದು. ಕೊನೆಗೆ ಸೋಲನ್ನೋಪ್ಪಿಕೊಳ್ಳುತ್ತಿದ್ದವಳು ಶೀಲಳೇ. ಅದರಿಂದ ಅವಳಿಗೆ ಹೆಚ್ಚಿನ ಆಸಮಾಧಾನವೇನೂ ಆಗುತಿರಲಿಲ್ಲ. ಅಮೀರ್ ತನಗಾಗಿ ತುಂಬಿ ಕೊಡುತ್ತಿದ್ದ ಪ್ರೀತಿಯ ಬಟ್ಟಲು ಅವಳ ಪಾಲಿನ ಸ್ವರ್ಗವಾಗಿತ್ತು.

ಅಮೀರ್ ಆಜ್ಞೆ ಕೊಟ್ಟ ಮೇಲೆ ನಾನು ಸೂಟು ಧರಿಸಿದೆ. ಮೂವರೂ ಮನೆ ಬಿಟ್ಟು ಹೊರಟೆವು. ಅಂಚೆಯ ಮನೆಯವರೆಗೂ ನಡೆದು ಹೋಗಿ ಅವರಿಬ್ಬರ ಎದುರಲ್ಲಿ ಕಾಗದವನ್ನು ಅಜ್ಜಿಗೆ ಕಳಿಸಿ ಕೊಟ್ಟದಾಯಿತು. ಅಲ್ಲಿಂದ ನಾವು ಸಿನಿಮಾ ಮಂದಿರ ಸೇರಿದೆವು.

ಹಳೆಯ ನೆನಪುಗಳು ಚಲಚ್ಚಿತ್ರದ ಸುರುಳಿಗಳಂತೆ ಒಂದರ ಮೇಲೊಂದಾಗಿ ದೃಷ್ಟಿಯ ಮುಂದೆ ಹಾದು ಹೋಗುತ್ತವೆಂದು ಹೇಳುವು ದುಂಟು. ಹಲವು ವರ್ಷಗಳ ಮೇಲೆ ಈಗ ನನಗೆ ಹಾಗೆಯೇ ಆಗುತ್ತಿದೆ ತಬ್ಬಲಿಯಾಗಿ ಪ್ರಪಂಚ ಸಾಗರದಲ್ಲಿ ತೇಲಿ ಬಿಟ್ಟು ನನ್ನ ದೋಣಿ ಗಾಳಿ ಬೀಸಿದತ್ತ ಚಲಿಸಲಿಲ್ಲವೆ? ಚುಕ್ಕಾಣಿ ಹಿಡಿದು ನಾನು ಅಪೇಕ್ಷೆ ಪಟ್ಟ ಗುರಿಯತ್ತ ಅದನ್ನು ಒಯ್ಯುವುದು ಸಾಧ್ಯವಾಯಿತೆ?

ಆಮಾರನ ಸಹೋದ್ಯೋಗಿಯಾಗಿ ನಾನು, ಸಮಾಜ ಕಂಟಕ ನಾದೆ. ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಹಲವು ಕೆಲಸಗಳನ್ನು ಮಾಡಿದೆ. ಮುಚ್ಚಿಕೊಂಡ ಚಾಕು ನನ್ನ ಕೈಯಲ್ಲಿ ಚಿಣ್ಣನೆ ಚಿಗಿದು ಬಾಯಿ ತೆರೆಯುವುದನ್ನು ಕಲಿಯಿತು. ಅದನ್ನು ಅಪರಿಚಿತ ವ್ಯಕ್ತಿಯ ಕೊರಳಿಗೋ ಹೊಟ್ಟೆಗೋ ಗುರಿಯಿಟ್ಟು ಬೆದರಿಸುತ್ತ ಹಣ ಸಂಪಾದಿ ಸಲು ನಾನು ಕಲಿತೆ. ಪಿಸ್ತೂಲು ಹಿಡಿಯುವ ಆಧುನಿಕರು ನಾವಾಗಿರ ಲಿಲ್ಲ. ಕೊಲೆಯ ಮಾರ್ಗವಾಗಿಯೇ ಗುರಿಸೇರುವ ಪಾತಕಿಗಳು ನಾವಾಗಿರಲಿಲ್ಲ. ಒಂದು ಜೀವವನ್ನು ಕೊನೆಗಾಣಿಸುವ ಅಧಿಕಾರ ಇನ್ನೊಂದು ಜೀವಕ್ಕೆ ಇಲ್ಲ ಎನ್ನುವುದು ನನ್ನ ಅಭಿಪ್ರಾಯ,ಆಗಲೂ ಈಗಲೂ. ಬೇರೆ ಉದ್ಯೋಗ ನಮಗೆ ದೊರೆತಿದ್ದರೆ, ಸದ್ಗೃಹಸ್ಥರಾಗಿ ಬಾಳುವ ಅವಕಾಶ ನಮಗೆ ಇದ್ದಿದ್ದರೆ, ಈ ವೃತ್ತಿಗೆ ನಾವು ಕಟ್ಟು ಬೀಳುವ ಅವಶ್ಯತೆಯೇ ಇರಲಿಲ್ಲ...........

