ಶಿವ ಶಿವಾ ! ಕನಸಿನಲ್ಲಿ ಜಂಗಮವ ಕಂಡು
ಮನಸ್ಸಿನಲ್ಲಿ ಗುಡಿಯ ಕಟ್ಟುವರಯ್ಯಾ ! ನೆಟ್ಟನೆ ಮನೆಗೆ ಜಂಗಮ ಬಂದಡೆ ಕೆಟ್ಟೆವಿನ್ನೇನ ಬೇಡಿಯಾರೆಂಬ ಕಷ್ಟ ಜೀವಿಯ ಭಕ್ತಿಯಂತಾಯಿತ್ತು ವ್ರತಸ್ಥನ ಭಕ್ತಿ. ಕಾಗೆ ತಮ್ಮ ದೇವರೆಂದು ಕರೆದು ತಮ್ಮ ಮನೆಯ ಮೇಲೆ ಕೂಳ ಹಾಕಿ ಕೈಮುಗಿದು ಬೇಡಿಕೊಂಬರಯ್ಯಾ
ಆ ಕಾಗೆ ಬಂದು ಮನೆಯ ಹೊಕ್ಕಡೆ ಒಕ್ಕಲೆತ್ತಿ ಹೋಹ ಮರ್ಕಟನ ಭಕ್ತಿಯಂತಾಯಿತ್ತಯ್ಯಾ ನೇಮಸ್ಥನ ಭಕ್ತಿ. ಹಾವು ತಮ್ಮ ದೇವರೆಂದು ಹಾಲನೆರೆದು ಕೈಮುಗಿದು ಬೇಡಿಕೊಂಬರಯ್ಯಾ ಆ ಹಾವ ಕಂಡಡೆ ಹೆದರಿ ಓಡುವ ಭಾವಭ್ರಮಿತರ ಭಕ್ತಿಯಂತಾಯಿತ್ತಯ್ಯಾ ಶೀಲವಂತನ ಭಕ್ತಿ. ಹೊಸ್ತಿಲ ದೇವರೆಂದು ಪೂಜಿಸಿ ಮರಳಿ ಇಕ್ಕಾಲಿಕ್ಕಿ ದಾಂಟಿ ಹೋಹ ಒಕ್ಕಲಗಿತ್ತಿಯ ಭಕ್ತಿಯಂತಾಯಿತ್ತಯ್ಯಾ
ಭಾಷೆವಂತನ ಭಕ್ತಿ. ಕೆರಹ ಕಳೆದು ಕೈಯ ತೊಳೆದು ಸಗ್ಗಳೆಯ ನೀರ ಕುಡಿದ ಬ್ರಾಹ್ಮಣನ ಭಕ್ತಿಯಂತಾಯಿತ್ತಯ್ಯಾ ಸಮಯಾಚಾರಿಯ ಭಕ್ತಿ. ನಾಯ ನಡು ಸಣ್ಣದೆಂದು ಅಂದಣವನೇರಿಸಿದಡೆ ಆ ನಾಯಿ ಎಲುವ ಕಂಡಿಳಿದಂತಾಯಿತ್ತಯ್ಯಾ ನಿತ್ಯಕೃತ್ಯನ ಭಕ್ತಿ_ ಇಂತೀ ಆರು ಪ್ರಕಾರದ ದೃಷ್ಟಾಂತಗಳ ತೋರಿ ಹೇಳಿದೆ. ಅಂತು ಭಕ್ತನ ಜಂಗಮವೆ ಶಿವನೆಂದರಿದು ಪಾದೋದಕ ಪ್ರಸಾದವ ಕೊಂಡು ನಮಸ್ಕರಿಸಿದ ಬಳಿಕ ಮತ್ತಾ ಜಂಗಮ ಮನೆಗೆ ಬಂದು
ಹೊನ್ನು [ವಸ್ತ್ರಾದಿ] ಮುಟ್ಟಿಯಾರೆಂಬ ಅಳುಕುಂಟೆ ಸದ್ಭಕ್ತಂಗೆ ? ಇಲ್ಲವಾಗಿ
ಅದೆಂತೆಂದಡೆ
ಲೈಂಗ್ಯೇ: ಅರ್ಥಪ್ರಾಣಾಭಿಮಾನೇಷು ವಂಚನಂ ನೈವ ಕುತ್ರಚಿತ್ ಯಥಾ ಭಾವಸ್ತಥಾ ದೇವಶ್ಚರೋಚ್ಛಿಷ್ಟಂ ವಿಶೇಷತಃ ಸ್ವೇಷ್ಟಲಿಂಗಾಯ ದತ್ವಾ ತು ಪುನಃ ಸೇವೇತ ಭಕ್ತಿಮಾನ್ ಸ ಏವ ಷಟ್‍ಸ್ಥಲಬ್ರಹ್ಮೀ ಪ್ರಸಾದೀ ಸ್ಯಾನ್ಮಹೇಶ್ವರಃ _ಇಂತೆಂಬ ಪುರಾಣ ವಾಕ್ಯವನರಿಯದೆ ಅಳುಳ್ಳಡೆ ಸುಡುಸುಡು
ಅವನು ಗುರುದ್ರೋಹಿ ಆಚಾರಭ್ರಷ್ಟ ವ್ರತಗೇಡಿ ನರಮಾಂಸಭುಂಜಕ ಜಂಗಮನಿಂದಕ ಪಾಷಂಡಿ ದೂಷಕ. ಆತನ ಹಿಡಿದು ಹೆಡಗುಡಿಯ ಕಟ್ಟಿ ಮೂಗನುತ್ತರಿಸಿ ಇಟ್ಟಿಗೆಯಲೊರಸಿ ಅನಂತಕಾಲ ಕೆಡಹುವ ನಮ್ಮ ಕೂಡಲಚೆನ್ನಸಂಗಮದೇವ