ಶಿವಶಿವಾ ಮೂರ್ತಿಗೆ ಸತ್ಯಶುದ್ಧ ಉಂಟೆಂಬಿರಿ. ಸತ್ಯ[ಶುದ್ಧ]ವುಳ್ಳವಂಗೆ ಗುರುವಿಲ್ಲ
ಸತ್ಯ[ಶುದ್ಧ]ವುಳ್ಳವಂಗೆ ಲಿಂಗವಿಲ್ಲ
ಸತ್ಯ[ಶುದ್ಧ]ವುಳ್ಳವಂಗೆ ಜಂಗಮವಿಲ್ಲ
ಸತ್ಯ[ಶುದ್ಧ]ವುಳ್ಳವಂಗೆ ಪ್ರಸಾದವಿಲ್ಲ
ಸತ್ಯ[ಶುದ್ಧ]ವುಳ್ಳವಂಗೆ ಗಣತ್ವವಿಲ್ಲ ಕೇಳಿರೆ. ಸತ್ಯಶುದ್ಧ ದೇವರಿಗೆ ಉಪಚಾರವುಂಟು
ಸತ್ಯಶುದ್ಧ ದೇವರಿಗೆ ಧ್ಯಾನಮೌನ ಅನುಷಾ*ನವುಂಟು
ಸತ್ಯಶುದ್ಧ ಉಪದೇಶಕ್ಕೆ ಜಪ ತಪ ಸಂಜೆ ಸಮಾಧಿ ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರವುಂಟು. ಸತ್ಯಶುದ್ಧ ದೇವರಿಗೆ ಉಪಚಾರವುಂಟಾದ ಕಾರಣ ಇಂತಪ್ಪ ಸತ್ಯಶುದ್ಧ ಗುರುವಿಂಗೆ ಶರಣೆನ್ನೆ
ಇಂತಪ್ಪ ಸತ್ಯಶುದ್ಧ ಲಿಂಗಕ್ಕೆ ಶರಣೆನ್ನೆ
ಇಂತಪ್ಪ ಸತ್ಯಶುದ್ಧ ಜಂಗಮಕ್ಕೆ ಶರಣೆನ್ನೆ
ಇಂತಪ್ಪ ಸತ್ಯಶುದ್ಧ ಪ್ರಸಾದಕ್ಕೆ ಕೈಯಾನೆ. ಇವರೆಲ್ಲರು ಬ್ರಹ್ಮನ ಮಕ್ಕಳು. ಎನಗೆ ಸತ್ಯವೂ ಇಲ್ಲ
ಅಸತ್ಯವೂ ಇಲ್ಲ. ಆವ ಸಹಜವೂ ಇಲ್ಲದ ಲಿಂಗೈಕ್ಯ ಕಾಣಾ ಕೂಡಲಸಂಗಮದೇವಾ.