ಅಜ್ಜಿಯಿಂದೊಂದು ಕಾಗದ ಬಂತು----ನನ್ನದಕ್ಕೆ ಉತ್ತರ. ಆ ಮೇಲೆ ಇನ್ನೊಂದು ಬಂತು. ಎರಡು ತಿಂಗಳ ಮೇಲೆ ಮತ್ತೊಂದು. ಎಲ್ಲ ಕಾಗದಗಳಲ್ಲೂ ಇದ್ದ ಹಾಡು ಒಂದೇ.

"ಊರಿಗೆ ಬಾ ಚಂದ್ರು, ವಾಪಸ್ಸು ಬಾ. ನನಗೆ ಮೈ ಚೆನ್ನಾ ಗಿಲ್ಲ. ಬಾ, ತಪ್ಪದೆ ಬಾ"

ಅಜ್ಜಿಯಿಂದ ಕಾಗದ ಬಂದಾಗಲೆಲ್ಲ ನಾನು ಅಂತರ್ಮುಖಿ ಯಾಗುತ್ತಿದ್ದೆ. ನನಗೆ ಆತ್ತೀಯರಾಗಿದ್ದ ಆ ವ್ಯಕ್ತಿಗೆ ನಾನೇನು ಸುಖ ವನ್ನು ಕೊಟ್ಟಿದ್ದೆ ? ಏನು ಕೊಟ್ಟಿದ್ದೆ ?

ಒಮ್ಮೆ ಆಮೀರನಿಗೆ ಹೇಳಿ ಐವತ್ತು ರೂಪಾಯಿಗಳನ್ನು ಅಜ್ಜಿಗೆ ಕಳುಹಿಸಿಕೊಟ್ಟಿ.

"ಬೇಗನೆ ಬರ್ತೀನಿ ಅಜ್ಜಿ. ಏನೂ ಚಿಂತಿಸಬೇಡಿ ಔಷಧಿ ತಗೊಳ್ಳಿ. ಯಾವ ಯೋಚನೇನೂ ಮಾಡಬೇಡಿ. ನಾನು ಖಂಡಿತ ಬರ್ತೀನಿ" ಎಂದ ಬರೆದೆ.

ನನ್ನ ಮನಸ್ಸಿನ ಹೊಯ್ದಾಟಗಳನ್ನು ಆಮೀರ್ ಸೂಕ್ಷ್ಮವಾಗಿ ನಿರೀಕ್ಷಿಸುತ್ತಿದ್ದ. ಮೊದಮೊದಲು ಅವನು ಮೃದುವಾಗಿದ್ದ ಆದರೆ ಬರಬರುತ್ತ.......

