ಶ್ರೀಗುರುಕರುಣವೆ ಲಿಂಗ
ಶ್ರೀಲಿಂಗದ ನಿಜವೆ ಜಂಗಮ
ಇಂತಿದು ಬಹಿರಂಗದ ವರ್ತನೆ. ಇನ್ನು_ ಅಂತರಂಗದ ಸುಜ್ಞಾನವೆ ಜಂಗಮ
ಆ ಜಂಗಮದ ನಡೆವ ಸತ್ಕ್ರಿಯೆ ಲಿಂಗ
ಆ ಉಭಯದ ಏಕತ್ವದ ಸಿದ್ಧಿಯೆ ಗುರು. ಇದು ಕಾರಣ_ ಅಂಗತ್ರಯದಲ್ಲಿ ಲಿಂಗತ್ರಯ ಸಂಗಮವಾದಲ್ಲಿ
ಜಂಗಮದಾಸೋಹವಿಲ್ಲದಡೆ ತೃಪ್ತಿಯಿಲ್ಲ. ಅಂಗದ ಮೇಲೆ ಲಿಂಗವಿಲ್ಲದಿರ್ದಡೆ ಜಂಗಮ ಸೇವೆಯ ಕೈಕೊಳ್ಳ ಅದು ಕಾರಣ_ ಒಂದ ಬಿಟ್ಟು ಒಂದರಲ್ಲಿ ನಿಂದಡೆ
ಅಂಗವಿಲ್ಲದ ಆತ್ಮನಂತೆ
ಶಕ್ತಿಯಿಲ್ಲದ ಶಿವನಂತೆ
ದೀಪವಿಲ್ಲದ ಪ್ರಕಾಶದಂತೆ ! ಒಂದಂಗ ಶೂನ್ಯವಾಗಿ ಭಕ್ತಿಯುಂಟೆ ? ಅವಯವಹೀನನು ರಾಜಪಟ್ಟಕ್ಕೆ ಸಲುವನೆ ? ಲಿಂಗಹೀನನು ಭೃತ್ಯಾಚಾರಕ್ಕೆ ಸಲುವನೆ ? ಅದು ದೇವತ್ವಕ್ಕೆ ಸಲ್ಲದು. ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ತ್ರಿವಿಧಸನ್ಮತವೆ ಚರಸೇವೆಯಯ್ಯಾ.