"ಶೇಖರ್. ಮುಂದೇನಾದೀತು ಹೇಳೋದು ಸಾಧ್ಯವಾ? ನಾವು ಮುಂದೆ ಏನ್ಮಾಡಬೇಕೂಂತ ನಿನ್ನ ಯೋಚನೆ? ನಿನ್ನ ಮನಸ್ಸು ಬರೇ ಬೆಣ್ಣೆ ಆಂತ ನನಗೆ ಗೊತ್ತಿರಲಿಲ್ಲ. ಅಜ್ಜಿ ಅಜ್ಜಿ ಅಂತ ಬಡ ಕೊಳ್ಳೋದು ಎಲ್ಲಾದ್ರೂ ಉಂಟೆ? ಅದೂ ನಿನ್ನ ವಯಸ್ಸಿನಲ್ಲಿ? ಏನೋಪ್ಪ, ನೀನು ಹೀಗಾಗ್ತಿ ಅಂತ ತಿಳಿದಿರಲಿಲ್ಲ."

"ಈಗ ಏನಾಗಿದೆ ಆಮೀರ್?"

"ಆಗಿರೋದೇನು? ಅದು ನಾನು ಕೊಡಬೇಕಾದ ಉತ್ತರವೆ? ಉತ್ತರಿಸಬೇಕಾದವನು ನೀನು---ನಾನಲ್ಲ."

" ಹಾಗಂದ್ರೆ ?"

" ನೀನು ಬದಲಾಗಿದ್ದೀಯಾ ಅನ್ನೋದು ನಿನಗೆ ಗೊತ್ತೆ?"

" ಆಗಿರಬಹದು. ಅಳುಬುರಕ ಕೂಲಿಯಾಗಿದ್ದವನು ಚುರು ಕಾದ ಜೇಬುಗಳ್ಳನಾಗಿಲ್ವ? ಬದಲಾಗಿರಬಹುದು."

" ಅದಲ್ಲ, ನಿನ್ನ ಚುರುಕುತನ ಮಾಯವಾಗಿ ಅಳುಬುರಕತನ ಬರ್ತಾ ಇದೆ,ಗೊತ್ತಾ ?" ನಾನು ಮೌನವಾಗಿ ಅಮೀರನ ಮುಖವನ್ನೇ ನೋಡಿದೆ. ಇತ್ತೀಚೆಗೆ ಕೆಲವು ದಿನಗಳಿಂದ ನಾನು ಉತ್ಸಾಹಿಯಾಗಿರಲಿಲ್ಲ. ಕಾರ್ಯ ಕ್ರಮಗಳಲ್ಲಿ ಗೆಲುವಿನಿಂದ ಭಾಗವಹಿಸುತ್ತಿರಲಿಲ್ಲ. ಇದರಿಂದ ಅಮೀರ ನಿಗೆ ತೊಂದರೆಯಾಗುತ್ತಿತ್ತು. ಬೇಟೆಯನ್ನು ಹುಡುಕಿಕೊಂಡು ಅವನೊಬ್ಬನೇ ಹೋಗಬೇಕಾಗುತ್ತಿತ್ತು.

ಅಮೀರ್ ಮಾತು ಮುಂದುವರಿಸಿದ:

"ಶೇಖರ್, ಎಷ್ಟೋ ಸಾರಿ ಅಣ್ಣ ಅಂತ ನನ್ನ ಕರೆದಿದ್ದೀಯಾ. ಆ ದೃಷ್ಟಿಯಿಂದಲೇ ಅಧಿಕಾರದಿಂದ ಒಂದೆರಡು ಮಾತು ಹೇಳ್ತೀನಿ, ಕೇಳು. ನೀನು ಮಗುವಲ್ಲ. ನಿನಗೆ ವಯಸ್ಸು ಹದಿನೆಂಟೊ ಹತ್ತೊಂಭತ್ತೊ ಆಗಿದೆ. ಎಳೆ ಹುಡುಗಿಯರ ಹಾಗೆ ಮನೆ ಯೋಚನೆ ಮಾಡೋದನ್ನು ಬಿಟ್ಬುಟ್ಟು ಮೀಸೆ ಹೊತ್ತ ಗಂಡಸಾಗಿ ನೀನು ಬೆಳೀ ಬೇಕು. ನೀನು ಸಿಗರೇಟು ಬೀಡಿ ಮುಟ್ಟದೇ ಇರೋದರ ಅರ್ಥ ವೇನು? ಕುಡಿಯೋಕೆ ಬಾ ಎಂದರೂ ಹಿಂದೇಟು ಹೊಡೆಯೋದರ ಅರ್ಥವೇನು? ನಿನ್ನ ಸಂಸಾರದ ವಿಚಾರ. ನನ್ನ ರಕ್ತ ಸಂಬಂಧಿಗಳೇ ನಾಲ್ಕಾರು ಜನ ಇದ್ದಾರೆ. ಪ್ರೀತಿಯ ಅಮ್ಮಾ ಜಾನ್ ಇದ್ದಾಳೆ. ನನಗೂ ಅವರ ನೆನಪಾಗ್ತದೆ. ಆದರೆ ನಾನು ಹೃದಯಾನ ಗಟ್ಟಿ ಮಾಡ್ಕೊಂಡಿಲ್ವಾ? ಇನ್ನು ಶೀಲಳ ವಿಷಯ. ನನಗೆ ಜೀವನ ಅನ್ನೋದು ಏನೂ ಅಂತ ಗೊತ್ತಿದೆ. ನಿನ್ನ ವಯಸ್ಸಿನಲ್ಲಿ ನಾನು ಯಾರೊ ಹುಡುಗಿ ಜತೇಲಿ ಮಲಗಿದ್ದುಂಟು. ಆದರೆ ನಾನು ವ್ಯಕ್ತಿತ್ವ ಇಲ್ಲದ ಪ್ರಾಣಿಯಾಗೋಕೆ ಇಷ್ಟ ಪಡೋದಿಲ್ಲ. ಒಳ್ಳೆಯ ಮನುಷ್ಯ ನಾಗಿರಬೇಕೂಂತಲೇ ಈಗ ಶೀಲಳನ್ನ ಹೆಂಡತಿ ಅಂತ ಸಾಕ್ತೀನಿ. ನೀನೂ ಕೂಡಾ ಯಾರನ್ನಾದರೂ ಗುರ್ತು ಮಾಡ್ಕೊ೦ಡು ಮನೆಗೆ ಕರ್ಕೊಂಡು ಬಾ. ಅದರಿಂದ ನಿನ್ನ ಮನಸ್ಸಿಗೆ ಸಮಾಧಾನವಾದರೂ ಆಗ ಬಹುದು.ನೀನು ವಿದ್ಯಾವಂತ,ಇಂಗ್ಲಿಷ್ ಬರತ್ತೆನಿಂಗೆ.ನಿನ್ನಂಥ ವರು ನಮ್ಮ, ವೃತ್ತೀಲಿ ಪಳಗಿದರೆ, ಏನು ಬೇಕಾದರೂ ಮಾಡಬಹುದು. ನೀನು ಹೀಗೆ ಕರಗಿ ಹೋಗೋದನ್ನ ಸಹಿಸೋದು ನನ್ನ ಕೈಲಾಗೋದಿಲ್ಲ. ಏನಪ್ಪಾ ಶೇಖರ್ ?"

ಆ ಮಾತುಗಳನ್ನು ಹೇಳುತ್ತಾ ಆತನೇ ಕರಗುತ್ತಿದ್ದ. ಅವನ ಸ್ವರ ಕಂಪಿಸುತಿತ್ತು. ನನ್ನನ್ನು ಆತ ಬಲುವಾಗಿ ಪ್ರೀತಿಸುತ್ತಿದ್ದ ನೆಂಬುದರಲ್ಲಿ ಸಂಶಯವೇ ಇರಲಿಲ್ಲ. ಪ್ರಾಯಶಃ ನಾನು ವೃತ್ತಿಯ ಬಗ್ಗೆ ಪೂರ್ಣ ಆಸಕ್ತಿ ವಹಿಸದೆ ತಪ್ಪು ಮಾಡುತ್ತಿರುವನೋ ಏನೋ ಅನಿಸಿತು. ಹಿಂದೆ ಬೇಡ ಬೇಡವೆಂದು ಅಜ್ಜಿ ಹೇಳುತ್ತಿದ್ದಾಗ ಮನೆ ಬಿಟ್ಟು ಹೊರಟ ನಾನು, ಹೀಗೆ ಮಾಡುವುದು ತಪ್ಪೇನೊ ಎಂದು ಯೋಚಿಸಿದೆ ಹಾಗೆ , ನಾನು ಹೇಳಿದೆ :"

ಆಮೀರ್, ನೀನು ನನಗೊಬ್ಬ ಅಣ್ಣ ಇದ್ದಹಾಗೆ ನಾನು ಏನೇನೋ ಆಗಬೇಕೊಂತ ಆಸೆ ನಿನಗೆ. ನಮ್ಮಪ್ಪನೂ ಹಾಗೆಯೇ. ನಾನು ದೊಡ್ಡ ಮನುಷ್ಯನಾಗಬೇಕೊಂತ ಬಯಸಿದ್ದ. ನಾನು ಹಾಗಾಗ ಲಿಲ್ಲ. ಈಗ ಇನ್ನೇನಾಗುತ್ತೋ ಏನೋ."

ಯಾಕೆ, ನಿನ್ನ ಜೀವ ನಿನ್ನ ಕೈಲಿ ಇಲ್ಲವೇನು?"

ನನ್ನ ಜೀವ ನನ್ನ ಕೈಲಿ ಇತ್ತೆ ? ದೈವ ಭೀರುವಾಗಿ ನಾನು ಬೆಳೆದು ಬಂದಿರಲಿಲ್ಲ ನಿಜ. ಹೇಮಾವತಿ ನದಿಯಲ್ಲಿ ದೇವರು ತೇಲಿ ಹೋದ ಮೇಲೆ, ಸರ್ವಾಂತರ್ಯಾಮಿಯಾದ ಅವನ ಸಾಕಾರ ಮೂರ್ತಿಯನ್ನು ನಾವು ಪೂಜಿಸಿರಲಿಲ್ಲ. ಗುಡಿಗಳಿಗೆ ಹಗಲೆಲ್ಲಾ ಹೋಗಿ ಪ್ರದಕ್ಷಿಣೆ ಬರುತ್ತಿರಲಿಲ್ಲ. ನನ್ನ ಓದು ನನ್ನನ್ನು ಸಂಶಯ ಪ್ರವೃತ್ತಿಯವನನ್ನಾಗಿ ಮಾಡಿತ್ತು, ಆದರೂ-

ಈಗ ನನ್ನ ಜೀವ ನನ್ನ ಕೈಯಲ್ಲಿ ಇದೆ ಎಂದು ಹೇಳಬಲ್ಲೆ. ಆದರೆ ಆಗ ಹಾಗೆ ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಯಾವುದೋ ಅಗೋಚರ ಶಕ್ತಿಯೊಂದು ನನ್ನ ಜೀವನ ಗತಿಯ ಮೇಲೆ ಪ್ರಭುತ್ವ ಸ್ಥಾಪಿಸಿದಂತೆ, ಭಾಸವಾಗುತ್ತಿತ್ತು.

ನನ್ನ ಮೌನ ಅಮೀರನಿಗೆ ಅಸಹನೀಯವಾಗಿತ್ತು. ಅವನು ಎದ್ದು ಕೊರಳಿಗೆ ಕರ ವಸ್ತ್ರ, ಬಿಗಿದುಕೊಳ್ಳುತ್ತಾ ಬೀದಿಗಿಳಿದ.

ಆ ಮೇಲೆ ಶೀಲ ಮಾತನಾಡಿಸಿದಳು.

"ಏನಪ್ಪ, ನೀವಬ್ಬರೂ ಜಗಳವಾಡಿದಿರಾ?"

"ಇಲ್ವಲ್ಲಾ ಅತ್ತಿಗೆ."

ಮತ್ಯಾಕೆ, ಒಂಥರಾ ಇದ್ದೀಯೆ?"

"ನೀನು ಊರಿಗೆ ಹೋಗ್ಬೇಕೂಂತ ಇದೀಯಂತೆ ನಿಜವಾ?"

"ಹೌದು ಅತ್ತಿಗೆ. ನನ್ನಜ್ಜಗೆ ಕಾಹಿಲೆನಂತೆ. ಅವಳಿಗೆ ಬೇರೆ ಯಾರೂ ಇಲ್ಲ. ನಾನು ಹೋಗಬೇಕು ಅತ್ತಿಗೆ."

ಅವಳ ಸ್ತ್ರೀ ಹೃದಯ ಮೃದುವಾಗಿತ್ತು. ದಿನದಿನಕ್ಕೂ ಅಮೀರ ನಂತೆ ಹೆಚ್ಚಾಗಿ ಹೃದಯವನ್ನು ವಜ್ರ ಶಿಲೆಯಾಗಿ ಅವಳು ಕಠಿಣಗೊಳಿಸುತ್ತಿರಲಿಲ್ಲ. ಅವಳು ನಿಟ್ಟುಸಿರು ಬಿಟ್ಟು ಸುಮ್ಮನಾದಳು.

"ಅಮೀರಣ್ಣನಿಗೆ ನಾನು ಹೋಗೋದು ಇಷ್ಟವಿಲ್ಲ."

"ಹೇಗಿದ್ದೀತು ಹೇಳು? ನಿನ್ನ ಅವನೆಷ್ಟೊಂದು ಪ್ರೀತಿಸ್ತಾನೆ ಗೋತ್ತಾ? ನಾನಾದ ಮೇಲೆ ಜೀವದಲ್ಲಿ ಮುಖ್ಯ ವ್ಯಕ್ತಿ ಎಂದರೆ ನೀನೇ. ಅದು ನಿನಗೆ ಗೊತ್ತಾ?"

"ಗೊತ್ತು ಅತ್ತಿಗೆ. ಆದ್ದರಿಂದಲೇ ನಾನು ಹೊರಟು ಹೋಗೋದು ಕಷ್ಟವಾಗಿದೆ ಯಾವುದೋ ಕಾಣದ ಬಳ್ಳಿ ನನ್ನನ್ನು ಎಲ್ಲಿಗೆ ಕಟ್ಟಿ ಹಾಕಿದೆ."

"ಅಮಿರ್ ಯಾವತ್ತೂ ಊರಿಗೆ ಹೋಗೋ ಯೋಚನೆ ಮಾಡಲ್ಲ. ಮತ್ತೆ ನೀನು ಯಾಕೆ ಮಾಡ್ಬೇಕು?"

"ಅಲ್ಲೇ ಅಮಿರ್ಗೂ ನನಗೂ ಇರೋ ವ್ಯತ್ಯಾಸ.

"ಏನೋಪ್ಪ ನಿನ್ಮಾತೇ ಅಥರ್ವಾಗೋದಿಲ್ಲ ನನಗೆ."

"ಊರಿಗೆ ಹೋಗಿ ಏನ್ಮಾಡ್ಬೇಕೂಂತ ಇದೀಯಾ?"

"ಅಜ್ಜೀನ ನೋಡ್ಕೊಳ್ಳೋದು."

"ಅದ್ಸರಿ ,ಅದಾದ್ಮೇಲೆ? ಆಜ್ಜಿಗೆ ಗುಣವಾದ್ಮೇಲೆ?"

ಅದೊಂದು ಮುಖ್ಯ ಪ್ರಶ್ನೆ.ನಾನು ಮುಂದೇನು ಮಾಡ ಬೇಕು? ಮುಂದೇನಾಗಬೇಕು? ಜೀವನದಲ್ಲಿ ನಾನು ಸಾಧಿಸ ಬೇಕಾದ್ದೇನಾದರೂ ಉಂಟೆ? ಏನಾದರೂ ಉಂಟೆ ?

ನಾನು ಸುಮ್ಮನಿದ್ದೆ. ಅತ್ತಿಗೆ 'ಸ್ಟವ್ ' ಹಚ್ಚಿದಳು. ಅದರ ಸಪ್ಪಳ ಹಿತಕರವಾಗಿ ಹೊರಡುತ್ತಿತ್ತು. ಆ ಏಕಪ್ರಕಾರದ ಸ್ವರದೆದುರು ನನ್ನ ವಿಚಾರತರಂಗಗಳು ದೂರ ಸರಿಯುತ್ತಿದ್ದುವು, ಇನ್ನು 'ಚಾ.' ಅತ್ತಿಗೆಯ ಕೈಯಿಂದ ರುಚಿರುಚಿಯಾದ ಇನ್ನೊಂದು ಕಪ್ಪು ಚಾ ...

ಯಾರೋ ತಂತಿ ಕಳುಹಿಸಿದ್ದರು

"ಅಜ್ಜಿಗೆ ಸಕತ್ ಕಾಹಿಲೆ. ಒಡನೆಯೆ ಹೊರಟು ಬಾ.”

ಶೀಲ ಅದೇನೆಂದು ಕೇಳಿದಳು. ನಾನು ಉತ್ತರವೀಯಲಿಲ್ಲ. ಒಂದು ಕೈಚೀಲದೊಳಕ್ಕೆ ನನ್ನ ಸೂಟನ್ನು ತುರುಕಿದೆ. ಪಾಯಜಾಮೆ ಷರಟುಗಳ ಮೇಲೆ ಒಂದು ಸ್ವೆಟರ್ ತೊಟ್ಟುಕೊಂಡೆ. ಸ್ವೆಟರಿನ ಕೆಳಗೆ ಜೇಬಿನೊಳಗೆ ನೂರರಷ್ಟು ಹಣವಿತ್ತು.

ಅತ್ತಿಗೆ ನೋಡುತ್ತಲೇ ಇದ್ದಳು. ಅವಳ ರೋಗಿಯಾದ ತಂದೆಯೂ ನೋಡುತ್ತಲೇ ಇದ್ದ. ನಾನು ಮುಖದ ಭಾವನೆಗಳನ್ನು ಹತ್ತಿಕ್ಕಿಕೊಳ್ಳುತ್ತಾ ಬಾಗಿಲಿನಿಂದ ಹೊರಬಂದೆ.

"ಬರ್ತೀನಿ ಅತ್ತಿಗೆ ತಿರ್ಗಾ ಬರ್ತೀನಿ."

ಆದರೆ ನನ್ನ ಸ್ವರದಲ್ಲಿ ನನಗೇ ನಂಬಿಕೆ ಇರಲಿಲ್ಲ.

....ಆ ಮೇಲೆ ಒಂದು ಘಂಟೆಯ ಹೊತ್ತಿನಲ್ಲಿ ರೈಲು ಹೊರ ಟಿತು. ಅಜ್ಜಿಯಿಂದ ತಂತಿ ಬಂದಿತ್ತಲ್ಲವೆ? ಹಾದಿಯಲ್ಲಿ ತೊಂದರೆ ಯಾಗಬಾರದೆಂದು ನಾನು ಟಿಕೇಟು ಪಡೆದುಕೊಂಡೇ ಹೊರಟೆ.

ಎಂಜಿನ್ ಬೊಂಬಾಯಿಗೆ ವಿದಾಯ ಹೇಳಿತು. ಕಿಟಕಿಯಿಂದ ಹೊರಕ್ಕೆ ನಾನು ಇಣಿಕಿನೋಡಿದೆ. ಗಾಡಿ ಚಲಿಸುತ್ತಿತ್ತು, ಅತ್ತ ಹೆಬ್ಬಾಗಿಲನ್ನು ದಾಟಿ ಯಾರೊ ಓಡಿ ಬರುತ್ತಿದ್ದರು. ವ್ಯಕ್ತಿ ಸವಿಾಪಿಸಿ ದಂತೆ ನನಗೆ ಸುಲಭವಾಗಿ ಗುರುತು ಸಿಕ್ಕಿತು. ಆದರೆ ತಡವಾಗಿತ್ತು. ....ಅಮಿರ್ ತಡವಾಗಿ ಬಂದಿದ್ದ.

ಆ ಕ್ಷಣದಲ್ಲೆ, ನಾನು ಗಟ್ಟಿಯಾಗಿ ಕೂಗಿದೆ.

ಅಮೀರ್ ! ಅಮೀರ್ !

ಅನನಿಗೆ ಅದು ಕೇಳಿಸಿತು. ಆತ ಕೈ ಬೀಸಿದ ಆಷ್ಟೆ.

ಗಾಡಿ ದೂರ ಹೊರಟುಬಿಟ್ಟಿತ್ತು. ಗಾಡಿ ನಮ್ಮೂರಿನ ಹಾದಿ ಹಿಡಿದಿತ್ತು.